ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗಂಗಾಧರರಾವ್ ದೇಶಪಾಂಡೆ


 ಗಂಗಾಧರರಾವ್ ದೇಶಪಾಂಡೆ

ಗಂಗಾಧರರಾವ್ ದೇಶಪಾಂಡೆ ಭಾರತದ ಸ್ವಾತಂತ್ರಕ್ಕಾಗಿ ಹೋರಾಡಿದ ಕರ್ನಾಟಕದ ಮಹಾನುಭಾವರಲ್ಲೊಬ್ಬರು.

ಗಂಗಾಧರರಾವ್ ದೇಶಪಾಂಡೆ 1871ರ ಮಾರ್ಚ್ 31 ರಂದು ಬೆಳಗಾಂವಿಯ ಬಳಿಯ ಜಲಾಲಪುರ ಎಂಬ ಹಳ್ಳಿಯಲ್ಲಿ ಜನಿಸಿದರು.  ಅವರು ಬೆಳೆದದ್ದು ಅದರ ಹತ್ತಿರದ ಹುದಲಿಯಲ್ಲಿ. ತಂದೆ ಬಾಲಕೃಷ್ಣ ದೇಶಪಾಂಡೆ. ಬಾಲ್ಯದಲ್ಲಿ ತಂದೆಯಿಂದ ದೊರೆತ ರಾಷ್ಟ್ರೀಯತ್ವದ ಪರಿಕಲ್ಪನೆ, ಮುಂದೆ ಲೋಕಮಾನ್ಯ ಬಾಳ ಗಂಗಾಧರ ತಿಲಕರಿಂದ ಪಡೆದ ಕಾಂಗ್ರೆಸ್ ದೀಕ್ಷೆ, ತರುವಾಯ ಮಹಾತ್ಮಾ ಗಾಂಧೀಜಿಯವರ ಅನುಯಾಯಿತನ-ಇವು ಗಂಗಾಧರರಾಯರ ವ್ಯಕ್ತಿತ್ವವನ್ನು ರೂಪಿಸಿದುವು. ಚಿಕ್ಕಂದಿನಲ್ಲಿ ಇವರು ಗೋಪಾಲಕೃಷ್ಣ ಗೋಖಲೆಯವರ ವಿಚಾರಗಳಿಂದಲೂ, ಮುಪ್ಪಿನಲ್ಲಿ ರಾಮಭಾವು ರಾನಡೆಯವರ ಅಧ್ಯಾತ್ಮಿಕ ಚಿಂತನೆಯಿಂದಲೂ ಪ್ರಭಾವಿತರಾಗಿದ್ದರು.

ಗಂಗಾಧರರಾಯರು ಬಾಲ್ಯದಲ್ಲಿ ಕಲಿತದ್ದು ಮರಾಠಿ. ಆಗ ಬೆಳಗಾವಿಯ ಸುತ್ತ ಮುತ್ತಲೂ ಕನ್ನಡ ಕಲಿಸುವ ಏರ್ಪಾಡು ಇರಲಿಲ್ಲ. ಗಂಗಾಧರರಾಯರ ಹಿರಿಯರು ಅಚ್ಚ ಕನ್ನಡಿಗರೇ ಆಗಿದ್ದರೂ ಪೇಶ್ವೆಯರ ಆಳ್ವಿಕೆಯ ಪ್ರಭಾವದಿಂದಾಗಿ ಆಗ ಅವರ ಮೇಲೆ ಮರಾಠಿಯ ಪ್ರಭಾವ ವಿಶೇಷವಾಗಿತ್ತು.

ಹದಿಮೂರನೆಯ ವಯಸ್ಸಿನಲ್ಲೆ ಗಂಗಾಧರರಾಯರಿಗೆ ಮದುವೆಯಾಯಿತು. ಪುಣೆಯ ಡೆಕ್ಕನ್ ಕಾಲೇಜಿನಲ್ಲಿದ್ದಾಗ ಇವರಿಗೆ ತಿಲಕ್, ಅಗರಕರ ಇವರ ಸಂಪರ್ಕ ಬೆಳೆಯಿತು. ಅಲ್ಲಿಯ ಅನೇಕ ಪ್ರಮುಖ ವ್ಯಕ್ತಿಗಳು ಇವರ ಮಿತ್ರರಾದರು. ಪರೀಕ್ಷೆಗಳಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಬೇಕೆಂದು ಗಂಗಾಧರರಾಯರು ಎಂದೂ ಪ್ರಯತ್ನಿಸಲಿಲ್ಲ. ಬಿ.ಎ. ಯಲ್ಲಿ ಸಾಧಾರಣ ವಿದ್ಯಾರ್ಥಿಯೆನಿಸಿದ್ದರು. ಆದರೆ ತಿಲಕರ ಲೇಖನಗಳು, ಭಾಷಣಗಳು ಸಂಪಾದಕೀಯ ನುಡಿಗಳು ಗಂಗಾಧರರಾಯರಲ್ಲಿ ಸ್ಫೂರ್ತಿಯನ್ನೂ, ಜಾಗೃತಿಯನ್ನೂ ಉಂಟುಮಾಡಿದವು. ಇದರಿಂದಲೇ ಅವರಿಗೆ ತಿಲಕರ ಸಂಪರ್ಕ ಪಡೆಯುವ ಉತ್ಸುಕತೆಯಾದ್ದು. ಅವರು ಅದನ್ನು ಸಾಧಿಸಿದರು. ಗೋಪಾಲಕೃಷ್ಣ ಗೋಖಲೆ, ಜಸ್ಟಿಸ್ ರಾನಡೆ ಅವರನ್ನು ಕಂಡರು. ಈ ಮನೋಭೂಮಿಕೆಯಿಂದೊಡಗೂಡಿ ಗಂಗಾಧರರಾಯರು ವಕೀಲರಾಗಿ ಬೆಳಗಾಂವಿಗೆ ಬಂದ ಮೇಲೆ ಕರ್ನಾಟಕ ಕಾಂಗ್ರೆಸ್ ಕಾರ್ಯಕರ್ತರಾಗಿ ಲೋಕಮಾನ್ಯ ತಿಲಕರ ಮಾರ್ಗದರ್ಶನದಲ್ಲಿ ಸ್ವಾತಂತ್ರ್ಯಾಂದೋಲನದಲ್ಲಿ ಉದ್ಯುಕ್ತರಾಗಿ ಸಂಘಟನೆಯ ಕಾರ್ಯ ಕೈಗೊಂಡರು. ಕಾಂಗ್ರೆಸ್ಸಿಗಾಗಿ ಹಣ ಸಂಗ್ರಹ ಮಾಡಿದರು. ತಿಲಕರನ್ನು ಬೆಳಗಾಂವಿಗೆ ಬರಮಾಡಿಕೊಂಡರು. ಸಭೆಗಳನ್ನುದ್ದೇಶಿಸಿ ಭಾಷಣ ಮಾಡಿದರು. ತಿಲಕರ ನಿಷ್ಠಾವಂತ ಅನುಯಾಯಿಯಾಗಿ ಕಾಂಗ್ರೆಸ್ ಕಾರ್ಯಕ್ರಮಕ್ಕಾಗಿ ತಮ್ಮನ್ನೇ ತಾವು ಅರ್ಪಿಸಿಕೊಂಡರು.

1921ರಲ್ಲಿ ಗಂಗಾಧರರಾವ್ ದೇಶಪಾಂಡೆಯವರು ಕರ್ನಾಟಕ ಪ್ರಾಂತ್ಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಆಯ್ಕೆ ಹೊಂದಿದರು. ಅದೇ ವರ್ಷ ರಾಜದ್ರೋಹದ ಅಪಾದನೆಯ ಮೇಲೆ ಬ್ರಿಟಿಷ್ ಸರ್ಕಾರ ಅವರನ್ನು ಬಂಧಿಸಿ ಆರು ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿತು. ಲೋಕಮಾನ್ಯ ತಿಲಕರಿಂದ ಸ್ವಾತಂತ್ರ್ಯ ಚಳವಳಿಯ ಧುರೀಣತ್ವ ಗಾಂಧೀಜಿಯವರಿಗೆ ಬಂದಮೇಲೆ ಗಂಗಾಧರರಾಯರು ಗಾಂಧೀಜಿಯವರಿಗೆ ತಮ್ಮ ನಿಷ್ಠೆಯನ್ನು ತೋರಿ ಅವರ ಅಹಿಂಸಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸತೊಡಗಿದರು. 1922ರಲ್ಲಿ ಮಹಾರಾಷ್ಟ್ರ, ಕರ್ನಾಟಕ ಎರಡೂ ಪ್ರಾಂತ್ಯಗಳಲ್ಲಿ ದೀರ್ಘಸಂಚಾರ ಕೈಗೊಂಡರು. ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸಕ್ಕೆ ಕರ್ನಾಟಕದ ಜನರನ್ನೂ ಜೋಡಿಸಲು ಕಾರಣರಾದರು. 1923ರಲ್ಲಿ ಮತ್ತೆ ಇದೇ ಬಗೆಯ ಪ್ರವಾಸ ಕೈಗೊಂಡು ಗಾಂಧಿಯವರ ಧ್ಯೇಯಧೋರಣೆಗಳನ್ನು - ಅವರ ಅಹಿಂಸಾತತ್ವ, ವಿದೇಶಿ ಚಳವಳಿ, ಖಾದೀವ್ರತಗಳನ್ನು ಕುರಿತು ಜನಸಾಮಾನ್ಯರಿಗೆ ತಿಳುವಳಿಕೆ ಮಾಡಿಕೊಟ್ಟರು.

1924ರಲ್ಲಿ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಬೆಳಗಾಂವಿಯಲ್ಲಿ ಜರುಗಿದ ಕಾಂಗ್ರೆಸ್ ಅಧಿವೇಶನಕ್ಕೆ ಗಂಗಾಧರರಾಯರೆ ಸ್ವಾಗತಾಧ್ಯಕ್ಷರು. ಬೆಳಗಾಂವಿ ಕಾಂಗ್ರೆಸ್ಸು ಕನ್ನಡಿಗರಿಗೂ ಕನ್ನಡೇತರರಿಗೂ ವಿಜಯನಗರದ ವೈಭವವನ್ನೂ ವಿದ್ಯಾರಣ್ಯರ ಪುಣ್ಯಭಾವವನ್ನೂ ನೆನಪಿಗೆ ತಂದುಕೊಟ್ಟಿತು. ಅಧಿವೇಶನದ ಸ್ಥಳಕ್ಕೆ ವಿಜಯನಗರದ ಹೆಸರನ್ನೆ ಇಡಲಾಗಿತ್ತು.
ಗಂಗಾಧರರಾಯರು ಅಖಿಲ ಭಾರತ ಗ್ರಾಮೋದ್ಯೋಗ ಸಂಘದ ಕರ್ನಾಟಕದ ಪ್ರತಿನಿಧಿಯಾಗಿದ್ದರು. 1930ರ ಉಪ್ಪಿನ ಸತ್ಯಾಗ್ರಹದಲ್ಲಿ ಗಂಗಾಧರರಾಯರೇ ಕರ್ನಾಟಕದ ಮೊದಲನೆಯ ಸತ್ಯಾಗ್ರಹಿ. 1924ರಲ್ಲಿ ಹರಿಜನೋದ್ಧಾರಕ್ಕಾಗಿ ಗಾಂಧೀಜಿ ಕರ್ನಾಟಕದ ಸಂಚಾರವನ್ನು ಕೈಗೊಂಡಾಗ ಗಂಗಾಧರರಾಯರು ಅವರ ಭಾಷಣಗಳನ್ನು ಕನ್ನಡಕ್ಕೆ ಅನುವಾದಿಸಿ ಹೇಳುತ್ತಿದ್ದರು. 1937ರಲ್ಲಿ ಹುದಲಿಯಲ್ಲಿ ಇವರು ಗಾಂಧೀ ಸೇವಾಸಂಘ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿದರು. ಈ ಕಾರ್ಯಗಳಲ್ಲೂ ಗಂಗಾಧರರಾಯರಿಗೆ ಸಹಾಯಕರಾಗಿದ್ದವರು ಪುಂಡಲೀಕ ಕಾತಗಡೆ. 1938ರಲ್ಲಿ ಇವರು ಮತ್ತೊಮ್ಮೆ ಕರ್ನಾಟಕ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದರು. 1941ರ ವೈಯಕ್ತಿಕ ಸತ್ಯಾಗ್ರಹ, 1942ರ ಚಲೇಜಾವ್ ಚಳವಳಿ - ಇವುಗಳಲ್ಲೂ ಗಂಗಾಧರರಾಯರು ಭಾಗವಹಿಸಿದರು. 1942 ರಿಂದ 1944ರ ವರೆಗೆ ಅವರು ನಾಸಿಕ ಕಾರಾಗೃಹದಲ್ಲಿ ರಾಜಕೀಯ ಕೈದಿಯಾಗಿದ್ದರು. 1945ರಿಂದ 1950ರ ವರೆಗೆ ವಿಧಾಯಕ ಕಾರ್ಯದಲ್ಲಿಯೇ ತೊಡಗಿದ್ದರು. ದೇಶಕ್ಕೆ ಸ್ವಾತಂತ್ರ್ಯಪ್ರಾಪ್ತಿಯಾದ ಮೇಲೆ ಇವರು ಅಧಿಕಾರ ಪಡೆಯಲು ಪ್ರಯತ್ನಿಸಲಿಲ್ಲ. ಸ್ವಾತಂತ್ರ್ಯವನ್ನು ಗಳಿಸಿಕೊಟ್ಟವರು ತಾವೇ ಎಂದು ಆ ಪೀಳಿಗೆಯ ಜನ ಅಹಂಕಾರ ತಾಳಬಾರದೆಂದು ಇವರು ಬೋಧಿಸುತ್ತಿದ್ದರು. ಅಧಿಕಾರ ಲಾಲಸೆ ಇರಬಾರದೆಂದೂ ಉಪದೇಶಿಸಿದರು.

ಗಂಗಾಧರರಾಯರು ತಮ್ಮ ಜೀವನದ ಕೊನೆಯ ಭಾಗವನ್ನು ಅಧ್ಯಾತ್ಮ ಚಿಂತನೆಯಲ್ಲಿ ಕಳೆದರು. ಆಗ ಇವರು ರಾನಡೆಯವರ ನಿಷ್ಠಾವಂತ ಅನುಯಾಯಿಯಾಗಿದ್ದರು.
ಗಂಗಾಧರರಾಯರು ವಿಶಾಲಮನೋಭಾವದಿಂದ ಬಾಳಿ, ಜನತೆಗೂ ಅದನ್ನೇ ಬೋಧಿಸಿದರು. ಗಂಗಾಧರರಾಯರು ಕನ್ನಡ ಮರಾಠಿಗಳ ನಡುವಿನ ಸೇತುವೆಯಂತಿದ್ದರು. ಭಾಷಾಭಾವೈಕ್ಯ ಜಾತೀಯ ಏಕತೆಗಳಿಗಾಗಿ ಶ್ರಮಿಸಿದರು.

ತಮ್ಮ ವೈಯಕ್ತಿಕ ಜೀವನದಿಂದ ಆದರ್ಶಪ್ರಾಯರಾಗಿದ್ದ ಗಂಗಾಧರರಾಯರು 1960 ಜುಲೈ 30ರಂದು ನಿಧನರಾದರು.

On the birth anniversary of great Indian freedom fighter 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ