ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಳಿನಾ ಪ್ರಸಾದ್


 ನಳಿನಾ ಪ್ರಸಾದ್


ನಳಿನಾ ಪ್ರಸಾದ್ ಬಹುಮುಖಿ ಪ್ರತಿಭೆ. ಅವರ ಧ್ವನಿಯಲ್ಲಿ ಮೂಡುವ ಮಾಧುರ್ಯವನ್ನು ಆಲಿಸುವಾಗಲೆಲ್ಲ ನನಗೆ ಇವರದ್ದು ಕನ್ನಡದ ಉತ್ತಮ ಧ್ವನಿಗಳಲ್ಲೊಂದು ಎಂದು ನನಗನ್ನಿಸಿದೆ. ಅವರೊಬ್ಬ ರಂಗ ಕಲಾವಿದೆ, ಧ್ವನಿ ಕಲಾವಿದೆ, ನಿರೂಪಕಿ, ಸಂಘಟನಾ ಚತುರೆ, ಬರಹಗಾರ್ತಿ, ಮಧುರ ಧ್ವನಿಯ ಗಾಯಕಿ.

ಏಪ್ರಿಲ್ 22 ನಳಿನಾ ಅವರ ಹುಟ್ಟುಹಬ್ಬ.  ಅವರು ಜನಿಸಿದ್ದು ಬೆಂಗಳೂರಿನಲ್ಲಿ.  ಮೂಲತಃ ಅವರು ಮೈಸೂರು ಜಿಲ್ಲೆಯ ಕೆ ಆರ್ ನಗರದವರು.  ತಂದೆ ಸೋಮಶೇಖರ.  ತಾಯಿ ಉಷಾ.  ತಂದೆಯವರು ಶಿಕ್ಷಕ ವೃತ್ತಿಯಲ್ಲಿ ಇದ್ದುದರಿಂದ ಆಗಿಂದಾಗ್ಗೆ ವರ್ಗಾವಣೆಗಳು ಅನಿವಾರ್ಯವಾಗಿತ್ತು. ಮನೆಯಲ್ಲಿದ್ದ ಸಂಸ್ಕೃತಿ, ಸಂಸ್ಕಾರ ಮತ್ತು ಆಚರಣೆಗಳ ಪ್ರಭಾವ ಅವರೊಡನೆ ನಿರಂತರವಾಗಿ ಜೊತೆಗೂಡಿದೆ. ಜೊತೆಗೆ ಸಾಹಿತ್ಯದ ಅಪಾರ ಅಧ್ಯಯನ ಕೂಡ.

ನಳಿನಾ ಅವರ ಶಿಕ್ಷಣ ನಾಗಮಂಗಲ ಮತ್ತು ಮಂಡ್ಯದಲ್ಲಿ ನಡೆಯಿತು. ನಂತರ ಅವರು ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಬಯೋಕೆಮೆಸ್ಟ್ರಿಯಲ್ಲಿ ಸ್ನಾತಕೋತ್ತರ ಪದವಿ ಪಡೆದರು.   ಮದುವೆಯ ನಂತರದಲ್ಲಿ ಪತಿಯವರ ವೃತ್ತಿ ನಿಮಿತ್ತವಾಗಿ ಎರಡು ದಶಕಗಳ ಕಾಲ ಅವರು ಮುಂಬಯಿ, ಗುಜರಾತ್, ಚೆನ್ನೈ ಗಳಲ್ಲಿ ನೆಲೆಸಿ ಮುಂದೆ ಮುಂಬೈನಲ್ಲಿ ನೆಲೆಸಿದ್ದಾರೆ.  ಸದಾ ಕನ್ನಡದ  ಮನದವರಾದ ನಳಿನಾ 2018ರಲ್ಲಿ ಮುಂಬೈ ವಿಶ್ವವಿದ್ಯಾನಿಲಯದಲ್ಲಿ  ಕನ್ನಡ ಎಂ.ಎ. ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದಿದ್ದಾರೆ. ಅವರ ಪಿಎಚ್.ಡಿಗಾಗಿನ ಅಧ್ಯಯನವೂ ಸಾಗುತ್ತಿದೆ. 

ಸಂಸ್ಕೃತದಲ್ಲಿ  ಅಕ್ಕರೆ ಉಳ್ಳ ನಳಿನಾ ಅವರು 'ಕಾವ್ಯ' ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದರ ಜೊತೆಗೆ ಶೃಂಗೇರಿ ಮಹಾ ಸಂಸ್ಥಾನದ ಆಶ್ರಯದಲ್ಲಿ ನಡೆದ ಐದು ಪರೀಕ್ಷೆಗಳಲ್ಲಿ ರಜತ ಪದಕದ ಸಾಧನೆಗಳೊಂದಿಗಿನ ಉತ್ತೀರ್ಣತೆ ಸಾಧಿಸಿದ್ದಾರೆ. 

ನಳಿನಾ ಅವರಿಗೆ ಐದು ವರ್ಷ ಇದ್ದಾಗಲೇ ನಟನೆಯಲ್ಲಿ ಆಸ್ಥೆ ಮೂಡಿತ್ತು. ಸುಮಾರು ಹತ್ತು ವಯಸ್ಸಿನ ಬಾಲೆಯಾಗಿದ್ದಾಗ ಜೀಮೂತವಾಹನ, ಸ್ವಪ್ನವಾಸವದತ್ತ ನಾಟಕಗಳಲ್ಲಿ ಅಭಿನಯಿಸಿದ್ದರು.
ಬಾಲ್ಯದಿಂದಲೇ ನಾಟಕ, ಭಾಷಣ, ಚರ್ಚಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನು ಗೆಲ್ಲುತ್ತ ಬಂದರು. ಜೊತೆಗೆ ರಾಷ್ಟ್ರೀಯ ಸ್ವಯಂ ಸೇವಾ ಯೋಜನೆಯಲ್ಲಿ ನೇತೃತ್ವ, ರಾಷ್ಟ್ರೀಯ ಭಾವೈಕ್ಯತಾ  ಶಿಬಿರಗಳಲ್ಲಿ ಪಾಲ್ಗೊಳ್ಳುವಿಕೆ,  ಕವನ, ಕಥೆಗಳನ್ನು ರಚಿಸುವುದು, ಭಜನೆಗಳಲ್ಲಿ ತೊಡಗಿಸಿಕೊಳ್ಳುವಿಕೆ, ಹವ್ಯಾಸಿ ರಂಗಭೂಮಿಯಲ್ಲಿ ಪಾಲ್ಗೊಳ್ಳುವಿಕೆ ಮುಂತಾದವು ಅವರ ಪ್ರಿಯ ಹವ್ಯಾಸಗಳಾದವು. 

ಕಾಲೇಜು ದಿನಗಳಲ್ಲಿರುವಾಗ ನಳಿನಾ ಅವರು ಬೆಂಗಳೂರು  ಆಕಾಶವಾಣಿ ನಡೆಸುವ ಯುವವಾಣಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮುಂದೆ ಹಾಸನ ಮತ್ತು ಮುಂಬೈನ ಆಕಾಶವಾಣಿ ನಿಲಯಗಳಲ್ಲಿನ  ಹಲವಾರು ಸಂದರ್ಶನ ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಂಡಿದ್ದಾರೆ. 

ನಳಿನಾ ಅವರ ಕಾವ್ಯರಚನೆ ಮತ್ತು ಕಾವ್ಯಾಭಿವ್ಯಕ್ತಿಗಳು ವಿಶಿಷ್ಟವಾದದ್ದು.
ಅವರು ಹಲವಾರು ಕವಿಗೋಷ್ಠಿಗಳಲ್ಲಿ ಕವನ ವಾಚನವನ್ನು ಮಾಡಿದ್ದಾರೆ.  ಸಾಹಿತ್ಯ ಶಿಬಿರಗಳಲ್ಲಿ, ಕಮ್ಮಟಗಳಲ್ಲಿ, ಸಾಹಿತ್ಯ ಗೋಷ್ಠಿಗಳಲ್ಲಿ ಕಾವ್ಯ, ಕಥೆ ಮತ್ತು ಪ್ರಬಂಧ ಮಂಡನೆಗಳಿಂದ ಮೆಚ್ಚುಗೆ ಗಳಿಸುತ್ತ ಬಂದಿದ್ದಾರೆ. ನಳಿನಾ ಅವರ ಕನ್ನಡದ ಮಹಾನ್ ಕವಿಗಳ ಸೊಗಸಿನ ಕವಿತಾ ವಾಚನಗಳು ಜನಪ್ರಿಯವಾಗಿವೆ. 

ನಳಿನಾ ಅವರು ಮುನ್ನೂರಕ್ಕೂ ಹೆಚ್ಚು ಕಾರ್ಯಕ್ರಮಗಳ ನಿರೂಪಣೆ ಮಾಡಿದ್ದಾರೆ. 
ರಾಷ್ಟ್ರಕವಿ ಕುವೆಂಪು ವಿರಚಿತ ‘ರಕ್ತಾಕ್ಷಿ'ಯ ನೂರಕ್ಕೂ ಹೆಚ್ಚು ಏಕಪಾತ್ರಾಭಿನಯ ಪ್ರದರ್ಶನ ನೀಡಿದ್ದಾರೆ.  ರಂಗಭೂಮಿಯಲ್ಲಿನ ನಟನೆಯಿಂದ ಜನಮನ್ನಣೆ ಗಳಿಸಿದ್ದಾರೆ.  ಖ್ಯಾತ ನಿರ್ದೇಶಕರಾದ, ಡಾ. ಭರತ್ಕುಮಾರ್ ಪೊಲಿಪು ನಿರ್ದೇಶನದ 'ಇನ್ನೊಬ್ಬ ದ್ರೋಣಾಚಾರ್ಯ',  'ಆಷಾಢದ ಒಂದು ದಿನ'  ಮುಂತಾದವು ಅವರು ಅಭಿನಯಿಸಿರುವ ನಾಟಕಗಳಲ್ಲಿ ಸೇರಿವೆ. 2022ರ ಡಿಸಂಬರಿನಲ್ಲಿ ಒಂದುತಿಂಗಳು ನೀನಾಸಂ ರಂಗ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು, 'ಚಂದ್ರನಖಾಯಣ' ದಲ್ಲಿ ಇವರು ನಿರ್ವಹಿಸಿದ 'ಶೂರ್ಪನಖಿ' ಪಾತ್ರ ಅಪಾರ ಮೆಚ್ಚುಗೆ ಗಳಿಸಿತು.‍

ನಳಿನಾ ಅವರು ಮುಂಬೈನ 'ಖಾರ್ ಘರ್'ನಲ್ಲಿರು ಕರ್ನಾಟಕ ಸಂಘದಲ್ಲಿ  ಐದು  ವರ್ಷ ಅಧ್ಯಕ್ಷರಾಗಿ  ಕಾರ್ಯನಿರ್ವಹಿಸಿದ್ದಲ್ಲದೆ, ಪ್ರಸ್ತುತದಲ್ಲಿ ಅದರ ಗೌರವಾಧ್ಯಕ್ಷರಾಗಿ  ಕಾರ್ಯನಿರ್ವಹಿಸುತ್ತಿದ್ದು,  ಅಲ್ಲಿನ  ಕನ್ನಡಪರ ಚಟುವಟಿಕೆಗಳು ನಿರಂತರವಾಗಿ ನಡೆಯುವಲ್ಲಿ ಸಕ್ರಿಯ ಪಾತ್ರವಹಿಸಿದ್ದಾರೆ.‍ ಸಂಘದ ವತಿಯಿಂದ ಕನ್ನಡಿಗರು ಮತ್ತು ಕನ್ನಡೇತರ ಮಕ್ಕಳಿಗಾಗಿ ಕನ್ನಡ  ಕಲಿಕಾ ತರಗತಿಗಳು ನಡೆಯುತ್ತಿವೆ. ಕನ್ನಡಿಗ ಮಹಿಳೆಯರನ್ನು ಒಗ್ಗೂಡಿಸಿ 'ವಿಷ್ಣು ಸಹಸ್ರನಾಮ', 'ಲಲಿತಾ ಸಹಸ್ರನಾಮ',' ಸೌಂದರ್ಯ ಲಹರಿ'ಗಳ ಪಠಣವನ್ನು  ಅರ್ಥ ಸಹಿತ ಕಲಿಸುತ್ತಿರುವುದು ನಳಿನಾ ಅವರ ಮತ್ತೊಂದು ಸಕ್ರಿಯ ಚಟುವಟಿಕೆ. 

ನಳಿನಾ ಪ್ರಸಾದ್ ಅತ್ಯುತ್ತಮ ಬರಹಗಾರ್ತಿ. ಅವರು ಕಥೆ, ಕವನ, ಪ್ರಬಂಧಗಳಲ್ಲಿ ಮತ್ತು ವಿಶೇಷ ಸಂಚಿಕೆಗಳಲ್ಲಿ ಮೂಡಿಸಿರುವ ಬರಹಗಳಲ್ಲಿ ಮೂಡಿರುವ ಅಧ್ಯಯನದ ಆಳ ಮತ್ತು ವಿಷಯ ಪ್ರಸ್ತುತಿಯ ಭಾಷಾಭಿವ್ಯಕ್ತಿ ಬೆರಗು ಹುಟ್ಟಿಸುವಂತದ್ದು.

ಹಬ್ಬ ಹರಿದಿನಗಳ ಆಚರಣೆ, ರಂಗೋಲಿ ನಳಿನಾ ಅವರ ವಿಶೇಷ ಒಲವು. ಯಾವುದೇ ಊರಲ್ಲಿದ್ದರೂ ದಸರಾ ಬೊಂಬೆ ಜೋಡಣೆಯನ್ನು ಕಳೆದ ಇಪ್ಪತ್ತೈದು ವರ್ಷಗಳಿಂದ ಆಸಕ್ತಿಯಿಂದ ಮಾಡುತ್ತಾ ಬಂದಿರುವ ನಳಿನಾ ಅವರಿಗೆ ಸಂಪ್ರದಾಯ, ಸಂಸ್ಕೃತಿಗಳ ಕುರಿತಾಗಿ ಅಪಾರ ಅಕ್ಕರೆ. ಅವರು ಭಕ್ತಿಗೀತೆಗಳನ್ನು ಸುಶ್ರಾವ್ಯವಾಗಿ ಹಾಡುತ್ತಾರೆ.

ನಳಿನಾ ಅವರಿಗೆ ದಸರಾ ಕವಿ ಪುರಸ್ಕಾರ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ,  ಕಾಶ್ಮೀರ ಪುರವಾಸಿನಿ ಪಬ್ಲಿಕೇಷನ್ನಿನ ನಾರಿ ಸಮ್ಮಾನ್ ಪ್ರಶಸ್ತಿ, ಶ್ರೇಷ್ಠ ಶಿಕ್ಷಕಿ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಲಭಿಸಿವೆ. 

ಇಷ್ಟೆಲ್ಲ ಪ್ರತಿಭೆ ಇದ್ದರೂ ನಳಿನಾ ಪ್ರಸಾದ್ ಅವರದ್ದು ಸಂಕೋಚ ಪ್ರವೃತ್ತಿ.  ನಾನೇನೂ ಸಾಧಿಸಿಲ್ಲ, ಏನೋ ಆತ್ಮ ಸಂತೋಷಕ್ಕೆ ಮಾಡುತ್ತಿದ್ದೇನೆ, ನಾನು ವಿದ್ಯಾರ್ಥಿಯಂತೆ, ತುಂಬಾ ಕಲಿಯಬೇಕು, ನಾ ಏನೂ ಮಾಡುತ್ತಿಲ್ಲ ಹೀಗೇಯೇ ಅವರು ಮಾತಾಡುವುದು.  ಅವರ ಮಾಧುರ್ಯವುಳ್ಳ ಮಾತಿನಲ್ಲಿ ತಗ್ಗಿ ಬಗ್ಗಿ ನಡೆಯುವ ಸರಳ ಸುಸಂಸ್ಕೃತಿಯ ವಿನಯಭಾವಗಳೆಲ್ಲವೂ ಸಮ್ಮಿಳಿತಗೊಂಡಿವೆ.  

ಆತ್ಮೀಯರಾದ ಮಧುರ ವ್ಯಕ್ತಿತ್ವದ ನಳಿನಾ ಪ್ರಸಾದ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday to our multitalented Nalini Prasad, Nalina Prasad

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ