ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಿ.ಆರ್.ಸತ್ಯ


 ಸಿ.ಆರ್.ಸತ್ಯ

ಸಿ. ಆರ್. ಸತ್ಯ ಅವರು ಮಹಾನ್ ತಂತ್ರಜ್ಞ, ಕನ್ನಡದ ಬರಹಗಾರ ಮತ್ತು ಪರಿಸರ ನಿಷ್ಠಾವಂತ ಕಾರ್ಯಕರ್ತರಾಗಿ ಹೆಬ್ಬಾಳ ಕೆರೆ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದವರು.   ಶ್ರೀಯುತರು ನವ ಕನ್ನಡದ ಸಾಹಿತಿಗಳ ಪಡೆಯ ನಿರ್ಮಾಪಕರಲ್ಲಿ ಪ್ರಮುಖರಾದ ಮಹಾನ್ ಸಾಹಿತಿ ಎ. ಆರ್. ಕೃಷ್ಣಶಾಸ್ತ್ರಿಗಳ ಮೊಮ್ಮಗ. 

ಚಿನ್ಯಾ ರಾಮಚಂದ್ರರಾವ್ ಸತ್ಯ ಅವರು 1942 ಆಗಸ್ಟ್ 12 ರಂದು ಜನಿಸಿದರು. 1964ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್‌ ಪದವಿಯನ್ನು ಗಳಿಸಿದರು. 1965ರಲ್ಲಿ ಮುಂಬೈನ  ಭಾಭಾ ಅಟಾಮಿಕ್ ಎನರ್ಜಿ ಎಸ್ಟಾಬ್ಲಿಷ್‌ಮೆಂಟ್‌ನಿಂದ ಪರಮಾಣು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ತರಬೇತಿ ಗಳಿಸಿದರು.

ಸತ್ಯ ಅವರು ತಿರುವನಂತಪುರಂನ ತುಂಬಾ ರಾಕೆಟ್ ಉಡಾವಣಾ ಕೇಂದ್ರದಲ್ಲಿ ರಾಕೆಟ್ ಇಂಜಿನಿಯರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಸೌಂಡಿಂಗ್ ರಾಕೆಟ್‌ಗಳು, ಪೇಲೋಡ್ ಏಕೀಕರಣ ಮತ್ತು ಪೇಲೋಡ್ ಅರ್ಹತೆಗೆ ಅಗತ್ಯವಿರುವ ಎಲ್ಲಾ ರಚನಾತ್ಮಕ ಮತ್ತು ಪೇಲೋಡ್ ಸಾಧನಗಳನ್ನು ಅವರು ವಿನ್ಯಾಸಗೊಳಿಸಿದರು.

ಮುಂದೆ ಸತ್ಯ ಅವರು ಕಾಂಪೋಸಿಟ್ ನೋಸ್‌ಕೋನ್‌ಗಳು ಮತ್ತು ರಾಕೆಟ್ ಮೋಟಾರ್ ಟ್ಯೂಬ್‌ಗಳ ಕ್ಷೇತ್ರಕ್ಕೆ ಬಂದರು. ಈ ಲೇಖನಕ್ಕೆ ಸಂಬಂಧಿತ ಚಿತ್ರಗಳಲ್ಲಿ ತುಂಬಾ ರಾಕೆಟ್ ನಿಲ್ದಾಣದಲ್ಲಿ ರಾಕೆಟ್ನೋಸ್ಕೋನ್ ಅನ್ನು ಹೊತ್ತ ಬೈಸಿಕಲ್ ಪಕ್ಕದಲ್ಲಿ ನಡೆಯುತ್ತಿರುವ ಸಿ ಆರ್ ಸತ್ಯ ಅವರನ್ನು ಕಾಣಬಹುದು.  ಈ ಚಿತ್ರವನ್ನು ಪ್ರಸಿದ್ಧ ಫ್ರೆಂಚ್ ಮಾನವತಾವಾದಿ ಛಾಯಾಗ್ರಾಹಕ ಹೆನ್ರಿ ಕಾರ್ಟಿಯರ್ ಬ್ರೆಸನ್ ಅವರು ತೆಗೆದಿದ್ದು ವಿಶ್ವದಾದ್ಯಂತ ಪ್ರಸಿದ್ಧಿಗೊಂಡಿದೆ.  ನಂತರದಲ್ಲಿ ಸತ್ಯ ಅವರು ಕಾಂಪೊಸಿಟ್ಸ್ ತಂತ್ರಜ್ಞಾನದಲ್ಲಿ ಫೈಬರ್‌ಗ್ಲಾಸ್ ಪ್ರಯೋಗಾಲಯದ ಮುಖ್ಯಸ್ಥರಾಗಿ ಹಾಗೂ ನಂತರದಲ್ಲಿ ಕಾಂಪೋಸಿಟ್ಸ್ ವಿಭಾಗದ ಗ್ರೂಪ್ ಡೈರೆಕ್ಟರ್ ಆಗಿ ಪೂರ್ಣ ಸಮಯ ಕೆಲಸ ಮಾಡಿದರು.

ಇಸ್ರೋದಲ್ಲಿದ್ದಾಗ, ಸತ್ಯ ಅವರು ತಮ್ಮ ಕೆಲಸದ ಜವಾಬ್ದಾರಿಯ ಭಾಗವಾಗಿ ಟಾಟಾ ಗ್ರೂಪ್‌ಗೆ ಸಲಹೆಗಾರರಾಗಿದ್ದರು.  ಆ ಮೂಲಕ ಅವರು ಟಾಟಾ ಸಂಸ್ಥೆಗೆ ಬೆಂಗಳೂರಿನಲ್ಲಿ ಕಾಂಪೋಸಿಟ್ಸ್‌ನಲ್ಲಿ ಟಾಟಾ ಅಡ್ವಾನ್ಸ್‌ಡ್ ಮೆಟೀರಿಯಲ್ಸ್ ಲಿಮಿಟೆಡ್‌ ಎಂಬ ವಾಣಿಜ್ಯ ಉದ್ಯಮವನ್ನು ಸ್ಥಾಪಿಸಲು ನೆರವಾದರು.  1989ರಲ್ಲಿ ಇಸ್ರೋಗೆ ರಾಜೀನಾಮೆ ನೀಡಿದ ನಂತರ ಸತ್ಯ ಅವರು ಆ ಸಂಸ್ಥೆಗೆ ತಂತ್ರಜ್ಞಾನದ ಹಿರಿಯ ಉಪಾಧ್ಯಕ್ಷರಾಗಿ ಸೇರಿದರು. ಆ ಜವಾಬ್ದಾರಿಯಲ್ಲಿ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕಂಪನಿಯನ್ನು ನಿರ್ಮಿಸಿ,  ರಕ್ಷಣಾ, ದೂರಸಂಪರ್ಕ ಮತ್ತು ವೈದ್ಯಕೀಯ ಉದ್ಯಮಗಳಿಗೆ ಹೆಚ್ಚು ಅತ್ಯಾಧುನಿಕ ಸಂಯೋಜನೆಗಳನ್ನು ತಯಾರಿಸುವ ಶ್ರೇಷ್ಠ ತಂಡ ಮತ್ತು ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಿದರು.

ಸತ್ಯ ಅವರು ಅತ್ಯುತ್ತಮ ಕನ್ನಡ ಮತ್ತು ಇಂಗ್ಲಿಷ್ ಬರಹಗಾರರಲ್ಲಿ ಒಬ್ಬರಾಗಿದ್ದರು. ಇವರು ಬರೆದಿರುವ ತಾಂತ್ರಿಕ ಮತ್ತು ವೈಜ್ಞಾನಿಕ ಲೇಖನಗಳು, ಮೈಸೂರು ವಿಶ್ವ ವಿದ್ಯಾಲಯದ ವಿಶ್ವಕೋಶದಲ್ಲಿ, ರಕ್ಷಣಾ ಇಲಾಖೆಯ ಪ್ರಕಟಣೆಗಳಲ್ಲಿ, ವಿಜ್ಞಾನ ಲೋಕ ಹಾಗೂ ಉತ್ಥಾನ ಮುಂತಾದ ನಿಯತಕಾಲಿಕಗಳಲ್ಲಿ ಮತ್ತು ವೈಜ್ಞಾನಿಕ ಲೇಖನ ಸಂಕಲನಗಳಲ್ಲಿ  ಮೂಡಿಬಂದಿವೆ.
ಅವರು ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಹಲವು ಪುಸ್ತಕಗಳನ್ನೂ ಪ್ರಕಟಿಸಿದ್ದರು. ಇವುಗಳಲ್ಲಿ ವ್ಯಕ್ತಿಚಿತ್ರಗಳಿವೆ, ಜೀವನಾನುಭವಗಳಿವೆ, ಹಾಸ್ಯ ಸಂಕಲನಗಳಿವೆ ಮತ್ತು ಸಂಶೋಧನೆಗಳಿವೆ. 

ಸತ್ಯ ಅವರು ರಚಿಸಿದ ಹಾಸ್ಯ ಕವನ ‘ಆಚೇ ಮನೆ ಸುಬ್ಬಮ್ಮನಿಗೆ ಏಕಾದಶಿ ಉಪವಾಸ’ 1959ರಲ್ಲಿ ಕೊರವಂಜಿ ಮಾಸಪತ್ರಿಕೆಯಲ್ಲಿ ಪ್ರಕಟವಾಗಿ ಜನಪ್ರಿಯವಾಯಿತು.  ಮುಂದೆ ಅಪರಂಜಿ ಪತ್ರಿಕೆಯಲ್ಲಿಯೂ ಅವರು ಅನೇಕ ಅಣಕ ಹಾಸ್ಯ ಲೇಖನಗಳನ್ನು ಬರೆಯುತ್ತ ಬಂದಿದ್ದರು.  ತಿರುವನಂತಪುರದಲ್ಲಿ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಕಲ್ಲುಗಳ ಮೇಲೆ ಸತ್ಯ ಅವರು ಮಾಡಿದ ಸಂಶೋಧನೆಯ ಕುರಿತಾದ ‘ಅಳಿವಿಲ್ಲದ ಸ್ಥಾವರ’ ಪುಸ್ತಕಕ್ಕೆ ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿಯಿಂದ ಪ್ರಶಸ್ತಿ ಸಂದಿತು.  ಇವರೇ ಮೂಡಿಸಿರುವ ಇಂಗ್ಲಿಷ್ ಅನುವಾದ ‘ಸೆಂಟಿನಲ್ಸ್ ಆಫ್ ಗ್ಲೋರಿ’ಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪುರಸ್ಕಾರ ಸಂದಿತು. 

ಸತ್ಯ ಅವರು ದೇಶದ ಹಿರಿಯ ವಿಜ್ಞಾನಿಗಳು ಹಾಗೂ ನಾಯಕರೊಡನೆ ಒಡನಾಟ, ಅನೇಕ ದೇಶಗಳಲ್ಲಿನ ಪ್ರಯಾಣ ಮತ್ತು ತಮ್ಮ ಹವ್ಯಾಸಗಳಿಂದ ಮೂಡಿಬಂದ ಕುತೂಹಲಕಾರಿ ಅನುಭವಗಳನ್ನು ‘ತ್ರಿಮುಖಿ’ ಎಂಬ ಕೃತಿಯಲ್ಲಿ ಅಭಿವ್ಯಕ್ತಿಸಿದ್ದಾರೆ. 

ಸತ್ಯ ಅವರು ಬೆಂಗಳೂರಿನ ಥೋರೋ ಫೌಂಡೇಶನ್‌ನ ಸದಸ್ಯ ಟ್ರಸ್ಟಿ ಆಗಿದ್ದು, ಹೆಬ್ಬಾಳ ಕೆರೆಯನ್ನು ತಾಂತ್ರಿಕವಾಗಿ ಪುನರುಜ್ಜೀವನಗೊಳಿಸುವಲ್ಲಿ ನಾಯಕತ್ವ ವಹಿಸಿದ್ದರು.‍ ಯೋಜನೆಯನ್ನು ಕಾರ್ಯಗತಗೊಳಿಸಲು ಸಮಸ್ತ ರೂಪುರೇಷೆಗಳ ಪರಿಕಲ್ಪನೆಗಳನ್ನು ಕರ್ನಾಟಕ ಸರ್ಕಾರಕ್ಕೆ ನೀಡಿದರು.  ಅದರ ಆಧಾರದ ಮೇಲೆ ಸರ್ಕಾರವು ಈ ಕೆರೆಯ ಸಂರಕ್ಷಣಾ ಕಾರ್ಯಕ್ಕೆ ಟ್ರಸ್ಟ್ ಸ್ಥಾಪಿಸಿತು. ಹೆಬ್ಬಾಳ ಕೆರೆಯನ್ನು ಪೂರ್ಣ‍ ಸಂರಕ್ಷಿಸಿ ಅದನ್ನು ಕೆರೆಗಳ ಪ್ರಾಧಿಕಾರಕ್ಕೆ ಒಪ್ಪಿಸುವವರೆಗೂ ಸತ್ಯ ಅವರು ಆ ಕಾರ್ಯದಲ್ಲಿ ಭಾಗಿಯಾಗಿದ್ದರು.

ಸಿ. ಆರ್. ಸತ್ಯ ಅವರು 2023ರ ಏಪ್ರಿಲ್ 4ರಂದು ಈ ಲೋಕವನ್ನಗಲಿದರು.


Great scientist, writer and lovely environmentalist C. R. Sathya Sir 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ