ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ತೋವಿನಕೆರೆ ಸೀತಾರಾಮ ಜೋಯಿಸರು




 ತೋವಿನಕೆರೆ ಸೀತಾರಾಮ ಜೋಯಿಸರು

ತೋವಿನಕೆರೆ ಸೀತಾರಾಮ ಜೋಯಿಸರು ಕನ್ನಡ ಸಾಹಿತ್ಯ ಲೋಕದಲ್ಲಿನ ಕೊಡುಗೆಗಳಿಂದ ಹೆಸರಾದವರು. 

ಸೀತಾರಾಮ ಜೋಯಿಸರು ತುಮಕೂರು ಜಿಲ್ಲೆ ತೋವಿನಕೆರೆ ಗ್ರಾಮದಲ್ಲಿ 1905ರ ಜೂನ್ 13ರಂದು ಜನಿಸಿದರು. ಅವರ ತಂದೆ ಕರಿಗಿರಿಭಟ್ಟರು. ತಾಯಿ ವೆಂಕಟಲಕ್ಷ್ಮಮ್ಮ. ಅವರ ಹಳ್ಳಿಯಲ್ಲೇ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಲೋಯರ್‌ ಸೆಕೆಂಡರಿಯವರೆಗೂ ವಿದ್ಯಾಭ್ಯಾಸ ನಡೆಸಿದರು. ಆ ಊರಿಗೆ ಹದಿನೈದು ಮೈಲಿ ದೂರದಲ್ಲಿರುವ ತುಮಕೂರಿನಲ್ಲಿ ಹೈಸ್ಕೂಲು ವಿದ್ಯಾಭ್ಯಾಸ ಮುಂದುವರೆಯಿತು. ಆ ಸ್ಕೂಲಿನಲ್ಲಿ ʼಸ್ಕೂಲ್‌ ಫೋಕ್‌ ʼ ಎಂಬ ಮಾಸಪತ್ರಿಕೆ ಪ್ರಕಟವಾಗುತ್ತಿತ್ತು. ಆ ಪತ್ರಿಕೆಗೆ ಅವರ ವಿದ್ಯಾಗುರುಗಳಾಗಿದ್ದ ಎ. ಎಸ್.‌ ಭೀಮರಾಯರ ಮಾರ್ಗದರ್ಶನದಿಂದ ಲೇಖನಗಳನ್ನು ಬರೆಯಲು ಪ್ರಾರಂಭಿಸಿದರು. ತುಮಕೂರಿನಲ್ಲಿ ವಿದ್ಯಾಭ್ಯಾಸ ಮುಗಿದ ಮೇಲೆ ಮೈಸೂರಿನಲ್ಲಿ ಒಂದು ವರ್ಷ, ಮಹಾರಾಜ ಹೈಸ್ಕೂಲಿನಲ್ಲಿಯೂ ಒಂದು ವರುಷ, ಮಹಾರಾಜ ಕಾಲೇಜಿನಲ್ಲಿಯೂ (೧೯೨೫-೨೬) ವಿದ್ಯಾರ್ಥಿಯಾಗಿದ್ದರು. ವಿದ್ಯಾರ್ಥಿದೆಸೆಯಲ್ಲಿ ಇರುವಾಗಲೇ ಅವರಿಗೆ ವಿದ್ವಾನ್‌ ಕಡಬದ ನಂಜುಂಡಶಾಸ್ತ್ರಿಗಳ ಮಗಳು ಸೀತಮ್ಮನವರೊಂದಿಗೆ ವಿವಾಹವಾಯಿತು. ಅವರಿದ್ದ ಮನೆಯಲ್ಲೇ ಲಕ್ಷ್ಮೀನರಸಿಂಹಯ್ಯ  ಎಂಬ ಎಂ.ಎ. ಪದವಿ ಪಡೆದ ವಿದ್ವಾಂಸರಿದ್ದರು. ಅವರು ಸಾಹಿತ್ಯ ವಿಚಾರದಲ್ಲಿ ಅಮೂಲ್ಯವಾದ ಸಲಹೆಗಳನ್ನು ಕೊಟ್ಟು ಸಾಹಿತ್ಯವನ್ನು ಬರೆಯಲು ಪ್ರೋತ್ಸಾಹಿಸಿದರು. ಅಧ್ಯಾಪಕರಾಗಿದ್ದ ಎಸ್.ವಿ. ರಂಗಣ್ಣನವರು ಕಾಲೇಜಿನ ಒಳಗೂ ಹೊರಗೂ ಸಾಹಿತ್ಯ ವಿಚಾರದಲ್ಲಿ ಸಲಹೆಗಳನ್ನು ಕೊಡುತ್ತಿದ್ದರು. ಹಾಗೂ ಪೂಜ್ಯ ವೆಂಕಟಕೃಷ್ಣಯ್ಯನವರು ತಮ್ಮ ಇ಼ಷ್ಟಾನುಸಾರ ಪ್ರಬಂಧ ಮುಂತಾದುವುಗಳನ್ಜು ಬರೆಸುತ್ತಿದ್ದರು. ಮಹಾರಾಜ ಕಾಲೇಜಿನಲ್ಲಿ ಇದ್ದಾಗ ʼಜನ ಕರ್ನಾಟಕ ಸಂಘʼದವರು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನವೂ ಬಂದಿತ್ತು. ಎಲ್.‌ ಗುಂಡಪ್ಪನವರೂ, ತೀ.ನಂ ಶ್ರೀಕಂಠಯ್ಯನವರೂ ಇವರ ಸಹಪಾಠಿಗಳಾಗಿದ್ದರು. ಕೆಲವು ಅನಿವಾರ್ಯ ಕಾರಣಗಳಿಂದ ಮತ್ತು ಮನೆಯವರ ಒತ್ತಡದಿಂದ ಅವರ ವಿದ್ಯಾರ್ಥಿ ಜೀವನವೂ ಅಲ್ಲಿಗೇ ಮುಕ್ತಾಯವಾಯಿತು.

ಸೀತಾರಾಮ ಜೋಯಿಸರು ಮೈಸೂರಿನಲ್ಲಿ ಇರುವಾಗ ಅವರಿಗೆ ಶ್ರೀ ರಾಮಕೃಷ್ಣ ಆಶ್ರಮದ ಪರಿಚಯವಾಯಿತು. ಬೆಂಗಳೂರಿನ ಶ್ರೀ ರಾಮಕೃಷ್ಣ ಆಶ್ರಮದಲ್ಲಿ ಶ್ರೀಮತಿ ಕಲ್ಯಾಣಮ್ಮನವರ ಪರಿಚಯವಾಯಿತು. ಅವರು ʼಸರಸ್ವತಿʼ ಎಂಬ ಮಾಸ ಪತ್ರಿಕೆಯನ್ನು ಸ್ವತಃ ನಡೆಸುತ್ತಿದ್ದರು. ಆಕೆ ಮೊದಲೇ ಇವರು ಬರೆಯುತ್ತಿದ್ದ ಲೇಖನಗಳನ್ನು ʼವಿಶ್ವಕರ್ನಾಟಕʼ, ʼಜಯಕರ್ನಾಟಕʼ ಮತ್ತು ದೆಹಲಿಯಿಂದ ಹೊರಡುತ್ತಿದ್ದ ಚಿಲ್ಡ್ರನ್ ನ್ಯೂಸ್‌ ಪತ್ರಿಕೆಗಳಲ್ಲಿ ಓದಿದ್ದರಂತೆ. ಅದರಿಂದ ಅವರು ʼಸರಸ್ವತಿʼ ಮಾಸಪತ್ರಿಕೆಯಲ್ಲಿ ಮಕ್ಕಳಿಗಾಗಿಯೇ ಮೀಸಲಾದ  ಮಕ್ಕಳ ಪುಟದಲ್ಲಿ ಸಾಹಿತ್ಯ ಸೇವೆ ಮಾಡಬೇಕೆಂದು ಕೇಳಿದರು. ಆಗ ಸೀತಾರಾಮ ಜೋಯಿಸರು ಸರ್ಕಾರಿ ಸರ್ವೇ ಸೆಟಲ್‌ಮೆಂಟ್‌ ಸೇವೆಯಲ್ಲಿ ಸರ್ವೇಯರಾಗಿ ಕೆಲಸ ಮಾಡುತ್ತಿದ್ದರು. ಕಲ್ಯಾಣಮ್ಮನವರ ಕೋರಿಕೆಗೆ ಒಪ್ಪಿ 1928 ರಿಂದ 1932ರ ವರೆಗೆ ತಮ್ಮ ಬಿಡುವಿನ ವೇಳೆಯಲ್ಲಿ ಪತ್ರಿಕೆಗೆ ಕೆಲಸ ಮಾಡಿದರು. 

ಸೀತಾರಾಮ ಜೋಯಿಸರು 1929ರ ಆದಿ ಭಾಗದಿಂದ ಮೂವತ್ತೆರಡು ವರುಷಕಾಲ ಕರ್ನಾಟಕದ ಗ್ರಾಮಗಳು, ಗುಡ್ಡ,ಬೆಟ್ಟ, ಕಾಡುಗಳಲ್ಲಿ ಸಂಚರಿಸಿದರು. ದಿನ ಒಂದಕ್ಕೆ, ಐವತ್ತು ಮೈಲಿಗಳವರೆಗೆ ಬೈಸಿಕಲ್‌, ಎತ್ತಿನಗಾಡಿ ಮತ್ತು ಎಷ್ಟೋಕಡೆ ಕಾಲು ನಡಿಗೆಯಲ್ಲೂ ಅಲೆಯಬೇಕಾಯಿತು. ಆ ಸಂದರ್ಭದಲ್ಲೇ ಅವರು ಬರೆದ ಕಥೆ, ಕವನ ಲೇಖನ ಭಗವತ್‌ ಪ್ರಾರ್ಥನೆ  ಮುಂತಾದ ಲೇಖನಗಳು ಇದ್ದ ಪೆಟ್ಟಿಗೆಯೇ ದುರದೃಷ್ಟವಶಾತ್‌ ಕಳೆದು ಹೋಯಿತು.
ಜೋಯಿಸರು ತಮ್ಮ ದೀರ್ಘ ಸೇವಾ ಅವಧಿಯಲ್ಲಿ ಆ ಮಾರ್ಗದ ಉದ್ದಕ್ಕೂ ದೇವಸ್ಥಾನಗಳು, ನದೀ ಕ್ಷೇತ್ರಗಳನ್ನು ಸಂದರ್ಶಿಸಿ, ಅಲ್ಲಿಯ ಸ್ಥಳ ಪುರಾಣ, ಇತಿಹಾಸ, ಇವುಗಳನ್ನು ಅಲ್ಲಿನ ಭಕ್ತರು, ಸಾಧು ಸಂತರನ್ನು ಸಂದರ್ಶಿಸಿ ಅವರಿಂದ ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದರು. ಅದೇ ಕಾಲದಲ್ಲಿ ಒಂದು ದೇವಾಲಯದಲ್ಲಿ ಒಬ್ಬ ಸಾಧು ಸತ್ಪುರುಷರ ಸಂದರ್ಶನವಾಯಿತು. ಅವರು ಜೋಯಿಸರನ್ನು ನೋಡಿದ ತಕ್ಷಣವೇ ಬೇರೆ ಏನನ್ನೂ ವಿಚಾರಿಸದೆ, ನೀವು ಕಥೆ ಕಾದಂಬರಿಗಳನ್ನು ಬರೆಯಬೇಡಿ. ಅದೆಲ್ಲಾ ಸುಳ್ಳು ಆರಾಧನೆ, ಹಗಲೂ ರಾತ್ರಿ ಇಂತಹ ಸುಳ್ಳನ್ನೇ ಕಂಡು ಹಿಡಿಯಲು  ಚಿಂತಿಸುತ್ತಾ, ಜೀವನವನ್ನೆಲ್ಲಾ ಅನೈತಿಕ ಕುತಂತ್ರಗಳನ್ನೇ ಚಿತ್ತದಲ್ಲಿ ತುಂಬುತ್ತೀರಿ. ಆದುದರಿಂದ ನಿರ್ಮಲವಾದ ಸತ್ಯವನ್ನು ಬರೆಯಿರಿ: ಯಥಾರ್ಥವಾಗಿ ನಡೆಯುವುದನ್ನೇ ಬರೆಯಿರಿ. ಇಲ್ಲದಿದ್ದರೆ ಸಮಾಜಕ್ಕೆ ದ್ರೋಹ ಬಗೆದಂತೆ ಆಗುತ್ತದೆ. ಅದನ್ನು ಓದುವ ಓದುಗರಿಗೆ ಆಧ್ಯಾತ್ಮ ಚಿಂತನೆಯೇ ಬರುವುದಿಲ್ಲ. ಎಂದು ಉಪದೇಶ ಮಾಡಿದರು. ಬಹು ದಿನಗಳವರೆಗೆ ಅವರ ಉಪದೇಶ ಇವರ ಮನಸ್ಸನ್ನು ಅಸ್ಥಿರಗೊಳಿಸಿತು. 

ಜೋಯಿಸರು ಸರ್ಕಾರಿ ಸೇವೆಯಿಂದ ನಿವೃತ್ತರಾದಮೇಲೆ ತಾವು ನೋಡಿದ ಮತ್ತು ಅನುಭವಿಸಿದ ನೈಜ ಘಟನೆಗಳನ್ನು ಒಳಗೊಂಡ, ʼನೆನಪಿನ ಅಂಗಳʼ, ʼನೆನಪಿನ ತರಂಗ”, ಮತ್ತು ʼ ನಾ ಕಂಡ ಶ್ರೀಸಾಮಾನ್ಯರುʼ ಎಂಬ ಪುಸ್ತಕಗಳನ್ನು ಬರೆದರು.

ಮೂವತ್ತೆರಡು ವರ್ಷಗಳ ಸರ್ಕಾರದ ಸೇವೆಯ ನಂತರ 1961 ನೇ ಇಸವಿಯಲ್ಲಿ ನಿವೃತ್ತರಾದರು. ಇವರಿಗೆ, ತಮ್ಮ ಅನುಭವಗಳ ಮೂಸೆಯಲ್ಲಿ ಅರಳಿದ ವಿಶಿಷ್ಠ ಸಂಗತಿಗಳನ್ನು ಬರೆದಿಡುವ ಹವ್ಯಾಸ ಇದ್ದುದು ಕನ್ನಡ ಸಾಹಿತ್ಯಕ್ಕೆ ಲಾಭವಾಯಿತು. ಸಾಹಿತ್ಯಪ್ರೇಮಿ, ರಂಗಕರ್ಮಿ ರಮೇಶಚಂದ್ರರ Ramesh Chandra ಗಮನಕ್ಕೆ ಈ ಬರಹಗಳು ಬಂದು, ಅವರ ಶ್ರದ್ದೆ ಶ್ರಮದಿಂದ ಅವುಗಳಿಗೆ ಒಂದು ಸ್ಪಷ್ಟ ರೂಪ ದೊರೆತು, 1987ರಲ್ಲಿ ʼಶ್ರೀನಿಧಿʼ ಪ್ರಕಾಶನದ ಮೂಲಕ ಸಂಗ್ರಹ ರೂಪದಲ್ಲಿ ಕಸ್ತೂರಿ ಮಾಸಪತ್ರಿಕೆಯಲ್ಲಿಯೂ ತದನಂತರ ಪುಸ್ತಕ ರೂಪದಲ್ಲೂ ಪ್ರಕಟಗೊಂಡಿತು.
ʼನೆನಪಿನ ಅಂಗಳಕ್ಕೆʼ ದೊರೆತ ಪ್ರೋತ್ಸಾಹದ ನಂತರ ʼನೆನಪಿನ ತರಂಗʼ ಅನುಭವ ಕಥನ, ʼಅಷ್ಟದಳʼ, ʼಕಥಾಸಂಕಲನʼ, ʼನಾ ಕಂಡ ಶ್ರೀಸಾಮಾನ್ಯರುʼ, ʼಕಾಲನದಿಯ ಪ್ರವಾಹದಲ್ಲಿʼ ಪ್ರಕಟಗೊಂಡವು. ಹಾಗೂ ಅಪಾರ ಜನಮನ್ನಣೆ, ಪತ್ರಿಕಾ ಪ್ರಶಂಸೆಗಳನ್ನು ಪಡೆದುಕೊಂಡವು. 

ಜ್ಯೋತಿಷ್ಯ, ಭಗವಚ್ಚಿಂತನೆ, ಧ್ಯಾನ, ಸದಾಚಾರ, ಆದ್ಯಾತ್ಮಗಳಿಗೆ ತಮ್ಮ ಶೇಷ ಜೀವನ ಮೀಸಲಿಟ್ಟ ಶ್ರೀ ತೋವಿನಕೆರೆ ಸೀತಾರಾಮ ಜೋಯಿಸರು 1998 ಆಗಸ್ಟ್ 30ರಂದು  ನಿಧನರಾದರು. 


On the birth anniversary of scholar Tovinakere Seetharama Jois 


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ