ವಸುಂಧರಾ ಹೆಗಡೆ
ವಸುಂಧರಾ ಹೆಗಡೆ
ವಸುಂಧರ ಹೆಗಡೆ ಅವರು ಉತ್ಸಾಹಿ ಉದ್ಯಮಿ, ಕೃಷಿತಜ್ಞೆ ಮತ್ತು ಬರಹಗಾರ್ತಿ. ಆನ್ಲೈನ್ ಮಾರುಕಟ್ಟೆ ಮೂಲಕ ಸ್ವಾವಲಂಬನೆ ಸಾಧಿಸಿರುವ ಇವರ ಸಾಮರ್ಥ್ಯವನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ 'ಮನ್ ಕಿ ಬಾತ್'ನಲ್ಲಿ ಶ್ಲಾಘಿಸಿದ್ದಾರೆ.
ಫೆಬ್ರುವರಿ 16, ವಸುಂಧರಾ ಅವರ ಜನ್ಮದಿನ. ಉತ್ತರ ಕನ್ನಡ ಜಿಲ್ಲೆಯ ಸಿರಸಿ ಸಮೀಪದ ಕಾನಳ್ಳಿ ಇವರಿರುವ ಊರು. ಇವರ ಪದವಿ ವಿದ್ಯಾಭ್ಯಾಸ ನಡೆದದ್ದು ಸಿರಸಿಯ ಎಂಇಎಸ್ ವಾಣಿಜ್ಯ ಕಾಲೇಜಿನಲ್ಲಿ.
ವಸುಂಧರಾ - ಪ್ರಭಾಕರ ಹೆಗಡೆ ದಂಪತಿಗಳು ಕೃಷಿಯ ಕುಟುಂದವರಾಗಿದ್ದು ಪ್ರಧಾನವಾಗಿ ಅಡಿಕೆ, ಬಾಳೆ, ಕಾಳು ಮೆಣಸು ಬೆಳೆಯಲ್ಲಿ ನಿರತರು. ಈ ದಂಪತಿಗಳು ಕೊರೊನಾ ಲಾಕ್‌ಡೌನ್ ಜಾರಿಯಾದ ಸಂದರ್ಭದಲ್ಲಿ ಗೃಹೋತ್ಪನ್ನಗಳನ್ನು ಮಾಡಿ ಮಾರಾಟ ಮಾಡಲು ‘ಮಂಜುಶ್ರೀ ಹೋಂ ಪ್ರೋಡಕ್ಟ್ಸ್' ಹುಟ್ಟುಹಾಕಿದರು. ಈ ಕುರಿತು ಒಂದೆಡೆ ವಸುಂಧರಾ ಹೀಗೆ ಹೇಳುತ್ತಾರೆ: "ನಾನು ಮಾರಾಟ ಕ್ಷೇತ್ರಕ್ಕೆ ಬಂದಿದ್ದೇ ಆಕಸ್ಮಿಕ. ಮೊದಲಿನಿಂದ ಹಳ್ಳಿಯಲ್ಲಿ ಸಿಗುವ ನೈಸರ್ಗಿಕ ವಸ್ತುಗಳು ಯಾರಿಗೂ ಉಪಯೋಗಕ್ಕೆ ಬರದೇ ಹಾಳಾಗುತ್ತಿದೆ ಅನಿಸುತ್ತಿತ್ತು. ಅದನ್ನು ಒಳ್ಳೆಯ ರೀತಿಯಲ್ಲಿ ಉಪಯೋಗ ಆಗುವಂತೆ ಮಾಡಬೇಕು ಎಂಬ ಉದ್ದೇಶ ಇತ್ತು. ಕರೋನ ಬಂದು ಅದನ್ನು ಸಾಕಾರ ಗೊಳ್ಳುವಂತೆ ಮಾಡಿತು."
ಬಾಕಾಹು ಆಂದೋಲನದ ರೂವಾರಿ ಶ್ರೀ ಪಡ್ರೆ ಅವರ ಸಲಹೆಯ ಮೇರೆಗೆ ಬಾಳೆಕಾಯಿ ಹುಡಿ (ಬಾಕಾಹು) ಮಾರಾಟ ಮಾಡುವ ವಸುಂಧರಾ ಅವರ ಯಶಸ್ವಿ ಪ್ರಯತ್ನ ಎಲ್ಲೆಡೆ ಸಂಚಲನ ಮೂಡಿಸಿ, ಇನ್ನೂ ಅನೇಕರಿಗೆ ಹೀಗೆ ಮಾಡುವ ಪ್ರೇರಣೆಯನ್ನೂ ನೀಡಿತು. ಮೇಲೆ ಹೇಳಿದ ಹಾಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನದ ಮಾತಿನ ಬಾನುಲಿಯ ಕಾರ್ಯಕ್ರಮ 'ಮನ್ ಕಿ ಬಾತ್'ನಲ್ಲಿ ವಸುಂಧರಾ ಹೆಗಡೆ ಅವರ ಈ ಸ್ವಾವಲಂಬನೆಯ ಪರಿಶ್ರಮವನ್ನು ಶ್ಲಾಘಿಸಿದರು.
ವಸುಂಧರಾ ಅವರು ಕೇರಳದ ತ್ರಿಶೂರಿನ ವೆಲ್ಲನಿಕ್ಕರ್ʼನಲ್ಲಿರುವ ಕೇರಳ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದ ʼಕೃಷಿಕ ವಲಯದ ಮಹಿಳೆಯರ ಸಮಾವೇಶ – 2024ʼರ ಕಾರ್ಯಕ್ರಮದಲ್ಲಿ ಉತ್ತರ ಕನ್ನಡದ ಪರವಾಗಿ ಭಾಗವಹಿಸಿದ್ದರು. ಕೇರಳ ಕೃಷಿ ವಿಶ್ವ ವಿದ್ಯಾಲಯ ಬಿಡುಗಡೆ ಮಾಡಿದ ಪುಸ್ತಕದಲ್ಲಿ ಇವರ ಸಾಧನೆಯ ವಿಶೇಷ ಪ್ರಸ್ತಾಪವಿದೆ.
ವಸುಂಧರಾ ಅವರು ಉತ್ತಮ ಬರಹಗಾರ್ತಿ. ಸುಂದರ ಕನ್ನಡದಲ್ಲಿ ತಮ್ಮ ಅನುಭವಗಳನ್ನು ಬರೆಯುತ್ತಾರೆ. ಧೃತಿ ಮಹಿಳಾ ಮಾರುಕಟ್ಟೆಯ ಚಟುವಟಿಕೆಗಳಲ್ಲೂ ಸಕ್ರಿಯರಾಗಿದ್ದಾರೆ. ಓದು, ಪ್ರವಾಸ, ನಿಸರ್ಗಪ್ರಿಯತೆ, ಸಾಂಸ್ಕೃತಿಕ ಪ್ರೀತಿ, ಎಲ್ಲರೊಂದಿಗೆ ಆತ್ಮೀಯ ಭಾವ ಇವೆಲ್ಲವೂ ಆಪ್ತವಾಗಿ ಇವರೊಂದಿಗೆ ಮೇಳೈಸಿವೆ. ಮಗನ ಇಂಜಿನಿಯರಿಂಗ್ ಓದು ಮತ್ತು ಮಗಳ ಹೈಸ್ಕೂಲು ಓದು ಹೀಗೆ ಎಲ್ಲದರ ಕುರಿತೂ ಇವರಿಗೆ ಗಮನವಿದೆ.
ಆತ್ಮೀಯರಾದ ವಸುಂಧರಾ ಹೆಗಡೆ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ತಮ್ಮ ಉತ್ಸಾಹ ಸಾಧನೆಗಳು ನಮ್ಮನ್ನು ನಿರಂತರ ಪ್ರೇರಿಸುತ್ತಿರಲಿ. ನಮಸ್ಕಾರ.
Happy birthday Vasundhara Hegde 🌷🌷🌷
ಕಾಮೆಂಟ್‌ಗಳು