ಸುಶೀಲ ಎಂಪಿ
ಸುಶೀಲ ಎಂಪಿ
ಸುಶೀಲ ಎಂಪಿ ಅವರು ಪತ್ರಿಕಾಲೋಕ ಮತ್ತು ರಂಗಲೋಕದ ಮಹತ್ವದ ಸಾಧಕರು.
ಮೇ 2, ಸುಶೀಲ ಅವರ ಜನ್ಮದಿನ. ಇವರು ಹುಟ್ಟಿದ್ದು ಮತ್ತು ಪದವಿ ವರೆಗೆ ಓದಿದ್ದು ಸಕ್ಕರೆ ನಾಡು ಮಂಡ್ಯದಲ್ಲಿ. ಮೈಸೂರಿನ ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಈಗಲೂ ಅವರಿಗೆ ಆರಾಂಕುಶಮಿತ್ತೊಡಮ್ ನೆನೆವುದೆನ್ನ ಮನಮ್ ಎಂಬಂತೆ ಮಂಡ್ಯ ಎಂದರೆ ಬಲು ಪ್ರೀತಿ, ಅಭಿಮಾನ.
ಸುಶೀಲ ಅವರು ಪತ್ರಕರ್ತೆ ಆದದ್ದು ಆಕಸ್ಮಿಕವಾಗಿ. ಆ ಬಗ್ಗೆ ಯೋಚಿಸಿದ್ದವರೆ ಅಲ್ಲ. ಏನಾದರೂ ಆಗಬೇಕೆಂಬ ತುಡಿತ ತೀವ್ರವಾಗಿತ್ತು. ಏನೆಂಬ ನಿರ್ದಿಷ್ಟ ಉದ್ದೇಶ ಇರಲಿಲ್ಲ. ಐಎಎಸ್, ಉದ್ಯಮ..... ಏನಾದರೂ. ಮನೆಯಲ್ಲಿ ಅಪಾರ ಪ್ರೀತಿಯ ಸುಖದ ವಾತಾವರಣ ಇದ್ದರೂ ಹೆಣ್ಣು ಮಕ್ಕಳೆಂದು ಕಟ್ಟುಪಾಡು ಜಾಸ್ತಿ. ಮದುವೆ ಒಂದೇ ಗುರಿ.
ಸುಶೀಲ ಅವರಿಗೆ ಮದುವೆ ಆಗಿ ಎರಡು ಮಕ್ಕಳಾದರೂ ತಮ್ಮದೇ ಆದ ಅಸ್ತಿತ್ವ ಬೇಕೆಂಬ ತುಡಿತ ನಿಲ್ಲಲಿಲ್ಲ. ಆಗ ಕಣ್ಣಿಗೆ ಬಿದ್ದದ್ದು ಉಪಸಂಪಾದಕರು ಬೇಕೆಂಬ ಪ್ರಜಾವಾಣಿ ಜಾಹೀರಾತು. ಅದು ಬದುಕಿಗೆ ತಿರುವು ನೀಡಿದ ಗಳಿಗೆ. ಮುಂದಿನ ದಾರಿ ನಿಚ್ಚಳವಾಯಿತು. ಪ್ರಜಾವಾಣಿಗೆ ಕಾಲಿಟ್ಟ ಮೇಲೆ ವಿಶಾಲ ಪ್ರಪಂಚ ತೆರೆದುಕೊಂಡಿತು. ಪತ್ರಿಕಾರಂಗ ಅಚ್ಚುಮೆಚ್ಚಿನದಾಯಿತು. ಚಡಪಡಿಕೆ ನಿಂತು ಪೂರ್ಣವಾಗಿ ತಮ್ಮನ್ನು ತಾವು ವೃತ್ತಿಯಲ್ಲಿ ತೊಡಗಿಸಿಕೊಂಡರು. ಅಲ್ಲಿಂದ ಹಿಂತಿರುಗಿ ನೋಡಲಿಲ್ಲ. ಪ್ರಜಾವಾಣಿ ಎಂಬ ವಿಶ್ವ ವಿದ್ಯಾಲಯದಲ್ಲಿ ಕಲಿತದ್ದು ಅಮೂಲ್ಯ. ವೈಎನ್‍ಕೆ, ವೈಕುಂಠರಾಜು, ಜಿ ಎಸ್ ಸದಾಶಿವ, ಐ ಕೆ ಜಾಗಿರ್ದಾರ್ ಅವರಂಥ ಘಟಾನುಘಟಿಗಳ ಜೊತೆ ಕಲಿತದ್ದು ಬಹಳ. ಚಂದ್ರನಾಥ್ ಆಚಾರ್ಯ, ಗುಜ್ಜಾರಪ್ಪ, ಸೂರಿ, ಮನೋಹರ್ ಅವರಂಥ ಕಲಾವಿದರ ಸ್ನೇಹಮಯ ಒಡನಾಟ ಲಭ್ಯವಾಯಿತು.
ಕೆಲಸಕ್ಕೆ ಸೇರುವ ಮೊದಲು ಹೆಗ್ಗೋಡಿನಲ್ಲಿ ಕಳೆದ ಮೂರು ವರ್ಷಗಳು, ನೀನಾಸಂ ಒಡನಾಟ, ಕೆವಿ ಸುಬ್ಬಣ್ಣ ಅವರ ಪ್ರೇರಣೆ ರಂಗಾಸಕ್ತಿ ಮೂಡಲು ಮುಖ್ಯ ಕಾರಣವಾಯಿತು. ಸುಶೀಲ ಅವರು ಪ್ರಜಾವಾಣಿ ಲಲಿತಕಲಾ ಸಂಘದ ಸಕ್ರಿಯ ಸದಸ್ಯರಾಗಿ ನಾಟಕಗಳನ್ನು ಆಡಿಸಿದರು, ಅಭಿನಯಿಸಿದರು. ಸಮುದಾಯದ ಹಲವು ನಾಟಕಗಳಲ್ಲಿ ಅಭಿನಯಿಸಿದರು. ದೆಹಲಿಯಲ್ಲಿ ನಡೆದ ನಾಟಕೋತ್ಸವದಲ್ಲಿ ಪ್ರಸನ್ನರ ಗೆಲಿಲಿಯೋ, ತಾಯಿ ನಾಟಕಗಳಲ್ಲಿ, ಎಸ್. ಮಾಲತಿ ಅವರ ಸಾಹೇಬರು ಬರುತ್ತಾರೆ, ರಾಜೇಂದ್ರ ಕಾರಂತ್ ಅವರ ಮುದ್ದಣನ ಪ್ರಮೋಷನ್ ಪ್ರಸಂಗ , ಬಿ.ಜಯಶ್ರೀ ಅವರ ವೈಶಾಖ, ಒಂದು ಲೋಕ ಕಥೆ, ಗಿರಿಜಾ ಕಲ್ಯಾಣ, ಗಂಗಾಧರ ಸ್ವಾಮಿ ಅವರ ಕೊಂದು ಕೂಗಿತ್ತು ನೋಡ ಇವರು ಅಭಿನಯಿಸಿರುವ ಕೆಲವು ನಾಟಕಗಳು.
ಸುಶೀಲ ಅವರು 1982 ರಲ್ಲಿ ಪ್ರಜಾವಾಣಿ ಸೇರಿದರು. ಆರಂಭದ ಕೆಲ ವರ್ಷಗಳು ಗ್ರಾಮಾಂತರ ವಿಭಾಗದಲ್ಲಿ ಕೆಲಸ ಮಾಡಿದರು. ನಂತರ ಸುದ್ಧಿ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದರು. ಕೊನೆಯ ಆರು ವರ್ಷ ಸಾಪ್ತಾಹಿಕ ಪುರವಣಿ, ಕರ್ನಾಟಕ ದರ್ಶನ, ಸಿನಿಮಾರಂಜನೆ ಮತ್ತು ಕೃಷಿದರ್ಶನ ವಾರದ ಪುರವಣಿಗಳಲ್ಲಿ ಕೆಲಸ ಮಾಡಿದರು. ಪ್ರಜಾವಾಣಿ ಬಿಟ್ಟ ನಂತರ ಆಗ ತಾನೇ ಆರಂಭದ ಸಿದ್ಧತೆಯಲ್ಲಿ ತೊಡಗಿದ್ದ ವಿಜಯ ಕರ್ನಾಟಕ ದೈನಿಕ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಬಳಗ ಸೇರಿದರು. ಈಶ್ವರ ದೈತೋಟ ಅವರ ಸಂಪಾದಕತ್ವ. ಅಲ್ಲಿಯೂ ಇವರ ಮೆಚ್ಚಿನ ವಾರದ ವಿಶೇಷ ಸಂಚಿಕೆಗಳ ವಿಭಾಗದ ಮುಖ್ಯಸ್ಥೆಯಾಗಿ ಕೆಲಸ ಮಾಡಿದರು. ಸಾಪ್ತಾಹಿಕ ವಿಜಯ, ಮಹಿಳಾವಿಜಯ, ಸಿನಿ ವಿಜಯ ಇವರ ನೇತೃತ್ವದಲ್ಲಿ ರೂಪುಗೊಂಡು ಜನಪ್ರಿಯವಾದವು. ಮಹಿಳಾ ವಿಜಯ ಅದೆಷ್ಟು ಜನಪ್ರಿಯ ಆಯಿತೆಂದರೆ ಆದಿನ ಪತ್ರಿಕೆಯ ಪ್ರಸಾರ ಹೆಚ್ಚುತ್ತಿತ್ತು. ಅರ್ಜುನದೇವ ಅವರ ಸಂಪಾದಕತ್ವದ ಸೂರ್ಯೋದಯದ ಪತ್ರಿಕೆಯಲ್ಲಿ ಸಹ ವಿಶೇಷ ಸಂಚಿಕೆಗಳ ಮುಖ್ಯಸ್ಥೆ ಆಗಿದ್ದರು.
ಇವರು ತಮ್ಮ ಸೇವಾವಧಿಯಲ್ಲಿ ಪತ್ರಕರ್ತರ ಎಲ್ಲ ಸಂಘಟನೆಗಳಲ್ಲೂ ಸಕ್ರಿಯವಾಗಿದ್ದರು. ಕರ್ನಾಟಕ ಪತ್ರಕರ್ತರ ಸಹಕಾರ ಸಂಘದಲ್ಲಿ ಆರು ವರ್ಷಗಳು ವಿವಿಧ ಸ್ಥಾನಗಳಲ್ಲಿ ಕೆಲಸ ಮಾಡಿದ್ದರು. ಎರಡು ಅವಧಿಗೆ ಪ್ರಥಮ ಮಹಿಳಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ದಾಖಲೆ ಇವರದು. ಒಂದು ಕಾಲದಲ್ಲಿ ಪ್ರಸ್ ಕ್ಲಬ್ ಗೆ ಹೋಗಲು ಮಹಿಳೆಯರು ಹಿಂಜರಿಯುತ್ತಿದ್ದರು. ಅಧ್ಯಕ್ಷರಾಗಿದ್ದ ಐ.ಕೆ.ಜಾಗಿರ್ದಾರ್ ಅವರ ಸಲಹೆ ಮೇರೆಗೆ ಇವರು ಪದಾಧಿಕಾರಿಗಳಾಗಿ ಮಹಿಳೆಯರು ಮತ್ತು ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ನಡೆಸಿ ಜನಪ್ರಿಯಗೊಳಿಸಿದರು. ಅದು ಫ್ಯಾಮಿಲಿ ಕ್ಲಬ್ ರೂಪ ಪಡೆಯಿತು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಯೂನಿಯನ್ ಪದಾಧಿಕಾರಿಯೂ ಆಗಿದ್ದರು. ಪತ್ರಿಕಾ ಅಕಾಡೆಮಿ ಸದಸ್ಯರಾಗಿದ್ದಾಗ ಅರ್ಹ ಪತ್ರಕರ್ತೆಯರನ್ನೂ ಗುರುತಿಸಿ ಪ್ರಶಸ್ತಿ ನೀಡಬೇಕೆಂದು ಪಟ್ಟು ಹಿಡಿದು ಕಾರ್ಯಗತ ಮಾಡಿದರು. ರಾಜ್ಯ ಪತ್ರಿಕಾ ಅಕಾಡೆಮಿ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ. ಪ್ರತಿಷ್ಠಿತ ಟಿಎಸ್ಸಾರ್ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿ ಸಹ ಕೆಲಸ ಮಾಡಿದ್ದಾರೆ.
ಹಿರಿಯ ಸಾಧಕರಾದ ಸುಶೀಲ ಎಂಪಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday Susheela MP 🌷🙏🌷
ಕಾಮೆಂಟ್‌ಗಳು