ಮಾನಸಾ ಕೀಳಂಬಿ
ಮಾನಸಾ ಕೀಳಂಬಿ
ಡಾ. ಮಾನಸಾ ಕೀಳಂಬಿ ಬೋಧಕರಾಗಿ, ಬರೆಹಗಾರ್ತಿಯಾಗಿ ಮತ್ತು ಪ್ರಕಾಶಕಿಯಾಗಿ
ಸಾಧನೆ ಮಾಡುತ್ತ ಬಂದಿದ್ದಾರೆ. ಸಾಹಿತ್ಯ, ಸಂಗೀತ ಮತ್ತು ಸಂಸ್ಕೃತಿಗಳಲ್ಲಿ ಅಪಾರ ಆಸಕ್ತಿ ಉಳ್ಳ ಇವರು ಸದಾ ಸಕ್ರಿಯರು.
ಜೂನ್ 5, ಮಾನಸಾ ಅವರ ಜನ್ಮದಿನ. ಇವರು ಜನಿಸಿದ್ದು ಶಿವಮೊಗ್ಗ ಜಿಲ್ಲೆಯ ಕೀಳಂಬಿಯಲ್ಲಿ. ತಂದೆ ವಿಜಯೇಂದ್ರ ಉಪಾಧ್ಯಾಯರಾಗಿದ್ದರು. ತಾಯಿ ಉಮಾ ಅವರು ಗೃಹಿಣಿ. ಮಾನಸಾ ಅವರು ಪ್ರಾಥಮಿಕ ಶಿಕ್ಷಣವನ್ನು ತಮ್ಮ ಹಳ್ಳಿಯ ಏಕೋಪಾಧ್ಯಾಯ ಶಾಲೆಯಲ್ಲಿ ಪಡೆದರು. ಸ್ನಾತಕೋತ್ತರ ಪದವಿ ಪಡೆದ ಊರಿನ ಮೊದಲ ವ್ಯಕ್ತಿ ಎಂಬ ಶ್ರೇಯವೂ ಇವರ ಪಾಲಿಗಿದೆ. ಕುವೆಂಪು ವಿಶ್ವವಿದ್ಯಾನಿಲಯದಿಂದ ಕನ್ನಡ ಎಂ.ಎ. ಪದವಿ ಗಳಿಸಿದ ಇವರು 2004ರಲ್ಲಿ "ಕನ್ನಡ ಕಾದಂಬರಿ ಆಧಾರಿತ ಚಲನಚಿತ್ರಗಳ ಅಧ್ಯಯನ (ಪ್ರಾತಿನಿಧಿಕ)" ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಗಳಿಸಿದ್ದಾರೆ. ಈ ಮಹಾಪ್ರಬಂಧವನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ.
ಡಾ. ಮಾನಸಾ ಕೀಳಂಬಿ ಅವರು ಪದವಿ ತರಗತಿಗಳಿಗೆ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮಿಳುನಾಡು ಸರ್ಕಾರದ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಸಂವಿತ್ ಸಂಶೋಧನಾ ಸಂಸ್ಥೆಯಲ್ಲಿ ಮಕ್ಕಳ ವ್ಯಕ್ತಿತ್ವ ನಿರ್ಮಾಣಕ್ಕಾಗಿ ಕಥೆಗಳನ್ನು ರಚಿಸುವ, ಚಟುವಟಿಕೆಗಳನ್ನು ಸಂಯೋಜಿಸುವ, ಮತ್ತು ಶಿಕ್ಷಕರಿಗೆ ತರಬೇತಿ ನೀಡುವ ಜವಾಬ್ದಾರಿಯುತ ಕಾರ್ಯವನ್ನೂ ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಡಾ. ಮಾನಸಾ ಕೀಳಂಬಿ ಅವರ ಬಹುಮುಖಿ ಬರೆಹಗಳು ನಾಡಿನ ನಿಯತಕಾಲಿಕಗಳಲ್ಲಿ ಮೂಡಿಬರುತ್ತಿವೆ. ಮಾನಸಾ ಅವರು ಮೊದಲು 'ಎಂ. ಕೆ. ಇಂದಿರಾ - ಬದುಕು - ಬರಹ' ಎಂಬ ಕೃತಿ ಪ್ರಕಟಿಸಿದರು. 'ಸುಲಭವೇನೇ...?', ಇವರ ಮೊದಲ ಕವನ ಸಂಕಲನ.
ಮುಂದೆ ಮಾನಸಾ ಅವರು ತಮ್ಮದೇ ಆದ 'ಸಮದರ್ಶಿ' ಪ್ರಕಾಶನವನ್ನು ಸ್ಥಾಪಿಸಿ 'ಮರೆತು ಹೋಗುವ ಮುನ್ನ' ಕವನ ಸಂಕಲನ, 'ಶಿಶಿರ ಕಳೆದ ಮೇಲೆ' ಲೇಖನಗಳ ಸಂಗ್ರಹ ಮತ್ತು 'ಆಯುರ್ವೇದ - ಅರಿವು, ಅಭ್ಯಾಸ, ಆರೋಗ್ಯ' ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ ಶ್ರದ್ಧಾವಂತ ಬರೆಹ ಮತ್ತು ಉತ್ಸಾಹಯುತ ಪ್ರಕಟಣಾ ಯತ್ನವನ್ನು ನಾವುಗಳೆಲ್ಲ ಕೊಂಡು ಪ್ರೋತ್ಸಾಹಿಸೋಣ.
ಆತ್ಮೀಯರಾದ ಸಾಧಕಿ ಡಾ. ಮಾನಸಾ ಕೀಳಂಬಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Manasa Keelambi 🌷🌷🌷
ಕಾಮೆಂಟ್‌ಗಳು