ಪಂಡಿತ್ ತಾರಾನಾಥ್
ಪಂಡಿತ್ ತಾರಾನಾಥ್
ಮಹಾನ್ ವಿದ್ವಾಂಸರಾದ ಪಂಡಿತ್ ತಾರಾನಾಥರು ಅಧ್ಯಾಪಕರಾಗಿ, ವೈದ್ಯರಾಗಿ, ಯೋಗ ಆಯುರ್ವೇದಗಳನ್ನು ನುರಿತವರಾಗಿ, ಸಂಸ್ಥೆ ಕಟ್ಟಿದವರಾಗಿ, ಆಧ್ಯಾತ್ಮಿಕ ಧಾರ್ಮಿಕ ವ್ಯಕ್ತಿಯಾಗಿ, ಸಮಾಜ ಸುಧಾರಕರಾಗಿ ಬಹಳಷ್ಟು ಹೆಸರುಮಾಡಿದವರು. ತಮ್ಮ 51 ವರ್ಷಗಳ ಕಿರುಜೀವನದಲ್ಲಿ ಅವರು ಸಾಧಿಸಿದ್ದು ಅದ್ಭುತ ಪ್ರಮಾಣದ್ದು. ಇವರ ಪುತ್ರ ಸಂಗೀತಲೋಕದ ವಿಶ್ವಪ್ರಸಿದ್ಧ ಸರೋದ್ ವಾದಕ ರಾಜೀವ್ ತಾರಾನಾಥರು ನಮ್ಮ ನಾಡಿನ ಹೆಮ್ಮೆಯಾಗಿದ್ದಾರೆ.
ಪಂಡಿತ ತಾರಾನಾಥರು 1891ರ ಜೂನ್ 5ರಂದು ಮಂಗಳೂರಿನಲ್ಲಿ ಜನಿಸಿದರು. ಅವರು ಸಂಸ್ಕೃತ ಮತ್ತು ಶಾಸ್ತ್ರೀಯ ಸಂಗೀತಗಳಲ್ಲಿನ ಆಸಕ್ತಿಗಳನ್ನು ತಮ್ಮ ತಂದೆಯವರಿಂದಲೂ, ಧಾರ್ಮಿಕ ನೈತಿಕ ವಿಷಯಗಳಲ್ಲಿನ ಆಸಕ್ತಿಯನ್ನು ತಮ್ಮ ತಾಯಿಯವರಿಂದಲೂ ಪಡೆದರು. ಚುರುಕು ಬುದ್ಧಿಯ ಹುಡುಗನಾಗಿದ್ದ ತಾರಾನಾಥರು ಶಾಲೆಯಲ್ಲಿ ಶಿಕ್ಷಕರ ಮಾತುಗಳು ತಮಗೆ ಸರಿಯಲ್ಲ ಎಂದು ಕಂಡರೆ ಪ್ರಶ್ನಿಸುತ್ತಿದ್ದರು. ಈ ಕಾರಣಕ್ಕಾಗಿಯೇ ಅವರು ದಂಡನೆಗೊಳಗಾಗುತ್ತಿದ್ದದ್ದೂ ಉಂಟು. ಈ ಬಂಡೇಳುವ ಸ್ವಭಾವ ಅವರ ಜೀವನದುದ್ದಕ್ಕೂ ಕಂಡುಬರುತ್ತದೆ. ಹೈಸ್ಕೂಲು ಮತ್ತು ಕಾಲೇಜು ವಿದ್ಯಾಭ್ಯಾಸಕ್ಕೆ ಹೈದರಾಬಾದಿಗೆ ತೆರಳಿ, ನಂತರ ಮೆಡಿಕಲ್ ಕಾಲೇಜು ಸೇರಿದರು. ಅಲ್ಲಿಯೂ ಅವರ ಅಸಾಧಾರಣ ಪ್ರತಿಭೆಯಿಂದ ಬೆರಗಾದ ಅವರ ಅಧ್ಯಾಪಕರು ಅವರನ್ನು ಗೌರವ ಅಧ್ಯಾಪಕರಾಗಿ ತರಗತಿ ತೆಗೆದುಕೊಳ್ಳಲು ಹೇಳಿದರು. ಆದರೂ, ಅಲ್ಲಿಯೂ ಮೇಲಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯದಿಂದಾಗಿ, ಶಿಕ್ಷಣ ಪೂರೈಸಲಿಲ್ಲ. ಆದರೂ ಅವರ ಅಧ್ಯಾಪಕರು ಅವರನ್ನು ದೇಹಶಾಸ್ತ್ರದ ಸಹಾಯಕ ಅಧ್ಯಾಪಕರನ್ನಾಗಿ ನೇಮಿಸಿದರು. ಅದೇ ಕೆಲಸದಲ್ಲಿ ಅವರು ಏಳು ವರ್ಷ ಇದ್ದರು.
ಮುಂದೆ ತಾರಾನಾಥರನ್ನು ಬೀದರಿಗೆ ವರ್ಗಾವಣೆ ಮಾಡಲಾಯಿತು ಚಿಕ್ಕಂದಿನಿಂದಲೂ ತಾರಾನಾಥರಿಗೆ ಯೋಗ ಮತ್ತು ಆಯುರ್ವೇದದಲ್ಲಿ ಆಸಕ್ತಿಯಿತ್ತು. ಒಮ್ಮೆ ಬೀದರಿಗೆ ಆಗಮಿಸಿದ್ದ ನೇಪಾಳದ ಯೋಗಿ ಉತ್ತಮದಾಸ ಪರಮಹಂಸರು ಮತ್ತು ಯೋಗೀಶ್ವರಾನಂದರಿಂದ ಯೋಗ ಮತ್ತು ಆಯುರ್ವೇದದ ದೀಕ್ಷೆ ಪಡೆದರು. ಸಾಧುಗಳು, ವೈದ್ಯರುಗಳ ಒಡನಾಟದಲ್ಲಿ ಮಾಹಿತಿ ಸಂಗ್ರಹಣೆ ನಡೆಸಿದರು. ಧ್ಯಾನ ಮತ್ತು ಆಧ್ಯಾತ್ಮದ ಆಳದ ಜೀವನವನ್ನು ಮುಂದುವರಿಸಿದರು. ಆಗಲೇ ಅವರು ಆಧ್ಯಾತ್ಮಿಕ ರಹಸ್ಯ ಅನುಭವಗಳನ್ನು ಪಡೆಯತೊಡಗಿ, ಕೆಲವು ವಿಶೇಷ ಶಕ್ತಿಗಳನ್ನೂ ಪಡೆದುಕೊಂಡಿದ್ದರು ಎಂದು ಹೇಳಲಾಗಿದೆ. ದೈಹಿಕ ಕಾಹಿಲೆಗಳಿಗೆ ಭೌತಿಕದ ಬದಲು ಮಾನಸಿಕ ಚಿಕಿತ್ಸೆ ಹೆಚ್ಚು ಪ್ರಯೋಜನಕಾರಿ ಎಂದು ನಂಬಿದ್ದ ಅವರೆಡೆ ಪರಿಹಾರಕ್ಕಾಗಿ ಅನೇಕರು ಬರುತ್ತಿದ್ದರು.
ಧಾರ್ಮಿಕ ಗಡಿಗಳಿಗೆ ಅತೀತರಾಗಿದ್ದ ತಾರಾನಾಥರನ್ನು ಹಿಂದೂ, ಮುಸ್ಲಿಮ್ ಮತ್ತು ಕ್ರೈಸ್ತರೆಲ್ಲರೂ ತಮ್ಮವರೆಂದುಕೊಂಡಿದ್ದರು. ಆದರೂ ಕರ್ಮಠರು ಅವರ ಮೇಲೆ ಸಿಟ್ಟಾಗಿ ಕೊಲ್ಲುವ ಹೊಂಚೂ ಹಾಕಿದರು. ಆದರೆ ಕೊಲೆ ಮಾಡಬಂದವರು ಅವರ ವ್ಯಕ್ತಿತ್ವದಿಂದ ಪ್ರಭಾವಿತರಾಗಿ, ಕಾಲಿಗೆ ಬಿದ್ದು ಕ್ಷಮಾಪಣೆ ಬೇಡಿದರು.
ಮುಂದೆ ಸರ್ಕಾರಿ ಸೇವೆಗೆ ರಾಜಿನಾಮೆಯಿತ್ತ ತಾರಾನಾಥರು ರಾಯಚೂರಿನಲ್ಲಿ ’ಮದರಸಾ ಹಿ ಹಮ್ದರ್ದ್’ ಎಂಬ ಶಾಲೆಯನ್ನು ಪ್ರಾರಂಭಿಸಿದರು. ಬರಿಯ ಬುದ್ಧಿಯನ್ನಷ್ಟೇ ಬೆಳೆಸಿದರೆ ಸಾಲದು, ವಿದ್ಯಾರ್ಥಿಗಳಲ್ಲಿ ನೈತಿಕ ಅರಿವು ಮತ್ತು ಸದ್ಗುಣಗಳನ್ನು ಬೆಳೆಸಬೇಕು ಎಂಬುದು ಅವರ ಉದ್ದೇಶವಾಗಿತ್ತು. ಸ್ವತಃ ಸಂಗೀತಜ್ಞಾನಿಯಾಗಿದ್ದ ಅವರು, ಗಣಿತವನ್ನು ಸಂಗೀತದ ಮೂಲಕ ಕಲಿಸುವುದೇ ಮೊದಲಾದ ಅನೇಕ ಶೈಕ್ಷಣಿಕ ಪ್ರಯೋಗಗಳನ್ನು ಮಾಡಿದರು.
ಪಂಡಿತ್ ತಾರಾನಾಥರು, ಆಗ ಹೈದರಾಬಾದ್ ಸಂಸ್ಥಾನದ ಭಾಗವಾಗಿದ್ದ ರಾಯಚೂರಿನಲ್ಲಿದ್ದಾಗಲೇ, ಹೈದರಾಬಾದ್ ನಿಜಾಮರ ನಿರಂಕುಶ ಆಡಳಿತವನ್ನು ಹಾಗೂ ನಜರಾನಾ ತೆರಿಗೆಯನ್ನು ಪ್ರತಿಭಟಿಸಿ ’ಹಿಂದೂ’ ಪತ್ರಿಕೆಯಲ್ಲಿ ಲೇಖನಗಳನ್ನು ಬರೆದರು. ಇದರಿಂದಾಗಿ ತಾರಾನಾಥರ ಮೇಲೆ ರಾಜದ್ರೋಹದ ಆರೋಪ ಬಂದು, ಅವರನ್ನು ಬಂಧಿಸಿ ಗಡೀಪಾರು ಮಾಡುವ ವಾರಂಟ್ ಹೊರಬಿತ್ತು. ಈ ವಿಷಯ ತಿಳಿದ ಮಿತ್ರರು ತಾರಾನಾಥರನ್ನು ಊರು ಬಿಟ್ಟು ಹೋಗಲು ಒತ್ತಾಯಿಸಿದರು. ಮೊದಮೊದಲು ನಿರಾಕರಿಸಿದ ತಾರಾನಾಥರು, ತಾವಿಲ್ಲೇ ಇದ್ದರೆ ತಮ್ಮ ಶಾಲೆಯೂ ಸರಕಾರದ ಕೆಂಗಣ್ಣಿಗೆ ಗುರಿಯಾಗಬಹುದೆಂದು ತಿಳಿದು, ಊರು ಬಿಡಲು ಒಪ್ಪಿದರು.
ಅಂತೆಯೇ ಮಧ್ಯರಾತ್ರಿಯಲ್ಲಿ ತುಂಗಭದ್ರಾ ನದಿಯನ್ನು ದಾಟಿ ಬ್ರಿಟಿಷ್ ಸರಕಾರದ ಗಡಿಯನ್ನು ಪ್ರವೇಶಿಸಿದರು. ಆಲ್ಲಿ ’ಪ್ರೇಮಾಯತನ’ ಎಂಬ ಆಶ್ರಮವನ್ನು ಸ್ಥಾಪಿಸಿ , ಆರೋಗ್ಯೋಪಚಾರದ ಆಯುರ್ವೇದದ ಸಿದ್ಧಾಂತ ಮತ್ತು ಆಚರಣೆಗಳನ್ನು ಪ್ರಚಾರಮಾಡತೊಡಗಿದರು. ಇದು ಬಹಳ ಜನಪ್ರಿಯವಾಯಿತು.
ಹೈದರಾಬಾದ್ ಸಂಸ್ಥಾನದಿಂದ ಹೊರಬಿದ್ದಮೇಲೆ ತಾರಾನಾಥರು ರಾಜಕೀಯದಲ್ಲಿ ಪ್ರತ್ಯಕ್ಷವಾಗಿ ಪಾಲ್ಗೊಳ್ಳದಿದ್ದರೂ, ಅವರಲ್ಲಿ ಅದರ ಕುರಿತು ಆಸ್ಥೆ ಮತ್ತು ಚಿಂತನೆ ನಡೆದೇ ಇತ್ತು. 1933ರಲ್ಲಿ ಬ್ರಿಟಿಷ್ ಸರ್ಕಾರ ಆವರ ಆಶ್ರಮದಲ್ಲಿ ಪಿತೂರಿ ನಡೆಯುತ್ತಿದೆ ಎಂದು ಸಂಶಯಿಸಿ, ಅದರ ಮೇಲೆ ಧಾಳಿ ನಡೆಸಿತು. ಆದರೆ ಯಾವೂದೇ ದೋಷಾರೋಪಣೆಯ ವಸ್ತುವೂ ಸಿಗಲಿಲ್ಲ.
1927ರಲ್ಲಿ ಗಾಂಧೀಜಿಯವರು ಆರೋಗ್ಯ ಸುಧಾರಣೆಗೆಂದು ನಂದಿ ಬೆಟ್ಟಕ್ಕೆ ಬಂದಾಗ ತಾರಾನಾಥರು ಶುಶ್ರೂಷಕರಾಗಿ ದುಡಿದರು. ಡಾ. ರಾಧಾಕೃಷ್ಣನ್ ಅವರ ಸಲಹೆಯಂತೆ ‘ದೀನಬಂಧು’ ನಾಟಕವನ್ನು ಹಿಂದಿಯಲ್ಲಿ ಬರೆದು ಆಡಿ, ಬಂದ ಹಣವನ್ನು ಗಾಂಧೀಜಿಗೆ ಅರ್ಪಿಸಿದರು. ಗಾಂಧೀಜಿ ನಾಟಕ ನೋಡಿ ಮೆಚ್ಚಿ ಮುನ್ನುಡಿ ಬರೆದುಕೊಟ್ಟರು. ಸ್ವತಃ ತಾರಾನಾಥರೇ ಕಬೀರನ ಪಾತ್ರ ಮಾಡಿ ತಾವು ಉತ್ತಮ ನಟನೆಂದು ನಿರೂಪಿಸಿದರು. ಮೋಹನಾಸ್ತ್ರ, ಇನ್‌ಸಾಫ್ ಇವರ ಇತರ ಪ್ರಸಿದ್ಧ ನಾಟಕಗಳು.
ತಾರಾನಾಥರು ರಾಯಚೂರಿನಲ್ಲಿ ನಡೆದ (1937) ಅಖಿಲ ಭಾರತ ಆಯುರ್ವೇದ ಮತ್ತು ಯುನಾನಿ ಅನುವಂಶಿಕ ವೈದ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
40ನೆಯ ವಯಸ್ಸಿನವರೆಗೂ ಬ್ರಹ್ಮಚಾರಿಯಾಗಿದ್ದ ತಾರಾನಾಥರು, ಮದರಾಸಿನಿಂದ ರೋಗಿಯಾಗಿ ಬಂದಿದ್ದ ಸುಮತಿಬಾಯಿ ಎಂಬುವವರನ್ನು ಗುಣಪಡಿಸಿ, ಮುಂದೆ ಅವರನ್ನು ಮದುವೆಯಾದರು. ಮದುವೆಯ ನಂತರ ಅವರು ತಮ್ಮ ಹೆಚ್ಚಿನ ಸಮಯವನ್ನು ಬೆಂಗಳೂರಿನಲ್ಲಿ ಕಳೆಯತೊಡಗಿದರು.
ತಾರಾನಾಥರು ತಮ್ಮ 51ನೆಯ ವರ್ಷದಲ್ಲಿ, 1942 ಅಕ್ಟೋಬರ್ 30ರಂದು ತಾರಾನಾಥರು ವಿಧಿವಶರಾದರು. ಅಂದಿನ ದಿನಗಳಲ್ಲೇ ಶಿಕ್ಷಣಕ್ಕೆ ಮಹತ್ವದ ಪ್ರೇರಣೆ ಒದಗಿಸಿದ ಪಂಡಿತ್ ತಾರಾನಾಥರ ನೆನಪಿನಲ್ಲಿ ರಾಯಚೂರಿನಲ್ಲಿರುವ ಪಂಡಿತ್ ತಾರಾನಾಥ ಶಿಕ್ಷಣ ಸಮಿತಿ ಮಹತ್ವದ ಶಿಕ್ಷಣ ಕಾಯಕವನ್ನು ನಡೆಸುತ್ತಿದೆ. ಇದರಡಿಯಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿರುವುದಲ್ಲದೆ, ಪಂಡಿತ್ ತಾರಾನಾಥರ ಕುರಿತಾದ ವಸ್ತು ಸಂಗ್ರಹಾಲಯ, ಸ್ಮಾರಕ ಭವನ, ಗ್ರಂಥಾಲಯ, ತಾರಾನಾಥರ ಕುರಿತಾದ ಸಂಶೋಧನಾ ಅಧ್ಯಯನಪೂರಕ ಸಾಮಗ್ರಿಗಳು ಮತ್ತು ವ್ಯವಸ್ಥೆಗಳನ್ನು ಹೊಂದಿದೆ.
ಪಂಡಿತ್ ತಾರಾನಾಥರ ಹೆಸರಿನಲ್ಲಿ ಅವರ ಪುತ್ರರಾದ ಪಂಡಿತ್ ರಾಜೀವ ತಾರಾನಾಥರ ನೇತೃತ್ವದಲ್ಲಿನ ದತ್ತಿ ಸಂಸ್ಥೆಯು ‘ಇಂಪು’ ಎಂಬ ಹೆಸರಿನ ಪಂಡಿತ್ ತಾರಾನಾಥ ಸ್ಮರಣ ಸಂಗೀತ ಕಾರ್ಯಕ್ರಮಗಳನ್ನು ಆಗಿಂದಾಗ್ಗೆ ನಾಡಿನೆಲ್ಲೆಡೆ ಏರ್ಪಡಿಸುತ್ತಿದೆ.
On the birth anniversary of great scholar Pandit Taranath
ಕಾಮೆಂಟ್‌ಗಳು