ಆದಿಪರ್ವ1
ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ1
ಆದಿಪರ್ವ
ಪೀಠಿಕಾ ಸಂಧಿ
ಶ್ರೀವನಿತೆಯರಸನೆವಿಮಲರಾ
ಜೀವ ಪೀಠನ ಪಿತನೆ ಜಗಕತಿ
ಪಾವನನೆ ಸನಕಾದಿ ಸಜ್ಜನನಿಕರ ದಾತಾರ
ರಾವಣಾಸುರ ಮಥನ ಶ್ರವಣ
ಸುಧಾ ವಿನೂತನ ಕಥನ ಕಾರಣ
ಕಾವುದಾನತ ಜನವ ಗದುಗಿನ ವೀರನಾರಯಣ
ಶರಣಸಂಗವ್ಯಸನ ಭುಜಗಾ
ಭರಣನಮರ ಕಿರೀಟ ಮಂಡಿತ
ಚರಣ ಚಾರುಚರಿತ್ರ ನಿರುಪಮ ಭಾಳಶಿಖಿನೇತ್ರ
ಕರಣ ನಿರ್ಮಲ ಭಜಕರಘ ಸಂ
ಹರಣ ದಂತಿ ಚಮೂರು ಚರ್ಮಾಂ
ಬರನೆ ಸಲಹುಗೆ ಭಕುತ ಜನರನು ಪಾರ್ವತೀರಮಣ
ವರ ಮಣಿಗಳಿಂದೆಸೆವ ಮೌಳಿಯ
ಸರಸಿಜಾರಿಯ ಕಿರಣದೋಳಿಯ
ವಿರಚಿಸಿದ ಸಿಂಧೂರಭಾಳದಿ ಕುಣಿವ ಕುಂತಳದ
ಕರಿ ನಿಭಾಕೃತಿಯೆನಿಪ ವದನದ
ಕರದ ಪಾಶದ ಮೋದಕದ ವಿ
ಸ್ತರದ ಗಣಪತಿ ಮಾಡೆಮಗೆ ನಿರ್ವಿಘ್ನದಾಯಕವ
ಗಜಮುಖನೆ ಮೆರೆವೇಕದಂತನೆ
ನಿಜಗುಣಾನ್ವಿತ ಪರಶುಧಾರನೆ
ರಜತಗಿರಿಗೊಡೆಯನ ಕುಮಾರನೆ ವಿದ್ಯೆವಾರಿಧಿಯೆ
ಅಜನು ಹರಿರುದ್ರಾದಿಗಳು ನೆರೆ
ಭಜಿಸುತಿಹರನವರತ ನಿನ್ನನು
ತ್ರಿಜಗವಂದಿತ ಗಣಪ ಮಾಳ್ಪುದು ಮತಿಗೆ ಮಂಗಳವ
ವಾರಿಜಾಸನೆ ಸಕಲಶಾಸ್ತ್ರ ವಿ
ಚಾರದುದ್ಭವೆ ವಚನರಚನೋ
ದ್ಧಾರೆ ಶ್ರುತಿ ಪೌರಾಣದಾಗಮ ಸಿದ್ಧಿದಾಯಕಿಯೆ
ಶೌರಿ ಸುರಪತಿ ಸಕಲಮುನಿಜನ
ಸೂರಿಗಳಿಗನುಪಮದ ಯುಕುತಿಯೆ
ಶಾರದೆಯೆ ನರ್ತಿಸುಗೆ ನಲಿದೊಲಿದೆನ್ನ ಜಿಹ್ವೆಯಲಿ
ಆದಿ ನಾರಾಯಣಿ ಪರಾಯಣಿ
ನಾದಮಯೆ ಗಜಲಕ್ಷ್ಮಿ ಸತ್ವಗು
ಣಾಧಿ ದೇವತೆ ಅಮರ ವಂದಿತ ಪಾದಪಂಕರುಹೆ
ವೇದಮಾತೆಯೆ ವಿಶ್ವತೋಮುಖೆ
ಯೈದು ಭೂತಾಧಾರಿಯೆನಿಪೀ
ದ್ವಾದಶಾತ್ಮ ಜ್ಯೋತಿರೂಪಿಯೆ ನಾದೆ ಶಾರದೆಯೆ
ವೀರ ನಾರಾಯಣನೆ ಕವಿ ಲಿಪಿಕಾರ ಕುವರವ್ಯಾಸ ಕೇಳುವ
ಸೂರಿಗಳು ಸನಕಾದಿಗಳು ಜಂಗಮ ಜನಾರ್ದನರು
ಚಾರುಕವಿತೆಯ ಬಳಕೆಯಲ್ಲ ವಿ
ಚಾರಿಸುವಡಳವಲ್ಲ ಚಿತ್ತವ
ಧಾರು ಹೋ ಸರ್ವಜ್ಞರಾದರು ಸಲುಗೆ ಬಿನ್ನಪವ
ಶ್ರೀಮದಮರಾಧೀಶ ನತಪದ
ತಾಮರಸ ಘನವಿಪುಳ ನಿರ್ಮಲ
ರಾಮನನುಪಮ ಮಹಿಮ ಸನ್ಮುನಿ ವಿನುತ ಜಗಭರಿತ
ಶ್ರೀಮದೂರ್ಜಿತಧಾಮ ಸುದಯಾ
ನಾಮನಾಹವ ಭೀಮ ರಘುಕುಲ
ರಾಮ ರಕ್ಷಿಸುವೊಲಿದು ಗದುಗಿನ ವೀರನಾರಯಣ
ಶರಧಿಸುತೆ ಸನಕಾದಿ ವಂದಿತೆ
ಸುರನರೋರಗ ಮಾತೆ ಸುಜನರ
ಪೊರೆವ ದಾತೆ ಸುರಾಗ್ರಗಣ್ಯ ಸುಮೌನಿ ವರಸ್ತುತ್ಯೆ
ಪರಮ ಕರುಣಾ ಸಿಂಧು ಪಾವನ
ಚರಿತೆ ಪದ್ಮಜ ಮುಖ್ಯ ಸಕಲಾ
ಮರ ಸುಪೂಜಿತೆ ಲಕ್ಷ್ಮಿ ಕೊಡುಗೆಮಗಧಿಕ ಸಂಪದವ
ಗಜಮುಖನ ವರಮಾತೆ ಗೌರಿಯೆ
ತ್ರಿಜಗದರ್ಚಿತ ಚಾರು ಚರಣಾಂ
ಬುಜೆಯೆ ಪಾವನಮೂರ್ತಿ ಪದ್ಮಜ ಮುಖ್ಯ ಸುರಪೂಜ್ಯೆ
ಭಜಕರಘ ಸಂಹರಣೆ ಸುಜನ
ವ್ರಜ ಸುಸೇವಿತೆ ಮಹಿಷಮರ್ದಿನಿ
ಭುಜಗ ಭೂಷಣನರಸಿ ಕೊಡು ಕಾರುಣ್ಯದಲಿ ಮತಿಯ
ದುರಿತಕುಲಗಿರಿ ವಜ್ರದಂಡನು
ಧರೆಯ ಜಂಗಮಮೂರ್ತಿ ಕವಿ ವಾ
ರಿರುಹ ದಿನಮಣಿ ನಿಖಿಲ ಯತಿಪತಿ ದಿವಿಜ ವಂದಿತನು
ತರಳನನು ತನ್ನವನೆನುತ ಪತಿ
ಕರಿಸಿ ಮಗನೆಂದೊಲಿದು ಕರುಣದಿ
ವರವನಿತ್ತನು ದೇವ ವೇದವ್ಯಾಸ ಗುರುರಾಯ
ವಂದಿತಾಮಳ ಚರಿತನಮರಾ
ನಂದಯದುಕುಲ ಚಕ್ರವರ್ತಿಯ
ಕಂದ ನತಸಂಸಾರ ಕಾನನ ಘನ ದವಾನಳನು
ನಂದನಂದನ ಸನ್ನಿಭನು ಸಾ
ನಂದದಿಂದಲೆ ನಮ್ಮುವನುಕೃಪೆ
ಯಿಂದ ಸಲಹುಗೆ ದೇವ ಜಗದಾರಾಧ್ಯ ಗುರುರಾಯ
ತಿಳಿಯ ಹೇಳುವೆ ಕೃಷ್ಣ ಕಥೆಯನು
ಇಳೆಯ ಜಾಣರು ಮೆಚ್ಚುವಂತಿರೆ
ನೆಲೆಗೆ ಪಂಚಮ ಶ್ರುತಿಯನೊರೆವೆನು ಕೃಷ್ಣ ಮೆಚ್ಚಲಿಕೆ
ಹಲವು ಜನ್ಮದ ಪಾಪ ರಾಶಿಯ
ತೊಳೆವ ಜಲವಿದು ಶ್ರೀಮದಾಗಮ
ಕುಲಕೆ ನಾಯಕ ಭಾರತಾಕೃತಿ ಪಂಚಮ ಶ್ರುತಿಯ
ಪದದ ಪ್ರೌಢಿಯ ನವರಸಂಗಳ
ವುದಿತವೆನುವಭಿಧಾನ ಭಾವವ
ಬೆದಕಲಾಗದು ಬಲ್ಲ ಪ್ರೌಢರಮಿ ಕಥಾಂತರಕೆ
ಇದ ವಿಚಾರಿಸೆ ಬಱಿಯ ತೊಳಸಿಯ
ವುದಕದಂತಿರೆಯಿಲ್ಲಿ ನೋಳ್ಪುದು
ಪದುಮನಾಭನ ಮಹಿಮೆ ಧರ್ಮವಿಚಾರ ಮಾತ್ರವನು
ಹಲಗೆ ಬಳಪವ ಪಿಡಿಯದೊಂದ
ಗ್ಗಳಿಕೆ ಪದವಿಟ್ಟಳುಪದೊಂದ
ಗ್ಗಳಿಕೆ ಪರರೊಡ್ಡವದ ರೀತಿಯ ಕೊಳ್ಳದಗ್ಗಳಿಕೆ
ಬಳಸಿ ಬರೆಯಲು ಕಂಠಪತ್ರದ
ವುಲುಹುಗೆಡದಗ್ಗಳಿಕೆಯೆಂಬೀ
ಬಲುಹು ಗದುಗಿನ ವೀರನಾರಾಯಣನ ಕಿಂಕರಗೆ
ಕೃತಿಯನವಧರಿಸುವುದು ಸುಕವಿಯ
ಮತಿಗೆ ಮಂಗಳವೀವುದಧಿಕರು
ಮಥಿಸುವುದು ತಿದ್ದುವುದು ಮೆರೆವುದು ಲೇಸ ಸಂಚಿಪುದು
ನುತಗುಣರು ಭಾವುಕರು ವರಪಂ
ಡಿತರು ಸುಜನರು ಸೂಕ್ತಿಕಾರರು
ಮತಿಯನೀವುದು ವೀರನಾರಾಯಣನ ಕಿಂಕರಗೆ
ತಿಣಿಕಿದನು ಫಣಿರಾಯ ರಾಮಾ
ಯಣದ ಕವಿಗಳ ಭಾರದಲಿ ತಿಂ
ತಿಣಿಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ
ಬಣಗು ಕವಿಗಳ ಲೆಕ್ಕಿಪನೆ ಸಾ
ಕೆಣಿಸದಿರು ಶುಕರೂಪನಲ್ಲವೆ
ಕುಣಿಸಿ ನಗನೇ ಕವಿ ಕುಮಾರವ್ಯಾಸನುಳಿದವರ
ಹರಿಯ ಬಸುರೊಳಗಖಿಳ ಲೋಕದ
ವಿರಡವಡಗಿಹವೋಲು ಭಾರತ
ಶರಧಿಯೊಳಗಡಗಿಹವನೇಕ ಪುರಾಣ ಶಾಸ್ತ್ರಗಳು
ಪರಮ ಭಕ್ತಿಯಲೀ ಕೃತಿಯನವ
ಧರಿಸಿ ಕೇಳ್ದಾ ನರರ ದುರಿತಾಂ
ಕುರದ ಬೇರಿನ ಬೇಗೆಯೆಂದರುಹಿದನು ಮುನಿನಾಥ
ಅರಸುಗಳಿಗಿದು ವೀರ ದ್ವಿಜರಿಗೆ
ಪರಮವೇದದ ಸಾರ ಯೋಗೀ
ಶ್ವರರ ತತ್ವವಿಚಾರ ಮಂತ್ರಿಜನಕ್ಕೆ ಬುದ್ಧಿಗುಣ
ವಿರಹಿಗಳ ಶೃಂಗಾರ ವಿದ್ಯಾ
ಪರಿಣತರಲಂಕಾರ ಕಾವ್ಯಕೆ
ಗುರುವೆನಲು ರಚಿಸಿದ ಕುಮಾರವ್ಯಾಸ ಭಾರತವ
ವೇದ ಪಾರಾಯಣದ ಫಲ ಗಂ
ಗಾದಿ ತೀರ್ಥಸ್ನಾನ ಫಲ ಕೃ
ಚ್ಛ್ರಾದಿ ತಪಸಿನ ಫಲವು ಜ್ಯೋತಿಷ್ಟೋಮಯಾಗಫಲ
ಮೇದಿನಿಯನೊಲಿದಿತ್ತ ಫಲ ವ
ಸ್ತ್ರಾದಿ ಕನ್ಯಾದಾನ ಫಲವಹು
ದಾದರಿಸಿ ಭಾರತದೊಳೊಂದಕ್ಷರವ ಕೇಳ್ದರಿಗೆ
ಹೇಮ ಖುರ ಶೃಂಗಾಭರಣದಲಿ
ಕಾಮಧೇನು ಸಹಸ್ರ ಕಪಿಲೆಯ
ಸೋಮ ಸೂರ್ಯ ಗ್ರಹಣದಲಿ ಸುರನದಿಯ ತೀರದಲಿ
ಶ್ರೀಮುಕುಂದಾರ್ಪಣವೆನಿಸಿ ಶತ
ಭೂಮಿದೇವರಿಗಿತ್ತ ಫಲವಹು
ದೀ ಮಹಾಭಾರತದೊಳೊಂದಕ್ಷರವ ಕೇಳ್ದರಿಗೆ
ಚೋರ ನಿಂದಿಸಿ ಶಶಿಯ ಬೈದಡೆ
ಕ್ಷೀರವನು ಕ್ಷಯರೋಗಿ ಹಳಿದರೆ
ವಾರಣಾಸಿಯ ಹೆಳವ ನಿಂದಿಸಿ ನಕ್ಕರೇನಹುದು
ಭಾರತದ ಕಥನ ಪ್ರಸಂಗವ
ಕ್ರೂರ ಕರ್ಮಿಗಳೆತ್ತ ಬಲ್ಲರು
ಘೋರ ರೌರವವನ್ನು ಕೆಡಿಸುಗು ಕೇಳ್ದ ಸಜ್ಜನರ
ವೇದಪುರುಷನ ಸುತನ ಸುತನ ಸ
ಹೋದರನ ಹೆಮ್ಮಗನ ಮಗನ ತ
ಳೋದರಿಯ ಮಾತುಳನ ರೂಪನನತುಳ ಭುಜಬಲದಿ
ಕಾದಿ ಗೆಲಿದನನಣ್ಣನವ್ವೆಯ
ನಾದಿನಿಯ ಜಠರದಲಿ ಜನಿಸಿದ
ನಾದಿ ಮೂರುತಿ ಸಲಹೊ ಗದುಗಿನ ವೀರನಾರಯಣ
ಸಂಕ್ಷಿಪ್ತಭಾವ:
Lrphks Kolar
"ಶ್ರೀವನಿತೆಯರಸನೆ, ವಿಮಲ ರಾ
ಜೀವಪೀಠನ ಪಿತನೆ, ಜಗಕತಿ
ಪಾವನನೆ, ಸನಕಾದಿಸಜ್ಜನನಿಕರ ದಾತಾರ
ರಾವಣಾಸುರಮಥನ, ಶ್ರವಣ ಸು
ಧಾವಿನೂತನ ಕಥನ ಕಾರಣ,
ಕಾವುದಾನತ ಜನವ ಗದುಗಿನ ವೀರನಾರಾಯಣ”
ಈ ಪ್ರಾರ್ಥನೆಯೊಂದಿಗೆ ಕುಮಾರವ್ಯಾಸನು ತನ್ನ ಭಾರತವನ್ನು ಪ್ರಾರಂಭಿಸಿದ್ದಾನೆ. ಅನಂತರ ಶಿವ, ಗಣಪತಿ, ಸರಸ್ವತಿ, ಶಕ್ತಿ ಸ್ತುತಿ ಮಾಡಿ, ತನ್ನ ಕಾವ್ಯದ ರೀತಿ ಮತ್ತು ಮಹತ್ವವನ್ನು ವರ್ಣಿಸಿದ್ದಾನೆ. “ಹಲವು ಜನ್ಮದ ಪಾಪರಾಶಿಯನ್ನು ತೊಳೆವ ಜಲದಂತೆ ಇದ್ದ, ಪಂಚಮ ಶ್ರುತಿಗೆ ಸಮಾನವಾಗಿದ್ದ ಮಹಾಭಾರತದೊಳಗಿನ ಶ್ರೀ ಕೃಷ್ಣ ಕಥೆಯನ್ನು ಜಾಣರು ಮೆಚ್ಚುವಂತೆ ಹೇಳುತ್ತೇನೆ” ಎಂದಿದ್ದಾನೆ ಕವಿ.
ತಾನು ಈ ಕೃತಿಯನ್ನು ರಚಿಸುವಾಗ ಎಲ್ಲಿಯೂ ಅಳಿಸದೆ, ಚಿತ್ತು ಮಾಡದೆ, ಕಂಠಪತ್ರದ ಮುಳ್ಳು ಮುರಿಯದೆ ಬರೆದಿರುವುದಾಗಿ ಹೇಳಿದ್ದಾನೆ. ಇದುವರೆಗೆ ಎಷ್ಟೋ ರಾಮಾಯಣಗಳು ಬಂದಿದ್ದು ತಾನು ಭಾರತವನ್ನು ಆರಿಸಿಕೊಂಡೆನೆನ್ನುತ್ತಾ ಇದರಲ್ಲಿ ಎಲ್ಲ ರೀತಿಯ ರಸಗಳೂ ತುಂಬಿವೆಯೆನ್ನುತ್ತಾನೆ. ವೀರ, ತತ್ತ್ವವಿಚಾರ, ಶೃಂಗಾರ, ಅಲಂಕಾರ ಮುಂತಾದ ವಿಷಯಗಳಿವೆ ಇದರಲ್ಲಿ. ಕಾವ್ಯಕ್ಕೇ ಗುರುವಾಗಿದೆ ಈ ಕೃತಿ. ಇದರಲ್ಲಿನ ಒಂದು ಅಕ್ಷರವನ್ನಾದರೂ ಆದರಿಸಿ ಕೇಳಿದವರಿಗೆ ವೇದಪಾರಾಯಣದ ಫಲ, ಗಂಗಾದಿ ತೀರ್ಥಸ್ನಾನಗಳ ಫಲ, ಭೂದಾನ, ಕನ್ಯಾದಾನ ಮುಂತಾದ ಫಲಗಳು ದೊರೆಯುತ್ತವೆಂದು ಹೇಳುತ್ತಾ ಇದರ ಮಹತ್ವವನ್ನು ಕ್ರೂರಕರ್ಮಿಗಳು ಏನು ಬಲ್ಲರು? ಎನ್ನುತ್ತಾನೆ. ಕೊನೆಯದಾಗಿ ಕರುಣಾಳು ನಾರಾಯಣನ ಕೃಪೆಯಿಂದ ಈ ಕೃತಿಯನ್ನು ರಚಿಸುವೆನೆಂದೂ, ತನ್ನನ್ನು ಸಲಹಬೇಕೆಂದೂ ಬೇಡಿಕೊಳ್ಳುತ್ತಾನೆ.
ನಾಳೆ ಮುಂದುವರೆಯುವುದು
(ನಮ್ಮ ಕನ್ನಡ ಸಂಪದ Kannada Sampada
ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.com ನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ. ನಮಸ್ಕಾರ)
ಕುಮಾರ ವ್ಯಾಸ ಭಾರತ ವನ್ನು ಪ್ರಸ್ತುತ ಪಡಿಸಿದುದಕ್ಕೆ ಧನ್ಯವಾದಗಳು
ಪ್ರತ್ಯುತ್ತರಅಳಿಸಿ