ಜಿ. ಎಸ್. ಕುಮಾರ್
ಜಿ. ಎಸ್. ಕುಮಾರ್
ಜಿ. ಎಸ್. ಕುಮಾರ್ ಇಂಗ್ಲಿಷ್ ಪತ್ರಿಕೋದ್ಯಮದಲ್ಲಿ ಕನ್ನಡ ನಾಡಿನ ಬೆಳಕಿನ ಕಿಂಡಿಯಾಗಿ ಪ್ರಸಿದ್ಧರಾದವರು.
ಏಪ್ರಿಲ್ 18, ಜಿ. ಎಸ್. ಕುಮಾರ್ ಅವರ ಜನ್ಮದಿನ. ಅವರು ಮೈಸೂರಿನವರು. ತಂದೆ ಜಿ. ಎಸ್. ಸುಬ್ರಹ್ಮಣ್ಯಂ ಮೈಸೂರಿನ ಶ್ರೀ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಇಂಗ್ಲಿಷ್ ಬೋಧಿಸಿದವರು. ಸ್ವಾತಂತ್ರ್ಯ ಹೋರಾಟದಲ್ಲೂ ಸಕ್ರಿಯರಾಗಿದ್ದ ಅವರು ಮಹಾಜನ ವಿದ್ಯಾಸಂಸ್ಥೆಗೆ ನಾಲ್ಕು ದಶಗಳಿಗೂ ಹೆಚ್ಚು ಕಾಲ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು. ತಾಯಿ ಸುಬ್ಬಲಕ್ಷಮ್ಮ. ಕುಮಾರ್ ಅವರು ಮಹಾಜನ ಸಂಸ್ಥೆಯಲ್ಲಿ ಓದಿದ ನಂತರ ಮಹಾರಾಜಾ ಕಾಲೇಜಿನಲ್ಲಿ ಉನ್ನತ ಸಾಧನೆಯಲ್ಲಿ ಬಿ. ಎ. ಮತ್ತು ಪ್ರಥಮ ರ್‍ಯಾಂಕ್ ಸಾಧನೆಯೊಂದಿಗೆ ಮಾನಸ ಗಂಗೋತ್ರಿಯಲ್ಲಿ ಪತ್ರಿಕೋದ್ಯಮದಲ್ಲಿ ಎo. ಎ. ಪದವಿ ಪಡೆದರು.
ಕುಮಾರ್ ಅವರು ಟೈಮ್ಸ್ ಆಫ್ ಡೆಕ್ಕನ್ ಮತ್ತು ಮುಂಜಾನೆ ಪತ್ರಿಕೆಗಳಲ್ಲಿ ತಮ್ಮ ಪತ್ರಿಕೋದ್ಯಮ ವೃತ್ತಿಯನ್ನು ಪ್ರಾರಂಭಿಸಿದರು. ಮುಂದೆ
1986ರಲ್ಲಿ ಟೈಮ್ಸ್ ಆಫ್ ಇಂಡಿಯಾ ಸೇರಿದ ಅವರು ಅಲ್ಲಿ 29 ವರ್ಷಗಳ ಸೇವೆಯ ನಂತರ 2015ರಲ್ಲಿ ನಿವೃತ್ತರಾದರು. ಕುಮಾರ್ ಅವರು ತಮ್ಮ ಪತ್ರಿಕೋದ್ಯಮ ವೃತ್ತಿಯಲ್ಲಿ ಸಾಹಿತಿಗಳಾದ ಗೋಪಾಲಕೃಷ್ಣ ಅಡಿಗ, ಕೆ. ಎಸ್. ನರಸಿಂಹಸ್ವಾಮಿ, ಎ. ಎನ್. ಮೂರ್ತಿ ರಾವ್, ಪು.ತಿ. ನರಸಿಂಹಾಚಾರ್, ಎಲ್. ಎಸ್. ಶೇಷಗಿರಿರಾವ್, ಎಂ. ವಿ. ಸೀತಾರಾಮಯ್ಯ, ಗೊ. ರು. ಚನ್ನಬಸಪ್ಪ, ಜಿ. ಎಸ್. ಶಿವರುದ್ರಪ್ಪ, ಪಿ. ಎಸ್. ರಾಮಾನುಜಂ, ಕಂಬಾರ, ಸಿದ್ದಲಿಂಗಯ್ಯ, ಚದುರಂಗ, ಅನಂತಮೂರ್ತಿ, ಸುಮತೀಂದ್ರ ನಾಡಿಗ, ನಿಸಾರ್ ಅಹಮದ್, ಜಿ. ಎಸ್. ಸಿದ್ದಲಿಂಗಯ್ಯ, ಚೆನ್ನವೀರ ಕಣವಿ; ಗಾಯಕರುಗಳಾದ ಆರ್. ಕೆ. ಶ್ರೀಕಂಠನ್, ಸಿ. ಅಶ್ವಥ್, ಶಿವಮೊಗ್ಗ ಸುಬ್ಬಣ್ಣ, ಕಸ್ತೂರಿ ಶಂಕರ್, ಪಿ. ಬಿ. ಶ್ರೀನಿವಾಸ್; ಚಲನಚಿತ್ರ ತಾರೆಯರಾದ ವಿಷ್ಣುವರ್ಧನ್, ಪುನೀತ್ ರಾಜ್ ಕುಮಾರ್, ಅನಂತ್ ನಾಗ್, ದ್ವಾರಕೀಶ್, ಶ್ರೀನಾಥ್, ಉಮಾಶ್ರೀ, ಬಿ ಸರೋಜಾದೇವಿ, ರಮೇಶ್ ಅರವಿಂದ್, ರಿಕಿ ಖೇಜ್ ಹೀಗೆ ಅನೇಕರ ಸಂದರ್ಶನ ಮಾಡಿದ್ದರು. ಒಂದು ದಶಕಕ್ಕೂ ಹೆಚ್ಚು ಕಾಲ ಟೈಮ್ಸ್ ಆಫ್ ಇಂಡಿಯಾಗಾಗಿ ಕನ್ನಡ ಚಲನಚಿತ್ರಗಳನ್ನು ವಿಮರ್ಶೆ ಮಾಡಿದ್ದರು.
ಕುಮಾರ್ ಅವರು ಕಳೆದ ಎರಡು ದಶಕಗಳಿಂದ ಫಿಲ್ಮ್‌ಫೇರ್ ಕನ್ನಡ ಚಲನಚಿತ್ರ ಪ್ರಶಸ್ತಿಯ ಉಸ್ತುವಾರಿ ನಿರ್ವಹಿಸುತ್ತಿದ್ದಾರೆ. ಸಾಹಿತ್ಯದ ಓದು ಇವರ ಪ್ರಿಯ ಹವ್ಯಾಸಗಳಲ್ಲೊಂದು.
ಜಿ. ಎಸ್. ಕುಮಾರ್ ಅವರಿಗೆ 2013ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸುತ್ತೂರು ಮಠದ ಸ್ವಾಮೀಜಿ ಅವರಿಂದ ಪ್ರಶಸ್ತಿ, ರೋಟರಿ ವತಿಯಿಂದ ಸನ್ಮಾನ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.
ಅಷ್ಟೊಂದು ಸಾಧಿಸಿದ್ದರೂ ನಮ್ಮಂತಹ ಸಾಧಾರಣರೊಂದಿಗೆ ಸಹಾ ಬೆರೆಯುವ ಕುಮಾರ್ ಅವರ ಸರಳತೆ ನನಗೆ ಅಚ್ಚುಮೆಚ್ಚು. 2020ರ ಮೇ 25ರಂದು 'ಕನ್ನಡ ಸಂಪದ' ಪುಟದಲ್ಲಿನ ಇನ್ಬಾಕ್ಸಲ್ಲಿ ಒಂದು ಮೆಸೇಜ್ 'May I know who is in charge of this? ' ಅಂತ. ಇದ್ಯಾರಪ್ಪಾ ಅಂತ ಅಳುಕಿನಿಂದಲೇ ಉತ್ತರಿಸಿದೆ. ಹೀಗೆ ಉತ್ತರ ಬಂತು "You are doing excellent job. Congrats". ಇದು ಕುಮಾರ್ ಅವರ ದೊಡ್ಡ ಗುಣದ ಪರಿ. ಎಲ್ಲ ನೇರ, ಸರಳ, ಹೃದಯಾಂತರಾಳದಿಂದ ಅವರ ನಡೆ ನುಡಿ.
ಆತ್ಮೀಯರಾದ ಜಿ. ಎಸ್. ಕುಮಾರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Gs Kumar Sir 🌷🙏🌷
ಕಾಮೆಂಟ್‌ಗಳು