ಚಿತ್ರಲೇಖ
ಚಿತ್ರಲೇಖ
ಚಿತ್ರಲೇಖ ಅವರು ಹೆಸರಾಂತ ಕಾದಂಬರಿಗಾರ್ತಿಯಾಗಿದ್ದು ಅವರ ‘ಮುದುಡಿದ ತಾವರೆ ಅರಳಿತು', 'ಸಮಯದ ಗೊಂಬೆ’ ಕಾದಂಬರಿಗಳು ಚಲನಚಿತ್ರಗಳಾಗಿ ಜನಪ್ರಿಯಗೊಂಡಿವೆ.
ಚಿತ್ರಲೇಖ ಅವರು 1945 ಮೇ 6ರಂದು ಪುಣೆಯಲ್ಲಿ. ಜನಿಸಿದರು. ಇವರ ತಂದೆ ಎ.ಆರ್.ಕೃಷ್ಣಸ್ವಾಮಿ ಅಯ್ಯಂಗಾರ್ ಅವರು ಮಿಲಿಟರಿಯಲ್ಲಿದ್ದರು. ತಾಯಿ ಜಾನಕಿ ಅಮ್ಮಾಳ್. ಒಬ್ಬ ಅಣ್ಣ ಹಾಗೂ ಐದು ಜನ ಅಕ್ಕಂದಿರ ನಂತರ ಕಿರಿಯ ಮಗಳಾಗಿ ಚಿತ್ರಲೇಖಾ ಹುಟ್ಟಿದರು. ಇವರು 15 ದಿನಗಳ ಮಗು ಆಗಿರುವಾಗ ತಂದೆಯವರು ಮಿಲಿಟರಿಯ ಕೆಲಸಕ್ಕೆ ಹೊರಡಬೇಕಾದ್ದರಿಂದ ಕುಟುಂಬವನ್ನು ಬೆಂಗಳೂರಿಗೆ ಕಳುಹಿಸಿ ತಾವು ಕರ್ತವ್ಯದ ಕರೆಗೆ ಹೊರಟರು.
ತಂದೆಯವರ ಕೆಲಸದ ವರ್ಗಾವಣೆ ಕಾರಣ ಚಿತ್ರಲೇಖ ಅವರ ವಿದ್ಯಾಭ್ಯಾಸ ಹಲವೆಡೆ ಸಾಗಿತು. ಪ್ರಾಥಮಿಕ ವಿದ್ಯಾಭ್ಯಾಸ ನಾಗಪುರದ ಪುಲ್ಗಾವ್‍ನ ಮಿಲಿಟರಿ ಶಾಲೆಯಲ್ಲಿ ಹಿಂದಿ ಮಾಧ್ಯಮದಲ್ಲಿ ನಡೆಯಿತು. ಅಂದು ಶಾಲೆಗೆ ಸೇರಿಸಲು ಹೋದಾಗ ಅಲ್ಲಿನ ಮುಖ್ಯೋಪಾಧ್ಯಾಯರು ಇವರ ನಾಟ್ಯವನ್ನು ನೋಡಿ ಈಕೆ ಒಬ್ಬ ಉತ್ತಮ ನೃತ್ಯ ಕಲಾವಿದೆ ಆಗುತ್ತಾಳೆ ಎಂದು ಹೇಳಿ ಇವರ ಹೆಸರನ್ನು ಚಿತ್ರಲೇಖ ಎಂದು ಬದಲಾಯಿಸಿದರು. ನೃತ್ಯ ಮತ್ತು ಹಿಂದೀ ಚಿತ್ರಗೀತೆ ಗಾಯನ ಇವರ ಹವ್ಯಾಸವಾಗಿತ್ತು.
ಮುಂದೆ ತಂದೆಯವರು ಕರ್ನಾಟಕ ವಿದ್ಯುತ್‍ಚ್ಚಕ್ತಿ ಮಂಡಳಿಯಲ್ಲಿ ಸೂಪರಿಂಟೆಂಡ್ ಆದರು. ಬೆಂಗಳೂರಿನ ಮಲ್ಲೇಶ್ವರಂನಲ್ಲಿ ವಾಸ ಆರಂಭಗೊಂಡಿತು. ಹೈಸ್ಕೂಲ್ ವಿದ್ಯಾಬ್ಯಾಸ ಇಂಗ್ಲಿಷ್ ಮಾಧ್ಯಮದಲ್ಲಿ ಆಯಿತು. ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ ಮೊದಲ ತಂಡದಲ್ಲಿ ಡಿಪ್ಲಾಮೋ (ಫ್ಯಾಷನ್ ಡಿಸೈನಿಂಗ್) ವಿದ್ಯಾರ್ಥಿ ಅನ್ನುವ ಹೆಮ್ಮೆ ಇವರದು. ಪಾಲಿಟೆಕ್ನಿಕ್ ಓದುವಾಗ ನಟ ಶ್ರೀನಾಥ್ ಇವರ ಸಹಪಾಠಿ ಆಗಿದ್ದರು.
ಚಿತ್ರಲೇಖ ಅವರು 19ನೇ ವಯಸ್ಸಿಗೆ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದರು. ಕೆಲಸಕ್ಕೆ ಸೇರಿದ ನಂತರ ಸಂಜೆ ಕಾಲೇಜಿನಲ್ಲಿ ಬಿ.ಎ. ಪದವಿಯನ್ನು ಪಡೆದರು. ಕೆಲಸದ ಕಾರಣಕ್ಕೆ ಬೇರೆ ಬೇರೆ ಊರುಗಳಿಗೆ ವರ್ಗಾವಣೆ ಆಗುವಾಗ ಸಂಸಾರ ಬೆಂಗಳೂರಿನಲ್ಲಿ ಇದ್ದ ಕಾರಣ ಆ ಕೆಲಸಕ್ಕೆ ರಾಜೀನಾಮೆ ನೀಡಿ ಹೊಂಬೇಗೌಡ ಬಾಲಕಿಯರ ಪ್ರೌಢಶಾಲೆಯಲ್ಲಿ 26 ವರ್ಷಗಳ ಕಾಲ ಅಧ್ಯಾಪಕಿಯಾಗಿ ಕೆಲಸ ನಿರ್ವಹಿಸಿದರು. ನಿವೃತ್ತಿಯ ನಂತರ 2 ವರ್ಷ 'ಎಂ.ಎಸ್. ರಾಮಯ್ಯ'ನಲ್ಲಿ ಉಪನ್ಯಾಸಕಿಯಾಗಿ ಕೆಲಸ ನಿರ್ವಹಿಸಿದರು.
ಚಿತ್ರಲೇಖ ಅವರಿಗೆ ಓದುವ ಆಸಕ್ತಿ ಚಿಕ್ಕಂದಿನಿಂದ ಇತ್ತು. ಚಂದಮಾಮ ಆಗಿನ ಇವರ ಅಚ್ಚಮೆಚ್ಚಿನ ಪುಸ್ತಕ. ಜೊತೆಗೆ ಲೈಬ್ರರಿಯಿಂದ ತರುತ್ತಿದ್ದ ಪುಸ್ತಕಗಳನ್ನು ಓದುತ್ತಿದ್ದರು. ಐದು ಆರನೇ ತರಗತಿಯಲ್ಲಿ ಇದ್ದಾಗಲೇ ಬರೆಯುವ ಹಂಬಲ ಮೂಡಿತ್ತು. ಮನೆ ಮಾತು ತಮಿಳು, ಓದಿದ್ದು ಇಂಗ್ಲಿಷ್ ಹಾಗೂ ಹಿಂದಿ ಮಾಧ್ಯಮದಲ್ಲಿಯಾದರೂ ಕನ್ನಡದಲ್ಲಿಯೇ ಬರೆಯಲು ಆರಂಭಿಸಿದರು. ಹೈಸ್ಕೂಲ್ನಲ್ಲಿ ಇದ್ದಾಗಲೇ “ನಿರ್ಮಲಾ” ಎನ್ನುವ ದೊಡ್ಡ ಕಾದಂಬರಿ ಬರೆದಿದ್ದರು. ಅದೇಕೋ ಚೆನ್ನಾಗಿಲ್ಲ ಎನ್ನಿಸಿ ಹರಿದು ಹಾಕಿದರು. ಶಿಕ್ಷಕಿ ಅನಂತಲಕ್ಷ್ಮಿ ತುಂಬಾ ಪ್ರೋತ್ಸಾಹ ನೀಡುತ್ತಿದ್ದರು. ಹಾಗೆಯೇ ಮಂಗಳಾ ಪತ್ರಿಕೆಯ ಸಂಪಾದಕರಾಗಿದ್ದ ಬಾಬು ಕೃಷ್ಣಮೂರ್ತಿ ತುಂಬಾ ಪ್ರೊತ್ಸಾಹ ನೀಡುತ್ತಿದ್ದರು.
ಚಿತ್ರಲೇಖ ಅವರ ಪ್ರಕಟವಾದ ಮೊದಲ ಕಾದಂಬರಿ “ಮುದುಡಿದ ತಾವರೆ ಅರಳಿತು” ಇದನ್ನು 1962ರಲ್ಲಿ ಬರೆದಾಗ ಇವರಿಗೆ 16 ವರ್ಷ ವಯಸ್ಸು. ನಂತರ ಬರೆದದ್ದು ಚಂದ್ರಿಕಾ. ಆಮೇಲಿನ ದಿನಗಳಲ್ಲಿ ಸತತವಾಗಿ ಬರೆಯುತ್ತಲೇ ಬಂದರು. ನಂತರ ಬರೆದ ಹಲವಾರು ಸಣ್ಣ ಕಥೆ ಲೇಖನಗಳು ಸುಧಾ, ಮಂಗಳಾ, ವನಿತಾ, ವಾರ ಪತ್ರಿಕೆ, ಹಂಸರಾಗ ಮತ್ತು ರಾಗ ಸಂಗಮದಲ್ಲಿ ಪ್ರಕಟವಾಗುತ್ತಿದ್ದವು.
ಚಿತ್ರಲೇಖಾ ಅವರು ಸುಮಾರು 160 ಕಾದಂಬರಿಗಳನ್ನು ಪ್ರಕಟಿಸಿದರು. ಕೆಲವು ರಾಗಸಂಗಮ ಹಂಸರಾಗ ಮಾಸ ಪತ್ರಿಕೆಗಳಲ್ಲಿ ಪ್ರಸಾರವಾಗಿವೆ. ಇತರ ಭಾಷೆಗಳಿಂದ ಕೆಲವು ಅನುವಾದಗಳನ್ನು ಮಾಡಿದ್ದಾರೆ.
ಪ್ರಸಿದ್ಧ ಕಾದಂಬರಿಗಾರ್ತಿ ಚಿತ್ರಲೇಖ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು. ನಮಸ್ಕಾರ.
ಮಾಹಿತಿ ಕೃಪೆ ಕೃತಜ್ಞತೆಗಳು:. ವಸಂತ ಗಣೇಶ್ Vasantha Ganesh
On the birth anniversary of novelist Chitralekha 🌷🙏🌷
ಕಾಮೆಂಟ್‌ಗಳು