ಲಕ್ಷ್ಮೀ ನಾಗರಾಜ್ 🤝ಇಂದು ನಾಗರಾಜ್
ಲಕ್ಷ್ಮೀ ನಾಗರಾಜ್ 🤝ಇಂದು ನಾಗರಾಜ್
ಚಿಲಕುಂದ ಸಹೊದರಿಯರೆಂದು ತಮ್ಮ ಬಹುಮುಖಿ ಸಂಗೀತ ಕಾರ್ಯಕ್ರಮಗಳಿಂದ ಪ್ರಸಿದ್ಧರಾದವರು ವಿದುಷಿ ಲಕ್ಷ್ಮೀ ನಾಗರಾಜ್ ಮತ್ತು ಅವರ ತಂಗಿ ವಿದುಷಿ ಇಂದು ನಾಗರಾಜ್. ಈ ಸಹೋದರಿಯರು ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತಗಳೆರಡರಲ್ಲೂ ಪರಿಣಿತರಾಗಿದ್ದು, ಶಾಸ್ತ್ರೀಯ ಸಂಗೀತ಼, ಸುಗಮ ಸಂಗೀತ, ಹಿನ್ನೆಲೆ ಗಾಯನ ಹೀಗೆ ಬಹುಮುಖಿಯಾಗಿ ಸಾಧನೆ ಮಾಡುತ್ತಿದ್ದಾರೆ. ಇವರ ಸಹೋದರ ಕೇಶವ ದತ್ ಅವರೂ ಎಂಬಿಎ ಸಾಧನೆಯೊಂದಿಗೆ ಮೃದಂಗ ವಿದ್ವಾನ್ ಆಗಿದ್ದಾರೆ.
ಲಕ್ಷ್ಮೀ ನಾಗರಾಜ್ ಮತ್ತು ಇಂದು ನಾಗರಾಜ್ ಸಹೋದರಿಯರಲ್ಲಿ, ಲಕ್ಷ್ಮೀ ಅವರು ಇಂದು ಅವರಿಗಿಂತ ಎರಡು ವರ್ಷ ಹಿರಿಯರು. ಇವರ ಮೂಲ ಊರು ಹುಣಸೂರು ತಾಲ್ಲೂಕಿನ ಚಿಲಕುಂದ. ಇವರದ್ದು ಸಂಗೀತ ಪರಂಪರೆಯುಳ್ಳ ಕುಟುಂಬ. ತಂದೆ ವಿದ್ವಾನ್ ನಾಗರಾಜ್ ಅವರು ಕೊಳಲು ವಾದಕರಾಗಿ, ಗಾಯನ ವಿದ್ವಾಂಸರಾಗಿ, ಸಂಗೀತ ಗುರುವಾಗಿ ಮತ್ತು ಕಾಲೇಜಿನಲ್ಲಿ ನಿವೃತ್ತ ಇಂಗ್ಲಿಷ್ ಬೋಧಕರಾಗಿ ಹೆಸರಾದವರು. ತಾಯಿ ಎಚ್ ಎಸ್ ರಾಧಾ ಅವರು ಉತ್ತಮ ಗಾಯಕಿಯಾಗಿದ್ದು ತಮ್ಮ ಮದುವೆಯ ನಂತರ ಪದವಿ, ಸ್ನಾತಕೋತ್ತರ ಪದವಿ ಮತ್ತು ಸಂಗೀತ ವಿದ್ವತ್ ಸಾಧನೆಗಳನ್ನು ಮಾಡಿರುವ ಸುಶ್ರಾವ್ಯ ಗಾಯಕಿ. ಈ ಸಹೋದರಿಯರ ಮುತ್ತಜ್ಜ ಸಿ ಟಿ ಶ್ರೀನಿವಾಸಮೂರ್ತಿ ಅವರು ಮೈಸೂರಿನಲ್ಕಿ ಸಂಸ್ಕೃತ ಕಲಿಯುವಾಗ ಅವರ ಸಹಪಾಠಿ ಆಗಿದ್ದ ವೇದಬ್ರಹ್ಮ ವೆಂಕಟ ನಾರಾಯಣ ಉಡುಪ ಶಾಸ್ರ್ತಿಗಳು ಸಕಲ ವಿದ್ಯಾ ಪಾರಂಗತರಾಗಿದ್ದು ಮಾತ್ರವಲ್ಲದೆ ವಯೊಲಿನ್ ವಾದಕರೂ ಮತ್ತು ಸಂಗೀತ ವಿದ್ವಾಂಸರೂ ಆಗಿದ್ದು, ಇವರ ತಂದೆಯ ಮನೆಯವರಿಗೆಲ್ಲ ಸಂಗೀತ ಕಲಿಸಿದರು.
ಲಕ್ಷ್ಮೀ ಮತ್ತು ಇಂದು ಅವರು ಎರಡೂವರೆ ವರ್ಷದ ಮಕ್ಕಳಾಗಿದ್ದಾಗಲೇ ಅವರ ಅಜ್ಜಿ ತೊಡೆಯ ಮೇಲೆ ಕೂರಿಸಿಕೊಂಡು ಸಂಗೀತ ಸ್ವರ ಪ್ರಸ್ತಾರ ಹೇಳಿಕೊಡುತ್ತಿದ್ದರಂತೆ. ಮುಂದೆ ತಂದೆಯವರಿಂದ ಕಟ್ಟುನಿಟ್ಟಾದ ಶಿಸ್ತಿನ ಸಂಗೀತ ಪಾಠ ನಿರಂತರವಾಗಿ ಸಾಗಿತು. 7ನೇ ವಯಸ್ಸಿನಲ್ಲಿದ್ದಾಗಲೇ ಪಂಚರತ್ನ ಕೃತಿಗಳ ಗಾಯನ ಮತ್ತು 9ನೇ ವಯಸ್ಸಿನಲ್ಲಿರುವಾಗ ನವಗ್ರಹ ಕೃತಿಗಳಂತಹ ಕ್ಲಿಷ್ಟ ಗಾಯನವೂ ಸಿದ್ಧಿಸಿತ್ತು.
ಲಕ್ಷ್ಮೀ ನಾಗರಾಜ್ ಮತ್ತು ಇಂದೂ ನಾಗರಾಜ್ ಅವರು ಮೈಸೂರಿನಲ್ಲಿ ಪದವಿಗೆ ಓದಿದರು. ಮುಂದೆ ಅವರು ಪಂಡಿತ್ ಪರಮೇಶ್ವರ ಹೆಗಡೆ ಅವರಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನೂ ನಿಷ್ಠೆಯಿಂದ ಸಾಧನೆ ಮಾಡಿದರು.
ಲಕ್ಷ್ಮೀ ನಾಗರಾಜ್ ಅವರು 7 ವರ್ಷವಿದ್ದಾಗ, ಮತ್ತು ಇಂದು ಅವರು 5 ವರ್ಷವಿದ್ದಾಗ ಜೊತೆಯಾಗಿ ವೇದಿಕೆಯ ಮೇಲೆ ಮೊದಲು ಹಾಡಿದರು. ಮುಂದೆ ಮೇಲೆ ಹೇಳಿದಂತೆ ಈ ಜೋಡಿ ಚಿಲಕುಂದ ಸಹೋದರಿಯರಾಗಿ ಸಂಗೀತ ಕ್ಷೇತ್ರದಲ್ಲಿ ಹೆಸರಾಗಿದ್ದಾರೆ.
ಲಕ್ಷ್ಮೀ ಅವರು ಮೊದಲು ಚಂದನ ವಾಹಿನಿಯಲ್ಲಿ 'ನಿತ್ಯೋತ್ಸವ' ಎಂಬ ಭಾವಗೀತೆ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಮುಂದೆ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಸಾರಥ್ಯದಲ್ಲಿ ನಡೆಯುತ್ತಿದ್ದ ಎದೆ ತುಂಬಿ ಹಾಡಿದೆನು ಕಾರ್ಯಕ್ರಮದಲ್ಲಿ ವಿಜಯಿಯಾದರು. ಈ ಸ್ಪರ್ಧೆಗಳ ಪ್ರತಿ ಹಂತದಲ್ಲೂ ಇವರ ಗಾಯನ ಕನ್ನಡಿಗರ ಮನೆ ಮಾತಾಯಿತು. ಅಂತಿಮ ಸುತ್ತಿನಲ್ಲಿ ಹೇಮಾವತಿ ಚಿತ್ರದ ಎಸ್ ಜಾನಕಿಯವರ ಪ್ರಸಿದ್ಧ ಗೀತೆ "ಶಿವ ಶಿವ ಎನ್ನದ ನಾಲಿಗೆ ಏಕೆ" ಪ್ರಸ್ತುತ ಪಡಿಸಿದ ರೀತಿ ಇಂದಿಗೂ ಜನಪ್ರಿಯ. ಸುದೀರ್ಘ ಅವಧಿಯ Confident star singer reality showನಲ್ಲಿಯ ಇವರ ಸಾಧನೆಯೂ ಜನಪ್ರಿಯವಾಗಿದ್ದು ಇವರ ಧ್ವನಿಯಲ್ಲಿನ "ನಾದಮಯ ಈ ಲೋಕವೆಲ್ಲ" ಪ್ರಸ್ತುತಿಯೂ ಅಪಾರ ಮೆಚ್ಚುಗೆಗೆ ಪಾತ್ರವಾಯಿತು.
ಲಕ್ಷ್ಮೀ ನಾಗರಾಜ್ ಅವರ ಗಾಯನದ 'ಆಪ್ತರಕ್ಷಕ' ಚಿತ್ರದಲ್ಲಿನ 'ಓಂಕಾರ ಅಭಿನಯ ವೇದ' ಅಪಾರ ಜನಪ್ರಿಯ. ಸಿಂಹಾದ್ರಿ, ತಾರೆ, ಮನಸಾರೆ, ಮೀರಾ ಮಾಧವ ರಾಘವ ಹೀಗೆ ಅವರು ಅನೇಕ ಚಿತ್ರಗಳಲ್ಲಿ ಹಾಡಿದ್ದಾರೆ. ಇಂದು ನಾಗರಾಜ್ ಅವರು ಮೀರಾ ಮಾಧವ ರಾಘವ, ನೀ ಟಾಟಾ ನಾ ಬಿರ್ಲಾ, ಗೋವಿಂದಾಯ ನಮಃ ಇಂದ ಮೊದಲ್ಗೊಂಡು ಅನೇಕ ಭಾಷೆಗಳ ನೂರಾರು ಚಿತ್ರಗಳಲ್ಲಿ ಹಿನ್ನೆಲೆ ಗಾಯನ ನೀಡಿದ್ದು, 'ಗೋವಿಂದಾಯ ನಮಃ' ಚಿತ್ರದ 'ಪ್ಯಾರ್ಗೆ ಆಗ್ಬಿಟ್ಟೈತೆ' ಹಾಡಿನ ಹಿನ್ನೆಲೆ ಗಾಯನಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿ ಗಳಿಸಿದ್ದಾರೆ. ಈ ಸಹೊದರಿಯರು ಪಿ ಬಿ ಶ್ರೀನಿವಾಸ್, ಎಸ್ ಪಿ ಬಾಲಸುಬ್ರಹ್ಮಣ್ಯಂ ಸೇರಿದಂತೆ ಮಹಾನ್ ಕಲಾವಿದರೊಂದಿಗೆ ಕಾರ್ಯಕ್ತಮಗಳಲ್ಲಿ ಹಾಡಿದ್ದಾರೆ. Zee ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮದ ಮೆಂಟಾರ್ ಆಗಿ ಶೋಭಿಸಿದ್ದಾರೆ. ಎಲ್ಲ ಪ್ರಸಿದ್ಧ ಸಂಗೀತ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ.
ಲಕ್ಷ್ಮೀ ನಾಗರಾಜ್ 🤝ಇಂದು ನಾಗರಾಜ್ ಜೋಡಿ ಶಾಸ್ತ್ರೀಯ ಗಾಯನ ಕಚೇರಿ, ಭಕ್ತಿಗೀತೆ, ಸುಗಮ ಸಂಗೀತ, ಚಿತ್ರಗೀತೆ ಹೀಗೆ ಪ್ರತ್ಯೇಕ ರೀತಿಯ ಮತ್ತು ಜನಾನುರಾಗೀಯ ಅಪೇಕ್ಷೆಗಳಿಗನುಗುಣವಾಗಿ ಸಂಮಿಶ್ರ ಸ್ವರೂಪದ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತ ಎಲ್ಲೆಡೆ ಪ್ರಸಿದ್ಧರಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಂಗೀತದ ಕುರಿತು ಜ್ಞಾನ ಪಸರಿಸುವ ಬೋಧನಾತ್ಮಕ ಕಾರ್ಯಕ್ರಮಗಳನ್ನೂ ನೀಡುತ್ತಿದ್ದಾರೆ.
ಲಕ್ಷ್ಮೀ ನಾಗರಾಜ್ 🤝ಇಂದು ನಾಗರಾಜ್ ಸೋದರಿಯರು ಏಪ್ರಿಲ್ - ಮೇ ಆಸುಪಾಸಿನಲ್ಲಿ ಹುಟ್ಟುಹಬ್ಬದ ದಿನ ಹೊಂದಿದವರು. ಈ ಜೋಡಿಯ ಸುಶ್ರಾವ್ಯ ಗಾಯನ ನಿರಂತರ ನಮಗೆ ಕೇಳುತ್ತಿರಲಿ. ಈ ಜೋಡಿಗೆ ಹಾರ್ದಿಕ ಶುಭಹಾರೈಕೆಗಳು.
Lakshmi Nagaraj and Indu Nagaraj🌷🌷🌷

ಕಾಮೆಂಟ್‌ಗಳು