ನಿವೇದಿತಾ
ನಿವೇದಿತಾ. ಎಚ್.
ಇಂಗ್ಲಿಷ್ ಉಪನ್ಯಾಸಕಿಯಾಗಿರುವ ನಿವೇದಿತಾ ಅವರು ಕನ್ನಡ - ಇಂಗ್ಲಿಷ್ ಬರಹಗಾರ್ತಿಯಾಗಿ, ನಿರೂಪಕಿಯಾಗಿ, ರಸಪ್ರಶ್ನೆ ಕಾರ್ಯಕ್ರಮ ನಿರ್ವಾಹಕರಾಗಿ ಹೀಗೆ ಬಹುಮುಖಿಯಾಗಿ ಕ್ರಿಯಾಶೀಲರಾಗಿದ್ದಾರೆ.
ಏಪ್ರಿಲ್ 12, ನಿವೇದಿತಾ ಅವರ ಜನ್ಮದಿನ. ತಾಯಿ ಮೀನಾಕ್ಷಿ ಅವರೂ ಸಾಹಿತ್ಯ ಮತ್ತು ಶಿಕ್ಷಣಲೋಕದ ಸಾಧಕರು. ತಂದೆ ಹೇಮಪ್ರಕಾಶ್ ಅವರು ಸಾಹಿತ್ಯಪ್ರಿಯರು.
ಮೈಸೂರಿನ ಸಂತ ಫಿಲೋಮಿನ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕಿಯಾಗಿ ಕಾರ್ಯಾರಂಭ ಮಾಡಿದ ನಿವೇದಿತಾ ಅವರು ಮುಂದೆ
ಹಾಸನದ ಸರ್ಕಾರಿ ಪದವಿ ಕಾಲೇಜು, ಹೇಮಗಂಗೋತ್ರಿ, ಮೈಸೂರಿನ ಮಹಾರಾಣಿ ವಿಜ್ಞಾನ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸಿ, ಪ್ರಸ್ತುತ ಮೈಸೂರಿನ. ಯುವರಾಜಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ನಿವೇದಿತಾ ಅವರು ಐದನೇ ತರಗತಿಯಿಂದಲೇ ಭಾವಗೀತೆ ಚರ್ಚಾಸ್ಪರ್ಧೆಗಳಲ್ಲಿ ಭಾಗವಹಿಸುತ್ತಲೇ ರಾಜ್ಯ ಮಟ್ಟದಲ್ಲಿಯೂ ಬಹುಮಾನಗಳನ್ನು ಪಡೆದಿದ್ದವರು . ಶಾಲಾಕಾಲೇಜುಗಳಲ್ಲಿ ಎಲ್ಲ ಕಾರ್ಯಕ್ರಮಗಳ ನಿರೂಪಣೆ ಇವರದ್ದೇ ಆಗಿರುತ್ತಿತ್ತು.
ನಿವೇದಿತಾ ಅವರು ಅಮೃತಾಪ್ರೀತಂ ರೂಮಿ, ಗುಲ್ಜಾರ್ ಸೇರಿದಂತೆ ಅನೇಕ ಮಹಾನ್ ಕವಿಗಳ ಕವಿತೆಗಳು ಮತ್ತು ಕತೆಗಳನ್ನು ಅನುವಾದಿಸಿದ್ದಾರೆ. ಇವರ ರೇಡಿಯೋ ಕ್ವಿಜ಼್ ಜನಪ್ರಿಯವಾಗಿದೆ. ಹಾಸನದ ಆಕಾಶವಾಣಿಯಲ್ಲಿ 2006ರಿಂದ ರಸಪ್ರಶ್ನೆ ನಿರ್ವಹಣೆ ಮಾಡುತ್ತ ಬಂದ ಇವರು 2018ರಿಂದ ಮೈಸೂರು ಆಕಾಶವಾಣಿಯಲ್ಲಿ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಅನೇಕ ವೇದಿಕೆಗಳಲ್ಲಿ ಇವರ ನಿರೂಪಣೆ, ಕಾವ್ಯ ಮತ್ತು ವಿಷಯ ಪ್ರಸ್ತುತಿಗಳು ನಡೆಯುತ್ತಿವೆ.
ನಿವೇದಿತಾ ಅವರ ಕವನ, ಲೇಖನ, ಪುಸ್ತಕ ವಿಮರ್ಶೆ, ಅನುವಾದಗಳು ವಿಶ್ವವಾಣಿ, ವಿಜಯ ಕರ್ನಾಟಕ, ಸುಧಾ, ಪ್ರಜಾವಾಣಿ, ಅವಧಿ, ಕೆಂಡಸಂಪಿಗೆ ಸೇರಿದಂತೆ ಎಲ್ಲ ನಿಯತಕಾಲಿಕಗಳು ಮತ್ತು ಅಂತರಜಾಲ ವಾಹಿನಿಗಳಲ್ಲಿ ಪ್ರಕಟವಾಗುತ್ತಿವೆ. 'ಮೈಸೂರು ಮಿತ್ರ' ದಿನಪತ್ರಿಕೆಯಲ್ಲಿ 'ಮಂಥನ' ಎಂಬ ಪಾಕ್ಷಿಕ ಅಂಕಣವನ್ನು ಬರೆಯುತ್ತಿದ್ದಾರೆ.
ನಿವೇದಿತಾ ಅವರು ಅನುವಾದಿಸಿರುವ ಡೇನಿಯಲ್ ಗ್ರೀನ್ ಬರ್ಗ್ ಅವರ 'Free at Last’ ಕೃತಿಯ ಕನ್ನಡ ಅನುವಾದ "ಗರಿಬಿಚ್ಚಿ ಗಗನದೆಡೆಗೆ" ಎಂಬ ಹೆಸರಿನಿಂದ ನವಕರ್ನಾಟಕ ಪ್ರಕಾಶನದಿಂದ ಪ್ರಕಟಗೊಂಡಿದೆ. ನಿವೇದಿತಾ ಅವರು ಇಂಗ್ಲಿಷಿಗೆ ಅನುವಾದಿಸಿರುವ ನಾ. ಡಿಸೋಜಾ ಅವರ ಕೃತಿಯನ್ಬು 'AMBUGA the Sunbird’ ಎಂಬ ಶೀರ್ಷಿಕೆಯಲ್ಲಿ ಹಾಗೂ, ಎನ್. ಶ್ರೀನಿವಾಸ ಉಡುಪ ಅವರ ಕೃತಿಯನ್ನು 'Not our Fault’ ಎಂಬ ಶೀರ್ಷಿಕೆಯಲ್ಲಿ ನವಕರ್ನಾಟಕ ಪ್ರಕಾಶನ ಪ್ರಕಟಿಸಿದೆ. ಅದೇ ಸರಣಿಯ ಇವರ ಇನ್ನೆರಡು ಅನುವಾದ ಕೃತಿಗಳು ಅಚ್ಚಿನಲ್ಲಿವೆ. ರಷ್ಯನ್ ಭಾಷೆಯಿಂದ ಇಂಗ್ಲಿಷಿಗೆ ಅನುವಾದಗೊಂಡಿರುವ ಇವರ ಮಕ್ಕಳ ಕಾದಂಬರಿಯ ಕನ್ನಡಾನುವಾದವೂ ಸದ್ಯದಲ್ಲಿಯೇ ಬರಲಿದೆ.
ಆತ್ಮೀಯ ನಿವೇದಿತಾ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Niveditha Vijay H 🌷🌷🌷

ಕಾಮೆಂಟ್‌ಗಳು