ಹೆಚ್. ಆರ್. ಪವಿತ್ರ
ಕಾನೂನು ವೃತ್ತಿಯಲ್ಲಿರುವ ಹೆಚ್.ಆರ್. ಪವಿತ್ರ ಅವರು ಸಾಹಿತ್ಯ, ಸಂಸ್ಕೃತಿ, ಸಂಘಟನೆ, ಆಪ್ತ ಸಲಹೆ, ಅಂಕಣ ಬರಹ, ಸಾಮಾಜಿಕ ಜಾಲತಾಣಗಳಲ್ಲಿನ ಸಮೂಹಗಳ ನಿರ್ವಹಣೆ.….. ಹೀಗೆ ಬಹುಮುಖಿಯಾಗಿ ಸಕ್ರಿಯರಾಗಿದ್ದಾರೆ.
ಜೂನ್ 7, ಪವಿತ್ರ ಅವರ ಜನ್ಮದಿನ. ಅವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಗ್ರಾಮೀಣ ಪ್ರದೇಶವಾದ ಹೆತ್ತೂರಿನಲ್ಲಿ ಹುಟ್ಟಿ ಬೆಳೆದರು. ಹೆತ್ತೂರಿನ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಪದವಿ ಪೂರ್ವ ಶಿಕ್ಷಣವನ್ನು ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ವಿದ್ಯಾಸಂಸ್ಥೆಯಲ್ಲಿ ಪೂರೈಸಿ, ಬೆಂಗಳೂರಿನ ವಿಶ್ವೇಶ್ವರಪುರಂ ಕಾನೂನು ಕಾಲೇಜಿನಲ್ಲಿ ಕಾನೂನು ವಿದ್ಯಾಭ್ಯಾಸ ಮಾಡಿ, 2003 ರಲ್ಲಿ ವಕೀಲರಾಗಿ ನೊಂದಾಯಿತಗೊಂಡರು.
ಪವಿತ್ರಾ ಅವರು ಕಳೆದ 23 ವರ್ಷಗಳಿಂದ ವಕೀಲರಾಗಿ ಕೊಡಗು ಜಿಲ್ಲೆಯಲ್ಲಿ ಸೇವೆಸಲ್ಲಿಸುತ್ತಿದ್ದಾರೆ. ಜಿಲ್ಲೆಯ ಗ್ರಾಹಕರ ನ್ಯಾಯಾಲಯದಲ್ಲಿ ಪ್ರತಿನಿಧಿ, ತಾಲ್ಲೂಕು ನ್ಯಾಯಾಲಯದ ವಕೀಲರ ಸಂಘದ ಉಪಾಧ್ಯಕ್ಷೆ, ಕಾನೂನು ಸಲಹೆಗಾರ್ತಿ, ಕೊಡಗು ಜಿಲ್ಲೆ ಸೋಮವಾರ ಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕಿ ಹೀಗೆ ಇವರ ಸೇವೆ ಬಹುಮುಖಿಯಾದದ್ದು. ತಮ್ಮ ಕೆಲಸವನ್ನು ಆಪ್ತವಾಗಿ ಪ್ರೀತಿಸುವ ಪವಿತ್ರ, "ನನ್ನ ವೃತ್ತಿಬದುಕು ನನ್ನ ಹೆಮ್ಮೆ" ಎನ್ನುತ್ತಾರೆ. ಜೊತೆಗೆ "ಉದ್ಯಮಿ ಆಗಿರುವ ಗಂಡನ ಮೆಚ್ಚಿನ ಮಡದಿ, ವೃತ್ತಿ ಶಿಕ್ಷಣ ಪಡೆಯುತ್ತಿರುವ ಇಬ್ಬರು ಹೆಣ್ಣುಮಕ್ಕಳ ಅಮ್ಮ, ಅತ್ತೆಯ ಅಚ್ಚು ಮೆಚ್ಚಿನ ಸೊಸೆ, ಹೆತ್ತವರ ಹೆಮ್ಮೆಯ ಮಗಳಾಗಿ ಸುಖಿ ಸಂಸಾರದ ಸಂತೃಪ್ತಿಯ ಬದುಕು ನನ್ನದು" ಎನ್ನುತ್ತಾರೆ.
ಪುಸ್ತಕ ಓದುವುದು, ಗಿಡಗಳನ್ನು ಬೆಳೆಸುವುದು, ಪೇಂಟಿಂಗ್, ಕಸೂತಿ ಹೀಗೆ ಪವಿತ್ರ ಅವರ ಆಸಕ್ತಿ ಕ್ಷೇತ್ರಗಳು ಹಲವಾರು. ಹವ್ಯಾಸಿ ಬರಹಗಾರ್ತಿಯಾಗಿರುವ ಇವರು, ಕಾನೂನಿನ ಅರಿವು ಮೂಡಿಸುವ ನಿಟ್ಟಿನಲ್ಲಿ 'ವಿಶ್ವವಾಣಿ ಪ್ರತಿಕೆ' ಯಲ್ಲಿ 'ಕಾನೂನು ಕಿವಿಮಾತು' ಎಂಬ ಅಂಕಣವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಇದಲ್ಲದೆ ಹಲವು ರೀತಿಯ ವೈಚಾರಿಕ ಲೇಖನಗಳು ಮತ್ತು, ಕವನಗಳು 'ವಿಶ್ವವಾಣಿ', 'ಸಂಯುಕ್ತ ಕರ್ನಾಟಕ', ಕೊಡಗಿನ ಶಕ್ತಿ,ಲಾ ಫಾರ್ ಆಲ್ ಎಂಬ ಕಾನೂನು ದಿನಪತ್ರಿಕೆ ಸೇರಿದಂತೆ ಹಲವು ನಿಯತಕಾಲಿಕಗಳಲ್ಲಿ ಮೂಡಿಬರುತ್ತಿವೆ.
ಪವಿತ್ರ ಅವರ ಮನೆಯ ಪುಟ್ಟ ಗ್ರಂಥಾಲಯದಲ್ಲಿ ಕನ್ನಡ ಮತ್ತು ಇಂಗ್ಲಿಷಿನ ಸಾಕಷ್ಟು ಕೃತಿಗಳ ಸಂಗ್ರಹವಿದ್ದು ಬಿಡುವಿನ ಸಮಯವನ್ನು ಓದಿಗೂ ಮೀಸಲಿಟ್ಟಿದ್ದಾರೆ.
ಪವಿತ್ರ ಅವರು ಐನೂರಕ್ಕೂ ಹೆಚ್ಚು ಉಪನ್ಯಾಸ ಕಾರ್ಯಕ್ರಮ ನೀಡಿದ್ದಾರೆ. ಆಕಾಶವಾಣಿಯಲ್ಲಿ ಕಾನೂನು ಅರಿವು ಮೂಡಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡುತ್ತ ಬಂದಿದ್ದಾರೆ.
ಹೀಗೆ ಪವಿತ್ರ ಅವರು ವೃತ್ತಿ, ಕುಟುಂಬ, ಸಂಘಟನೆ, ಸಮುದಾಯದ ಹಿತಾಸಕ್ತಿಗಳು, ಸಾಹಿತ್ಯ ಮತ್ತು ಸಾಂಸ್ಕೃತಿಕ ಆಸಕ್ತಿಗಳು ಎಲ್ಲವನ್ನೂ ಸಮತೋಲನದಲ್ಲಿ ಕಾಣುತ್ತ, ಎಲ್ಲರೊಂದಿಗೂ ಅಪ್ತರಾಗಿರುವ ಸರಳ ಸಹೃದಯರು. ಪವಿತ್ರ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday H R Pavithra ಪವಿತ್ರ ಹೆತ್ತೂರು 🌷🌷🌷

ಕಾಮೆಂಟ್‌ಗಳು