ಎಂ.ಎಸ್. ಗೋಪಾಲಕೃಷ್ಣನ್
ಎಂ.ಎಸ್. ಗೋಪಾಲಕೃಷ್ಣನ್
ಎಂ.ಎಸ್. ಗೋಪಾಲಕೃಷ್ಣನ್ ಸಂಗೀತಲೋಕದ ಮಹಾನ್ ಪಿಟೀಲು ವಾದಕರಾಗಿ ಖ್ಯಾತರಾಗಿದ್ದವರು. ಕರ್ನಾಟಕ ಸಂಗೀತ ಮತ್ತು ಹಿಂದೂಸ್ತಾನಿ ಸಂಗೀತದ ಎರಡೂ ಪ್ರಕಾರಗಳಲ್ಲೂ ಅಪಾರ ಸಾಧನೆ ಮಾಡಿದ್ದರು.
ಗೋಪಾಲಕೃಷ್ಣನ್ ಅವರು 1931ರ ಜೂನ್ 10ರಂದು ಚೆನ್ನೈನ ಮೈಲಾಪುರದಲ್ಲಿ ಜನಿಸಿದರು. ಅವರು ತಮ್ಮ ತಂದೆ ಪರೂರ್ ಸುಂದರಂ ಅಯ್ಯರ್ ಅವರಿಂದ ಪಿಟೀಲು ಕಲಿತರು. ಎಂಟು ವರ್ಷ ವಯಸ್ಸಿನಲ್ಲೇ ತಂದೆಯೊಂದಿಗೆ ಮೊದಲ ಕಚೇರಿ ನೀಡಿದರು. ಪ್ರಸಿದ್ಧ ಪಿಟೀಲು ವಾದಕ ದ್ವಾರಂ ವೆಂಕಟಸ್ವಾಮಿ ನಾಯ್ಡು ಅವರಿಂದಲೂ ಸ್ಫೂರ್ತಿ ಪಡೆದಿದ್ದರು. ಎಂ.ಎಸ್.ಜಿ ಅವರ ಸುಪುತ್ರಿ ಡಾ. ಎಂ. ನರ್ಮದಾ ಕೂಡ ಪಿಟೀಲು ವಾದಕರಾಗಿ ಖ್ಯಾತರು. ಅವರ ಹಿರಿಯ ಸಹೋದರ ಎಂ.ಎಸ್.ಅನಂತರಾಮನ್ (1924-2018) ಕೂಡ ಪ್ರಸಿದ್ಧ ಪಿಟೀಲು ವಾದಕರಾಗಿದ್ದರು.
ಪರೂರ್ ಬಾನಿ ಎಂದು ಕರೆಯಲ್ಪಡುವ ಈ ಕುಟುಂಬದ ಪಿಟೀಲು ವಾದನ ಶೈಲಿಯನ್ನು ಅನಂತರಾಮನ್ ಮತ್ತು ಗೋಪಾಲಕೃಷ್ಣನ್ ಅವರ ಮಕ್ಕಳು ಮತ್ತು ಕುಟುಂಬದ ಮುಂದಿನ ತಲೆಮಾರಿನವರು ಇಂದೂ ಜೀವಂತವಾಗಿಟ್ಟಿದ್ದಾರೆ.
ಗೋಪಾಲಕೃಷ್ಣನ್ ಅವರು ಪ್ರಧಾನ ಪಿಟೀಲು ವಾದಕರಾಗಿ ಹಾಗೂ ಮಹಾನ್ ಸಂಗೀತಗಾರರ ಕಚೇರಿಗಳಿಗೆ ಸಹವಾದಕರಾಗಿ 5 ದಶಕಗಳಿಗೂ ಹೆಚ್ಚು ಕಾಲ ದೇಶದೆಲ್ಲೆಡೆ ಮತ್ತು ವಿಶ್ವದ ಅನೇಕ ಕಡೆಗಳಲ್ಲಿ ವ್ಯಾಪಕವಾಗಿ ಕಾರ್ಯಕ್ರಮಗಳನ್ನು ನೀಡಿದ್ದರು.
ಅವರು ಓಂಕಾರನಾಥ್ ಠಾಕೂರ್ ಮತ್ತು ಡಿ.ವಿ. ಪಲುಸ್ಕರ್ ಅವರೊಂದಿಗೂ ಪಿಟೀಲು ನುಡಿಸಿದ್ದರು.
ಎಂ.ಎಸ್. ಗೋಪಾಲಕೃಷ್ಣನ್ ಅವರಿಗೆ 1997 ರಲ್ಲಿ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ಸಂಗೀತ ಕಲಾನಿಧಿ ಪ್ರಶಸ್ತಿಯನ್ನು ನೀಡಲಾಗಿತ್ತು. ಅವರಿಗೆ ಪದ್ಮಶ್ರೀ, ಪದ್ಮಭೂಷಣ, ಕಲೈಮಾಮಣಿ, ಸಂಗೀತ ಕಲಾನಿಧಿ ಮತ್ತು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಗೌರವಗಳೂ ಸಂದಿದ್ದವು..
ಎಂ.ಎಸ್. ಗೋಪಾಲಕೃಷ್ಣನ್ ಅವರು 2013ರ ಜನವರಿ 3 ರಂದು ನಿಧನರಾದರು.
Great Violonist Vidwan M. S. Gopalakrishnan 🌷🙏🌷

ಕಾಮೆಂಟ್‌ಗಳು