ಕೆ. ಭಾಗ್ಯರಾಜ್
ಕೆ. ಭಾಗ್ಯರಾಜ್ ಇನ್ನಿಲ್ಲ
ನಾನು ಅಪಾರವಾಗಿ ಇಷ್ಟಪಟ್ಟಿದ್ದ ನಟ, ಶ್ರೇಷ್ಠ ಚಿತ್ರಕಥೆ - ಸಂಭಾಷಣೆ ರಚನೆಕಾರ, ಯಶಸ್ವಿ ನಿರ್ಮಾಪಕ ಮತ್ತು ನಿರ್ದೇಶಕ ಕೆ. ಭಾಗ್ಯರಾಜ್ ನಿಧನರಾಗಿದ್ದಾರೆ. ನಿನ್ನೆಯ ರಾತ್ರಿ ಕೂಡಾ ಅವರ ಹಲವಾರು ರೀಲ್ ತುಣುಕುಗಳಲ್ಲಿನ ಅವರ ಹಾಸ್ಯಪ್ರಜ್ಞೆ ಉಳ್ಳ ಪ್ರಾಜ್ಞತೆ ಕಾಣುತ್ತ ಸಂತೋಷಿಸಿದ್ದೆ. ಕೆ. ಭಾಗ್ಯರಾಜ್ ಅವರು ತಮ್ಮ ಪತ್ನಿ ನಟಿ ಪೂರ್ಣಿಮಾ ಭಾಗ್ಯರಾಜ್, ಪುತ್ರ ನಟ ಶಾಂತನು ಭಾಗ್ಯರಾಜ್ ಹಾಗೂ ಪುತ್ರಿ ಶರಣ್ಯಾ ಭಾಗ್ಯರಾಜ್ ಅವರನ್ನು ಅಗಲಿದ್ದಾರೆ.
ಕೃಷ್ಣಸ್ವಾಮಿ ಭಾಗ್ಯರಾಜ್ ಇಂದಿನ ತಮಿಳುನಾಡಿನ ಈರೋಡ್ ಜಿಲ್ಲೆಯ ವೆಲ್ಲನ್ ಕೋವಿಲ್ ಗ್ರಾಮದಲ್ಲಿ 1953ರ ಜನವರಿ 7 ರಂದು ಜನಿಸಿದರು. ಜಿ. ರಾಮಕೃಷ್ಣನ್ ಹಾಗೂ ಕೆಲವೇ ದಿನಗಳ ಹಿಂದೆ ನಿಧನರಾದ ಖ್ಯಾತ ನಿರ್ದೇಶಕ ಭಾರತಿರಾಜಾ ಅವರ ಸಹಾಯಕರಾಗಿ ಚಿತ್ರರಂಗ ಪ್ರವೇಶಿಸಿದರು. ಸಹನಿರ್ದೇಶನದ ಜೊತೆ ಕೆಲವು ಪುಟ್ಟ ಪಾತ್ರನಿರ್ವಹಿಸಿದರು. ‘ಸುವರಿಲ್ಲಾದ ಚಿತ್ರಂಗಳ್' ಚಿತ್ರದ ಮೂಲಕ ಪೂರ್ಣ ನಿರ್ದೇಶಕರಾದರು. ‘ಪುದಿಯ ವಾರ್ಪುಗಳ್’ ಎಂಬ ಭಾರತೀರಾಜಾ ನಿರ್ದೇಶನದ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದೇ ಅಲ್ಲದೆ ಶ್ರೇಷ್ಠ ಚಿತ್ರಕಥಾ ಸಂಭಾಷಣೆಗಾಗಿ ರಾಜ್ಯಪ್ರಶಸ್ತಿ ಗಳಿಸಿದರು. ಬಳಿಕ ತಮ್ಮದೇ ವಿಶಿಷ್ಟ ಕಥೆ, ನಿರ್ದೇಶನ ಮತ್ತು ಅಭಿನಯದ ಮೂಲಕ ಚಿತ್ರರಂಗದ ಪ್ರಮುಖ ಸೃಜನಶೀಲ ನಿರ್ದೇಶಕರಾಗಿ ಅಪಾರ ಹೆಸರು ಮಾಡಿದರು.
ಭಾಗ್ಯರಾಜ್ 1980 ಮತ್ತು 1990ರ ದಶಕಗಳಲ್ಲಿ ಹಾಸ್ಯ, ಭಾವನಾತ್ಮಕತೆ ಮತ್ತು ಸಾಮಾಜಿಕ ಮೌಲ್ಯಗಳನ್ನು ಒಳಗೊಂಡ ಸರಳ ಸುಂದರ ಕಥೆಗಳ ಮೂಲಕ ಅಪಾರ ಜನಪ್ರಿಯತೆ ಗಳಿಸಿದರು. ತಮ್ಮ ವೃತ್ತಿಜೀವನದಲ್ಲಿ 25ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿ, 75ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದರು.
ಭಾಗ್ಯರಾಜ್ ಅವರು ಮುಂದಾನೈ ಮುಡಿಚ್ಚು, ಅಂದ 7 ನಾಳ್ಗಳ್, ಚಿನ್ನ ವೀಡು, ಮೌನ ಗೀತಂಗಳ್, ಸುಂದರ ಕಾಂಡಂ, ಎಂಗ ಚಿನ್ನ ರಾಸಾ, ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್, ಆರಾರೊ ಆರಿರಾರೋ ಸೇರಿದಂತೆ ಅನೇಕ ಯಶಸ್ವೀ ಚಿತ್ರಗಳನ್ನು ನೀಡಿದ್ದರು. ಇವುಗಳಲ್ಲಿ ಅನೇಕ ಚಿತ್ರಗಳು ಇಂದಿಗೂ ಚಲನಚಿತ್ರ ರಸಿಕರ ಅಚ್ಚುಮೆಚ್ಚಿನ ಚಲನಚಿತ್ರಗಳಾಗಿವೆ.
ಭಾಗ್ಯರಾಜ್ ಅವರು ನಟಿಯರಾದ ಊರ್ವಶಿ ಮತ್ತು ಕಲ್ಪನಾ ಅವರನ್ನು ತಮಿಳು ಚಿತ್ರರಂಗಕ್ಕೆ ಪರಿಚಯಿಸಿದ್ದರು. ಅವರ ಪ್ರತಿಭೆಯನ್ನು ಮೆಚ್ಚಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ನಟ ಎಂ.ಜಿ. ರಾಮಚಂದ್ರನ್ (ಎಂಜಿಆರ್) ಅವರು ಭಾಗ್ಯರಾಜ್ ಅವರನ್ನು ತಮ್ಮ "ಚಿತ್ರರಂಗದ ಉತ್ತರಾಧಿಕಾರಿ" ಎಂದು ಹೊಗಳಿದ್ದರು.
ಭಾಗ್ಯರಾಜ್ ಅವರು 1986ರಲ್ಲಿ ಬಿಡುಗಡೆಯಾದ ತಮಿಳಿನ 'ಒರು ಖೈದಿಯನ್ ಡೈರಿ' ರೂಪಾಂತರವಾದ ಹಿಂದಿ ಚಲನಚಿತ್ರ 'ಆಖ್ರೀ ರಾಸ್ತಾ' ಮೂಲಕ ಬಾಲಿವುಡ್‌ನಲ್ಲೂ ತಮ್ಮ ಪ್ರತಿಭೆ ಪ್ರದರ್ಶಿಸಿದ್ದರು. ಅಮಿತಾಭ್ ಬಚ್ಚನ್ ದ್ವಿಪಾತ್ರದಲ್ಲಿ ನಟಿಸಿದ್ದ ಈ ಚಿತ್ರದಲ್ಲಿ ಜಯಪ್ರದಾ, ಶ್ರೀದೇವಿ ಹಾಗೂ ಅನುಪಮ್ ಖೇರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು. ಈ ಚಿತ್ರ ಅಪಾರ ಯಶಸ್ಸು ಕಂಡಿತ್ತು. ಇದೇ ರೀತಿ ಮುಂದಾನೈ ಮುಡಿಚ್ಚು ಚಿತ್ರವನ್ನು ರಾಜೇಶ್ ಖನ್ನ ಅಭಿನಯದಲ್ಲಿ ‘ಮಾಸ್ಟರ್ಜೀ' ಎಂಬ ಯಶಸ್ವೀ ಚಿತ್ರವಾಗಿಸಿದ್ದರು.
ಭಾಗ್ಯರಾಜ್ ಅವರ ಅನೇಕ ಚಿತ್ರಗಳನ್ನು ರವಿಚಂದ್ರನ್ ಮತ್ತು ಕಾಶೀನಾಥ್ ಕನ್ನಡದಲ್ಲಿ ರೂಪಾಂತರಿಸಿದ್ಪಾರೆ. ಭಾಗ್ಯರಾಜ್ ಅವರು ಕನ್ನಡದ ಮಲ್ಲಮ್ಮನ ಪವಾಡ ಚಿತ್ರವನ್ನು ತಮಿಳಿಗೆ ರೂಪಾಂತರಿಸಿದ್ದರು.
ನಟನೆಯಲ್ಲಿ ಮತ್ತು ಮಾತಿನಲ್ಲಿ ಹಾಸ್ಯಪ್ರಜ್ಞೆ, ಸರಳತೆ, ನಯವಿನಯ ತುಂಬಿಕೊಂಡಿದ್ದ ಹಿರಿಯ ಜೀವ ಕೆ.ಭಾಗ್ಯರಾಜ್ 2026ರ ಜೂನ್ 27ರಂದು ಹೃದಯಾಘಾತದಿಂದ ನಿಧನರಾದರು. ಅವರಂತಹ ಅಗಾಧ ಪ್ರತಿಭೆ ಮೂಡುವುದು ಅಪರೂಪ.
Respects to Great Film Maker, actor, excellent script maker and Director K. Bhaghyaraj 🌷🙏🌷

ಕಾಮೆಂಟ್‌ಗಳು