ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅನಂತಮೂರ್ತಿ ಅವರ ಓದು



ಯು. ಆರ್. ಅನಂತಮೂರ್ತಿ ಅವರ ಹಲವು ಪುಸ್ತಕಗಳ ಓದು

ಯು. ಆರ್. ಅನಂತಮೂರ್ತಿ ಅವರ ಹಲವಾರು ಕತೆ-ಕಾದಂಬರಿಗಳನ್ನು ನಾನು ಇಷ್ಟಪಟ್ಟು ಓದಿದ್ದೇನೆ.  

ಅವರ ಕತೆಗಳಲ್ಲಿ ಮೊದಲಿಗೆ ನೆನಪಾಗುವುದು ‘ಎಂದೆಂದೂ ಮುಗಿಯದ ಕತೆ’.  ಒಮ್ಮೆ ಮಕ್ಕಳು ಮೊಮ್ಮಕ್ಕಳಾಗಿದ್ದವರು ಕಾಲಚಕ್ರದ ಗತಿಯಲ್ಲಿ ತಾವೇ ಅಜ್ಜ ಅಜ್ಜಿಯರಾಗಿ ತಮ್ಮ ಮೊಮ್ಮಕ್ಕಳಿಗೆ,  ತಾವು ತಮ್ಮ ಅಜ್ಜ ಅಜ್ಜಿಯರಿಂದ ಕೇಳಿದ ಅದೇ ಕತೆಯನ್ನು ಹೇಳುತ್ತಾರೆ.  “ಈ ಕತೆ ಕೊನೆ ಮುಟ್ಟಿದರೆ – ಬೆಳಕಾಗಲ್ಲ, ಕತ್ತಲಾಗಲ್ಲ, ಮರದಲ್ಲಿ ಹಣ್ಣಾಗಲ್ಲ, ಗಿಡದಲ್ಲಿ ಹೂವಾಗಲ್ಲ – ಮೊಮ್ಮಕ್ಕಳಿಗೆ ಕತೆ ಹೇಳೋ ಅಜ್ಜ ಅಜ್ಜಿಯರೂ ಬದುಕಲ್ಲ” ಎಂಬ  ಮೋಹಕ ಆಳದ ಚಿಂತನೆಯ ಕತೆ ನನಗೆ ಪ್ರೀತಿ ಪಾತ್ರವಾದದ್ದು.

ಅನಂತಮೂರ್ತಿ ಅವರ ಕಥಾ ಸಂಕಲನಗಳಾದ ಎಂದೆಂದೂ ಮುಗಿಯದ ಕತೆ, ಪ್ರಶ್ನೆ, ಮೌನಿ, ಆಕಾಶ ಮತ್ತು ಸೂರ್ಯನ ಕುದುರೆ ಮುಂತಾದವುಗಳಲ್ಲಿನ ಕತೆಗಳೆಲ್ಲ, ನಮ್ಮ ಕಣ್ಮುಂದೆ ಆಯ್ದ ಕತೆಗಳು, ಸಮಗ್ರ ಕಥಾ ಸಂಕಲನ ಮುಂತಾದ ಬೇರೆ ಬೇರೆಯ  ಸಮ್ಮಿಶ್ರಗಳಲ್ಲಿ ಮುಂದೆ ಮೂಡಿದ್ದಂತೆ ನೆನಪು.  ಸಾಂಸ್ಕೃತಿಕ ಸಂಘರ್ಷಗಳ  ವಿವಿಧ  ಸ್ವರೂಪಗಳನ್ನು  ಓದಲಿಕ್ಕೆ, ಆಕರ್ಷಕ ಎಂಬಂತೆ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಕಥಾನಕಗಳನ್ನು ಪೋಣಿಸಿಟ್ಟವರು ಅನಂತಮೂರ್ತಿ.  ಪ್ರಕೃತಿ, ನವಿಲುಗಳು, ಅಕ್ಕಯ್ಯ, ಸೂರ್ಯನ ಕುದರೆ, ಘಟಶ್ರಾದ್ಧ, ಕಾರ್ತೀಕ, ಕ್ಲಿಪ್ ಜಾಯಿಂಟ್  ಮೌನಿ,ಬರ ಮುಂತಾದ ಅನೇಕ ಕತೆಗಳು ಕಣ್ಮುಂದೆ ತೇಲಿಹೋಗುತ್ತವೆ.  

‘ಸಂಸ್ಕಾರ’ ಚಲನಚಿತ್ರವಾಗಿ  ಸೃಷ್ಟಿಸಿದ  ಸಂಚಲನದಿಂದ ಅನಂತಮೂರ್ತಿ ಅವರು ನಮ್ಮ ತಲೆಮಾರಿನಲ್ಲಿ ಸಾಹಿತ್ಯಕ ಕ್ಷೇತ್ರದಿಂದ ಆಚೆಗೆ ಸಮಾಜದಲ್ಲೂ  ಪ್ರಧಾನವಾಗಿ ಕೇಳಿಬಂದರು.  ಹಾಗಾಗಿ ಇದನ್ನು  ‘ನಾನೂ ಓದಿದ್ದೇನೆ’ ಎಂಬುದು,  ನಮಗೆ ಅಲ್ಲಲ್ಲಿ  ಚರ್ಚಿಸಿಕೊಳ್ಳಲು  ಬೇಕಿದ್ದ  ಅವಶ್ಯಕ ಸಾಮಾಗ್ರಿಯಾಗಿತ್ತು.  ಬ್ರಾಹ್ಮಣ್ಯವನ್ನು ಧಿಕ್ಕರಿಸಿದ ಬ್ರಾಹ್ಮಣನೊಬ್ಬನ ಶವ’ಸಂಸ್ಕಾರ’ದ ಪ್ರಶ್ನೆಯಲ್ಲಿ  ವೇದಾಧ್ಯಯನ ಮಾಡಿದ ಬ್ರಾಹ್ಮಣ, ಬ್ರಾಹ್ಮಣ್ಯವನ್ನು ಧಿಕ್ಕರಿಸುವ ವ್ಯಕ್ತಿ ಮತ್ತು ಇವುಗಳ ಯಾವುದೇ ಹಂಗೂ ಇಲ್ಲದ ಲೌಕಿಕ – ಹೀಗೆ ಮೂರೂ ಪಾತ್ರಗಳನ್ನು ಮುಖಾಮುಖಿಯಾಗಿಸುತ್ತಾ ‘ಸಂಸ್ಕಾರ’ದ ಸ್ವರೂಪಗಳನ್ನು ಬಿಚ್ಚಿಡುವ ನಿರೂಪಣೆ ಆ ಕಾಲದ ಒಂದು ವಿಶಿಷ್ಟ ಓದು.  

ಅನಂತಮೂರ್ತಿಯವರ ‘ಭಾರತೀಪುರ’ ಕಾದಂಬರಿ,  ವಿದೇಶಕ್ಕೆ ಹೋಗಿ ಅಲ್ಲಿನ ವಿದ್ಯಾಭ್ಯಾಸ ಮತ್ತು ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿ,  ಭಾರತೀಯ ಸಮಾಜದಲ್ಲೂ ಬದಲಾವಣೆ ತರುತ್ತೇನೆ  ಎಂದು ಹುಮ್ಮಸ್ಸಿನಲ್ಲಿ ಹೊರಡುವ ತರುಣನ ಮಾನಸಿಕ ಚಿಂತನೆಗಳ  ಅಭಿವ್ಯಕ್ತಿ.     ‘ಅವಸ್ಥೆ’ಯಲ್ಲಿ ಪ್ರಾಮಾಣಿಕ ಆಶಯವುಳ್ಳ ನಾಯಕ ರಾಜಕೀಯ ವ್ಯವಸ್ಥೆಗಳ  ನಡುವೆ ನಲುಗುವ  ಹಿನ್ನೆಲೆಯಿದೆ.   ಇವೆರಡೂ ಕಾದಂಬರಿಗಳೂ ತಮ್ಮ ಚಿಂತನಾ ಕ್ರಮ, ನಿರೂಪಣೆ ಮತ್ತು ಯಾವುದನ್ನೇ ಆಗಲಿ ಸಿದ್ಧಿತ ಫಲಿತಾಂಶ ಎಂದು ನೀಡದೆ ವ್ಯವಸ್ಥೆಯನ್ನು ನೋಡುವ ಒಂದು ಕ್ರಮವಾಗಿ ಬಳಸುವ ತಂತ್ರವಾಗಿ  ಮೆಚ್ಚುಗೆಯಾಗುತ್ತೆ.

ಸಂಸ್ಕಾರ, ಘಟಶ್ರಾದ್ಧ, ಬರ, ಮೌನಿ, ಅವಸ್ಥೆ ಮುಂತಾದವು ಚಲನಚಿತ್ರಗಳಾಗಿ ಸಹಾ ಗಮನಸೆಳೆದಂತಹವು.  ಅನಂತಮೂರ್ತಿ ಅವರು ಹಲವು ಪ್ರಮುಖರೊಡನೆ ನಡೆಸಿದ ಸುಂದರ ಸಂದರ್ಶನಗಳ  ‘ಹತ್ತು ಸಮಸ್ತರು’ ಕೂಡಾ ಖುಷಿ ಕೊಟ್ಟ ಓದು.

ಅನಂತಮೂರ್ತಿಯವರ  ಚಿಂತನೆಗಳು ಹೇಗೇ ಇರಲಿ, ನಾನಂತೂ ಯಾವುದೇ ಬರಹಗಾರನನ್ನೂ ಲೆಫ್ಟು, ರೈಟು ಎಂದು ವಿಂಗಡಿಸಿ ಓದಲು ಹೋದವನಲ್ಲ.  ಬಹುಶಃ ಅವರ ಕೃತಿಗಳನ್ನೆಲ್ಲ  ಅವರು ನಮಗೆ ವಾಗ್ವಾದಗಳ ಮೂಲಕ  ಗೋಚರವಾಗುವದಕ್ಕೆ  ಮುಂಚಿತವಾಗಿ ಓದಿದ್ದು ಕೂಡಾ  ಒಳ್ಳೆಯದೆನಿಸುತ್ತೆ. ಯಾವುದೇ ಬರಹಗಳನ್ನು ನಾವು ಪೂರ್ವಾಗ್ರಹವಿಲ್ಲದ ಮುಕ್ತ ಮನಸ್ಸಿನಿಂದ ಓದುವುದೇ ನಿಜವಾದ ಆಂತರ್ಯದ ಆನಂದ.  ಮತ್ತೊಂದು ರೀತಿಯಲ್ಲಿ (ಈ ಮಾಧ್ಯಮಗಳಲ್ಲಿ ಮೂಡುವ  ರಾಡಿಯ ಹಿಂಸೆಯನ್ನು ಹೊರತುಪಡಿಸಿದಂತೆ) ಯಾರೇ ಆಗ್ಲಿ ಅವರು ಹೇಳೋದು ನಮಗೆ ಇಷ್ಟವಾಗದೆ ಇದ್ರೆ ಏನಂತೆ; ನಮಗೆ ಇಷ್ಟವಾಗುವಂತೆಯೇ ಪ್ರಪಂಚ, ಅಥವಾ ನಮಗೆ ಇಷ್ಟವಾಗುವಂತೆಯೇ ನಮ್ಮ ಸುತ್ತಮುತ್ತಲಿನ ಜನ ಇರಬೇಕು ಅನ್ನೋ ಭಾವನೆ  ಆದ್ರೂ ಯಾಕಿರಬೇಕು ಎಂಬುದು ನನ್ನಲ್ಲಿ ಆಗಾಗ ಮಿಂಚಿಹೋಗುವ  ಒಂದು ಚಿಂತನೆ.  ಬಹುಶಃ  ಇದೂ ಮತ್ತೊಬ್ಬರ ಅನಿಸಿಕೆಯಂತೆ ನಾನು ಯಾಕಿರಬೇಕು ಎಂಬ ಒಂದು ಸ್ವಾರ್ಥದ ಎಳೆ ಇದ್ದರೂ ಇರಬಹುದೇನೋ!

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ