ಮೈಸೂರಿನ ದಿವಾನರು
ಮೈಸೂರಿನ ದಿವಾನರು
1880 - 1940 ಅವಧಿ, ಮೈಸೂರು ಸಂಸ್ಥಾನದ ಅಮೂಲ್ಯ ಅಭಿವೃದ್ಧಿ ಪಥದ 60 ವರ್ಷಗಳ ಅವಧಿಯ ಒಂದು ಪೂರ್ಣ ಸಂವತ್ಸರ ಕಾಲ. ಇದು ಮೈಸೂರಿನ ಅರಸರು ಮತ್ತು ಸಮರ್ಥ ದಿವಾನರುಗಳ ನಡುವಿನ ಹೊಂದಾಣಿಕೆಯಿಂದ, ಆಡಳಿತ ಅಂದರೆ ಹೇಗಿರಬೇಕು ಎಂದು ತಿಳಿಯ ಬಯಸುವವರಿಗೆ ಒಂದು ವಿಶಿಷ್ಟ ಮಾದರಿ.
ಡಿವಿಜಿ ಅವರು ಈ ಪೂರ್ಣ ಸಂವತ್ಸರದಲ್ಲಿನ ದಿವಾನರುಗಳ ಆಡಳಿತದ ಎಳೆ ಎಳೆಗಳನ್ನೂ ಈ ಕೃತಿಯಲ್ಲಿ ಸಂವೇದನಾತ್ಮಕವಾಗಿ ಬಿಡಿಸಿಟ್ಟಿದ್ದಾರೆ. ಅಭಿವೃದ್ಧಿ ಅಂದರೆ ಏನು, ಜವಾಬ್ಧಾರಿಯುತ ಸರ್ಕಾರ ಅಂದರೇನು, ಯಾವ ಆಡಳಿತದಲ್ಲಿ ಹುರುಪಿತ್ತು, ಎಲ್ಲಿ ಎಡವಿತ್ತು, ಎಲ್ಲಿ ಬಲವಿತ್ತು ಹೀಗೆ ಎಲ್ಲವೂ ತೆರೆದುಕೊಳ್ಳುತ್ತದೆ. ಯಾವುದನ್ನೂ ದೂಷಿಸದೆ ಯಾವುದನ್ನೂ ಕಣ್ಣುಮುಚ್ಚಿ ಒಪ್ಪಿಕೊಳ್ಳದೆ ಎಲ್ಲದರದ್ದೂ ಮಿತಿಗಳನ್ನು ಗರುತಿಸಿ, ಆದರೆ ಅದರ ಆಳದಲ್ಲಿ ಕಾಣುವ ಶ್ರದ್ಧಾವಂತಿಕೆ ಮತ್ತು ನಿಷ್ಕಪಟತೆಗಳನ್ನು ಡಿ.ವಿ.ಜಿ ಅವರು ಹೇಗೆ ಅರಸುತ್ತಿದ್ದರು ಎಂಬುದನ್ನು ಈ ಕೃತಿ ಮನದಟ್ಟು ಮಾಡಿಕೊಡುತ್ತದೆ.
ದಿವಾನರುಗಳ ಕುರಿತಾದ ಮಾತುಗಳ ನಂತರ ಕೊನೆಯ ಪುಟಗಳಲ್ಲಿ ಮೂಡಿರುವ ರಾಷ್ಟ್ರೀಯ ಸಂಸ್ಥಿತಿಯ ಮೂಲಸೂತ್ರಗಳು, ಸ್ವತಂತ್ರವೋ ಅತಂತ್ರವೋ ಮುಂತಾದ ವಿಶ್ಲೇಷಣತೆಗಳಂತೂ ಎಲ್ಲ ಕಾಲದ ಸಮಾಜಗಳೂ ಓದಬೇಕಾದಂತಹ ಪಾಠಗಳಂತಿವೆ.
ಎಲ್ಲ ಕ್ಷಣಗಳಲ್ಲೂ ಮಹಾನ್ ವ್ಯಕ್ತಿಗಳೇ ಇರುವುದು ಸಾಧ್ಯವಿಲ್ಲ ಎಂಬ ಡಿವಿಜಿ ಅವರ ಮಾತು ನನಗೆ ಆಪ್ತವಾಗಿ ಕಾಣುತ್ತದೆ. ಮೈಸೂರು ದಿವಾನರುಗಳ ಅರವತ್ತು ವರ್ಷಗಳ ಚರಿತ್ರೆಯಲ್ಲಿ ಎಲ್ಲ ಮಂತ್ರಿಗಳೂ ಅತಿಶಯದ ಪ್ರಗತಿ ಸಾಧಕರೇ ಆಗಿರಬೇಕಿತ್ತಂಬುದು ಅಸಾಧ್ಯದ ನಿರೀಕ್ಷಣೆ ಎನ್ನುತ್ತಾರೆ ಡಿವಿಜಿ. ಅದೂ ಪ್ರಯೋಜನಕಾರಿಯೂ ಆಗದು ಎಂಬುದು ಅವರ ಅಭಿಮತ. ದಿನಬೆಳಗಾದರೆ ಗ್ಲ್ಯಾಡ್‍ಸ್ಟನ್, ಮರುಬೆಳಗಾದರೆ ಬಿಸ್ಮಾರ್ಕ್, ಇಂದು ವಿಶ್ವೇಶ್ವರಯ್ಯ, ನಾಳೆ ಗಾಂಧಿ - ಹೀಗೆ ಮಹಾಪ್ರಗತಿ ವಿಚಕ್ಷಣರು ಸಾಲು ಸಾಲಾಗಿ ಬಂದರೆ ಅವರಿಗೆ ತಕ್ಕ ಜನ ಹಾಗೆ ಸಂತತವಾಗಿ ಬೇಕಲ್ಲ. ಪ್ರಗತಿಯೆಂದರೆ ಒಂದು ಹೊಸ ಉದ್ದೇಶ ಮತ್ತು ಒಂದು ಹೊಸ ಉತ್ಸಾಹ. ಹೊಸ ಉದ್ದೇಶವೂ, ಹೊಸ ಉತ್ಸಾಹವೂ ಜನದ ಮೇಲೆ ಹೊಸ ಒತ್ತಡವನ್ನು ಹಾಕುತ್ತವೆ; ಹೊಸ ಪ್ರಯತ್ನವನ್ನಪೇಕ್ಷಿಸುತ್ತವೆ. ಆ ಒತ್ತಡವನ್ನು ಜೀರ್ಣಿಸಿಕೊಂಡು ಆ ಪ್ರಯತ್ನಕ್ಕೆ ಅಣಿಯಾಗಲು ಜನಕ್ಕೆ ಕಾಲಾವಕಾಶಬೇಕು. ಆ ಕಾಲಾವಕಾಶವನ್ನು ಸಾಮಾನ್ಯ ಕಾರ್ಯನಿರ್ವಾಹಿಗಳು ಒದಗಿಸುತ್ತಾರೆ ಎಂದು ಗುರುತಿಸುವ ಡಿ.ವಿ.ಜಿ ಕಾರ್ಯದಕ್ಷರನ್ನು ಮಾತ್ರವಲ್ಲದೆ ಸಜ್ಜನ ಸಹೃದಯಿಗಳ ಸರಳ ಕಾರ್ಯವಿಧಾನವನ್ನೂ ಮಾನ್ಯಮಾಡುತ್ತಾರೆ. ತಾವು ಪತ್ರಿಕೆಗಳಲ್ಲಿ ಬರೆದದ್ದನ್ನು ಕೋಪಿಸಿ ತಮ್ಮನ್ನು ದೂರವಿಟ್ಟವರ ಸದ್ಗುಣಗಳನ್ನೂ ಡಿ.ವಿ.ಜಿ ಶ್ಲಾಘಿಸಿ ಬರೆದಿದ್ದಾರೆ.
ಸ್ವಾತಂತ್ರ್ಯದ ಮುಂದಿನ ಇಪತ್ತು ವರ್ಷಗಳ ಭಾರತೀಯ ಬದುಕನ್ನೂ ಸೂಕ್ಷ್ಮ ಬದುಕನ್ನೂ ಡಿ.ವಿ.ಜಿ ಈ ಕೃತಿಯಲ್ಲಿ ವಿಶ್ಲೇಷಿಸಿದ್ದಾರೆ. “ನಮ್ಮ ಜನಕ್ಕೆ ಇಹಜೀವನವು ಒಂದು ಭಾಗ ಮಾತ್ರ. ನಮ್ಮ ಜೀವನಕ್ಕಾಗಿ ರಾಜಕೀಯವೇ ಹೊರತು, ರಾಜಕೀಯಕ್ಕಾಗಿ ಜಿವನವಲ್ಲ. ನಮ್ಮ ಜನರು ರಾಜಕೀಯದಿಂದ ಅಪೇಕ್ಷಿಸುವುದು ಸ್ವಲ್ಪವನ್ನ, ಬಹುವನ್ನಲ್ಲ. ಆ ಸ್ವಲ್ಪಕ್ಕೆ ಎಷ್ಟುಮಟ್ಟಿನ ರಾಜಕೀಯ ಅವಶ್ಯವೋ ಅಷ್ಟು ಮಾತ್ರವಿರಬೇಕು. ರಾಜ್ಯದ ಹಗರಣ ಅಷ್ಟಕ್ಕಿಂತ ಕೂಡದು. ನಮಗೆ ಅಂತರಂಗ ಜೀವನವೂ ಉಂಟು. ಆಧ್ಯಾತ್ಮ, ಧರ್ಮ, ಜೀವಮೈತ್ರಿ, ಸಂಗೀತ, ಸಾಹಿತ್ಯ, ಕಲೆಗಳು - ಇವೆಲ್ಲ ಉತ್ತಮ ಜೀವಿತದ ಧ್ಯೇಯಗಳು. ರಾಜಕೀಯದ ಅವಾಂತರವು ಈ ಧ್ಯೇಯಗಳಿಗೆ ಹಾನಿ ತರುವಷ್ಟಾಗಬಾರದು" ಎಂಬ ಡಿ.ವಿ.ಜಿ ಅವರ ತಪಸ್ವೀ ನುಡಿಗಳು ನಮಗೆ ಸದಾ ಮಾರ್ಗದರ್ಶಿಯಾಗಿರಬೇಕು.
ಪ್ರಬಲ ಅಭಿವೃದ್ಧಿ ದೇಶಗಳ ಪ್ರಗತಿಯನ್ನು ಮತ್ತು ಅವಕ್ಕೆ ಕಾರಣವಾದ ಸಂಪನ್ಮೂಲ ಮತ್ತು ಅದನ್ನು ಬಳಸಿಕೊಳ್ಳುವ ಅಲ್ಲಿನ ಜನರ ಉದ್ಯಮಶೀಲತೆಯನ್ನೂ ಗುರುತಿಸುವ ಡಿ.ವಿ.ಜಿ, ಇಷ್ಟಾದರೂ ಅದು ಜನರಿಗೆ ನೆಮ್ಮದಿಯ ಬದುಕನ್ನೇನೂ ಪ್ರಸಾದಿಸಿಲ್ಲ ಎಂಬ ಸತ್ಯವನ್ನೂ ನಮ್ಮ ಕಣ್ಮುಂದೆ ನಿಲ್ಲುವಂತೆ ಮಾಡುತ್ತಾರೆ. ಡಿ.ವಿ.ಜಿ ಅವರು ಈ ಕೃತಿ ಬರೆದು 50 ವರ್ಷವಾದ ನಂತರದ ಇಂದಿನ ಸ್ಥಿತಿ ನೆನೆದಾಗ ಕೂಡಾ ಅವರ ಆಳದ ನೋಟ ಎಂತದ್ದು ಎಂದು ಬೆರಗು ಹುಟ್ಟಿಸುತ್ತೆ.
ನನಗೆ ಇಷ್ಟವಾಗಿ ಕಂಡ ಡಿ.ವಿ.ಜಿ ಅವರ ಮಾತನ್ನು ಮತ್ತೊಮ್ಮೆ ಮನನ ಮಾಡಿ ಈ ಬರಹವನ್ನು ಮುಗಿಸುತ್ತೇನೆ.
“ಯಾವ ದೇಶದ ರಾಜ್ಯವ್ಯವಸ್ಥೆಯೇ ಆಗಲಿ, ಅದು ಅಲ್ಲಿಯ ಜನರ ಶೀಲ ಸ್ವಭಾವಗಳನ್ನು ಹೊಂದಿಕೊಂಡದ್ದಾಗಿ ಅವರ ಜೀವಿತಧ್ಯೇಯಗಳಿಗೆ ಅನುಕೂಲಕರವಾಗಿರಬೇಕು. ಹೀಗೆಂದ ಮೇಲೆ ನಮ್ಮ ಇಂಡಿಯ ದೇಶದ ಜನರ ಶೀಲ ಸ್ಬಭಾವವೆಂಥಾದ್ದು? ಅವರ ಜೀವಿತಧ್ಯೇಯಗಳೇನು? - ಇವು ನಮ್ಮ ರಾಜಕೀಯದಲ್ಲಿ ಕೇಳಬೇಕಾದ ಮೊಮೊದಲ ಪ್ರಶ್ನೆಗಳು.
ನಮ್ಮ ಜನರು ಸಾಮಾನ್ಯವಾಗಿ ಇಹಲೋಕದ ಜೀವನವನ್ನು ಜೀವನದ ಸರ್ವಸ್ವವೆಂದು ತಿಳಿದುಕೊಂಡವರಲ್ಲ. ಅವರು ಪರವೆಂಬುದು ಇನ್ನೊಂದುಂಟೆಂದೂ ಮತ್ತು ಆ ಪರವು ಈ ಇಹಕ್ಕಿಂತ ಹೆಚ್ವು ಮುಖ್ಯವಾದದ್ದೆಂದು ನಂಬಿಕೊಂಡಿದ್ದಾರೆ.
ಈ ಕಾರಣದಿಂದ ಅವರ ಪಾಲಿಗೆ ಇಹಜೀವನವು ಸಾಧನಮಾತ್ರವಾಗಿದೆ. ಇಹವು ಸಾಧನ; ಪರವು ಸಾಧ್ಯ. ಎಂದರೆ ಸಾಧಿಸಿಕೊಳ್ಳಬೇಕಾದದ್ದು. ಬಾಯಾರಿದವನಿಗೆ ಬೇಕಾದದ್ದು ನೀರು. ನೀರಿಗೆ ಬೇಕಾದದ್ದು ಪಾತ್ರೆ. ಹೀಗೆ ನೀರಿನ ಕಾರಣದಿಂದ ಪಾತ್ರೆಗೆ ಒಂದು ಬೆಲೆ. ಅದರಂತೆಯೇ ಪರಧ್ಯೇಯ ಕಾರಣದಿಂದ ಇಹಜೀವನಕ್ಕೆ ಬೆಲೆ. ಇಹಜೀವನಕ್ಕೋಸ್ಕರ ರಾಜಕೀಯಕ್ಕೆ ಒಂದು ಬೆಲೆ. ಇದು ಮುಖ್ಯತತ್ವ.”
ಡಿ.ವಿ.ಜಿ. ಅವರ ಮಾತು ಓದುವಾಗ ನಾವು ಪುನಃ ಆ ಚಿಂತನೆಯ ಬದುಕಿನಿಂದ ಹಿಂದಿರುಗಲಾರದಷ್ಟು ದೂರ ಬಂದು ಬಿಟ್ಟಿದ್ದೇವೆಯೇ ಎಂದು ಅನಿಸುತ್ತಿರುವುದಂತೂ ಸುಳ್ಳಲ್ಲ!
A book on great 60 years period of Diwans’ administration in Mysore Kingdom by our great writer D.V. Gundappa
ಕಾಮೆಂಟ್‌ಗಳು