ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಾಗ ಐತಾಳ



ನಾಗ ಐತಾಳ 

ಡಾ. ನಾಗ ಐತಾಳರು ಜೀವ ರಸಾಯನ ವಿಜ್ಞಾನ ಶಾಸ್ತ್ರದಲ್ಲಿ ಮಹತ್ವದ ಸಾಧನೆ ಮಾಡಿ ಶಿಕಾಗೋ ವಿಶ್ವವಿದ್ಯಾಲಯದಲ್ಲೇ  27 ವರ್ಷಗಳ ಸುದೀರ್ಘ ಅವಧಿಯವರೆಗೆ  ಪ್ರಾಧ್ಯಾಪನ ನಡೆಸಿದವರು.  ವಿಶ್ವದ ಪ್ರಮುಖ ವಿಜ್ಞಾನ ಪತ್ರಿಕೆಗಳಲ್ಲಿ ಅವರ  42ಕ್ಕೂ ಹೆಚ್ಚು ವಿಜ್ಞಾನ ಸಂಶೋಧನಾ ಪ್ರಬಂಧಗಳು ಪ್ರಕಟಗೊಂಡಿವೆ.  ಜೊತೆಗೆ ಅವರು ತಮ್ಮ ವಿಶ್ರಾಂತ ಜೀವನದಲ್ಲಿ  ಕನ್ನಡದಲ್ಲಿ ಪ್ರೀತಿಯಿಂದ ಮಾಡಿದ ಸಾಧನೆಯೂ ಅಪಾರವಾದದ್ದೇ.  ಅವರು ಕನ್ನಡದಲ್ಲಿ 9 ಮಹತ್ವದ ಸಂಪಾದಿತ ಕೃತಿಗಳನ್ನೂ ಮತ್ತು 9 ಸೃಜನಶೀಲ ಕೃತಿಗಳನ್ನೂ ರಚಿಸಿದವರು.  ಇಂದು ಈ ಹಿರಿಯರ 87ನೇ  ಹುಟ್ಟುಹಬ್ಬ. ಎರಡು ವರ್ಷದ ಹಿಂದೆ   ಈ ಸಂದರ್ಭದಲ್ಲಿ ಅವರು ತಮ್ಮ ಬದುಕಿನ ಕುರಿತ ಹಿನ್ನೋಟವನ್ನು ತಮ್ಮದೇ ಬರವಣಿಗೆಯಲ್ಲಿ ನೀಡಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ.  ಬನ್ನಿ ಈ ಹಿರಿಯ ಸಾಧಕರನ್ನು ತಿಳಿದುಕೊಂಡು ಅವರಿಗೆ ಹುಟ್ಟಿದ ಹಬ್ಬದ ಶುಭ ಹಾರೈಕೆ ಹೇಳಿ ಪುನೀತರಾಗೋಣ.

ಒಂದು ಹಿನ್ನೋಟ (A Reflection) - ಬದುಕಿನ ಎಂಬತೈದರ  (ಈಗ 87ರ)ಗಡಿಯಲ್ಲಿ ನಿಂತು
-ನಾಗ ಐತಾಳ

ಇಂದು ನನಗೆ ೮೫  (ಇಂದು ೮೭) ತುಂಬಿತು. ಕಾಲನ ನೆಗತದಲ್ಲಿ ನಮ್ಮ ಬದುಕೂ ಮುಂದಕ್ಕೆ ಸಾಗುತ್ತಿದ್ದು, ಇದೊಂದು "ಹಿನ್ನೋಟ"ವೆಂದೇ ಹೇಳಬೇಕು. ಹೆಚ್ಚಾಗಿ ನನ್ನ ವಿಷಯವನ್ನೇ ನಾನು ಹೇಳಿಕೊಳ್ಳಲು ತೀರ ಹಿಂಜರಿಯುತ್ತೇನೆ.  ಆದರೆ, ಇದೊಂದು "ಸ್ವವಿಮರ್ಶೆ" ಎಂದು ಓದುಗರು ತಿಳಿಯುವರೆಂದು ನನ್ನ ಅನಿಸಿಕೆ. ಅಕ್ಟೋಬರ್ ೫, ೧೯೩೨ ರಲ್ಲಿ ನನ್ನ ಜನನನವಾಯ್ತೆಂದು ಹಿರಿಯರು ಹೇಳಿದ್ದಾರೆ. ಅದು ನಿಜವಿರಲೇಬೇಕು. ನನ್ನ ಗಮನಕ್ಕೆ ಬಂದುದು ಆ ಹಿರಿಯರ ಮಾತಿನಿಂದಲೇ! ಅಂದು ಶನಿವಾರ. ನನ್ನ ತಂದೆ-ತಾಯಂದಿರು, ನನ್ನ ಅಜ್ಜನ ಹೆಸರಾದ "ನಾಗಪ್ಪಯ್ಯ" ಎಂಬ ನಾಮಕರಣ ಮಾಡಿದ್ದರು. ಅದು, ಶಾಲೆಗೆ ಸೇರಿದಾಗ "ನಾಗಪ್ಪ ಐತಾಳ" ಎಂದು ಕೊಂಚ ಬದಲಾವಣೆಯಾಗಿತ್ತು. ಮುಂದೆ ನಾನು ಅಮೆರಿಕಕ್ಕೆ ವಲಸೆ ಬಂದಾಗ, "ನಾಗ ಐತಾಳ" ಎಂದು ಚುಟುಕು form ತಳೆದಿತ್ತು. ಈ ಬದಲಾವಣೆಗಳೆಲ್ಲವೂ ನನಗೆ ಬುದ್ಧಿ ಬಂದಮೇಲಾದುದಾದುದರಿಂದ ನನ್ನ ಗಮನಕ್ಕೆ ಬಿದ್ದಿರುತ್ತದೆ.

ನಾನು ಹುಟ್ಟಿದ್ದು ಶನಿವಾರವೆಂದೆ. ನಮ್ಮ ನಂಬಿಕೆಯ ಪ್ರಕಾರ ಶನಿವಾರ ಒಂದು ಶುಭದಿನವಲ್ಲ. ಆದರೆ, ನಾನಿಂದು ಈ ಹಂತದಲ್ಲಿ ಯೋಚಿಸುತ್ತಿದ್ದೇನೆ: ಶನಿವಾರ ನನಕೆ ಕೆಟ್ಟದು ಮಾಡಿದೆಯೇ? - ಎಂದು. ನನಗೆ ಅನಿಸುತ್ತದೆ - ನನ್ನ ಬದುಕಿಗೆ, ಈ ಶನಿವಾರದಿಂದಾಗಿ, ಶನಿ ಕಾಟವಿದ್ದಿಲ್ಲವೆಂದು. 

ಹಾಗೆ ನೋಡಿದಲ್ಲಿ ಬದುಕು, ಸಿಹಿ-ಕಹಿ, ಕಷ್ಟ ಸುಖ, ಮುಂತಾದ ವೈರುದ್ಯಗಳಿಂದಲೇ ಸಾಗಬೇಕಲ್ಲವೇ? ಇಂತಹ ವೈರುದ್ಯಗಳು ಮಾನವ ಬದುಕಿನೊಡನೆ ಹೆಣೆದು ಬಂದಿವೆ. ಅದನ್ನು ನಾವು ಒಪ್ಪಿಕೊಂಡೇ ಬದುಕನ್ನು ಸಾಗಿಸಿಕೊಂಡು ಬರಬೇಕಾಗಿದೆ. ಎಲ್ಲರಂತೆ ಅದೇ ಕೆಲಸವನ್ನು ನಾನೂ ಮಾಡಿದ್ದೇನೆ, ಮುಂದುವರೆದಿದ್ದೇನೆ. ನನ್ನ ಬದುಕು ಸಾರ್ಥಕ ಪಡೆದಿದೆಯೇ ಎಂಬ ಪ್ರಶ್ನೆಗೆ, ನನ್ನ ಉತ್ತರವಿಷ್ಟೆ! "ಸಾರ್ಥಕತೆ" ಎಂಬುದು ಅವರವರ ನಂಬಿಕೆಯ ಮೇಲೆ ಹೊಂದಿಕೊಂಡಿರುತ್ತದೆ. ನಮ್ಮ ನಿರೀಕ್ಷೆಯ ಗಾತ್ರ ದೊಡ್ಡದಾಗಿದ್ದರೆ, ಕೆಲವೊಮ್ಮೆ ನಮ್ಮ ಮನಸ್ಸಿನಲ್ಲೇಳುತ್ತದೆ - ನಾನಿನ್ನೂ ಯಶಸ್ಸು ಗಳಿಸಬಹುದಾಗಿತ್ತು - ಎಂದು. ಯಶಸ್ಸು ನಮ್ಮ ಪ್ರಯತ್ನದ ಫಲ. ಹಾಗಾಗಿ, ನಮ್ಮ ಪ್ರಯತ್ನಕ್ಕೆ ಸರಿಯಾಗಿ ಯಶಸ್ಸು ಸಿಗುತ್ತದೆ. ಅದರಿಂದ, ನಾವು ತೃಪ್ತಿ ಪಡೆಯುತ್ತೇವೆ. ಈ ತೃಪ್ತಿ, ಬದುಕಿನ ಸಾರ್ಥಕತೆಯ ಮಾಪನವೆಂದು ಹೇಳಬಹುದೇ?
ಬದುಕಿನಲ್ಲಿ ಪಡೆದ ಅನುಭವಗಳು ನಮ್ಮತೃಪ್ತಿಗೆ ಒಂದು indicator ಎಂದು ಹೇಳಬಹುದೇನೋ! 

ಹುಟ್ಟೂರು ಕೋಟದಲ್ಲಿ ನನ್ನ ತಾಯಿ-ತಂದೆಯರ ಆಶ್ರಯದಲ್ಲಿ ನನ್ನ ಬದುಕು ತೃಪ್ತಿಯಿಂದಲೇ ಸಾಗಿತು. ಬಾಲ್ಯದಲ್ಲಿ ನಡೆದ ಹಲವಾರು ಸಂಗತಿಗಳು ನನಗೆ ತುಂಬಾ ತೃಪ್ತಿಕೊಟ್ಟಿವೆ. ನನ್ನ ತಂದೆ-ತಾಯಿಯರು ನನ್ನ ಬದುಕಿಗೊಂದು proper shape ಕೊಡಲೆಂದು ಮಾಡಿದ ಪ್ರಯತ್ನಕ್ಕಾಗಿ ನಾನು ಚಿರಋಣಿ. ಕೋಟದಲ್ಲಿ ನನ್ನ ಪ್ರಾಥಮಿಕ ವಿದ್ಯಾಭ್ಯಾಸ ಕಾಲದಲ್ಲಿ, ಅನೇಕ ಗೆಳೆಯರು ನನ್ನ ತೃಪ್ತಿಗೆ ಕಾರಣರಾಗಿದ್ದಾರೆ. ನನ್ನ ಗುರುಗಳು ನನ್ನ ಬದುಕನ್ನು ರೂಪಿಸಲು ವಿಶಿಷ್ಟ ಭಾಗ ವಹಿಸಿದ್ದಾರೆ. ನನ್ನ ಮನಸ್ಸಿಗೆ ಥಟ್ಟನೆ ಬರುವ ಗುರುಗಳೆಂದರೆ, ಶಂಕರನಾರಾಯಣ ತುಂಗರೆಂಬವರು. ನನಗೆ "ಅ, ಆ, ಇ, ಈ...." ಅಕ್ಷರಭ್ಯಾಸ ಮಾಡಿ ನನ್ನ ವಿದ್ಯೆಗೆ, ಹಾಗೂ ನನ್ನ "ಅಭ್ಯುದಯ"ಕ್ಕೆ ನಾಂದಿ ಹಾಕಿದವರು, ಅವರು. ಮುಂದೆ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಬೆಂಗಳೂರಿಗೆ ಬಂದಾಗ ಹಲವರು ನನ್ನ ತೃಪ್ತಿಗೆ ಕಾರಣರಾಗಿದ್ದಾರೆ. ಅಂತೆಯೇ BHU ನಲ್ಲಿ, Indian Institute of Scienceನಲ್ಲಿಯೂ ಹಲವು ಸ್ನೇಹಿತರುಗಳ ಸಂಪಾದನೆ, ನನ್ನ ಭಾಗ್ಯವೆಂದೇ ತಿಳಿದಿದ್ದೇನೆ. ನನಗೆ Ph.D. ಸಿಗಲು ಕಾರಣರಾದ ನನ್ನ mentor, ಡಾ. ಟಿ. ರಾಮಶರ್ಮ ಅವರನ್ನು ನಾನು ಮರೆಯಲಾರೆ! 

ಮುಂದೆ ನನ್ನ ಬಯೋಕೆಮಿಸ್ಟ್ರಿ ಸಂಶೋಧನಾ ಪರಿಣಿತಿಯನ್ನು ಹೆಚ್ಚಿಸಿಕೊಳ್ಳಲು, ಅಮೆರಿಕಕ್ಕೆ ಬದಮೇಲೆ ನನ್ನ ಅನುಭವಗಳು (both tecnical and life style) ತುಂಬಾ ಹೆಚ್ಚಿವೆಯೆಂದೇ ಹೇಳಬಹುದು. ಅಮೆರಿಕ ನನ್ನ ನೆಲೆಸಿದ ಮನೆಯಾಗಿದೆ. ಅಮೆರಿಕದಲ್ಲಿ ಪಡೆದ ಅನುಭವಗಳಿಗೆ ಅನೇಕರು ಪಾಲ್ದಾರರಾಗಿರುತ್ತಾರೆ. ಶಿಕಾಗೋದಲ್ಲಿ ಕಳೆದ ದಿನಗಳು, ಅಲ್ಲಿನ ಅನುಭವಗಳು ನನ್ನ ಸ್ಮರಣೆಯಲ್ಲಿ ಚಿರಕಾಲ ಉಳಿಯುವುದಂತೂ ನಿಜ! ಹಾಗೆಯೇ, ಲಾಸ್ ಏಂಜಲಿಸ್‌ನಲ್ಲೂ ಅನೇಕ ಸ್ನೇಹಿತರನ್ನು ಸಂಪಾದಿಸಿದ್ದೇನೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೇನೆ. ಅಮೆರಿಕದಲ್ಲಿ ಪಡೆದ ಅಮೂಲ್ಯ ಅನುಭವಗಳು ಬದುಕಿಗೊಂದು ಬೆರೆಯೇ ದಿಕ್ಕನ್ನು ಸೂಚಿಸಿ, ನನ್ನ ಬದುಕು ರೂಪುಗೊಳ್ಳಲು "ಹೊಸತನ"ವನ್ನು ನೀಡಿದೆ. ಅದಕ್ಕಾಗಿ ನನಗೆ ವಿಶೇಷ ತೃಪ್ತಿ ಇದೆ.
ಇನ್ನು ನನ್ನ scientific carrier ನಲ್ಲಿ ಸಾಕಷ್ಟು ತೃಪ್ತಿ ದೊರಕಿದೆ. ೪೨ಕ್ಕೂ ಮಿಕ್ಕಿ ಸಂಶೋಧನಾ ಪ್ರಬಂಧಗಳನ್ನು ವಿವಿಧ journalಗಳಲ್ಲಿ ಪ್ರಕಟಿಸಿದ್ದೇನೆ. 

ನಿವೃತ್ತನಾದ ಮೇಲೆ (೨೦೦೧ರಲ್ಲಿ) ಕನ್ನದ ಸಾಹಿತ್ಯದಲ್ಲಿ ಆಸಕ್ತಿ ಹುಟ್ಟಿಬಂದುದಿದು, ನನ್ನ ಬದುಕಿನ ತಿರುವಿನಲ್ಲೊಂದು. ಹೆಚ್ಚಾಗಿ ನನ್ನ ವಿಷಯಗಳನ್ನೇ "ಹೇಳಿಕೊಳ್ಳಲು" ನನ್ನ ಮನಸ್ಸು ಅಂಜುತ್ತದೆ. ಆದರೆ, ನಿವೃತ್ತನಾದಮೇಲೆ ಇದುವರೆಗೆ, ೯ ಸಂಪಾದಿತ ಗ್ರಂಥಗಳನ್ನೂ (ಕಾರಂತ, ಕುವೆಂಪು, ಮಾಸ್ತಿ, ಪುತಿನ, ಮೊದಲಾದವರ ಮೇಲೆ) ೯ ಸ್ವಂತ ಪ್ರಕಟಣೆಗಳನ್ನೂ (ಕಥೆ, ಪ್ರಬಂಧ, etc) ಪ್ರಕಟಿಸಿದ್ದೇನೆ. ಇದೊಂದು ಹೆಗ್ಗಳಿಯ ಮಾತು ಎಂದೆನಿಸಬಹುದು. ಆದರೆ ವಾಸ್ತವ ಸಂಗತಿ.

ತೃಪ್ತಿಯ ವಿಚಾರ ಹೇಳುವಾಗ, ನನ್ನ ಸಂಸಾರಿಕ ವಿಚಾರ ಹೇಳದಿದ್ದರೆ, ಅದು ಪೂರ್ತಿಯಾಗುವುದಿಲ್ಲ. ನನ್ನ ೨೮ನೆಯ ವಯಸ್ಸಿನಲ್ಲಿ ನನ್ನ ಸಧರ್ಮಿಣಿಯಾಗಿ, ಲಕ್ಷ್ಮಿ ನನ್ನ ಬದುಕಿಗೆ ಬಲಗೈಯಾಗಿ ಬಂದು ನಿಂತಳು. ಮಲೆನಾಡಿನ ಮೇಳಿಗೆಯಲ್ಲಿ  ಹುಟ್ಟಿದ ಅವಳು, ನನ್ನ ಕೈ ಹಿಡಿದು, ನನ್ನ ಜೀವನದ ಸಹಭಾಗಿಯಾಗಿ, ನನ್ನ ಬದುಕಿನಲ್ಲಿ ಬೆರೆತಳು. ಹಳ್ಳಿಯಲ್ಲಿ ಬೆಳೆದಿದ್ದರೂ, ಅಮೆರಿಕದ ಪಟ್ಟಣ ವಾಸಕ್ಕೆ ಅವಳು ಹೊಂದಿಕೊಂಡ ಬಗೆ ನಿಜಕ್ಕೂ ಶ್ಲಾಘನೀಯ! ಬದುಕಿನ ಏರಿಳಿತಗಳಲ್ಲಿ ಸದಾ ಸಹಭಾಗಿಯಾಗಿದ್ದು, ನನ್ನ ಬದುಕು ರೂಪುಗೊಳ್ಳಲು, ಅವಳ ಸ್ಥಾನ ವಿಶಿಷ್ಟವಾದುದು! ಅದಕ್ಕಾಗಿ ಅವಳನ್ನು ನಾನೆಷ್ಟು ಅಭಿನಂದಿಸಿದರೂ, ಅದು ಕಡಿಮೆಯೇ!  ಈ ಮಾತು ಅತಿಶಯೋಕ್ತಿಯಾಗಿ ಕಂಡು ಬಂದಲ್ಲಿ ಕ್ಷಮೆ ಇರಲಿ. ಆದರೆ ನನ್ನ ನನ್ನ ಹೃದಯಾಳದಿಂದ ಬಂದ ಮಾತುಗಳಿವು. ೧೯೭೫ರಲ್ಲಿ ಜೀವಕ್ಕೇ ಅಪಾಯವಾಗಿದ್ದ ಶಸ್ತ್ರಚಿಕಿತ್ಸೆಗೊಳಗಾಗಿದ್ದಾಗ, ನಾನವಳನ್ನು ಕಳೆದುಕೊಳ್ಳುತ್ತೇನೆಂಬ ಅಧೈರ್ಯ ನನ್ನನ್ನು ಕಾಡಿತ್ತು. ಅವಳ ದೃಢತೆಯ ಫಲಿತಾಂಶವಾಗಿ, ಅವಳು ನನಗೆ ಈವರೆಗೂ ಧೈರ್ಯ ತುಂಬಿ, ಬೆಂಬಲಿಸುತ್ತಲೇ ಇದ್ದಾಳೆ. ಅದಕ್ಕಾಗಿ ನಾನು ಅವಳಿಗೆ ಕೃತಜ್ಞ!
ನನ್ನಿಬ್ಬರು ಮಕ್ಕಳು, ಅನುರಾಧಾ, ಅರವಿಂದರು ನನ್ನ ಜೀವನವನ್ನು ಬೆಳಗಿದ್ದಾರೆ. ಅನುರಾಧಾ ಮನಃಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದು, ಕ್ಯಾಲಿಫೋರ್ನಿಯ ಸ್ಟೇಟ್‌ನಲ್ಲಿ ಉತ್ತಮ ಹುದ್ದೆಯಲ್ಲಿದ್ದಾಳೆ. ಅರವಿಂದ Law ಮುಗಿಸಿ, ನ್ಯೂಜರ್ಸಿಯಲ್ಲಿ ವಕೀಲಿ ವೃತ್ತಿಯನ್ನು ತೃಪ್ತಿಯಿಂದ ನಡೆಸುತ್ತಿದ್ದಾನೆ. ಅವನು ಕೆಲಸ ಮಾಡುತ್ತಿರುವ Law Firmನಲ್ಲಿ ಅವನು ಸೀನಿಯರ್ ಲಾಯರ್. ಇರಾನಿನ ಫಾರ್ಸಿ ಮಾತಾಡುವ, ಸೆಪಿಡ್ಹೆ ಎಂಬ ತರುಣಿಯನ್ನು ಮದುವೆಯಾಗಿ ಸುಖವಾಗಿದ್ದಾನೆ. ಅಲೆಕ್ಸಾಂಡರ್ ಕೃಷ್ಣ, ಕ್ಯಾಮರಾನ್ ಕವಿನ್ ಎಂಬಿಬ್ಬರು ಮೊಮ್ಮಕ್ಕಳು ನನ್ನ ಬಾಳಿಗೆ ಜೇನಸವಿ ನೀಡಿದ್ದಾರೆ. ಹಿರಿಯವ, ಅಲೆಕ್ಸಾಂಡರ್ ಕೃಷ್ಣ ಈ ವರ್ಷ ಶಿಕಾಗೋ ಯುನಿವರ್ಸಿಟಿಯಲ್ಲಿ ಗ್ರಾಜುಯೇಟ್ ಮಾದುತ್ತಿದ್ದಾನೆ ಚಿಕ್ಕವನು ಹೈಸ್ಕೂಲಿಗೆ ಹೋಗುತ್ತಾನೆ.

ಹೌದು. ಜೀವನ ಏರಿಳತಗಳಲ್ಲೇ ಸಾಗುತ್ತವೆ. ಕಷ್ಟ-ಸುಖಗಳೆರಡನ್ನು ಸಮತೋಲನದಲ್ಲಿ ಕಾಣುವ ನಿಲುವು ನಮ್ಮದಾಗಿರಬೇಕಲ್ಲವೇ? ಹಿಂದೊಮ್ಮೆ ಹವ್ಯಾಸಕ್ಕೆಂದು ಬರೆದ ಕವನದ ತುಣುಕೊಂಡು ಜ್ಞಾಪಕಕ್ಕೆ ಬರುತ್ತಿದೆ:

"ವರ"ವಿನ್ನೇನು ಬೇಕು, ಇಳಿವಯಸಿನ ಈ ಗಡಿಯಲ್ಲಿ?
ಮಡದಿಯೊಬ್ಬಳು, ಭಾಗ್ಯದ ಲಕ್ಷ್ಮಿ, ಚಿನ್ನದ ಪುಟ
ಪಡೆದೆನು ಮುನ್ನಿ-ಪಾಪಣ್ಣರ ಸಂತಾನ ಸುಖ
ಬಡವಾಗದೆ ಬದು ಸಾಗುತ ಬಂದಿದೆ ಈ ವರೆಗೂ

ಹಾಗೆಯೇ ಇನ್ನೊಂದು ಕವನದ ತುಣುಕೂ ಜ್ಞಾಪಕವಾಗುತ್ತಿದೆ:

ಬಾಳದಾರಿಯಲಿ ಏರು-ಪೇರುಗಳು
ಮುಳ್ಳು-ಕಲ್ಲುಗಳು ಅಲ್ಲಲ್ಲಿ
ಸಾರಿ, ಸವರಿ, ಸಮತೋಲನದ
ದಾರಿ ತುಳಿಯುವುದೇ ಬಾಳಿನ ಗೆಲವು.
ಸಾಕಿನ್ನು ನನ್ನೀ ಹಿನ್ನೋಟ. ಬದುಕಿಗೆ ಹಿನ್ನೋಟವಿಲ್ಲ. ಮುನ್ನೋಟದಲ್ಲಿ ಏನೇನು ಕಾದಿರುವುದೋ ನೋಡಬೇಕಷ್ಟೆ!

--

ಇಷ್ಟೊಂದು ಸಾಧಿಸಿದ್ದರೂ ಹಿರಿಯರಾದ ಡಾ. ನಾಗ ಐತಾಳರ ಮಾತುಗಳಲ್ಲಿ ನಮ್ರತೆಯಿದೆ.  ಜೀವನ ಪ್ರೀತಿಯಿದೆ, ಜೀವನದ ಬಗ್ಗೆ ಗೌರವವಿದೆ.

Dr. Naga Aithal 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ