ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಂಗ್ರಹ ರಾಮಾಯಣ



ಸಂಗ್ರಹ ರಾಮಾಯಣ 

ರಾಮಾಯಣ ಪಾರಾಯಣ ಎನ್ನುವುದು ನಾವೆಲ್ಲ ಬಾಲ್ಯದಲ್ಲಿದ್ದಾಗ ನಿರತ ಕೇಳುತ್ತಿದ್ದ ಸಾಂಸ್ಕೃತಿಕ ನುಡಿ.  ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಬದುಕಿನ ಕುರಿತಾದ ಮಾತುಗಳನ್ನು ಓದಿದವರಿಗೆ ಇದು ಅವರ ಬದುಕಲ್ಲಿ ಎಷ್ಟು ಆವರಿಸಿತ್ತು ಎಂಬುದು ತಿಳಿದಿರುತ್ತೆ.  ಬಹುಶಃ ಅಂತದ್ದೇ ವಾತಾವರಣ ನನ್ನ ತಂದೆ ತಾಯಿಗಳಲ್ಲಿ ಇತ್ತು.  ದಸರಾ ಸಂದರ್ಭದಲ್ಲಂತೂ ರಾಮಾಯಣವನ್ನು ಓದಿ ಶ್ರೀರಾಮ ಪಟ್ಟಾಭಿಷೇಕವನ್ನು ವಿಜಯದಶಮಿ ಸಂದರ್ಭದಲ್ಲಿ ಆಚರಿಸುವುದು ಕೂಡ ಅಂದಿನ ದಿನಗಳಲ್ಲಿನ ಒಂದು ಸಾಂಸ್ಕೃತಿಕ ಸಂಪ್ರದಾಯ.  

ಇಂದಿನ ಯುಗದಲ್ಲಿ ಶ್ರೀ ರಾಮನ ಕಥೆಯಲ್ಲಿ  ಪುರುಷೋತ್ತಮನಾದ ಶ್ರೀರಾಮನ ನಡೆ ಎಷ್ಟರಮಟ್ಟಿಗೆ ಸರಿ ಇತ್ತು ಎಂಬ ವಾದಗಳು ಜನಪ್ರಿಯಗೊಳ್ಳುತ್ತಿವೆ.  ಅದೇನೇ ಇರಲಿ, ಈ ವಾದಗಳು ಇಲ್ಲದಿದ್ದ ಅಂದಿನ ಸಾಂಸ್ಕೃತಿಕ ವಾತಾವರಣದಲ್ಲಿ  ಇಂದಿನ ವೈಭವೀಕರಣದ ಜೀವನದಲ್ಲಿ ಇಲ್ಲದಿರುವ ನಲ್ಮೆ, ಸಂಯಮ ಮತ್ತು ಸಂತಸಗಳ ಒಂದು ಹುರುಪಿತ್ತು ಎಂದು ನನಗನ್ನಿಸುತ್ತಿದೆ.  

ನಮ್ಮ ತಂದೆ ಪಂಡಿತ ತಿರು ಶ್ರೀನಿವಾಸಾಚಾರ್ಯರು, ಶ್ರೀರಾಮ ದೇಗುಲಗಳಲ್ಲಿ ಪುರಾಣ. ಗಮಕ, ಸಂಗೀತ, ಸಾಹಿತ್ಯ, ಕಲೆ ಮುಂತಾದ ಸಾಂಸ್ಕೃತಿಕ ಉತ್ಸವಗಳ ಸಂಚಾಲಕರಾಗಿ ತಮ್ಮ ಶಿಕ್ಷಕ ವೃತ್ತಿಯ ಹೊರಗಿನ ವೇಳೆಯನ್ನು ಬಹುತೇಕವಾಗಿ ಅದಕ್ಕಾಗಿ ಧಾರೆ ಎರೆದಿದ್ದವರು.  

ನಾನು ನನ್ನ ಹುಟ್ಟು ಮತ್ತು ನಾಲ್ಕನೇ ತರಗತಿಯವರೆಗಿನ ಬಾಲ್ಯ ಕಳೆದದ್ದು ಹಾಸನದಲ್ಲಿ.  ಅಂದಿನ ದಿನಗಳಲ್ಲಿ ಅಲ್ಲಿನ 'ನಾರ್ಥರನ್ ಎಕ್ಸ್ಟೆನ್ಷನ್' ಎಂಬ ಬಡಾವಣೆ ಊರಿನ ಬಸ್ ಸ್ಟಾಂಡ್ ಇಂದ ಉದ್ಯಾನವನವನ್ನು ದಾಟಿ ಬಂದರೆ ಸಿಗುತ್ತಿತ್ತು.  ಆ ಬಡಾವಣೆಯ ಪ್ರವೇಶದಲ್ಲಿ ಒಂದು ಸುಂದರ ಆಂಜನೇಯನ ಗುಡಿ ಇತ್ತು.  ಆ ದೇಗುಲದ ಪ್ರಾಕಾರ ತುಂಬಾ ಸುಂದರವಾದದ್ದಾಗಿತ್ತು.   (ಇದು ಟೀಕೆ ಅಂತ ಅಲ್ಲ. ಕೆಲವು ವರ್ಷದ ಹಿಂದೆ ಆಸೆಯಿಂದ ಆ ದೇಗುಲಕ್ಕೆ ಹೋದಾಗ, ಅಲ್ಲಿ ಇಂಚಿಂಚೂ ದೇವರುಗಳ  ಗೂಡುಗಳನ್ನು ಕಟ್ಟಿರುವುದರಿಂದ ಅಲ್ಲಿ ಹಳೆಯ ಸೌಂದರ್ಯಭಾವದ  ಅನುಭಾವ ಪೂರ್ತಿ ಕಳೆದುಹೋಗಿದೆ ಅನಿಸಿತು.)

ಅಂದಿನ ಆ ದೇಗುಲದ ಆವರಣದಲ್ಲಿ ಅತ್ಯಂತ ಶ್ರೇಷ್ಠ ಮಾದರಿಯ ಸಾಂಸ್ಕೃತಿಕ ವಾತಾವರಣ ಇತ್ತು. ಕನ್ನಡ ವಿದ್ವಾಂಸರಾಗಿದ್ದ ನಮ್ಮ ತಂದೆ ಅವರಲ್ಲದೆ,  ಸಂಸ್ಕೃತ ಮತ್ತು ಕನ್ನಡ ವಿದ್ವಾಂಸರಾದ ಶ್ರೀನಿವಾಸ ದೇಶಿಕಾಚಾರ್, ಸುಶ್ರಾವ್ಯ ಗಮಕದ ಜಯಮ್ಮ ,  ಗೊರೂರು  ರಾಮಸ್ವಾಮಿ ಅಯ್ಯಂಗಾರ್ ಅವರ ಸಹೋದರ ನರಸಿಂಹ ಅಯ್ಯಂಗಾರ್, ಶ್ರೀನಿವಾಸ ಅಯ್ಯಂಗಾರ್, ದೇಗುಲವನ್ನ ಶುಚಿಯಿಂದ ನೋಡಿಕೊಳ್ಳುತ್ತಿದ್ದ ಸಂಸ್ಕೃತ ವಿದ್ವಾಂಸ ರಾಮಚಂದ್ರಾಚಾರ್, ಹಾಸನದ  ಮುನಿಸಿಪಲ್ ಆಡಳಿತ ಅಧಿಕಾರಿಗಳಾಗಿದ್ದ ಕೃಷ್ಣಪ್ಪ, ಮುಂದೆ  ಆ ದೇಗುಲಕ್ಕೆ ಶ್ರಮಿಸಿದ ಅಂದಿನ ಯುವಕ ಶ್ರೀಕಂಠಯ್ಯ, ತಬಲಾ ತಿಮ್ಮಪ್ಪಯ್ಯ ಎಂದು ಹೆಸರಾದ ಸಂಗೀತ ಮತ್ತು ಚಿತ್ರ ಕಲಾವಿದ, ಹೀಗೆ  ಕೆಲವು ಪ್ರಮುಖ ಹೆಸರುಗಳು ನೆನಪಾಗುತ್ತಿವೆ.  (ಇವೆಲ್ಲ ನನ್ನ ಬಾಲ್ಯದ ೫ ರಿಂದ ೮ ವಯಸ್ಸಿನ ನೆನಪುಗಳಾಗಿರುವುದರಿಂದ ಇದಕ್ಕಿಂತ ಹೆಚ್ಚು ಹೆಸರುಗಳನ್ನು ಹೇಳುವುದು ಕಷ್ಟ. ) ಆ ದೇಗುಲದ ಪ್ರಾಕಾರದಲ್ಲಿ ದಿನನಿತ್ಯ ಸಂಸ್ಕೃತ ಪಾಠ ನಡೆಯುತ್ತಿತ್ತು.  ಶ್ರೀನಿವಾಸ ದೇಶಿಕಾಚಾರ್ ಅವರಿಂದ ಪುರಾಣ, ಜಯಮ್ಮ ಅವರ ಗಮಕ ವಾಚನ, ವಿದ್ವಾನ್ ಲಕ್ಷ್ಮಣ ಶಾಸ್ತ್ರಿ ಅವರ ಸಂಗೀತ ಇವೆಲ್ಲವೂ ದಿನನಿತ್ಯದ ಕಾರ್ಯಕ್ರಮಗಳಂತಿದ್ದರೆ, ವಿದ್ವಾನ್ ಬಿ. ಎಸ್. ರಾಜ ಅಯ್ಯಂಗಾರ್ ಅವರ ಸಂಗೀತ, ಹಲವು ದಿನಗಳವರೆಗೆ ಹರಿಕಥಾ ವಿದ್ವಾನ್ ವಿಮಲಾನಂದ ದಾಸರಿಂದ ಹರಿಕಥೆ ಮುಂತಾದ ಕಾರ್ಯಕ್ರಮಗಳು ಜರುಗಿದ್ದು ನೆನಪಾಗುತ್ತವೆ.  ಈ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳ ಉತ್ಸವ ನಿರ್ವಹಣೆಯನ್ನು ಸಂಚಾಲಕರಾಗಿದ್ದ ನಮ್ಮ ತಂದೆ ಪಂಡಿತ ಶ್ರೀನಿವಾಸಾಚಾರ್ಯರು ನಿರ್ವಹಿಸುತ್ತಿದ್ದರು.  

ಅಂದಿನ ಆ ಸುಂದರ ಆಂಜನೇಯನ ಗರ್ಭಗುಡಿಯಲ್ಲಿ, ಆಂಜನೇಯನ ವಿಗ್ರಹದ  ಹಿಂದೆ ಅದಕ್ಕೆ ಹೊಂದಿಕೊಂಡ ಹಾಗೆ ಸೀತಾರಾಮ ಲಕ್ಶ್ಮಣರಿಗಾಗಿಯೇ ಮಾಡಿಸಿದ್ದಂತ ಎತ್ತರದ ಪೀಠ ಇತ್ತು.  ಆದರೆ  ಹಾಗೆ ಅಂತಹ ಶೀಲಾ ವಿಗ್ರಹಗಳನ್ನು ಮಾಡಿಸುವುದು ಅಂದಿನ ಹಣಕಾಸಿನ ಬಡತನದ ಯುಗದಲ್ಲಿ ಹರಸಾಹಸವಾಗಿತ್ತು.  ಒಂದು, ಎರಡು, ಮೂರು, ಐದು ಮತ್ತು ಹೆಚ್ಚು ಎಂದರೆ  ಹತ್ತು ಪೈಸೆ ಮಂಗಳಾರತಿ ತಟ್ಟೆಗೆ ಬೀಳುವುದೇ ಹೆಚ್ಚಿತ್ತು.  ಇಂತಹ ಕಾಲದಲ್ಲಿ  ಆಂಜನೇಯನ ಬಳಿಗೆ ಸೀತಾ, ರಾಮಲಕ್ಹ್ಮಣರನ್ನು ಕರೆತರುವ ಭಗೀರಥ ಪ್ರಯತ್ನದ ಒಂದು ಅಂಗ ನಮ್ಮ ತಂದೆಯವರು ರಚಿಸಿದ  ಈ 'ಸಂಗ್ರಹ ರಾಮಾಯಣ' ಕೃತಿ.  ಈ ಕೃತಿಯನ್ನು ಪುಟಾಣಿ ಪುಸ್ತಕವನ್ನಾಗಿ ಮುದ್ರಿಸಿ ಅದನ್ನು ಎಲ್ಲರಿಗೆ ನಾಲ್ಕಾಣೆಗೆ ಮಾರಿ ಬಂದ  ಹಣವನ್ನು ವಿಗ್ರಹಸ್ಥಾಪನೆ ಯೋಜನೆಗೆ ಬಳಸಲಾಯ್ತು.  ಈ ಕೃತಿ ಮಾರಾಟಮಾಡಲು ಹಾಸನದ ವಸ್ತುಪ್ರದರ್ಶನ ಸಮಯದಲ್ಲಿ ಒಂದು ಮಳಿಗೆಯನ್ನು ಸ್ಥಾಪಿಸಿ ಅಲ್ಲಿ ಸುಂದರ ಶ್ರೀ ರಾಮ, ಸೀತೆ, ಲಕ್ಷ್ಮಣ, ಆಂಜನೇಯರ ಮಣ್ಣಿನ ವಿಗ್ರಹಗಳನ್ನು  ದೇವಸ್ಥಾನದಲ್ಲಿ ನಿರ್ಮಾಣ ಮಾಡುವ ಕಲ್ಲಿನ ವಿಗ್ರಹಗಳ ಮಾದರಿಯಾಗಿ   ಇರಿಸಲಾಗಿತ್ತು.  ಆ ವಿಗ್ರಹಗಳು ಎಷ್ಟು ಸುಂದರವಾಗಿದ್ದವೆಂದರೆ ಎಲ್ಲ ಪ್ರಸಿದ್ಧ ರಾಮೋತ್ಸವಗಳಲ್ಲೂ  ಅದನ್ನು ಕೊಂಡೊಯ್ದು ಪೂಜೆಗೆ ಬಳಸಲಾಗುತ್ತಿತ್ತು.  ಮುಂದೆ ನಾವು ಮೈಸೂರಿಗೆ ವಾಸ್ತವ್ಯ ಬದಲಿಸಿದಾಗ ಚಾಮರಾಜಪುರದ ಪ್ರಸಿದ್ಧ ಅರಳಿಕಟ್ಟೆ ರಾಮೋತ್ಸವ ಸಂಗೀತ ಕಾರ್ಯಕ್ರಮಗಳ ಮಂಟಪಕ್ಕೆ ನಮ್ಮ ಮನೆಯ ಈ ವಿಗ್ರಹಗಳು ಪ್ರತಿವರ್ಷ ಹೋಗುತ್ತಿದ್ದವು.

ಈ ಎಲ್ಲ ಪ್ರಯತ್ನಗಳ ದೆಸೆಯಿಂದ, ಅಂದು ರಾಜಕೀಯದಲ್ಲಿದ್ದ  ಜ್ವಾಲನ್ನಯ್ಯ ಅವರೂ ಸೇರಿದಂತೆ ಹಲವರ ಬೆಂಬಲ ಮತ್ತು 'ಸಂಗ್ರಹ ರಾಮಾಯಣ' ಪುಸ್ತಕ ಕೊಂಡು ಬೆಂಬಲಿಸಿದ ಹೃದಯಗಳ ಬೆಂಬಲದಿಂದ ಆಂಜನೇಯ ದೇಗುಲ ಶ್ರೀ ಸೀತಾರಾಮಾಂಜನೇಯ ದೇಗುಲವಾಗಿ ಕಂಗೊಳಿಸಿ ಇನ್ನೂ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳ ಕೇಂದ್ರವಾಯ್ತು.

ಈ 'ಸಂಗ್ರಹ ರಾಮಾಯಣ' ಕೃತಿಯು ರಾಮಾಯಣ ಕಥೆಯನ್ನು ಸುಲಭ ಸುಂದರವಾಗಿ ಹೇಳಿದೆ ಮಾತ್ರವಲ್ಲದೆ ಶ್ರೀ ರಾಮಚಂದ್ರನ ಸೇವೆಯನ್ನೂ ಶ್ರದ್ಧೆಯಿಂದ ಮಾಡಿದೆ. 

ಸಂಗ್ರಹ ರಾಮಾಯಣ
ರಚನೆ: ಪಂಡಿತ ತಿರು ಶ್ರೀನಿವಾಸಾಚಾರ್ಯ

ಬಾಲಕಾಂಡ

ತ್ರೇತಾಯುಗದಲ್ಲಿ ಕೋಸಲ ದೇಶಕ್ಕೆ ಚಕ್ರವರ್ತಿಯಾದ ದಶರಥನು ಅಯೋಧ್ಯೆಯಲ್ಲಿ ರಾಜ್ಯವಾಳುತ್ತಿದ್ದನು.  ಈತನಿಗೆ ಅನೇಕ ಕಾಲ ಮಕ್ಕಳಿಲ್ಲದುದರಿಂದ ಅಶ್ವಮೇಧಯಾಗವನ್ನು ಮಾಡಿದನು.  ಈ ಯಾಗದಲ್ಲಿ ಅಗ್ನಿಯು ಪ್ರತ್ಯಕ್ಷನಾಗಿ ಪಾಯಸ ತುಂಬಿದ ಚಿನ್ನದ ಪಾತ್ರೆಯನ್ನು ಕೊಟ್ಟು ಮಕ್ಕಳಾಗುವುದೆಂದು ಆಶೀರ್ವದಿಸಿದನು.

ದಶರಥನು ಆ ಪಾಯಸವನ್ನು ತನ್ನ ಮೂವರು ಹೆಂಡತಿಯರಾದ ಕೌಸಲ್ಯೆ, ಕೈಕೆ ಮತ್ತು ಸುಮಿತ್ರೆಯರಿಗೆ ಕೊಟ್ಟು ಹಂಚಿಕೊಳ್ಳಲು ತಿಳಿಸಿದನು.  ಅವರು ಆ ಪಾಯಸವನ್ನು ಸೇವಿಸಿದ ಮೇಲೆ ಶುಭಮುಹೂರ್ತದಲ್ಲಿ ಶ್ರೀ ಮಹಾವಿಷ್ಣುವು ಬೇರೆ ಬೇರೆ ಅಂಶಗಳಿಂದ ಅವರಲ್ಲಿ ಅವತರಿಸಿದನು.

ದೇವತೆಗಳು ರಾವಣಾದಿ ರಾಕ್ಷಸರ ಬಾಧೆಯನ್ನು ತಡೆಯಲಾರದೆ ವೈಕುಂಠ ಲೋಕದಲ್ಲಿದ್ದ ಶ್ರೀಮನ್ನಾರಾಯಣನ ಮೊರೆಹೊಕ್ಕಿದ್ದರು.  ಮಹಾವಿಷ್ಣುವು ದೇವತೆಗಳಿಗೆ ಕೊಟ್ಟ ಭರವಸೆಯಂತೆ, ಮನುಷ್ಯನ ರೂಪದಲ್ಲಿ ಈಗ ದಶರಥನ ಮಗನಾಗಿ ಕೌಸಲ್ಯೆಯಲ್ಲಿ ರಾಮನಾಗಿ ಅವತರಿಸಿದನು.  ಕೈಕೆಗೆ ಭರತನೂ, ಸುಮಿತ್ರೆಗೆ ಲಕ್ಷ್ಮಣ-ಶತ್ರುಘ್ನರೂ ಮಕ್ಕಳಾದರು.

ದಶರಥನ ಮಕ್ಕಳಾದ ಶ್ರೀರಾಮಾದಿಗಳು ದಿನೇದಿನೇ ಅಭಿವೃದ್ಧಿ ಹೊಂದುತ್ತಾ ಸಕಲವಿದ್ಯೆಗಳನ್ನು ಕಲಿತರು.  ಅವರೆಲ್ಲರೂ ಗುಣವಂತರಾಗಿ ಅನ್ಯೋನ್ಯ ಮೈತ್ರಿಯಿಂದ ಬೆಳೆದರು.  ಗುಣವಂತರೂ ಮತ್ತು ಶಕ್ತಿವಂತರೂ ಆದ ಮಕ್ಕಳನ್ನು ನೋಡಿ ದಶರಥನಿಗೆ ಆದ ಆನಂದ ಹೇಳತೀರದು.  

ರಾಮನಿಗೆ ಇನ್ನೂ ಹದಿನಾರು ವರ್ಷ ವಯಸ್ಸಾಗದಿದ್ದಾಗಲೇ ಒಂದು ದಿನ ವಿಶ್ವಾಮಿತ್ರ ಮಹರ್ಷಿಯು ದಶರಥನ ಬಳಿಗೆ ಬಂದು ತನ್ನ ಯಾಗ ಸಂರಕ್ಷಣೆಗಾಗಿ ಮಹಾಶಕ್ತನಾದ ರಾಮನನ್ನು ತನ್ನೊಡನೆ ಕಳುಹಿಸಿ ಕೊಡುವಂತೆ ತಿಳಿಸಿದನು.  ಪುತ್ರ ವ್ಯಾಮೋಹದಿಂದ ದಶರಥನಿಗೆ ರಾಮನನ್ನು ಅಗಲಿರುವುದು ಕಷ್ಟವಾಯಿತಾದರೂ, ರಾಜಪುರೋಹಿತರಾದ ವಸಿಷ್ಠರ ಅಣತಿಯಂತೆ ರಾಮನನ್ನು ವಿಶ್ವಾಮಿತ್ರನಿಗೆ ಒಪ್ಪಿಸಿದನು.

ಬಾಲ್ಯದಿಂದಲೂ ರಾಮನೂ ಲಕ್ಷ್ಮಣನೂ ಹೊಂದಿಕೊಂಡು ಬೆಳೆದವರಾದುದರಿಂದ ಆಗ ರಾಮನೊಡನೆ ಲಕ್ಷ್ಮಣನೂ ವಿಶ್ವಾಮಿತ್ರರನ್ನು ಹಿಂಬಾಲಿಸಿದನು.  ದಾರಿಯಲ್ಲಿ ವಿಶ್ವಾಮಿತ್ರರು ಬಲಾ, ಅತಿಬಲಾ ಎಂಬೆರಡು ಮಂತ್ರಗಳನ್ನು ಉಪದೇಶಿಸಲಾಗಿ, ಅವರಿಗೆ ಹೊಸಶಕ್ತಿ ಬಂದು ಹಸಿವು ಬಾಯಾರಿಕೆಗಳ ಅರಿವೇ ಇಲ್ಲದಂತಾಯಿತು.

ಗುರುವರ್ಯರನ್ನು ಹಿಂಬಾಲಿಸುತ್ತಾ ರಾಮಲಕ್ಷ್ಮಣರು ಗಂಗಾನದಿಯನ್ನು ದಾಟಿದರು.  ಗಂಗಾತೀರದಲ್ಲಿದ್ದ ಅನೇಕ ಋಷ್ಯಾಶ್ರಮಗಳನ್ನು ನೋಡಿ ಆನಂದಿಸಿದರು.  ಮುಂದೊಂದು ಭಯಂಕರ ಕಾಡಿನಲ್ಲಿದ್ದ ಲೋಕಕಂಟಕಳಾದ ತಾಟಕಿಯೆಂಬ ರಾಕ್ಷಸಿಯನ್ನು ಕೊಲ್ಲುವಂತೆ ವಿಶ್ವಾಮಿತ್ರನು ರಾಮನಿಗೆ ಆಜ್ಞಾಪಿಸಿದನು.  ಗುರುಗಳ ಅಪ್ಪಣೆಯಂತೆ ರಾಮನು ತನ್ನ ಧನುಸ್ಸಿನ ಶಬ್ದ ಮಾಡಲು, ಆ ಶಬ್ದವನ್ನು ಕೇಳಿದ ತಾಟಕಿಯು ರಾಮಲಕ್ಷ್ಮಣರ ಮೇಲೆ ಎರಗಿದಳು.  ಆಗ ಲಕ್ಮಣನು ಅವಳ ಕಿವಿಮೂಗುಗಳನ್ನು ಕತ್ತರಿಸಲು ಅವಳು ನೋವಿನಿಂದ ಕಿರುಚಿಕೊಳ್ಳುತ್ತಾ ಮಾಯಾಯುದ್ಧವನ್ನು ಮಾಡಿದಳು.  ರಾಮನು ತನ್ನ ತಂದೆಯಂತೆ ಶಬ್ದದಿಂದಲೇ ಗುರಿಹಿಡಿದು ಬಾಣ ಪ್ರಯೋಗ ಮಾಡಿ ಅವಳನ್ನು ಕೊಂದನು.

ತಾಟಕಾವಧೆಯಿಂದ ಸಂತೋಷಗೊಂಡ ವಿಶ್ವಾಮಿತ್ರರು ರಾಮಲಕ್ಷ್ಮಣರಿಗೆ ಅನೇಕ ದಿವ್ಯಾಸ್ತ್ರಗಳನ್ನು ಕೊಟ್ಟರು.  ಮುಂದೆ ಇವರು ಬಲಿಯ ತ್ಯಾಗಕ್ಕೆ ಹೆಸರಾದ ಸಿದ್ಧಾಶ್ರಮವನ್ನು ಹೊಕ್ಕರು.  ಇಂತಹ ಸಿದ್ಧಾಶ್ರಮದಲ್ಲಿ ವಿಶ್ವಾಮಿತ್ರ ಮಹರ್ಷಿಯು ಯಜ್ಞವನ್ನು ಕೈಗೊಂಡಾಗ ರಾಮಲಕ್ಷ್ಮಣರು ಹಗಲು ರಾತ್ರಿಗಳಲ್ಲಿ ಯಾಗಸಂರಕ್ಷಣೆಗೆ ಟೊಂಕಕಟ್ಟಿ ನಿಂತರು.  ಐದು ದಿನಗಳ ನಂತರ ಸುಬಾಹು ಮಾರೀಚರೆಂಬ ರಾಕ್ಷಸರು ಯಜ್ಞನಾಶಕ್ಕೆ ಪ್ರಯತ್ನಿಸಲು ರಾಮನು ಅವರಮೇಲೆ ತನ್ನ ನಿಶಿತಾಸ್ತ್ರಗಳನ್ನು ಬಿಟ್ಟನು.  ಇದರಿಂದ ಸುಬಾಹುವು ಇತರ ರಾಕ್ಷಸರೂ ತಕ್ಷಣವೇ ಪ್ರಾಣಬಿಟ್ಟರು.  ತಾಟಕಾಪುತ್ರನಾದ ಮಾರೀಚನು ಸ್ಮೃತಿತಪ್ಪಿ ಸಮುದ್ರದಲ್ಲಿ ಬಿದ್ದನು.  ಮುಂದೆ ಯಜ್ಞವು ನಿರ್ವಿಘ್ನವಾಗಿ ನಡೆದುದರಿಂದ ರಾಮಲಕ್ಷ್ಮಣರು ಸರ್ವರಿಂದ ಸ್ತುತಿಸಲ್ಪಟ್ಟರು.  

ಈ ವೇಳೆಗೆ ಮಿಥಿಲಾನಗರದಲ್ಲಿ ಜನಕರಾಜನು ಒಂದು ಯಾಗಮಾಡುತ್ತಿರುವ ವಾರ್ತೆಯು ವಿಶ್ವಾಮಿತ್ರರಿಗೆ ಮುಟ್ಟಿದುದರಿಂದ, ಅವರು ಋಷಿಪರಿವಾರದೊಂದಿಗೆ ರಾಮಲಕ್ಷ್ಮಣರನ್ನು ಕರೆದುಕೊಂಡು ಅಲ್ಲಿಗೆ ಹೊರಟರು.  ಮಾರ್ಗಮಧ್ಯದಲ್ಲಿ ವಿಶ್ವಾಮಿತ್ರರು, ಭಗೀರಥನು ಭೂಲೋಕಕ್ಕೆ ದೇವಗಂಗೆಯನ್ನು ಬಹುಪ್ರಯತ್ನಗಳಿಂದ ತಂದು, ಸಗರಪುತ್ರರಿಗೆ ಸದ್ಗತಿಯನ್ನು ಕರುಣಿಸಿದ ಸಂಗತಿಯನ್ನು ವಿವರಿಸಿದರು.  ಹಾಗೆಯೇ ಮುಂದೆ ಬರುತ್ತಿರಲಾಗಿ ಗೌತಮರ ಆಶ್ರಮವು ಸಿಕ್ಕಿತು.  ಗೌತಮರ ಶಾಪದಿಂದ ಕಲ್ಲಾಗಿದ್ದ ಅಹಲ್ಯೆಗೆ ರಾಮನ ಪಾದಸ್ಪರ್ಶದಿಂದ ಮೊದಲಿನ ರೂಪಬಂತು.  ಆ ಸಮಯಕ್ಕೆ ಗೌತಮರೂ ಅಲ್ಲಿಗೆ ಬಂದು ಅಹಲ್ಯೆಯನ್ನು ಸ್ವೀಕರಿಸಿ ಶ್ರೀರಾಮನನ್ನು ಕೊಂಡಾಡಿದರು.

ಮುಂದೆ ಸರ್ವರೂ ಮಿಥೆಲೆಗೆ ಬರಲು, ಜನಕನು ಅವರನ್ನು ಸಂತೋಷದಿಂದ ಸ್ವಾಗತಿಸಿದನು.  ಅಲ್ಲಿಯ ಪುರೋಹಿತರು ಅಹಲ್ಯೆಯ ಪುತ್ರರಾದ ಶತಾನಂದರು.  ಅವರು ರಾಮಲಕ್ಷ್ಮಣರಿಗೆ ವಿಶ್ವಾಮಿತ್ರರ ಪೂರ್ವಚರಿತ್ರೆಯನ್ನೂ ಅವರು ತಪಃಶ್ಯಕ್ತಿಯಿಂದ ಬ್ರಹ್ಮರ್ಷಿಯಾದ ಬಗೆಯನ್ನೂ ವರ್ಣಿಸಿದರು.  ವಿಶ್ವಾಮಿತ್ರರು ಜನಕರಾಜನಿಗೆ ರಾಮಲಕ್ಷ್ಮಣರ ಸಾಮರ್ಥ್ಯವನ್ನು ತಿಳಿಸಿದರು.  ಆಗ ಜನಕನು ಐದುಸಾವಿರ ಜನಗಳಿಂದ ಹೊರೆಸಿತಂದ ಶಿವ ಧನುಸ್ಸನ್ನು ತೋರಿಸಲು ಶ್ರೀರಾಮನು ಆ ದನುಸ್ಸನ್ನು ಸುಲಭವಾಗಿ ಮುರಿದನು.  ಇದನ್ನು ಕಂಡ ಸೀತೆಯ ಆನಂದಕ್ಕೆ ಪಾರವಿಲ್ಲದಂತಾಯಿತು.  ತಕ್ಷಣವೇ ಜನಕನು ಸೀತೆಯನ್ನು ರಾಮನಿಗೆ ಕೊಟ್ಟು ವಿವಾಹ ಮಾಡಲು ನಿಶ್ಚಯಿಸಿ ದಶರಥರಾಜನನ್ನು ಮಿಥಿಲೆಗೆ ಕರೆಯಿಸಿದನು.

ಆಗ ರಾಜನು ತನ್ನ ಮಗಳಾದ ಸೀತೆಯನ್ನು ರಾಮನಿಗೂ, ಊರ್ಮಿಳೆಯನ್ನು ಲಕ್ಷ್ಮಣನಿಗೂ, ತಮ್ಮನಾದ ಈಶಧ್ವಜನ ಮಕ್ಕಳಾದ ಮಾಂಡವಿಯನ್ನು ಭರತನಿಗೂ, ಶ್ರುತಕೀರ್ತಿಯನ್ನು ಶತ್ರುಘ್ನನಿಗೂ ಕೊಟ್ಟು ವೈಭವದಿಂದ ವಿವಾಹವನ್ನು ನೆರವೇರಿಸಿದನು.

ಮುಂದೆ ದಶರಥನು ತನ್ನ ಮಕ್ಕಳೊಂದಿಗೆ ಅಯೋಧ್ಯೆಗೆ ಹಿಂದಿರುಗುತ್ತಿದ್ದಾಗ ದಾರಿಯಲ್ಲಿ ಜಮದಗ್ನಿಯ ಮಗನಾದ ಪರಶುರಾಮನು ಕೋಪದಿಂದ ರಾಮನನ್ನು ಎದುರಿಸಿದನು.  ಇಪ್ಪತ್ತೊಂದು ಬಾರಿ ಕ್ಷತ್ರಿಯ ಕುಲವನ್ನೆಲ್ಲಾ ನಾಶಪಡಿಸಿದ್ದ ಬ್ರಾಹ್ಮಣನಾದ ಪರಶುರಾಮನಲ್ಲಿ ಒಂದು ಅದ್ಭುತವಾದ ವಿಷ್ಣುಧನುಸ್ಸು ಇದ್ದಿತು.  ಶ್ವೆತಧನುಸ್ಸನ್ನು ಮುರಿದ ರಾಮನು ಅದನ್ನು ಸುಲಭವಾಗಿ ಎತ್ತಿ ಬಾಣವನ್ನು ಹೂಡಲು ಪರಶುರಾಮನ ಗರ್ವಭಂಗವಾಯಿತು.  

ಆಮೇಲೆ ಎಲ್ಲರೂ ಸುಖವಾಗಿ ಅಯೋಧ್ಯೆಯನ್ನು ಸೇರಿದಮೇಲೆ ರಾಮಲಕ್ಷ್ಮಣರು ತಮ್ಮ ಪತ್ನಿಯರೊಂದಿಗೆ ಆನಂದದಿಂದಿರುತ್ತಿದ್ದರು.

ಅಯೋಧ್ಯಾ ಕಾಂಡ 

ದಶರಥನಿಗೆ ನಾಲ್ವರು ಮಕ್ಕಳ ಏಳಿಗೆಯನ್ನು ನೋಡಿ ಸಂತೋಷವಾಯಿತು.  ಭರತ-ಶತ್ರುಘ್ನರು ತಂದೆಯ ಅಪ್ಪಣೆ ಪಡೆದು ಸೋದರಮಾವನೊಡನೆ ಕೇಕಯ್ಯ ರಾಜ್ಯಕ್ಕೆ ತೆರಳಿದ್ದರು.  ಹೀಗಿರಲು ವಯಸ್ಸಾಗುತ್ತ ಬಂದಿದ್ದ ದಶರಥನು ತನ್ನ ಮಂತ್ರಿವರ್ಗದವರನ್ನೆಲ್ಲಾ ಕರೆಯಿಸಿ ಜ್ಯೇಷ್ಠ ಪುತ್ರನಾದ ರಾಮನಿಗೆ ಪಟ್ಟಕಟ್ಟುವ ವಿಷಯದಲ್ಲಿ ಸಮಾಲೋಚನೆ ನಡೆಸಿದನು.  ಇದಕ್ಕೆ ಎಲ್ಲರೂ ಸಂತೋಷದಿಂದ ಸಮ್ಮತಿಸಿದರು.  ಕುಲಗುರುಗಳಾದ ವಸಿಷ್ಠರು ಆ ವರ್ಷದ ಚೈತ್ರಮಾಸದ ಪುಷ್ಯನಕ್ಷತ್ರದ ದಿನ ಸುಮುಹೂರ್ತವೆಂದು ಸೂಚಿಸಲು ರಾಜನ ಅಪ್ಪಣೆಯಂತೆ ಅಯೋಧ್ಯೆಯೆಲ್ಲವೂ ಶೃಂಗಾರವಾಯಿತು.  ಎಲ್ಲೆಲ್ಲೂ ನಡೆದ ಸಂಭ್ರಮ ಹೇಳತೀರದಾಗಿತ್ತು.

ಶ್ರೀರಾಮನ ಪಟ್ಟಾಭಿಷೇಕದ ಪ್ರಯತ್ನವನ್ನು ಕೇಳಿ ಕೈಕೇಯ ದಾಸಿಯಾದ ಮಂಥರೆಯು ಕೈಕೆಗೆ ದುರ್ಬುದ್ದಿಯನ್ನು ಹುಟ್ಟಿಸಿದಳು.  ರಾಮನನ್ನು ಕಾಡಿಗೆ ಕಳುಹಿಸಿ ಭರತನಿಗೆ ಪಟ್ಟಕಟ್ಟುವಂತೆ ದಶರಥನನ್ನು ಕೇಳಿಕೊಳ್ಳುವಂತೆ ಪ್ರೇರೇಪಿಸಿದಳು.  ಜ್ಯೇಷ್ಠಪುತ್ರನಿಗೆ ರಾಜ್ಯ ವಹಿಸಿಕೊಡುವ ಸಂತೋಷವಾರ್ತೆಯನ್ನು ತನ್ನ ಮುದ್ದಿನ ಮಡದಿ ಕೈಕೆಗೆ ತಿಳಿಸಲು ಬಂದ ದಶರಥನು ಕೈಕೇಯಿಯ ಕೋಪದ ಸ್ಥಿತಿಯನ್ನು ಕಂಡು ಆಶ್ಚರ್ಯಪಟ್ಟನು.  ರಾಜನು ಕೈಕೇಯಿಯ ಸಮಾಧಾನಕ್ಕಾಗಿ ರಾಮನ ಮೇಲೆ ಆಣೆಯಿಟ್ಟು ಅವಳ ಕೋರಿಕೆಯನ್ನು ಈಡೇರಿಸುವುದಾಗಿ ಮಾತುಕೊಟ್ಟನು.  ಕೈಕೇಯಿಯು ಹಿಂದೆ ತನಗೆ ದೇವಾಸುರರ ಯುದ್ಧದ ಸಮಯದಲ್ಲಿ ವಾಗ್ದಾನಮಾಡಿದ ಎರಡು ವರಗಳನ್ನು ಕೊಡಬೇಕೆಂದು ಕೇಳಲು ರಾಜನು ಅದಕ್ಕೆ ಒಪ್ಪಿದನು.  ಭರತನಿಗೆ ರಾಜ್ಯದ ಪಟ್ಟಕಟ್ಟಬೇಕೆಂದು ಕೇಳಲು ರಾಜನು ಅದಕ್ಕೆ ಒಪ್ಪಿದ್ದನು.  ಭರತನಿಗೆ ರಾಜ್ಯದ ಪಟ್ಟಕಟ್ಟಬೇಕೆಂದು ಮತ್ತು ರಾಮನನ್ನು ಹದಿನಾಲ್ಕು ವರ್ಷ ವನವಾಸಕ್ಕೆ ಕಳುಹಿಸಬೇಕೆಂಬ ಕೈಕೇಯಿಯ ಎರಡೂ ವರಗಳನ್ನು ಕೇಳಿದ ದಶರಥನು ಏನೂ ಹೇಳಲಾರದೆ ದುಃಖದಿಂದ ಕಂಗೆಟ್ಟನು.  ರಾಜನು ಎಷ್ಟು ಅಂಗಲಾಚಿದರೂ ಕೈಕೇಯಿಯ ಮನಸ್ಸು ಬದಲಾಗಲಿಲ್ಲ.  ಕೂಡಲೆ ಹಠಮಾರಿಯಾದ ಕೈಕೇಯಿಯು ರಾಮನನ್ನು ತನ್ನ ಅಂತಃಪುರಕ್ಕೆ ಕರೆಯಿಸಿಕೊಂಡಳು.  ಪ್ರೆಮಪುತ್ರನನ್ನು ಕಂಡ ತಕ್ಷಣ ದಶರಥನಿಗೆ ಮತ್ತಷ್ಟು ವ್ಯಸನವೇರಿ, ಪಜ್ಞೆತಪ್ಪಿ ಮೂಕನಾದನು.  ಆಗ ಕೈಕೇಯಿಯು ರಾಮನಿಗೆ ರಾಜನು ತನಗೆ ಕೊಟ್ಟ ವರಗಳ ಸಂಗತಿಯನ್ನು ತಿಳಿಸಿದಳು.  ತಂದೆಯ ಮಾತಿನಂತೆ ತಾನು ಅರಣ್ಯಕ್ಕೆ ಹೋಗುವುದಾಗಿಯೂ ಭರತನಿಗೆ ಪಟ್ಟ ಕಟ್ಟುವಂತೆಯೂ ಹೇಳಿ ಅವರಿಗೆ ನಮಸ್ಕರಿಸಿ ರಾಮನು ಹೊರಟನು.

ರಾಮನು ಈ ಸುದ್ಧಿಯನ್ನು ತನ್ನ ಹೆತ್ತ  ತಾಯಿಯಾದ ಕೌಸಲ್ಯೆಗೆ ತಿಳಿಸಲು ಆಕೆಯು ಮೂರ್ಛೆಹೋದಳು.  ಆ ವೇಳೆಗೆ ಅಲ್ಲಿ ಬಂದ ಲಕ್ಷ್ಮಣನು ಎಲ್ಲ ಸಂಗತಿಯನ್ನು ಕೇಳಿ ಕಿಡಿಕಿಡಿಯಾದನು.  ತಾಯಿಯನ್ನು ಸಮಾಧಾನಪಡಿಸಿ, ತಮ್ಮನಿಗೆ ವಿವೇಕ ಹೇಳಿ ರಾಮನು ಸೀತೆಯನ್ನು ಕಾಣಲು ಆಕೆಯ ಅಂತಃಪುರಕ್ಕೆ ಬಂದನು.  ಪಟ್ಟಾಭಿಷೇಕದ ಬದಲು ರಾಮನ ವನವಾಸದ ವಾರ್ತೆಯನ್ನು ತಿಳಿದು ಸೀತೆಯು ಕೊರಗಿದಳು.  ತಾನೂ ವನವಾಸಕ್ಕೆ ಸಿದ್ಧಳಾಗಿ ಪತಿಯನ್ನು ಹಿಂಬಾಲಿಸಿದಳು.  ಲಕ್ಷ್ಮಣನು ಮೊದಲೇ ಹೊರಟು ಸಿದ್ಧವಾಗಿದ್ದನು. ಹೀಗೆ ಸೀತಾ ರಾಮಲಕ್ಷ್ಮಣರು ನಾರುಬಟ್ಟೆಯನ್ನುಟ್ಟು  ಅರಮನೆಯನ್ನು ಬಿಟ್ಟು ಹೊರಹೊರಟಾಗ ಎಲ್ಲರೂ ದುಃಖಸಾಗರದಲ್ಲಿ ಮುಳುಗಿದರು.  ಮಂತ್ರಿಯಾದ ಸುಮಂತ್ರನು ಸಿದ್ಧಪಡಿಸಿದ ರಥದಲ್ಲಿ ಮೂವರೂ ಕುಳಿತು ಕಾಡಿಗೆ ಹೊರಡಲು ದುಃಖಸಂತೃಪ್ತರಾದ ಪಟ್ಟಣಿಗರೆಲ್ಲರೂ ಅವರನ್ನು ಹಿಂಬಾಲಿಸಿದರು.

ರಾತ್ರಿಯಾಗುತ್ತ ಬರಲು ರಾಮನು ನಿದ್ರೆಯಲ್ಲಿದ್ದ ಪಟ್ಟಣಿಗರನ್ನು ತಮಸಾನದೀ ತೀರದಲ್ಲಿ ಬಿಟ್ಟು ಬೆಳಗಾಗುವ ಮೊದಲೇ ಎದ್ದು ಗಂಗಾನದೀ ತೀರಕ್ಕೆ ಬಂದನು.  ರಾಮನು ಸುಮಂತ್ರನನ್ನು ಸಮಾಧಾನಪಡಿಸಿ ಹಿಂದಕ್ಕೆ ಕಳುಹಿಸಿ, ಸೀತಾಲಕ್ಷ್ಮಣರೊಡನೆ ಗುಹನ ಸಹಾಯದಿಂದ ಗಂಗೆಯನ್ನು ದಾಟಿದನು.  ಅಲ್ಲಿಂದ ಅವರೆಲ್ಲರೂ ಭಾರದ್ವಾಜಾಶ್ರಮಕ್ಕೆ ಬರಲು ಆ ಮಹರ್ಷಿಯು ಇವರನ್ನು ಆದರದಿಂದ ಸತ್ಕರಿಸಿದನು.  ಅಲ್ಲಿಂದ ಮುಂದೆ ಸೀತಾರಾಮರು ಸುಂದರವಾದ ಚಿತ್ರಕೂಟ ಪ್ರದೇಶಕ್ಕೆ ಬಂದು ಲಕ್ಮಣನಿಂದ ರಚಿತವಾದ ಪರ್ಣಶಾಲೆಯಲ್ಲಿ ಕೆಲವು ಕಾಲ ಸುಖವಾಗಿ ವಾಸಿಸಿದರು.

ಇತ್ತ ಅಯೋಧ್ಯೆಗೆ ಸುಮಂತ್ರನು ಹಿಂದಿರುಗಿ ದಶರಥನಿಗೆ ಮಕ್ಕಳ ಸಂಗತಿಯನ್ನು ಹೇಳಿದ ಮೇಲೆ ಆತನಿಗೆ ದುಃಖ ಮರುಕಳಿಸಿತು.  ಪುತ್ರಶೋಕವನ್ನು ತಾಳಲಾರದೆ ತನ್ನ ಹಿಂದಿನ ಮುನಿಶಾಪವನ್ನು ನೆನೆಸಿಕೊಂಡು ದಶರಥನು ಕಣ್ಮರೆಯಾದನು.  ಕೂಡಲೇ ಕುಲಗುರುವಾದ ವಸಿಷ್ಠರು ಭರತ-ಶತ್ರುಘ್ನರನ್ನು ರಾಜಧಾನಿಗೆ ಕರೆಯಿಸಿದರು.

ಭರತನಿಗೆ ಎಲ್ಲ ಸಂಗತಿಯೂ ತಿಳಿದು ತನ್ನ ತಾಯಿಯನ್ನು ಬಹುವಾಗಿ ನಿಂದಿಸಿದನು.  ದುಃಖದಿಂದಲೇ ತಂದೆಯ ಉತ್ತರಕ್ರಿಯೆಗಳನ್ನು ಶತ್ರುಘ್ನನೊಡನೆ ನೆರವೇರಿಸಿದ ಭರತನು ತಕ್ಷಣ ಅಡವಿಯಿಂದ ರಾಮನನ್ನು ಹಿಂದಿರುಗಿ ಕರೆತಂದು ಪಟ್ಟಕಟ್ಟಲು ನಿಶ್ಚಯಿಸಿ ಪರಿವಾರದೊಂದಿಗೆ ಅಯೋಧ್ಯೆಯನ್ನು ಬಿಟ್ಟು ಹೊರಟನು.

ಹೀಗೆ ಭರತ ಶತ್ರುಘ್ನರಿಬ್ಬರೂ ಪರಿವಾರ ಸಮೇತರಾಗಿ ಗಂಗಾನದಿಯನ್ನು ದಾಟಿ ಭಾರದ್ವಾಜಾಶ್ರಮಕ್ಕೆ ಬಂದು ಅಲ್ಲಿಂದ ಚಿತ್ರಕೂಟವನ್ನು ತಲುಪಿದರು.  ರಾಮನು ತನ್ನ ಕಾಲಮೇಲೆ ಬಿದ್ದು ಗೋಳಾಡಿದ ಭರತನನ್ನು ಆಲಂಗಿಸಿಕೊಂಡು, ಕುಶಲಪ್ರಶ್ನೆ ಮಾಡಿದನು.  ಭರತನಿಂದ ತಂದೆಯ ಸಾವನ್ನು ಕೇಳಿದ ರಾಮಲಕ್ಷ್ಮಣರು ವ್ಯಸನಾಕ್ರಾಂತರಾಗಿ ತಂದೆಗೆ ತರ್ಪಣ ಕೊಟ್ಟರು.  ಬಳಿಕ ಭರತನು ರಾಮನನ್ನು ರಾಜ್ಯಾಭಿಷೇಕ ಮಾಡಿಕೊಳ್ಳುವಂತೆ ಎಷ್ಟು ಬೇಡಿಕೊಂಡರೂ ಕೇಳದೆ, ರಾಮನು ತಾನು ತಂದೆಯ ಮಾತಿನಂತೆ ಹದಿನಾಲ್ಕು ವರ್ಷ ವನವಾಸವನ್ನು ಅನುಭವಿಸುವುದಾಗಿಯೂ ಭರತನೇ ರಾಜ್ಯವಾಳಬೇಕೆಂದು ತಿಳಿಸಿದನು.  ಕಡೆಗೆ ಭರತನು ಶ್ರೀರಾಮನ ಪಾದಗಳಿಗೆ ಸುವರ್ಣಪಾದುಕೆಗಳನ್ನು ತೊಡಿಸಿ ಅದನ್ನು ತನ್ನ ತಲೆಯ ಮೇಲಿಟ್ಟುಕೊಂಡು ತಾನು ರಾಮನ ಪ್ರತಿನಿಧಿಯಾಗಿ ಹದಿನಾಲ್ಕು ವರ್ಷ ಮಾತ್ರ ರಾಜ್ಯವನ್ನಾಳುವುದಾಗಿಯೂ ಅನಂತರ ರಾಘವನು ರಾಜ್ಯ ವಹಿಸಿಕೊಳ್ಳಲು ಬಾರದಿದ್ದರೆ ತಾನು ಅಗ್ನಿಪ್ರವೇಶ ಮಾಡುವುದಾಗಿಯೂ ಶಪಥಮಾಡಿ ಅಲ್ಲಿಂದ ಹೊರಟನು.  ಮುಂದೆ ಭರತನು ಆಯೋಧ್ಯೆಗೆ ಹೋಗಲಾರದೆ ನಂದಿಗ್ರಾಮದಲ್ಲಿಯೇ ನಿಂತು, ವನವಾಸದಲಿದ್ದ ರಾಮಾನಂತೆಯೇ ಜಟಾವಲ್ಕಲಧಾರಿಯಾಗಿ, ಶ್ರೀರಾಮನ ಪಾದುಕಾಪಟ್ಟಾಭಿಷೇಕವನ್ನು ನಡೆಯಿಸಿ ಆ ರಾಮಚಂದ್ರನ ಪಾದಾರವಿಂದಗಳನ್ನೇ ನಂಬಿ ರಾಜ್ಯಭಾರ ನಡೆಯಿಸುತ್ತಿದ್ದನು.

ಇತ್ತ ರಾಮಲಕ್ಷ್ಮಣರು ಚಿತ್ರಕೂಟವನ್ನು ಬಿಟ್ಟು ಮುಂದೆ ಸಾಗಿ, ಅತ್ರಿ ಮಹರ್ಷಿಗಳ ಆಶ್ರಮಕ್ಕೆ ಬಂದರು.  ಅಲ್ಲಿ ಅತ್ರಿಋಷಿಗಳಿಂದಲೂ ಅವರ ಮಹಾಸತಿಯರಾದ ಅನುಸೂಯಾದೇವಿಯರಿಂದಲೂ ಸತ್ಕಾರಹೊಂದಿದ ಶೀ ಸೀತಾರಾಮಲಕ್ಷ್ಮಣರು ಮುಂದೆ ದಂಡಕಾರಣ್ಯವನ್ನು ಪವೇಶಿಸಿದರು.

ಅರಣ್ಯಕಾಂಡ 

ಶ್ರೀರಾಮಚಂದ್ರನು ದಂಡಕಾರಣ್ಯದಲ್ಲಿದ್ದ ಋಷಿಗಳ ಪ್ರಾರ್ಥನೆಯಂತೆ ಸಜ್ಜನರ ಕಂಟಕರಾಗಿದ್ದ ರಾಕ್ಷಸರ ವಧೆ ಮಾಡಲು ನಿಶ್ಚಯಿಸಿದನು.  ದಂಡಕಾನನದಲ್ಲಿ ಪರ್ವತಾಕಾರದಂತೆ ಬಿದ್ದಿದ್ದ ವಿರಾಧನೆಂಬ ರಾಕ್ಷಸನು ಸರ್ವರಿಗೂ ಭಯಂಕರನಾಗಿದ್ದನು.  ಶ್ರೀ ಸೀತಾರಾಮರು ಆ ಮಾರ್ಗವಾಗಿ ಬಂದಾಗ ವಿರಾಧನು ಸೀತೆಯನ್ನು ಹಿಡಿದುಕೊಳ್ಳಲು ರಾಮಲಕ್ಷ್ಮಣರು ಆ ರಾಕ್ಷಸನ ತೋಳುಗಳನ್ನು ಕತ್ತರಿಸಿ ಅವನನ್ನು ಸಾಯಿಸಿ ಹಳ್ಳದಲ್ಲಿ ಹೂತುಬಿಟ್ಟರು.  ಆಗ ಅಂತರಿಕ್ಷದಲ್ಲಿ ಒಬ್ಬ ಗಂಧರ್ವನು ಕಾಣಿಸಿಕೊಂಡು ತನಗೆ ಕುಬೇರನ ಶಾಪದಿಂದ ಈ ವಿಕಾರರೂಪ ಬಂದುದಾಗಿಯೂ, ಈಗ ದಾಶರಥಿಯಿಂದ; ತನಗೆ ಶಾಪವಿಮೋಚನೆಯಾದುದಕ್ಕೆ ತಾನು ಧನ್ಯನಾದುದಾಗಿಯೂ ತಿಳಿಸಿ ಆತನಿಗೆ ನಮಸ್ಕರಿಸಿ ಮಾಯವಾದನು.

ಇಲ್ಲಿಂದ ಅವರು ಮೂವರೂ ಮುಂದೆ ಸಾಗಿ, ಅನೇಕ ಋಷಿಗಳ ಸಂದರ್ಶನ ಲಾಭದಿಂದ ಸಂತೋಷಪಟ್ಟರು.  ಶರಭಂಗ, ಸುತೀಕ್ಷ್ಣಾದಿ ಋಷಿವರ್ಯರನ್ನು ಕಂಡು ಆಶೀರ್ವಾದ ಪಡೆದರು.  ತಮ್ಮ ಸ್ವಸಾಮರ್ಥ್ಯದಿಂದ ಇಲ್ವಲ ವಾತಾಪಿಗಳೆಂಬ ರಾಕ್ಷಸರನ್ನು ನಾಶಪಡಿಸಿದ ಮತ್ತು ವಿಂಧ್ಯಪರ್ವತದ ಸೊಕ್ಕುಮುರಿದ ಅಗಸ್ತ್ಯ ಮಹಾಮುನಿಗಳನ್ನು ಕಂಡು ರಾಮನು ವಂದಿಸಲು ಆ ಮುನಿಪೋತ್ತಮರು ತಮ್ಮ ಬಳಿಯಿದ್ದ ಅಮೂಲ್ಯವಾದ ಧನುರ್ಬಾಣಗಳನ್ನು ರಘುವರನಿಗೆ ಅನುಗ್ರಹಿಸಿಕೊಟ್ಟರು.

ಮುಂದೆ ರಾಮನು ಗೋದಾವರಿ ತೀರದಲ್ಲಿದ್ದ ಬಹುಸುಂದರವಾದ ಪಂಚವಟಿಯಲ್ಲಿ ಕೆಲಕಾಲ ನೆಲೆಸಿ ಸುಖವಾಗಿದ್ದನು.  ಅಲ್ಲಿಗೆ ದಶರಥರಾಜನ ಮಿತ್ರನಾದ ಜಟಾಯುವೆಂಬ ಹಳೆಯ ಹದ್ದು ಬಂದು ರಾಮನೊಡನೆ ಸ್ನೇಹ ಬೆಳೆಸಿ, ಅವರು ಕಾಡಿನಲ್ಲಿ ಹೊರಸಂಚಾರ ಹೊರಟಾಗ ಸೀತಾಮಾತೆಯನ್ನು ರಕ್ಷಣೆಮಾಡುವ ಭರವಸೆ ಕೊಟ್ಟಿತು.

ಹೀಗಿರುವಲ್ಲಿ ಪಂಚವಟಿಗೆ ಶೂರ್ಪನಖಿಯೆಂಬ ರಾಕ್ಷಸಿಯು ಬಂದು ಸುಂದರಾಂಗನಾದ ರಾಮನನ್ನು ಕಂಡು ಮೋಹಿತಳಾದಳು.  ಈ ರಕ್ಕಸಿಯು ಸುಂದರಿಯಂತೆ ಬಂದು ರಾಮನ ಮುಂದೆ ಸುಳಿದು ತನ್ನನ್ನು ಮದುವೆಯಾಗುವಂತೆ ಯಾಚಿಸಿದಳು.  ಆಗ ರಾಮನು ಅವಳಿಗೆ ತನಗೊಬ್ಬ ಪತ್ನಿ ಇರುವುದಾಗಿಯೂ ತನ್ನ ತಮ್ಮನಾದ ಲಕ್ಷ್ಮಣನನ್ನು ಕೇಳಿಕೊಳ್ಳುವಂತೆಯೂ ತಿಳಿಸಿದನು.  ಆ ಮಾಯಾವಿಯು ಸೌಮಿತ್ರಿಯ ಬಳಿ ಬಂದಾಗ ತಾನು ರಾಮದಾಸನೆಂದೂ ತನ್ನ ಸ್ವಾಮಿಯ ಬಳಿಗೇ ಹೋಗುವಂತೆಯೂ ಶೂರ್ಪನಖಿಗೆ ತಿಳಿಸಲು ಈ ಅಡ್ಡಾಟದಿಂದ ಕೋಪಗೊಂಡ ರಕ್ಕಸಿಯು ಜಾನಕಿಯ ಮೇಲೆ ಬೀಳಲು ಹೋದಳು.  ಆಗ ರಾಘವನಾಜ್ಞೆಯಂತೆ ಲಕ್ಷ್ಮಣನು ಶೂರ್ಪನಖಿಯ ಕಿವಿಮೂಗುಗಳನ್ನು ಕೊಯ್ದು ಕಳುಹಿಸಿದನು.  ಇತ್ತ ಶೂರ್ಪನಖಿಯು ರೋದನ ಮಾಡುತ್ತಾ ಅಲ್ಲಿಂದ ಹೋಗಿ ತನ್ನ ಅಣ್ಣಂದಿರಾದ ಖರದೂಷಣರಲ್ಲಿ ತನಗಾದ ಅವಸ್ಥೆಯನ್ನು ತಿಳಿಸಿ ರಾಮನ ಮೇಲೆ ಸೇಡು ತೀರಿಸಿಕೊಳ್ಳಲು ಪ್ರಚೋದಿಸಿದಳು.  ಆಗ ಖರನು ತನ್ನ ಹದಿನಾಲ್ಕುಸಾವಿರ ಪಡೆಯೊಡನೆ ರಾಮನ ಮೇಲೆ ಬೀಳಲು ರಾಮನು ವೈಷ್ಣವಾಸ್ತ್ರದಿಂದ ಅವರನ್ನು ಸಂಹರಿಸಿದನು.  ಈ ದುಷ್ಟಶಿಕ್ಷಣದಿಂದ ಅಲ್ಲಿದ್ದ ಋಷಿಗಳಿಗೆಲ್ಲರಿಗೂ ನೆಮ್ಮದಿಯಾಯಿತು.

ಅಕಂಪನೆಂಬ ರಾಕ್ಷಸದೂತನು ಖರದೂಷಣರ ನಾಶವನ್ನು ರಾವಣಾಸುರನಿಗೆ ತಿಳಿಸಿದನಲ್ಲದೆ ರಾಮನನ್ನು ಗೆಲ್ಲುವುದು ಸಾಧ್ಯವಾಗದ ಕಾರಣ ಅವನ ಪತ್ನಿಯಾದ ಸೀತೆಯನ್ನು ಅಪಹರಿಸುವುದರಿಂದ ರಾಮನ ವಿನಾಶವಾಗುವುದೆಂದು ದುರ್ಬೋಧನೆ ಮಾಡಿದನು.  ಆ ವೇಳೆಗೆ ಕರ್ಣನಾಸಿಕ ಶೂನ್ಯಳಾದ ಶೂರ್ಪನಖಿ ಅಲ್ಲಿಗೆ ಬಂದು ತನ್ನ ಅವಮಾನ ಪ್ರತೀಕಾರಕ್ಕಾಗಿ ಹಾತೊರೆದು ಅಣ್ಣನಾದ ರಾವಣನಿಗೆ ಸೀತೆಯ ಸೌಂದರ್ಯವನ್ನು ತಾನೂ ಮತ್ತಷ್ಟು ವರ್ಣಿಸಿ ಆ ಕಾಮಾಂಧನ ದುರ್ಮಾರ್ಗಕ್ಕೆ ಕಾರಣಳಾದಳು.  ಆಗ ರಾವಣನಿಗೆ ಸೀತೆಯ ಮೇಲೆ ಮನಸ್ಸಾಗಿ ತನ್ನ ಕಾಮಿತಾರ್ಥದಲ್ಲಿ ಮಾರೀಚನ ಸಹಾಯವನ್ನು ಆಶಿಸಿದನು.

ರಾವಣನ ಮಾತಿನಂತೆ ಮಾರೀಚನು ಮಾಯಾಮೃಗದ ವೇಷಧಾರಿಯಾಗಿ ರಾಮಾಶ್ರಮದ ಮುಂದೆ ಸುಳಿದನು.  ಈ ಸುವರ್ಣ ಮೃಗವನ್ನು ಕಂಡ ಜಾನಕಿಯು ಹೇಗಾದರೂ ಮಾಡಿ ಬೇಟೆಯಾಡಿ ಕೊನೆಗೆ ಅದನ್ನು ಕೊಂದಾದರೂ ತನಗೆ ತಂದುಕೊಡುವಂತೆ ಪತಿಯನ್ನು ಪೀಡಿಸಿದಳು.  ಎಷ್ಟು ಬೇಡವೆಂದರೂ ಹೇಳದೆ ಹಠಮಾಡಿದ ಸೀತೆಯ ಕೋರಿಕೆಯನ್ನು ಈಡೇರಿಸುವುದಕ್ಕಾಗಿ ರಾಮನು ಲಕ್ಷ್ಮಣನಿಗೆ ಜೋಪಾನ ಹೇಳಿ ಆ ಹರಿಣದ ಬೆನ್ನಟ್ಟಿ ಹೋದನು.

ಹೀಗೆ ರಾಮನು ಆ ಕಾಂಚನ ಮೃಗವನ್ನು ಬಹುದೂರ ಅಟ್ಟಿಸಿಕೊಂಡು ಹೋದರೂ ಕೈಗೆ ಸಿಕ್ಕದುದರಿಂದ ಬಾಣದಿಂದ ಅದನ್ನು ಗುರಿಯಿಟ್ಟು ಹೊಡೆದನು.  ಆಗ ಮೃಗರೂಪಿಯಾದ ಮಾರೀಚನು ಲಂಕೇಶ್ವರನ ದುರ್ಬೋಧನೆಯಂತೆ ಸಾಯುವಾಗ ‘ಹಾ ಸೀತೆ! ಹಾ ಲಕ್ಷ್ಮಣಾ!’ ಎಂದು ರಾಮನ ಕಂಠದಂತೆಯೇ ಚೀರಿದನು.  ಆಗ ಅಪಾಯ ಶಂಕಿತಳಾದ ಸೀತೆಯು ಲಕ್ಷ್ಮಣನನ್ನು ನಿಷ್ಠುರ ವಚನಗಳಿಂದ ಬಲವಂತವಾಗಿ ಹೊರಡಿಸಲು, ನೊಂದ ಸೌಮಿತ್ರಿಯು ಕಾನನದಲ್ಲಿ ಆ ಧ್ವನಿ ಬಂದ ಕಡೆಗೆ ನಡೆದನು.  ಇತ್ತ ಕಪಟ ಮುನಿ ವೇಷಧಾರಿಯಾದ ದಶಾನನು ಸಾಮಾನ್ಯ ಸನ್ಯಾಸಿಯಂತೆ ಏಕಾಂಗಿಯಾಗಿದ್ದ ಸೀತೆಯ ಬಳಿಗೆ ಬಂದು ಅವಳ ಸೌಂದರ್ಯಕ್ಕೆ ಮಾರುಹೋದನು.  ನಿರ್ಮಲಾಂತಃಕರಣದಿಂದ ಅತಿಥಿಯನ್ನು ಉಪಚರಿಸಲು ಬಂದ ಜಾನಕಿಗೆ ಆ ದ್ರೋಹಿಯು ತನ್ನ ರಾಕ್ಷಸ ಸ್ವರೂಪವನ್ನು ತೋರಿಸಿ ತನ್ನ ವೃತ್ತಾಂತವನ್ನು ತಿಳಿಸಿ ಆಕೆಯನ್ನು ಮಾಯಾರಥದಲ್ಲಿ ಕುಳ್ಳಿರಿಸಿಕೊಂಡು ಕರೆದೊಯ್ದನು.  ಆಗ ಸೀತೆಯು ಗಡಗಡನೆ ನಡುಗಿ ಗಟ್ಟಿಯಾಗಿ ಅಳುತ್ತಿದ್ದಳು.  ಜಾನಕಿಯ ರೋದನ ಧ್ವನಿಯನ್ನು ಕೇಳಿದ ಕೂಡಲೇ ಜಟಾಯುವು ಅಲ್ಲಿಗೆ ಹಾರಿಬಂದು ರಾವಣನೊಡನೆ ಯುದ್ಧಮಾಡಿತು.  ಆದರೆ ರಾವಣನ ಮೋಸ ಯುದ್ಧದಿಂದ ಪಕ್ಷ ಕಳೆದುಕೊಂಡ ಜಟಾಯು ಕುಟುಕು ಜೀವಸಹಿತ ಭೂಮಿಗೆ ಬೀಳಲು ಆ ನೀಚನು ಮುಂದೆ ಸಾಗಿದನು.  ಆಕಾಶ ಮಾರ್ಗದಲ್ಲಿ ಹೋಗುತ್ತಿದ್ದಾಗ ಅವನಿಜೆಯು ತನ್ನ ಅವಿವೇಕಕ್ಕಾಗಿ ಗೋಳಾಡುತ್ತಾ ತನ್ನ ಪತಿಗೆ ಗುರುತು ಸಿಕ್ಕಲೆಂದು ತನ್ನ ಆಭರಣಗಳನ್ನು ಚೂರು ಸೀರೆಯಲ್ಲಿ ಕಟ್ಟಿ ರಾವಣನಿಗೆ ತಿಳಿಯದಂತೆ ಕೆಳಗೆಸೆದಳು.  ಇದು ಅಲ್ಲಿದ್ದ ಕೆಲವು ಕಪಿಗಳ ಕೈಗೆ ಸಿಕ್ಕಲು ಅವು ತಮ್ಮ ಮುಖಂಡನಿಗೆ ತಲುಪಿಸಿದವು.

ಇತ್ತ ರಾವಣನು ಸೀತೆಯನ್ನು ಲಂಕೆಗೆ ಕರೆತಂದು ಘೋರ ರಾಕ್ಷಸಿಯರ ಕಾವಲಿನ ಮಧ್ಯೆ ಅಶೋಕವನದಲ್ಲಿಟ್ಟನು.  ಕೆಲವೇ ತಿಂಗಳಲ್ಲಿ ಸೀತೆ ತನ್ನವಳಾಗದಿದ್ದರೆ ದಶಕಂಠನು ಅವಳನ್ನು ಕೊಂದುಬಿಡುವುದಾಗಿ ಹೇಳಿ ಹೆದರಿಸಿ ಹೋದನು.

ಇತ್ತ ಲಕ್ಷ್ಮಣನು ರಾಘವನನ್ನು ಹುಡುಕಿಕೊಂಡು ಬಂದು ಅಗ್ರಜನಿಗೆ ನಡೆದ ಸಂಗತಿಯನ್ನು ತಿಳಿಸಿದನು.  ಇಬ್ಬರೂ ಆಶ್ರಮಕ್ಕೆ ಬಂದು ವೈದೇಹಿ ಇಲ್ಲದುದನ್ನು ಕಂಡು ತಲ್ಲಣಿಸಿದರು.  ಮುಂದೆ ರಾಮಲಕ್ಷ್ಮಣರು ಆ ಗೊಂಡಾರಣ್ಯದಲ್ಲಿ ಸೀತೆಯನ್ನು ಹುಡುಕುತ್ತಾ ನಡೆದರು.  ಮಧ್ಯರಾತ್ರಿಯಲ್ಲಿ ಅನೇಕ ಅಡಚಣೆಗಳು ಬಂದವು.  ಆಯೋಮುಖಿಯೆಂಬ ರಕ್ಕಸಿಯು ಇವರ ಮೇಲೆ ಬೀಳಲು ಲಕ್ಷ್ಮಣನು ಅವಳ ಕಿವಿಮೂಗುಗಳನ್ನು ಕೊಯ್ದು ಓಡಿಸಿದನು.  ಮುಂದೆ ಗುಹೆಯಂತೆ ಬಾಯುಳ್ಳ ತಲೆಯೇ ಇಲ್ಲದ, ಪರ್ವತಾಕಾರವಾದ ದೇಹವುಳ್ಳ ವಿಕಾರರೂಪಿಯಾದ ಕಬಂಧನೆಂಬ ರಾಕ್ಷಸನು ತನ್ನ ದೀರ್ಘಬಾಹುಗಳಿಂದ ದಾರಿಯಲ್ಲಿ ಬರುತ್ತಿದ್ದ ರಾಮಲಕ್ಷ್ಮಣರನ್ನು ಹಿಡಿದುಕೊಂಡನು.  ಅವರಿಬ್ಬರೂ ಆ ಘೋರರಾಕ್ಷಸನ ಬಾಹುಗಳನ್ನು ಕತ್ತರಿಸಿ ಅವನ ದೇಹವನ್ನು ಸುಟ್ಟುಹಾಕಿದರು.   ಒಬ್ಬ ಋಷಿಯ ಶಾಪಕ್ಕೊಳಗಾಗಿ ಈಗ ವಿಮೋಚನೆಗೊಂಡ ಆ ಕಬಂಧನು ದಿವ್ಯರೂಪಧಾರಣೆಮಾಡಿ ಆಕಾಶದಲ್ಲಿ ಕಾಣಿಸಿಕೊಂಡನು.  ರಾಮನನ್ನು ಹರಸಿ ಸೀತಾನ್ವೇಷಣೆಗೆ ಋಷ್ಯಮೂಕದಲ್ಲಿರುವ ಸುಗ್ರೀವನ ಸಹಾಯ ಪಡೆಯುವಂತೆ ಹೇಳಿ ಮಾಯವಾದನು.

ಮುಂದೆ ಲಕ್ಷ್ಮಣಸಮೇತನಾದ ರಾಮನು ಮಾತಂಗಮುನಿಯ ಶಿಷ್ಯಳಾದ ಮಹಾರಾಮಭಕ್ತೆಯಾದ ಶಬರಿಯು ಕೊಟ್ಟ ಕಂದಮೂಲ ಫಲಾದಿ ಆತಿಥ್ಯವನ್ನು ಸ್ವೀಕರಿಸಿ ಸಂತೋಷಪಟ್ಟು ಆಕೆಯ ಸದ್ಗತಿಗೆ ಕಾರಣನಾದನು.  ಅಲ್ಲಿಂದ ಮುಂದೆ ಇಬ್ಬರೂ ಋಷ್ಯಮೂಕವೆಂಬಲ್ಲಿಗೆ ನಡೆದರು.

ಕಿಷ್ಕಿಂಧಾಕಾಂಡ  

ಕಿಷ್ಕಿಂಧಾರಾಜ್ಯಕ್ಕೆ ಮಹಾಬಲಶಾಲಿಯಾದ ವಾಲಿಯೆಂಬ ಕಪಿಯು ರಾಜನಾಗಿದ್ದನು.  ವಾಲಿಯ ತಮ್ಮನೇ ಸುಗ್ರೀವನು.  ಎಮ್ಮೆಯಾಕಾರದ ದುಂದುಭಿಯೆಂಬ ರಾಕ್ಷಸನನ್ನು ವಾಲಿಯು ಗರಗರನೆ ತಿರುಗಿಸಿ ಋಷ್ಯಮೂಕದಲ್ಲಿನ ಮತಂಗ ಋಷ್ಯಾಶ್ರಮದ ಕಡೆ ಎಸೆದುದ್ದರಿಂದ, ಆ ಋಷಿ ಕೊಟ್ಟ ಶಾಪದಿಂದ ವಾಲಿಗೆ ಅಲ್ಲಿಗೆ ಹೋಗಲಾಗುತ್ತಿರಲಿಲ್ಲ.  ಹೀನ ದುಂದುಭಿಯು ಸತ್ತ ಕೆಲವು ಕಾಲಾನಂತರ ಅವನ ಮಗ ಮಾಯಾವಿಯೆಂಬ ರಾಕ್ಷಸನು ಸೇಡಿನಿಂದ ವಾಲಿಯನ್ನು ಯುದ್ಧಕ್ಕೆ ಕರೆದನು. ರಾವಣಾದಿ ರಕ್ಕಸರ ಸೊಕ್ಕನ್ನು ಮುರಿದಿದ್ದ ವಾಲಿಯು ಕೊಟ್ಟ ಪೆಟ್ಟನ್ನು ತಡೆಯಲಾರದೆ ಆ ಮಾಯಾವಿಯು ಒಂದು ಗುಹೆಯನ್ನ ಹೊಕ್ಕನು.  ವಾಲಿಯು ಸುಗ್ರೀವನನ್ನು ಗುಹೆಯ ಬಳಿ ಕಾವಲಿಟ್ಟು, ತಾನು ಮಾಯವಿಯನ್ನು ಹಿಂಬಾಲಿಸಿ, ಮುಷ್ಠಿಯುದ್ಧ ಮಾಡತೊಡಗಿದನು.  ಅವರಿಬ್ಬರಿಗೂ ಘೋರ ಯುದ್ಧವಾಯಿತು.  

ಒಂದು ವರ್ಷ ಕಾಲವಾದರೂ ಗುಹೆಯಿಂದ ವಾಲಿಯು ಬಾರದಿದ್ದುದನ್ನು ಕಂಡು ಸುಗ್ರೀವನು ತನ್ನಣ್ಣನು ಸತ್ತಿರಬಹುದೆಂದು ಊಹಿಸಿ ಕಿಷ್ಕಿಂಧೆಗೆ ಬರಲು, ಅಲ್ಲಿಯ ಜನ ಸುಗ್ರೀವನನ್ನೇ ರಾಜನನ್ನಾಗಿ ಮಾಡಿದರು.  ಸ್ವಲ್ಪಕಾಲದ ಮೇಲೆ ವಾಲಿಯು ಹಿಂತಿರುಗಿ ಬರಲು ಸುಗ್ರೀವನ ಸಮಾಧಾನ ಕೇಳದೆ ತಮ್ಮನನ್ನು ಕಿಷ್ಕಿಂಧೆಯಿಂದ ಹೊಡೆದೋಡಿಸುದದಲ್ಲದೆ, ಅವನ ಪತ್ನಿಯನ್ನು ತನ್ನ ಅಂತಃಪುರಕ್ಕೆ ಸೇರಿಸಿಕೊಂಡನು.  ಆದಕಾರಣ ಸುಗ್ರೀವನು ಕಪಿಸೈನ್ಯದೊಡನೆ ಋಷ್ಯಮೂಕದಲ್ಲಿ ವಾಸಿಸುತ್ತಿದ್ದನು.

ಇತ್ತ ರಾಮಲಕ್ಷ್ಮಣರು ಧನುರ್ಧಾರಿಗಳಾಗಿ ಅತ್ತಕಡೆ ಬರುತ್ತಿರುವುದನ್ನು ದೂರದಿಂದಲೇ ಕಂಡ ಸುಗ್ರೀವನು ಅಂಜನೇಯನನ್ನು ಕರೆದು ಅವರ ವಿಷಯವನ್ನು ತಿಳಿದುಬರುವಂತೆ ಹೇಳಿಕಳುಹಿಸಿದನು.  ಆಗ ಮಾರುತಿಯು ಸನ್ಯಾಸಿ ವೇಷದಲ್ಲಿ ಅವರ ಮುಂದೆ ಹೋಗಿ ಕುಶಲಪ್ರಶ್ನೆ ಮಾಡಿದನು.  ರಾಮಲಕ್ಷ್ಮಣರ ವೃತ್ತಾಂತವನ್ನು ಕೇಳಿದ ತಕ್ಷಣ ಸಂತಸಗೊಂಡ ಹನುಮಂತನು ತನ್ನ ನಿಜಸ್ವರೂಪವನ್ನು ಧರಿಸಿ ಅವರನ್ನು ಹೆಗಲ ಮೇಲೆ ಕುಳ್ಳಿರಿಸಿಕೊಂಡು ಬಂದು ಸುಗ್ರೀವನ ಬಳಿ ಬಿಟ್ಟನು.  ರಾಮನು ತನ್ನ ಪತ್ನಿಯಾದ ಸೀತೆಯನ್ನು ಹುಡುಕಿಕೊಂಡು ಅಲ್ಲಿಗೆ ಬಂದಿರುವುದಾಗಿ ಸುಗ್ರೀವನಿಗೆ ತಿಳಿಸಿ, ಈ ವಿಷಯದಲ್ಲಿ ಸುಗ್ರೀವನ ಸಹಾಯವನ್ನು ಕೇಳಿದನು.  ಆಗ ಸುಗ್ರೀವನು ರಾಮನಿಗೆ ಸ್ವಲ್ಪದಿನಗಳ ಹಿಂದೆ ಕಪಿಗಳು ತನ್ನ ಕೈಗೆ ಕೊಟ್ಟಿದ್ದ ಆಭರಣಗಳ ಗಂಟನ್ನು ತೋರಿಸಿದನು.  ಅದು ಸೀತೆಯದೆಂದು ಗುರುತಿಸಿದ ರಾಮನಿಗೆ ಪ್ರಿಯಪತ್ನಿಯ ನೆನಪಾಗಿ ದುಃಖ ಇಮ್ಮಡಿಸಿತು.  ಆಗ ಸುಗ್ರೀವನು ರಾಮನನ್ನು ಸಮಾಧಾನಪಡಿಸಿ ತನಗೆ ವಾಲಿಯಿಂದಾದ ನೋವನ್ನು ಆತನಲ್ಲಿ ತೋಡಿಕೊಂಡನು.  

ಹೀಗೆ ರಾಮಸುಗ್ರೀವರು ತಮ್ಮ ತಮ್ಮ ನಿಜಸಂಗತಿಗಳನ್ನು ಹೇಳಿಕೊಂಡು ಪರಸ್ಪರ ಸಹಾಯಮಾಡಲೊಪ್ಪಿ ಅಗ್ನಿಸಾಕ್ಷಿಯಾಗಿ ಸ್ನೇಹಮಾಡಿಕೊಂಡರು.  ರಾಮನು ಸುಗ್ರೀವನಿಗೆ ರಾಜ್ಯ ಕೊಡಿಸುವ ವಾಗ್ದಾನಮಾಡಿದನು.  ಸುಗ್ರೀವನಿಗೆ ತನ್ನ ಶಕ್ತಿಸಾಮರ್ಥ್ಯಗಳ ನಿವಾರಣೆಯಾಗಲೆಂದು ರಾಮನು ತನ್ನ ಕಾಲಬೆರಳಿನಿಂದಲೇ ಸಾವಿರ ಮೈಲಿಯ ದೂರಕ್ಕೆ ದುಂದುಭಿಯ ಕಳೇಬರವನ್ನು ಚಿಮ್ಮಿದನು.  ಒಂದೇ ಬಾಣದಿಂದ ಏಳು ಸಾಲುವೃಕ್ಷಗಳನ್ನು ಸವರಿ ಬಿಸುಟನು.  ಅಂತಹ ಅದ್ಭುತವಾದ ರಾಘವನ ಸಾಹಸವನ್ನು ಕಂಡು ಸುಗ್ರೀವನಿಗೆ ಆನಂದವಾಯಿತು.

ರಾಮನು ಕೊಟ್ಟ ಭರವಸೆಯಂತೆ, ಸುಗ್ರೀವನು ಕಿಷ್ಕಿಂಧೆಗೆ ಹೋಗಿ, ವಾಲಿಯನ್ನು ಯುದ್ಧಕ್ಕೆ ಕರೆದನು.  ವಾಲಿಸುಗ್ರೀವರಿಗೆ ಘೋರ ಕಾಳಗವಾದಾಗ, ಒಂದೇ ರೀತಿಯಲ್ಲಿದ್ದ ಅಣ್ಣತಮ್ಮಂದಿರಲ್ಲಿ ರಾಮನಿಗೆ ಸುಗ್ರೀವನ ಗುರುತು ಹಚ್ಚಲಾಗಲಿಲ್ಲ.  ಕಾಳಗದಲ್ಲಿ ವಾಲಿಯ ಹೊಡೆತ ತಾಳಲಾರದೆ ಸುಗ್ರೀವನು ದಾಶರಥಿಯ ಬಳಿಗೆ ನೊಂದು, ಬಂದು, ಸೋದರನನ್ನು ಕೊಲ್ಲದ ಕಾರಣವನ್ನು ಕೇಳಿದನು. ಆಗ ರಾಮನು ತನಗಾದ ಸಂಶಯವನ್ನು ತಿಳಿಸಿ ಮತ್ತೊಮ್ಮೆ ಪುಷ್ಪಮಾಲೆಯನ್ನು ಧರಿಸಿಕೊಂಡು ಸುಗ್ರೀವನು ವಾಲಿಯೊಡನೆ ಕಾಳಗ ಹೂಡುವಂತೆ ಪ್ರೇರೇಪಿಸಿದನು.

ಮತ್ತೊಮ್ಮೆ ವಾಲಿ ಸುಗ್ರೀವರಿಗೆ ಭಯಂಕರ ಯುದ್ಧ ನಡೆಯುತ್ತಿದ್ದಾಗ ರಘುವರನು ಒಂದೇ ಬಾಣದಿಂದ ವಾಲಿಯನ್ನು ಹೊಡೆದು ನೆಲಕ್ಕುರುಳಿಸಿದನು.  ನೊಂದ ವಾಲಿಯ ಬಳಿ ರಾಮನು ಹೋದಾಗ ಅವನು ಅಧರ್ಮ ರೀತಿಯಲ್ಲಿ ತನ್ನನ್ನು ಕೊಂದ ಕಾರಣ ಕೇಳಲು, ರಾಮನು,  ವಾಲಿಯು ತನ್ನ ತಮ್ಮನ ಪತ್ನಿಯನ್ನಪಹರಿಸಿ ಅಧರ್ಮದಲ್ಲಿ ನಡೆದ ಕಾರಣ ತಾನೂ ಅದಕ್ಕೆ ತಕ್ಕಂತೆ ಪ್ರತೀಕಾರ ಕೈಕೊಳ್ಳಬೇಕಾಯಿತೆಂದು ಹೇಳಿ ಒಪ್ಪಿಸಲು, ವಾಲಿಯು ಪರಲೋಕವನ್ನೈದಿದನು.  ಬಳಿಕ ರಾಮಭದ್ರನು ವಾಲಿಪತ್ನಿಯಾದ ತಾರೆಯನ್ನು ಸಂತೈಸಿ ಅವನ ಪುತ್ರನಾದ ಅಂಗದನಿಂದ ಅಪರಕರ್ಮಗಳನ್ನು ಮಾಡಿಸಿದನು.  ಕಡೆಗೆ ಸುಗ್ರೀವನಿಗೆ ಕಿಷ್ಕಿಂಧೆಯಲ್ಲಿ ಪಟ್ಟಾಭಿಷೇಕ ನಡೆಯಿತು.

ಈ ಸಮಯದಲ್ಲಿ ರಾಮಲಕ್ಷ್ಮಣರು ನಾಲ್ಕು ತಿಂಗಳಕಾಲ ಋಷ್ಯಮೂಕದಲ್ಲಿ ನೆಲೆಸಿದ್ದರು.  ಮುಂದೆ ರಾಮಾಜ್ಞೆಯಂತೆ ಸುಗ್ರೀವನು ಸೀತಾನ್ವೇಷಣೆಯ ಪ್ರಯತ್ನಕ್ಕೆ ನೆರವಾಗಲು ತನ್ನ ಅಪಾರವಾದ ಕಪಿಸೈನ್ಯದೊಡನೆ ಬಂದು ಸಿದ್ಧನಾದನು.  ಇತ್ತ ಸುಗ್ರೀವಾಜ್ಞೆಯಂತೆ ಬಲಶಾಲಿಗಳಾದ ಕಪಿದೂತರು ದಿಕ್ಕುದಿಕ್ಕಿಗೂ ಸೀತೆಯನ್ನು ಹುಡುಕಿಕೊಂಡು ಹೊರಟರು.  ಮಹಾಬಲಶಾಲಿಯಾದ ಆಂಜನೇಯನಿಗೆ ರಾಮನು ತನ್ನ ಮುದ್ರಿಕೆಯುಂಗುರವನ್ನು ಕೊಟ್ಟು ಅದರಿಂದ ತನ್ನ ಕಡೆಯವನೆಂಬ ನಂಬುಗೆ ಸೀತೆಗೆ ಬರುವುದೆಂದು ಹೇಳಿ ಕಳುಹಿಸಿದನು.  ವಾಯುಪುತ್ರನಾದ ಮಾರುತಿಯು ಅಂಗದ ಜಾಂಬವಂತರೇ ಮೊದಲಾದ ಹಲವು ಕಪಿವೀರರೊಂದಿಗೆ ದಕ್ಷಿಣತೀರಕ್ಕೆ ಹೊರಟನು.  ಅವರೆಲ್ಲರೂ ಸುಗ್ರೀವನು ಕೊಟ್ಟ ಅವಧಿಯಲ್ಲಿ ಸೀತೆಯನ್ನು ಕಾಣಲಾರದೆ ವಿಂಧ್ಯಪರ್ವತದ ಕೆಳಗಿನ ಮಹೋದಧಿ ತೀರದಲ್ಲಿ ಸಾಯಲು ಸಿದ್ಧರಾಗಿ ಕುಳಿತಿದ್ದರು.  ಆ ಸಮಯಕ್ಕೆ ಸರಿಯಾಗಿ ಆಹಾರಾರ್ಥವಾಗಿ ಬಂದ ಸಂಪಾತಿಯೆಂಬ ದೊಡ್ಡ ಹದ್ದನ್ನು ಕಂಡು ಮಾರುತಿಯು ರಾಮ ಕಾರ್ಯಕ್ಕಾಗಿ ಹೋರಾಡಿದ ಜಟಾಯುವಿನ ಮಾತೆತ್ತಿದನು.  ಇದನ್ನು ಕೇಳಿ ಜಟಾಯುವಿನ ಅಣ್ಣನಾದ ಸಂಗಾತಿಗೆ ದುಃಖವುಗ್ಗಡಿಸಿ ಬಂದು ತನ್ನ ಪೂರ್ವ ವೃತ್ತಾಂತವನ್ನು ಆ ರಾಮದೂತರಿಗೆ ತಿಳಿಸಿ ಅಲ್ಲಿ ಸೇರಿರುವ ಕಾರಣವನ್ನು ಕೇಳಿದನು.  ಸಂಪಾತಿಯು, ಸೀತೆಯು ಅಲ್ಲಿಗೆ ನೂರು ಯೋಜನ ದೂರದಲ್ಲಿ ಇರುವ ಲಂಕಾಪುರಿಯಲ್ಲಿರುವುದಾಗಿ ತಿಳಿಸಿದನು.

ಆಗ ಜಾಂಬವಂತನು ವಜ್ರದೇಹಿಯೂ ವಾಯುಪುತ್ರನೂ ಆದ ವೀರ ಆಂಜನೇಯನೊಬ್ಬನೇ ಲಂಕೆಗೆ ಹಾರಿಹೋಗಿ ಮತ್ತೆ ಹಿಂದಿರುಗಿ ಬರಲು ಸಮರ್ಥನೆಂದು ಸ್ತೋತ್ರ ಮಾಡಲು, ರಾಮದೂತನಾದ ಮಾರುತಿಯು ರಾಮಕಾರ್ಯಕ್ಕಾಗಿ ರಾಮಧ್ಯಾನ ಮಾಡುತ್ತ, ಮಹೇಂದ್ರ ಪರ್ವತದ ಮೇಲೆ ಹತ್ತಿನಿಂತನು.

ಸುಂದರಕಾಂಡ 

ಆಂಜನೇಯನು ಸಮಸ್ತ ದೇವತೆಗಳಿಗೂ ವಂದಿಸಿ ತನ್ನ ದೇಹವನ್ನು ಬೃಹದಾಕಾರವಾಗಿ ಬೆಳೆಸಿಕೊಂಡು ಮಹೇಂದ್ರ ಪರ್ವತದಿಂದ ಲಂಕಾಭಿಮುಖವಾಗಿ ಸಮುದ್ರದ ಮೇಲೆ ಹಾರಿದನು.  ಹೀಗೆ ಹಾರಿಹೋಗುತ್ತಿದ್ದ ಹನುಮಂತನನ್ನು ಕಂಡು ಸಾಗರದೊಳಗಿನಿಂದ ಉದ್ಭವಿಸಿದ ಮೈನಾಕ ಪರ್ವತವು ಆತನನ್ನು ಆದರಿಸಿತು.

ಮಾರುತಿಯು ಮಾರ್ಗಮಧ್ಯದಲ್ಲಿ ಸಿಕ್ಕಿದ ಸುರಸೆಯ ಇಷ್ಟದಂತೆ ಲಘುರೂಪದಿಂದ ಆಕೆಯ ಬಾಯೊಳಹೊಕ್ಕು ಈಚೆ ಬಂದು ಅವಳ ಮೆಚ್ಚುಗೆಗೆ ಪಾತ್ರನಾದನು.  ತನ್ನನು ನುಂಗಲು ಬಂದ ಸಿಂಹಿಕೆಯೆಂಬ ರಾಕ್ಷಸಿಯ ಹೊಟ್ಟೆಯೊಳಹೊಕ್ಕು ಅಲ್ಲಿಂದಲೇ ಅವಳನ್ನು ಸೀಳಿ ಸಾಯಿಸಿದನು.  ಕಡೆಗೆ ನೂರು ಯೋಜನ ಹಾರಿದ ಧೀರಹನುಮಂತನು ಲಂಕಾನಗರದ ದೇವತೆಯಾದ ಲಂಕಿಣಿಯನ್ನು ಗುದ್ದಿಎಡಗಾಲಿಟ್ಟು ಆ ಶತ್ರುನಗರಿಯ ಪ್ರವೇಶ ಮಾಡಿದನು.

ಹನುಮಂತನು ತನ್ನ ದೊಡ್ಡ ರೂಪವನ್ನು ಬಿಟ್ಟು ಚಿಕ್ಕ ಕೋತಿಯ ರೂಪವನ್ನು ತಾಳಿ ರಾತ್ರಿಯ ಕಾಲದಲ್ಲಿ ರಾವಣನ ಅಂತಃಪುರದೊಳಕ್ಕೆ ಬಂದು ನೂರಾರು ಹೆಂಗಸರ ನಡುವೆ ಮಂಡೋದರಿಯ ಪಕ್ಕದಲ್ಲಿ ಮಲಗಿದ್ದ ರಾವಣನನ್ನು ಕಂಡನು.  ಅಲ್ಲೆಲ್ಲಿಯೂ ಸೀತೆಯನ್ನು ಕಾಣದೆ  ಆ ದಶಕಂಠನ ಅಶೋಕವನಕ್ಕೆ ಹೋಗಿ ಅಲ್ಲಿಯ ಶಿಂಶುಪಾ ವೃಕ್ಷದ ಮೇಲೆ ಮರೆಯಲ್ಲಿ ಕುಳಿತಿದ್ದನು.  ಆಗ ಕತ್ತಲೆಯಾಗಿದ್ದುದರಿಂದ ಆ ಮರದಡಿಯಲ್ಲಿ ರಾಕ್ಷಸಿಯರಿಂದ ಸುತ್ತುವರಿಯಲ್ಪಟ್ಟ ಮಾಸಿದ ಸೀರೆಯನ್ನುಟ್ಟಿರುವ ಹೆಂಗಸೊಬ್ಬಳಿರುವುದು ಮರದ ಮೇಲಿದ್ದ ಮಾರುತಿಗೆ ಗೋಚರಿಸಲು ಆಕೆಯೇ ಜಾನಕಿಯಾಗಿರಬೇಕೆಂದು ಊಹಿಸಿ ಸೂರ್ಯೋದಯವಾಗುವುದನ್ನೇ ಕಾಯುತ್ತಿದ್ದನು.

ಮಾರನೆಯ ದಿನ ಬೆಳಿಗ್ಗೆ ರಾವಣನು ಅಲ್ಲಿಗೆ ಬಂದು ಸೀತೆಯನ್ನು ಕಂಡು ತನ್ನ ಪತ್ನಿಯಾಗುವಂತೆ ಗದರಿಸಲು ಆಕೆಯು ರಾಮನಿಗೆ ತನ್ನನ್ನು ಒಪ್ಪಿಸಿ ಕ್ಷಮೆ ಕೇಳಿಕೊಂಡು ಒಳ್ಳೆಯವನಾಗೆಂದು ಹೇಳುತ್ತಿದ್ದ ಸಂಗತಿಗಳೆಲ್ಲವೂ ಮೇಲಿದ್ದ ಹನುಮಂತನಿಗೆ ಸ್ಪಷ್ಟವಾಯಿತು.  ಸ್ವಲ್ಪ ಹೊತ್ತಿನಲ್ಲಿ ದಶಾನನು ಅಲ್ಲಿದ್ದ ರಾಕ್ಷಸಿಯರ ಪರಿವಾರಕ್ಕೆ ಸೀತೆಯನ್ನು ತನ್ನವಳಾಗಿ ಮಾಡಬೇಕೆಂದು ಆಜ್ಞೆಯಿತ್ತು ಹೋಗಲಾಗಿ, ಅವರೋ ಮೊದಲೇ ದುಃಖಿಯಾಗಿದ್ದ ವೈದೇಹಿಯನ್ನು ಮತ್ತಷ್ಟು ಗೋಳಾಡಿಸಿದರು.  ಆ ರಾಕ್ಷಸಿಯರ ಪರಿವಾರದಲ್ಲಿ ವಿಭೀಷಣನ ಮಗಳಾದ ತ್ರಿಜಟೆಯೆಂಬುವಳು ಸಾಧುವಾಗಿದ್ದಳು.  ಈಕೆಯು ಭೂಮಿಜೆಯನ್ನು ಸಮಾಧಾನಪಡಿಸಿ ಮಿಕ್ಕವರಿಗೆ ತಾನು ಸ್ವಪ್ನದಲ್ಲಿ ರಾಮನಿಂದ ರಾಕ್ಷಸರೆಲ್ಲ ವಧೆಯಾದಂತೆ ಕಂಡ ಸಂಗತಿಗಳನ್ನು ತಿಳಿಸಲು ಆ ರಕ್ಕಸಿಯರೆಲ್ಲರೂ ಹೆದರಿ ಸ್ವಲ್ಪ ಹೊತ್ತಾದ ಮೇಲೆ ಮಲಗಿಬಿಟ್ಟರು.

ಇಂತಹ ದೃಶ್ಯವನ್ನೆಲ್ಲಾ ನೋಡುತ್ತ ಮರದ ಮೇಲೆ ಕುಳಿತಿದ್ದ ಮಾರುತಿಗೆ ಅದೇ ಸೂಕ್ತ ಸಮಯವೆನಿಸಿ ಮೆಲ್ಲಗೆ ಶ್ರೀರಾಮ ಕಥೆಯನ್ನು ಹೇಳುತ್ತಾ ಬಂದನು.  ಆಗ ಜಾನಕಿಯು ಕತ್ತೆತ್ತಿ ನೋಡಿದ ಕೂಡಲೆ ಆಂಜನೇಯನು ಆಕೆಯೆದುರು ಧುಮುಕಿ ಬಂದು ಕೈಮುಗಿದು ನಿಂತನು.  ಮಾರುತಿಯು ಸೀತೆಗೆ ತಾನು ರಾಮದೂತನಾಗಿ ಅಲ್ಲಿ ಬಂದಿರುವ ವಿಚಾರವನ್ನು, ರಾಮಲಕ್ಷ್ಮಣರ ಕುಶಲವಾರ್ತೆಯನ್ನು ತಿಳಿಸಿ ಶ್ರೀರಾಮಮುದ್ರಿಕೆಯುಂಗುರವನ್ನು ಸೀತಾಮಾತೆಯ ಕೈಗೊಪ್ಪಿಸಿದಾಗ ಆಕೆಯ ಆನಂದಕ್ಕೆ ಪಾರವಿಲ್ಲದಾಯಿತು.  ಜಾನಕಿಯು ಹನುಮಂತನ ಸಾಹಸಕ್ಕೆ ಮೆಚ್ಚಿ ಆತನನ್ನು ಆಶೀರ್ವದಿಸಿದಳು.

ಮಾರುತಿಯು, ಸೀತೆಯು ಒಪ್ಪುವುದಾದರೆ ಅವಳನ್ನು ತನ್ನ ಹೆಗಲ ಮೇಲೆ ಕುಳ್ಳಿರಿಸಿಕೊಂಡು ರಾಮನ ಬಳಿಗೆ ಕರೆದುಕೊಂಡು ಹೋಗಿ ಬಿಡುವುದಾಗಿಯೂ ಸೂಚಿಸಿದನು  ಇದಕ್ಕೆ ವೈದೇಹಿಯು ಒಪ್ಪದೆ ಮಹಾಬಲಶಾಲಿಯಾದ ರಘುವೀರನೇ ಅಲ್ಲಿಗೆ ಶೀಘ್ರವಾಗಿ ಬಂದು ರಾವಣ ಸಂಹಾರಮಾಡಿ ತನ್ನನ್ನು ಕರೆದುಕೊಂಡು ಹೋಗುವಂತೆ ತಿಳಿಸಬೇಕೆಂದು ವೀರಾಂಜನೇಯನಿಗೆ ತಿಳಿಸಿದಳಲ್ಲದೆ, ರಾಮನು ಇನ್ನೊಂದು ತಿಂಗಳಲ್ಲಿ ಹಾಗೆ ತನ್ನನ್ನು ಕರೆದುಕೊಂಡು ಹೋಗದಿದ್ದರೆ ಪ್ರಾಣತ್ಯಾಗ ಮಾಡಿಕೊಳ್ಳುವುದಾಗಿಯೂ ಸೂಚಿಸಿ, ತನ್ನ ಪ್ರಾಣಕಾಂತನಿಗೆ ಮುಖ್ಯಪ್ರಾಣನ ಕೈಯಲ್ಲಿ ತನ್ನಲ್ಲಿದ್ದ ಚೂಡಾಮಣಿ ರತ್ನವನ್ನು ಗುರುತಾಗಿ ಕೊಟ್ಟು ಕಳುಹಿಸಿದಳು.

ಆ ಕೂಡಲೇ ವಾಯುಪುತ್ರನು ಸೀತೆಯಿಂದ ಬೀಳ್ಕೊಂಡು ಲಂಕಾಧಿಪತಿಯ ಬಲಪರೀಕ್ಷೆ ನಡೆಸಬೇಕೆಂದು ಆಲೋಚಿಸಿದನು.  ಕೂಡಲೇ ಅಶೋಕವನದ ಗಿಡಮರಗಳನ್ನು ಕಿತ್ತು ಅಲ್ಲಿದ್ದ ಕಾವಲುಗಾರರನ್ನು ಹೊಡೆದೋಡಿಸಿ ಕಾಳಗಕ್ಕೆ ಕಾಲ್ಕೆರೆದನು.  ಆ ದೂತರು ತಕ್ಷಣವೇ ರಾವಣನಿಗೆ ಈ ಕಪಿವೀರನ ಹಾವಳಿಯನ್ನು ತಿಳಿಸಲು ಆ ರಾಕ್ಷಸರಾಜನು ಎಂಬತ್ತು ಸಾವಿರ ಸೈನ್ಯ ಬಲವುಳ್ಳ ಕಿಂಕರರೆಂಬ ರಾಕ್ಷಸರನ್ನು ಹನುಮಂತನ ಮೇಲೆ ಯುದ್ಧಕ್ಕೆ ಕಳುಹಿಸಿದನು.  ಈ ಸೈನ್ಯ ಪಡೆ ಅಲ್ಲಿ ಆಂಜನೇಯನ ಬಳಿಗೆ ಬಂದ ಕೂಡಲೇ ತನ್ನಲ್ಲಿದ್ದ ವೃಕ್ಷ ಸಮೂಹಗಳಿಂದಲೇ ಆ ಕಿಂಕರರನ್ನೆಲ್ಲಾ ಯಮಕಿಂಕರರ ಬಳಿಗೆ ಬೇಗನೆ ಕಳುಹಿಸಿಬಿಟ್ಟನು.

ಮುಂದೆ ಜಂಬುಮಾಲಿಯೆಂಬ ರಾಕ್ಷಸನೂ ಏಳು ಮಂದಿ ಮಂತ್ರಿಕುಮಾರರೂ ಒಬ್ಬರಾದ ಮೇಲೊಬ್ಬರು ವಾಯುಪುತ್ರನ ಮೇಲೆ ಬೀಳಲು ಕ್ಷಣಾರ್ಧದಲ್ಲಿ ಅವರನ್ನೆಲ್ಲಾ ನಿರ್ನಾಮ ಮಾಡಿದನು.  ಅನಂತರ ರಾವಣನು ತನ್ನ ಮಗನಾದ ಅಕ್ಷಯ ಕುಮಾರನನ್ನು ಮಾರುತಿಯ ಮೇಲೆ ಯುದ್ಧಕ್ಕೆ ಕಳುಹಿಸಲು ಅವನನ್ನೂ ಯಮಪುರಿಗಟ್ಟಿದನು.

ಕಡೆಗೆ ರಾವಣನ ಮತ್ತೊಬ್ಬ ಮಗನಾದ ಇಂದ್ರಜಿತ್ತು ಆಂಜನೇಯನ ಮೇಲೆ ಯುದ್ಧಕ್ಕೆ ಬಂದು ಬ್ರಹ್ಮಾಸ್ತ್ರದಿಂದ ಅವನನ್ನು ಬಂಧಿಸಿದನು.  ಆಗ ರಾಕ್ಷಸ ಸೈನಿಕರು ಹನುಮಂತನನ್ನು ಮತ್ತಷ್ಟು ಹಗ್ಗಗಳಿಂದ ಕಟ್ಟಿ ರಾವಣನ ಆಸ್ಥಾನಕ್ಕೆ ಕರೆತಂದರು.  ರಾವಣನ ಮಂತ್ರಿಯಾದ ಪ್ರಹಸ್ತನು ರಾಜಾಜ್ಞೆಯಂತೆ ಅಂಜನೇಯನ ವಿಚಾರಣೆ ನಡೆಸಿದನು.  ಆಗ ಮಾರುತಿಯು ಅವರಿಗೆ ತಾನು ರಾಮದೂತನೆಂದೂ ವಾಲಿ ಪ್ರಮುಖರನ್ನು ಸಂಹರಿಸಿದ ಮಹಾಬಲಶಾಲಿಯಾದ ರಾಮನಿಗೆ ಒಳ್ಳೆಯ ಮಾತಿನಲ್ಲಿ ಸೀತೆಯನ್ನು ತಂದೊಪ್ಪಿಸದಿದ್ದರೆ ರಾವಣನ ನಾಶ ಖಂಡಿತವೆಂದೂ ಸಾರಿದನು.  ಇದನ್ನು ಕೇಳಿ ಕೋಪಗೊಂಡ ರಾವಣನು ಮಂತ್ರಿಗಳ ಮಾತಿನಂತೆ ಹನುಮಂತನ ಬಾಲಕ್ಕೆ ಬೆಂಕಿ ಹಚ್ಚಿಸಿದನು.

ಈ ಸಂಗತಿಯು ಸೀತೆಗೆ ತಿಳಿದಾಗ ಆಕೆಯು ತಾನು ಪತಿವ್ರತೆಯಾಗಿದ್ದರೆ ಹನುಮಂತನಿಗೆ ಬೆಂಕಿಯಕಾವು ತಟ್ಟದಿರಲೆಂದು ಅಗ್ನಿಯನ್ನು ಪ್ರಾರ್ಥಿಸಿದುದರಿಂದ ಆಂಜನೇಯನ ಬಾಲ ಉರಿಯುತ್ತಿದ್ದರೂ ಅವನಿಗೆ ಅದರ ಶಾಖದ ಪರಿವೆಯೇ ಇರಲಿಲ್ಲ.  ಆಗ ವಾಯುಪುತ್ರನು ವಾಯುವೇಗದಿಂದ ಲಂಕೆಯ ಮೇಲೆ ಹಾರಿ ಒಂದು ಕಡೆಯಿಂದ ಎಲ್ಲ ಮನೆಗಳನ್ನೂ ಅಗ್ನಿಗಾಹುತಿಮಾಡಿದನು.  ವಿಭೀಷಣನ ಗೃಹವೊಂದು ಬಿಟ್ಟು ಉಳಿದೆಲ್ಲ ಮನೆಗಳೂ ಸುಟ್ಟು ಬೂದಿಯಾದವು.  ಆಗ ಮಾರುತಿಯು ಸಮುದ್ರದ ನೀರಿನಲ್ಲಿ ತನ್ನ ಬಾಲವನ್ನಾರಿಸಿಕೊಂಡು ಬಂದು ಅಶೋಕವನಕ್ಕೆ ಹಿಂದಿರುಗಿ ಸೀತಾಕ್ಷೇಮವನ್ನು ನೋಡಿಕೊಂಡ ಕೂಡಲೇ, ಒಂದೇ ಪೆಟ್ಟಿಗೆ ಸಮುದ್ರಲಂಘನ ಮಾಡಿ ಮಹೇಂದ್ರ ಪರ್ವತದ ಮೇಲೆ ಬಂದಿಳಿದನು.  ಆಗ ಕಪಿವೀರರೆಲ್ಲರೂ ಸಂತೋಷದಿಂದ ಕುಣಿದಾಡುತ್ತಾ ಹನುಮಂತನನ್ನು ಕೊಂಡಾಡುತ್ತಾ, ಆತನೊಡನೆ ಸುಗ್ರೀವ ರಾಮಲಕ್ಷ್ಮಣರು ಇದ್ದ ಸ್ಥಳಕ್ಕೆ ಧಾವಿಸಿದರು.  ರಾಮನಿಗೆ ಅಂಜನೆಯನು ಸೀತಾದೇವಿಯ ಇಂಗಿತವನ್ನೂ ಕುಶಲವನ್ನೂ ತಿಳಿಸಿ ಆಕೆಯು ಕೊಟ್ಟ ಚೂಡಾಮಣಿಯನ್ನು ಕೊಟ್ಟನು.  ಆಗ ರಾಮಭದ್ರನು ತನ್ನ ಭಕ್ತನಾದ ಅಂಜನೇಯನನ್ನು ಆಲಂಗಿಸಿಕೊಂಡು ಆತನ ಸಾಹಸವನ್ನು ಕೊಂಡಾಡಿದನು.  ಹಾಗೆಯೇ ಲಕ್ಷ್ಮಣ ಸುಗ್ರೀವ ಜಾಂಬುವಂತರೇ ಮೊದಲಾದವರೆಲ್ಲರ ಹರ್ಷಕ್ಕೂ ಪಾರವಿಲ್ಲದಾಯ್ತು.

ಯುದ್ಧಕಾಂಡ 

ಸುಗ್ರೀವಾಜ್ಞೆಯಂತೆ  ಸಮಸ್ತವಾನರ ಸೈನ್ಯವು ದಕ್ಷಿಣಸಮುದ್ರ ತೀರಕ್ಕೆ ಬಂದು ನೆರೆಯಿತು.  ರಾಮಲಕ್ಷ್ಮಣರು ಸುಗ್ರೀವ ಪ್ರಮುಖರೊಡನೆ ಸೇತು ಬಂಧನದ ಪ್ರಸ್ತಾಪಮಾಡಿ ಲಂಕೆಯ ಮೇಲೆ ದಂಡೆತ್ತಿ ಹೋಗುವ ಸಮಾಲೋಚನೆ ನಡೆಸುತ್ತಿದ್ದರು.

ಇತ್ತ ಮಾರುತಿಯು ಲಂಕಾನಾಶವನ್ನು ಮಾಡಿ ಬಂದ ಕೂಡಲೇ ದಶಗ್ರೀವನಿಗೆ ಚಿಂತೆಯಾಗಿ ರಾಕ್ಷಸವೀರರೊಡನೆ ಮಂತ್ರಾಲೋಚನೆ ನಡೆಸಿದನು.  ರಾವಣನ ತಮ್ಮನಾದ ವಿಭೀಷಣನು ಧರ್ಮಿಷ್ಠನಾದುದರಿಂಡ ರಾಜನ ಸಭೆಯಲ್ಲಿ ಅಣ್ಣನಿಗೆ ವಿವೇಕ ಹೇಳಿದರೂ ಪ್ರಯೋಜನವಾಗದುದರಿಂದ ಅವನು ಲಂಕೆಯನ್ನು ಬಿಟ್ಟು ರಾಮನ ಮೊರೆಹೋಗಲು ಆಕಾಶಮಾರ್ಗವಾಗಿ ಬರುತ್ತಿದ್ದನು.  ಆಂಜನೇಯನ ಮಾತಿನಂತೆ ರಘುರಾಮನು ವಿಭೀಷಣನನ್ನು ಸ್ವಾಗತಿಸಿದನು.  ಶ್ರೀರಾಮನು ತನ್ನನ್ನು ಮೊರೆಹೊಕ್ಕ ವಿಭೀಷಣನಿಗೆ ಮುಂದೆ ಲಂಕಾಧಿಪತ್ಯ ಕೊಡಿಸುವುದಾಗಿಯೂ ಅಭಯವಿತ್ತನು.

ಬಳಿಕ ಸೇತುಬಂಧನ ಮಾಡುವ ಸಂದರ್ಭದಲ್ಲಿ ರಾಮನು ಮೂರು ದಿನಗಳ ಕಾಲ ಸಮುದ್ರ ರಾಜನನ್ನು ಸ್ತೋತ್ರ ಮಾಡಿದರೂ ಪ್ರಸನ್ನನಾಗಲಿಲ್ಲವಾದ ಕಾರಣ, ಅವನ ಮೇಲೆ ಆಗ್ನೇಯಾಸ್ತ್ರ ಪ್ರಯೋಗಮಾಡಿದನು.  ಇದರಿಂದ ತಲ್ಲಣಗೊಂಡ ಸಮುದ್ರರಾಜನು ರಘುವೀರನ ಕ್ಷಮೆಬೇಡಿ ತನ್ನ ಮೇಲೆ ಸೇತುವೆ ಕಟ್ಟಲು ದಾರಿಮಾಡಿಕೊಟ್ಟನು.  ನಳನೆಂಬ ಕಪಿವೀರನ ಮುಖಂಡತ್ವದಲ್ಲಿ ಲಂಕೆಯವರೆಗೆ ಮಹಾಸೇತುವೆಯ ನಿರ್ಮಾಣವಾಯಿತು.  ಆಗ ಸಮಸ್ತ ವಾನರ ಸೈನ್ಯದೊಡನೆ ರಾಮಲಕ್ಷ್ಮಣರು ಆ ಸೇತುವೆಯ ಮೇಲೆ ನಡೆದು ಹೋಗಿ ಲಂಕೆಯ ಹೊರವಲಯಕ್ಕೆ ಬಂದು ಸೇರಿದರು.  

ರಾಮಸೇನೆ ಲಂಕೆಯನ್ನಾವರಿಸಿದ ಕೂಡಲೇ ರಾಕ್ಷಸರಿಗೂ ಕಪಿವೀರರಿಗೂ ಯುದ್ಧ ಆರಂಭವಾಯಿತು. ಕಪಿಗಳು ಕಲ್ಲುಗುಂಡು ಮರಗಳಿಂದ ಅನೇಕ ರಾಕ್ಷಸರನ್ನು ಸಂಹರಿಸಿದರು.  ರಾವಣನ ಮಗನಾದ ಇಂದ್ರಜಿತುವು ನಾಗಾಸ್ತ್ರದಿಂದ ರಾಮಲಕ್ಷ್ಮಣರನ್ನು ಬಂಧಿಸಲು, ಆಕಾಶದಿಂದ ಅಲ್ಲಿಗೆ ಬಂದ ಗರುಡನ ಸಹಾಯದಿಂದ ಅವರನ್ನು ಸುತ್ತುಗೊಂಡಿದ್ದ ಸರ್ಪಗಳಿಂದ ಬಿಡುಗಡೆಯಾಯಿತು.  

ಮುಂದೆ ಯುದ್ಧಕ್ಕೆ ಬಂದ ಧೂಮ್ರಾಕ್ಷನನ್ನು ಹನುಮಂತನೂ, ವಜ್ರದಂಷ್ಟ್ರನನ್ನು ಅಂಗದನೂ, ಪ್ರಹಸ್ತನನ್ನು ನೀಲನೂ ಸಂಹರಿಸಿದರು.  ಹೀಗೆ ಯುದ್ಧವೀರರೆಲ್ಲಸತ್ತುಹೋದುದರಿಂದ ಕೋಪಾವಿಷ್ಟನಾದ ರಾವಣನು ತಾನೇ ಯುದ್ಧಕ್ಕೆ ಬಂದು ಅನೇಕ ಕಪಿವೀರರನ್ನು ಕೆಳಗುರುಳಿಸಿ ಲಕ್ಷ್ಮಣನನ್ನು ಶಕ್ಯಾಯುಧದಿಂದ ಮೂರ್ಛೆಗೊಳಿಸಿದನು.  ಆಗ ರಾಮನಿಗೆ ಕೋಪಬಂದು ಆಂಜನೆಯನ ಭುಜದ ಮೇಲೇರಿ ಕುಳಿತು ರಾವಣನ ರಥವನ್ನು ಪುಡಿಮಾಡಿ ತನ್ನ ಬಾಣಗಳಿಂದ ಅವನನ್ನು ನೋಯಿಸಿದ್ದಲ್ಲದೆ, ಆ ರಥವಿಹೀನನನ್ನು ಮತ್ತೊಮ್ಮೆ ಯುದ್ಧಕ್ಕೆ ಬರುವಂತೆ ಹೇಳಿಕಳುಹಿಸಿದನು.

ಬಳಿಕ ರಾವಣನು ತನ್ನ ತಮ್ಮನಾದ ಕುಂಭಕರ್ಣನನ್ನು ನಿದ್ರೆಯಿಂದ ಎಬ್ಬಿಸಿ ಯುದ್ಧಕ್ಕೆ ಅಟ್ಟಿದನು.  ಅವನು ಸುಗ್ರೀವನ ಮೇಲೆ ಯುದ್ಧಕ್ಕೆ ಹೋಗಿ ಅವನಿಂದ ಕಿವಿಮೂಗುಗಳನ್ನು ಕಚ್ಚಿಸಿಕೊಂಡನು.  ಕುಂಭಕರ್ಣನು ಹಾಗೆಯೇ ರಾಮನ ಮೇಲೆ ಯುದ್ಧಕ್ಕೆ ಹೋಗಲು, ರಾಮಚಂದ್ರನು ಒಂದೇ ಬಾಣದಿಂದ ಅವನ ಶಿರಚ್ಛೇದನ ಮಾಡಿದನು.

ಕುಂಭಕರ್ಣನ ವಧೆಯಿಂದ ರಾವಣನು ದುಃಖಾಕ್ರಾಂತನಾಗಲು ಇಂದ್ರಜಿತ್ತು ತಂದೆಗೆ ಸಮಾಧಾನ ಹೇಳಿ ಕೋಪದಿಂದ ಯುದ್ಧಕ್ಕೆ ಬಂದು ರಾಮ ಲಕ್ಷ್ಮಣರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದನು.  ಇದರಿಂದ ರಾಮಲಕ್ಷ್ಮಣರು ಸೈನ್ಯಸಮೇತರಾಗಿ ಮೂರ್ಛೆಗೊಂಡರು.  ಕೂಡಲೇ ಜಾಂಬವಂತನ ಸಲಹೆಯಂತೆ ಮೂಲಿಕೆಯನ್ನು ತರಲು ಆಂಜನೇಯನು ಗಗನಕ್ಕೆ ಚಿಮ್ಮಿ ಹಿಮಾಲಯದತ್ತ ಇದ್ದ ಔಷಧಿಪರ್ವತವನ್ನೇ ಕಿತ್ತು ತಂದುಕೊಟ್ಟುದರಿಂದ ರಾಮಲಕ್ಷ್ಮಣಾದಿಗಳ ಜೀವ ಉಳಿಯಿತು.

ಇತ್ತ ಇಂದ್ರಜಿತ್ತು ಶತ್ರು ನಿಗ್ರಹಕ್ಕಾಗಿ ನಿಕುಂಭಿಲಾಯಾಗ ಮಾಡುತ್ತಿರಲು ಲಕ್ಷ್ಮಣನು ಅವನನ್ನು ಯುದ್ಧಕ್ಕೆ ಕರೆದು ಬ್ರಹ್ಮಾಸ್ತ್ರ ಪ್ರಯೋಗ ಮಾಡಿ ಅವನನ್ನು ಸಾಯಿಸಿದನು.  ಹೀಗೆ ಪುತ್ರಮಿತ್ರಾನುಜರನ್ನೆಲ್ಲಾ ಕಳೆದುಕೊಂಡು ಸರ್ವನಾಶವಾದ ಮೇಲೆ ರಾವಣನು ರಾಮನ ಮೇಲೆ ಯುದ್ಧಕ್ಕೆ ಬಂದನು.  ಲೋಕಕಂಟಕನಾದ ರಾವಣನ ವಧೆಯ ಸಮಯದಲ್ಲಿ ರಾಮನಿಗೆ ದೇವೇಂದ್ರನು ದಿವ್ಯವಾದ ರಥವನ್ನೂ ಧನುರ್ಬಾಣಗಳನ್ನೂ ಒದಗಿಸಿಕೊಟ್ಟನು.

ಅಪ್ರತಿಮವಾದ ರಾಮರಾವಣರ ಯುದ್ಧವು ಭಯಂಕರ ರೀತಿಯಲ್ಲಿ ನಡೆಯಿತು.  ರಾಮನು ತನ್ನ ಬಾಣಗಳಿಂದ ದಶಶಿರನ ತಲೆಗಳನ್ನು ಎಷ್ಟೆಷ್ಟು ಬಾರಿ ಕಡಿದುಹಾಕಿದರೂ ಅವು ಮತ್ತೆ ಮತ್ತೆ ಹುಟ್ಟಿಕೊಳ್ಳುತ್ತಿದ್ದವು.  ಕಡೆಗೆ ರಾಮನು ಬ್ರಹ್ಮಾಸ್ತ್ರವನ್ನು ಬಿಟ್ಟು ರಾವಣನನ್ನು ಸಂಹರಿಸಿದನು.  ಇದರಿಂದ ಸಮಸ್ತ ಜನರಿಗೆ ಮಾತ್ರವಲ್ಲದೆ ಸಕಲ ಲೋಕಕ್ಕೂ ಸಂತೋಷವಾಯಿತು.  

ಇತ್ತ ವಿಭೀಷಣನು ರಾವಣನಿಗೆ ಉತ್ತರ ಕ್ರಿಯೆಗಳನ್ನು ನಡೆಸಿದನು.  ಅನಂತರ ರಾಮನು ವಿಭೀಷಣನಿಗೆ ಲಂಕಾ ರಾಜ್ಯದಲ್ಲಿ ಪಟ್ಟಾಭಿಷೇಕ ಮಾಡಿಸಿದನು.  ಹನುಮಂತನು ರಾವಣವಧೆಯಾದ ಸಂಗತಿ ಸೀತೆಗೆ ತಿಳಿಸಿ ಕೂಡಲೇ ರಾಮನಲ್ಲಿಗೆ ಕರೆತಂದನು.  ಆಗ ರಾಮನು ಸೀತೆಯನ್ನು ಕಟುವಾಗಿ ಮಾತನಾಡಿಸಲು, ಆಕೆಯು ಎಲ್ಲರೆದುರು ಅಗ್ನಿ ಕುಂಡವನ್ನು ಏರ್ಪಡಿಸಿ ಅದರಲ್ಲಿ ಪ್ರವೇಶಿಸಿದಳು.  ಕೂಡಲೇ ಅಗ್ನಿದೇವನು ಸ್ವಲ್ಪವೂ ನೋವಾಗದಂತೆ ಪತಿವ್ರತೆಯಾದ ಸೀತೆಯನ್ನು ತಂದು ರಾಮನಿಗೊಪ್ಪಿಸಲು ಆಗ ಆತನು ಸಂತೋಷದಿಂದ ಸ್ವೀಕರಿಸಿದನು.  ಆಗ ದೇವತೆಗಳು ಹೂಮಳೆಗರೆದರು.  ಈ ವೇಳೆಗೆ ರಾಮನು ವನವಾಸ ಮಾಡಿ ಹದಿನಾಲ್ಕು ವರ್ಷ ಸಮೀಪಿಸಿತ್ತು.  ಶ್ರೀ ಸೀತಾಲಕ್ಷ್ಮಣ ಸಮೇತನಾದ ಶ್ರೀರಾಮಚಂದ್ರನು ಸಮಸ್ತ ಪರಿವಾರದೊಡನೆ ಪುಷ್ಪಕ ವಿಮಾನದಲ್ಲಿ ಕುಳಿತು ಅಯೋಧ್ಯೆಯತ್ತ ಪ್ರಯಾಣ ಮಾಡಿದನು.  ದಾರಿಯಲ್ಲಿ ಭಾರದ್ವಾಜ ಮುನಿಗಳ ಆಶ್ರಮದಲ್ಲಿ ಉಳಿದು ಅವರ ಆಶೀರ್ವಾದವನ್ನು ಸಂಪಾದಿಸಿದನು.  ಆಗ ರಾಮನು ಹನುಮಂತನನ್ನು ಭರತನ ಬಳಿಗೆ ಮುಂದಾಗಿ ಕಳುಹಿಸಿ ತನ್ನ ಬರುವಿಕೆಯನ್ನು ತಿಳಿಯ ಹೇಳಿದನು.  ಅದರಂತೆ ಮಾರುತಿಯು ನಂದಿಗ್ರಾಮಕ್ಕೆ ಹಾರಿಬಂದು ರಾಮಾಗಮನಕ್ಕೆ ಪರಿತಪಿಸುತ್ತಾ ಅಗ್ನಿಪ್ರವೇಶಕ್ಕೆ ಸಿದ್ಧನಾಗಿದ್ದ ಭರತನನ್ನು ತಡೆದು, ರಾಮನು ಬರುತ್ತಿರುವ ಸಂತೋಷದ ಸುದ್ದಿಯನ್ನು ತಿಳಿಸಿದನು.  ಆಗ ಭರತನಿಗೆ ಪರಮಾನಂದವಾಯಿತು.

ನಂದಿಗ್ರಾಮಕೆ ಪುಷ್ಪಕ ವಿಮಾನದಲ್ಲಿ ರಾಮನು ಬಂದಕೂಡಲೇ ಭರತನು ಸುವರ್ಣ ಪಾದುಕೆಗಳನ್ನು ರಾಮನಿಗೆ ತೊಡಿಸಿ, ರಾಮ ಪಾದಗಳ ಮೇಲೆ ಬಿದ್ದು ಹೊರಳಾಡಿದನು.  ಆಗ ರಾಮಭದ್ರನು ಭರತನನ್ನೂ, ಶತ್ರುಘ್ನನನ್ನೂ ಆಲಂಗಿಸಿಕೊಂಡ ಮೇಲೆ ನಂದಿ ಗ್ರಾಮ ಪ್ರವೇಶ ಮಾಡಿದನು.  ಭರತನು ರಾಮನನ್ನು ರಥದಲ್ಲಿ ಕುಳ್ಳಿರಿಸಿಕೊಂಡು ಅಯೋಧ್ಯೆಗೆ ಕರೆತಂದನು.  ಶೋಕಭರಿತನಾದ ಭರತನು ರಾಮಚಂದ್ರನಿಗೆ ರಾಜ್ಯವನ್ನು ಹಿಂದಿರುಗಿವಹಿಸಿಕೊಳ್ಳುವಂತೆ ಪ್ರಾರ್ಥಿಸಿಕೊಂಡು ಒಪ್ಪಿಸಿದನು.  ಕಡೆಗೆ ಎಲ್ಲರೂ ಶೃಂಗಾರವಾದ ಅಯೋಧ್ಯೆಯನ್ನು ಪ್ರವೇಶಿಸಿದರು.  ರಾಮನು ತನ್ನ ತಾಯಿಯಾದ ಕೌಸಲ್ಯೆಗೂ ಗುರುಹಿರಿಯರಿಗೂ ನಮಸ್ಕರಿಸಿ ಎಲ್ಲರಿಗೂ ಆನಂದವನ್ನು ತಂದನು.

ಮುಂದೆ ಶ್ರೀರಾಮಚಂದ್ರನ ಪಟ್ಟಾಭಿಷೇಕದ ಸಮಸ್ತ ಸಿದ್ಧತೆಗಳೂ ನಡೆದವು.  ವಾನರ ಶ್ರೇಷ್ಠರಿಂದ ಸುಗ್ರೀವನು ಪುಣ್ಯನದೀ ಸಮುದ್ರಗಳಿಂದ ಅಭಿಷೇಕಕ್ಕೆ ಜಲವನ್ನು ತರಿಸಿದನು.  ಅನಂತರ ವಸಿಷ್ಠರು ಶ್ರೀರಾಮನನ್ನು ಸೀತಾದೇವಿಯೊಡನೆ ರತ್ನಸಿಂಹಾಸನದಲ್ಲಿ ಕುಳ್ಳಿರಿಸಿ ಪುಣ್ಯೋದಕಗಳಿಂದ ಸ್ನಾನ ಮಾಡಿಸಿದರು.  ಶಾಸ್ತ್ರವಿಧಿಯಂತೆ ಶ್ರೀರಾಮನಿಗೆ ರತ್ನಕಿರೀಟಧಾರಣೆಯೊಡನೆ ಪಟ್ಟಾಭಿಷೇಕವು ವಿಜ್ರಂಭಣೆಯಿಂದ ನೆರವೇರಿತು.  ಇಂತಹ ಸಂತೋಷಸಮಯದಲ್ಲಿ ಶ್ರೀರಾಮನು ಸುಗ್ರೀವ ಹನುಮಂತ ವಿಭೀಷಣಾದಿಗಳಿಗೆಲ್ಲಾ ತಕ್ಕ ಬಹುಮಾನಗಳನ್ನು ಕೊಡಿಸಿ ದಾನಧರ್ಮಾದಿಗಳನ್ನು ನಡೆಸಿದನು.  ಶ್ರೀರಾಮನು ಭರತನಿಗೆ ಯುವರಾಜ ಪಟ್ಟವನ್ನು ಕಟ್ಟಿದನು.  ಅಯೋಧ್ಯೆಯಲ್ಲಿ ಸತ್ಯ ಪರಾಕ್ರಮಿಯಾದ ಶ್ರೀರಾಮಚಂದ್ರನು ಒಂದು ಸಾವಿರ ವರ್ಷಗಳ ಕಾಲ ಧರ್ಮದಿಂದ ರಾಜ್ಯವಾಳುತ್ತಾ ಸುಖದಿಂದಿದ್ದನು.

ಉತ್ತರಕಾಂಡ

ಹಿಮೆ ಪುಲಸ್ತ್ಯನೆಂಬ ಬ್ರಹ್ಮಋಷಿಗೆ ವಿಶ್ರವಸ್ಸು ಎಂಬ ಮಗನಾದನು.  ಈ ವಿಶ್ರವಸ್ಸುವಿಗೆ ದೇವದರ್ಣಿಯಲ್ಲಿ ವೈಶ್ರವಣನೆಂಬ ಪುತ್ರ  ಜನಿಸಿದನು.  ಈತನೇ ದೇವತೆಗಳ ನಿಧಿಯನ್ನು ನೋಡಿಕೊಳ್ಳುವ ಕುಬೇರನೆನಿಸಿದನು.  ಈ ವಿಶ್ರವಸ್ಸುವಿಗೆ ಕೈಕಸಿಯೆಂಬ ಮತ್ತೊಬ್ಬ ರಾಕ್ಷಸ ಸ್ತ್ರೀಯಲ್ಲಿ ದಶಗ್ರೀವ, ಕುಂಭಕರ್ಣ ಮತ್ತು ವಿಭೀಷಣರೆಂಬ ಮೂವರು ಗಂಡುಮಕ್ಕಳೂ, ಶೂರ್ಪನಖಿಯೆಂಬ ಮಗಳೂ ಹುಟ್ಟಿದರು.  ಇವರಲ್ಲಿ ದಶಗ್ರೀವನು ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ ತನಗೆ ದೇವವರ್ಗದವರಾರಿಂದಲೂ ಮರಣವುಂಟಾಗ ಬಾರದೆಂಬ ವರವನ್ನು ಮಾತ್ರ ಪಡೆದಿದ್ದನು.  ಕುಂಭಕರ್ಣನಿಗೆ ಮಂಕು ಕವಿದು ತನಗೆ ನಿದ್ರೆ ಬೇಕೆಂದು ಕೇಳಿದ್ದುದರಿಂದ ಅವನು ಸದಾ ನಿದ್ರಿಸುತ್ತಿದ್ದನು.  ವಿಭೀಷಣನು ತಾನು ಧರ್ಮಿಷ್ಠನಾಗಿರುವಂತೆ ವರವನ್ನು ಬೇಡಿ ಅದೇ ರೀತಿ ಹೆಸರುವಾಸಿಯಾದನು.

ದಶಗ್ರೀವನು ತನ್ನ ಅಣ್ಣನಾದ ಕುಬೇರನನ್ನು ಹೆದರಿಸಿ ಲಂಕೆಯನ್ನು ಆಕ್ರಮಿಸಿಕೊಂಡುದರಿಂದ ಕುಬೇರನು ಕೈಲಾಸದಲ್ಲಿ ತನ್ನ ರಾಜ್ಯವನ್ನು ಕಟ್ಟಿಕೊಂಡನು.  ಅಲ್ಲಿಗೂ ದಶಗ್ರೀವನು ಕುಬೇರನ ಮೇಲೆ ಯುದ್ಧಕ್ಕೆ ಹೋಗಿ ಅಪೂರ್ವವಾದ ಪುಷ್ಪಕ ವಿಮಾನವನ್ನು ಕಿತ್ತುಕೊಂಡು ಬಂದಿದ್ದನು.  ತನ್ನ ವಿಮಾನಕ್ಕೆ ತಡೆ ಮಾಡಿತೆಂಬ ಕಾರಣದಿಂದ, ಕೈಲಾಸ ಪರ್ವತವನ್ನೇ ಕಿತ್ತೊಗೆಯಲು ಆ ಪರ್ವತದ ಅಡಿಗೆ ಕೈಯಿಟ್ಟು ಅಲುಗಿಸಿದನು.  ಆಗ ಪರಶಿವನು ತನ್ನ ಬೆರಳಿನಿಂದ ಅದುಮಿದಾಗ ದಶಗ್ರೀವನು ಲೋಕವೆಲ್ಲಾ ನಡುಗುವಂತೆ ಕಿರುಚಿಕೊಂಡನು.  ಈ ಕಾರಣದಿಂದಲೇ ಅವನಿಗೆ ರಾವಣನೆಂಬ ಹೆಸರಾಯಿತು.  ಕಡೆಗೆ ರಾವಣನು ಶಿವನನ್ನು ಕುರಿತು ತಪಸ್ಸುಮಾಡಿ ಅನೇಕ ವರಗಳನ್ನು ಪಡೆದನು.  ಇಲ್ಲಿಂದ ಮುಂದೆ ರಾವಣನು ಅವನ ಮಗನಾದ ಇಂದ್ರಜಿತ್ತುವಿನೊಡನೆ ಕೊಬ್ಬಿನಿಂದ ದೇವತೆಗಳನ್ನು ಋಷಿಗಳನ್ನೂ ಬಹಳವಾಗಿ ಹಿಂಸೆ ಮಾಡುತ್ತಿದ್ದುದರಿಂದ ದೇವತೆಗಳು ರಾವಣನ ಬಾಧೆ ತಾಳಲಾರದೆ ಮಹಾ ವಿಷ್ಣುವಿನ ಮೊರೆಹೊಕ್ಕಿದ್ದರು.  ಇದರಿಂದಲೇ ಶ್ರೀಹರಿಯು ಮಾನವನಾಗಿ ಶ್ರೀರಾಮಾವತಾರ ತಾಳಬೇಕಾಯಿತು.  

ಶ್ರೀರಾಮಚಂದ್ರನು ತನ್ನ ತಮ್ಮಂದಿರೊಡಗೂಡಿ ಅನೇಕ ವರ್ಷಕಾಲ ಧರ್ಮದಿಂದ ರಾಜ್ಯ ಪರಿಪಾಲನೆ ಮಾಡುತ್ತಿದ್ದನು.  ರಾಮರಾಜ್ಯದಲ್ಲಿ ಯಾವುದಕ್ಕೂ ಕೊರತೆಯೇ ಇರಲಿಲ್ಲ.  ಸೀತೆಯು ಗರ್ಭಿಣಿಯಾದಳು.  ಒಮ್ಮೆ ಆಕೆಯು ತನ್ನ ವಲ್ಲಭನಲ್ಲಿ ವನಾಶ್ರಮಗಳಲ್ಲಿನ ಋಷಿಪತ್ನಿಯರನ್ನು ಮತ್ತೊಂದು ಸಲ ತಾನು ನೋಡಿಕೊಂಡು ಬರುವ ಬಯಕೆಯನ್ನು ತಿಳಿಸಿದ್ದಳು.  ಇದಕ್ಕೆ ಸೀತಾಪತಿಯು ಸಮ್ಮತಿಸಿದನು.  

ಹೀಗಿರಲು ನಿತ್ಯವೂ ಪ್ರಜೆಗಳ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದ ಶ್ರೀರಾಮನಿಗೆ ಒಂದು ದಿನ ಅಪ್ರಿಯವಾರ್ತೆ ಮುಟ್ಟಿತು.  ರಾವಣನ ವಶದಲ್ಲಿ ಹಿಂದೆ ಸೀತೆಯೂ ಇದ್ದ ವಿಷಯವನ್ನು ಒಬ್ಬ ಅಗಸನು ತುಚ್ಛವಾದ ರೀತಿಯಲ್ಲಿ ತನ್ನ ಪತ್ನಿಗೆ ತಿಳಿಸಿದ ಸಂಗತಿಯು ರಾಮನನ್ನು ಚಿಂತಾಕ್ರಾಂತನನ್ನಾಗಿ ಮಾಡಿತು.  ಲೋಕಾಪವಾದಕ್ಕೆ ಹೆದರಿ ವೈದೇಹಿಯನ್ನು ತಾನು ಕೊಡಲೇ ತ್ಯಜಿಸುವ ನಿಶ್ಚಯಮಾಡಿ ನಿರಪರಾಧಿಯೂ ಪತಿವ್ರತೆಯೂ ಆದ ಸೀತೆಯನ್ನು ಕಾಡಿನಲ್ಲಿ ಬಿಟ್ಟು ಬರುವಂತೆ ಲಕ್ಷ್ಮಣನಿಗೆ ಕಟ್ಟಪ್ಪಣೆ ಮಾಡಿದನು.  ಆಗ ಸೌಮಿತ್ರಿಯು ತನಗಿಷ್ಟವಿಲ್ಲದಿದ್ದರೂ ವನಾಭಿಲಾಷೆಯಲ್ಲಿದ್ದ ಸೀತೆಯನ್ನು ರಥದಲ್ಲಿ ಕರೆದುಕೊಂಡು ಹೋಗಿ ವನಾಂತರದಲ್ಲಿ ಬಿಟ್ಟುಬಂದನು. 

ದಿವ್ಯಜ್ಞಾನಿಗಳಾದ ವಾಲ್ಮೀಕಿ ಋಷಿಗಳು ಗರ್ಭಿಣಿಯಾದ ಸೀತೆಯನ್ನು ತಮ್ಮ ಆಶ್ರಮಕ್ಕೆ ಕರೆದುಕೊಂಡು ಹೋಗಿ ರಕ್ಷಿಸುತ್ತಿದ್ದರು.  ಕಾಲಕ್ರಮದಲ್ಲಿ ಜಾನಕಿಗೆ ಲವಕುಶರೆಂಬ ಆವಳಿ ಮಕ್ಕಳಾದರು.  ವಾಲ್ಮೀಕಿ ಮುನಿಗಳು ಈ ಲವಕುಶರನ್ನು ಸಕಲ ವಿದ್ಯಾಪಾರಂತರನ್ನಾಗಿ ಮಾಡಿದರು.

ಇತ್ತ ಶ್ರೀರಾಮನು ಆತ್ಮಶಾಂತಿಗೂ ಲೋಕಕಲ್ಯಾಣಕ್ಕೂ ಅಶ್ವಮೇಧಯಾಗವನ್ನು ಕೈಗೊಂಡು ವೈಭವದಿಂದ ಆಚರಿಸಿದನು.  ಆ ಸಮಯದಲ್ಲಿ ವಾಲ್ಮೀಕಿ ಮಹರ್ಷಿಗಳು ಶ್ರೀರಾಮನಿಗೆ ಆತನ ಮಕ್ಕಳಾದ ಲವಕುಶರನ್ನು ಒಪ್ಪಿಸಿ ಅವರಿಂದ ಶ್ರೀಮದ್ರಾಮಾಯಣವನ್ನು ಗಾನ ಮಾಡಿಸಿದರು.  ಆಗ ರಾಮನಿಗೆ ಅಪಾರ ಆನಂದವುಂಟಾಯಿತು.  ಆದರೆ ಶ್ರೀರಾಮನ ಪಾತಿವ್ರತ್ಯ ಪರೀಕ್ಷೆಯಿಂದ ನೊಂದ ಸೀತಾಮಾತೆಯು ತನ್ನ ತಾಯಿಯಾದ ಭೋದೇವಿಯ ಬಳಿ ಹೋಗಿ ಸೇರಿಬಿಟ್ಟಳು.  ಇದರಿಂದ ರಾಮಚಂದ್ರನು ಪರಿತಪಿಸಬೇಕಾಯಿತು.

ಶ್ರೀರಾಮನು ತನ್ನ ಮಕ್ಕಳಾದ ಲವಕುಶರಿಗೆ ರಾಜ್ಯಾಭಿಷೇಕಮಾಡಿ, ತಾನು ದಿವ್ಯವಾದ ವೈಕುಂಠಲೋಕಕ್ಕೆ ತೆರಳಿದನು.  ಭೂಲೋಕದಲ್ಲಿ ಲೀಲಾನಾಟಕವನ್ನಾಡಿದ ಶ್ರೀ ಸೀತಾರಾಮರೇ ಶ್ರೀ ಲಕ್ಷ್ಮೀನಾರಾಯಣರಾಗಿ ಮತ್ತೆ ವೈಕುಂಠದಲ್ಲಿ ಶೋಭಿಸಿದರು.  ಹೀಗೆ ದುಷ್ಟ ಶಿಕ್ಷಣ ಮತ್ತು ಶಿಷ್ಟಪರಿಪಾಲನಾರ್ಥವಾದ ಶ್ರೀರಾಮಾವತಾರವು ಕೊನೆಗೊಂಡಿತು.

ಶ್ರೀಮದ್ವಾಲ್ಮೀಕಿ ಮಹರ್ಷಿಗಳಿಂದ ರಚಿತವಾದ ಶ್ರೀಮದ್ರಾಮಾಯಣವನ್ನು ಸಂಗ್ರಹವಾಗಿಯಾದರೂ ಓದಿ ತಿಳಿದುಕೊಂಡವರೆಲ್ಲರಿಗೂ ಮಂಗಳವುಂಟಾಗುವುದು.  ತನ್ನನ್ನು ನೆನೆದ ಭಕ್ತರ ಕೋರಿಕೆಗಳನ್ನು ಆ ಶ್ರೀರಾಮನು ನೆರವೆರಿಸುವನು.  ಶ್ರೀ ಸೀತಾರಾಮಾಂಜನೇಯರು ನಮ್ಮೆಲ್ಲರ ಹೃದಯ ಮಂದಿರದಲ್ಲಿ ನೆಲೆಸುವಂತಾಗಲಿ.

ಶ್ರೀ ಸೀತಾರಾಮಾಂಜನೇಯರಲ್ಲಿ ಒಬ್ಬೊಬ್ಬರ ಗುಣಗಳೂ ಅಪಾರವಾಗಿ ವಾಲ್ಮೀಕಿ ರಾಮಾಯಣದಲ್ಲಿ ವರ್ಣಿತವಾಗಿವೆ.  ಸೌಂದರ್ಯ, ಮಾಧುರ್ಯ, ಕ್ಷಮೆ, ವಿವೇಕ, ಧೈರ್ಯ ಮತ್ತು ಪ್ರತಿಭಕ್ತಿಗಳಿಗೆ ಪ್ರಸಿದ್ಧಳಾಗಿರುವ ಸೀತಾಮಾತೆಯನ್ನೂ, ಗುಣವಂತನೂ ವೀರ್ಯವಂತನೂ ಧರ್ಮಾತ್ಮನೂ ಸತ್ಯ ಪರಾಕ್ರಮಿಯೂ ಮತ್ತು ಜಿತೇಂದ್ರಿಯನೂ ಆದ ಶ್ರೀರಾಮಚಂದ್ರನನ್ನು ಭಕ್ತರು ಸದಾಕಾಲವೂ ನೆನೆಯುವಂತಾಗಲಿ.  

ಎಲ್ಲಿ ಶ್ರೀರಾಮನಿರುವನೋ ಅಲ್ಲಿ ವಾಯುಪುತ್ರನೂ ಅಂಜನಾದೇವಿ ಸಂಜಾತನೂ ಆದ ಆಂಜನೇಯ ಸ್ವಾಮಿಯೂ ಸಿದ್ಧನಾಗಿರುವನು.  ಶ್ರೀಮದ್ರಾಮಾಯಣ ನಡೆಯುವಲ್ಲಿ ಮಾರುತಿಯು ಕೈಮುಗಿದು ನಿಲ್ಲುವನು.  ಶ್ರೀರಾಮ ಭಕ್ತನೂ ಮಹಾ ಜ್ಞಾನಿಯೂ ಶಕ್ತಿಸ್ವರೂಪಿಯೂ ಆದ ಶ್ರೀ ಆಂಜನೇಯ ಸ್ವಾಮಿಯನ್ನು ನೆನೆದ ಭಕ್ತರ ಇಷ್ಟಾರ್ಥವನ್ನೂ ಆತನು ಕೈಗೂಡಿಸುವನು.  ಬುದ್ಧಿಯನ್ನೂ ಬಲವನ್ನೂ ಯಶಸ್ಸನ್ನೂ ಧೈರ್ಯವನ್ನೂ ಆರೋಗ್ಯವನ್ನೂ ಮತ್ತು ಜ್ಞಾನವನ್ನೂ ನೀಡುವ ಶ್ರೀ ಸೀತಾರಾಮಾಂಜನೇಯ ಸ್ವಾಮಿಯನ್ನು ಎಲ್ಲರೂ ಭಕ್ತಿಯಿಂದ ಸೇವಿಸುವಂತಾಗಲಿ.

ಶ್ರೀ ವಾಲ್ಮೀಕಿಗಿರಿಯಲ್ಲಿ ಹುಟ್ಟಿ ಶ್ರೀರಾಮ ಸಾಗರವನ್ನು ಕುರಿತು ಹರಿಯುವ ಪುಣ್ಯಪ್ರದ ಶ್ರೀಮದ್ರಾಮಾಯಣ ಮಹಾನದಿಯು ಈ ಭುವನವನ್ನು ಪವಿತ್ರವನ್ನಾಗಿ ಮಾಡಲಿ.

Sangraha Ramayana by Pandit Tiru Sreenivasachar.

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ