ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಯು. ಎಸ್‌. ಕೃಷ್ಣರಾವ್


ಯು. ಎಸ್‌. ಕೃಷ್ಣರಾವ್‌  ಮತ್ತು  ಚಂದ್ರಭಾಗಾದೇವಿ


ಭಾರತೀಯ ನೃತ್ಯ ಕಲೆಯಲ್ಲಿ ಯು. ಎಸ್. ಕೃಷ್ಣರಾವ್ ಮತ್ತು ಚಂದ್ರಭಾಗಾದೇವಿ ದಂಪತಿಗಳ ಕೊಡುಗೆ ಅತ್ಯಂತ ಮಹತ್ವಪೂರ್ಣವಾದದ್ದು. 

ಪ್ರೊ. ಯು.ಎಸ್‌. ಕೃಷ್ಣರಾವ್‌ 1914ರ ನವೆಂಬರ್ 5ರಂದು ಜನಿಸಿದರು.  ಅವರ ಹುಟ್ಟೂರು ಉತ್ತರಕನ್ನಡ ಜಿಲ್ಲೆಯ ಮಲ್ಲಾಪುರ.  ಬೆಳೆದು ದೊಡ್ಡವರಾದುದು ಬೆಂಗಳೂರಿನಲ್ಲೇ. ತಂದೆ ಶಿವರಾಮ, ತಾಯಿ ಗಿರಿಜಾಬಾಯಿ.  ಕೃಷ್ಣರಾಯರು ಪದವೀಧರರಾಗಿ ವೃತ್ತಿ ಕೈಗೊಂಡಿದ್ದು ರಸಾಯನ ಶಾಸ್ತ್ರದಲ್ಲಿ.  ಅದರೆ ಗೀಳು ಹತ್ತಿಸಿಕೊಂಡಿದ್ದು ಭರತನಾಟ್ಯದಲ್ಲಿ.

ಚಂದ್ರಭಾಗಾದೇವಿಯವರು 1921ರ ಆಗಸ್ಟ್ ತಿಂಗಳ 11ರಂದು ಜನಿಸಿದರು. ತಂದೆ ತಾಯಂದಿರು ಪ್ರಸಿದ್ಧ ಬರಹಗಾರರಾದ  ಪಡುಕೋಣೆ ರಮಾನಂದರಾಯರು ಮತ್ತು  ತಾಯಿ ಸೀತಾದೇವಿಯವರು.   ಇವರ ಎಲ್ಲ ಮಕ್ಕಳೂ ಕಲಾಲೋಕವನ್ನು ಬೆಳಗಿದವರು.  ಶಿವರಾಮ ಕಾರಂತರ ಶುಭದತ್ತಾ ಗೀತ ನಾಟಕದಲ್ಲಿ ಪಾತ್ರ ದೊರೆತ ಕಾರಣವಾಗಿ ಚಂದ್ರಭಾಗದೇವಿಯರಿಗೆ ನಾಟ್ಯದಲ್ಲಿ ಆಸಕ್ತಿ ಮೂಡಿತು. 

1941ರಲ್ಲಿ ಚಂದ್ರಭಾಗಾದೇವಿ ಮತ್ತು ಕೃಷ್ಣರಾವ್ ಒಬ್ಬರನ್ನೊಬ್ಬರು ಮೆಚ್ಚಿ ಸತಿಪತಿಗಳಾದರು.

ಕೃಷ್ಣರಾಯರು ಕೋಲಾರ ಪುಟ್ಟಪ್ಪನವರಲ್ಲಿ ಮೈಸೂರು ಶೈಲಿಯ ಭರತನಾಟ್ಯವನ್ನೂ ಪಂದನಲ್ಲೂರು ಶೈಲಿಯ ಭರತನಾಟ್ಯವನ್ನೂ, ಕುಮಾರನ್‌ ಹಾಗೂ ಕುಂಜು ಕುರೂಪ್ ಅವರ ಕೈಕೆಳಗೆ ಕಥಕಳಿಯನ್ನೂ ಕಲಿತರು. ಚಂದ್ರಭಾಗದೇವಿಯರು 10-11ನೇ ವಯಸ್ಸಿನಲ್ಲಿ ಡಾ. ಶಿವರಾಮ ಕಾರಂತ ಅವರಿಂದ ಮೊದಲ ನೃತ್ಯ ಹೆಜ್ಜೆಗಳನ್ನು ಇಡಲು ಕಲಿತರು. ಎರಡು ಕಥಕಳಿ ನೃತ್ಯಬಂಧಗಳನ್ನು ಕಥಕ್‌ ಗುರುಗಳಾದ ಶ್ರೀನಿವಾಸ ಕುಲಕರ್ಣಿಯವರಿಂದಲೂ, ಶ್ರೀ ಯು.ಎಸ್‌.ಕೃಷ್ಣರಾವ್‌ ಅವರ ಸಹಾಯದಿಂದ ಕೋಲಾರ ಪುಟ್ಟಪ್ಪನವರ ಬಳಿ ಚತುರಶ್ರ ಅಲರಿಪು ಕಲಿತು ನಂತರ ಕೃಷ್ಣರಾಯರಿಂದಲೇ ಭರತನಾಟ್ಯ ನೃತ್ಯಬಂಧಗಳನ್ನು ಕಲಿತು, ಮುಂದೆ ತಂಜಾವೂರಿಗೆ ಹೋಗಿ ಪಂದನಲ್ಲೂರು ಶೈಲಿಯನ್ನು ಕಲಿತರು.

ಕೃಷ್ಣರಾವ್‌ ದಂಪತಿಗಳು ತಂಜಾವೂರಿನ ನಾಟ್ಯ ಕಲಾನಿಧಿ ಮೀನಾಕ್ಷಿ ಸುಂದರಂ ಪಿಳ್ಳೆ ಅವರಲ್ಲಿ ಭರತನಾಟ್ಯ ಶಿಕ್ಷಣ ಪಡೆದರು. ತಂಜಾವೂರು ಅರಸರ ಅರಮನೆಯಲ್ಲಿಯೇ ಅವರ ರಂಗಪ್ರವೇಶ 1943 ಡಿಸೆಂಬರ್ 31ರಂದು ಜರುಗಿತು. ಅಂದಿನ ಖ್ಯಾತ ನೃತ್ಯ ವಿಮರ್ಶಕರಾದ ಇ. ಕೃಷ್ಣ ಅಯ್ಯರ್ ದಿನಪತ್ರಿಕೆಯೊಂದರಲ್ಲಿ “ಲಲಿತವಾಗಿ ಪೂರ್ಣತೆಯಿಂದ ಪ್ರದರ್ಶಿಸಿದ ನೃತ್ಯವನ್ನು ನೋಡಿದೆ. ಗಂಡು ಜೊತೆಗಾರ ಆವೇಶ ಉತ್ಸಾಹದ ಬುಗ್ಗೆಯಂತಿದ್ದರೆ, ಹೆಣ್ಣು ಜೊತೆಗಾತಿ ಹೆಣ್ಣುತನಕ್ಕೆ ತಕ್ಕ ಹಿತಮಿತ ಹಾಗೂ ವಿನಯ ಶೀಲತೆಯಿಂದ ಕೂಡಿರುವುದು ಹೆಣ್ಣು ಗಂಡುಗಳಲ್ಲಿರುವ ಮೂಲ ಪ್ರಧಾನ ವ್ಯತ್ಯಾಸ.  ಅಲ್ಲದೆ ಕಲೆಯ ಸಮಾಗಮದಲ್ಲಿ ಎರಡು ಬೇರೆ ಬೇರೆ ಮಾದರಿಗಳು ಹೊಂದಿಕೊಂಡಿರುವ ಘನವಾದ ವಿಷಯವಾಗಿದೆ. ಸುಸಂಸ್ಕೃತ ಸತಿಪತಿಯರು ನೃತ್ಯ ಜೋಡಿಯಾಗಿ ಪ್ರದರ್ಶಿಸುವ ಕಲೆಯಲ್ಲಿ ಮೋಹಕತೆ ಘನತೆ ಗಾಂಭೀರ್ಯ ಹಾಗೂ ಪರಿಶುದ್ಧತೆ ಇದ್ದು ಪುರಾಣಗಳಲ್ಲಿ ಕಂಡುಬರುವ ಶಿವ ಪಾರ್ವತಿಯರ ನೃತ್ಯಗಳ ಆಧ್ಯಾತ್ಮಕತೆಯನ್ನು ಸೂಚಿಸುವಂತಿತ್ತು. ಇಂತಹ ದಂಪತಿಗಳು ಕಲೆಗೆ ಅನುಪಮ ಗೌರವ ಹಾಗೂ ಅಂತಸ್ತು ಕೊಟ್ಟು ಇತರರಿಗೆ ಸ್ಪೂರ್ತಿದಾಯಕ ಮಾದರಿಯಾಗಿ ಮೇಲ್ಪಂಕ್ತಿ ಹಾಕಿ ಕೊಡುವಂತಿದೆ………” ಎಂದು ಬರೆದರು.

ಕೃಷ್ಣರಾಯರ ಜೀವನ ಕಾಲೇಜು ಕೆಲಸ ಬಿಟ್ಟ ಮೇಲೆ ತ್ರಿಶಂಕು ಸ್ವರ್ಗವಾಯಿತು. ಕಂಕುಳಲ್ಲಿ ಮಕ್ಕಳನ್ನಿಟ್ಟುಕೊಂಡು ಕಲಾಭ್ಯಾಸ, ಕಲಾಪ್ರದರ್ಶನಗಳನ್ನು ಕಷ್ಟಪಟ್ಟು ಮುಂದುವರಿಸಿ ಕಲೆ ಕೇವಲ ದೇವದಾಸಿಯರ ಸೊತ್ತಲ್ಲ ಸಂಸಾರವಂದಿಗರೂ ಗೌರವಸ್ಥರ ಕುಟುಂಬಗಳೂ ಕಲಾ ಪ್ರದರ್ಶನಗಳನ್ನೀಯುವುದರಿಂದ ಮಾನಕ್ಕೇನೂ ಚ್ಯುತಿ ಇಲ್ಲ ಎಂಬುದನ್ನು ತೋರಿಸಿಕೊಟ್ಟರು ಚಂದ್ರಭಾಗಾದೇವಿಯವರು. ಸಮಾಜದ ದೂಷಣೆ ನಿಂದೆ ಅಪಮಾನ ಇತ್ಯಾದಿ ಅವರು ಸಹಿಸಬೇಕಾಗಿತ್ತು ಆ ದಿನಗಳಲ್ಲಿ. ಇಷ್ಟಾದರೂ ಮದುವೆಯ ನಂತರದ ನಲವತ್ತೈದು ವರುಷಗಳ ನಿರಂತರ ಸಾಧನೆ ಮಾಡಿದರು.

ವರ್ಷಗಳು ಕಳೆದಂತೆ ಈ ನೃತ್ಯಾರಾಧಕ ದಂಪತಿಗಳು ವಿಶ್ವಾದ್ಯಂತ ಸಾವಿರಾರು ನೃತ್ಯ ಪ್ರದರ್ಶನಗಳನ್ನೂ, ನೃತ್ಯ ಉಪನ್ಯಾಸಗಳನ್ನೂ ಕೊಟ್ಟು ಖ್ಯಾತಿ ಪಡೆದರು. ರತಿ-ಮನ್ಮಥ, ರಾಧಾ-ಕೃಷ್ಣ, ಶಿವಲೀಲೆ, ದಿ ಟೆಂಪ್ಟೇಷನ್‌ ಆಫ್‌ ಬುದ್ಧ, ರಾಣಿ ಶಾಂತಲಾ, ಗೀತ-ಗೋವಿಂದ, ಕಾಮದಹನ ಮುಂತಾದವು ಇವರ ಜನಪ್ರಿಯ ಪ್ರದರ್ಶನಗಳಾಗಿದ್ದವು.

1952ರಲ್ಲಿ ಇಂಡೋ ಪಾಕಿಸ್ತಾನ ಮ್ಯೂಸಿಕ್‌ ಕಾನ್‌ಫೆರಿನ್ಸಿನವರು ಈ ದಂಪತಿಗಳ (ಕರಾಚಿಯಲ್ಲಿ ಸರ್ಕಾರದ ನೆರವಿನಿಂದ) ನೃತ್ಯಗಳನ್ನು ಪ್ರದರ್ಶಿಸಿದರು. 1958ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯಿಂದ ಆಹ್ವಾನಿತರಾಗಿ ಮಾಡರ್ನ್‌ ಟ್ರೆಂಡ್ಸ್ ಇನ್‌ ಭರತನಾಟ್ಯ ಎಂಬ ವಿಷಯದ ಮೇಲೆ ಪ್ರದರ್ಶನ ಭಾಷಣ ನೀಡಿದರು. ಹೀಗೆ ನೃತ್ಯ ಕ್ಷೇತ್ರದಲ್ಲಿ ಅವ್ಯಾಹತ ಅಭ್ಯಾಸ ಆರಾಧನೆ ಸಾಧನೆ, ನೃತ್ಯ ನೃತ್ಯಾಭ್ಯಾಸ, ನೃತ್ಯ ಶಿಕ್ಷಣ ಹಾಗೂ ಕಲೆಯ ಅಭಿವೃದ್ಧಿ ಇವರ ಜೀವನ ಧ್ಯೇಯವೇ ಆಯಿತು.

ಲಂಡನ್ನಿನಲ್ಲಿ ಎರಡು ವರ್ಷಗಳ ಕಾಲ ಅವಿಶ್ರಾಂತ ಕೆಲಸ ಮಾಡಿ ತಮ್ಮ ಪಾಶ್ಚಾತ್ಯ ಶಿಷ್ಯವೃಂದದ ನೆರವಿನಿಂದ ನಾಲ್ಕು ನೃತ್ಯ ನಾಟಕಗಳನ್ನು ರಚಿಸಿ ಪಾಶ್ಚಾತ್ಯ ರಸಿಕರ ಮನಸ್ಸನ್ನು ಸೂರೆಗೊಂಡರು. ರಾಣಿ ಶಾಂತಲಾ ನೃತ್ಯ ನಾಟಕದ ಮೂಲಕ ಭಾರತೀಯ ಕಲಾ ಸಂಸ್ಕೃತಿಯನ್ನು ಕರ್ನಾಟಕದ ಹಳೇಬೀಡು, ಬೇಲೂರಿನ ವೈಭವವನ್ನು ತಿಳಿಸಿದರು. ಆ ನಂತರ ನ್ಯೂಯಾರ್ಕಿನ ಇಂಡೋ ಅಮೆರಿಕನ್‌ ಡಾನ್ಸ್ ಕಂಪೆನಿಯ ಆಹ್ವಾನದ ಮೇಲೆ ಅಮೆರಿಕದಲ್ಲಿ ಟಿ.ವಿ. ರೇಡಿಯೋ ಮೂಲಕ ಕಲಾ ಪ್ರಸಾರ, ಹವಾಯಿಯಿಂದ ಹಾಂಗ್‌ಕಾಂಗ್‌, ಸಿಂಗಾಪುರ ನಗರಗಳಲ್ಲಿಯೂ ಯಶಸ್ವಿ ಕಾರ್ಯಕ್ರಮಗಳನ್ನು ನೀಡಿದರು. ಮುಂದೆ ಸಹಾ ಅವರು ವಿದೇಶಗಳಲ್ಲಿ ಅನೇಕ ಬಾರಿ ಕಾರ್ಯಕ್ರಮಗಳನ್ನು ನೀಡಿದರು.

1973ರಲ್ಲಿ ಬೆಂಗಳೂರಿನಲ್ಲಿ ತಮ್ಮದೇ ಆದ ಮಹಾ ಮಾಯಾ (ಮಿನಿ ರಂಗಗೃಹ) ನೃತ್ಯ ಶಾಲೆಯನ್ನು ನಿರ್ಮಿಸಿ ನೃತ್ಯ ಶಿಕ್ಷಣವನ್ನು  ಸ್ವದೇಶದವರಿಗೇ ಅಲ್ಲದೆ, ವಿದೇಶದಿಂದ ಬಂದ ಅನೇಕ ವಿದ್ಯಾರ್ಥಿಗಳಿಗೂ ನೃತ್ಯ ಶಿಕ್ಷಣ ತರಬೇತಿ ನೀಡಿದರು.

ಚಂದ್ರಭಾಗಾದೇವಿ ಅವರ ‘ಗೆಜ್ಜೆಯ ಹೆಜ್ಜೆಯ ನುಡಿ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಸಂದಿತು. ಕನ್ನಡ ವಿಶ್ವಕೋಶ ಪ್ರಕಟಣೆಯಲ್ಲಿ ಈ ದಂಪತಿಗಳು ಹಲವಾರು ವಿಷಯಗಳ ಮೇಲೆ ಲೇಖನಗಳನ್ನು ಬರೆದಿದ್ದಾರೆ.
ಹದಿನಾಲ್ಕನೆ ಶತಮಾನದಲ್ಲಿ ಸಿಂಹ ಭೂಪಾಲನಿಂದ ರಚಿತವಾದ ಲಾಸ್ಯರಂಜನ ‌ ಹೆಚ್‌. ಆರ್. ರಂಗಸ್ವಾಮಿ ಅಯ್ಯಂಗಾರ್ ಹಾಗೂ ‌ಎಸ್‌. ಎನ್‌. ಕೃಷ್ಣ ಜೋಯಿಸ್‌ ಅವರಿಂದ 1966ರಲ್ಲಿ ಕನ್ನಡಕ್ಕೆ ಅನುವಾದಗೊಂಡಿತು. ಇದರಲ್ಲಿ ಬರುವ ಚಾರಿ, ಸ್ಥಾನಕ, ಹಸ್ತ, ರಸಗಳ ನಿರೂಪಣೆಗೆ ಈ ದಂಪತಿಗಳ  ಸೂಕ್ತ ಭಾವ ಚಿತ್ರಗಳು ಗ್ರಂಥಕ್ಕೆ ಹೆಚ್ಚಿನ ಮೆರುಗನ್ನು ನೀಡಿವೆ. ಇಂದು ನರ್ತನ ಕ್ಷೇತ್ರದಲ್ಲಿ ‘ಲಾಸ್ಯರಂಜನ’ ಒಂದು ಅಮೂಲ್ಯ ಗ್ರಂಥವಾಗಿದೆ.

ಭಾರತ ಭಾರತಿ ಸಂಪದ ಪುಸ್ತಕ ಮಾಲೆಯಲ್ಲಿ ಚಂದ್ರಭಾಗಾದೇವಿಯವರು ‘ವಿಷ್ಣು ನಾರಾಯಣ ಭಾತಖಾಂಡೆ’ ಕಿರು ಪುಸ್ತಕವನ್ನು ಬರೆದಿದ್ದಾರೆ. ಅಲ್ಲದೆ ‘ಶ್ರೀ ಕೃಷ್ಣ ಪುಷ್ಪಾಂಜಲಿ’ ಹಾಗೂ ತಂದೆಯವರ ಸ್ಮಾರಕ ಗ್ರಂಥವಾಗಿ ‘ಪರಮಾನಂದ’ ಅಲ್ಲದೆ ನೃತ್ಯ ಕಲೆಯ ವಿಷಯವಾಗಿ ಅವರು ಬರೆದಿರುವ ಅನೇಕಾನೇಕ ಲೇಖನಗಳನ್ನು ಪ್ರಖ್ಯಾತ ಪುಸ್ತಕಗಳಲ್ಲಿ ಕಾಣಬಹುದು.

ಚಂದ್ರಭಾಗದೇವಿಯರನ್ನು ಸರ್ಕಾರವು, 1995ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರನ್ನಾಗಿ ನೇಮಿಸಿತ್ತು.   ಸಂಗೀತ, ನೃತ್ಯ, ಕಲೆ ಬಹುಮುಖ ಪ್ರಗತಿಗೆ ಅಗತ್ಯವಾದ ಎಲ್ಲಾ ವಿಚಾರಗಳಲ್ಲಿ ಚಂದ್ರಭಾಗಾದೇವಿಯವರಿಗಿದ್ದ ಆಸಕ್ತಿ ಈ ಅವಧಿಯಲ್ಲಿ ಎದ್ದು ಕಾಣುತ್ತಿತ್ತು.

ರಾವ್‌ದಂಪತಿಗಳಿಗೆ  ಅನೇಕ  ಪ್ರಶಸ್ತಿ ಗೌರವಗಳು ಸಂದವು.  ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಪ್ರಶಸ್ತಿ (1980), ಕರ್ನಾಟಕ ರಾಜ್ಯ ಸರ್ಕಾರದಿಂದ ಚಂದ್ರಭಾಗಾದೇವಿಯವರಿಗೆ ರಾಜ್ಯ ಪ್ರಶಸ್ತಿ (1985), ಕಲಾಭಾರತಿ ಪ್ರಶಸ್ತಿ (1986), ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ದಂಪತಿಗಳು ಬರೆದ ನೃತ್ಯಕಲೆ ಪುಸ್ತಕಕ್ಕೆ ಬಹುಮಾನ (1986), ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ (1988), ಕರ್ನಾಟಕ ಸರ್ಕಾರದ ಶಾಂತಲಾ ಪ್ರಶಸ್ತಿ (1997). ಕಲಾ ವಿಮರ್ಶಕ ಇ. ಕೃಷ್ಣ ಅಯ್ಯರ್ ಸ್ಮಾರಕ ಚಿನ್ನದ ಪದಕ (2002) ಮುಂತಾದವು ಇವುಗಳಲ್ಲಿ ಸೇರಿವೆ.

ಚಂದ್ರಭಾಗಾದೇವಿಯವರು 1997ರ ಏಪ್ರಿಲ್ 4ರಂದು ಈ ಲೋಕವನ್ನಗಲಿದರೆ, ಕೃಷ್ಣರಾವ್ ಅವರು 2007ರ ಜನವರಿ 10ರಂದು ಈ ಲೋಕಕ್ಕೆ ವಿದಾಯ ಹೇಳಿದರು.

Great dance couple Chandrabhaagadevi & Krishna Rao

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ