ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಾಹುಲ್ ವೆಲ್ಲಾಲ್


 ರಾಹುಲ್ ವೆಲ್ಲಾಲ್


ರಾಹುಲ್ ವೆಲ್ಲಾಲ್ ಇತ್ತೀಚಿನ ವರ್ಷದಲ್ಲಿ ನನ್ನನ್ನು ಪ್ರಭಾವಿಸಿದ ಬಾಲ ಸಂಗೀತ ಪ್ರತಿಭೆ.  

ಸಂಗೀತ ಎಂದರೆ ಒಂದು ರೀತೀಯ ಆಧ್ಯಾತ್ಮ.  ನಮ್ಮನ್ನು ಅವ್ಯಕ್ತಕ್ಕೆ ಸಂಪರ್ಕಿಸಲು ಅನುವಾಗಿಸುವ ಸೂಕ್ಷ್ಮ ತಂತು.  ಲೋಕದಲ್ಲಿ ಅನೇಕ ಸಂಗೀತಗಾರರಿರುವುದು ನಿಜವಾದರೂ ಆ ತಂತುವನ್ನು ಕಂಡುಕೊಳ್ಳುವಂತೆ ಮಾಡುವ ಸಾಧ್ಯತೆ ಉಳ್ಳವರು ಕಡಿಮೆ.  ಒಮ್ಮೆ ಪಿಬರೇ ರಾಮರಸಂ ಗೀತೆಯನ್ನು ಕೇಳಬೇಕೆಂದು ಅಂತರಜಾಲದಲ್ಲಿ ಹುಡುಕಿಹೊರಟಾಗ ಸಿಕ್ಕಿದ್ದು ನಮ್ಮ ರಾಹುಲ್ ವೆಲ್ಲಾಲ್ ಎಂಬ ದಿವ್ಯ ಇಂಪು.

ರಾಹುಲ್ ವೆಲ್ಲಾಲ್ ಜನಿಸಿದ್ದು 2007ರ ವರ್ಷ ಬೆಂಗಳೂರಿನಲ್ಲಿ.  ತಂದೆ ರವಿಶಂಕರ್ ವೆಲ್ಲಾಲ್.  ತಾಯಿ ಎಸ್. ಹೇಮಾ. ತಂದೆ ತಾಯಿಯರೇನೂ ಸಂಗೀತದ ಹಿನ್ನೆಲೆಯುಳ್ಳವರಲ್ಲ.  ರಾಹುಲ್ ಎರಡೂವರೆ ವರ್ಷದ ಮಗುವಾಗಿರುವಾಗಲೇ  ಕೇಳಿದ ಹಾಡನ್ನು ಗುನುಗುನಿಸುವುದೋ, ತಾಳ ಹಾಕುವ ರೀತಿಯಲ್ಲಿ ಕೈಯಾಡಿಸುತ್ತಿರುವುದೋ ಮಾಡುತ್ತಿದ್ದ.  ಹೀಗೆ ಮಗುವಲ್ಲಿ ಸಂಗೀತದ ಆಸಕ್ತಿ ಕಂಡುಬಂದಾಗ ಶಾಸ್ತ್ರೀಯ ಸಂಗೀತವೇ ಸೂಕ್ತ ಅಂದುಕೊಂಡು ಹಲವು ಮಂದಿಯನ್ನು ಅಪ್ಪ ಅಮ್ಮ ಕೇಳಿದರು. ಅಷ್ಟು ಸಣ್ಣ ಬಾಲಕನಿಗೆ ಪಾಠ ಹೇಳಿಕೊಡಲು ಯಾರೂ ಮುಂದೆ ಬರಲಿಲ್ಲ. ನಂತರ ಶ್ಲೋಕ ತರಗತಿಗೆ ಹಾಕಿ, ಕೊನೆಗೆ 4 ವರ್ಷದವನಿರುವಾಗ ಸುಚೇತನ್ ರಂಗಸ್ವಾಮಿ ಅವರಲ್ಲಿ ಶಾಸ್ತ್ರೀಯ ಸಂಗೀತ ತರಗತಿಗೆ ಸೇರಿಸಿದರು. ಅಲ್ಲಿ ಮೂರೂವರೆ ವರ್ಷ ಅಭ್ಯಾಸ ಮಾಡಿದ ಬಳಿಕ, ವಿದುಷಿ ಕಲಾವತಿ ಅವಧೂತ್ ಅವರಲ್ಲಿ ರಾಹುಲ್  ಸಂಗೀತ ಕಲಿಕೆ ಮುಂದುವರೆದಿದೆ.

ರಾಹುಲ್ ವೆಲ್ಲಾಲ್ ಸಂಗೀತವು ಚೆನ್ನೈನ ಮದ್ರಾಸ್ ಮ್ಯೂಸಿಕ್ ಅಕಾಡೆಮಿ, ನಾರದ ಗಾನ ಸಭಾ, ಬೆಂಗಳೂರಿನ ಶ್ರೀರಾಮ ಸೇವಾ ಮಂಡಳಿ, ಗಾಯನ ಸಮಾಜ ಸೇರಿ ಎಲ್ಲಾ ದೊಡ್ಡ ದೊಡ್ಡ ಗಾನ ಸಭಾಗಳಲ್ಲಿ ನಡೆದಿದೆ. ವಿದೇಶಗಳಲ್ಲೂ ನಡೆದಿದೆ. ಎಸ್.ಪಿ.ಬಾಲಸುಬ್ರಹ್ಮಣ್ಯಂ, ಶ್ರೀಶ್ರೀ ರವಿಶಂಕರ್ ಮುಂತಾದವರ ಆಶೀರ್ವಾದ ಸಂದ ಸಂತೋಷ ಈ ಬಾಲಕನಲ್ಲಿದೆ. ಸಂಗೀತ ಲೋಕದಲ್ಲಿ ತಾನಿನ್ನೂ ಎಳೆಯ, ಸಾಧಿಸಬೇಕಾದುದು ಬಹಳಷ್ಟಿದೆ ಎಂಬ ವಿನಮ್ರತೆಯೂ ಜೊತೆಗಿದೆ. ಡಾ.ಎಂ. ಬಾಲಮುರಳಿಕೃಷ್ಣ ಅವರ ಹಾಡುಗಳೆಂದರೆ ರಾಹುಲ್ ವೆಲ್ಲಾಲ್‍ಗೆ ಬಲು ಇಷ್ಟ. ಅವರ 'ಪಿಬರೇ ರಾಮರಸಂ' ಈತನ ಇಷ್ಟವಾದ ಹಾಡೂ ಹೌದು.

ರಾಹುಲ್ ವೆಲ್ಲಾಲ್ ಮೃದಂಗವನ್ನು ಕೂಳೂರು ಜಯಚಂದ್ರ ರಾವ್ ಅವರಿಂದಲೂ, ಪಾಶ್ಚಾತ್ಯ ಪಿಯಾನೋ ವಾದನವನ್ನು ಅಭಿಷೇಕ್ ಎಸ್.ಎನ್ ಅವರಿಂದಲೂ ಅಭ್ಯಸಿಸುತ್ತಿದ್ದಾನೆ. ಶಾಲೆಯ ಓದಿನ ಜೊತೆಗೆ ದಿನಕ್ಕೆರಡು ಗಂಟೆ ಸಂಗೀತಾಭ್ಯಾಸ ಮಾಡುತ್ತಾನೆ.

ರಾಹುಲ್ ವೆಲ್ಲಾಲ್‍ಗೆ ಕರ್ನಾಟಕ ಸಂಗೀತ ಕಲಿಕೆಗೆ ಕೇಂದ್ರ ಸರಕಾರದಿಂದ ಕಲಿಕಾವೇತನ ಸಂದಿದೆ. ಪಲುಕೇ ಬಂಗಾರಮಾಯೆನಾ, ವೈಷ್ಣವ ಜನತೋ, ಪಿಬರೇ ರಾಮ ರಸಂ, ಬ್ರಹ್ಮಂ ಒಕಟೇ, ಶಿವಾಷ್ಟಕಂ, ಮಹಾಲಕ್ಷ್ಮಿ ಅಷ್ಟಕಂ, ರಾಮ ಗೋವಿಂದಾ ಹರೇ ಮುಂತಾದ ವಿಡಿಯೋ ಆಲ್ಬಂಗಳು, ಫೇಸ್ಬುಕ್ ಮತ್ತು ಯೂಟ್ಯೂಬ್ ಸಂಗೀತಗಳು ಜನಮಾನಸವನ್ನು ಎಂಥದ್ದೋ ಅನುಭೂತಿಗೆ ತನ್ನನ್ನು ನಿರಂತರವಾಗಿ ಆಹ್ವಾನಿಸುತ್ತಿದೆ.

ಪರಮಾತ್ಮ ಯಾವಾಗ ಯಾವ ಪ್ರತಿಭೆಯ ಅಭಿವ್ಯಕ್ತಿಯ ಮೂಲಕ ತನ್ನನ್ನು ಕಾಣಿಸುತ್ತಾನೆ ಎಂದು ಹೇಗೆ ಹೇಳುವುದು.  ರಾಹುಲ್ ವೆಲ್ಲಾಲ್ ಎಂಬ ಸಂಗೀತದಲ್ಲಿ ಅದು ನನ್ನನ್ನು ಮೀಟಿರುವುದಂತೂ ನಿಜ. ಆ ದಿವ್ಯತೆಗೆ ನಮನ.

Music called Rahul Vellal

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ