ಚ. ವಾಸುದೇವಯ್ಯ
ಚ. ವಾಸುದೇವಯ್ಯ
ಚ. ವಾಸುದೇವಯ್ಯ ಅವರು ಹೊಸಗನ್ನಡದ ಪಿತಾಮಹರಲ್ಲೊಬ್ಬರೆಂದು ಹೆಸರಾಗಿದ್ದಾರೆ.
ವಾಸುದೇವಯ್ಯನವರು 1852ರ ಆಗಸ್ಟ್ 2ರಂದು ಚನ್ನಪಟ್ಟಣದಲ್ಲಿ ಜನಿಸಿದರು. ಅಲ್ಲಿನ ಆಂಗ್ಲೊ-ವರ್ನಾಕ್ಯುಲರ್ ಸ್ಕೂಲಿನಲ್ಲಿ ತಮ್ಮ ಆರಂಭದ ವ್ಯಾಸಂಗವನ್ನು ಮುಗಿಸಿ, ಮುಂದೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಅನಂತರ ಮೊದಲನೆಯ ವರ್ಷದ ಎಫ್.ಎ. ತರಗತಿಗೆ ಸೇರಿದರಾದರೂ ಕಾರಣಾಂತರಗಳಿಂದ ತಮ್ಮ ವ್ಯಾಸಂಗವನ್ನು ಮುಂದುವರಿಸಲಾಗಲಿಲ್ಲ.
ವಾಸುದೇವಯ್ಯನವರು ಸೆಂಟ್ರಲ್ ಕಾಲೇಜಿನಲ್ಲಿ ಸ್ವಲ್ಪಕಾಲ ಉಪಾಧ್ಯಾಯರಾಗಿ ಕೆಲಸ ಮಾಡಿದ ಬಳಿಕ ವಿದ್ಯಾಭ್ಯಾಸ ಇಲಾಖೆಯ ಇನ್ಸ್ಪೆಕ್ಟರ್ ಜನರಲ್ ಅವರ ಕಚೇರಿಯಲ್ಲಿ ಗುಮಾಸ್ತರಾದರು. ಕ್ರಮೇಣ ಆ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಹುದ್ದೆಗೇರಿ 1910ರಲ್ಲಿ ನಿವೃತ್ತರಾದರು.
ವಾಸುದೇವಯ್ಯನವರು ತಮ್ಮ ಮನೆಮಾತಾಗಿದ್ದ ತೆಲುಗು ಭಾಷೆಯ ಜೊತೆಗೆ ಕನ್ನಡ, ಸಂಸ್ಕೃತ, ಇಂಗ್ಲಿಷ್ ಮತ್ತು ಬಂಗಾಲಿ ಭಾಷೆಗಳಲ್ಲಿ ಒಳ್ಳೆಯ ಪರಿಣತಿಯನ್ನು ಸಂಪಾದಿಸಿಕೊಂಡಿದ್ದರು. ಇವರು ಮಕ್ಕಳಿಗಾಗಿ ರಚಿಸಿದ ಕನ್ನಡ ಬಾಲ ಬೋಧೆಗಳು ಸರಳವಾದ ಗದ್ಯ, ಆಕರ್ಷಕ ನಿರೂಪಣೆಗಳಿಂದ ಕೂಡಿದ್ದು ತುಂಬ ಜನಪ್ರಿಯವಾಗಿದ್ದುದಲ್ಲದೆ, ಅನೇಕ ವರ್ಷಗಳ ಕಾಲ ಪ್ರಾಥಮಿಕ ಶಾಲೆಗಳ ಪಠ್ಯಪುಸ್ತಕಗಳಾಗಿದ್ದವು.
ವಾಸುದೇವಯ್ಯನವರು ಬಂಗಾಲಿ ಭಾಷೆಯಲ್ಲಿ ರಜನೀಕಾಂತ ಗುಪ್ತ ಅವರು ಬರೆದಿದ್ದ ರಾಜಪುತ್ರ ಮಹಿಮೆ ಎಂಬ ಪುಸ್ತಕವನ್ನು ಆರ್ಯಕೀರ್ತಿ ಭಾಗ-1 (1896) ಎಂಬ ಹೆಸರಿನಿಂದ ಕನ್ನಡಕ್ಕೆ ಭಾಷಾಂತರಿಸಿದರು. ಹಾಗೆಯೇ ಸತ್ಯಚರಣಶಾಸ್ತ್ರಿಗಳ ಮಹಾರಾಷ್ಟ್ರಾಧಿಪತಿ ಶಿವಾಜಿ ಮಹಾರಾಜನ ಚರಿತ್ರೆಯನ್ನು ಆರ್ಯಕೀರ್ತಿ ಭಾಗ-2 (1898) ಎಂಬ ಹೆಸರಿನಿಂದ ಭಾಷಾಂತರಿಸಿದರು. ರಾಜಪುತ್ರರ ಧೈರ್ಯ, ದೇಶಾಭಿಮಾನ, ರಾಜಪುತ್ರಿಯರ ಉಗ್ರವ್ರತನಿಷ್ಠೆ, ಶಿವಾಜಿಯ ಸ್ವಧರ್ಮದೀಕ್ಷೆ, ಮುಂತಾದ ವಿಷಯಗಳನ್ನು ಈ ಪುಸ್ತಕದಲ್ಲಿ ಕಾಣಬಹುದು.
ವಾಸುದೇವಯ್ಯನವರು ಮಹಾಭಾರತವನ್ನು ಆಧರಿಸಿ ರಚಿಸಿರುವ ಭೀಷ್ಮಚರಿತ್ರೆಯಲ್ಲಿ (1927) ಭೀಷ್ಮರ ಸತ್ಯಪ್ರತಿಜ್ಞೆ, ಭಗವದ್ಭಕ್ತಿಯಿಂದ ಭೀಷ್ಮರಿಗೆ ಸಾಧ್ಯವಾಗಿದ್ದ ಮನೋದಾರ್ಢ್ಯ ಮತ್ತು ಶಾಂತಚಿತ್ತತೆಯನ್ನು ಬಹು ಸೊಗಸಾಗಿ ನಿರೂಪಿಸಿದ್ದಾರೆ. ಇವರ ಸರಳ ಗದ್ಯ, ಮನಮುಟ್ಟುವ ಶೈಲಿಗಳಿಗೆ ಈ ಪುಸ್ತಕಗಳು ಸಾಕ್ಷಿಯಾಗಿವೆ.
ಸರಳತೆ ಮತ್ತು ಸಜ್ಜನಿಕೆ ಗಳಿಗೆ ಹೆಸರಾಗಿದ್ದ ಚ. ವಾಸುದೇವಯ್ಯನವರಿಗೆ ಬೆಂಗಳೂರು ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘವು 1926ರಲ್ಲಿ ಒಂದು ಬಿನ್ನವತ್ತಳೆಯನ್ನು ಅರ್ಪಿಸಿ ಗೌರವಿಸಿತು. ಕನ್ನಡ ಸಾಹಿತ್ಯ ಪರಿಷತ್ತು 1942ರಲ್ಲಿ ಇವರನ್ನು ಸನ್ಮಾನಿಸಿತು.
ಚ. ವಾಸುದೇವಯ್ಯನವರು 1943ರ ಡಿಸೆಂಬರ್ 26ರಂದು ನಿಧನರಾದರು. ಇವರ ಪುತ್ರ ಚ. ವಾ. ರಾಘವೇಂದ್ರಯ್ಯ ಅವರು ಚ. ವಾಸುದೇವಯ್ಯನವರ ಕುರಿತ ಜೀವನಚರಿತ್ರೆಯೊಂದನ್ನು ಬರೆದಿದ್ದಾರೆ.
Photo Credits: Channa Prakash (Great grand son of C. Vasudevaiah on Twitter)
ಕಾಮೆಂಟ್‌ಗಳು