ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕನ್ನಡದ ದೀಪ


 ಹಚ್ಚೇವು ಕನ್ನಡದ ದೀಪ

ಕರುನಾಡದೀಪ ಸಿರಿನುಡಿಯದೀಪ
ಒಲವೆತ್ತಿ ತೋರುವಾ ದೀಪ
ಹಚ್ಚೇವು ಕನ್ನಡದ ದೀಪ

ಬಹುದಿನಗಳಿಂದ ಮೈಮರೆವೆಯಿಂದ
ಕೂಡಿರುವ ಕೊಳೆಯ ಕೊಚ್ಚೇವು
ಎಲ್ಲೆಲ್ಲಿ ಕನ್ನಡದ ಕಂಪು ಸೂಸ-
ಲಲ್ಲಲ್ಲಿ ಕರಣ ಚಾಚೇವು
ನಡು ನಾಡೆ ಇರಲಿ, ಗಡಿನಾಡೆ ಇರಲಿ
ಕನ್ನಡದ ಕಳೆಯ ಕೆಚ್ಚೇವು
ಮರತೇವು ಮರವ, ತೆರೆದೇವು ಮನವ, ಎರೆದೇವು ಒಲವ-ಹಿರಿ ನೆನಪ
ನರನರವನೆಲ್ಲ ಹುರಿಗೊಳಿಸಿ ಹೊಸೆದು ಹಚ್ಚೇವು ಕನ್ನಡದ ದೀಪ

ಕಲ್ಪನೆಯ ಕಣ್ಣು ಹರಿವನಕ ಸಾಲು
ದೀಪಗಳ ಬೆಳಕ ಬೀರೇವು
ಹಚ್ಚಿರುವ ದೀಪದಲಿ ತಾಯ ರೂಪ
ಅಚ್ಚಳಿಯದಂತೆ ತೋರೇವು
ಒಡಲೊಡಲ ಕೆಚ್ಚಿನಾ ಕಿಡಿಗಳನ್ನು
ಗಡಿನಾಡಾಚೆ ತೂರೇವು
ಹೊಮ್ಮಿರಲು ಪ್ರೀತಿ ಎಲ್ಲಿಯದು ಭೀತಿ? -ನಾಡೊಲವೆ ನೀತಿ ಹಿಡಿ ನೆನಪ
ಮನೆಮನೆಗಳಲ್ಲಿ ಮನಮನಗಳಲ್ಲಿ ಹಚ್ಚೇವು ಕನ್ನಡದ ದೀಪ.

ಕರುನಾಡಿನರಿವ ನೆರೆತೀವಿ ಭಾವ-
ದಲಿ ಜೀವನಾಡಿ ನುಡಿಸೇವು
ತೆರೆತೆರೆದ ಕಣ್ಣಿನಲಿ ನೇಹವೆರೆದು
ನವ ಜ್ಯೋತಿಯನ್ನೆ ಮುಡಿಸೇವು
ನಮ್ಮನ್ನವುಂಡು ಅನ್ಯಾಯಗೈಯು
ವಂಥವರ ಹುಚ್ಚ ಬಿಡಿಸೇವು
ಇಹುದೆಮಗೆ ಛಲವು, ಕನ್ನಡರ ಬಲವು ಕನ್ನಡದ ಒಲವು - ಹಿಡಿನೆನವು
ನಮ್ಮದೆಯ ಕೆಚ್ಚುನೆಚ್ಚುಗಳನೂಡಿ ಹಚ್ಚೇವು ಕನ್ನಡದ ದೀಪ.

ನಮ್ಮವರು ಗಳಿಸಿದಾ ಹೆಸರ ಉಳಿಸ-
ಲೆಲ್ಲಾರು ಒಂದುಗೂಡೇವು
ನಮ್ಮದೆಯ ಮಿಡಿಯುವೀ ಮಾತಿನಲ್ಲಿ
ಮಾತೆಯನು ಪೂಜೆ ಮಾಡೇವು
ನಮ್ಮುಸಿರು ತೀಡುವೀ ನಾಡಿನಲ್ಲಿ
ಮಾಂಗಲ್ಯಗೀತ ಹಾಡೇವು
ತೊರೆದೇವು ಮರುಳ, ಕಡೆದೇವು ಇರುಳ ಪಡೆದೇವು ತಿರುಳ - ಹಿಡಿನೆನಪ
ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ ಹಚ್ಚೇವು ಕನ್ನಡದ ದೀಪ.

ಸಾಹಿತ್ಯ:  ಡಿ.ಎಸ್. ಕರ್ಕಿ

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ