ವಸುಂಧರಾ ಭೂಪತಿ
ವಸುಂಧರಾ ಭೂಪತಿ
ಡಾ. ವಸುಂಧರಾ ಭೂಪತಿಯವರು ವೈದ್ಯೆಯಾಗಿ, ಬರಹಗಾರ್ತಿಯಾಗಿ, ಸಂಘಟಕಿಯಾಗಿ, ಸಾಮಾಜಿಕ ಹೋರಾಟಗಾರ್ತಿಯಾಗಿ ಮತ್ತು ಅಂಕಣಗಾರ್ತಿಯಾಗಿ ಹೆಸರಾಗಿದ್ದಾರೆ.
ವಸುಂಧರಾ 1962ರ ಜೂನ್ 5ರಂದು ರಾಯಚೂರಿನಲ್ಲಿ ಜನಿಸಿದರು. ತಂದೆ ಎಂ. ರಾಘವೇಂದ್ರ ರಾವ್. ತಾಯಿ ಶಾಂತಾಬಾಯಿ. ರಾಯಚೂರಿನ ಮಂಗಳವಾರಪೇಟೆ ಸರ್ಕಾರಿ ಶಾಲೆ ಮತ್ತು ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಓದಿ ಲಕ್ಷ್ಮೀ ವೆಂಕಟೇಶ ದೇಸಾಯಿ ಕಾಲೇಜಿನಲ್ಲಿ ಪಿಯು ಓದಿದರು. ಬಳ್ಳಾರಿಯ ತಾರಾನಾಥ ಆಯುರ್ವೇದ ಕಾಲೇಜಿನಲ್ಲಿ ಬಿ.ಎ.ಎಂ.ಎಸ್. ಓದಿ, ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎ.ಎಂ.ಎಸ್ (ಇಂಟಿಗ್ರೇಟೆಡ್) ಪೂರೈಸಿದರು. ಮಣಿಪಾಲ ಡೀಮ್ಡ್ ವಿಶ್ವವಿದ್ಯಾಲಯದಿಂದ (ಎಫ್.ಎ.ಜಿ.ಇ) ಫೆಲೋಷಿಪ್ ಮತ್ತು ಅಂತರರಾಷ್ಟ್ರೀಯ ಕೌನ್ಸಿಲ್ ಆಫ್ ಆಯುರ್ವೇದ (ಯುಎಸ್ಎ) ಇಂದ (ಎಫ್.ಐ.ಸಿ.ಎ) ಫೆಲೋಷಿಪ್ ಇವರ ಉನ್ನತ ಸಾಧನೆಗಳು.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ತೋರಣಗಲ್ಲಿನಲ್ಲಿ ಎರಡು ವರ್ಷ ವೈದ್ಯ ವೃತ್ತಿ ನಡೆಸಿದ ನಂತರ ವಸುಂಧರಾ ಅವರು ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಬೆಂಗಳೂರಿನಲ್ಲಿ ತಮ್ಮ ವೃತ್ತಿ ಮತ್ತು ಕೌಟುಂಬಿಕ ಜೀವನ ಸಾಗಿಸಿದ್ದಾರೆ. ಪತಿ ದಿವಂಗತ ಯು. ಭೂಪತಿ ಅವರು ಕಾನೂನು ತಜ್ಞರಾಗಿ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿನ ಸೇವೆಗಾಗಿ ಹೆಸರಾದವರು.
ವೈದ್ಯಸಾಹಿತ್ಯ, ಕತೆ, ನಾಟಕ, ಕವನ, ಗ್ರಂಥ ಸಂಪಾದನೆ ಪ್ರಕಾರಗಳಲ್ಲಿ ವಸುಂಧರಾ ಅವರ 75ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ. ಇವರು ರಚಿಸಿದ ಕೃತಿಗಳಲ್ಲಿ ‘ಆರೋಗ್ಯ ಸಂಗಾತಿ’ ಮೂರು ಬೃಹತ್ ಸಂಪುಟಗಳು, ‘ಮನೆಯಂಗಳದಲ್ಲಿ ಔಷಧಿವನ’, ‘ಹೂವು ಮತ್ತು ಆರೋಗ್ಯ’, 'ಪ್ರೀತಿ' ಕಥಾ ಸಂಕಲನ, 'ಸಂಕ್ರಾಂತಿ' ಕವನ ಸಂಕಲನ, ‘ಮಹಿಳೆ ಮತ್ತು ಮೌಢ್ಯ’ ಪ್ರಮುಖವಾದವು. ಇವರ ಸಂಪಾದಕತ್ವದಲ್ಲಿ ‘ಆರೋಗ್ಯ ಚಿಂತನ ಮಾಲಿಕೆ’ಯಡಿ ಪ್ರಕಟವಾದ 45 ಕೃತಿಗಳು ಜನರಲ್ಲಿ ಆರೋಗ್ಯವನ್ನು ಕುರಿತಂತೆ ಹೆಚ್ಚಿನ ಅರಿವನ್ನು ಮೂಡಿಸಿರುವ ಪುಸ್ತಕಗಳೆನಿಸಿವೆ. ಇವರ ಕೆಲವು ಪುಸ್ತಕಗಳು ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಿಗೆ ಅನುವಾದಗೊಂಡಿವೆ. ಇವರು ‘ವೈದ್ಯಲೋಕ’ ಮಾಸ ಪತ್ರಿಕೆಯ ಸಂಪಾದಕರಾಗಿದ್ದಾರೆ. ಇವರು ರಚಿಸಿರುವ ಹಲವಾರು ಲೇಖನಗಳು ಮತ್ತು ಕವಿತೆ ಕರ್ನಾಟಕ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಪಠ್ಯಕ್ರಮಗಳಲ್ಲಿ ಸೇರ್ಪಡೆಯಾಗಿವೆ.
ಡಾ. ವಸುಂಧರಾ ಭೂಪತಿಯವರು ರಾಜ್ಯ ಸರ್ಕಾರದ ಹೆಣ್ಣು ಭ್ರೂಣಹತ್ಯೆ ನಿಷೇಧ ಸಮಿತಿಯ ಸದಸ್ಯೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಸತತ ಎರಡು ಅವಧಿಗೆ ಚುನಾಯಿತರಾಗಿ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರದ ಮೊದಲ ಮಹಿಳಾ ಅಧ್ಯಕ್ಷರಾಗಿ ಪುಸ್ತಕ ಸಂಸ್ಕೃತಿ ಕೈಂಕರ್ಯಕ್ಕೆ ಹತ್ತು ಹಲವು ಯೋಜನೆಗಳನ್ನು ಕೈಗೊಂಡಿದ್ದರು. ಜೊತೆಗೆ ರಾಜೀವ್ಗಾಂಧಿ ಅರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಹಾಗೆಯೇ ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಾಗಿ ಕರ್ನಾಟಕ ಸರ್ಕಾರದ ಉನ್ನತಮಟ್ಟದ ತಜ್ಞರ ಸಮಿತಿಯ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದಾರೆ.
ಡಾ. ವಸುಂಧರಾ ಭೂಪತಿಯವರು 2012ರಲ್ಲಿ ಜಪಾನಿನ ಹಿರೋಷಿಮಾದಲ್ಲಿ ಜರುಗಿದ ಅಂತರರಾಷ್ಟ್ರೀಯ ವೈದ್ಯರ ವಿಶ್ವ ಶಾಂತಿ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. 2015ರಲ್ಲಿ ಜರುಗಿದ ಬಳ್ಳಾರಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಅಕ್ಟೋಬರ್ 2018ರಲ್ಲಿ ಬಹ್ರೇನಿನಲ್ಲಿ ಜರುಗಿದ ಪ್ರಥಮ ಅಂತರರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದರು. 2019ರ ಫೆಬ್ರವರಿ 22, 23ರಲ್ಲಿ ಅರಬ್ ರಾಷ್ಟçವಾದ ಅಬುಧಾಬಿಯಲ್ಲಿ ಜರುಗಿದ 15ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿದ್ದರು. 2019ರ ಮೇ 17,18 ರಲ್ಲಿ ಅಮೆರಿಕಾದ ನ್ಯೂಜೆರ್ಸಿಯಲ್ಲಿ ಜರುಗಿದ ಕನ್ನಡ ಸಾಹಿತ್ಯರಂಗ ಆಯೋಜಿಸಿದ್ದ ವಸಂತ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸದಸ್ಯೆಯಾಗಿ ದುಡಿದಿದ್ದಾರೆ.
ಡಾ. ವಸುಂಧರಾ ಭೂಪತಿಯವರಿಗೆ 2007ರಲ್ಲಿ ಎಚ್ಐವಿ/ಏಡ್ಸ್ ಲೇಖನಕ್ಕೆ ‘ಯೂನಿಸೆಫ್ ಪತ್ರಿಕೋದ್ಯಮ’ ಪ್ರಶಸ್ತಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಿಂದ ‘ಶ್ರೇಷ್ಠ ಲೇಖಕಿ ಪುರಸ್ಕಾರ’, ‘ಹೂವು ಮತ್ತು ಆರೋಗ್ಯ’ ಪುಸ್ತಕಕ್ಕೆ ‘ಅಕಲಂಕ ಪ್ರಶಸ್ತಿ’, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ‘ಶ್ರೇಷ್ಠ ವಿಜ್ಞಾನ ಸಂವಹನಕಾರ ರಾಜ್ಯ ಪ್ರಶಸ್ತಿ’, 2013-14ನೇ ಸಾಲಿನ ಕರ್ನಾಟಕ ‘ರಾಜ್ಯ ಪರಿಸರ ಪ್ರಶಸ್ತಿ’, ‘ಮೊಗ್ಗು ಅರಳುವಾಗ’ ಕೃತಿಗೆ ‘ಮಾತೋಶ್ರೀ ರತ್ನಮ್ಮ ಹೆಗ್ಗಡೆ’ ಗ್ರಂಥ ಬಹುಮಾನ ಮತ್ತು ಡಾ|| ಪಿ.ಎಸ್. ಶಂಕರ್ ‘ವೈದ್ಯಸಾಹಿತ್ಯ ಪ್ರಶಸ್ತಿ’ ಜೀವಮಾನ ಸಾಧನೆಗಾಗಿ ಸ್ವದೇಶಿ ವಿಜ್ಞಾನ ಆಂದೋಲನ ಸಂಸ್ಥೆಯ ‘ವಿಶ್ವೇಶ್ವರಯ್ಯ ಪ್ರಶಸ್ತಿ’, ‘ಕೆಂಪೇಗೌಡ ಪ್ರಶಸ್ತಿ’, ಸೀತಾಸುತ ಸಾಹಿತ್ಯ ಪ್ರಶಸ್ತಿ’, ಕರ್ನಾಟಕ ಸಮುದಾಯ ಆರೋಗ್ಯ ಸಂಸ್ಥೆಯ 2023ನೇ ಸಾಲಿನ ‘ಸಮೃದ್ಧ ಸಮುದಾಯ ಆರೋಗ್ಯ ಸಾಹಿತ್ಯ ಪ್ರಶಸ್ತಿ’, ಆಯುರ್ವೇದ ಅಕಾಡೆಮಿಯಿಂದ ‘ಆಯುರ್ವೇದ ಜ್ಯೋತಿ’, ‘ವೈದ್ಯರತ್ನ’, ಶರಣ ಸಾಹಿತ್ಯ ಪರಿಷತ್ತಿನ ಶಂಕರಶ್ರೀ ದತ್ತಿ ಪ್ರಶಸ್ತಿ ಸೇರಿದಂತೆ ಮುಂತಾದ ಅನೇಕ ಪ್ರಶಸ್ತಿಗಳು ಇವರಿಗೆ ದೊರೆತಿವೆ.
ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದ ಜೀವಮಾನ ಶಾಧನೆಗೆ ಕೊಡಮಾಡುವ 2023-24ನೇ ಸಾಲಿನ ಕರ್ನಾಟಕ ಸರ್ಕಾರದ ಅತ್ಯುನ್ನತ ಪ್ರಶಸ್ತಿಯಾದ ಅಕ್ಕಮಹಾದೇವಿ ಪ್ರಶಸ್ತಿಗೂ ಇರುವ ಭಾಜನರಾಗಿದ್ದಾರೆ. 2021ರ ಅಕ್ಟೋಬರ್ ನಲ್ಲಿ ಜರುಗಿದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಅಖಿಲ ಕರ್ನಾಟಕ ತೃತೀಯ ಕವಿ ಕಾವ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿದ್ದರು. 2022 ರಲ್ಲಿ ಕರ್ನಾಟಕ ಲೇಖಕಿಯರ ಸಂಘದ ಪ್ರತಿಷ್ಠಿತ ಅನುಪಮಾ ಪ್ರಶಸ್ತಿ, 2024 ರಲ್ಲಿ ಎಫ್. ಕೆ. ಸಿ. ಸಿ. ಐ.ನಿಂದ ಅತ್ಯುತ್ತಮ ಮಹಿಳಾ ಉದ್ಯಮಿ ಪ್ರಶಸ್ತಿ ಮತ್ತು ಆರ್ಟ್ ಮಂತ್ರಂ ಸಂಸ್ಥೆಯಿಂದ ಆರ್ಟ್ ಮಂತ್ರಂ ಸಾಹಿತ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಡಾ ವಸುಂಧರಾ ಭೂಪತಿ ಅವರ ಬದುಕು ಮತ್ತು ಸಾಹಿತ್ಯದ ಬಗ್ಗೆ ಗುಲ್ಬರ್ಗ ವಿಶ್ವವಿದ್ಯಾಲಯ ಮತ್ತು ಹಂಪಿ ವಿಶ್ವವಿದ್ಯಾಲಯದಿಂದ ಹಲವರು ಪಿಎಚ್ಡಿ ಮಾಡಿದ್ದಾರೆ.
Dr Vasundhara Bhupathi
ಕಾಮೆಂಟ್‌ಗಳು