ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಸ್.ಎನ್.ಗೋಯೆಂಕಾ


 ಎಸ್.ಎನ್.ಗೋಯೆಂಕಾ


ಸತ್ಯ ನಾರಾಯಣ ಗೋಯೆಂಕಾ ಅವರು ವಿಪಸ್ಸನ ಧ್ಯಾನದ ಶಿಕ್ಷಕರಾಗಿ ಪ್ರಸಿದ್ಧರು. ಅವರು ಪ್ರಭಾವಿ ಶಿಕ್ಷಕರಾಗಿದ್ದರಲ್ಲದೆ,  ಯಾವುದೇ ವ್ಯಾಪಾರಿ ಮನೋಭಾವವಿಲ್ಲದೆ,  ಜಾಗತಿಕವಾಗಿ ಎಲ್ಲೆಡೆ ವಿಪಸ್ಸನಾ ಧ್ಯಾನ ಕೇಂದ್ರಗಳನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. "ಬುದ್ಧನು ಪ್ರತಿಪಾದಿಸಿದ ಮುಕ್ತಿಯ ಮಾರ್ಗವು ಯಾವುದೇ ಪಂಥಕ್ಕೆ ಸೀಮೀತವಾಗಿಲ್ಲದೆ, ಜಾಗತಿಕವಾಗಿ ಎಲ್ಲರೂ ರೂಢಿಸಿಕೊಳ್ಳಬಹುದಾದ ವೈಜ್ಞಾನಿಕ ಸ್ವರೂಪದ್ದಾಗಿದೆ” ಎಂಬುದು ಅವರ ಚಿಂತನೆಯಾಗಿತ್ತು.

ಗೋಯೆಂಕಾ ಅವರು ಬರ್ಮಾದಲ್ಲಿ (ಈಗ ಮ್ಯಾನ್ಮಾರ್) 1924ರ ಜನವರಿ 30ರಂದು ಜನಿಸಿದರು. ಇವರ ತಂದೆ ತಾಯಂದಿರು ಭಾರತೀಯ ಮಾರ್ವಾಡಿ ಜನಾಂಗಕ್ಕೆ ಸೇರಿದವರಾಗಿದ್ದು, ಸಂಪ್ರದಾಯಸ್ಥ ಹಿಂದೂ ಕುಟುಂಬದಲ್ಲಿ ಬೆಳೆದರು. ಯಶಸ್ವಿ ಉದ್ಯಮಿಯಾಗಿದ್ದ ಇವರು, 1955ರಲ್ಲಿ ತೀವ್ರವಾದ  ಮೈಗ್ರೇನ್‌ ಇಂದ ಬಳಲತೊಡಗಿದರು. ಇದಕ್ಕೆ ವೈದ್ಯಕೀಯ ಪರಿಹಾರವನ್ನು  ಕಾಣಲಾಗದೆ, ತಮ್ಮ ಸ್ನೇಹಿತನ ಸಲಹೆಯ ಮೇರೆಗೆ,  ವಿಪಸ್ಸನಾ ಶಿಕ್ಷಕರಾಗಿದ್ದ ಸಯಗಿ ಯು ಬಾ ಖಿನ್ ಅವರನ್ನು ಭೇಟಿಯಾದರು. ಆರಂಭದಲ್ಲಿ ಹಿಂದೇಟು ಹಾಕಿದರೂ, ಬಾ ಖಿನ್ ಅವರು ಗೋಯೆಂಕಾ ಅವರನ್ನು ತಮ್ಮ ವಿದ್ಯಾರ್ಥಿಯನ್ನಾಗಿ ತೆಗೆದುಕೊಂಡರು. ಗೋಯೆಂಕಾ 14 ವರ್ಷಗಳ ಕಾಲ ಅವರ ಬಳಿ ತರಬೇತಿ ಪಡೆದರು.

1969ರಲ್ಲಿ, ಗೋಯೆಂಕಾ ಅವರು ತಮ್ಮ ಗುರು ಸಯಗಿ ಯು ಬಾ ಖಿನ್ ಅವರಿಂದ ಕಲಿಸಲು ಅಧಿಕಾರ ಪಡೆದರು. ತಮ್ಮ ವ್ಯವಹಾರವನ್ನು ತಮ್ಮ ಕುಟುಂಬಕ್ಕೆ ಬಿಟ್ಟು ಭಾರತಕ್ಕೆ ಬಂದು, ಹೈದರಾಬಾದ್‌ನ ಕುಸುಮ್ ನಗರದಲ್ಲಿ ಮೊದಲ ವಿಪಸ್ಸನ ಧ್ಯಾನ ಕೇಂದ್ರವನ್ನು ಪ್ರಾರಂಭಿಸಿದರು. ಏಳು ವರ್ಷಗಳ ನಂತರ, 1976ರಲ್ಲಿ, ಅವರು ಮಹಾರಾಷ್ಟ್ರದ ನಾಸಿಕ್ ಬಳಿಯ ಇಗತ್ಪುರಿಯಲ್ಲಿ  ಧ್ಯಾನ ಕೇಂದ್ರವಾದ ಧಮ್ಮ ಗಿರಿಯನ್ನು ತೆರೆದರು. 1982ರವರೆಗೆ ಸ್ವಯಂ ನೇರವಾಗಿ ಧ್ಯಾನವನ್ನು ಕಲಿಸುತ್ತಿದ್ದ ಅವರು, ಮುಂದೆ ಸಹಾಯಕ ಶಿಕ್ಷಕರಿಗೆ ತರಬೇತಿ ನೀಡಲು ಪ್ರಾರಂಭಿಸಿದರು. 1985ರಲ್ಲಿ ಧಮ್ಮ ಗಿರಿಯಲ್ಲಿ ವಿಪಸ್ಸನಾ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಿದರು.

ಪ್ರಾರಂಭದಿಂದಲೂ, ಗೋಯೆಂಕಾ ಅವರು 10-ದಿನಗಳ ಅವಧಿಯ ಪೂರ್ಣಪ್ರಮಾಣದ ಧ್ಯಾನ ಕಲಿಕೆ ಶಿಬಿರಗಳನ್ನು ಆಯೋಜಿಸತೊಡಗಿದರು.  1988ರ ಹೊತ್ತಿಗೆ ಅವರು ಪಾಶ್ಚಿಮಾತ್ಯರನ್ನೂ ಒಳಗೊಂಡಂತೆ ಹಲವಾರು ಸಾವಿರ ಮಂದಿಗೆ ಕಲಿಸಿದರು. ಇಂದು, ವಿಪಸ್ಸನಾ ಕೋರ್ಸ್‌ಗಳು, ಸಯಗಿ ಯು ಬಾ ಖಿನ್‌ನ ಸಂಪ್ರದಾಯದಲ್ಲಿ, 94 ದೇಶಗಳಲ್ಲಿ 380 ಸ್ಥಳಗಳಲ್ಲಿ ನಡೆಯುತ್ತಿವೆ. ಅವುಗಳಲ್ಲಿ ಸುಮಾರು 241  ಶಾಶ್ವತ ವಿಪಸ್ಸನಾ ಧ್ಯಾನ ಕೇಂದ್ರಗಳಾಗಿ ರೂಪುಗೊಂಡಿವೆ. 2000ನೇ ಇಸವಿಯಲ್ಲಿ , ಗೋಯೆಂಕಾ ಅವರು ಮುಂಬೈನ ಗೊರೈ ಬೀಚ್ ಬಳಿ 325 ಅಡಿ ಎತ್ತರದ ಗ್ಲೋಬಲ್ ವಿಪಸ್ಸನಾ ಪಗೋಡಾದ ಅಡಿಪಾಯವನ್ನು ಹಾಕಿದರು. ಇದು 2009 ರಲ್ಲಿ ಪ್ರಾರಂಭವಾದ ಈ ಕೇಂದ್ರವು ಬುದ್ಧನ ನೆನಪುಗಳು ಮತ್ತು ಧ್ಯಾನ ಮಂದಿರವನ್ನು ಹೊಂದಿದೆ. ವಿಪಸ್ಸನ ಮೂಲ ಭೂಮಿಯಾದ ಭಾರತಕ್ಕೆ ಋಣಭಾರವನ್ನು ಮರುಪಾವತಿಸಲು ಬಯಸಿದ ತಮ್ಮ ಗುರು  ಯು ಬಾ ಖಿನ್ ಅವರ ಗೌರವಾರ್ಥವಾಗಿ ಇದನ್ನು ನಿರ್ಮಿಸಿದರು.

ಗೋಯೆಂಕಾ ಅವರು 29 ಆಗಸ್ಟ್ 2000 ರಂದು ನ್ಯೂಯಾರ್ಕ್ ನಗರದ ವಿಶ್ವಸಂಸ್ಥೆಯ ಪ್ರಧಾನ ಕಛೇರಿಯ ಜನರಲ್ ಅಸೆಂಬ್ಲಿ ಹಾಲ್‌ನಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ನಾಯಕರ ಮಿಲೇನಿಯಮ್ ವರ್ಲ್ಡ್ ಪೀಸ್ ಶೃಂಗಸಭೆಯಲ್ಲಿ ಆಹ್ವಾನಿತ ಭಾಷಣಕಾರರಾಗಿದ್ದರು.  ಒಬ್ಬ ಉತ್ತಮ ವಾಗ್ಮಿಯೂ ಆಗಿದ್ದ  ಗೋಯೆಂಕಾ ಅವರು  ಒಬ್ಬ ಸಮೃದ್ಧ ಬರಹಗಾರರೂ,  ಕವಿಯೂ ಆಗಿದ್ದರು.  ಅವರು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಬರೆದಿದ್ದಾರೆ. ವ್ಯಾಪಕವಾಗಿ ಪ್ರಯಾಣಿಸಿದ್ದ ಅವರು ಮತ್ತು ವಿಶ್ವ ಆರ್ಥಿಕ ವೇದಿಕೆ, ದಾವೋಸ್ ಸೇರಿದಂತೆ ವಿಶ್ವದಾದ್ಯಂತ ಅನೇಕ ಕಡೆಗಳಲ್ಲಿ ಉಪನ್ಯಾಸ ನೀಡಿದ್ದರು. 2002ರಲ್ಲಿ ನಾಲ್ಕು ತಿಂಗಳ ಕಾಲ, 'ಮೆಡಿಟೇಶನ್ ನೌ ಟೂರ್ ಆಫ್ ನಾರ್ತ್ ಅಮೇರಿಕಾ' ಅನ್ನು ಕೈಗೊಂಡಿದ್ದರು. 2012ರಲ್ಲಿ ಅವರಿಗೆ ಪದ್ಮಭೂಷಣ ಗೌರವವನ್ನು ನೀಡಲಾಯಿತು.

ಗೋಯೆಂಕಾ ಸುಮಾರು 1350 ಸಹಾಯಕ ಶಿಕ್ಷಕರಿಗೆ ತಮ್ಮ ಧ್ವನಿಮುದ್ರಣಗಳನ್ನು ಬಳಸಿಕೊಂಡು ಕೋರ್ಸ್‌ಗಳನ್ನು ನಡೆಸಲು ತರಬೇತಿ ನೀಡಿದರು.  ಪ್ರತಿ ವರ್ಷ ಸುಮಾರು 120,000 ಜನರು ಇದರಿಂದ  ಪ್ರಯೋಜನ ಪಡೆಯುತ್ತಿದ್ದಾರೆ. ಗೋಯೆಂಕಾ ಅವರ ನಿಧನದ ನಂತರದಲ್ಲಿ ಅಮೇರಿಕನ್ ಲೇಖಕ ಜಾಕ್ ಕಾರ್ನ್‌ಫೀಲ್ಡ್  ಅವರು,  "ಪ್ರತಿ ಪೀಳಿಗೆಯಲ್ಲಿ, ಜಗತ್ತನ್ನು ಬೆಳಗಿಸಲು ಧರ್ಮದ ದೀಪವನ್ನು ಎತ್ತರಕ್ಕೆ ಹಿಡಿದಿಟ್ಟುಕೊಳ್ಳುವ ಕೆಲವು ದಾರ್ಶನಿಕ ಮತ್ತು ಆಳವಾದ ಗುರುಗಳು ಮೂಡಿಬಂದಿದ್ದಾರೆ. ದಲೈ ಲಾಮಾ ಮತ್ತು ಥಿಚ್ ನಾತ್ ಹನ್ ಅವರಂತೆ ಎಸ್.ಎನ್.ಗೋಯೆಂಕಾ ಅವರು ಕೂಡಾ ನಮ್ಮ ಕಾಲದ ಮಹಾನ್ ವಿಶ್ವಗುರುಗಳಲ್ಲಿ ಒಬ್ಬರಾಗಿದ್ದಾರೆ" ಎಂದು ಬರೆದರು.

ಎಸ್.ಎನ್.ಗೋಯೆಂಕಾ ಅವರು 2013ರ ಸೆಪ್ಟೆಂಬರ್ 29ರಂದು ಮುಂಬೈನಲ್ಲಿರುವ ತಮ್ಮ ಮನೆಯಲ್ಲಿ ನಿಧನರಾದರು.

Guru S. N. Goenka who popularized Vipassana Meditation 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ