ಕೆ. ತಾರಾ ಭಟ್
ಕೆ. ತಾರಾ ಭಟ್ ಮತ್ತು ಕೆ. ಶಾರದಾ ಭಟ್
ಕೆ. ತಾರಾ ಭಟ್ ಲೇಖಕಿಯಾಗಿ, ಚಿಂತಕಿಯಾಗಿ, ಹೋರಾಟಗಾರ್ತಿಯಾಗಿ, ಸಿನಿಮಾ ಲೋಕ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ್ದವರು.
ಕೆ. ತಾರಾ ಭಟ್ ಅವರದು ಬಹುಮುಖಿ ಪ್ರತಿಭೆ. ತಾರಾ ಅವರು ಕುಂದಾಪುರದಲ್ಲಿ 1944ರ ಸೆಪ್ಟಂಬರ್ 3ರಂದು ಜನಿಸಿದರು. ಕುಂದಾಪುರದ ಪಾಳೆಯಗಾರರು ಮಹಾರಾಷ್ಟ್ರದವರಾದ ಇವರ ಪೂರ್ವಜರನ್ನು ಕರೆಸಿಕೊಂಡು, ಕೋಟೆ ಆಂಜನೇಯ ದೇವಳದ ಅರ್ಚಕರಾಗಿ ನೇಮಿಸಿ 'ರಾಜ ಪುರೋಹಿತರು’ ಎಂಬ ಗೌರವ ನೀಡಿದ್ದರಂತೆ. ತಾರಾ ಭಟ್ ಅವರ ತಂದೆ ಬನಾರಸಿನಲ್ಲಿ ನೆಲೆಸಿ ಜ್ಯೋತಿಷ್ಯ ಹಾಗೂ ವೇದಶಾಸ್ತ್ರಗಳಲ್ಲಿ ಹೆಚ್ಚಿನ ಪರಿಣತಿ ಹೊಂದಿದವರು. ತಾಯಿಯ ಊರಾದ ಕೋಟೇಶ್ವರದಲ್ಲಿ ಪಟ್ಟಾಭಿ ರಾಮಚಂದ್ರ ದೇವಳದ ಪ್ರಧಾನ ಅರ್ಚಕರಾಗಿ ಪಕ್ಕದಲ್ಲೇ ಹೊಸಮನೆಯಲ್ಲಿ ಮಡದಿ-ಮಕ್ಕಳೊಂದಿಗೆ ವಾಸ್ತವ್ಯ ಹೊಂದಿದ್ದರು. ಅದೇ ವರ್ಷ ಕೋಟೇಶ್ವರ ರಥೋತ್ಸವದಲ್ಲಿ ರಥ ಎಳೆಯುವಾಗ ಹಗ್ಗ ತುಂಡಾಗಿ ರಭಸದಲ್ಲಿ ಆ ಹಗ್ಗ ಸುತ್ತಿದ ಪರಿಣಾಮ, ರಥದ ಕೆಳಗೆ ತಾರಾ ಅವರ ತಂದೆ ಪ್ರಾಣಬಿಟ್ಟರು. ಇವರ ಅಮ್ಮ ಎರಡು ತಿಂಗಳ ಹಸಿ ಬಾಣಂತಿ, ಪುಟ್ಟ ಮಕ್ಕಳನ್ನು ತಬ್ಬಿಕೊಂಡು ಬೀದಿಪಾಲಾದರು. ಆ ತಾಯಿ ಅಂಗಲಾಚಿದರೂ ಕಿವಿಗೇ ಹಾಕಿಕೊಳ್ಳದೇ ತಲೆಬೋಳಿಸಿ, ಕೆಂಪು ಸೀರೆ ಉಡಿಸಿ, ಕತ್ತಲೆ ಕೋಣೆಯಲ್ಲಿ ಕುಳ್ಳಿರಿಸಿದರು. ಮುಂದೆ ತಾರಾ ಅವರು ವಿಧವೆಯ ಮೇಲೆ ನಡೆಯುವ ಕ್ರೌರ್ಯದ ಬಗ್ಗೆ ತಿಳಿವಳಿಕೆ ಬಂದು ಮಹಿಳಾ ಸಂಘಟನೆಗಳಲ್ಲಿ ಪಾಲ್ಗೊಂಡು ಹೋರಾಟಕ್ಕೆ ಇಳಿಯುವುದಕ್ಕೆ ಇದು ಮೂಲ ಪ್ರೇರಣೆ ಆಯಿತು.
ತಾರಾ ಅವರು ಮನೆಯಲ್ಲಿ ಮತ್ತು ಹೊರಗಿನ ಎಲ್ಲ ವಿರೋಧ ಎದುರಿಸಿ, ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿದರು. ಆಗಿನ ದಿನಗಳಲ್ಲೇ ಅನೇಕ ಸಣ್ಣಕಥೆಗಳನ್ನು ಸುಧಾ ವಾರಪತ್ರಿಕೆಯಲ್ಲಿ ಪ್ರಕಟಿಸಿದ್ದರು. ತವರಿಗೆ ಬರುತ್ತಿದ್ದ ಮದುವೆಯಾಗಿದ್ದ ಅಕ್ಕ, ಆಗಿನ ಕಾಲದ ದೊಡ್ಡ ದೊಡ್ಡ ಲೇಖಕಿಯರ ಹೆಸರುಗಳನ್ನು ಹೇಳಿ, ಅವರ ಕಥೆಯ ಸಾರಾಂಶವನ್ನು ಬಣ್ಣಿಸುತ್ತಿದ್ದು, ಇವರಿಗೂ ಕಥೆ ಬರೆಯಲು ಪ್ರೇರೇಪಿಸುತ್ತಿದ್ದರು. ಹಾಗಾಗಿ ಹೈಸ್ಕೂಲಿನ ವಿದ್ಯಾರ್ಥಿಯಾಗಿದ್ದಾಗಲೇ ತಾರಾ ಅವರ ಬರವಣಿಗೆ ಆರಂಭವಾಯಿತು.
ಪಾಟೀಲ ಪುಟ್ಟಪ್ಪನವರು ಸಂಪಾದಕರಾಗಿದ್ದ 'ಪ್ರಪಂಚ' ಪತ್ರಿಕೆಯಲ್ಲಿ ತಾರಾ ಅವರ 'ಮೋಡ ಮುಸುಕಿತು ತಾರೆ ಮಿನುಗಿತು' ಕಥೆ ಪ್ರಕಟವಾಗಿತ್ತು. ಕೋಟೇಶ್ವರದಲ್ಲಿ ಮಹಿಳೆಯರು ಹೆಚ್ಚು ಓದಿದರೆ ಕೆಟ್ಟೇ ಹೋಗುತ್ತಾರೇನೋ ಎನ್ನುವ ನಂಬಿಕೆ ಇದ್ದ ಕಾರಣ ಇವರಿಗೆ ಶಿಕ್ಷಣ ಮುಂದುವರಿಸಲಾಗಲಿಲ್ಲ. ಬೆಂಗಳೂರಿನಲ್ಲಿ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಕೆಲಸಮಾಡುವ ಸಂದರ್ಭದಲ್ಲಿ 'ಆಚಾರ್ಯ ಪಾಠಶಾಲೆ’ ಸಂಜೆ ಕಾಲೇಜಿಗೆ ಸೇರಿ ಬಿ.ಎ. ಮುಗಿಸಿಕೊಂಡರು.
ದೊಡ್ಡಕ್ಕ ಮುಂಬೈಯಲ್ಲಿ ನೆಲೆಸಿದ್ದ ಕಾರಣ ತಾರಾ ಅವರು ಅಲ್ಲಿಗೆ ಹೋಗಿ 'ಸೊಹಾಲ್ ಇಂಜಿನಿಯರಿಂಗ್ ಕಂಪೆನಿಯಲ್ಲಿ' ಕೆಲಕಾಲ ರಿಸೆಪ್ಷನಿಸ್ಟ್ ಕೆಲಸ ಮಾಡಿದರು. ತಾಯಿಗೆ ಆದ ಕೇಶಮುಂಡನದ ಚಿತ್ರ ಮನದಲ್ಲಿ ಕಾಡುತ್ತಿತ್ತು. ಆ ವಿಚಾರವನ್ನು ಸಿನಿಮಾ ಮಾಡಬೇಕು ಎಂಬ ತೀವ್ರತೆ ಇತ್ತು. ಹೀಗಾಗಿ ಪೂನಾದ ಫಿಲ್ಮ್ ಇನ್‌ಸ್ಟಿಟ್ಯೂಟ್’ಗೆ ಸೇರಿದರು. ಕಲ್ಪನಾ ಲಾಜ್ಮಿ, ಸಹಿದ್ ಮಿರ್ಜಾ ಇವರ ಗುರುಗಳಾಗಿದ್ದರು. ಬೆಂಗಳೂರಿನ 'ಕರ್ನಾಟಕ ಚಲನಚಿತ್ರ ತಾಂತ್ರಿಕ ತರಬೇತಿ ಕೇಂದ್ರ’ದಲ್ಲೂ, ಮದ್ರಾಸಿನ 'ಏಕನಾಥ ಫಿಲ್ಮ್ ಇನ್‌ಸ್ಟಿಟ್ಯೂಟ್’ನಲ್ಲೂ ಚಲನಚಿತ್ರ ನಿರ್ದೇಶನ ಕುರಿತು ಅಭ್ಯಾಸ ಮಾಡಿದರು. ಕಾಸರಗೂಡಿನ ಹತ್ತಿರದ ಹಳ್ಳಿಯಲ್ಲಿನ ಮೂಢನಂಬಿಕೆಗಳ ಕುರಿತ ಮಾಡಿದ ವರದಿ ಮುಂಬೈಯ ನ್ಯೂ ವುಮೆನ್ ಪತ್ರಿಕೆಯಲ್ಲಿ 'Under the veil of darkness' ಎಂಬ ಶಿರೋನಾಮೆಯಲ್ಲಿ ಪ್ರಕಟಗೊಂಡಿತ್ತು. 'ಸಾರ್ಕ್ ಹೆಣ್ಣುಮಗುವಿನ ವರ್ಷ 1990’ರಲ್ಲಿ 'ತಬ್ಬಲಿ' ಟೆಲಿಫಿಲ್ಮ್ ನಿರ್ದೇಶಿಸಿ ಮೆಚ್ಚುಗೆ ಗಳಿಸಿದರು.
ತಾರಾ ಭಟ್ ಅವರಿಗೆ ಅನೇಕ ಮಹಿಳಾ ಸಂಘಟನೆಗಳ ಪರಿಚಯವಾಗಿ ಸ್ತ್ರೀಪರ ಕಾಳಜಿಯ ಅಭಿಯಾನಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಲೈಂಗಿಕ ಶೋಷಣೆ ಮುಂತಾದ ಜೀವ ವಿರೋಧಿ ಮೌಲ್ಯಗಳ ವಿರುದ್ಧ ಹೋರಾಟದಲ್ಲಿ ಪಾಲ್ಗೊಂಡರು. ಈ ಕ್ರಿಯಾಶೀಲತೆ ಇವರ ಬರಹಗಳಿಗೆ ಪ್ರೇರಣೆಯಾಯಿತು. ಪತ್ರಕರ್ತೆಯಾಗಿ ಕೆಲಸ ನಿರ್ವಹಿಸಿದಾಗ ಗಳಿಸಿಕೊಂಡ ಅನುಭವಗಳೇ ಇವರ 'ಅವ್ಯಕ್ತ' ಕಾದಂಬರಿಗೆ ಪ್ರೇರಣೆಯಾಗಿ ಒದಗಿ ಬಂತು. ಬೆಂಗಳೂರಿನಲ್ಲಿ ಜೀವನ ನಿರ್ವಹಿಸಿದ ಸಂದರ್ಭದಲ್ಲಿ ಮಹಿಳಾ ಶೋಷಣೆಯ ವಿವಿಧ ಮುಖಗಳನ್ನು ಕಂಡರು. ದಲಿತ ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ರೂತ್ ಮನೋರಮ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ವುಮೆನ್ಸ್ ವಾಯ್ಸ್ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು.
ತಾರಾ ಭಟ್ ಅವರು ಬರೆದ 'ಲೋಟಸ್ ಪಾಂಡ್ ಕಾದಂಬರಿ ನಾಲ್ಕು ಪ್ರಶಸ್ತಿಗಳನ್ನು ಗೆದ್ದುಕೊಂಡು, ಮಣಿಪಾಲ ಪ್ರಸ್‌ನಿಂದ ಇಂಗ್ಲಿಷ್‌ಗೆ ಅನುವಾದಗೊಂಡಿತು. ಅವ್ಯಕ್ತ ಕಾದಂಬರಿಯೂ ಜನಮೆಚ್ಚುಗೆ ಗಳಿಸಿತು. ಗಾಳಿಯಲ್ಲಿ ಹೆಪ್ಪುಗಟ್ಟಿದ ಮೌನ, ಪರಿಧಿಯನ್ನು ಅರಸುತ್ತ, ಬೋಳು ಮರದ ಕೊಂಬೆಗಳು, ಮುಖವಿಲ್ಲದವರು ಸಣ್ಣ ಕಥಾ ಸಂಕಲನಗಳು. ಹೊಕ್ಕುಳ ಬಳ್ಳಿ, ಸರ್ವಾಧಿಕಾರಿ ನಾಟಕ, ಅಲ್ಲಾವುದ್ದೀನನ ಅದ್ಭುತ ದೀಪ, ಮೂಢರಾಜಾ ಗಾಂಪ ಮಂತ್ರಿ – ಮಕ್ಕಳ ನಾಟಕಗಳು, ಹೊಂಗನಸಿನ ಹರಿಕಾರ, ಅಪರೂಪದ ಸಮಾಜ ಸೇವಕ ಎಂಬ ಜೀವನ ಚರಿತ್ರೆಗಳು, 'ಮೊನಾಲಿಸಾ' ಕವನ ಸಂಕಲನ ಇವರ ಕೃತಿಗಳಲ್ಲಿವೆ.
ಮದುವೆ ಆಗದಿದ್ದ ತಾರಾ ಭಟ್ ಅವರು ತಂಗಿ ಶಾರದಾ ಜೊತೆಗೆ ಉಡುಪಿ ಮಿಶನ್ ಆಸ್ಪತ್ರೆ ರಸ್ತೆಯ ಶಾಂತಾನಂದ ರೆಸಿಡೆನ್ಸಿಯಲ್ಲಿ ಇದ್ದರು. ತಾರಾ ಭಟ್ ಅವರು ಯಾವುದೇ ಸದ್ದುಗದ್ದಲವಿಲ್ಲದೆ ತಮ್ಮ 80ನೇ ವಯಸ್ಸಿನಲ್ಲಿ 2023ರ ನವೆಂಬರ್ 3ರಂದು ಈ ಲೋಕದಿಂದ ಹೊರನಡೆದರು. ತಾರಾ ಭಟ್ ಅವರ ಸಹೋದರಿ ಶಾರದಾ ಭಟ್ ಅವರು ಸಹಾ ಬರಹಗಾರ್ತಿಯಗಿ ಪಯಣ, ಪಲಾಯನ, ಪರಿಭ್ರಮಣ, ಪದರಗಳು, ಸಾತತ್ತೆಗೊಂದು ಸನ್ಮಾನ, ಅಸ್ತಮಾನ (ಕೊಂಕಣಿ ಕಾದಂಬರಿ) ಸೇರಿದಂತೆ ಒಟ್ಟು ಸುಮಾರು 15 ಕಾದಂಬರಿ, ಕಥಾ ಸಂಕಲನ, ವಿಡಂಬನೆ-ವಾರನೋಟ ಮುಂತಾದವುಗಳಿಂದ ಹೆಸರಾಗಿದ್ದರು. ಸಂಘಟನೆ, ಪತ್ರಿಕೋದ್ಯಮ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದರು. ಅಕ್ಕ ನಿಧನರಾದ ಕೆಲವೇ ದಿನಗಳಲ್ಲಿ ಶಾರದಾ ಅವರು ಸಹ ಜನವರಿ 1, 2024ರಂದು ನಿಧನರಾದರು. ಈ ಸಹೋದರಿಯರ ಆಸೆಯಂತೆ ಅವರುಗಳ ದೇಹವನ್ನು ಕೆಎಂಸಿ ಆಸ್ಪತ್ರೆಗೆ ನೀಡಲಾಯಿತು.
In memory of Great sisters K. Tara Bhat and K. Sharadha Bhat🌷🙏🌷
ಕಾಮೆಂಟ್‌ಗಳು