ನಿರುಪಮ ರಾಜೇಂದ್ರ
ನಿರುಪಮ ರಾಜೇಂದ್ರ ಮತ್ತು ಟಿ.ಡಿ. ರಾಜೇಂದ್ರ
ಬೆಂಗಳೂರಿನವರಾದ ನಿರುಪಮ ರಾಜೇಂದ್ರ ಮತ್ತು ಟಿ ಡಿ ರಾಜೇಂದ್ರ ದಂಪತಿ ನೃತ್ಯಲೋಕದಲ್ಲಿ ವಿಶ್ವಖ್ಯಾತಿ ಗಳಿಸಿದವರಾಗಿದ್ದಾರೆ.
ನಿರುಪಮ ಅವರು 1970ರ ಮೇ 1 ರಂದು ಬೆಂಗಳೂರಿನಲ್ಲಿ ಜನಿಸಿದರು. ಟಿ.ಡಿ. ರಾಜೇಂದ್ರ ಅವರು 1965ರ ಜುಲೈ 16 ರಂದು ಬೆಂಗಳೂರಿನಲ್ಲಿ ಜನಿಸಿದರು. ಈ ದಂಪತಿ ಮಾಯಾ ರಾವ್, ಕುಮುದಿನಿ ಲಖಿಯಾ ಮತ್ತು ಅರ್ಜುನ್ ಮಿಶ್ರಾ ಅವರಿಂದ ಕಥಕ್, ಯು.ಎಸ್. ಕೃಷ್ಣರಾವ್ ಮತ್ತು ಚಂದ್ರಭಾಗ ದೇವಿ, ಕಲಾಮಂಡಲಂ ರಾಧಿಕಾ ಮತ್ತು ನರ್ಮದಾ ಅವರಿಂದ ಭರತನಾಟ್ಯವನ್ನು ಕಲಿತಿದ್ದಾರೆ. ಅವರು ಸುಂದರಿ ಸಂತಾನಂ ಮತ್ತು ಪದ್ಮಾ ಸುಬ್ರಹ್ಮಣ್ಯಂ ಅವರಿಂದ ನಾಟ್ಯಶಾಸ್ತ್ರವನ್ನು ಸಹ ಕಲಿತಿದ್ದಾರೆ.
ನಿರುಪಮ ಮತ್ತು ರಾಜೇಂದ್ರ ಅವರು ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಕಲೆಗಳಲ್ಲಿ ಪ್ರವರ್ಧಮಾನಕ್ಕೆ ಬಂದಿದ್ದು, ನರ್ತನ ಕಲಾವಿದರಾಗಿ, ನೃತ್ಯ ನಿರ್ದೇಶಕರಾಗಿ, ನಿರ್ಮಾಪಕರಾಗಿ ಮತ್ತು ನಿರ್ದೇಶಕರಾಗಿ ಶ್ರೇಷ್ಠರಾಗಿದ್ದಾರೆ. ಮೂರು ದಶಕಗಳ ಹಿಂದೆ ತಾವು ಸ್ಥಾಪಿಸಿರುವ 'ಅಭಿನವ ನೃತ್ಯ ಸಂಸ್ಥೆ'ಯ ಮೂಲಕ ಪ್ರತಿಷ್ಠಿತ ನೃತ್ಯ ಉತ್ಸವಗಳಲ್ಲಿ ಪ್ರದರ್ಶನ ನೀಡಲು ಜಾಗತಿಕವಾಗಿ ಪ್ರವಾಸ ಮಾಡಿದ್ದಾರೆ. ಭಾರತೀಯ ಕಥಾನಕಗಳಿಗೆ ವಿಶ್ವದರ್ಜೆಯ ಆಧುನಿಕ ಸೊಬಗಿನ ಕಲಾತ್ಮಕ ಮೆರುಗು ತಂದಿದ್ದಾರೆ. ಸಂಗೀತ ನಾಟಕ ಅಕಾಡೆಮಿ ಆಯೋಜಿಸಿದ ಉತ್ಸವಗಳು ಸೇರಿದಂತೆ ದೇಶ ಮತ್ತು ವಿದೇಶಗಳಲ್ಲಿ ಅವರು ವ್ಯಾಪಕವಾಗಿ ಪ್ರದರ್ಶನ ನೀಡಿದ್ದಾರೆ ಮತ್ತು ಉಪನ್ಯಾಸ ಪ್ರದರ್ಶನಗಳನ್ನು ನಡೆಸಿ ಕೊಟ್ಟಿದ್ದಾರೆ.
ನಿರುಪಮಾ ರಾಜೇಂದ್ರ ಅವರು 2011 ರ ಕರ್ನಾಟಕ ಕಲಾಶ್ರೀ ಪ್ರಶಸ್ತಿ, 2016 ರ ನೃತ್ಯ ಚೂಡಾಮಣಿ ಪ್ರಶಸ್ತಿ, 2008 ರ ಒಕ್ಲಹೋಮದಲ್ಲಿ ಭಾರತೀಯ ನೃತ್ಯಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ರಾಜ್ಯಪಾಲರ ಪ್ರಶಂಸೆ ಮತ್ತು ವಿಶ್ವಾದ್ಯಂತ ಸಂಸ್ಥೆಗಳು ಮತ್ತು ಸಂಸ್ಥೆಗಳಿಂದ ಇನ್ನೂ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಈ ದಂಪತಿ ಸೃಜನಶೀಲ ಮತ್ತು ಪ್ರಾಯೋಗಿಕ ನೃತ್ಯಕ್ಕೆ ನೀಡಿದ ಕೊಡುಗೆಗಾಗಿ 2023 ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಇದಲ್ಲದೆ ಇನ್ನೂ ಅನೇಕ ಪ್ರತಿಷ್ಟಿತ ಗೌರವಗಳು ಈ ದಂಪತಿಗೆ ಸಂದಿವೆ.
ನಮ್ಮ ಕಲಾಪರಂಪರೆಗೆ ವಿಶ್ವವ್ಯಾಪಕತೆ ತಂದಿರುವ ಈ ಜೋಡಿಗೆ ಆಪ್ತ ನಮನ.
Great Dance couple Nirupama Rajendra
and T D Rajendra

ಕಾಮೆಂಟ್‌ಗಳು