ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಸ್. ಜಾನಕಿ


ಎಸ್. ಜಾನಕಿ ನಿಧನ

ದಕ್ಷಿಣ ಭಾರತದ ಮಹಾನ್ ಹಿನ್ನೆಲೆ ಗಾಯಕಿ ಎಸ್. ಜಾನಕಿ ನಿಧನರಾದರು ಎಂಬ ಸುದ್ದಿ ಬಂದಿದೆ. ಸಂಗೀತವನ್ನು ಭಕ್ತಿಯ ಕಾಯಕವೆನ್ನುತ್ತಿದ್ದ ಇವರಲ್ಲಿದ್ದ ಧ್ವನಿ ಮತ್ತು ಮೊಗದಲ್ಲಿನ ಕಳೆ ಗೌರವ ಮೂಡಿಸುವಂತದ್ದಾಗಿತ್ತು.

ಎಸ್. ಜಾನಕಿ  1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೇ ಎಂಬ ಗ್ರಾಮದಲ್ಲಿ ಜನಿಸಿದರು.  ತಮ್ಮ  ಮೂರನೆಯ ವಯಸ್ಸಿನಲ್ಲೇ ಸಂಗೀತಗಾರ್ತಿಯ ಸಕಲ ಸುಲಕ್ಷಣಗಳನ್ನೂ ಹೊರಹೊಮ್ಮಿಸಿದ ಜಾನಕಿ, ನಾದಸ್ವರ ವಿದ್ವಾನ್ ಶ್ರೀ ಪೈದಿಸ್ವಾಮಿ ಎಂಬವರಲ್ಲಿ ಸಂಗೀತಾಭ್ಯಾಸವನ್ನು ಪ್ರಾರಂಭಿಸಿದರು.  

1956ರ ವರ್ಷದಲ್ಲಿ ಆಕಾಶವಾಣಿ ನಡೆಸಿದ ಸಂಗೀತ ಸ್ಪರ್ಧೆಗಳಲ್ಲಿ, ರಾಷ್ಟ್ರಪತಿ ಬಾಬು ರಾಜೇಂದ್ರಪ್ರಸಾದ್ ಅವರಿಂದ ಬಹುಮಾನ ಸ್ವೀಕರಿಸಿದ ಜಾನಕಿ, ಮುಂದೆ ಚೆನ್ನೈಗೆ ಬಂದು ಸಂದರ್ಶನದಲ್ಲಿ ಲತಾ ಮಂಗೇಶ್ಕರ್ ಅವರ ‘ರಸಿಕ್ ಬಲಮಾ’ ಎಂಬ ಸುಪ್ರಸಿದ್ಧ ಗೀತೆಯನ್ನು ಮನೋಜ್ಞವಾಗಿ ಹಾಡಿ, ಪ್ರಸಿದ್ಧ ಎವಿಎಮ್ ಸಂಸ್ಥೆಯವರ ಕಾಂಟ್ರಾಕ್ಟ್ ಪಡೆದರು.  

1957ರಲ್ಲಿ ಪ್ರಸಿದ್ಧ ಸಂಗೀತ ನಿರ್ದೇಶಕ ಟಿ. ಚಲಪತಿ ರಾವ್ ಅವರ ತಮಿಳು ಚಿತ್ರ ‘ವಿಧಿಯಿನ್ ವಿಳಯಾಟ್ಟು’ ಜಾನಕಿ ಅವರು ಹಾಡಿದ ಪ್ರಥಮ ಚಿತ್ರ.   ಮುಂದೆ ತೆಲುಗಿನ ಚಿತ್ರ ಎಂ.ಎಲ್.ಎ, ಕನ್ನಡದ ಕೃಷ್ಣಗಾರುಡಿ ಇವೆಲ್ಲಾ ಒಂದಾದ ನಂತರ ಒಂದು ಎಂದು ಹರಿದು ಬರಲು ಪ್ರಾರಂಭವಾದವು.  ಮಲಯಾಳಂ ಚಿತ್ರಗಳಲ್ಲಿ ಕೂಡಾ ಹಾಡಲು ಪ್ರಾರಂಭಿಸಿದರು.  ಹೀಗೆ ಅವರು ದಕ್ಷಿಣ ಭಾರತದ ಎಲ್ಲಾ ಪ್ರಧಾನ ಭಾಷೆಗಳ ಗಾಯಕಿಯಾದರು.  ಜೊತೆಗೆ ಹಿಂದಿಯನ್ನೊಳಗೊಂಡಂತೆ ಭಾರತದ ಬಹಳಷ್ಟು ಭಾಷೆಗಳಲ್ಲಿ ತಮ್ಮ ಗಾನಮಾಧುರ್ಯವನ್ನು ಹರಿಸಿದರು.

ತಮಿಳಿನಲ್ಲಿ 1958ರ ಸುಮಾರಿನಲ್ಲಿ ಅವರು ನಾದಸ್ವರ ವಿದ್ವಾನ್ ಅರುಣಾಚಲಂ ಅವರ ನಾದಸ್ವರದೊಂದಿಗೆ ಮೇಳೈಸಿ ಹಾಡಿದ ‘ಸಿಂಗಾರವೇಲನೆ ದೇವ’ ಗೀತೆ, ಪ್ರಾರಂಭದ ವರ್ಷಗಳಲ್ಲೇ ಅವರನ್ನು ಅಪ್ರತಿಮ ಗಾಯಕಿ ಎಂದು ಇಡೀ ದೇಶ ಗುರುತಿಸುವಂತೆ ಮಾಡಿತು.  ಆ ನಂತರದಲ್ಲಿ ಅವರು ಹಾಡಿರುವ ಗೀತೆಗಳ ಹಲವು ಸಹಸ್ರ.  ಒಮ್ಮೆ ಒಂದು ಸಂದರ್ಶನದಲ್ಲಿ ಅವರೊಂದಿಗೆ ಬಹಳಷ್ಟು ವರ್ಷಗಳವರೆಗೆ ಹಾಡುತ್ತ ಬಂದಿದ್ದ ಡಾ. ಎಸ್. ಪಿ. ಬಾಲಸುಬ್ರಹ್ಮಣ್ಯಂ ಹೇಳುತ್ತಿದ್ದರು,  “ನಮ್ಮ ಜಾನಕಮ್ಮ ಇದ್ದಾರಲ್ಲ ಅವರು ಯಾವುದೇ ಗೀತೆಯನ್ನಾಗಲೀ ಒಂದೇ ಪ್ರಾರಂಭದಲ್ಲಿ ತೆಗೆದುಕೊಳ್ಳುವ ರೀತಿ, ತಮ್ಮ ಉಸಿರನ್ನು ಅತ್ಯಂತ ಆಳವಾಗಿ ಗಾನಲಯದಲ್ಲಿ ಸುಲಲಿತವಾಗಿ ಬೆರೆಸುವ ರೀತಿ  ಇದೆಯೆಲ್ಲಾ ಅದೊಂದು ಅಸಾಮಾನ್ಯವಾದ ಸಂಗತಿ”.  ಹಾಡುವ ಪ್ರಾರಂಭದಲ್ಲಿ ಯಾವುದೇ ಹಮ್ಮು, ಬಿಮ್ಮುಗಳ, ಕೆಮ್ಮಿನ ಸಣ್ಣ ಆಚೆ ಈಚೆಗಿನ ಧ್ವನಿಯನ್ನು ಕೂಡಾ ಅವರು ಮಾಡುವುದಿಲ್ಲ ಎಂಬ ಪ್ರತೀತಿ ಇತ್ತು.  ಎಸ್. ಜಾನಕಿ ಹೇಳುತ್ತಾರೆ "ನಾನು ಯಾವುದೇ ವಿಶೇಷ ತಯಾರಿಯನ್ನಾಗಲೀ ಆರೈಕೆಯನ್ನಾಗಲಿ ನನ್ನ ಧ್ವನಿಗೆ ಮಾಡಿಕೊಳ್ಳುವುದಿಲ್ಲ.”  ಅವರು ಹೇಳುವ ಮತ್ತೊಂದು ಮಾತು ಅವರ ಎಲ್ಲಾ ಸಾಧನೆಗಳ ಗುಟ್ಟು.  ಪರಮಾತ್ಮ ಕೃಷ್ಣ ಮತ್ತು ಶಿರಡಿ ಸಾಯಿಬಾಬಾ ಭಕ್ತರಾದ ಆಕೆ ಕೇಳುತ್ತಿದ್ದ ಪ್ರಶ್ನೆ “ನಾನು ಹೇಗೆ ಹಾಡುತ್ತೇನೆ ಗೊತ್ತೇ?” , “ಸತ್ಯ ಹೇಳಬೇಕೆಂದರೆ, ನಾನು ಹಾಡುವುದೇ ಇಲ್ಲ.  ಶ್ರೀಕೃಷ್ಣ, ಆ ನನ್ನಂತರಂಗದ ದೈವನಾದ ಆತನ  ಕಾಯಕವದು”. 

ಎಸ್. ಜಾನಕಿ ಅವರ ಬಗ್ಗೆ ಹೇಳಬೇಕೆಂದರೆ ಮಹಾಸಾಗರದ ಆಳವನ್ನು ಅರಸಹೊರಟಂತೆ.  ಅವರ ಹಾಡುಗಳ ಬಗ್ಗೆ ಹೇಳುವಾಗ  ಈ ಕ್ಷಣಕ್ಕೆ ಬಂದ ನೆನಪುಗಳನ್ನು ಹೇಳಬಹುದೇ ವಿನಃ ಅವರು ಹಾಡಿರುವ ಶ್ರೇಷ್ಠ ಗೀತೆಗಳ ಒಂದು ಸಣ್ಣ ಅಳತೆಯನ್ನು ಕೂಡಾ ನಾವು ಕ್ರಮಿಸಲಾರೆವೇನೋ.  ‘ನೋಡು ಬಾ ನೋಡು ಬಾ ನಮ್ಮೂರ’, 'ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೇ', 'ಯುಗ ಯುಗಾದಿ ಕಳೆದರೂ', ‘ಹೇಳೇ ಗೆಳತಿ ಪ್ರಿಯ ಮಾಧವ ಬಾರನೆ ಎಂದು’,  ‘ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು’, ‘ದೋಣಿ ಸಾಗಲಿ ಮುಂದೆ ಹೋಗಲಿ', 'ಮೂಡಣ ಮನೆಯ ಮುತ್ತಿನ ನೀರಿನ ಎರಕಾವಾ ಹೊಯ್ದ’, ‘ಜಯಗೌರಿ ಜಗದೀಶ್ವರಿ’, 'ಆಡೋಣ ಬಾ ಬಾ ಗೋಪಾಲ',  ‘ನಂಬಿದೆ ನಿನ್ನ ನಾದ ದೇವತೆಯೇ ಅಭಿಮಾನ ತಳೆದ ತಾಯೆ ಭಾರತಿಯೇ’, ‘ಭಾರತ ಭೂಷಿರ ಮಂದಿರ ಸುಂದರಿ’, 'ಶರಣು ವಿರೂಪಾಕ್ಷ ಶಶಿಶೇಖರ',  ‘ಜ್ಯೋತಿ ಯಾವ ಜಾತಿಯಮ್ಮ ಜಗದೀಶ್ವರಿ’, ‘ಬಾನಲ್ಲು ನೀನೆ ಭುವಿಯಲ್ಲು ನೀನೆ’, ‘ಬಿಸಿಲಾದರೇನು ಮಳೆಯಾದರೇನು’, ‘ಪೋಗದಿರೆಲೋ ರಂಗ’, ‘ಕರೆಯೇ ಕೋಗಿಲೆ ಮಾಧವನ’, ‘ಗಗನವು ಎಲ್ಲೋ ಭೂಮಿಯು ಎಲ್ಲೋ’, 'ಪಂಚಮವೇದ ಪ್ರೇಮದ ನಾದ',  ‘ನಾ ಮೆಚ್ಚಿದ ಹುಡುಗನಿಗೆ’, ‘ಅರಳಿದೆ ಅರಳಿದೆ ಮುದುಡಿದ ತಾವರೆ ಅರಳಿದೆ’, ‘ಕಂಗಳು ತುಂಬಿರಲು ಕಂಬನಿಧಾರೆ’, ‘ತುಂಬಿತು ಮನವಾ ತಂದಿತು ಸುಖವಾ’, ‘ಪೂಜಿಸಲೆಂದೇ ಹೂಗಳ ತಂದೆ’, ‘ಇಂದು ಎನಗೆ ಗೋವಿಂದ ನಿನ್ನಯ ಪಾದಾರವಿಂದವ’,   ‘ದೇವರ ಆಟ ಬಲ್ಲವರಾರು’, ‘ಹೂವೊಂದು ಬೇಕು ಬಳ್ಳಿಗೆ’, ‘ರಾಘವೇಂದ್ರ ನೀ ಮೌನವಾದರೆ ನನ್ನ ಗತಿ ಏನು’, 'ಗುಮ್ಮನ ಕರೆಯದಿರೆ ಅಮ್ಮಾ ನೀನು' , 'ಪೋಗದಿರೆಲೊ ರಂಗ' ಹೀಗೆ ಹೇಳುತ್ತಾ ಹೋಗಬಹುದು.  ಹೇಮಾವತಿ ಚಿತ್ರದ ‘ಶಿವಶಿವ ಎನ್ನದ ನಾಲಿಗೆಯೇಕೆ’ ಎಂಬ ಹಾಡು ಅವರಿಗೆ ಅತ್ಯಂತ ಚಾಲೆಂಜಿಂಗ್ ಹಾಡು ಎಂದು ಅವರು ಬಹಳಷ್ಟು ಕಡೆ ಹೇಳಿರುವುದನ್ನು ಓದಿದ್ದೇನೆ.  ಅವರು ಹಾಡಿರುವ ಭಕ್ತಿಗೀತೆಗಳು ಅನೇಕವಾಗಿದ್ದು 'ಗಜಮುಖನೆ ಗಣಪತಿಯೇ' , ‘ಮಲೆನಾಡಿನ ಈ ಸೊಬಗಿನ ಐಸಿರಿ ಚೆಲುವಿನ ವರ ಶೃಂಗೇರಿ’,  ‘ಇವಳೇ ವೀಣಾಪಾಣಿ’ ಮುಂತಾದ ಹಾಡುಗಳಂತೂ ಎಲ್ಲೆಲ್ಲೂ ತುಂಬಿತುಳುಕಿದೆ.

ಯುಗಳ ಗೀತೆಗಳಲ್ಲಿ ‘ಒಲಿದ ಜೀವ ಜೊತೆಯಲಿರಲು ಬಾಳು ಸುಂದರ’ ಎಂಬ ಗೀತೆಯಲ್ಲಿ ‘ವಿಶ್ವವೆಲ್ಲಾ ಭವ್ಯವಾದ ಪ್ರೇಮ ಮಂದಿರ’ ಎಂದು ಅವರು ಅಭಿವ್ಯಕ್ತಿಸಿರುವ  ಭಾವ ನನ್ನನ್ನು ಅತೀವವಾಗಿ ಸೆಳೆದಿದೆ. ಪಿ.ಬಿ.ಎಸ್ ಅವರೊಂದಿಗೆ ಕನ್ಯಾರತ್ನ ಚಿತ್ರದಲ್ಲಿ 'ಸುವ್ವಿ ಸುವ್ವಿ ಸುವ್ವಾಲೆ'',  ಹೊಂಬಿಸಲು ಚಿತ್ರದ ‘ಜೀವ ವೀಣೆ ನೀಡು ಮಿಡಿತದ ಸಂಗೀತ’, ಗಂಧದ ಗುಡಿ ಚಿತ್ರದಲ್ಲಿ ಪಿ. ಬಿ. ಶ್ರೀನಿವಾಸ್ ಅವರೊಂದಿಗೆ ಪುಟ್ಟ ಹುಡುಗಿಯಂತೆ ‘ಎಲ್ಲೂ ಹೋಗೋಲ್ಲಾ ಮಾಮ’ ಎಂದು ಹಾಡುವ ಧಾಟಿ, ದೇವರಗುಡಿಯ  ‘ಕಣ್ಣು ಕಣ್ಣು ಒಂದಾಯಿತು’,  ಮುಗಿಯದ ಕಥೆ ಚಿತ್ರದ ‘ಕಂಗಳು ವಂದನೆ ಹೇಳಿದೆ ಹೃದಯವು ತುಂಬಿ ಹಾಡಿದೆ’, ಧರ್ಮಸೆರೆ ಚಿತ್ರದ  'ಈ ಸಂಭಾಷಣೆ', ಹುಡುಗಾಟದ ಹುಡುಗಿ ಚಿತ್ರದ 'ಬೆಳ್ಳಿಯ ತೆರೆಯ ಮೋಡದ ಮರೆಯ', ವಾಣಿ ಜಯರಾಂ ಅವರ ಜೊತೆಯಲ್ಲಿ ವಿಜಯವಾಣಿ ಚಿತ್ರದ  'ಮಧುಮಾಸ ಚಂದ್ರಮ', ರಾಜ್ ಅವರ ಜೊತೆಯಲ್ಲಿ ಶ್ರೀನಿವಾಸ ಕಲ್ಯಾಣದ 'ನಾನೇ ಭಾಗ್ಯವತಿ ಇಂದು ನಾನೇ ಪುಣ್ಯವತಿ'  ಹೀಗೆ ಅವರ ನೂರಾರು ಸುಂದರ ಸುಶ್ರಾವ್ಯ ಹಾಡುಗಳಿವೆ.  

ಇತರ ಭಾಷೆಗಳಲ್ಲಿರುವ ನನ್ನ ಅಲ್ಪ ಜ್ಞಾನದಲ್ಲಿ ಕೂಡಾ ಪದಿನಾರು ವಯದಿನಿಲೆ ಚಿತ್ರದ ‘ಸಿಂಧೂರ ಪೂವೆ’, ಶಂಕರಾಭರಣಂ ಚಿತ್ರದ ‘ಸಾಮಜವರಗಮನ’, ‘ಶಂಕರಾಭರಣಮು’; ಸಾಗರಸಂಗಮಂ ಚಿತ್ರದ ‘ಬಾಲಕನಕಮಯ ಚೇಲ ಸುಜನಪರಿಪಾಲ’, ‘ಓಂ ನಮಃಶಿವಾಯ ಚಂದ್ರಕಳಾಧರ ಸಹೃದಯ’ ಇವೆಲ್ಲಾ ಮನಸ್ಸಿನಲ್ಲಿ ಸ್ಥಿರವಾಗಿ ನಿಂತಿರುವ ಹಾಡುಗಳು.  

ತಮಿಳಿನಲ್ಲಿ ಕರೈಕುರುಚ್ಚಿ ಅರುಣಾಚಲಂ ಅವರ ನಾದಸ್ವರದೊಂದಿಗೆ ತಮ್ಮ ಸ್ವರ ಮೇಳೈಸಿ ಅದ್ಭುತವಾಗಿ ಮೂಡಿಸಿದ ಸಿಂಗಾರವೇಲನೆ ದೇವ ಹಾಡಿನಂತೆ,, ಕನ್ನಡದಲ್ಲಿ ಬಿಸ್ಮಿಲ್ಲಾ ಖಾನ್ ಅವರ ಶಹನಾಯ್ ಜೊತೆ ತಮ್ಮ ಗಾನವನ್ನು ಮೇಳೈಸಿ ಹೊರತಂದ ‘ಕರೆದರು ಕೇಳದೆ’ ಗೀತೆ ಕೂಡಾ ಒಂದು ಅಪೂರ್ವ ಗಾಯನವೇ ಸರಿ.  ಇಂತಹದ್ದೇ ರೀತಿಯಲ್ಲಿ ಎಸ್ ಜಾನಕಿ ಅವರು ಎಂ. ಎಸ್. ಗೋಪಾಲಕೃಷ್ಣನ್ ಅವರ ಪಿಟೀಲು ವಾದನ, ನಾಮಗಿರಿ ಪೇಟೆ ಕೃಷ್ಣನ್ ನಾದಸ್ವರ  ಮತ್ತು ಹರಿಪ್ರಸಾದ್ ಚೌರಾಸಿಯಾ ಅವರ ವೇಣುವಾದನದ ಜೊತೆ ಕೂಡಾ ತಮ್ಮ ಗಾನ ಮಾಧುರ್ಯವನ್ನು ಮೇಳೈಸಿದ್ದಾರೆ.  

ಎಸ್. ಜಾನಕಿ ಅವರಿಗೆ ಹಲವು ರಾಷ್ಟ್ರಪ್ರಶಸ್ತಿಗಳು, ವಿವಿಧ ರಾಜ್ಯಗಳ ಗೌರವಗಳು ಸಂದಿದ್ದವು.   ನಮ್ಮ ಕರ್ನಾಟಕ ರಾಜ್ಯದಲ್ಲಿ ಹೊರರಾಜ್ಯಗಳ ಗಾಯಕರು ಹಾಡಿದ ಹಾಡಿಗೆ ಪ್ರಶಸ್ತಿ ನೀಡುವುದಿಲ್ಲ ಎಂಬ ಪದ್ಧತಿ ಜಾರಿಯಲ್ಲಿತ್ತು.  ಹೀಗಾಗಿ ಎಸ್. ಜಾನಕಿ, ಎಸ್. ಪಿ. ಬಿ, ಪಿ.ಬಿ.ಎಸ್, ಪಿ. ಸುಶೀಲ, ವಾಣಿ ಜಯರಾಂ ಇಂತಹ ಮಹಾನ್ ಗಾಯಕರಿಗೆ ಅವರ ಉತ್ತಮ ಹಾಡುಗಳಿಗೆ ಪ್ರಶಸ್ತಿ ಈ ರಾಜ್ಯದಲ್ಲಿ ಬಂದಿಲ್ಲ.  ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಮತ್ತು ಪ್ರೋತ್ಸಾಹ ನೀಡುವುದು ಶ್ರೇಷ್ಠ ಪದ್ಧತಿಯಾದರೂ, ಶ್ರೇಷ್ಠ ಗಾಯಕರನ್ನು ಕರೆದು ಹಾಡಿಸಿದ ಮೇಲೆ ಅವರ ಶ್ರೇಷ್ಠ ಪ್ರತಿಭೆಯ ಹಾಡುಗಳ ಮುಂದೆ ನಮ್ಮವರನ್ನು ಹಾಡಿಸಿರುವ ಕ್ಷೀಣ ಗೀತೆಗಳಿಗೆ ಪ್ರಶಸ್ತಿ ಕೊಟ್ಟಿರುವುದು ಪ್ರಶಸ್ತಿ ಪಡೆದವರಿಗೂ ಅಂತಹ ಶ್ರೇಯಸ್ಸನ್ನು ನೀಡುವಂತದಾಗಿರುವುದಿಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.   ಎಸ್. ಜಾನಕಿ ಅವರು ಕೂಡಾ ಈ ಕುರಿತಾದ ನೀತಿ ಕಲಾವಿದರಿಗೆ ಅಗೌರವ ಎಂದು ಭಾವನೆ ವ್ಯಕ್ತಪಡಿಸಿದ್ದುಂಟು.  ಆದರೆ ಎಸ್. ಜಾನಕಿ ಅವರು ಪ್ರಶಸ್ತಿಗಳನ್ನು ಮೀರಿದ ಕಲಾವಿದೆ.  ಇದನ್ನು ಅರಿತ ಕನ್ನಡ ನಾಡಿನ ಪ್ರಮುಖ ವಿಶ್ವವಿದ್ಯಾಲಯವಾದ ಮೈಸೂರು ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ಪದವಿ ಇತ್ತು ಸನ್ಮಾನಿಸಿತ್ತು.  

ಇತ್ತೀಚಿನ ವರ್ಷದಲ್ಲಿ  ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿಯನ್ನು ಎಸ್. ಜಾನಕಿ ಅವರಿಗೆ ಘೋಷಿಸಿದಾಗ, ಪದ್ಮ ಪ್ರಶಸ್ತಿಗಳಲ್ಲಿ ದಕ್ಷಿಣ ಭಾರತೀಯರ ಬಗ್ಗೆ ಅಸಡ್ಡೆ ಇರುವುದನ್ನು ವಿರೋಧಿಸಿ, ಎಸ್. ಜಾನಕಿಯವರು ಈ ಪ್ರಶಸ್ತಿಯನ್ನು ತಿರಸ್ಕರಿಸಿದ್ದರು.  ಎಸ್. ಜಾನಕಿ ಅವರ ಈ ವಾದದಲ್ಲಿ ಹುರುಳಿಲ್ಲದೆ ಇಲ್ಲ.   83 ವರ್ಷದ ವಯಸ್ಸಿನಲ್ಲಿ ನಿಧನರಾದ ಪಿ. ಬಿ. ಶ್ರೀನಿವಾಸರಿಗೆ ಯಾವುದೇ ಪದ್ಮ ಪ್ರಶಸ್ತಿ ಸಂದಿಲ್ಲ, ಇಲ್ಲಿನ ಅನೇಕ ಪ್ರಸಿದ್ಧ ಕಲಾವಂತರಿಗೆ ಈ ಪ್ರಶಸ್ತಿ ಸಂದಿಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಷಯ.  ಈ ನಿಟ್ಟಿನಲ್ಲಿ ಎಸ್. ಜಾನಕಿ ಅವರ ಈ ನಿರ್ಧಾರ ಅವರ ಅಭಿಮಾನಿಗಳಿಗೆ ಈ ಪ್ರಶಸ್ತಿಗಳನ್ನು ಮೀರಿದ ಹೆಚ್ಚಿನ ಆರಾಧನಾ ಭಾವವನ್ನು ತಂದಿದೆ.

ಎಸ್. ಜಾನಕಿ ಅಂತಹ  ಮಹಾನ್ ಗಾಯಕರು ಎಷ್ಟು ವರ್ಷ ಹಾಡುತ್ತಿದ್ದರೂ ಅದಕ್ಕೆ ಬೇಡಿಕೆ ಇದ್ದೇ ಇತ್ತು.  ಅವರು ಇತ್ತೀಚಿನ ಹಿರಿಯ ವಯಸ್ಸಿನಲ್ಲಿ  ಹಾಡಿದ್ದನ್ನು ಕೇಳಿದಾಗಲೂ  ಆ ಧ್ವನಿ ಮಾಧುರ್ಯ ಈಗಲೂ ಹಾಗೇ ಇದೆಯೆಲ್ಲಾ ಎಂಬ ಅಚ್ಚರಿ ಮೂಡುತ್ತಿತ್ತು.  ಎಸ್. ಜಾನಕಿ ಅವರೇ ಹೇಳುವಂತೆ ಎಲ್ಲಾ ಅವರ ಅಂತರಂಗದ ಪರಮಾತ್ಮನ ಧ್ವನಿಯೇ ಆಗಿದ್ದಾಗ ಅದು ಮಾಸುವುದಾದರೂ ಹೇಗೆ.  

ಶ್ರೀಕೃಷ್ಣಪರಮಾತ್ಮನನ್ನೇ ಅಂತರಂಗದ ದೇವತೆಯಾಗಿ ಹೊಂದಿದ್ದ ಈ ಮಹಾನ್ ಪ್ರತಿಭೆಗೆ ನಾವೇನು ತಾನೇ ಹೇಳಬಲ್ಲೆವು.  ಈ ಪ್ರತಿಭೆಗೆ ನಮ್ಮ ಆತ್ಮೀಯ ಗೌರವಪೂರ್ವಕ ನಮನವಷ್ಟೇ ನಮ್ಮಿಂದ ಸಾಧ್ಯ.   ಈ ಮಹಾನ್ ಗಾನಮಾತೆ  ವಯೋಸಹಜವಾಗಿ ಈ ಲೋಕದಿಂದ ಹೊರನಡೆದಿದ್ದಾರೆ (11.07.2026).  

ಹಿರಿಯ ವಯಸ್ಸಿನಲ್ಲಿ ನಮಗೆ ಇಷ್ಟವಾದವರನ್ನು ಕೂಡಾ ಬದುಕಿರಿ ಎಂದು ಅಶಿಸುವುದು ಕಷ್ಟ.  ಇತ್ತೀಚೆಗೆ ಮಗನನ್ನು ಕಳೆದುಕೊಂಡಿದ್ದರೂ ತನ್ನೆಡೆಗೆ ಬರುತ್ತಿದ್ದವರನ್ನೆಲ್ಲ ಅಕ್ಕರೆಯಿಂದ ಮಕ್ಕಳಂತೆ ಕಾಣುತ್ತಿದ್ದರು.  ಇನ್ನೆಲ್ಲಿ ಇಂತಹ ಜೀವಗಳು.  ಅಗಲಿದ ಈ ಗಾನಮಾಧುರ್ಯಕ್ಕೆ, ಅಕ್ಕರೆಯ ಪ್ರೀತಿವಾತ್ಸಲ್ಯದ ಮಾತೆಗೆ ನಮನಪೂರ್ವಕ, ವಾತ್ಸಲ್ಯತುಂಬಿದ ಬೀಳ್ಕೊಡುಗೆ.  ನೀವು ನಮ್ಮೊಳಗೆ ಅಮರ🌷🙏🌷

Respects to departed soul Great singer S Janaki 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!