ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಇಂದೂಧರ ನಿರೋಡಿ

ಇಂದೂಧರ ನಿರೋಡಿ

ಮೈಸೂರಿನಲ್ಲಿ ನೆಲೆಸಿರುವ ಹಿರಿಯರಾದ ಡಾ.  ಇಂದೂಧರ ನಿರೋಡಿ ಅವರು ಆಗ್ರ - ಅತ್ರಾಲಿ ಘರಾಣೆಯ ಹೆಸರಾಂತ ಗಾಯನ ಕಲಾವಿದರಾಗಿದ್ದಾರೆ.

ಪಂಡಿತ್ ಇಂದೂಧರ ನಿರೋಡಿ ಅವರು 1935ರ ಜುಲೈ 11ರಂದು ಪುತ್ತೂರಿನಲ್ಲಿ ಜನಿಸಿದರು. ಇವರು ಸಂಗೀತ ಪರಂಪರೆಯ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದವರು. ಇವರ ಅಜ್ಜ ಸಿತಾರ್ ವಾದಕರಾಗಿದ್ದರು. ಇವರ ತಂದೆ ಹೊಸಪೇಟೆಯ ಪಂಡಿತ ನೀಲಕಂಠಬುವಾ ಶಾಸ್ತ್ರಿಗಳ ಬಳಿ ಗಾಯನ ಸಂಗೀತವನ್ನು ಕಲಿತಿದ್ದರು.

ಪಂಡಿತ ನಿರೋಡಿ ಅವರು ತಮ್ಮ 10ನೇ ವಯಸ್ಸಿನಲ್ಲಿ ತಮ್ಮ ತಂದೆ ನಿರೋಡಿ ಸುಂದರರಾವ್ ಅವರಿಂದ ಸಂಗೀತದ ಪಾಠಗಳನ್ನು ಕಲಿಯಲು ಪ್ರಾರಂಭಿಸಿದರು. ಪಂಡಿತ ವಿನಾಯಕ ರಾವ್ ಪಟವರ್ಧನ್ ಅವರ ಶಿಷ್ಯರಾದ ಗವಾಯಿ ಪಿತ್ರೆ ರಾಮರಾವ್ ಅವರ ಬಳಿ ಉಡುಪಿಯಲ್ಲಿ ಕಲಿಯುವ ಅವಕಾಶ  ದೊರೆಯಿತು. ತಮ್ಮ 12ನೇ ವಯಸ್ಸಿನಲ್ಲಿ ಕುಂದಾಪುರದಲ್ಲಿ ಹಿಂದೂಸ್ತಾನಿ ಸಂಗೀತದ ಮೊದಲ ಕಚೇರಿಯನ್ನು ನೀಡಿದ ಹೆಗ್ಗಳಿಕೆ ಇವರದಾಗಿದ್ದು, ಅದನ್ನು ಕೇಳಿದವರೆಲ್ಲರೂ ಇವರ ಪ್ರತಿಭೆಯನ್ನು ಮೆಚ್ಚಿಕೊಂಡರು. 

ಪಂಡಿತ್ ಇಂದೂಧರ ನಿರೋಡಿ ಅವರು 1951ರಲ್ಲಿ ಮುಂಬೈಗೆ ತೆರಳಿದ ನಂತರ, ಪಂಡಿತ ಗುರುದತ್ತ ಹೆಬಳೇಕರ್ ಅವರಿಂದ ಹೆಚ್ಚಿನ ತರಬೇತಿಯನ್ನು ಪಡೆದರು. ಅದೇ ಸಮಯದಲ್ಲಿ, ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ದಿಗ್ಗಜರಾದ ಆಚಾರ್ಯ ಎಸ್.ಸಿ.ಆರ್. ಭಟ್, ಆಚಾರ್ಯ ಕೆ.ಜಿ. ಗಿಂಡೆ, ಪಂಡಿತ ದಿನಕರ ಕಾಯ್ಕಿಣಿ ಮತ್ತು ಪಂಡಿತ ಚಿದಾನಂದ ನಗರ್ಕರ್ ಅವರ ಮಾರ್ಗದರ್ಶನದಲ್ಲಿ ಕಲಿತರು. ಇವರ ಬಳಿ ಎರಡು ದಶಕಗಳಿಗೂ ಹೆಚ್ಚು ಕಾಲ ತೀವ್ರತರವಾದ ತರಬೇತಿಯನ್ನು ಪಡೆದರು. ಅವರಿಂದ ಕ್ರಮಬದ್ಧ ತರಬೇತಿಯನ್ನು ಪಡೆಯುವುದರ ಜೊತೆಗೆ, ಸಂಗೀತ ಕಚೇರಿಗಳ ಸಂದರ್ಭದಲ್ಲಿ ಅವರಿಗೆ ಗಾಯನದಲ್ಲಿ ಸಾಥ್ ನೀಡುವ ಅವಕಾಶವನ್ನೂ ಪಡೆದು ಅಪಾರ ಪ್ರಾವೀಣ್ಯತೆ ಸಾಧಿಸಿದರು.

ಇಂದೂಧರ ನಿರೋಡಿ ಅವರ ವಿಶೇಷತೆಯು 'ಖಯಾಲ್' ಗಾಯನವಾಗಿದೆ; ಆಗ್ರಾ ಘರಾನಾ ಶೈಲಿಯಲ್ಲಿ ತರಬೇತಿ ಪಡೆದಿರುವ ಇವರು, ಧ್ರುಪದ್-ಧಮಾರ್ ಮತ್ತು ಠುಮರಿ ಪ್ರಕಾರಗಳನ್ನು ಪ್ರಸ್ತುತಪಡಿಸುವುದರಲ್ಲೂ ಸಮಾನ ಪ್ರಾವೀಣ್ಯತೆಯನ್ನು ಹೊಂದಿದ್ದಾರೆ.

ಇಂದೂಧರ ನಿರೋಡಿ ಅವರು ದೇಶದ ವಿವಿಧ ಕೇಂದ್ರಗಳಲ್ಲಿ ಸಂಗೀತ ಪ್ರದರ್ಶನಗಳನ್ನು ನೀಡಿದ್ದಾರೆ. ಕರ್ನಾಟಕದ ಹಲವು ಸಂಸ್ಥೆಗಳಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ವಿವಿಧ ಆಯಾಮಗಳ ಕುರಿತು ಉಪನ್ಯಾಸ-ಪ್ರದರ್ಶನಗಳನ್ನೂ ನೀಡಿದ್ದಾರೆ. ಇವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ಅತಿಥಿ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಪಂಡಿತ್ ಇಂದೂಧರ ನಿರೋಡಿ ಅವರಿಗೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.  1955ರಲ್ಲಿ, ತಮ್ಮ 20ನೇ ವಯಸ್ಸಿನಲ್ಲಿ, ಆಲ್ ಇಂಡಿಯಾ ರೇಡಿಯೋ ನಡೆಸಿದ ಅಖಿಲ ಭಾರತ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಗೆದ್ದು,  ಆಗಿನ ಭಾರತದ ರಾಷ್ಟ್ರಪತಿಗಳಾದ ಗೌರವಾನ್ವಿತ ಡಾ. ಬಾಬು ರಾಜೇಂದ್ರ ಪ್ರಸಾದ್ ಅವರ ಕೈಯಿಂದ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿದರು.
ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯಿಂದ 2005-06ನೇ ಸಾಲಿಗೆ ಗೌರವ ಪ್ರಶಸ್ತಿ, 2014ರಲ್ಲಿ ಕರ್ನಾಟಕ ಸರ್ಕಾರದಿಂದ "ರಾಜ್ಯ ಸಂಗೀತ ವಿದ್ವಾನ್ ಪುರಸ್ಕಾರ", 
ಕುಂದಗೋಳದಲ್ಲಿ 'ಗುರುವರ್ಯ ಸವಾಯಿ ಗಂಧರ್ವ ರಾಷ್ಟ್ರೀಯ ಸಂಗೀತ ಪುರಸ್ಕಾರ - 2015', 2014ನೇ ಸಾಲಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 2015ರಲ್ಲಿ ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್  ಅಲ್ಲದೆ ಅನೇಕ ಪ್ರತಿಷ್ಠಿತ ಸಂಘ ಸಂಸ್ಥೆಗಳ ಗೌರವಗಳು ಇವರನ್ನರಸಿ ಬಂದಿವೆ.

ಪಂಡಿತ್ ಇಂದೂಧರ ನಿರೋಡಿ ಅವರು ಆಲ್ ಇಂಡಿಯಾ ರೇಡಿಯೋದ 'ಟಾಪ್' ಶ್ರೇಣಿಯ ಕಲಾವಿದರಾಗಿದ್ದು, 1955ರಿಂದ ಆಲ್ ಇಂಡಿಯಾ ರೇಡಿಯೋದಲ್ಲಿ ಹಾಗೂ ನಂತರ ದೂರದರ್ಶನದಲ್ಲೂ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ.

ಇಂದುಧರ್ ನಿರೋಡಿ ಅವರು ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದಲ್ಲಿ ಹಿರಿಯ ಅಧಿಕಾರಿಯಾಗಿದ್ದು 1995ರಲ್ಲಿ ಸೇವೆಯಿಂದ ನಿವೃತ್ತರಾದರು.  ಮುಂದೆ ಅವರು ಸಂಪೂರ್ಣವಾಗಿ ಸಂಗೀತಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ.

ಸಂಗೀತ ಲೋಕದ ಹಿರಿಯ ಮಹಾನ್ ಸಾಧಕರಾದ ಪೂಜ್ಯ ಡಾ.  ಇಂದೂಧರ ನಿರೋಡಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ನಮಸ್ಕಾರ.

On the birthday of Great Hindustani Sangeet Vocalist Dr. Indudhar Nirodi 🌷🙏🌷


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!