ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗೋಕುಲ ನಿರ್ಗಮನ 3


ಗೋಕುಲ ನಿರ್ಗಮನ 3

(ಮಹಾನ್ ಕವಿ ಪು. ತಿ. ನರಸಿಂಹಾಚಾರ್ಯರ ಕೃತಿ)

ಗೋಪಾಲಕರು
ಹಾಡು : ರಾಗ ಮಾಂಡ್

ಬನ್ನಿ ಬನ್ನಿ ನೇಹಿಗಳೇ
ಹಳುವಿಗೋಡುವ
ನಮ್ಮ ಕೃಷ್ಣ ಕೊಳಲನೂದಿ
ಸನ್ನೆ ಮಾಡುವ

ಕೃಷ್ಣ ಕೊಳಲನೂದುತಿರೆ 
ನಿದ್ದೆಯೆಂತು ಬಹುದೆಮಗೆ 
ರಾಮ ಹರೆಯ ಮೋದುತಿರೆ 
ನಿಲ್ವೆವೆಂತು ಮನೆಯೊಳಗೆ - ಬನ್ನಿ ಬನ್ನಿ

ಪಟವ ದಾರ ತುಯ್ಯುವೊಲು 
ಮನವ ತುಯ್ದುದೀ ಕೊಳಲು 
ಅದರ ಸರಕೆ ಹಾರಾಡೆ 
ನಲವೆಲರೊಳು ತಾರಾಡೆ - ಬನ್ನಿ ಬನ್ನಿ

ಸುಮನೆ ಯಮುನೆ ಕಲ್ಯಾಣಿ 
ಚೆಲುವೆ ಚೆನ್ನಿ ಶುಕವಾಣಿ 
ಹೊಸಬಿ ಹೊನ್ನಿ ಹರಿಣಾಕ್ಷಿ 
ನೆರೆದಿಹರೆನಲಿದೆ ಸಾಕ್ಷಿ - ಬನ್ನಿ ಬನ್ನಿ

ಹಗಲಿನಾಚೆಯಿರುಳ ಕರೆ
ನೇರಿಟ್ಟಿತು ನೇಹಿಗರೆ 
ಆಸೆಯಂತೆ ಬಾಳಾಗೆ 
ತೋಷವೊಂದೆ ಮೇಲಾಗೆ - ಬನ್ನಿ ಬನ್ನಿ (ಹಾಡಿಕೊಂಡು ಹೋಗುವರು.)
( ಗೋಪಿಯರ ಮತ್ತೊಂದು ತಂಡ ಕೂಡ ಹಾಡಿಕೊಂಡು ಬರುವುದು.)

**********
ಇಲ್ಲಿ ಗೋಪಾಲಕರು ತಮ್ಮ ಸ್ನೇಹಿತರನ್ನು ಕರೆಯುತ್ತಿರುವರು. ಕಾಡಿಗೆ ಹೋಗುವಾ, ಕೃಷ್ಣ ಕೊಳಲನ್ನು ಊದಿ ಸನ್ನೆ ಮಾಡಿ ಕರೆಯುತ್ತಿದ್ದಾನೆ ಎನ್ನುವರು.

ಕೃಷ್ಣ ಕೊಳಲನ್ನು ಊದುತ್ತಿರಲು ನಮಗೆ ನಿದ್ರೆ ಹೇಗೆಬರುತ್ತದೆ? ಮನೆಯೊಳಗೆ ನಿಲ್ಲುವುದಾದರೂ ಹೇಗೆ?

ಗಾಳಿಪಟವನ್ನು ಅದರ ದಾರ ಅಲುಗಾಡಿಸುವಂತೆ ಈ ಕೊಳಲು ನಮ್ಮ ಮನಸ್ಸನ್ನು ಅಲ್ಲಾಡಿಸುತ್ತಿರುವುದು. ಅದರ ಸ್ವರಕ್ಕೆ ನಾವು ಗಾಳಿಯಲ್ಲಿ ತೇಲಾಡಿದಂತಿದೆ.
ನಮ್ಮೆಲ್ಲರ ಗೆಳತಿಯರೂ ಬಂದಿರುವರು. ಸುಮನೆ, ಯಮುನೆ, ಕಲ್ಯಾಣಿ ಮುಂತಾದವರು ಬಂದಿರುವರೆನ್ನಲು ಅವರ ಧ್ವನಿಯ ಸಾಕ್ಷಿಯಿದೆ.  ಹಗಲು ಮುಗಿದು ಇರುಳು ಕಾಲಿಡುತ್ತಿರುವ ಈ ವೇಳೆಯಲ್ಲಿ ನಾವೆಲ್ಲ ಸಂತೋಷದಲ್ಲಿ ಮುಳುಗುವಾ ಬನ್ನಿ ಬನ್ನಿ ಸ್ನೇಹಿತರೆ ಎಂದು ಕರೆಯುತ್ತಿದ್ದಾರೆ.

ಭಾವಾರ್ಥ: ಸುಬ್ಬುಲಕ್ಷ್ಮಿ Lrphks Kolar

(ನಮ್ಮ ಕನ್ನಡ ಸಂಪದ  Kannada Sampada
ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ'  ತಾಣವಾದ www.sallapa.com ನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ.  ನಮಸ್ಕಾರ)

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಪರಿವಿಡಿ (Index)

ಸಂಪರ್ಕ ಫಾರ್ಮ್

ಕಳುಹಿಸಿ