ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶಾರದಾ ಮುಳ್ಳೂರ

 

ಶಾರದಾ ಮುಳ್ಳೂರ

ಡಾ. ಶಾರದಾ ಮುಳ್ಳೂರ ಅವರು ಅಧ್ಯಾಪಕಿಯಾಗಿ,  ಬರಹಗಾರ್ತಿಯಾಗಿ ಮತ್ತು ಸಂಘಟನಗಾರ್ತಿಯಾಗಿ ಹೆಸರಾಗಿದ್ದಾರೆ. 

ನವೆಂಬರ್ 24, ಶಾರದಾ ಅವರ ಜನ್ಮದಿನ. ಇವರು ಜನಿಸಿದ್ದು ಜಮಖಂಡಿಯಲ್ಲಿ. ತಂದೆ  ಶಂಕರಗೌಡ ಚಿಕ್ಕನಗೌಡರ. ತಾಯಿ ಇಂದುಮತಿ. ಎಂ.ಎ., ಎಂ.ಎಡ್.  ಪದವೀಧರರಾಗಿ,  ಸಂಶೋಧನಾ ಪ್ರಬಂಧ ಮಂಡನೆಗಾಗಿ ಡಾಕ್ಟರೇಟ್ ಗಳಿಸಿರುವ ಶಾರದಾ ಮುಳ್ಳೂರ ಅವರು ಅಧ್ಯಾಪಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.  

ಶಾರದಾ ಅವರ ಬರಹಗಳು ನಾಡಿನ ಪ್ರಮುಖ ನಿಯತಕಾಲಿಕಗಳಲ್ಲಿ ನಿರಂತರವಾಗಿ ಮೂಡಿಬಂದಿವೆ.  ಏಕಾಂಗಿ (ಕವನ ಸಂಕಲನ), ಆರದ ದೀಪದ ಆಸರೆ ಹಿಡಿದು (ಕವನ ಸಂಕಲನ), ನೀರಜ (ಮಕ್ಕಳ ಕವನಗಳು) ಕನ್ನಡಿ (ಚುಟುಕುಗಳ ಸಂಕಲನ), ಮಂದಹಾಸ (ಜಪಾನಿ ಹಾಯಿಕುಗಳ ಸಂಕಲನ) ಮುಂತಾದವು ಇವರ ಕೃತಿಗಳಲ್ಲಿವೆ.‘ಆರೂಢ ಪರಂಪರೆ’ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಪ್ರಕಟಗೊಂಡಿದೆ. 'ಹೈದ್ರಾಬಾದ ಕರ್ನಾಟಕದ ಕಾದಂಬರಿಕಾರ್ತಿಯರು’ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪ್ರಕಟಗೊಂಡಿದೆ. 'ಡಾ. ಬಸವರಾಜ ಸಬರದ : ಕಾವ್ಯ ಅವಲೋಕನ' ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಸಾರೋಪನ್ಯಾಸ ಮಾಲೆಯಲ್ಲಿ ಮೂಡಿಬಂದಿದೆ.  ಇವರ ಸಂಪಾದಿತ ಕೃತಿಗಳಾದ 'ತ್ರಿವೇಣಿ ಮತ್ತು ಕೊಡಗಿನ ಗೌರಮ್ಮ ಬದುಕು-ಬರಹ', 'ರಾವಬಹದೂರ ಸಾಹಿತ್ಯ ಅವಲೋಕನ' , 'ಡಾ. ಸ. ಜ. ನಾಗಲೋಟಮಠ', 'ದಾಸ ಸಾಹಿತ್ಯ ನಿತ್ಯನೂತನ'  ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಪ್ರಕಟಗೊಂಡಿದೆ.

ಶಾರದಾ ಮುಳ್ಳೂರ ಅವರಿಗೆ ಗೋದಾವರಿ ಕಾವ್ಯ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ಪುಸ್ತಕ ಬಹುಮಾನ,  ಕರ್ನಾಟಕ ಸರಕಾರದ ಜನಮೆಚ್ಚಿದ ಶಿಕ್ಷಕಿ ಗೌರವ, ಸಂಕ್ರಮಣ ಕಾವ್ಯ ಪುರಸ್ಕಾರ ಮುಂತಾದ ಗೌರವಗಳೂ ಸೇರಿದಂತೆ ಅನೇಕ ಪ್ರತಿಷ್ಠಿತ ಸಂಘ ಸಂಸ್ಥೆಗಳ ಗೌರವಗಳು ಸಂದಿವೆ. ಅಮೆರಿಕದ 'ಅಕ್ಕ ಸಮ್ಮೇಳನ' ಸೇರಿದಂತೆ ಅನೇಕ ವೇದಿಕೆಗಳಲ್ಲಿ ಮುಖ್ಯ ಅತಿಥಿಗಳಾಗಿ ಉಪನ್ಯಾಸ ನೀಡಿದ್ದಾರೆ.  ಅನೇಕ ಸಂಘಟನೆಗಳಲ್ಲಿ ಆಯೋಜಕರಾಗಿ, ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದಾರೆ.

ಶಾರದಾ ಮುಳ್ಳೂರ ಅವರು ಇತ್ತೀಚಿನ 'ಚುರಮುರಿಯ' ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಡಾ. ಶಾರದಾ ಮುಳ್ಳೂರ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday Sharada Mullur 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಪರಿವಿಡಿ (Index)

ಸಂಪರ್ಕ ಫಾರ್ಮ್

ಕಳುಹಿಸಿ