ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿಶ್ವ ಕನ್ನಡ ಸಿನಿಮಾ ದಿನ

ವಿಶ್ವ ಕನ್ನಡ ಸಿನಿಮಾ ದಿನ
World Kannada Cinema Day 

ಮಾರ್ಚ್‌ 3 ಕನ್ನಡದ ಮೊದಲ ವಾಕ್ಚಿತ್ರ 'ಸತಿ ಸುಲೋಚನ' ತೆರೆಕಂಡ ದಿನ. 1934 ಮಾರ್ಚ್‌ 3ರಂದು ಕನ್ನಡದ ಈ ಮೊದಲ ವಾಕ್ಚಿತ್ರ ಬಿಡುಗಡೆಯಾಗಿತ್ತು. ಸುಮಾರು ಆರು ವಾರಗಳ ಕಾಲ ಯಶಸ್ವಿ ಪ್ರದರ್ಶನ ಕಂಡಿತ್ತು. ಕನ್ನಡ ಭಾಷೆಯ ಮೊದಲ ಮಾತಿನ ಚಿತ್ರವಾದ್ದರಿಂದ ಇಂದು ವಿಶ್ವದಲ್ಲಿ ಕನ್ನಡ ಸಿನಿಮಾ ಹುಟ್ಟು ಪಡೆದ ದಿನವಾಗಿದೆ.  ಹೀಗಾಗಿ ಚಿತ್ರ ಪ್ರೇಮಿಗಳಿಗಿದು 'ವಿಶ್ವ ಕನ್ನಡ ಸಿನಿಮಾ ದಿನ'.

ಬೆಂಗಳೂರಿನ ಮೊದಲ ಚಿತ್ರಮಂದಿರ ದೊಡ್ಡಣ್ಣ ಹಾಲ್‌ - ಪ್ಯಾರಾಮೌಂಟ್‌ ಚಿತ್ರಮಂದಿರ ಆರಂಭವಾಗಿದ್ದು 1905ರಲ್ಲಿ.‍ ಈ ಚಿತ್ರಮಂದಿರದಲ್ಲಿ ಕನ್ನಡದ ಪ್ರಥಮ ವಾಕ್ಚಿತ್ರ ಸತಿ ಸುಲೋಚನ 1934ರ ಈ ದಿನ ಬಿಡುಗಡೆಗೊಂಡಿತಂತೆ. ಇದು 170 ನಿಮಿಷದ ಚಿತ್ರವಾಗಿದ್ದು, 40 ಸಾವಿರ ರೂಪಾಯಿ ವೆಚ್ಚದಲ್ಲಿ ತಯಾರಾಯಿತಂತೆ.‍

ವೈ.ವಿ.ರಾವ್‌ ಎಂದೇ ಹೆಸರಾಗಿದ್ದ ಯರಗುಡಿಪಟಿ ವರದಾ ರಾವ್‌ ಈ ಚಿತ್ರ ನಿರ್ದೇಶಿಸಿದ್ದರು. (ಇವರು ಮಹಾನ್ ನಟಿ ನಮ್ಮ ಜೂಲಿ ಲಕ್ಷ್ಮೀ ಅವರ ತಂದೆ.‍) ಆರ್‌. ನಾಗೇಂದ್ರರಾಯರು, ಲಕ್ಷ್ಮೀಬಾಯಿ, ಸುಬ್ಬಯ್ಯನಾಯ್ಡು, ತ್ರಿಪುರಾಂಭ, ಸಿ.ಟಿ. ಶೇಷಾಚಲಮ್‌, ಇಂದುಬಾಲಾ ಮೊದಲಾದ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದರು. ಬೆಳ್ಳಾವೆ ನರಹರಿಶಾಸ್ತ್ರಿ ಕಥೆ ಬರೆದು, ಸಂಭಾಷಣೆ ರಚಿಸಿದ್ದರು. ಆರ್‌. ನಾಗೇಂದ್ರರಾಯರು ಮತ್ತು ನರಹರಿ ಶಾಸ್ತ್ರಿ ಜೊತೆಯಾಗಿ ಸಂಗೀತ ನೀಡಿದ್ದರು. ಈ ಚಿತ್ರ ನಿರ್ಮಿಸಿದ್ದು ಎಸ್‌.ಚಮನ್‌ಲಾಲ್‌ ದುಂಗಾಜಿ.

'ಸತಿ ಸಲೋಚನ' ಸಿನಿಮಾದ ದೃಶ್ಯವೊಂದರಲ್ಲಿ ಸಿಂಹ ಬರುವ ದೃಶ್ಯ ಕಂಡು ಹಲವು ಮಂದಿ ಚಿತ್ರಮಂದಿರದಲ್ಲೇ ಮೂರ್ಛೆ ಹೋಗಿದ್ದರಂತೆ. ಇನ್ನು ಕೆಲವರು ಸಿಂಹ ಬಂದೇ ಬಿಟ್ಟಿತೆಂದು ಹೆದರಿ ಸಿನಿಮಾ ಮಂದಿರದಿಂದ ಕಾಲ್ಕಿತ್ತಿದ್ದರಂತೆ.

ಅಂದ ಹಾಗೆ ನಾ ಪುಟ್ಟವನಾಗಿದ್ದಾಗ ನನ್ನ ಅಕ್ಕ ಸಿನಿಮಾಗೆ ಹೋಗುವಾಗ ಹಾಸನದಲ್ಲಿನ ಪಿಕ್ಚರ್ ಪ್ಯಾಲೇಸಿಗೆ ನನ್ನ ಎತ್ತಿಕೊಂಡು ಹೋಗಿದ್ದಳು.  ಪುಟ್ಟವನಾದ ನನಗೋ ಅಲ್ಲಿ ದೊಡ್ಡ ತೆರೆಯ ಮೇಲೆ ಏನೇನೊ ನೋಡಿ ಭಯ.‍ ಅರಚ ತೊಡಗಿದೆ. ಹಾಗಾಗಿ ನಾನು ಮತ್ತು ಅಕ್ಕ ಇಬ್ಬರೂ ಚಿತ್ರಮಂದಿರದಿಂದ ಹೊರಬರಬೇಕಾಯಿತು. ಇಬ್ಬರೂ ಮನೆಯವರೆಗೆ ಅಳುತ್ತಾ ಬಂದೆವು.  ನನ್ನಕ್ಕ ಸಿನಿಮಾ ನೋಡುವ ಅವಕಾಶ ಹೋಯ್ತು ಅಂತ ಅತ್ತರೆ, ಅಯ್ಯೋ ಇಂಥಾ ಭಯಾನಕ ನನಗೆದುರಾಯ್ತಲ್ಲ ಅಂತ ನಾ ಅಳುತ್ತಿದ್ದೆ.  ಇಂದೂ ಕೂಡಾ ಕೆಲವರಿಗೆ ಸಿನಿಮಾ ನೋಡಿದಾಗ ಮತ್ತು ಕೆಲವರಿಗೆ ನೋಡದಿದ್ದಾಗ ಅಳು ಬರುತ್ತೆ.

1934ರಿಂದ ಆರಂಭವಾದ ಕನ್ನಡ ಸಿನಿಮಾದ ವಾಕ್ಚಿತ್ರ ಪರಂಪರೆ ಇಂದು ದೊಡ್ಡದಾಗಿ ಬೆಳೆದಿದೆ. ವರ್ಷಕ್ಕೆ 250ಕ್ಕೂ ಅಧಿಕ ಸಿನಿಮಾಗಳು ತಯಾರಾಗುತ್ತಿದೆ. ಗುಣಮಟ್ಟ ಎಂಬುದರ ಬಗ್ಗೆ ಹಲವು ವಿಭಿನ್ನ ನಿಲುವುಗಳಿರಬಹುದು.  ಆದರೆ ಎಂತದ್ದೇ ಬಡತನದ ನಡುವೆಯೂ ಸಿನಿಮಾ ನೋಡುವ ಸುಖವನ್ನ ನಮ್ಮ ಕಾಲದ ಜನ ಕಳೆದುಕೊಂಡವರಲ್ಲ.  ಮನೆಯಲ್ಲಿದ್ದ ಪಾತ್ರೆ ಪಗಡ ಅಡವಿಟ್ಟು ಸಿನಿಮಾ ನೋಡುತ್ತಿದ್ದ ಮಾಮಿ ಮಾಮಾಗಳೂ ನನಗೆ ನೆನಪಾಗುತ್ತಾರೆ.

ಬದುಕೆಂದರೆ ಕತ್ತಲೆ ರೂಮಲ್ಲಿ ನಿದ್ರೆ ಮಾಡದ ಹಾಗೆ ಒಂದು ಘಟನಾವಳಿಯಲ್ಲಿ ತಲ್ಲೀನವಾಗಿ ನಮ್ಮ ನಾವು ಮರೆತು, ಕೆಲ ಕಾಲ ಅದರ ಗುಂಗಿನಲ್ಲಿದರೂ ಅದು ಕೆಲವು ನಿಮಿಷಗಳ ರಮ್ಯ ಭ್ರಮಾಲೋಕವಷ್ಟೇ ಎಂದು ಸತ್ಯ ಕಂಡುಕೊಂಡರೂ, ಮತ್ತೊಂದು ಭ್ರಮೆಯ ಆಕರ್ಷಣೆಗಾಗಿ ಕಾಯುತ್ತಾ ಕಾಲ ನೂಕುವ ವಿಚಿತ್ರ ವಾಸ್ತವ. 

ಇಂದು ಸಿನಿಮಾಕ್ಕೆ ಹಲವು ರೂಪ ಇದೆ.  ಕಥಾನಕಗಳು, ರಂಗಭೂಮಿ, ಸಿನಿಮಾ, ಕಿರುತೆರೆ, ಸೋಷಿಯಲ್ ಮೀಡಿಯಾ ಇವೆಲ್ಲ ಇದರಲ್ಲಿ ಸೇರುತ್ತದೆ ಎಂದು ನನ್ನ ಅನಿಸಿಕೆ. ಈ ಸಿನೀಮಿಯ ಜಗತ್ತಿಲ್ಲದಿದ್ರೆ ಬದುಕು ಏನಾಗ್ತಿತ್ತು? 🤔😊😊😊




ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಪರಿವಿಡಿ (Index)

ಸಂಪರ್ಕ ಫಾರ್ಮ್

ಕಳುಹಿಸಿ