ಪಿ. ಲೀಲಾ
ಪಿ. ಲೀಲಾ ಕನ್ನಡವೂ ಸೇರಿದಂತೆ ದಕ್ಷಿಣ ಭಾರತೀಯ ಚಲನಚಿತ್ರ ಲೋಕದ ಅಮರ ಹಿನ್ನಲೆಗಾಯಕಿ. ಅವರು ಶಾಸ್ತ್ರೀಯ ಮತ್ತು ಲಘು ಸಂಗೀತದಲ್ಲೂ ಪ್ರಖ್ಯಾತರಾಗಿದ್ದರು.
ಪಿ. ಲೀಲಾ ಅವರು 1934ರ ಮೇ 19ರಂದು ಕೇರಳದ ಪಾಲಕ್ಕಾಡ್ ಜಿಲ್ಲೆಯ ಚಿತ್ತೂರಿನಲ್ಲಿ ಜನಿಸಿದರು. ತಂದೆ ವಿ. ಕೆ. ಕುಂಜನ್ಮೆನನ್. ತಾಯಿ ಮೀನಾಕ್ಷಿ ಅಮ್ಮ. ಈ ದಂಪತಿಗೆ ಶಾರದಾ, ಭಾನುಮತಿ ಮತ್ತು ಲೀಲಾ ಎಂಬ ಮೂರು ಹೆಣ್ಣುಮಕ್ಕಳು. ಲೀಲಾ ಕಿರಿಯರು. ಉಪಾಧ್ಯಾಯರಾಗಿದ್ದ ತಂದೆಯವರಿಗಿದ್ದ ಸಂಗೀತದ ಮೇಲೆ ಅಪಾರ ಅಕ್ಕರೆಯಿಂದ ಲೀಲಾ ಸಂಗೀತ ಕಲಿತರು.
ಲೀಲಾ ಅವರ ಮೊದಲ ಗುರುಗಳಾಗಿದ್ದ ತ್ರಿಭುವನ ಮಣಿಭಾಗವತರ್ ಅವರು ಟಿ. ವಿ. ಗೋಪಾಲಕೃಷ್ಣನ್ ಅವರ ಚಿಕ್ಕಪ್ಪ. ಮುಂದೆ ಲೀಲಾ ಅವರು ಪತ್ತಮಡೈ ಕೃಷ್ಣ ಅಯ್ಯರ್, ಮರತ್ತುವಾಕ್ಕುಡಿ ರಾಜಗೋಪಾಲ ಅಯ್ಯರ್ ಮತ್ತು ರಮಾ ಭಾಗವತರ್ ಮುಂತಾದವರಲ್ಲಿ ಕಲಿತರು. ಹೆಚ್ಚಿನ ತರಬೇತಿಯನ್ನು ಚೆಂಬೈ ವೈದ್ಯನಾಥ ಭಾಗವತರ್ ಮತ್ತು ವಿ. ದಕ್ಷಿಣಾಮೂರ್ತಿ ಅಂತಹ ಶ್ರೇಷ್ಠರಲ್ಲಿ ಪಡೆದರು.
ಲೀಲಾ ಅವರ ತಂದೆ ಕೊಚಿಯಲ್ಲಿ ತಮ್ಮ ನೌಕರಿಯನ್ನು ಬಿಟ್ಟು 1944ರಲ್ಲಿ ಮಗಳ ಸಂಗೀತ ಪ್ರಗತಿಗಾಗಿ ಮದ್ರಾಸಿಗೆ ಬಂದರು. ಅಲ್ಲಿ ಅವರಿಗೆ ಶ್ರೇಷ್ಠ ಸಂಗೀತಗಳನ್ನು ಆಲಿಸಲು ಸಾಧ್ಯವಾಯಿತು. ಹೀಗೆ ಕೇಳ್ವಿಕೆಯಿಂದ ಹೆಚ್ಚಿನ ಸಂಗೀತ ಸೂಕ್ಷ್ಮತೆಗಳನ್ನು ಅರಿತರು. ಅನೇಕ ಸ್ಪರ್ಧೆಗಳಲ್ಲಿ ವಿಜಯಿಯಾದರು.
ಕೊಲಂಬಿಯಾ ರೆಕಾರ್ಡಿಂಗ್ ಸಂಸ್ಥೆ ಸ್ತ್ರೀ ಧ್ವನಿಗೆ ಶೋಧ ನಡೆಸಿದ ಸಂದರ್ಭದಲ್ಲಿ ಗಾನಬತಿ ರಾಮ ಅಯ್ಯರ್ ಅವರು ಲೀಲಾ ಅವರನ್ನು ಶಿಫಾರಸ್ಸು ಮಾಡಿದರು. ಹೀಗೆ ಅದು ಅವರನ್ನು ಚಲನಚಿತ್ರ ಹಿನ್ನೆಲೆ ಗಾಯನಕ್ಕೆ ತಂದಿತು. ಮೊದಲು ಅವರು ತಮಿಳಿನ ನಂದಕುಮಾರ್ ಮತ್ತು ಕಂಕಣಮ್ ಚಿತ್ರಗಳಿಗೆ ಹಾಡಿದರು.
ಸುಸ್ಪಷ್ಟ ಉಚ್ಚಾರದ ಕಂಚುಕಂಠದ ಸುಶ್ರಾವ್ಯ ಗಾಯನಕ್ಕೆ ಹೆಸರಾದ ಪಿ. ಲೀಲಾ ಮಲಯಾಳಂ, ತಮಿಳು, ತೆಲುಗು, ಕನ್ನಡ , ಹಿಂದಿ, ಬಂಗಾಳಿ, ಸಂಸ್ಕೃತ , ಒಡಿಯ, ಗುಜರಾತಿ, ಮರಾಠಿ, ಸಿಂಹಳಿ ಭಾಷೆಗಳಲ್ಲಿ ಹಲವು ಸಹಸ್ರ ಗೀತೆಗಳನ್ನು ಹಾಡಿದರು. ಅವರು ಗಾನಮಣಿ ಎಂದು ಖ್ಯಾತರಾದರು.
ಪಿ ಲೀಲಾ ಅವರ ಧ್ವನಿಯಲ್ಲಿನ ಕನ್ನಡದ ಭವ್ಯ ಹಾಡುಗಳಲ್ಲಿ ಕಾಯೇ ದೀನ ಶರಣ್ಯೇ, ಅಚ್ಚ ಮಲ್ಲಿಗೆ ಹೂವು, ತ್ರಿಭುವನ ಜನನಿ ಜಗನ್ಮೋಹಿನಿ, ಶ್ರೀ ಚಾಮುಂಡೇಶ್ವರಿ ಅಮ್ಮಾ, ಅನುರಾಗದ ಅಮರಾವತಿ, ಪವಡಿಸು ಪಾಲಾಕ್ಷ, ನಾಡಿನಂದ ಈ ದೀಪಾವಳಿ, ನಮೋ ಭೂತನಾಥ, ಸಾಗಲಿ ತೇಲಿ ತರಂಗದೊಳು ಮುಂತಾದ ಮನಮೋಹಕ ಗೀತೆಗಳು ನೆನಪಾಗುತ್ತವೆ.
ಪಿ. ಲೀಲಾ ಅವರು 2005 ರ ಅಕ್ಟೋಬರ್ 31ರಂದು ಈ ಲೋಕವನ್ನಗಲಿದರು. 2006ರಲ್ಲಿ ಅವರಿಗೆ ಪದ್ಮಭೂಷಣ ಘೋಷಿಸಲಾಯ್ತು. ಅವರಿಗೆ ತಮಿಳುನಾಡಿನ ಕಲೈಮಾಮಣಿ ಗೌರವವೂ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು. ಎಷ್ಟೇ ಪ್ರಸಿದ್ಧಿ ಇದ್ದರೂ ತಮ್ಮ ಗಾಯನ ಪರಮಾತ್ಮನ ಸೇವೆ ಎಂಬ ವಿನೀತ ಭಾವ ಅವರದಾಗಿತ್ತು. ಆ ಮಹಾನ್ ಚೇತನಕ್ಕೆ ನಮನ.
Great musician and playback singer P. Leela 🌷🙏🌷
ಕಾಮೆಂಟ್ಗಳು