ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರತಕಥಾಮಂಜರಿ77


ಕುಮಾರವ್ಯಾಸನ

ಕರ್ಣಾಟ ಭಾರತ ಕಥಾಮಂಜರಿ 

ಉದ್ಯೋಗ ಪರ್ವ  ಎಂಟನೆಯ ಸಂಧಿ


ಶರಣದೇಹಿಕ ದೇವನೆಂಬೀ

ಬಿರುದ ಮೆರೆಯಲು ರಾಯಭಾರವ

ಧರಿಸಿ ಕೌರವನರಮನೆಗೆ ನಡೆತಂದನಸುರಾರಿ


ಶರಣಾಗತನಾಗಿ ಬೇಡಿದವರಿಕೆ ದೇವರೆಂಬ ಬಿರುದನ್ನು ಮೆರೆಯಲು ರಾಯಭಾರದ ಭಾರವನ್ನುಹೊತ್ತು ದುರ್ಯೋಧನನ ಅರಮನೆಗೆ ಕೃಷ್ಣನು ಆಗಮಿಸಿದ


ಕೇಳು ಜನಮೇಜಯ ಧರಿತ್ರೀ

ಪಾಲ ಮುರಹರ ಗುರು ನದೀಜರ

ಬೀಳುಕೊಟ್ಟನು ಕೃಪನ ಮನ್ನಿಸಿ ಮನೆಗೆ ಕಳುಹಿದನು

ಆಲಯಕೆ ವಿದುರಂಗೆ ಕೊಟ್ಟನು

ವೀಳಯವನೊಡನೆಯ್ದಿ ಬಂದ

ನೃಪಾಲಕರ ಮೊಗಸನ್ನೆಯಲಿ ಕಳುಹಿದನು ಮನೆಗಳಿಗೆ ೧


ಶೌರಿ ಕಾಣಿಸಿಕೊಂಡನಾ ಗಾಂ

ಧಾರಿಯನು ಸುಕ್ಷೇಮ ಕುಶಲವ

ನಾರಯಿದು ಕಾಣಿಕೆಯ ಕೊಂಡನು ಕೊಟ್ಟನುಡುಗೊರೆಯ

ಕೌರವನು ತನ್ನರಮನೆಗೆ ಹರಿ

ಬಾರದಿರನೆಂದಖಿಳ ವಿಧದಲಿ

ಸಾರ ವಸ್ತುವ ತರಿಸಿಯಾರೋಗಣೆಗೆ ಮಾಡಿಸಿದ ೨


ನಡುವೆ ಮಣಿಮಂಚದಲಿ ಮೇಲ್ವಾ

ಸಡಕಿಲನು ಹಚ್ಚಡಿಸಿದರು ಮೇ

ಲಡರಿದವು ಮಣಿಖಚಿತ ಚಿತ್ರದ ಮೇಲುಕಟ್ಟುಗಳು

ಉಡುಗೊರೆಯ ತರಿಸಿದನು ರಾಯನ

ಮಡದಿಯರು ಹೊಂಗಳಸ ಜಲವನು

ಪಡಿಗವನು ಹಿಡಿದಸುರರಿಪುವಿನ ಬರವ ಹಾರಿದರು ೩


ತಮತಮಗೆ ಗಾಂಗೇಯ ಗುರು ಕೃಪ

ರವಿಸುತಾದಿಗಳಸುರರಿಪು ನಿಜ

ಭವನಕೈತಹನೆಂದು ಸವೆದರು ಸಾರವಸ್ತುಗಳ

ಅವನಿಪನ ಬೀಳ್ಕೊಟ್ಟು ಕೌರವ

ಭವನವನು ಹೊರವಂಟು ವರ ಭಾ

ಗವತಮಸ್ತಕರತ್ನ ವಿದುರನ ಮನೆಗೆ ನಡೆತಂದ ೪


ತೊಲಗಿದವು ಜನಮನದ ಬಲುಗ

ತ್ತಲೆಗಳಿದಿರಲಿ ಕಂಡ ಜೀವರ

ಹಲವು ಜನ್ಮಾಂತರದ ದುರಿತಾಂಬೋಧಿ ಬತ್ತಿದವು

ಬಳಿಕ ಮುನಿಗಳು ಸಹಿತ ಕರುಣಾ

ಜಲಧಿ ತಾನಾ ಕೌರವೇಂದ್ರನ

ಹೊಳಲೊಳಗೆ ನಿಜ ಶರಣನಿಹ ಮನೆಗಾಗಿ ಬರುತಿರ್ದ ೫


ಕರಣ ನಿರ್ಮಳವಾಯ್ತು ಮನವು

ಬ್ಬರಿಸಿತತಿ ಪರಿತೋಷದೇಳಿಗೆ

ಪರಮ ಸುಖದಲಿ ತನುವ ಮರೆದನು ನಯನಜಲವೊಗಲು

ಎರಡುದೋರದ ಗಾಢಭಕ್ತಿಯ

ಭರದ ಲವಲವಿಕೆಯಲಿ ನಿಜ ಮಂ

ದಿರವ ಹೊರವಂಡುತ ಕಂಡನು ವಿದುರನಚ್ಯುತನ ೬


ಸಿರಿಮೊಗದ ಕಿರುಬೆಮರ ತೇಜಿಯ

ಖುರಪುಟದ ಕೆಂದೂಳಿ ಸೋಂಕಿದ

ಸಿರಿಮುಡಿಯ ಕುಡಿಮೀಸೆಯಲಿ ಕೆಂಪಡರ್ದ ರೇಣುಗಳ

ಖರ ಮರೀಚಿಯ ಜಳಕೆ ಬಾಡಿದ

ತರುಣ ತುಲಸಿಯ ದಂಡೆಯೊಪ್ಪುವ

ಗರುವ ದೇವನ ಬರವ ಕಂಡನು ಬಾಗಿಲಲಿ ವಿದುರ ೭


ತನುವ ಮರೆದನು ಪುಳಕಜಲದಲಿ

ನನೆದು ನಾರಾಯಣನ ಪದ ದರು

ಶನದ ಹರುಷಾರಣ್ಯದಲಿ ಮನ ಹೊಲಬುದಪ್ಪಿದನು

ನೆನೆವ ಸನಕಾದಿಗಳಿಗೊಮ್ಮೆಯು

ಮನಗೊಡದ ಮಹಿಮಾವಲಂಬನು

ಮನೆಗೆ ಬಹ ಕರುಣಾಳುತನ ಹೊಸತೆಂದು ಹೊಂಗಿದನು ೮


ವೇದದರಿಕೆಗಳಡಗದುಪನಿಷ

ದಾದಿ ದಿವ್ಯಸ್ತುತಿಯ ಗಡಣೆಗೆ

ಹೋದ ಹೊಲಬಳವಡದ ಮುನಿಗಳ ಮುಖಕೆ ಮನಗುಡದ

ಕಾದಿ ಕಡುಗುವ ತಾರ್ಕಿಕರು ಬೆಂ

ಡಾದರಲ್ಲದೆ ನಿಜವನರಿಯದ

ನಾದಿ ಸಿದ್ಧನ ಬರವ ಕಂಡನು ಬಾಗಿಲಲಿ ವಿದುರ ೯


ತೊಳಲುವುಪನಿಷದರಿಕೆಯಿವು ಶ್ರುತಿ

ಗಳ ಸರಾಗದ ಬಳಕೆಯಿವು ಮುನಿ

ಗಳ ಸಮಾಧಿಗಳಾದಿಯಿವು ಯೋಗಿಗಳ ಬಗೆಗಳಿವು

ಎಲೆಲೆ ಬಕುತರ ಭಾಗ್ಯಶಾಲಿಯ

ಬೆಳೆಗಳಿವೆಲಾ ಶಿವಯೆನುತ ಪದ

ನಳಿನಯುಗಳದಲೊಡಲನೀಡಾಡಿದನು ಹರುಷದಲಿ ೧೦


ನೋಡಿದನು ಮನದಣಿಯೆ ಮಿಗೆ ಕೊಂ

ಡಾಡಿದನು ಬೀದಿಯಲಿ ಹರಿದೆಡೆ

ಯಾಡಿದನು ಭ್ರಮೆಯಾಯ್ತು ವಿದುರಂಗೆಂಬ ಗಾವಳಿಯ

ಕೂಡೆ ಕುಣಿದನು ಮನೆಯ ಮುರಿದೀ

ಡಾಡಿದನು ಮೈಮರೆದ ಹರುಷದ

ಗಾಡಿಕೆಯಲಪ್ರತಿಮನೆಸೆದನು ಬಕುತಿ ಕೇಳಿಯಲಿ ೧೧


ಹಸಿದು ನಾವೈತಂದರೀ ಪರಿ

ಮಸಗಿ ಕುಣಿದಾಡಿದೊಡೆ ಮೇಣೀ

ವಸತಿಯನು ಸುಗಿದೆತ್ತಿ ಬಿಸುಟರೆ ತನಗೆ ತಣಿವಹುದೆ

ವಸುಮತಿಯ ವಲ್ಲಭರು ಮಿಗೆ ಪ್ರಾ

ರ್ಥಿಸಿದೊಡೊಲ್ಲದೆ ಬಂದೆವೈ ನಾ

ಚಿಸದಿರೈ ಬಾ ವಿದುರಯೆನುತೊಳಹೊಕ್ಕನಸುರಾರಿ ೧೨


ನೆರೆಯೆ ಕೃತ್ಯಾಕೃತ್ಯ ಭಾವವ

ಮರೆದು ಕಳೆದನು ಮನ ಮುರಾರಿಯ

ನಿರುಕಿಕೊಂಡುದು ಕಂಗಳೊಡೆವೆಚ್ಚುವು ಪದಾಬ್ಜದಲಿ

ಅರಿವು ಮಯಣಾಮಯದ ಭಕ್ತಿಯೊ

ಳೆರಗಿಸಿದ ಪುತ್ಥಳಿಯವೊಲು ಕಡು

ಬೆರಗ ಕೇಣಿಯ ಕೊಂಡು ಮೌನದೊಳಿದ್ದನಾ ವಿದುರ ೧೩


ಒಲವರವೆ ಕೌತುಕವು ಪಾಲ್ಗಡ

ಲೊಳಗೆ ಮಲಗುವ ವಿಷ್ಣು ವಿದುರನ

ನಿಳಯದೊಳಗೊಕ್ಕುಡಿತೆ ಹಾಲಲಿ ಹಸಿವ ನೂಕಿದನು

ಹೊಲಬುಗೆಡಿಸಿದನಖಿಳ ನಿಗಮಂ

ಗಳನು ತನ್ನರಿಕೆಯಲಿ ಭಜಕಂ

ಗೊಲಿದು ತಾನೈತರಲು ಕರುಣದ ಘನತೆಯೆನೆ ಲೋಕ ೧೪


ಹರಿಯ ಪದಕಮಲಾಭಿಷೇಕದ

ವರ ಪಯೋಬಿಂದುಗಳು ಕೌರವ

ನರಮನೆಯನೊಳಕೊಂಬವೋಲ್ ಕಡಲಾಗಿ ಕೈಗೊಳಲು

ಅರರೆ ಮುರಹರನೊಡನೆ ಹಾಲಿನ

ಶರಧಿ ಮೇರೆಯನೊಡೆದುದಿಳೆಗ

ಚ್ಚರಿಯೆನುತ ಭೀಷ್ಮಾದಿಗಳು ಹೊಗಳಿದರು ಮುರಹರನ ೧೫


ತೊಲಗಿದಸು ಬಂದಂತೆ ತರಣಿಯ

ಹೊಳಹು ಸೋಂಕಿದ ಜಕ್ಕವಕ್ಕಿಯ

ಬಳಗದಂತಿರೆ ಕೃಷ್ಣರಾಯನ ಬರವ ತಾ ಕೇಳ್ದು

ಪುಳಕ ಪಸರಿಸಿ ಪರಮಹರುಷವ

ತಳೆದು ದೇವನ ಕಾಣಿಕೆಯ ಕಂ

ಗಳಿಗೆ ಕಡುಲೋಲುಪತೆ ಮಿಗೆ ಹರಿತಂದಳಾ ಕುಂತಿ ೧೬


ಬರಲು ಕಂಡಸುರಾರಿ ಮಂಚದೊ

ಳಿರದೆ ಧಿಮ್ಮನೆ ನಿಂದು ನರರಾ

ಚರಣೆಗಳ ನಾಟಕವ ತಾನೇ ನಟಿಸಿ ತೋರಿದನು

ಹಿರಿಯರಿಗೆ ತಾ ಹಿರಿಯನೆಂಬೀ

ಗರುವತನವನು ಬಿಸುಟು ಕುಂತಿಗೆ

ಕರವ ಮುಗಿದೆರಗಿದನು ಮುನಿಜನನಿಕರ ಘೇಯೆನಲು ೧೭


ಅಮಿತ ಕರುಣಾಸಿಂಧುವಿನ ಪದ

ಕಮಲದಲಿ ಬಂದೆರಗಿ ಪುಳಕೋ

ದ್ಗಮದ ತನಿ ಸುಖಪಾನರಸ ಸೌರಂಭದಲಿ ಮುಳುಗಿ

ಗಮಿಸಲರಿಯವು ಗರುವ ವೇದ

ಪ್ರಮಿತಿಗಳು ನೀವೆಂತು ನಡೆತಂ

ದೆಮಗೆ ಗೋಚರವಾದಿರೆನುತವೆ ಹೊಗಳಿದಳು ಕುಂತಿ ೧೮


ದೇವಕಿಯ ವಸುದೇವನನು ಬಲ

ದೇವ ಸೌಭದ್ರಾದಿ ಯದು ಭೂ

ಪಾವಳಿಯ ಸುಕ್ಷೇಮ ಕುಶಲವ ಕುಂತಿ ಬೆಸಗೊಳಲು

ದೇವ ನಗೆಮೊಗದಿಂದ ವರ ವಸು

ದೇವ ದೇವಕಿಯಾದಿ ಯಾದವ

ರಾ ವಿಳಾಸ ಮಹೀಶರಿರವನು ಕುಂತಿಗರುಹಿದನು ೧೯


ಯಮತನುಜನಧಿಕನು ಹಿಡಿಂಬಾ

ರಮಣನತಿ ಬಲ್ಲಿದನು ಪಾರ್ಥನ

ವಿಮಳ ವಿಗ್ರಹ ಲೇಸು ಸಕಲ ಮಹೀಶ ಪರಿವೃತರು

ಯಮಳರಿರವತಿ ಚೆಲುವು ನೇಹದ

ರಮಣಿಯಾಕೆಯ ಸುತರು ಮಹದು

ದ್ಯಮರು ಕೇಳೆಂದಸುರರಿಪು ಕುಂತಿಗೆ ನಿಯಾಮಿಸಿದ ೨೦


ನರನ ಮಗನಭಿಮನ್ಯು ಕುಶಲನು

ವರ ಸುಭದ್ರಾದೇವಿ ಮೊದಲಾ

ಗಿರಲು ಬಾಂಧವರೆಲ್ಲ ಜೀವಂತರು ನಿಧಾನಿಸಲು

ಪರಮ ಮಿತ್ರರು ತಮ್ಮೊಳೊಂದಾ

ದರು ದ್ರುಪದನಕ್ಷೋಣಿ ಸೇನೆಯ

ನೆರವು ಬಂದುದು ರಾಜಕಾರ್ಯದ ಬಳಕೆ ಲೇಸೆಂದ ೨೧


ಅದಿತಿ ಮಕ್ಕಳ ಹಡೆದುದೇ ಲೋ

ಕದಲಿ ಫಲ ಕೌಸಲೆ ಕುಮಾರರ

ಪಡೆದು ಹಡೆದುದೆ ಸಫಲ ವಿನತೆಗೆ ಮಕ್ಕಳಾಯ್ತು ಫಲ

ಮುದದಿ ನೀನೇ ಮಕ್ಕಳನು ಪಡೆ

ದದುವೆ ಫಲ ಕೇಳೆಂದು ಪರಿತೋ

ಷದಲಿ ಕುಂತಿಯ ಹೊಗಳಿದನು ಮುರವೈರಿಯುಚಿತದಲಿ ೨೨


ಲೋಕ ಮೆಚ್ಚಲು ನಿನ್ನ ಸುತರು ದೃ

ಢೈಕಸತ್ಯರು ನುಡಿದ ಕಾಲವ

ನೂಕಿದರು ರಾಜ್ಯಾಭಿಲಾಷೆಗೆ ನೆರಹಿದರು ಬಲವ

ಆ ಕುಮಾರರಿಗರ್ಧ ರಾಜ್ಯವ

ನೀ ಕುಠಾರರಲೀಸಿಕೊಡುವ ವಿ

ವೇಕದಲಿ ತಾ ಬಂದೆನೆಂದನು ಕುಂತಿಗಸುರಾರಿ ೨೩


ಪರಮ ಪರಿತೋಷದಲಿ ಕೃಷ್ಣನ

ವರಸುಧಾಮಯ ವಚನವನು ಪಂ

ಕರುಹಮುಖಿ ಕೇಳುತ್ತೆ ನೆನೆದಳು ನಯನವಾರಿಯಲಿ

ಮುರಮಥನನಾ ಕುಂತಿಗೆಲ್ಲವ

ನೊರೆದು ವಿದುರನ ಕರೆದು ಕೌರವ

ನರಮನೆಯ ಸಮಯವನು ನೋಡಿದು ತಮಗೆ ಹೇಳೆಂದ ೨೪


ಹೋಗು ನೀನಾತಂಗೆ ಪಾಂಡವ

ರಾಗಸಮುದಯ ಬಂದನೆಂಬುದ

ನೀಗಳರುಹವುದಾತ ಮಾಡಿದ ಗುಣದ ಬೆಳವಿಗೆಯ

ತಾಗು ಬಾಗಿನ ಹವಣನಾತನ

ಲಾಗ ನೋಡುವೆವೆನಲು ಕುರುಕುಲ

ಸಾಗರಾಗ್ನಿಯ ಮನೆಗೆ ಬಂದನು ವಿದುರ ಹರಿ ಬೆಸಸೆ ೨೫


ಓಲಗದೊಳಿರ್ದಖಿಳ ಮೂರ್ಖರ

ಮೌಳಿಯನು ಕಂಡವಧರಿಸು ಸಿರಿ

ಲೋಲ ಬಿಜಯಂಗೈಯಲವಸರವುಂಟೆ ಹೇಳೆನಲು

ನಾಳೆ ಕಾಣಿಸಿ ಕೊಂಬೆವಿನ್ನೇ

ನಾಳಿಕಾರನ ಬರವು ಹಗೆವರ

ಪಾಲಿಸುವ ಭರ ಸಂಧಿಕಾರ್ಯಕೆ ಬಾರದಿರನೆಂದ ೨೬


ನೋಡಿರೈ ಪಾಂಡವರು ಪಾತಕ

ರಾಡಿದಾಟವನಾಡಿದೊಡೆ ಯೀ

ನಾಡೊಳಗಹುದು ಸಲುವುದವನಿಯೊಳಧಿಕ ಲೇಸೆನಿಸಿ

ರೂಡಿಯೊಳಗಾಚಾರವಡಗಿತು

ಜೋಡೆಯಲಿ ಜನಿಸಿದರನೀ ಬೀ

ಡಾಡಿ ಕೂಡಿದನೆಂದು ಹೊಯಿದನು ರವಿಸುತನ ಕರದ ೨೭


ನಾಳೆ ಬರಹೇಳೆಂದು ವಿದುರನ

ಬೀಳುಕೊಟ್ಟನು ಬೇಹ ಭಟರಿಗೆ

ವೀಳೆಯವ ನೀಡಿದನು ಹರಿದುದು ರಾಯನಾಸ್ಥಾನ

ಜಾಳಿಸಿತು ತಮ ಮೂಡಣಾದ್ರಿಯ

ಮೇಲೆ ತಲೆದೋರಿದನು ರವಿ ಭೂ

ಪಾಲ ಕೌರವನಂದಿನೊಡ್ಡೋಲಗವ ರಚಿಸಿದನು ೨೮


ಕರೆಸಿದನು ಮಣಿಮಕುಟ ಕಿರಣದ

ಗರುವರನು ಗಾಢಪ್ರತಾಪರ

ಬರಿಸಿದನು ತೂಕದ ಮಹಾ ಮಂಡಳಿಕ ಮನ್ನೆಯರ

ಧುರವಿಜಯ ಸಿದ್ಧರನು ಚಾಮೀ

ಕರದ ಗದ್ದುಗೆಯಖಿಳ ಸಾಮಂ

ತರನು ಪೃಥ್ವೀಪಾಲರನು ನೆರಹಿದನು ಭೂಪಾಲ ೨೯


ಬಲದ ಗದ್ದುಗೆಗಳಲಿ ಭಟರ

ಗ್ಗಳೆಯ ರವಿಸುತ ನದಿಯ ಮಗ ನೃಪ

ತಿಲಕ ದುಶ್ಯಾಸನ ಕೃಪ ದ್ರೋಣಾದಿ ನಾಯಕರು

ಹೊಳೆವ ರತುನದ ಸಾಲ ಮಕುಟದ

ಚೆಲುವಿಕೆಯ ಸೌರಂಭದಲಿ ಗಜ

ಗಲಿಸಿದರು ಮಾಣಿಕ್ಯಮಯ ಭೂಷಣ ವಿಳಾಸದಲಿ ೩೦


ಸತಿಸಹಿತ ಧೃತರಾಷ್ಟ್ರ ಭೂಪತಿ

ಸುತನ ಬಲವಂಕದಲಿ ಕನಕೋ

ಚಿತದ ಪೀಠದಲೆಸೆದನಾತನ ಬಲದ ಭಾಗದಲಿ

ಚತುರ ಚತುರಾನನರು ತರ್ಕ

ಶ್ರುತಿ ಸಮಸ್ತ ಕಳಾಸ್ವತಂತ್ರರು

ನುತಗುಣರು ನೃಪ ಸಭೆಯೊಳೆಸೆದರು ಭೂರಿ ಸಂದೋಹ ೩೧


ಮದವದತಿಬಲ ಶಕುನಿ ಸೈಂಧವ

ನದಟ ನೃಪ ಕಾಂಭೋಜ ರಥ ಸಂ

ಪದನು ಭೂರಿಶ್ರವ ಸುಲೋಚನ ವೀರ ವೃಷಸೇನ

ಕದನಕಾಲಾನಳರು ವರ ಹೇ

ಮದ ಮಕುಟ ರಚನೆಗಳಲೆಡವಂ

ಕದಲಿ ಕುಳ್ಳಿರ್ದರು ಮಹಾಯಾಸ್ಥಾನ ರಚನೆಯಲಿ ೩೨


ತರುಣ ಶೃಂಗಾರದ ಮಹಾ ಬಂ

ಧುರದ ನೂರ್ವರು ಕೌರವೇಂದ್ರನ

ವರ ಕುಮಾರರು ಮುಂದೆ ಮೆರೆದರು ಲಕ್ಷಣಾದಿಗಳು

ವರ ಕಿರೀಟದ ಕಾಲ ತೊಡರಿನ

ಕೊರಳ ಪದಕದ ಕೈಯ ಸುರಗಿಯ

ಲರಸನನುಜರು ನೂರ್ವರೆಡವಂಕದಲಿ ರಂಜಿಸಿತು ೩೩


ಮಿಸುಪ ತಮ್ಮ ಮುಖೇಂದುವನು ಸೈ

ರಿಸದ ಚಂದ್ರನ ಕಿತ್ತು ನಭದಲಿ

ಬಿಸುಟು ಬೇರ್ಗಳ ಹಿಡಿದರೋ ಹೇಳೆನಲು ಸಭೆಯೊಳಗೆ

ಶಶಿವದನೆಯರ ಕೈಯ ಸೀಗುರಿ

ವೆಸೆದವಿಕ್ಕೆಲದಲಿ ಸುಯೋಧನ

ವಸುಮತೀಶನ ವೈಭವದಲಾಸ್ಥಾನ ಚೆಲುವಾಯ್ತು ೩೪


ಕಲಹವಿಲ್ಲದೆ ನೂಲಿನೆಳೆಯಲಿ

ತಲೆಯನರಿವ ವಿರೋಧಿ ರಾಯರ

ನಳುಕಿಸುವ ಸಾಮದಲಿ ನಿಲಿಸುವ ನಿಖಿಳ ಭೂಭುಜರ

ಒಲಿದರೊಳಲಂಚದಲಿ ಛಿದ್ರಿಸಿ

ಕೊಲುವ ಮುನಿದೊಡೆ ಮಂತ್ರಶಕ್ತಿಯೊ

ಳಳುಕಿಸುವ ಮಂತ್ರಿಗಳು ಮೆರೆದರು ವಾಮಭಾಗದಲಿ ೩೫


ನಿಗಮ ತರ್ಕ ಪುರಾಣ ಕಾವ್ಯಾ

ದಿಗಳ ವಿಸಟಂಬರಿಗಳೊತ್ತೊ

ತ್ತುಗಳೊಳಿಟ್ಟೆಡೆಯಕಾಗಿ ಹಿಗ್ಗಿದ ಜಠರದಗ್ರಿಯರು

ಬಗೆಯುಪನ್ಯಾಸದ ಸುಶಾಖಾ

ಳಿಗಳ ಬೀಳಲು ಬೆಳೆದ ಗಡ್ಡದ

ವಿಗಡ ಭೂಯೋಪಾಧ್ಯರಿದ್ದುದು ರಾಜಸಭೆಯೊಳಗೆ ೩೬


ಸಲೆ ಸಮಸ್ಯದನಂತ ಪದ್ಯವ

ಘಳಿಲನನ್ವೈಸುವ ಸುಕಾಂತಿಯ

ಲಲಿತ ಮಧುರ ಸಮಾಧಿ ಸುಕುಮಾರಾದಿ ರಚನೆಯಲಿ

ಹಲವುಪಮೆ ಉತ್ಪ್ರೇಕ್ಷೆ ರೂಪಕ

ಸುಲಲಿತಾಲಂಕೃತಿ ಚಮತ್ಕೃತಿ

ಗಳ ಚತುರ್ಭಾಷಾ ವಿಶಾರದ ಕವಿಗಳೊಪ್ಪಿದರು ೩೭


ನುಡಿದು ತಲೆದೂಗಿಸುವ ಮರೆಗ

ನ್ನಡಕೆ ಹಾ ಹಾಯೆನಿಸಿ ಮೆಚ್ಚನು

ಪಡೆದ ವಾಗ್ಮಿಗಳೋದಿ ಹೊಗಳಿಸಿಕೊಂಬ ಗಮಕಿಗಳು

ಕೊಡುವ ಪದ್ಯಕೆ ಸುಪ್ರಮೇಯದ

ಗಡಣಕಬುಜಭವಾದಿ ವಿಭುಗಳು

ಬಿಡಿಸಲರಿದೆನಿಪತುಳ ತಾರ್ಕಿಕ ಜನಗಳೊಪ್ಪಿದರು ೩೮


ನುತ ಶುಭೋದಯ ಜೀಯ ಶತ್ರು

ಪ್ರತತಿ ಸಂಹಾರಕ ಸಮಸ್ತ

ಕ್ಷಿತಿಪತಿ ಬ್ರಹ್ಮಾಯುರಸ್ತುವೆನುತ್ತ ಕೈ ನೆಗಹಿ

ನುತಗುಣನ ಬಿರುದಾವಳಿಯ ಸಂ

ಗತಿಯನಭಿವರ್ಣಿಸುವ ಸಮಯೋ

ಚಿತದ ಮನ್ನಣೆವಡೆದು ಮೆರೆದುದು ಭಟ್ಟ ಸಂದೋಹ ೩೯


ಬರೆದ ಬಳಿಕದು ವಿಧಿಯ ಸೀಮೆಯ

ಬರಹ ನಿಜಕಾರ್ಯಾರ್ಥ ಲಾಭವು

ದೊರಕಿದೊಡೆ ಪತಿಯರ್ಥ ನೀರಲಿ ಬರೆದ ಲಿಪಿಯಂತೆ

ಕರಗುಪಿತ ಲೋಲುಪರು ಲಂಚದ

ಪರಮಜೀವನ ಜಾಣರಾ ಸಿರಿ

ಕರಣದವರೊಪ್ಪಿದರು ಭೂಪಾಲಕನ ಸಭೆಯೊಳಗೆ ೪೦


ನಳನ ನಹುಷನ ಶಾಲಿಹೋತ್ರನ

ಬಲುಮೆಗಳು ಕಿರಿದೆಂಬ ವಿದ್ಯಾ

ನಿಳಯ ವರ ರೇವಂತನೇರಾಟವನು ನಸುನಗುತ

ಬಲಿದ ದೃಢ ವಾಘೆಗಳು ದೃಷ್ಟಾ

ವಳಿಯ ಹಯ ಪ್ರೌಢ ಪ್ರತಾಪರು

ಹೊಳೆವ ಮಕುಟದ ಸಾಲುಗಳಲೊಪ್ಪಿದರು ರಾವುತರು ೪೧


ಅತಿಮುದದಿ ತನು ಸೊಕ್ಕಿದೈರಾ

ವತವ ಕಿವಿವಿಡಿದೆಳೆವ ದಿಗ್ಗಜ

ತತಿಯನಮಳಾಂಕುಶದಲಂಜಿಸಿ ಕೆಲಬಲಕೆ ಬಿಡುವ

ನುತ ಗಜಾರೋಹಕರು ಕುರುಭೂ

ಪತಿಯ ಹೊರೆಯಲಿ ಮೆರೆದರಮರಾ

ವತಿಯ ರಾಯನ ಸಭೆಯೊಲೆಸೆದುದು ಕೌರವಾಸ್ಥಾನ ೪೨


ನಡೆದು ಪರಮಂಡಲದ ರಾಯರ

ಜಡಿದು ಕಪ್ಪವ ತಪ್ಪ ಶಿಷ್ಟರ

ಗಡಣವೆಸೆದುದು ಪವನ ವೇಗದ ರಾಯಭಾರಿಗಳು

ಕಡುಗಿದರೆ ಕಾಲಂಗೆ ಬಿರುದಿನ

ತೊಡರನಿಕ್ಕುವ ಜವನ ದಾಡೆಯ

ತುಡುಕುವಗ್ಗದ ವೀರರೆಸೆದುದು ದಿಟ್ಟಿವಾರೆಯಲಿ ೪೩


ಎಳೆಯ ಮಿಂಚಿನ ಕುಡಿಯ ಸೂಸುವ

ನಳಿನದೃಶೆಯರು ಶಶಿಯ ಬಿಂಬವ

ಹಳಿವ ಹುರುಡಿಸುವಬುಜಮುಖಿಯರು ಕೋಮಲಾಂಗಿಯರು

ಸೆಳೆನಡುವಿನಗ್ಗಳೆಯರೊಪ್ಪುವ

ಕಳಶಕುಚೆಯರು ಜಘನ ಚಳ

ದಳಕಿಯರು ಕುರುರಾಯನೆಡವಂಕದಲಿ ಮೋಹಿದರು ೪೪


ಮುರಿದು ನೋಡಿದರಖಿಳ ರಾಯರು

ಶಿರವ ಬಾಗಲು ಲಾಳ ಮಾಳವ

ತುರುಕ ಕೊಂಕಣ ಗೌಳ ಗೂರ್ಜರ ವಂಗ ಹಮ್ಮೀರ

ವರತ್ರಿಗರ್ತರು ನೆರೆದು ಜೀಯೆನು

ತಿರಲು ಕೋಮಲಿಕೆಯರು ಸಿತ ಚಾ

ಮರವ ಚಿಮ್ಮಲು ಭೂಪ ಮೆರೆದನು ಸಿಂಹಪೀಠದಲಿ ೪೫


ಆವ ದೇಸಿಯಿದಾವ ವಿಸ್ತರ

ವಾವ ದೇಶದ ಸಿರಿಯ ಸಡಗರ

ವಾವ ಪರಿಯ ವಿಳಾಸವಾವ ವಿಡಾಯಿ ತಾನೆನಲು

ಹಾವು ಹಳವಿಗೆಯಾದ ರಾಯನು

ರಾವಣಾರಿಯ ಕಾಣಿಕೆಗೆ ಬಲು

ಠೀವಿಯನು ತೋರಿದನು ಸಾರುವ ಭಟ್ಟರೋಳಿಯಲಿ ೪೬


ಬರಲಿ ಕರೆ ಕೈತವದ ಶಿಕ್ಷಾ

ಗುರುವನೆನುತವನೀಶ ದೂತರ

ಹರಿಯ ಬಿಟ್ಟನು ಹರಿಯ ನಿಳಯಕೆ ಹರಿಯ ವೇಗದಲಿ

ಚರರು ಹರಿತಂದಸುರ ರಿಪುವಿನ

ಚರಣದಲಿ ಮೈಯಿಕ್ಕಿ ನೊಸಲಲಿ

ಕರಪುಟಾಂಜಲಿ ಮೆರೆವುತಿರೆ ಬಿನ್ನಹವ ಮಾಡಿದರು ೪೭


ದೇವ ದೇವರ ಸಮಯವೆನೆ ರಾ

ಜೀವನಾಭನು ಮುಗುಳುನಗೆಯಲಿ

ಭಾವನವರಟ್ಟಿದರೆ ಹರ ಹರ ಬಹೆವು ನಡೆಯೆನುತ

ರಾವಣನ ಪರಿ ನೆಲೆಸಿತಿವನಲಿ

ಸಾವಿಗಂಜುವನಲ್ಲ ಖಳನು ನ

ಯಾವಿಳನು ನಮ್ಮುಕುತಿ ಕೊಳ್ಳದು ವಿದುರ ಕೇಳೆಂದ ೪೮


ಎನುತ ಮಂಚವನಿಳಿದು ವರ ಕಾಂ

ಚನ ವರೂಥಕೆ ಕೈಗೊಡುವ ಯದು

ಜನಪರುಗ್ಗಡಣೆಯಲಿ ಬಿಜಯಂಗೈದನಸುರಾರಿ

ಮುನಿ ನಿಕರ ಸಂದಣಿಸಿತಭ್ರದೊ

ಳನಿಮಿಷಾವಳಿ ನೆರೆದುದಿಭಪುರ

ಜನವೊಡನೆ ನಡೆತರಲು ಹರಿ ಬರುತಿರ್ದನೋಲಗಕೆ ೪೯


ಕಲಿಮಲದಿ ಹೊಲೆಗಲಸಿದಿಭಪುರಿ

ಯೊಳಗೆ ನಿರ್ಮಳವಾಯ್ತು ಕೃಷ್ಣನ

ಚೆಲುವ ದರುಶನದಿಂದ ಬೆಂದವು ಭವದ ಭಯಬೀಜ

ಲಲನೆಯರು ತಮತಮ್ಮ ನಯನಂ

ಗಳಿಗೆ ದೇವನ ತೆಗೆದು ಸನುಮತ

ಪುಳಕರಾದರು ಕೇಳು ಜನಮೇಜಯ ಮಹೀಪಾಲ ೫೦


ದೇವ ಬಂದನು ತನ್ನ ನೆನೆವರ

ಕಾವ ಬಂದನು ದೈತ್ಯಕುಲವನ

ದಾವ ಬಂದನು ಭಾಗವತಜನ ಲೋಲುಪನು ಬಂದ

ಭಾವಿಸುವೊಡಘಹಾರಿ ಬಂದನು

ವೋವಿ ಭಜಿಸಲು ತನ್ನ ಬೀರುವ

ದೇವ ಗದುಗಿನ ವೀರನಾರಣ ಬಂದನೋಲಗಕೆ ೫೧


ಅರಸ ಬಂದನು ಭಾಗವತ ಜನ

ಪುರುಷ ಬಂದನು ಭಕ್ತವತ್ಸಲ

ಕರುಣಿ ಬಂದನು ತನ್ನ ನೆನೆದೊಡೆ ಪರಮಪದವೀವ

ಪರಮ ಪುರುಷೋತ್ತಮನು ಬಂದನು

ದುರಿತದುರ್ಗವಿಭಾಡ ಬಂದನು

ಧರೆಯ ಸಲಹುವ ದೇವ ಬಂದನು ನೃಪತಿಯೋಲಗಕೆ ೫೨


ಕಂಜಸಂಭವ ಪಿತನು ಬಂದನು

ನಂಜಿನೊಳು ಪವಡಿಸಿದ ಬಂದನು

ಕುಂಜರನ ಮೊರೆಗೇಳಿ ಸಲಹಿದ ದೇವನಿದೆ ಬಂದ

ಅಂಜಿದಸುರನ ಕಾಯ್ದ ಬಂದನು

ಭಂಜನೆಗೆ ಬಲು ದೈವ ಬಂದ ಧ

ನಂಜಯಾದ್ಯರ ಭಾವ ಬಂದನು ನೃಪತಿಯೋಲಗಕೆ ೫೩


ಸರಸಿಜಾಕ್ಷನು ಬಂದ ಯದುಕುಲ

ವರ ಶಿರೋಮಣಿ ಬಂದ ದಾನವ

ಶರಧಿ ವಡಬಾನಲನು ಬಂದನು ಸಿರಿಯರಸ ಬಂದ

ದುರಿತ ಕದಳಿ ಕುಠಾರ ಬಂದನು

ಸುರಸಮೂಹಾರ್ಚಿತನು ಬಂದನು

ವರದ ಗದುಗಿನ ವೀರ ನರಯಣ ಬಂದನೋಲಗಕೆ ೫೪


ಯಾದವರ ಕುಲತಿಲಕ ಬಂದನು

ಸಾಧು ಸಜ್ಜನರರಸ ಬಂದನು

ಮೇದಿನೀರಿಪು ವಿಪಿನ ದಹನ ಕೃಶಾನು ತಾಬಂದ

ವೇದ ವೇದ್ಯನು ಬಂದನಿದೆ ಸನ

ಕಾದಿ ಪೂಜ್ಯನು ಬಂದನಬುಜಭ

ದಾದಿ ದೇವಪ್ರಿಯನು ಬಂದನು ನೃಪತಿಯೋಲಗಕೆ ೫೫


ಕ್ಷೀರವಾರಿಧಿಶಯನ ಬಂದನು

ವಾರಿಜೋದರ ಕೃಷ್ಣ ಬಂದನು

ಧಾರಿಣಿಯ ಹೊರಗೆಳೆಯಲೋಸುಗ ಮನುಜವೇಷದೊಳು

ಭೂರಿ ದೈತ್ಯರನೊರಸಿ ಕೌರವ

ವಾರಿಧಿಯ ಮುಕ್ಕಳಿಸಲೆಂದೇ

ಭೋರನೈತರುತಿರ್ದನಂದು ನೃಪಾಲನೋಲಗಕೆ ೫೬


ಕಂಡವರ ಕಡುದುರಿತರಾಶಿಗೆ

ಕೆಂಡವನು ಬೀರುತ್ತೆ ಕೈಗಳ

ಮಂಡೆಗಾನಿಸಿದವರಿಗುದ್ಭವ ಕೋಟಿಗಳ ಸುಡುತೆ

ಚಂಡಮತಿಯೊಳು ಹೊಗಳಿದವರಿಗೆ

ಹಿಂಡು ಮುಕುತಿಯನೀಯುತವೆ ಉ

ದ್ದಂಡ ದೇವನು ಬರುತುಮಿರ್ದನು ನೃಪತಿಯೋಲಗಕೆ ೫೭


ರಾಮ ಬಂದನು ಸಕಲಮುನಿಜನ

ಪ್ರೇಮಿ ಬಂದನು ಪಾಂಡವರ ಸು

ಕ್ಷೇಮಿ ಬಂದನು ಲಕ್ಷಣಾಗ್ರಜ ನಿಕರದಾತಾರ

ಭೂಮಿಯೊಳಗರ್ಧವನು ಬೇಡಲಿ

ಕಾ ಮಹಾತ್ಮನು ತಾನೆ ಬಂದನು

ಭೀಮ ಬಲ ಮುರವೈರಿ ಬಂದನು ನೃಪತಿಯೋಲಗಕೆ ೫೮


ಸುರರ ಸಲಹಿದ ದೇವ ಬಂದನು

ನರನ ಜೀವನ ಸಖನು ಬಂದನು

ಪರಮ ಕರುಣೋದಯನು ಬಂದನು ಕಾಮಪಿತ ಬಂದ

ದುರುಳರಾವಣ ವೈರಿ ಬಂದನು

ಸಿರಿಲತಾಂಗಿಯ ರಮಣ ಬಂದನು

ವರೆಯಹಲ್ಯೆಗೆ ಮೋಕ್ಷವಿತ್ತವ ಬಂದನೋಲಗಕೆ ೫೯


ಬರಲು ಮುರಹರನಿದಿರುವಂದರು

ಗುರುನದೀಜ ದ್ರೋಣ ಗೌತಮ

ಗುರುಸುರಾದಿ ಸಮಸ್ತ ಭೂಪ ಚಮೂಹ ಸಂದೋಹ

ಚರಣದಲಿ ಚಾಚಿದರು ಭೂಮೀ

ಶ್ವರರು ಮುಕುಟವನಂತತಾರಾ

ಪರಿವೃತೇಂದುವಿನಂತೆ ಮೆರೆದುದು ಹರಿಯ ಪದನಖವು ೬೦


ಆರಿದಲೈ ಮುರವೈರಿ ಸನಕಾ

ದ್ಯರ ಸಮಾಧಿಗೆ ಸುಳಿಯದಂಘ್ರಿಯ

ದರುಶನದ ಫಲಭೋಗ ಸಾರಿದುದಸ್ಮದಾದ್ಯರಿಗೆ

ಸುರನರೋರಗರೊಳು ಕೃತಾರ್ಥರು

ನಿರುತ ತಾವಲ್ಲದೊಡೆ ನಿಮ್ಮಯ

ಸರಸಿಜಾಂಘ್ರಿಯ ಸೇವೆ ದೊರಕುವುದಾವ ಮುನಿಗಳಿಗೆ ೬೧


ಎಂದು ಗಂಗಾನಂದನನು ನಲ

ವಿಂದ ಕೈಗೊಡೆ ಸುರಗಿರಿಯ ತುದಿ

ಯಿಂದ ಮರಿಮಿಂಚುಗಳ ಮುಗಿಲಿಳಿವಂತೆ ಭೂತಳಕೆ

ಅಂದು ನೀಲಾಚಲ ನಿಕಾಯದ

ಸೌಂದರಾಂಗದ ಕೌಸ್ತುಭ ಪ್ರಭೆ

ಯಿಂದ ಕಾಂಚನ ರಥವನಿಳಿದನು ದಾನವಾರಾತಿ ೬೨


ಸಮರ ಸರ್ವಜ್ಞರುಗಳಂಘ್ರಿಗೆ

ನಮಿಸಿದರು ಬಹಳೋಲಗದ ಸಂ

ಭ್ರಮದ ಸಿರಿ ತಲೆವಾಗುತಿರ್ದುದು ನೊಸಲ ಕೈಗಳಲಿ

ಕಮಲನಯನದ ದೇವನೇ ಸಾ

ಕೆಮಗೆ ಮಾಡುವುದೇನೆನುತ ತ

ತ್ಕುಮತಿ ಕೌರವನಿಳಿಯದಿರ್ದನು ಸಿಂಹವಿಷ್ಟರವ ೬೩


ಸೆಣಸು ಸೇರದ ದೇವನಿದಿರಲಿ

ಮಣಿಯದಾತನ ಕಾಣುತವೆ ಧಾ

ರುಣಿಯನೊತ್ತಿದನಂಗುಟದ ತುದಿಯಿಂದ ನಸುನಗುತ

ಮಣಿಖಚಿತ ಕಾಂಚನದ ಪೀಠದ

ಗೊಣಸು ಮುರಿದುದು ಮೇಲೆ ಸುರ ಸಂ

ದಣಿಗಳಾ ಎನೆ ಕವಿದು ಬಿದ್ದನು ಹರಿಯ ಚರಣದಲಿ ೬೪


ಧರಣಿಪತಿ ಸಿಂಹಾಸನದ ಮೇ

ಲಿರದೆ ಬಹರೇ ನಾವು ಬಂದೇ

ಹರಸುವೆವು ತಪ್ಪಾವುದೆನುತೆತ್ತಿದನು ಮಸ್ತಕವ

ಸುರನದೀಸುತ ಕೈಗುಡಲು ಕೇ

ಸರಿಯ ಪೀಠಕೆ ದೇವ ಬಂದನು

ಕುರುಕುಲಾಗ್ರಣಿಗಳ ಸುಸನ್ಮಾನವನು ಕೈಕೊಳುತ ೬೫


ಹರಿಯು ಹರಿವಿಷ್ಟರದ ಬಲದಲಿ

ಧರಣಿಪತಿ ಕುಳ್ಳಿರ್ದನಾತನ

ಹಿರಿಯ ಮಗನೆಡವಂಕದಲಿ ಕರ್ಣಾದಿಗಳು ಸಹಿತ

ಹರಿಯ ನೇಮವ ಕೊಂಡು ಸನ್ಮುತಿ

ವರರು ಕುಳ್ಳಿರ್ದರು ನದೀಸುತ

ತರಿಸಿದನು ಪಡಿಗವನು ಹೊಂಗಳಸದ ಸುವಾರಿಗಳ ೬೬


ಚರಣಯುಗಳವ ತೋಳೆದು ತೀರ್ಥವ

ಶಿರದೊಳಿಟ್ಟು ಮಹಾನುಭಾವನ

ದರುಶನದಿ ಮಜ್ಜನ್ಮ ಸಫಲವೆನುತ್ತ ಕೈಮುಗಿದು

ಪರಶುರಾಮಾದಿಗಳ ಮಿಗೆ ಸ

ತ್ಕರಿಸಿ ಗಂಧಾಕ್ಷತೆಗಳಿಂದುಪ

ಚರಿಸಿ ಹೊಂಬಟ್ಟಲಲಿ ವೀಳೆಯವಯವಿತ್ತನನಿಬರಿಗೆ ೬೭


ಕುಶಲವೇ ಕುರುರಾಯ ಬಾರೈ

ಮುಸುಡ ದುಗುಡವಿದೇಕೆ ಬಾಯಂ

ದಸುರರಿಪು ಕೌರವನ ಕರೆದನು ತನ್ನ ಸಮ್ಮುಖಕೆ

ಉಸುರಲಮ್ಮೆನು ಭಾವತನದೊಂ

ದೆಸಕ ಸಲುಗೆಯ ನೇಮವಾದೊಡೆ

ಬಿಸಜಲೋಚನ ಬಿನ್ನಹವನವಧರಿಸಬೇಕೆಂದ ೬೮


ನೀವು ಬಿಜಯಂಗೈವಿರೆಂದು ಮ

ಹಾ ವಿಳಾಸದೊಳಳವಡಿಸಿ ನಾ

ನಾ ವಿಧದ ಷಡುರಸವ ಗರುಡಿಯಲಿಂದು ಸವೆಸಿದೆನು

ದೇವ ನಮ್ಮರಮನೆಗೆ ಬಾರದೆ

ನೀವು ವಿದುರನ ಮನೆಯಲುಂಡಿರೆ

ಗೋವಳಿಗತನ ನಿಮ್ಮ ಮೈ ಸಿರಿ ತಪ್ಪದಾಯ್ತೆಂದ ೬೯


ಈ ಕೃಪನನೀ ದ್ರೋಣನೀ ಗಂ

ಗಾ ಕುಮಾರನ ಮನೆಯ ಹೊಗದವಿ

ವೇಕಿ ತೊತ್ತಿನ ಮಗನ ಮನೆಯಲಿ ಹಸಿವನೂಕಿದಿರಿ

ಸಾಕಿದಾತನು ನಂದಗೋಪನು

ಕಾಕ ಬಳಸಲು ಸಲ್ಲದೇ ನಿಮ

ಗೇಕೆ ರಾಯರ ನೀತಿಯೆಂದನು ನಗುತ ಕುರುರಾಯ ೭೦


ಕುರುಪತಿಯ ಬಿರುನುಡಿಯ ಕೇಳಿದು

ಕರಣದಲಿ ಕೋಪಾಗ್ನಿಯುಕ್ಕಲು

ಕೆರಳಿ ನಿರ್ಭೀತಿಯಲಿ ನುಡಿದನು ವಿದುರನರಸಂಗೆ

ದುರುಳ ನೀನಾಡಿದ ನುಡಿಗೆ ಉ

ತ್ತರವನೀಯಲದೇಕೆ ನಿನ್ನಯ

ವರ ಜನನಿಗಾದಿಯಲಿ ಗಂಡರದಾರು ಹೇಳೆಂದ ೭೧


ಕಡು ಮುಳಿಸಿನಲಿ ಭೀಮ ನಿನ್ನಯ

ತೊಡೆಗಳನು ಕಡಿವಾ ಸಮಯದೊಳು

ತಡೆದು ನಿನ್ನನು ಕಾಯಬೇಕೆಂದುಳುಹಿದೆನು ಧನುವ

ಕೆಡೆನುಡಿಸಿಕೊಂಡಿನ್ನು ಕಾವೆನೆ

ನುಡಿದು ಫಲವೇನೆನುತ ವಿದುರನು

ಹಿಡಿದ ಬಿಲ್ಲನು ಮುರಿದನಾ ಕುರುರಾಯ ಬೆರಗಾಗೆ ೭೨


ಧನು ಮುರಿಯೆ ಗಾಂಧಾರಿ ಗತ ಲೋ

ಚನರು ಮಮ್ಮುಲ ಮರುಗಿದರು ಭೂ

ಪನ ದುಗುಡ ಮಿಗಿಲಾಯ್ತು ಭೀಷ್ಮ ದ್ರೋಣರಳಲಿದರು

ಮನದ ಹರುಷದಿ ನಗುತ ಮಧುಸೂ

ದನನು ನುಡಿದನು ಮರುಳು ಕೌರವ

ಜನಪ ಕೇಳೈ ಮತ್ತೆ ನಮ್ಮಯ ಶೀಲ ಬೇರೆಂದ ೭೩


ಪ್ರಿಯದಲುಂಬುದು ಮೇಣು ವಿಬುಧಾ

ಶ್ರಯದಲುಂಬುದು ಮಾನವರಿಗಿದು

ನಿಯತವಿಂತಲ್ಲದೊಡೆ ಕೇಳೈ ಕೌರವ ರಾಯ

ಪ್ರಿಯನು ನೀನಲ್ಲೆಮಗೆ ವಿಬುಧಾ

ಶ್ರಯವು ತಾ ಮುನ್ನಿಲ್ಲ ನಿನ್ನಾ

ಲಯದೆಲೆಮಗೆಂತೂಟ ಸಂಭವಿಸುವುದು ಹೇಳೆಂದ ೭೪


ಹಗೆಯನೊಳಗಿಡಲಾಗದದು ವೈ

ರಿಗಳ ನಿಳಯದಲನ್ನ ಪಾನಾ

ದಿನಗಳನುಣಲಾಗದು ನಿಧಾನಿಸೆ ರಾಜನೀತಿಯಿದು

ಬಗೆಯೆ ನೀ ಪಾಂಡವರಿಗಹಿತನು

ವಿಗಡ ಪಾಂಡವರೆನ್ನ ಜೀವನ

ಹಗೆಯ ನಂಬುವೆನೆಂತು ಹೇಳೈ ಕೌರವರ ರಾಯ  ೭೫


ಸೇರುವನು ಸಕಳಂಕ ಚಂದ್ರನು

ವಾರಿಧಿಗೆ ನೀನಖಿಳ ಗೋಪೀ

ಜಾರ ಜಾರೆಯ ಮಕ್ಕಳಿಗೆ ನೀ ಜೀವ ತಪ್ಪೇನು

ಆರು ತಮ್ಮಂದದ ಮಹಾತ್ಮರ

ಸೇರುವರಲೈ ಪಾಂಡುಪುತ್ರರ

ಕೂರುಮೆಗೆ ನಾನೆನ್ನೆ ನೀ ಬಂದನುವ ಹೇಳೆಂದ ೭೬


ಕುಲದವನ ಹೃದಯಾಂಧಕಾರವ

ಕಳಚಲೆಂದು ಹಿಮಾಂಶು ಹರಹಿದ

ನೆಳೆಯಬೆಳುದಿಂಗಳನೆನಲು ಸುರರಿಪುಕುಲಾಂತಕನು

ತೊಳಪ ದಶನಮಯೂಖ ತತಿ ಹೊಳೆ

ಹೊಳೆಯೆ ನುಡಿದನು ತತ್ಸಭಾ ಮಂ

ಡಲ ಮಹಾಂಬುಧಿ ನುಡಿದೆರೆಯ ತನಿಗಡಣವಡಗಿರಲು ೭೭


ಸಂಕ್ಷಿಪ್ತ ಭಾವ

Lrphks Kolar


ಭಕ್ತನ ಮನೆಗೆ ಭಗವಂತನ ಆಗಮನ.  ವಿದುರನ ಸಂಭ್ರಮ. ಕೃಷ್ಣನು ಕೌರವರ ಓಲಗಕ್ಕೆ ಬಂದದ್ದು.


ಕೃಷ್ಣನು ಎಲ್ಲರನ್ನೂ ಕುಶಲ ವಿಚಾರಿಸಿ ಕಳಿಸಿಕೊಟ್ಟು ಗಾಂಧಾರಿಯನ್ನು ಕಂಡು ನಮಿಸಿದನು. ದುರ್ಯೋಧನನು ಕೃಷ್ಣನು ತನ್ನ ಮನೆಗೆ ಬರುವನೆಂದು ಸಕಲ ವೈಭವದಿಂದ ಎಲ್ಲವನ್ನೂ ಸಿದ್ಧಗೊಳಿಸಿಕೊಂಡು ಕಾದಿದ್ದನು. ಹಾಗೆಯೇ ಭೀಷ್ಮಾದಿಗಳೂ ಅವರವರ ಮನೆಗಳಲ್ಲಿ ಕೃಷ್ಣನನ್ನು ನಿರೀಕ್ಷಿಸುತ್ತಲಿದ್ದರು. ಅವರೆಲ್ಲರನ್ನೂ ಬಿಟ್ಟು ಕೃಷ್ಣನು ವಿದುರನ  ಮನೆಯ ಕಡೆಗೆ ನಡೆದನು.


ಸಿರಿಮೊಗದ, ಕಿರುಬೆವರಿನ, ಸೂರ್ಯನ ತಾಪಕ್ಕೆ ಬಾಡಿದ ತುಳಸಿಯ ಮಾಲೆಯ ಶ್ರೀರಮಣ ಬರುವುದನ್ನು ವಿದುರ ಕಂಡನು. ಅವನ ಸಂತೋಷಕ್ಕೆ ಪಾರವೇ ಇಲ್ಲದಂತಾಯಿತು. ಏನು ಮಾಡಲೂ ತೋಚಲಿಲ್ಲ. ಸಂಭ್ರಮದಲ್ಲಿ ಕುಣಿದು ಮನೆಯನ್ನೇ ಮುರಿದು ಈಡಾಡಿದನು. ವಿದುರನ ಭಕ್ತಿಯ ಪರಾಕಾಷ್ಠೆ ಇಲ್ಲಿ ಚಿತ್ರಿತವಾಗಿದೆ. ಹಸಿದು ನಿನ್ನ ಮನೆಬಾಗಿಲಿಗೆ ಬಂದರೆ ಹೀಗಾಡುವುದೆ ಎಂದು ಅವನನ್ನು ಸಂತೈಸಿ ಒಳಹೊಕ್ಕನು ಅಸುರಾರಿ. ವಿದುರನಿಗೆ ಮಾತೇ ಹೊರಡುತ್ತಿಲ್ಲ. ಕ್ಷೀರಸಾಗರದಲ್ಲಿಯೇ ಇರುವ ಕೃಷ್ಣ ಅಂದು ಒಂದು ಕುಡಿಕೆ ಹಾಲಿನಲ್ಲಿ ವಿದುರನ ಆತಿಥ್ಯವನ್ನು ಸ್ವೀಕರಿಸಿ ಭಕ್ತರ ಬಂಟನೆನಿಸಿದನು. ನಂತರ ಕುಂತಿಯು ಅಲ್ಲಿಗೆ ಬರಲು ಎದ್ದು ನಮಿಸಿ ಕುಶಲ ವಿಚಾರಿಸಿ ಪಾಂಡವರ ಸಂಗತಿಯನ್ನು ವಿವರಿಸಿದನು. ಅವಳೂ ತನ್ನ ತವರಿನವರ ಕುಶಲ ವಿಚಾರಿಸಿದಳು. ಪಾಂಡವರಂತಹ ಮಕ್ಕಳನ್ನು ಪಡೆದ ನೀನೇ ಪುಣ್ಯವಂತೆಯೆಂದನು. 


ಕೌರವನ ಓಲಗಕ್ಕೆ ಹೋಗಿ ಸಮಯವನ್ನು ಕೇಳಿ ಬಾ ಎಂದು ವಿದುರನನ್ನು ಕಳಿಸಲು ದುರ್ಯೋಧನನು ನಾಳೆ ಬರಲಿ ಎಂದನು. ಮರುದಿನ ಇಡೀ ಆಸ್ಥಾನವನ್ನು ವೈಭವದಿಂದ ಸಿಂಗರಿಸಲಾಗಿತ್ತು. ತನ್ನ ಸಿರಿಯನ್ನು ಕೃಷ್ಣ ಕಾಣಲೆಂಬುದು ಕೌರವನ ಆಶಯ. ಇಡೀ ಆಸ್ಥಾನದಲ್ಲಿ ಎಲ್ಲ ವಿಧದ ಜನರೂ ನೆರೆದರು. ಕಲಾವಿದರು, ಪದ್ಮಿನಿ , ಹಂಸಿನಿ, ಚಿತ್ತಿನಿ ಜಾತಿ ಮೊದಲಾದ ಸುಂದರಿಯರು, ವಿಪ್ರರು, ವೀರರು, ನಾನಾ ವಿಧದ ಸೇವೆ ಮಾಡುವವರು ಎಲ್ಲರೂ ಸೇರಿದರು. ಸೈನ್ಯದ ಪ್ರಮುಖರು, ಭಟರು ವಂದಿ ಮಾಗಧರು ಎಲ್ಲರೂ ಅವರವರ ಸ್ಥಾನದಲ್ಲಿ ಕುಳಿತಿದ್ದರು.


ವಿದುರನ ಮನೆಯಿಂದ ಹೊರಟ ಕೃಷ್ಣ ದಾರಿಯುದ್ದಕ್ಕೂ ಎದುರಾದವರನ್ನು ಸಂತೈಸುತ್ತ ಕೃಪಾಕಟಾಕ್ಷ ಬೀರುತ್ತ ಬಂದನು. ದೇವ, ದೇವರ ದೇವ, ಭಾಗವತಪುರುಷ, ಯಾದವರ ಕುಲತಿಲಕ, ಕ್ಷೀರವಾರಿಧಿ ಶಯನ, ಕಂಜಸಂಭವಪಿತ, ಭೂಭಾರವನ್ನು ಇಳುಹುವ ಉದ್ದೇಶದಿಂದ ಬಂದವ, ಭಕ್ತವತ್ಸಲ, ಸುರರ ಸಲಹಿದ ದೇವ...ಹೀಗೆ ಕೃಷ್ಣನು ಬಂದನು ಎಂಬುದನ್ನು ಹೇಳುವಲ್ಲಿ ಕುಮಾರವ್ಯಾಸ ಅನೇಕ ಬಿರುದಾವಳಿಗಳನ್ನು ಬಳಸಿಕೊಂಡು ಭಕ್ತಿಯ ರಸದಲ್ಲಿ ಈ ಭಾಗವನ್ನು ಮುಳುಗಿಸಿದ್ದಾನೆ.


ಭೀಷ್ಮ, ಕೃಪ, ದ್ರೋಣ ಮೊದಲಾದವರು ಬಂದು ಸ್ವಾಗತಿಸಿದರು. ದುರ್ಯೋಧನನು ಸಿಂಹಾಸನವನ್ನು ಬಿಟ್ಟು ಇಳಿಯದೆ ಎತ್ತಲೋ ನೋಡುತ್ತ ಕುಳಿತಿದ್ದನು. ಕೃಷ್ಣನು ಮೆಲ್ಲನೆ ತನ್ನ ಉಂಗುಷ್ಟದಿಂದ ಭೂಮಿಯನ್ನು ಸ್ವಲ್ಪ ಅಮುಕಿದನು. ಕೂಡಲೇ ಸಿಂಹಾಸನದ ಗೂಟ ಬಿದ್ದು ದುರ್ಯೋಧನನು ಕೃಷ್ಣನ ಕಾಲ ಬಳಿಗೇ ಬಂದು ಬಿದ್ದನು. ನಸುನಗುತ್ತ ಅವನನ್ನು ಎತ್ತಿ ನಾನೇ ಬರುತ್ತಿದ್ದೆನಲ್ಲ ಎಂದು ನುಡಿದಾಗ ನಾಚಿಕೆಯಿಂದ ಕೌರವ ಕೆಂಪಾದನು.


ಕೃಷ್ಣನಿಗೆ ಸತ್ಕಾರವಾಯಿತು. ದುರ್ಯೋಧನನು ಬಿಗಿದುಕೊಂಡೇ ಇದ್ದನು. ಕೃಷ್ಣನು ಕಾರಣವನ್ನು ಕೇಳಲು ಎಲ್ಲ ಬಿಟ್ಟು ವಿದುರನ ಮನೆಗೆ ಹೋಗಿದ್ದರ ಬಗ್ಗೆ ಕೋಪವೆಂದನು. ತೊತ್ತಿನ ಮಗನೆಂದು ವಿದುರನನ್ನು ಹೀಯಾಳಿಸಿದನು.  ಅದುವರೆಗೂ ಸುಮ್ಮನಿದ್ದ ವಿದುರನ ಸಹನೆ ತಪ್ಪಿತು. ಯಾರು ಯಾರ ಮಗ ಎಂದು ಹೇಳುವ ಮೊದಲು ನಿನ್ನ ಅಪ್ಪ ಯಾರೆಂದು ತಿಳಿದುಕೋ ಎಂದನು. ಹಿಂದೆ ಗಾಂಧಾರಿಯನ್ನು ಮೊದಲು ಒಂದು ಅಜದೊಂದಿಗೆ ಮದುವೆ ಮಾಡಲಾಗಿತ್ತು. ಏನೇ ಆಗಲಿ, ಭೀಮನಿಂದ ನಿನ್ನ ರಕ್ಷಣೆಗೆಂದು  ಇದುವರೆಗೂ ಬಿಲ್ಲನ್ನು  ಹಿಡಿದಿದ್ದೆ. ಇನ್ನದರ ಅಗತ್ಯವಿಲ್ಲವೆಂದು ಮುರಿದು ಹಾಕಿದನು. ಕೃಷ್ಣನಿಗೆ ಒಳಗೇ ಸಂತಸವಾಯಿತು. ಧೃತರಾಷ್ಟ್ರ, ಗಾಂಧಾರಿಯರು ಬೆದರಿದರು.


ಕೃಷ್ಣನು ತಾನು ವಿದುರನ ಮನೆಗೆ ಹೋದದ್ದನ್ನು ಸಮರ್ಥಿಸಿಕೊಳ್ಳುವನು. ಊಟ ಮಾಡಿದರೆ ಪ್ರಿಯರಲ್ಲಿ ಅಥವಾ ವಿಬುಧರಲ್ಲಿ ಮಾಡಬೇಕು. ನೀನು ಪ್ರಿಯನೂ ಅಲ್ಲ. ವಿಬುಧ ಮೊದಲೇ ಅಲ್ಲ. ಹಗೆಗಳಲ್ಲಿ ಉಣಿಸು ಸಲ್ಲದು. ಈಗ ತಾನು ಪಾಂಡವರ ಕಡೆ ಇರುವುದರಿಂದ ಅವರ ಹಗೆಗಳು ತನಗೂ ಹಗೆಗಳೇ ಆಗುವರು. ಇದು ರಾಜನೀತಿಯೆಂದನು. 


ಇದೆಲ್ಲ ಮುಗಿದು ತಾನು ಬಂದ ಕಾರಣವನ್ನು ಹೇಳಲು ಕೃಷ್ಣನು  ಅನುವಾದನು. ಇಡೀ ಸಭೆಯು ಮೈಯೆಲ್ಲ ಕಿವಿಯಾಗಿ ಕುಳಿತಿತು.


(ನಮ್ಮ 'ಕನ್ನಡ ಸಂಪದ'ದಲ್ಲಿ ಮೂಡಿಬರುತ್ತಿರುವ ಬರಹಗಳು 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.com ನಲ್ಲಿಯೂ ಲಭ್ಯವಿದೆ. ನಮಸ್ಕಾರ)

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ