ಭಾರತಕಥಾಮಂಜರಿ78
ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ
ಉದ್ಯೋಗ ಪರ್ವ - ಒಂಭತ್ತನೆಯ ಸಂಧಿ
ಕೊಡುನೆಲನ ಕೇಡುಗರ ಮಾತಿಂ
ಗೊಡಬಡದಿರಂತಕನ ನಗರಿಗೆ
ನಡೆಯಬೇಡೆಮ್ದಸುರರಿಪು ಕೌರವನನುರೆ ಜರೆದ
ಪಾಂಡವರಿಗೆ ಸಲ್ಲಬೇಕಾದ ನೆಲವನ್ನು ಕೊಡು, ಕೇಡುಗರ ಮಾತಿಗೆ ಸಮ್ಮತಿಸಿ ಯಮನಗರಕ್ಕೆಹೋಗಬೇಡ ಎಂದು ಶ್ರೀಕೃಷ್ಣನು ಕೌರವನನ್ನು ಜರೆದನು.
ಅವಧಿ ಸವೆದುದು ಪಾಂಡವರು ನಿ
ನ್ನವರು ವನವಾಸ ಪ್ರಯಾಸದೆ
ನವೆದರವದಿರ ಕೂಡಿ ಬದುಕುವುದಧಿಕ ಗುಣ ನಿನಗೆ
ಅವನಿಯರ್ಧವನೀವುದೀಯ
ಧ್ರುವದ ಬಾಳಿಕೆಯೊಳಗೆ ಪುರುಷಾ
ರ್ಥವನು ಸಂಚಿಸೆ ಕಲಿಯಬೇಹುದು ನೃಪತಿ ಕೇಳೆಂದ ೧
ಅರಸುತನ ತನಗಧಿಕವಾಗುತೆ
ಬರಬರಲು ಕಣ್ಣಾಲಿಗಳು ತರ
ಹರಿಸಿ ಕಾಣವು ವರ್ತಮಾನದ ನೃಪರ ಬಳಕೆಯಿದು
ಸಿರಿಯ ಮದವೆಂಬಧಿಕ ತಾಮಸ
ದೊರಕಿದಾಗಳೆ ನೀತಿಕಾರರ
ಪರಮ ವಚನಾಂಜನದಿನುಜ್ವಲಿಸುವುದು ನಯವೆಂದ ೨
ಕೋಶ ಬಲ ತಳತಂತ್ರ ಹೆಚ್ಚಿದ
ದೇಶ ದುರ್ಗವಮಾತ್ಯ ಮಿತ್ರಮ
ಹೀಶಜನವೆಂಬಿದುವೆ ಕೇಳ್ ಸಪ್ತಾಂಗ ಸನ್ನಾಹ
ಈಸು ನಿನಗುಂಟಿಲ್ಲ ಮಿತ್ರಮ
ಹೀಶರೆಂಬುದು ಕೊರತೆ ಪಾಂಡವ
ರಾ ಸಹಾಯವು ಬರಲು ಬಳಿಕಿದಿರಿಲ್ಲ ನಿನಗೆಂದ ೩
ಹೇಳಿದೀ ಸಪ್ತಾಂಗದೊಳಗೊಂ
ದೇಳಿ ದಿಟವಾಗಿರ್ದ ನೃಪತಿಯ
ಬಾಳಿಕೆಗೆ ಸಂದೇಹವರಿಯಾ ರಾಜನೀತಿಗಳ
ಹೇಳಲಮ್ಮುವರಿಲ್ಲ ಹಿತವನು
ಹೇಳಿದೊಡೆ ಕೈಕೊಳ್ಳೆ ಕುರುಕುಲ
ಮೌಳಿ ನಯದೊಳು ನಡೆಯಕಟ ನೀನೆಂದನಸುರಾರಿ ೪
ಸಾಮವೆಂಬುದು ರಾಜನೀತಿಗೆ
ತಾ ಮನೋಹರ ರೂಪು ಬದುಕುವ
ಭೂಮಿಪಾಲರ ವಿನುತ ವಿಭವಕೆ ಬೀಜ ಮಂತ್ರವಿದು
ಸಾಮ ತಪ್ಪಿದ ಬಳಿಕ ನೀತಿ ವಿ
ರಾಮವಾಗದೆ ಬಿಡದು ದಂಡದ
ಸೀಮೆಯೆಂಬುದುಪಾಯದೊಳು ಸಾಮಾನ್ಯ ತರವೆಂದ ೫
ಮಾಡಿದಪಕಾರಂಗಳನು ಮರೆ
ದಾಡರವರತಿಮೋಹದೊಳು ನೀಂ
ಕೂಡಿ ಬದುಕುವ ನುಡಿಯ ನುಡಿವರು ನಮ್ಮ ಮನಮೆಚ್ಚಿ
ಕಾಡಿನೊಳಗಾಡಿದರು ದುಃಖವ
ತೋಡಿದರು ನೀನವರಿಗುಚಿತವ
ಮಾಡಿ ನಾಡನು ಕೊಡುವುದೆಂದನು ದಾನವಧ್ವಂಸಿ ೬
ವಿದುರನುತ್ಸವ ಕೃಪನ ಸಮ್ಮುದ
ನದಿಯ ಮಗನೊಲವಂಧನೃಪನ
ಭ್ಯುದಯ ಕೇಳೆಂದಸುರರಿಪು ನಯ ನುಡಿಯ ಗಡಣಿಸಲು
ಮದದ ಮೈಗಾಣಿಕೆಯ ಮನ ಲೇ
ಪದ ಮಹಾಖಳನಡ್ಡ ಮೊಗವಿಡ
ಲುದಧಿಯೊಳಗದ್ದಂತೆ ಮೌನದೊಳಿದ್ದುದಾಸ್ಥಾನ ೭
ಕಳಕಳಿಕೆ ತಗ್ಗಿದ ಸಭಾಸ್ಥಳ
ದೊಳಗೆ ಸಿಂಹಧ್ವನಿಯೊಳವನಿಪ
ಕುಲ ಕುಠಾರನು ಪರಶುರಾಮನು ನುಡಿದನರಸಂಗೆ
ಎಲೆ ಸುಯೋಧನ ಕೃಷ್ಣರಾಯನ
ನಳಲಿಸದಿರೈ ಲೋಭವತಿ ವ
ಗ್ಗಳದ ನಿರ್ಬಂಧವು ನಯಜ್ಞರಿಗುಚಿತವಲ್ಲೆಂದ ೮
ದಿವಿಜರಿದಿರಲ್ಲೆಂದು ದಂಭೋ
ದ್ಭವನು ನರನಾರಾಯಣಾಖ್ಯರ
ನವಗಡಿಸಿ ಮುರಿವಡೆದು ಕೆಟ್ಟನು ಗಾಢಗರ್ವದಲಿ
ಅವರೊಳರ್ಜುನ ನರನು ಯದುಸಂ
ಭವನು ನಾರಾಯಣನು ಬಿಡುಪಾಂ
ಡವರ ವೈರವನೆಂದು ಭಾರ್ಗವ ನುಡಿದನರಸಂಗೆ ೯
ತಪ್ಪಿನುಡಿಯನು ಪರಶುರಾಮನು
ದಪ್ಪವಿದು ಲೇಸಲ್ಲ ನೀ
ನೊಪ್ಪಿಸುವುದರ್ಧಾವನೀತಳವನು ಸರಾಗದೊಳು
ತಪ್ಪಿನುಡಿದೊಡೆ ಗರುಡದೇವನ
ದಪ್ಪವನು ಹರಿ ಸೆಳೆದು ಬಿಸುಡನೆ
ಒಪ್ಪಿ ತಾಗದಿರೆಂದು ನುಡಿದನು ಕಣ್ವನರಸಂಗೆ ೧೦
ಅಹುದು ಕಣ್ವನ ಮಾತು ಕೃಷ್ಣನ
ಮಹಿಮೆ ಘನವಿದನರಿದುಗರ್ವ
ಗ್ರಹವಿಡಿದು ಮರುಳಾಗದಿರು ಮುನ್ನೋರ್ವಗಾಲವನು
ಬಹಳ ಗುರುದಕ್ಷಿಣೆಗೆ ತೊಳಲಿದು
ಮಹಿಯೊಳೆಲ್ಲಿಯು ಘಟಿಸದಿರಲವ
ನಹವ ಮುರಿದನು ಬಳಿಕ ವಿಶ್ವಾಮಿತ್ರ ಮುನಿಯಂದು ೧೧
ನಿಮ್ಮ ಪೂರ್ವ ಯಯಾತಿ ನಾಕದೊ
ಳೆಮ್ಮವೋಲಾರುಂಟು ಜಗದೊಳು
ಧರ್ಮಪರರೆನೆ ಸುರರು ಹಗರಿಕ್ಕಿದರು ಹೆಡತಲೆಗೆ
ಧಮ್ಮಪತ ಹುಲುವಟ್ಟೆಯೆನಿಸುವ
ಹಮ್ಮಿನೊಳು ಕೆಡಬೇಡ ನೀತಿಯ
ನೆಮ್ಮಿದವ ಕೆಡನೆಂದು ನಾರದ ನುಡಿದನರಸಂಗೆ ೧೨
ಅವನಿಪತಿ ಕೇಳಾವು ಪಾಂಡವ
ರವರು ಬನದೊಳು ಕಂದಮೂಲವ
ನಿವರು ಕೊಳ್ವರು ಋಷಿಗಳಿಗೆ ಹಂಗೇಕೆ ಭೂಮಿಪರ
ಇವರದಾವನ ಪಕ್ಷಪಾತ
ವ್ಯವಹರಣೆಯವರಲ್ಲ ಕೇಳಿಂ
ದಿವರ ನುಡಿಗಳನೆಂದು ನುಡಿದನು ಮತ್ತೆ ಮುರವೈರಿ ೧೩
ಬೆರಳ ಮೀಸೆಯೊಳಿಡುತೆ ಕಿರುನಗೆ
ವೆರಸಿ ಕರ್ಣಾದಿಗಳ ವದನವ
ತಿರುಗಿ ನೋಡುತೆ ಹರಿಯ ನುಡಿಗಳ ಕಿವುಡುಗೇಳುತ್ತೆ
ಮರುಳುತನದಾಳಾಪವೇತಕೆ
ಮುರಮಥನ ಪಾಂಡವರ ಕಥನವ
ನೊರೆಯದಿರು ಕರ್ಣಕ್ಕೆ ಶೂಲವಿದೆಂದನಾ ಭೂಪ ೧೪
ಮಾವ ಮೊದಲು ಸಹಾಯ ಮಧ್ಯದೊ
ಳಾವಿರಾಟನ ಸಖ್ಯ ಕಡೆಯೊಳು
ನೀವು ಮಮ ಜೀವಹಿ ಎಂಬಿರಿ ನಿಮ್ಮ ಪಾಂಡವರ
ನಾವು ಕಡೆಯೊಳು ಹೊರಗು ನಮಗಿ
ನ್ನಾವ ಭೂಪರ ಸಖ್ಯವಿರ್ಪುದು
ದೇವ ನಾಚಿಸಬೇಡ ಸಂಧಿಯ ಮಾತ ಮರೆಯೆಂದ ೧೫
ಅವರು ನಮ್ಮೊಳು ಸರಸವಾಡುವ
ಹವಣಿದಲ್ಲದೆ ರಾಜಕಾರ್ಯವ
ನೆವಗೆ ಯೋಚಿಸಿ ಕಳುಹಿದಂದವೆ ಮೆಚ್ಚೆ ನಾನಿದನು
ಬವರ ಬೇಕೇ ಬೇಡಿಕೊಳ್ವುದು
ಅವನಿಗಿವನಿಯ ಮಾತ ನೀವಾ
ಡುವರೆ ಪಾಂಡವರೇಕೆ ನಾವೇಕೆಂದು ಖಳ ನುಡಿದ ೧೬
ಮಾಡು ಸಂಧಿಯ ನೆಮ್ಮವಚನವ
ಕೋಡದಿರು ಸವಿಮಾತುಗಳ ನಿನ
ಗಾಡುವವರಿಗೆ ಚಿತ್ತಗುಡದಿರು ಹಿಸುಣಹೊಗಿಸದಿರು
ನಾಡನಾಲಗೆ ಗೆಳೆಯರೆಂದುದ
ಮಾಡದಿರು ಪಾಂಡವ ನೃಪಾಲರ
ಕೂಡಿ ಬಾಳ್ವುದು ಪಥ್ಯ ನಿನಗೆಂದಸುರರಿಪು ನುಡಿದ ೧೭
ಅವರಿಗಿಂದ್ರ ಪ್ರಸ್ಥದೊಳು ರಾ
ಜ್ಯವನು ಕುಳದೊಡನಿತ್ತು ನೀ ಪಾಂ
ಡವ ಪ್ರತಿಷ್ಠಾಚಾರ್ಯನೆಂಬೀ ಬಿರುದ ಧರಿಸಿದೊಡೆ
ಅವನಿಯೊಳು ನಿನ್ನೊಡನೆ ತಲೆದೋ
ರುವ ನೃಪಾಲಕರಿಲ್ಲ ನುಡಿಗಳು
ಕಿವಿಗೆ ಕರ್ಕಶವೀಗಳಾದರೆ ಮುಂದೆ ಲೇಸೆಂದ ೧೮
ನೀತಿಗಾಲಯ ನಿಮ್ಮ ಕುಲ ವಿ
ಖ್ಯಾತಿಗಿದು ನೆಲೆ ಸಕಲ ಸೌಖ್ಯ
ವ್ರಾತಕಿದು ಸದ್ಬೀಜವೆನಿಸಿತು ಕೌರವಾನ್ವಯವು
ಭೂತಳದ ಲೋಲುಪತೆಯೊಳು ಕುಲ
ಘಾತುಕರು ತಾವೆಂಬ ಕೀರ್ತಿಗೆ
ಯೋತು ನೀಂ ನೆಲೆಯಾಗದಿರು ಕೇಳೆಂದನಸುರಾರಿ ೧೯
ಧರೆಯನೃಪರಿಗೆ ಹಸ್ತಿನಾಪುರ
ದರಮನೆಯ ಬಾಗಿಲೊಳು ಸಮಯವು
ದೊರಕಲಂತದು ಪುಣ್ಯವೆಂಬೀ ಸಾರ್ವಭೌಮತೆಯ
ಸಿರಿಗೆ ಪಾಂಡವರನ್ಯರಾದೊಡೆ
ಮೆರೆಯಲರಿವುದೆ ನಿನ್ನ ಸಿರಿ ಕಾ
ತರಿಗತನವನು ಮಾಣು ಕೇಳೆಂದಸುರರಿಪು ನುಡಿದ ೨೦
ಯಮಜ ನಿನಗೊಳ್ಳಿದನು ಪಾರ್ಥನ
ಮಮತೆ ನಿನ್ನೊಳು ಹಿರಿದು ಭೀಮನ
ತಮದ ನುಡಿ ಹಿಂಗಿದುದು ನಕುಲನು ನಿನ್ನೊಳೆರಡರಿಯ
ತಮತಮಗೆ ತಮ್ಮೈವರುರೆ ನಿ
ನ್ನಮಲ ವಚನವ ಹಾರುತಿಹರು
ಭ್ರಮಿತತನವನು ಮಾಡದಿರು ಸೋದರರ ಸಲಹೆಂದ ೨೧
ಧರ್ಮಜನ ಕಡುಮೋಹವೆಂಬುದು
ನಿಮ್ಮ ಚರಣದೊಳಿರಲಿ ಭೀಮನ
ಹಮ್ಮುತಮ್ಮೊಳಗಿರಲಿ ಫಲುಗುಣನೊಲುಮೆಯಂತಿರಲಿ
ಎಮ್ಮ ಭೂಮಿಯೊಳರೆಯ ಬೇಡುವ
ರೆಮ್ಮ ಬಂಧುಗಳಲ್ಲ ಸಂಧಿಗೆ
ತಮ್ಮನೊಡಬಡನೆಂದು ದುಶ್ಯಾಸನನ ನೋಡಿದನು ೨೨
ಬಂಧು ಕೃತ್ಯದ ಮಾತು ಸೂರ್ಯಂ
ಗಂಧಕಾರವು ಸೇರುವುದೆ ನಿ
ರ್ಬಂಧದಲಿ ನೀವೇಕೆ ನುಡಿವಿರಿ ರಾಜಕಾರಿಯವ
ಸಂಧಿಯಾಗದು ಪಾಂಡವರ ಸಂ
ಬಂಧ ನಮಗೇಕೆನುತ ಕರುಣಾ
ಸಿಂಧುವಿನ ಮೊಗ ನೋಡಿ ದುಶ್ಯಾಸನನು ಗರ್ಜಿಸಿದ ೨೩
ಕೆಡಿಸದಿರು ಧೃತರಾಷ್ಟ್ರ ಕುಲದೊಳು
ಕೊಡಲಿಗಾವನು ಹೆತ್ತು ವಂಶವ
ಕೆಡಿಸಿ ಕಳೆದಡೆ ಹಾನಿವೃದ್ಧಿಗಳೆಲ್ಲ ನಿನಗಹುದು
ನುಡಿಗೆ ನೀಂ ಮತಗುಡದೆ ಗರ್ವದ
ಗಡಣದೊಳು ಮುಂದರಿಯದವದಿರ
ನೊಡಬಡಿಸಿ ಪಾಂಡವರ ಸ್ವಾಮ್ಯವನೀಸಿಕೊಡಿಯೆಂದ ೨೪
ಈ ಹರಿಯ ನುಡಿಗೇಳು ದೈವದ
ಮೋಹ ತಪ್ಪಿದ ಬಳಿಕ ಸುಭಟರ
ಸಾಹಸದೆ ಹುರುಳಿಲ್ಲ ನಂಬದಿರೆಮ್ಮ ಬಲುಹುಗಳ
ಆ ಹಿತವ ನೀಡಾಡದಿರು ವೈ
ದೇಹಿಯನು ಸೆರೆಗೆಯ್ದ ಸ್ವಾಮಿ
ದ್ರೋಹಿಯನು ಹೋಲದಿರು ಕೌರವಯೆಂದನಾ ಭೀಷ್ಮ ೨೫
ಹಲಬರಜ್ಞಾನ ಪ್ರವೃತ್ತಿಯ
ಚಲದೊಳಗೆ ಕೈಬಳಸಿ ನರಕದೊ
ಳಿಳಿದ ಕಥೆ ಹಲವೆಂದು ಗೌತಮ ಕಶ್ಯಪಾದಿಗಳು
ತಿಳಿದು ನೀತಿಯ ಪದವ ತಂತ
ಮ್ಮೊಳಗೆ ಕೌರವಹರುಹೆ ಮುನಿಸಂ
ಕುಲದ ವಚನವ ಕಿವುಡುಗೇಳುತೆ ಮೊಗವ ತಿರುಹಿದನು ೨೬
ವ್ಯಾಸ ವಚನವನಾ ವಸಿಷ್ಠ ಮು
ನೀಶನೊಳುನುಡಿಗಳನು ಕೋವಿದ
ಕೌಶಿಕನ ಕಥನವನು ಕೈಕೊಳ್ಳದೆ ಸುಯೋಧನನು
ದೇಶವನು ಪಾಂಡವರಿಗೀವ
ಭ್ಯಾಸವೆಮ್ಮೊಳಗಿಲ್ಲನೀತಿಯ
ರಾಶಿಯಾನಹೆನೆನ್ನನೊಡಬಡಿಸುವಿರಿ ನೀವೆಂದ ೨೭
ಮಗನೆ ಸೋಮಾನ್ವಯವ ನೀರೊಳು
ಹೊಗಿಸದಿರು ದನುಜಾರಿ ಮುನಿದೊಡೆ
ತೆಗೆಯದಿರನೆಮ್ಮಸುಗಳನು ಪಾಂಡವರ ಸಂತೈಸು
ವಿಗಡತನವಿದು ವಿರಸವಾಹಿಂ
ದೊಗೆದ ಜೂಜಿನಗಸಣಿ ಸಾಕೈ
ಮಗನೆ ಬೇಡಿದೆನೆಂದು ತಲೆವಾಗಿದಳು ಗಾಂಧಾರಿ ೨೮
ಧರ್ಮವಶದೊಳು ದೈವವಿಹುದಾ
ಧರ್ಮವಶದೊಳು ಜಯದ ಜೋಡಣೆ
ಧರ್ಮವಶದೊಳು ಸಕಲ ಸತ್ಯಜ್ಞಾನ ಸುಖವಿಹುದು
ಧರ್ಮವನು ಪಾಲಿಸುವೊಡಾ ಸ
ದ್ಧರ್ಮಿಗಳು ಪಾಂಡವ ನೃಪಾಲರೊ
ಳುಮ್ಮದವ ಬಿಡು ಮಗನೆಯೆಂದನು ನೃಪಗೆ ಧೃತರಾಷ್ಟ್ರ ೨೯
ಮಾತೃವಚನವ ಮೀರಿ ನಿಮ್ಮಯ
ತಾತನಾಜ್ಞೆಯ ನೂಕಿ ಹಿರಿಯರ
ಮಾತುಗಳನತಿಗಳೆದು ಹಿತವರ ಮಾತ ಮನ್ನಿಸದೆ
ನೀತಿಯೊಳು ಮನಗುಡದೆ ಘನಗ
ರ್ವಾತುರದೊಳವನಿಪರು ಬಳಸಲು
ಮಾತು ಹಲವರೊಳೇನು ಕೆಡದಿರನೆಂದನಾ ದ್ರೋಣ ೩೦
ನೆಲನ ಬೇಡುವ ಪಾಂಡವರ ಭುಜ
ಬಲದೊಳಗೆ ಕುಂದಿಲ್ಲ ನೀತಿಯ
ತಿಳುಹಲೈತಂದಸುರರಿಪು ಸಾಮಾನ್ಯ ಬಲನಲ್ಲ
ಇಳೆಯೊಳರ್ಧವನೊಪ್ಪುಗೊಡು ಯದು
ಕುಲ ಲಲಾಮನ ನೇಮವನು ನೀಂ
ಸಲಿಸು ಕೆಡಿಸದಿರೀ ವಿಲಾಸವನೆಂದನಾ ದ್ರೋಣ ೩೧
ಹಲವು ಹೊಲ್ಲೆಹಗಳನು ಪಾಂಡವ
ರೊಳಗೆ ನೆನೆದೆನು ಮುಚ್ಚು ಮರೆಯೇ
ನಿಳೆಯ ಲೋಭದೊಳವರ ಕೆಡಿಸುವ ಹದನ ನೆಗಳಿದೆನು
ನೆಲನ ಕೊಂಡೆನು ಜೂಜುಗಾರರ
ವಿಲಗದೊಳು ಪಾಂಡವರ್ಗೆ ಪುನರಪಿ
ಹಳುವವೇ ಶರಣಲ್ಲದುಂಟೇ ಕೃಷ್ಣ ಹೇಳೆಂದ ೩೨
ಸಲುವ ರಾಜ್ಯದ ಭಾಗವನು ನಿನ
ಗೊಲಿದು ಬಿಡುವರು ಗ್ರಾಮವೈದನು
ಸಲಿಸಿ ಪಾಂಡುಕುಮಾರರನು ನಿನ್ನತ್ತ ಮಾಡಿದಡೆ
ಕುಲದ ಕೊಲೆ ತಪ್ಪುವುದು ಸದ್ಗತಿ
ಸುಲಭವಪ್ಪುದು ನಿನ್ನ ಮನದೊಳು
ಹೊಳೆದ ಹದನನು ಹೇಳೆನುತೆ ನೇಮಿಸಿದನಸುರಾರಿ ೩೩
ಕೊಡು ಕುಶಸ್ಥಳವನು ವೃಕಸ್ಥಳ
ಪೊಡವಿಯಾವಂತಿಯನು ಕುಳವನು
ಕೊಡಿಸಿ ಕಳೆ ಸಿರಿಕರಣದವರಲಿ ವಾರಣಾವತವ
ಕೊಡು ನಿನಗೆ ಮನ ಬಂದುದೊಂದನು
ನಡೆಸಿ ಕೊಡುವೆನು ಪಾಂಡವರನವ
ಗಡೆಯತನ ಬೇಡಿನ್ನು ಕೇಳೆಂದಸುರರಿಪು ನುಡಿದ ೩೪
ಪರಮ ಪುರುಷನು ಕೃಷ್ಣರಾಯನು
ಕುರುಕುಲದ ಹಿರಿಯನು ನದೀಸುತ
ಪರಮಧನ ಸಮ ಚಾಪವಿದ್ಯನು ದ್ರೋಣನವರಿಂದ
ಧರಣಿಪತಿ ಬಲುಹುಳ್ಳವರು ನಿ
ನ್ನರಮನೆಯಲುಂಟೇ ವಿಚಾರಿಸು
ಮರುಳುತನ ಬೇಡಿವರ ನುಡಿಗಳನೆಂದನಾ ವಿದುರ ೩೫
ಬೇಡಿದೊಂದೊಂದೂರು ನಮ್ಮಯ
ನಾಡ ತಲೆಮಂಡೆಗಳು ರಾಜ್ಯದ
ರೂಢಿ ಐದೂರುಗಳ ಬಳವಿಗೆ ಹಸ್ತಿನಾನಗರ
ಬೇಡಲರಿವನು ಮಾನನಿಧಿ ಕೊಂ
ಡಾಡಲೇತಕೆ ಧರೆಯ ನೀರಡಿ
ಮಾಡಿಕೊಂಡು ಮಹಾತ್ಮ ನಿನಗಂಜುವೆನು ನಾನೆಂದ ೩೬
ಕರೆದು ಮೂರಡಿ ನೆಲನ ಧಾರೆಯ
ನೆರೆದ ಬಲಿ ತಳಕಿಳಿದನೆನ್ನೀ
ಧರೆಯೊಳೈದೂರುಗಳನಿತ್ತೆನಗಾವ ವಿಧಿಯಹುದೋ
ಪರಮಪುರುಷನು ನೀನು ನಿನಗಾಂ
ಶರಣು ಹೊಕ್ಕೆನು ಬಂದ ಪಥದಲಿ
ಮರಳಿ ಬಿಜಯಂಗೈವುದೆಂದನು ನಗುತ ಕುರುರಾಯ ೩೭
ಸಲಲಿ ನೀಂ ಪಾಂಡವರೊಳೆತ್ತಿದ
ಚಲದ ಬಳವಿಗೆಯಕಟ ನಿನ್ನಯ
ಬಳಗ ಬದುಕಲಿ ಮತ್ತೆ ನವೆಯಲಿ ಪಾಂಡುನಂದನರು
ಜಲಧಿಮೇರೆಯ ಮಹಿಯೊಳೊಂದೇ
ಸ್ಥಲವನೈವರಿಗೀವುದೆನೆ ಕಳ
ವಳಿಗನವಗಡಿಸಿದನು ಜರೆದನು ಜಗದ ಪಾಲಕನ ೩೮
ನೆಲದೊಳರ್ಧವನೀವುದಿಲ್ಲಾ
ಸ್ಥಳವನೈದನು ಮುನ್ನ ಕೊಡೆನೆ
ನ್ನಿಳೆಯ ಭಾಗವನೀಸು ಕೊಟ್ಟೊಡೆ ನಿನ್ನ ಮೇಲಾಣೆ
ನೆಲನ ಕಡೆಯೊಳು ಮುಳ್ಳುಮೊನೆಯು
ಚ್ಚಳಿಪ ಧರಣಿಯನಿತ್ತೆನಾದಡೆ
ಬಳಿಕ ನೀಂ ನಗು ಹೋಗು ಬವರವ ಕೊಂಡು ಬಾಯೆಂದ ೩೯
ದನವ ಕಾದುದು ತೀರಿತೇ ಬನ
ಬನವ ತೊಳಲ್ವುದು ಕಡೆಯನೈದಿತೆ
ಮುನಿಗಳನು ಬೋಳೆಗಳನೆರಗಿಸಿಕೊಳ್ವುದನು ಬಿಸುಟು
ವನನಿಧಿಯನೆಡೆಗೊಂಡು ನಡುಹಾ
ವಿನೊಳು ಹಕ್ಕೆಯನುಡುಗಿ ನಮ್ಮೊಳು
ಮನಕತವ ನೀ ತಿಳುಹಲೋಸುಗ ಬಂದೆ ದಿಟವೆಂದ ೪೦
ತಾಗುವಪಕೀರಿತಿಗೆ ಹೇಸುವ
ರಾಗಿ ಸತ್ಯವ ಕಾದು ಹಳುವವ
ಭೋಗಿಸಿದೊಡದು ಕುಲಕೆ ಕುಂದೇ ಪಾಂಡುನಂದನರು
ನೀಗಿದರು ವನವಾಸವನು ಸರಿ
ಭಾಗದವನಿಯ ಕೊಳ್ವ ಚೆಲವನು
ಹೋಗ ಬಿಡುವನೆ ಭೀಮನೆಂದನು ಮತ್ತೆ ಮುರವೈರಿ ೪೧
ಹಗೆಯ ಸಂಧಿಯ ನೆವದೊಳೆಮ್ಮಯ
ಬಗೆಯನರಿಯಲು ಬಂದೆ ಯಾದವ
ರಗಡುತನ ನಮ್ಮಲ್ಲಿ ಸಲ್ಲದು ಸಾಕು ನುಡಿಯದಿರು
ಹಗೆಯನಾದಡೆ ಕೊಂಡು ಬಾ ನಡೆ
ಮಗುಳ್ದೊಡರಿಯಲು ಬಹುದು ನೀಂ ಹರಿ
ಹುಗಿಲು ಮಾಡುವ ಮಂತ್ರ ಸಾಕಿನ್ನೆಂದನವನೀಶ ೪೨
ಖತಿವಿಡಿದು ಮನದೊಳಗೆ ಮಣಿಯದ
ಮತಗುಡದ ಫಣಿಕೇತನನ ಕಂ
ಡತುಳ ಬಲ ಗುರು ಸಿಂಧು ತನಯಾದಿಗಳ ಮೊಗನೋಡಿ
ವ್ಯತಿಕರವನಿವ ಬಯಸಿ ಕದನವ
ನತಿಮಥನದೊಳು ಬಗೆದೊಡೀತನ
ಸತಿಯ ಕಿವಿಯೋಲೆಗಳು ಸ್ಥಿರವಲ್ಲೆಂದನಸುರಾರಿ ೪೩
ಎಲವೊ ದ್ರುಪದನ ಮಗಳ ಮದುವೆಗೆ
ನೆಲನು ಬೆಸಲಾದಂತೆ ನೀಂ ಮೊದ
ಲಿಳೆಯ ರಾಯರು ನೆರೆದರಂದಿನ ಬಿಲ್ಲ ನೆಗಹುವೊಡೆ
ಉಲಿದು ಹೋರಿದು ಕೆಡೆದರಂದತಿ
ಬಲರು ಧನುವನು ತೊನೆದು ತೆಗೆದ
ಗ್ಗಳದ ಯಂತ್ರವ ಜಯಿಸನೇ ನರನನುವ ನೀನರಿಯಾ ೪೪
ಅಡವಿಯೊಳು ಪಾಂಡವರ ಬೇಟೆಗೆ
ನಡೆದು ಬಂದೊಡೆ ಮುನಿದು ಖಚರನು
ಹೆಡೆಮುಡಿಯ ಬಿಗಿದಡರಿದನು ಗಗನವನು ಜಗವರಿಯೆ
ಬಿಡಿಸಿದನಲಾ ನರನು ಭೀಮನು
ಕಡಿವ ತಲೆಯಿದೆ ನಿನ್ನ ಕೊರಳೊಳು
ಸುಡುಸುಡೆಲವೋ ಪಾಪಿ ಕೌರವ ನುಡಿಯಲೇಕೆಂದ ೪೫
ತುರುಗಳನು ಹಿಡಿದುಯ್ಯಲಾಕ್ಷಣ
ವರಸಿಬಂದನು ಒಂದು ರಥದೊಳು
ತುರುವ ಮರಳಿಚಿ ತರುಬಿ ನಿನ್ನುಮನೀ ಸಮರ್ಥರನು
ಮುರಿದು ಕೆಡಹಿದನೊಂದು ಬಾಣದೆ
ಕೊರೆದು ಕೊಂದನು ನಿನ್ನ ಬಲವನು
ಬರಿಯ ಹೆಮ್ಮೆಯ ಕೆದರುವರೆ ನಮ್ಮೊಡನೆ ಹೇಳೆಂದ ೪೬
ಎಲವೊ ನಿನ್ನಯ ಭಂಗ ಕೋಟಿಗ
ಳಳತೆಗೆಯ್ದವು ಕೈದುಗೊಂಡೊಡೆ
ಯುಳಿಯಲಾಪವರುಂಟೆ ಕುಂತಿಯ ಮಕ್ಕಳಿದಿರಿನೊಳು
ಗಳಹತನವನು ಮಾಡದಿರು ಕುರು
ಕುಲವ ಕೆಡಿಸದಿರಕಟ ಕುಟಿಲನೆ
ತಿಳಿಯೆ ಕೈಸಾರಿದೆನು ತೊಡಕಿದೊಡರಿಯದಿರೆಯೆಂದ ೪೭
ತುರುಗಿ ಕಬ್ಬಕ್ಕಿಗಳು ಗೂಡಿನೊ
ಳೆರಗುವಂತಿರೆ ಪಾರ್ಥನಂಬುಗ
ಳುರುಬಿ ನಿನ್ನಯ ದೇಹದಲಿ ಮುರಿದಾಗ ಸೈರಿಸದೆ
ಒರಲಿ ನೀಂ ಕೆಡೆದಾಗ ಸಂಧಿಯ
ಮುರಿದ ವಿಧಿಯನು ಬಳಿಕ ನೆನೆಯದೆ
ಬರಿದೆ ತೀರುವುದಲ್ಲ ಖಳ ಕೇಳೆಂದನಸುರಾರಿ ೪೮
ಕಿವಿಗೆ ಕಠಿಣವು ನಮ್ಮ ನುಡಿಯೆಂ
ದವನಿಪತಿ ಮುಖದಿರುಹದಿರು ರೌ
ರವದ ಸಂಗ್ರಾಮದೊಳು ಕಡುಗಿದ ಪವನನಂದನನ
ತಿವಿದ ಕಿವಿಗಳ ಗದೆಯ ಹೊಯ್ಲಿನ
ಕವಳವನು ದಿಟವೆಂತು ಸೈರಿಸ
ದವಮತಿಗೆ ನೀಂ ಗಂಡನಹೆ ಮರುಳರಸ ಕೇಳೆಂದ ೪೯
ಸಿಡಿಲು ಕುರಿಗಳನುರುಬಿ ತಿವಿವಂ
ತೆಡಬಲನನೊಡೆಹಾಯ್ದು ಪಲ್ಲವ
ಗೊಡೆಯ ಮುರಿದೀಡಾಡಿ ಬಿರುದಿನ ಹಳವಿಗೆಯ ಕಡಿದು
ತೊಡೆಯ ಖಂಡಿಸಿ ನಿನ್ನ ಮಕುಟವ
ಹುಡಿಯೊಳೊರಸದೆ ಬರಿದೆ ಬಿಡುವನೆ
ಜಡಿದನಾದಡೆ ಭೀಮನಾತನ ಬಲುಹ ನೀನರಿಯಾ ೫೦
ಲೀಲೆಯೊಳು ನೀನಖಿಳರಾಯರ
ನೋಲಗಿಸಿಕೊಳಲಲಸಿ ಕಾಲನ
ಕಾಲಕೆಳಗೋಲೈಸುವುದು ಕುಂದಲ್ಲವೇ ನಿನಗೆ
ಸೋಲ ತಪ್ಪದು ಭೀಮ ಪಾರ್ಥರ
ಕೋಲು ಕೊಂಕುವುದಲ್ಲ ಧರಣಿಯ
ಲೋಲುಪತೆಯಿಂದಳಿಯಬೇಡೆಂದಸುರರಿಪು ನುಡಿದ ೫೧
ನರನ ಗಾಂಡೀವಪ್ರತಾಪ
ಸ್ಫುರಿತ ನಾರಾಚ ಪ್ರಚಂಡೋ
ತ್ಕರ ದವಾನಲನಿಂದವೀ ಕೌರವ ಕುಲಾರಣ್ಯ
ಉರಿದು ನಂದದೆ ಮಾಣದಧಿಕರೊ
ಳಿರದೆ ತೊಡಕುವುದಾಗದೆಂಬುದ
ನರಿಯೆಯಾ ನೀನೆಂದು ಜರೆದನು ಕೌರವಾಧಿಪನ ೫೨
ಕಡೆಗೆ ಧೃತರಾಷ್ಟ್ರಾವ ನೀಶನು
ಮಡದಿಸಹಿತವನಾಥನಾಗಿಯೆ
ಕಿಡುವನೆಂಬುದ ಬಲ್ಲೆನಾಂ ಪಾಂಡವರ ಬಾಗಿಲೊಳು
ಪಡಿಗೆ ಪವಮಾನಜನ ಸಮಯವ
ಪಡೆಯದಿಹ ತರುವಾಯ ನಮಗದು
ನಡಿಸಿಕೊಡುವುದು ತಪ್ಪದಕಟಕಟೆಂದನ ಸುರಾರಿ ೫೩
ಮನದ ಸಂಕೇತದೊಳು ದುರ್ಯೋ
ಧನನ ಕಟ್ಟಲು ವಿದುರ ಗಂಗಾ
ತನಯ ಧೃತರಾಷ್ಟ್ರಾವನಿಪರಾಲೋಚಿಸಿದ ಹದನ
ಮನದೊಳರಿದನು ಬಳಿಕ ದುಶ್ಯಾ
ಸನನು ದುರ್ಯೋಧನಗೆಯಿನಿಬರ
ನೆನಹ ಬಿನ್ನಹ ಮಾಡಿದನು ಖಾತಿಯೊಳು ಕಳವಳಿಸಿ ೫೪
ಹೆತ್ತವರು ಹಗೆಯಹಡೆ ನಾವಿ
ನ್ನೆತ್ತ ಸಾರುವೆವಣ್ಣ ದೇವರೆ
ಚಿತ್ತವಿಸಿದಿರೆ ರಾಜಕಾರ್ಯದ ಹದ ವಿಸಂಚಿಸಿತು
ಮುತ್ತಯನ ಕಿರಿಯಯ್ಯನಯ್ಯನ
ಚಿತ್ತಕೊಂಕಿತು ಸಾಕು ನಿಂದಿರೆ
ನುತ್ತೆಯಗ್ರಜ ಸಹಿತವೋಲಗದಿಂದೆ ಪೊರಮಟ್ಟ ೫೫
ಸಂಕ್ಷಿಪ್ತ ಭಾವ
Lrphks Kolar
ಕೃಷ್ಣನು ದುರ್ಯೋದನನಿಗೆ ಸಂಧಿ ಮಾಡಿಕೊಳ್ಳಲು ಉಪದೇಶಿಸಿದ್ದು.
ಪಾಂಡವರ ವನವಾಸದ ಅವಧಿ ಮುಗಿದಿದೆ. ನ್ಯಾಯವಾಗಿ ಅವರಿಗೆ ಸಲ್ಲಬೇಕಾದ ಭಾಗವನ್ನು ಕೊಟ್ಟು ಎಲ್ಲರೂ ಸುಖದಿಂದಿರಿ ಎಂದು ಆರಂಭಿಸಿ ಅಧಿಕಾರ ಮದವು ನಿನ್ನನ್ನು ಈ ರೀತಿ ಮಾಡಿದೆ. ಇದು ಒಳ್ಳೆಯದಲ್ಲ. ಸಪ್ತಾಂಗದಲ್ಲಿ ಮಿತ್ರರ ಸಹಾಯವು ಪಾಂಡವರೊಡನೆಯ ಮಿತ್ರತ್ವದಿಂದ ಪೂರ್ಣವಾಗುವುದು. ಅವರು ನೀನು ಮಾಡಿದ ಅಪರಾಧಗಳನ್ನು ಮರೆತಿರುವರು. ಸಾಮದಲ್ಲಿ ಕೇಳುತ್ತಿರುವುದನ್ನು ಕೊಡು ಎಂದನು. ಎಲ್ಲರೂ ಮೌನವಾಗಿದ್ದರು.
ಕೃಷ್ಣನೊಂದಿಗೆ ಬಂದಿದ್ದ ಮುನಿಗಣದಲ್ಲಿ ಪರಶುರಾಮನು ದುರ್ಯೋಧನನಿಗೆ ಬುದ್ಧಿಮಾತನ್ನು ಹೇಳಿದನು. ಹಾಗೆಯೇ ಕಣ್ವರು, ನಾರದರು ಸಹಾ ಹೇಳಿದರು. ಯಾರ ಮಾತಿಗೂ ಬಗ್ಗಲಿಲ್ಲ.
ದುರ್ಯೋಧನನು ಗರ್ವದಿಂದ ಸಂಧಿಯ ಮಾತನ್ನು ಬಿಡು ಎಂದನು. ಯುದ್ಧ ಮಾಡಿ ಬೇಡಿಕೊಳ್ಳಲಿ. ಶಲ್ಯ, ವಿರಾಟ, ನೀನು ಎಲ್ಲರಿಗೂ ಅವರು ಮೊದಲಿಗರು. ನಾವು ಕಡೆಯವರು ಎಂದು ಚುಚ್ಚಿ ನುಡಿದನು. ಆದರೂ ಕೃಷ್ಣನು ಮನವೊಲಿಸಲು ನೋಡಿದನು. ನಿಮ್ಮಿಬ್ಬರ ಸಿರಿ ಒಂದಾದರೆ ಇಡೀ ಭೂಮಂಡಲದ ಮನ್ನಣೆ ಸಿಗುವುದು ಎಂದನು. ಅರ್ಜುನಾದಿಗಳು ನಿನ್ನನ್ನು ಓಲೈಸುವರು. ಧರ್ಮಜನು ಹಿತವಹನು. ನೀನು ಕುಲಕ್ಕೆ ಕೊಡಲಿಯಾಗಬೇಡ.
ಆದರೆ ಈಗಲೂ ದುರ್ಯೋಧನನು ಒಪ್ಪಲಿಲ್ಲ. ದುಶ್ಶಾಸನನೂ ಅಣ್ಣನ ಪರವಾಗಿ ಗರ್ಜಿಸಿದನು. ಭೀಷ್ಮ, ಕೃಪ, ದ್ರೋಣರು ಹಿತವನ್ನು ನುಡಿಯಹೊರಟರೂ ಪ್ರಯೋಜನವಾಗಲಿಲ್ಲ. ಗಾಂದಾರಿ ಮತ್ತು ಧೃತರಾಷ್ಟ್ರ ಸಹಾ ಹೇಳಿದರು. ಕೇಳಲಿಲ್ಲ.
ಹೋಗಲಿ, ಅವರು ಕೇಳಿರುವ ಐದು ಗ್ರಾಮಗಳನ್ನಾದರೂ ಕೊಡು ಎನಲು ಆ ಗ್ರಾಮಗಳು ತಮ್ಮ ರಾಜ್ಯದ ಶಿಖರಗಳು. ಕೊಡಲಾರೆನೆಂದನು. ಮೂರಡಿಯನ್ನು ಬೇಡಿ ಇಡೀ ನೆಲವನ್ನು ಆಕ್ರಮಿಸಿದ ವಾಮನನ ಅವತಾರವನ್ನು ಹಳಿದನು. ಒಂದಾದರೂ ಗ್ರಾಮವನ್ನು ಕೊಡು ಎಂದು ಕೊನೆಯಲ್ಲಿ ಕೃಷ್ಣ ಕೇಳಲು ಮುಳ್ಳುಮೊನೆಯಷ್ಟು ಜಾಗವನ್ನೂ ಕೊಡಲಾರೆನೆಂದು ಖಡಾಖಂಡಿತವಾಗಿ ನುಡಿದುಬಿಟ್ಟ ದುರ್ಯೋಧನ. ಅಲ್ಲಿಗೆ ಯುದ್ಧ ನಿಶ್ಚಯವಾಯಿತು. ಕೃಷ್ಣನು ಒಳಗೇ ಸಂತಸಪಟ್ಟನು.
ಪಾಂಡವರನ್ನು ಎದುರು ಹಾಕಿಕೊಂಡು ಗೆಲ್ಲುವುದು ಸುಲಭವಲ್ಲ. ಅವರು ವೀರರು. ಧರ್ಮ ಅವರ ಕಡೆಗೆ ಇದೆ. ಹಿಂದೆ ಆದುದನ್ನು ನೆನಪಿಸಿಕೋ. ಭೀಮಾರ್ಜುನರ ಪರಾಕ್ರಮ ಸಿಡಿಲಿನಂತೆ ನಿನ್ನ ಮೇಲೆ ಎರಗುವುದು. ಕೊನೆಯಲ್ಲಿ ನಿನ್ನ ತಂದೆತಾಯಿಯರು ಭೀಮನ ಮನೆಯ ಮುಂದೆ ಅನ್ನಕ್ಕಾಗಿ ನಿಲ್ಲಬೇಕಾಗುವುದು ಎಂದೆಲ್ಲ ಹೇಳಿದನು. ದುಶ್ಶಾಸನನು ಅಣ್ಣನಿಗೆ ನಮ್ಮನ್ನು ಹೆತ್ತವರೇ ಹಗೆಗಳಾದರೆ ಏನು ಮಾಡುವುದು.. ಇಲ್ಲಿರಲು ಸಲ್ಲದು ನಡೆ ಎಂದು ಹೊರಡಿಸಿಕೊಂಡು ಸಭಾತ್ಯಾಗ ಮಾಡಿದ.

ಕಾಮೆಂಟ್‌ಗಳು