ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರತಕಥಾಮಂಜರಿ62


 
ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ 
ವಿರಾಟ ಪರ್ವ  - ಮೂರನೆಯ ಸಂಧಿ


ರಾಯ ಕುರುಬಲ ವಿಲಯಕರನಬು

ಜಾಯತಾಕ್ಷಿಯ ಸಲಹಿ ಕಿಚಕ

ರಾಯ ವಂಶಾರಣ್ಯವನು ಸವರಿದನು ಕಲಿಭೀಮ


ಬಯಸಿದಳು ಮೃತ್ಯುವನು ಕಡುಪಾ

ಪಿಯ ಮನೋಧರ್ಮವನು ಜನಮೇ

ಜಯ ಮಹೀಪತಿ ಕೇಳು ಪಾಂಚಾಲಿಯನು ಕರೆಸಿದಳು

ನಯವಿಹೀನೆ ಸುದೇಷ್ಣೆ ಬಂದಾ

ಕೆಯನು ಬೆಸಸಿದಳೆಲೆಗೆಯನುಜಾ

ಲಯದೊಳುತ್ತಮ ಮಧುವ ನೀ ಝಡಿತೆಯಲಿ ತಹುದೆಂದು 


ಅಮ್ಮೆನಲ್ಲಿಗೆ ದೇವಿ ನಿಮ್ಮಯ

ತಮ್ಮ ದುರುಳನು ಲೇಸು ಹೊಲ್ಲೆಹ

ವೆಮ್ಮತಾಗುವುದಾತನಳಿದರೆ ಬಳಿಕ ಹಳಿವೆಮಗೆ

ನಿಮ್ಮನಾವೋಲೈಸಿ ನಿಮಗೆ ವಿ

ಕರ್ಮವನು ಮಾಡುವುದು ನಮಗದು

ಧರ್ಮವಲ್ಲುಳಿದವರ ಕಳುಹುವುದೆಂದಳಿಂದುಮುಖಿ 


ಎನಲು ಭುಗಿಲೆಂದಳು ಸುಡೇತಕೆ

ಮನದ ಗರ್ವವ ನುಡಿವೆ ನಿನ್ನಿಂ

ದೆನಗೆ ಮೇಣೆನ್ನವರಿಗುಂಟೇ ಹಾನಿ ಹರಿಬಗಳು

ಅನುಜನಾರೆಂದರಿಯೆ ಸಾಕಾ

ತನ ಸಮೀಪಕೆ ಹೋಗಿ ಬಾ ನಡೆ

ಯೆನಲು ಕೈಕೊಂಡಬಲೆ ಹೊರವಂಟಳು ನಿಜಾಲಯವ 


ಹರಿ ಹರಿ ಶ್ರೀಕಾಂತ ದಾನವ

ಹರ ಮುಕುಂದ ಮುರಾರಿ ಗತಿ ಶೂ

ನ್ಯರಿಗೆ ನೀನೇ ಗತಿಯಲಾ ಗರುವಾಯಿಗೆಟ್ಟೆನಲೈ

ಕುರುಕುಲಾಗ್ರಣಿ ಸೆಳೆದ ವಸ್ತ್ರಾ

ಕರುಷಣದ ಭಯ ಮತ್ತೆ ಬಂದಿದೆ

ಕರುಣಿ ನೀನೇ ಬಲ್ಲೆಯೆನುತಡಿಯಿಟ್ಟಳಬುಜಾಕ್ಷಿ 


ದೇವಿ ನೇಮಿಸಲರಿಯೆನೆಂದೊಡಿ

ದಾವ ಧರ್ಮವು ಶಿವ ಶಿವೀ ಹದ

ಸಾವನವರಿಗೆ ತಹುದು ಬದ್ಧವಿಘಾತಿಯಿದು ಬಲುಹು

ಸೇವೆಯಿದಕೇ ಕಷ್ಟವೆಂಬುದು

ಕೋವಿದರ ಮತ ಶಿವಶಿವಾ ರಾ

ಜೀವಲೋಚನ ಕೃಷ್ಣ ಬಲ್ಲೆಯೆನುತ್ತ ಗಮಿಸಿದಳು 


ಸುರಪ ಶಿಖಿ ಯಮ ನಿರುತಿ ವರುಣಾ

ದ್ಯರಿಗೆ ವಂದಿಸಿ ಕಣ್ಣೆವೆಯ ಬಗಿ

ದರಘಳಿಗೆ ನಿಂದಬುಜಮಿತ್ರನ ಭಜಿಸಿ ಕಣ್ದೆರೆಯೆ

ಮುರಿವ ದೈತ್ಯನ ಕಾಹಕೊಟ್ಟನು

ತರಣಿ ತರುಣಿಗೆ ಮಂದಮಂದೋ

ತ್ತರದ ಗಮನದಲಬಲೆ ಬಂದಳು ಕೀಚಕನ ಮನೆಗೆ 


ಹಾರ ನೂಪುರ ಝಣಝಣಿತ ಝೇಂ

ಕಾರ ರವವದು ಮೊಳಗೆ ಭುವನ 

ಯೂರ ಕುಣಿದುದು ವರಕಟಾಕ್ಷದ ಮಿಂಚು ಥಳಥಳಿಸೆ

ಆರು ಹೊಗಳುವರಂಗವಟ್ಟದ

ಸೌರಭದ ಪರಿಮಳಕೆ ತುಂಬಿಯ

ಸಾರಕಟ್ಟಿತು ಬಂದಳಂಗನೆ ಕೀಚಕನ ಮನೆಗೆ 


ಮನುಮಥನ ಮದದಾನೆ ಕಂದ

ರ್ಪನ ಮಹಾಮಂತ್ರಾಧಿದೇವತೆ

ಜನರು ಮರುಳಹ ಮದ್ದು ಸಂಸೃತಿ ಸುಖದ ಸಾಕಾರ

ಮನಸಿಜನ ಮಸೆದಲಗು ಜನಮೋ

ಹನ ತಿಲಕ ಲಾವಣ್ಯಸಾಗರ

ಜನಿತ ಲಕ್ಷ್ಮಿಲತಾಂಗಿ ಬಂದಳು ಕೀಚಕನ ಮನೆಗೆ 


ಕುಡಿತೆಗಂಗಳ ಚಪಳೆಯುಂಗುರ

ವಿಡಿಯನಡುವಿನ ನೀರೆ ಹಂಸೆಯ

ನಡೆಯ ನವಿಲಿನ ಮೌಳಿಕಾತಿ ಪಯೋಜ ಪರಿಮಳದ

ಕಡು ಚೆಲುವೆ ಬರಲವನು ತನು ನಡ

ನಡುಗಿನಿಂದನದಾವ ಹೆಂಗುಸು

ಪಡೆದಳೀ ಚೆಲುವಿಕೆಯನೆನುತಡಿಗಡಿಗೆ ಬೆರಗಾದ 


ಅರಿದು ನೆತ್ತರು ಗಾಣದಲಗಿದು

ನೆರೆ ಬಿಗಿಯೆ ಮೈಬಾಸುಳೇಳದ

ಹುರಿ ಬಲಿದ ನೇಣ್ಸೋಂಕಿದಡೆ ಹೊಗೆ ಮಸಗದೆದೆಗಿಚ್ಚು

ಅರರೆ ಕಂಗಳ ಧಾರೆ ಯಾವನ

ಕೊರಳಕೊಯ್ಯದದಾವ ನರಿಕೆಯ

ಹುರುಳುಗೆಡಿಸದಿದಾವ ನಿಲುವನು ಶಿವಶಿವಾಯೆಂದ ೧೦


ಆವ ಜನ್ಮದ ಸುಕೃತ ಫಲ ನೆರೆ

ದೀ ವಧುವ ಸೇರಿದರೊ ಧನ್ಯರು

ತಾವಲಾ ಬಳಿಕೇನು ಪೂರ್ವದ ಸುಖದ ಸರ್ವಸ್ವ

ಭಾವಿಸಲು ಸುರಚಂದನಾದಿಗ

ಳೀವಧುವಿಗೆಲ್ಲಿಂದ ಮೇಣಿ

ನ್ನಾವುದತಿಶಯವುಂಟೆನುತ ಖಳರಾಯನಿದಿರೆದ್ದ ೧೧


ತರುಣಿ ಬಾ ಕುಳ್ಳಿರು ಮದಂತಃ

ಕರಣದೆಡರಡಗಿತ್ತು ಕಾಮನ

ದುರುಳುತನಕಿನ್ನಂಜುವೆನೆ ನೀನೆನಗೆ ಬಲವಾಗೆ

ಬಿರುದ ಕಟ್ಟುವೆನಿಂದುವಿಗೆ ಮಧು

ಕರಗೆ ಕೋಗಿಲೆಗೆಂದು ಖಳನ

ಬ್ಬರಿಸಿ ನುಡಿಯಲು ಖಾತಿಗೊಂಡಿಂತೆಂದಳಿಂದುಮುಖಿ ೧೨


ಬಾಯಿ ಹುಳುವುದು ಬಯಲ ನುಡಿದೊಡೆ

ನಾಯಿತನ ಬೇಡೆಲವೊ ಕೀಚಕ

ರಾಯನಂಗನೆ ಕಳುಹೆ ಬಂದೆನು ಮಧುವ ತರಲೆಂದು

ಸಾಯಬೇಕೇ ಹಸಿದ ಶೂಲವ

ಹಾಯಿ ಹೋಗೆನೆ ನಿನ್ನ ಬೈಗಳು

ನೋಯಿಸುವವೇ ತನ್ನನೆನುತವೆ ತುಡಿಕಿದನು ಸತಿಯ ೧೩


ಕರವನೊಡೆ ಮುರುಚಿದಳು ಬಟ್ಟಲ

ಧರೆಯೊಳೀಡಾಡಿದಳು ಸತಿ ಮೊಗ

ದಿರುಹಿ ಬಾಗಿಲ ದಾಂಟಿ ಭಯದಲಿ ನಡುಗಿ ಡೆಂಡಣಿಸಿ

ತರಳೆ ಹಾಯ್ದುಳು ಮೊಲೆಯ ಜಘನದ

ಭರದಿ ಬಡನಡು ಮುರಿಯದಿಹುದೇ

ವರ ಸಭಾಗ್ಯತೆಗೆನಲು ರಭಸದೊಳೋಡಿದಳು ಸಭೆಗೆ ೧೪


ಒಡನೆ ಬೆಂಬತ್ತಿದನು ತುರುಬನು

ಹಿಡಿದು ತೊತ್ತಿನ ಮಗಳೆ ಹಾಯ್ದರೆ

ಬಿಡುವೆನೇ ಫಡಯೆನುತ ಹೊಯ್ದನು ಕಾಲಲೊಡೆಮೆಟ್ಟಿ

ಕೆಡೆದು ರಕುತವ ಕಾರಿ ಹುಡಿಯಲಿ

ಮುಡಿ ಹೊರಳಿ ಬಿರುಗಾಳಿಯಲಿ ಸೈ

ಗೆಡೆದ ಕದಳಿಯ ಕಂಬದಂತಿರೆ ಕಾಂತೆ ಹೊರಳಿದಳು ೧೫


ಕರುಳ ತೆಗೆ ತಿನ್ನಡಗನೆನುತ

ಬ್ಬರಿಸಿ ಸೂರ್ಯನು ಕೊಟ್ಟದಾನವ

ನುರವಣಿಸಿ ಕೀಚಕನ ಹೊಯ್ದನು ಹಿಡಿದು ಕುಸುಬಿದನು

ದುರುಳ ನಡೆಗೆಡದೆದ್ದು ನಿಮಿಷದೊ

ಳೊರಲುತೋಡಿದನಾಲಯಕೆ ಬಳಿ

ಕರಸ ಮೊದಲಾದಖಿಳಜನ ನಡುಗಿತ್ತು ಭಯ ಹೊಯ್ದು ೧೬


ಹೊಡೆ ಮರಳಿ ಮುರಿದೆದ್ದು ತುರುಬಿನ

ಹುಡಿಯ ಕೊಡಹುತ ಮೊಲೆಗೆ ಮೇಲುದು

ತೊಡಿಸಿ ಗಲ್ಲದ ರಕುತವನು ಬೆರಲಿಂದ ಮಿಡಿಮಿಡಿದು

ನುಡಿಯಲಾಗದೆ ಖಳನು ಹೆಂಗುಸ

ಬಡಿಯೆ ನೋಡುತ್ತಿಹರೆ ಹಿರಿಯರು

ಹಿಡಿದ ಮೌನವ ಹೊತ್ತು ಲೇಸೆಂದಬಲೆ ಹಲುಬಿದಳು ೧೭


ಶಿವಶಿವಾ ಪಾಪಿಗಳು ಪತಿಯಾ

ದವರ ತಾಗಲಿ ಸುಯ್ಲಕಟ ನಾ

ಲುವರ ನಡುವಣ ಹಾವು ಸಾಯದು ನಿರಪರಾಧಿಯನು

ಅವಗಡಿಸಿದನು ಖಳನು ಧರ್ಮದ

ವಿವರ ಸುದ್ದಿಯನಾಡದೀ ಜನ

ನಿವಹ ಘೋರಾರಣ್ಯವಾಯ್ತೆಂದೊರಲಿದಳು ತರಳೆ ೧೮


ಎಲೆ ವಿದೇಶಿಗ ಕಂಕಭಟ್ಟನೆ

ಹಲವು ಧರ್ಮವ ಬಲ್ಲೆ ಗಡ ನೃಪ

ತಿಲಕಗರುಹುವುದೇನು ಸನ್ಯಾಸಿಗಳಿಗುಚಿತವಿದು

ತಿಳಿ ವಿದೇಶಿಗರಿಗೆ ವಿದೇಶಿಗ

ರೊಲವು ಸಮನಿಸಬೇಕು ಸಭೆಯಲಿ

ಬಲವಿಹೀನರಿಗಾಪ್ತರಿಲ್ಲೆಂದಬಲೆಯೊರಲಿದಳು ೧೯


ಧೈರ್ಯವನು ನೆರೆ ಬಲಿದು ಮೇಲಣ

ಕಾರ್ಯಭಾಗವನರಿದು ನೃಪಜನ

ವರ್ಯ ನೋಡದೆ ನುಡಿಸದಿದ್ದನು ಧರ್ಮನಂದನನು

ಶೌರ್ಯಕವಸರವಲ್ಲ ನಮಗಿ

ನ್ನಾರ್ಯನಾಜ್ಞೆಯೆನುತ್ತ ಮಾಣ್ದಾ

ತುರ್ಯರಿದ್ದರು ಪಾರ್ಥ ಯಮಳರು ಬಲಿದ ದುಗುಡದಲಿ ೨೦


ನೊಂದಳಕಟಾ ಸತಿಯೆನುತ ಮನ

ನೊಂದು ಮೋರೆಯ ಬಲಿದು ಖತಿಯಲಿ

ಕಂದಿದನು ಮೈ ಮರೆದು ರೋಷದೊಳವುಡನೊಡೆಯೊತ್ತಿ

ಮಂದಿಯರಿಯದವೋಲು ಚೇಷ್ಟೆಯೊ

ಳೊಂದಿ ಮೆಲ್ಲನೆ ಬಾಗಿ ನೋಡಿದ

ನಂದು ರಾಜಾಲಯದ ಮೂಮ್ದಣ ಮರನನಾ ಭೀಮ ೨೧


ಒಳಗೆ ನಿಶ್ಚೈಸಿದನು ಮೊದಲಲಿ

ಹಿಳಿದು ಹಿಂಡುವೆನಿವಳ ಬಡಿದಾ

ಖಳನನಿವನೊಡಹುಟ್ಟಿದರನಿವನಾಪ್ತಪರಿಜನವ

ಬಳಿಕ ಪರಿಜನ ಸಹ ವಿರಾಟನ

ಕೊಲುವೆನರಿಯದ ಮುನ್ನ ಕೌರವ

ಕುಲವ ಸವರುವೆನೆಂದು ಕಿಡಿಕಿಡಿಯಾದನಾ ಭೀಮ ೨೨


ಆತನಿಂಗಿತದನುವನಿಅರಿದು 

ಹೀತಳಾಧಿಪ ಧರ್ಮಸುತನತಿ

ಕಾತರಿಸದಿರು ವಲಲ ಸೈರಿಸು ಸೈರಿಸಕಟೆನುತ

 ತರುವ ಮುರಿಯದಿರು ಸುಜನ

ವ್ರಾತಕಾಶ್ರಯಊರಹೊರಗೆ 

ಹಾತಿಶಯ ತರುವುಂಟು ನಿನ್ನಯ ಬಾಣಸಿನ ಮನೆಗೆ ೨೩


ಧರ್ಮಮಯ ತರುವಿದನು ಮುರಿಯದಿ

ರೆಮ್ಮನುಡಿಗಳ ಕೇಳೆನಲು ಮಿಗೆ

ಸುಮ್ಮನೋಲಗದಿಂದ ಸರಿದನು ಭೀಮ ದುಗುಡದಲಿ

ಕರ್ಮಫಲವಿದು ನಿನಗೆ ಮಾನಿನಿ

ನಿಮ್ಮ ಭವನಕೆ ಹೋಗು ಶಿಕ್ಷಿಸ

ಲಮ್ಮದೀ ಸಭೆ ಬಗೆಯನಾತನು ಮತ್ಸ್ಯಭೂಪತಿಯ ೨೪


ಕೋಪಕವಸರವಲ್ಲ ಪತಿಗಳು

ಕಾಪುರುಷರೇ ನಿನ್ನವರು ಪರಿ

ತಾಪವನು ಬೀಳ್ಕೊಡು ಪತಿವ್ರತೆಯರಿಗೆ ಗುರು ನೀನು

ದೀಪವಲ್ಲಾ ಕ್ಷಮೆಯಖಿಳ ದೋ

ಷಾಪಹಾರವು ಶೌರ್ಯಧರ್ಮದ

ರೂಪು ನೆಲೆಯಾ ಕ್ಷಮೆಯೆನಲು ಬಳಿಕೆಂದಳಿಂದುಮುಖಿ ೨೫


ನೀರು ಹೊರಗಿಕ್ಕುವುದು ಮೂರೇ

ಬಾರಿ ಬಳಿಕದು ಪಾಪಿ ಝಾಡಿಸೆ

ಸೈರಿಸದು ಅನ್ಯಾಯ ಬಹುಳತೆಗೇನ ಮಾಡುವೆನು

ಸೈರಣೆಗೆ ತಾನವಧಿಯಿಲ್ಲಾ

ಪೌರುಷದ ಬಗೆ ಬಂಜೆಯಾಯಿತು

ಆರಯಿಕೆಯಲಿ ಜುಣುಗಿ ಜಾರುವಿರೆಂದಳಿಂದುಮುಖಿ ೨೬


ಅರರೆ ಹೆಂಗಸು ದಿಟ್ಟೆ ಮೋನದೊ

ಳಿರಲದಾವಂತರವು ರಾಯನ

ಹೊರೆಯಲೀ ಬಾಯ್ಬಡಿತಕನ ಗರುವಾಯಿತೇ ಯೆನಲು

ಕೆರಳಿದಳು ಲಲಿತಾಂಗಿಯಿಲ್ಲಿಯ

ಹಿರಿಯರಲಿ ಹುರುಳಿಲ್ಲ ಮಾರುತಿ

ಗರುಹುವೆನು ಬಳಿಕಾದುದಾಗಲಿಯೆನುತ ತಿರುಗಿದಳು ೨೭


 ಸುದೇಷ್ಣೆಯ ಮನೆಗೆ ಬರಲವ

ಳೀ ಸತಿಯ ನುಡಿಸಿದಳು ತಂಗಿ ವಿ

ಳಾಸವಳಿದಿದೆ ಮುಖದ ದುಗುಡವಿದೇನು ಹದನೆನಲು

ಈಸು ಮರವೆಯಿದರಸುತನದ 

ಹಾ ಸಗಾಢಿಕೆಯೆಮ್ಮ ನೀವಪ

ಹಾಸ ಮಾಡುವಿರೆನುತ ದ್ರೌಪದಿ ನುಡಿದಳರಸಿಯನು ೨೮


ದುರುಳ ನಿಮ್ಮೊಡಹುಟ್ಟಿದನು ನೀ

ವರಸುಗಳು ತಿರುಕುಳಿಗಳಾವಿ

ನ್ನಿರಲುಬಾರದು ನೃಪತಿ ತಪ್ಪಿದೊಡಾರು ಕಾಯುವರು

ಕರೆಸಿ ಬುದ್ಧಿಯ ಹೇಳಿಯೆನ್ನನು

ಹೊರೆಯಲಾಪರೆ ಹೊರೆಯಿರಲ್ಲದೊ

ಡರಸಿ ಕಳುಹುವುದೆನಲು ಬಳಿಕಿಂತೆಂದಳಾ ರಾಣಿ ೨೯


ಲಲನೆ ಕೇಳನ್ಯಾಯದವರನು

ಕೊಲಿಸುವೆನು ಭಯಬೇಡ ಪರಸತಿ

ಗಳುಪಿದವನೊಡಹುಟ್ಟಿದನೆ ಕಡುಪಾಪಿ ಹಗೆಯೆನಲು

ಕೊಲಿಸುವೊಡೆ ನೀವೇಕೆ ತಪ್ಪಿನ

ಬಳಿಯಲೆನ್ನಾತಗಳು ಕೀಚಕ

ಕುಲವ ಸವರುವರೆನಗೆ ಕಾರಣವಿಲ್ಲ ಸಾರಿದೆನು ೩೦


ಎಂದು ಬೀಳ್ಕೊಂಡಬಲೆ ತನ್ನಯ

ಮಂದಿರಕೆ ಬಂದೊಳಗೊಳಗೆ ಮನ

ನೊಂದು ಸೈವೆರಗಾಗಿ ಚಿಂತಿಸಿ ನೂಕಿದಳು ಹಗಲ

ಕೊಂದು ಕೊಂಬೊಡೆ ಆತ್ಮಘಾತಕ

ಹಿಂದೆ ಹತ್ತದೆ ಮಾಣದೇಗುವೆ

ನೆಂದು ದ್ರೌಪದಿ ತನ್ನ ಮನದಲಿ ಹಿರಿದು ಮರುಗಿದಳು ೩೧


ಆರಿಗುಸುರುವೆನಾರಸಾರುವೆ

ನಾರಿಗೊರಲುವೆನಾರಿಗರುಹುವೆ

ನಾರಬೇಡುವೆನಕಟ ಹೆಂಗಸು ಜನ್ಮವನು ಸುಡಲಿ

ಘೋರಪಾತಕಿಯೆನ್ನವೊಲು ಮು

ನ್ನಾರು ನವೆದವರುಂಟು ಮರಣವು

ಬಾರದೆಂದೊರಲಿದಳು ಬಸುರನು ಹೊಯ್ದು ಶಶಿವದನೆ ೩೨


ಯಮಸುತಂಗರುಹುವೆನೆ ಧರ್ಮ

ಕ್ಷಮೆಯಗರ ಹೊಡೆದಿಹುದು ಪಾರ್ಥನು

ಮಮತೆಯುಳ್ಳವನೆಂಬೆನೇ ತಮ್ಮಣ್ಣನಾಜ್ಞೆಯಲಿ

ಭ್ರಮಿತನಾಗಿಹನುಳಿದರಿಬ್ಬರು

ರಮಣರವರೀ ನಾಯ ಕೊಲಲ

ಕ್ಷಮರು ನಿಸ್ಸಂದೇಹವೆಂದಳು ತನ್ನ ಮನದೊಳಗೆ ೩೩


ಎಲ್ಲರೊಳು ಕಲಿಭೀಮನೇ ಮಿಡು

ಕುಳ್ಳಗಂಡನು ಹಾನಿ ಹರಿಬಕೆ

ನಿಲ್ಲದಂಗೈಸುವನು ಕಡುಹೀಹಾಳಿಯುಳ್ಳವನು

ಖುಲ್ಲನಿವನುಪಟಳವನಾತಂ

ಗೆಲ್ಲವನು ತಿಳುಹುವೆನು ಬಳಿಕವ

ನಲ್ಲಿ ಹುರುಳಿಲ್ಲದೊಡೆ ಕುಡಿವೆನು ಘೋರತರ ವಿಷವ ೩೪


ನಿಳಯವನು ಹೊರವಂಟು ಕಂಗಳ

ಬೆಳಗು ತಿಮಿರವ ಕೆಡಿಸೆ ಕಂಕಣ

ಲಲಿತ ಝೇಂಕೃತಿಯಿಂದ ತೂಗುವ ವಾಮಭುಜಲತೆಯ

ಒಲಿದು ಮೇಲುದು ನೂಕಿ ನಡುಗುವ

ಮೊಲೆಯ ಭರದಲಿಯಡಿಯಿಡುತ ಕಳ

ವಳದ ಕರಣದ ಮುಗುದೆ ಬಂದಳು ಬಾಣಸಿನ ಮನೆಗೆ ೩೫


ಕೆಲದಲೊಟ್ಟಿದ ಪತ್ರಶಾಕಾ

ವಳಿಯ ಫಲರಾಶಿಗಳ ಕಳವೆಯ

ಹೊಳೆವುತಿಹ ರಾಜಾನ್ನದಕ್ಕಿಯ ಸಾಲ ಹರಿಯಣದ

ಕೆಲಬಲದ ಸಂಭಾರ ಚೂರ್ಣದ

ಲಲಿತ ಬೋನದ ವಿವಿಧ ಭಕ್ಷ್ಯಾ

ವಳಿಯ ಬಾಣಸದೊಲಗೆ ಬಂದಳು ಮತ್ತಗಜಮನೆ ೩೬


ತರಿದ ಕುರಿಗಳ ಹಂದಿಯಡಗಿನ

ಜುರಿತರಕ್ತದ ಮೊಲನ ಖಂಡದ

ಕಿರಿದ ಗುಬ್ಬಿಯ ಕೀಸಿ ಸೀಳಿದ ನವಿಲ ಲಾವುಗೆಯ

ತುರುಗಿದೆಲುವಿನ ಸಾಲ ಸುಂಟಿಗೆ

ಮೆರೆವ ಮಾಂಸದ ರಾಶಿಗಳ ಹರ

ದೆರಕೆಗಳ ಕಂಡಬಲೆ ಹೊಗಳಿದಳಡಬಳದ ಮನೆಯ ೩೭


ಆರಲರಿದನೊ ಭೀಮ ನೀ ಸೂ

ವಾರ ವಿದ್ಯೆಯ ಭಾಪು ವಿಧಿ ಮುನಿ

ದಾರನಾವಂಗದಲಿ ಬರಿಸದು ಶಿವಶಿವಾಯೆನುತ

ನಾರಿ ನಸು ನಗುತೊಳಗೆ ಹೊಕ್ಕು 

ಕಾರಿ ಮಂಚದಲಿರಲು ನಿದ್ರಾ

ಭಾರ ವಿಹ್ವಲ ಕರನನನು ಹೊದ್ದಿದಳು ದುಗುಡದಲಿ ೩೮


ಎಬ್ಬಿಸಲು ಭುಗಿಲೆಂಬನೋ ಮೇ

ಣೊಬ್ಬಳೇತಕೆ ಬಂದೆ ಮೋರೆಯ

ಮಬ್ಬಿದೇನೆಂದೆನ್ನ ಸಂತೈಸುವನೊ ಸಾಮದಲಿ

ತಬ್ಬುವುದೊ ತಾ ಬಂದ ಬರವಿದು

ನಿಬ್ಬರವಲಾ ಜನದ ಮನಕಿ

ನ್ನೆಬ್ಬಿಸಿಯೆ ನೋಡುವೆನೆನುತ ಸಾರಿದಳು ವಲ್ಲಭನ ೩೯


ಮೆಲ್ಲ ಮೆಲ್ಲನೆ ಮುಸುಕು ಸಡಿಲಿಸಿ

ಗಲ್ಲವನು ಹಿಡಿದಲುಗಲಪ್ರತಿ

ಮಲ್ಲನೆದ್ದನು ನೋಡಿದನು ಪಾಂಚಾಲ ನಂದನೆಯ

ವಲ್ಲಭೆಯ ಬರವೇನು ಮುಖದಲಿ

ತಲ್ಲಣವೆ ತಲೆದೋರುತಿದೆ ತಳು

ವಿಲ್ಲದುಸಿರಿರುಳೇಕೆ ಬಂದೆ ಲತಾಂಗಿ ಹೇಳೆಂದ ೪೦


ಸೈರಿಸರು ಬಾಣಸದ ಭವನದ

ನಾರಿಯರು ದುರ್ಜನರು ಖುಲ್ಲ ಕು

ಠಾರರಿವರರಮನೆಯ ನಾಯ್ಗಳು ನಾವು ದೇಶಿಗರು

ಭಾರವಿದು ಕೆಲರರಿಯದಂತಿರೆ

ನಾರಿ ನೀ ಹೇಳೆನುತ ದುಗುಡವಿ

ದಾರ ದೆಸೆಯಿಂದಾಯಿತೆನಲಿಂತೆಂದಳಿಂದುಮುಖಿ ೪೧


ನಿನ್ನೆ ಹಗಲರೆತಟ್ಟಿ ಕೀಚಕ

ಕುನ್ನಿಯೊದೆದನು ರಾಜಸಭೆಯಲಿ

ನಿನ್ನವಂದಿಗರಿರಲು ಪರಿಭವವುಚಿತವೇ ತನಗೆ

ಎನ್ನನವ ಬೆಂಬಳಿಯಬಿಡನಾ

ನಿನ್ನು ಬದುಕುವಳಲ್ಲ ಪಾತಕ

ನಿನ್ನ ತಾಗದೆ ಮಾಣದೆನಲಾ ಭೀಮ ಖತಿಗೊಂಡ ೪೨


ಉಸುರಲಾಗದು ನಿನ್ನ ಹರಿಬಕೆ

ಮಿಸುಕುವವರಾವಲ್ಲ ಹೆಂಡಿರ

ಗಸಣಿಗೊಂಬವರಲ್ಲ ಹುದುವಿನ ಗಂಡತನವಿದನು

ಶಶಿವದನೆ ಸುಡು ಕಷ್ಟವೀಯಪ

ದೆಸೆಯವರು ನಾವಲ್ಲ ನಿನ್ನವ

ರಸಮ ಸಾಹಸರುಳಿದ ನಾಲ್ವರಿಗರುಹು ಹೋಗೆಂದ ೪೩


ರಮಣ ಕೇಳುಳಿದವರ ನನ್ನನು

ರಮಿಸುವರು ಮಾನಾರ್ಥವೆನೆ ನಿ

ರ್ಗಮಿಸುವರು ನೀನಲ್ಲದುಳಿದವರುಚಿತ ಬಾಹಿರರು

ಮಮತೆಯಲಿ ನೀನೋಡು ಚಿತ್ತದ

ಸಮತೆಯನು ಬೀಳ್ಕೊಡು ಕುಠಾರನ

ಯಮನ ಕಾಣಿಸಿ ಕರುಣಿಸೆಂದಳು ಕಾಂತೆ ಕೈಮುಗಿದು ೪೪


ಕಲಹಕಾದರೆ ನಾವು ರಮಿಸುವ

ರುಳಿದವರು ಬಳಿಕೇನು ಗಾದೆಯ

ಬಳಕೆ ಕೆಲಬರು ಗಳಿಸಿದರೆ ಕೆಲರುಂಡು ಜಾರುವರು

ಅಳುಕಿ ನಡೆವವರಲ್ಲ ನಿನ್ನಯ

ಹಳಿವು ಹರಿಬವ ಹೇಳಿ ಚಿತ್ತವ

ತಿಳುಹಿಕೊಂಬುದು ನಾವು ಭೀತರು ಧರ್ಮಜನ ದೆಸೆಗೆ ೪೫


ಹೊದ್ದುವುದು ಫಲುಗುಣನ ಪದದಲಿ

ಬಿದ್ದು ಯಮನಂದನನ ಮನವನು

ತಿದ್ದುವುದು ಸಹದೇವ ನಕುಲರ ಕೈಯೊಳೆನಿಸುವುದು

ಗೆದ್ದುಕೊಡುವರು ನಿನ್ನ ಪಾಲಿಸ

ದಿದ್ದರಾದರೆ ದೋಷವವರನು

ಹೊದ್ದುವುದು ಸಾಕಿನ್ನು ನಿನ್ನಯ ತೊಡರು ಬೇಡೆಂದ ೪೬


ಹೆಂಡತಿಯ ಹರಿಬದಲಿಯೊಬ್ಬನೆ

ಗಂಡನಾದರೆ ವೈರಿಯನು ಕಡಿ

ಖಂಡವನು ಮಾಡುವನು ಮೇಣ್ತನ್ನೊಡಲನಿಕ್ಕುವನು

ಗಂಡರೈವರು ಮೂರು ಲೋಕದ

ಗಂಡರೊಬ್ಬಳನಾಳಲಾರಿರಿ

ಗಂಡರೋ ನೀವ್ ಷಂಡರೋ ಹೇಳೆಂದಳಿಂದುಮುಖಿ ೪೭


ಅಂದು ಕೌರವ ನಾಯಿ ಸಭೆಯಲಿ

ತಂದು ಸೀರೆಯ ಸುಲಿಸಿದನು ತಾ

ನಿಂದು ಕೀಚಕ ಕುನ್ನಿಯೊದೆದನು ವಾಮಪಾದದಲಿ

ಅಂದು ಮೇಲಿಂದಾದ ಭಂಗಕೆ

ಬಂದುದಾವುದು ನೀವು ಬಲ್ಲಿದ

ರೆಂದು ಹೊಕ್ಕರೆ ಹೆಣ್ಣಕೊಂದಿರಿಯೆಂದಳಿಂದುಮುಖಿ ೪೮


ದಾನವರು ಮಾನವರೊಳೆನ್ನಭಿ

ಮಾನವನು ಕೊಂಬವನ ಹೆಸರನ

ದೇನನೆಂಬೆನು ನೊಂದು ನುಡಿದರೆ ಖಾತಿಯಿಲ್ಲೆನಗೆ

 ನಪುಂಸಕರೊಡನೆ ಹುಟ್ಟಿದ

ನಾನು ಮೂಗುಳ್ಳವನೆ ಮಾನಿನಿ

ನೀನು ತೋರಿದ ಪರಿಯಲೆಂಬುದು ಭೀತಿ ಬೇಡೆಂದ ೪೯


ಅಂದು ದುಶ್ಯಾಸನನ ಕರುಳನು

ತಿಂದಡಲ್ಲದೆ ತಣಿವು ದೊರೆಕೊಳ

ದೆಂದು ಹಾಯ್ದೊಡೆ ಹಲುಗಿರಿದು ಮಾಣಿಸಿದ ಯಮಸೂನು

ಇಂದು ಕೀಚಕನಾಯನೆರಗುವೆ

ನೆಂದು ಮರನನು ನೋದಿದರೆ ಬೇ

ಡೆಂದ ಹದನನು ಕಂಡೆ ನೀನೆನಗುಂಟೆಯಪರಾಧ ೫೦


ಹೆಣ್ಣ ಹರಿಬಕ್ಕೋಸುಗವೆ 

ಮ್ಮಣ್ಣನಾಜ್ಞೆಯ ಮೀರಿ ಕುಂತಿಯ

ಚಿಣ್ಣ ಬದುಕಿದೆನೆಂದು ನುಡಿವರು ಕುಜನರಾದವರು

ಅಣ್ಣನವರಿಗೆ ದೂರುವುದು ನಾ

ವುಣ್ಣದುರಿಯಿವು ರಾಯನಾಜ್ಞೆಯ

ಕಣ್ಣಿಯಲಿ ಬಿಗಿವಡೆದು ಕೆಡೆದೆವು ಕಾಂತೆ ಕೇಳೆಂದ ೫೧


ಗಂಡುಗರ್ವವ ನುಡಿಯೆವೆಮ್ಮಯ

ದಂಡಿ ತಾನದು ಬೇರೆ ನಾವೀ

ಭಂಡತನದಲಿ ಬದುಕಲರಿಯೆವು ಧರ್ಮಗಿರ್ಮವನು

ಕೊಂಡು ಕೊನರುವರಲ್ಲ ರಾಯನ

ನಂಡಲೆದು ಕೀಚಕನ ತಲೆಯನು

ಚೆಂಡನಾಡಿಸು ರಮಣಿ ನೀನರ್ಜುನಗೆ ಹೇಳೆಂದ ೫೨


ತರುಣಿ ದಿಟ ಕೇಳಿಂದು ಮೊದಲಾ

ಗರಸಿ ನೀನಾಲ್ವರಿಗೆ ನಾವೆಡೆ

ಮುರಿದವರು ಬಿಟ್ಟವರು ನಿನ್ನಯ ಸೂಳು ಪಾಳೆಯವ

ಅರಸನಂ ಪ್ರಾರ್ಥಿಸುವುದರ್ಜುನ

ವರನಕುಲ ಸಹದೇವರಿಗೆ ವಿ

ಸ್ತರಿಸಿ ಹೇಳುವುದೆನ್ನೊಡನೆ ಫಲಸಿದ್ಧಿಯಿಲ್ಲೆಂದ ೫೩


ಕೇಳುತಿದ್ದಳು ಕೊರಳ ಸೆರೆ ಗೋ

ನಾಳಿಗೌಕಿತು ಬಿಕ್ಕಿ ಬಿಕ್ಕಿ ವಿ

ಶಾಲ ಲೊಚನೆ ನೆನೆದಳುನ್ನತ ನಯನವಾರಿಯಲಿ

ಶೂಲ ಮರುಮೊನೆಗೊಂಡವೊಲು ಸುಳಿ

ವಾಳೆ ಝಳತಾಗಿದವೊಲುದರ

ಜ್ವಾಲೆ ನೆತ್ತಿಯನೇರೆ ಮಿಡುಕಿದಳಬಲೆ ಬಿಸುಸುಯ್ದು ೫೪


ಕೆಂದಳದ ಸೆಕೆಯಲಿ ಕಪೋಲವು

ಕಂದಿ ಕಸರಿಕೆಯಾಯ್ತು ನಿಡುಸುಯಿ

ಲಿಂದ ಸೀಕರಿಯೋದವೇಕಾವಳಿಯ ಮುತ್ತುಗಳು

ಸಂದಣಿಸಿದೆವೆಗಳಲಿ ಬಾಷ್ಪದ

ಬಿಂದು ತಳಿತುದು ನಟ್ಟ ದೃಷ್ಟಿಯೊ

ಳಿಂದುಮುಖಿ ಸೈಗರೆದು ತೂಗಿದಳಡಿಗಡಿಗೆ ಶಿರ ೫೫


ಆವ ಹೆಂಗುಸನಳಲಿಸಿದೆ ಮು

ನ್ನಾವ ನೋಂಪಿಯನಳಿದೆನೋ ಮೇ

ಣಾವ ಪಾಪದ ಫಲಕೆ ಹಿಡಿದೆನೊ ಸಂಚಕಾರವನು

ಆವ ಹೆಂಗುಸು ನವೆದಳೆನ್ನವೊ

ಲಾವಳಳಲುತೆ ಮರುಗಿದಳು 

ತ್ತಾವಳೆನ್ನಂದದ ಮಗಳ ಪಡೆದವಳು ಲೋಕದಲಿ ೫೬


ಆವ ಗರಳವ ಕುಡಿವೆನೋ ಮೇ

ಣಾವ ಬೆಟ್ಟವನಡರಿ ಬೀಳ್ವೆನೊ

ಆವ ಮಡುವನು ಹೊಗುವೆನೋ ಹಾಸರೆಯ ಗುಂಪಿನಲಿ

ಆವ ಕುಂತವ ಹಾಯ್ವೆನೋ ಮೇ

ಣಾವ ಪಾವಕನೊಳಗೆ ಬೀಳ್ವೆನೊ

ಸಾವು ಸಮನಿಸದೆನಗೆನುತ ಮರುಗಿದಳು ಕಮಲಾಕ್ಷಿ ೫೭


ಇನ್ನು ಹುಟ್ಟದೆಯಿರಲಿ ನಾರಿಯ

ರೆನ್ನವೊಲು ಭಂಗಿತರು ಭುವನದೊ

ಳಿನ್ನು ಜನಿಸಲು ಬೇಡ ಗಂಡರು ಭೀಮ ಸನ್ನಿಭರು

ಎನ್ನವೋಲ್ ಪಾಂಡವರವೋಲ್ ಸಂ

ಪನ್ನ ದುಃಖದೊಳಾರು ನವೆದರು

ಮುನ್ನಿನವರೊಳಗೆಂದು ದ್ರೌಪದಿ ಹಿರಿದು ಹಲುಬಿದಳು ೫೮


ಮಂದೆಗೆಳಸಿದ ಪಾಪಿ ಕೌರವ

ನಂದು ಮುಂದಲೆವಿಡಿದ ಸೈಂಧವ

ಬಂದು ಬಳಿಕಾರಣ್ಯವಾಸದೊಳೆನ್ನನೆಳೆದೊಯ್ದ

ಇಂದು ಕೀಚಕನಾಯ ಕಾಲಲಿ

ನೊಂದೆ ನಾನಿದು ಮೂರು ಬಾರಿಯ

ಬಂದ ಭಂಗವೆ ಸಾಕೆನುತ ಬಸವಳಿದಳಬುಜಾಕ್ಷಿ ೫೯


ಜನನವೇ ಪಾಂಚಾಲರಾಯನ

ಮನೆ ಮನೋವಲ್ಲಭರದಾರೆನೆ

ಮನುಜಗಿನುಜರು ಗಣ್ಯರೇ ಗೀರ್ವಾಣರಿಂ ಮಿಗಿಲು

ಎನಗೆ ಬಂದೆಡರೀ ವಿರಾಟನ

ವನಿತೆಯರುಗಳ ಮುಡಿಯ ಕಟ್ಟುವ

ತನುವ ತಿಗುರುವ ಕಾಲನೊತ್ತುವ ಕೆಲಸದುತ್ಸಾಹ ೬೦


ಹಗೆಗಳಿಗೆ ತಂಪಾಗಿ ಬದುಕುವ

ಮುಗುದರಿನ್ನಾರುಂಟು ಭಂಗಕೆ

ಹೆಗಲಕೊಟ್ಟಾನುವ ವಿರೋಧಿಗಳುಂಟೆ ಲೋಕದಲಿ

ವಿಗಡ ಬಿರುದನು ಬಿಸುಟು ಬಡಿಹೋ

ರಿಗಳು ಪಾಂಡವರಂತೆ ಮೂರು

ರ್ಚಿಗಳದಾರುಂಟೆಂದು ದ್ರೌಪದಿ ಹಿರಿದು ಹಲುಬಿದಳು ೬೧


ಕಾಲಯಮ ಕೆರಳಿದರೆ ಮುರಿವೆ

ಚ್ಚಾಳುತನದವರೆನ್ನನೊಬ್ಬಳೆ

ನಾಳಲಾರಿರಿ ಪಾಪಿಗಳಿರಪಕೀರ್ತಿಗಳುಕಿರಲ

ತೋಳ ಹೊರೆ ನಿಮಗೇಕೆ ಭೂಮೀ

ಪಾಲವಂಶದೊಳುದಿಸಲೇತಕೆ

ಕೂಳುಗೇಡಿಂಗೊಡಲ ಹೊರುವಿರಿಯೆಂದಳಿಂದುಮುಖಿ ೬೨


ಧರೆಯ ಭಂಡಾರವನು ರಥವನು

ಕರಿತುರಗರಥಪಾಯದಳವನು

ಕುರುಕುಲಾಗ್ರಣಿ ಸೆಳೆದುಕೊಂಡನು ನಿಮ್ಮ ಹೊರವಡಿಸಿ

ದುರುಳ ಕೀಚಕಗೆನ್ನ ಕೊಟ್ಟಿರಿ

ಪರಿಮಿತದಲಿರವಾಯ್ತು ನಿಮ್ಮೈ

ವರಿಗೆ ಲೇಸಾಯ್ತಕಟಯೆಂದಬುಜಾಕ್ಷಿ ಹಲುಬಿದಳು ೬೩


ಆವ ಭಾಗ್ಯಾಧಿಕನೊ ಕೌರವ

ದೇವನರಸುಗಳೊಡೆಯತನದಲಿ

ನೀವು ಕೃಷ್ಣನ ಕೂರ್ಮೆಯಲಿ ಧರ್ಮಹಿರಿದಲಿ ಸಿಲುಕಿ

ನೀವು ತಟತಟವಾಗಿ ಲೋಗರ

ಸೇವೆಯಲಿ ಬೆಂದೊಡಲ ಹೊರೆವಿರಿ

ಸಾವವಳು ನಿಮಗಂಜಲೇಕಿನ್ನೆಂದಳಿಂದುಮುಖಿ ೬೪


ಭೀಮ ಕೊಟ್ಟೆ ತನಗೆ ಸಾವಿನ

ನೇಮವನು ನಿಮ್ಮಣ್ಣನಾಜ್ಞೆ ವಿ

ರಾಮವಾಗದೆ ಬದುಕೆ ಧರ್ಮದ ಮೈಸಿರಿಯನರಿದು

ಕಾಮಿನಿಯ ಕೇಳಿಯಲಿ ನೆನೆವುದು

ತಾಮಸದಿ ತಾ ಮೀರಿ ನುಡಿದು

ದ್ದಾಮತೆಯ ಸೈರಿಸುವುದೆಂದೆರಗಿದಳು ಚರಣದಲಿ ೬೫


ಎನಲು ಕಂಬನಿದುಂಬಿದನು ಕಡು

ನೆನೆದುದಂತಃಕರಣ ರೋಷದ

ಘನತೆ ಹೆಚ್ಚಿತು ಹಿಂಡಿದನು ಹಗೆಗಳನು ಮನದೊಳಗೆ

ತನು ಪುಳಕವುಬ್ಬರಿಸೆ ದಿಮ್ಮನೆ

ವನಿತೆಯನು ತೆಗೆದಪ್ಪಿ ವರಲೋ

ಚನ ಪಯೋಧಾರೆಗಳ ತೊಡೆದನು ಭೀಮ ಸೆರಗಿನಲಿ ೬೬


ಕುರುಳ ನೇವರಿಸಿದನು ಗಲ್ಲವ

ನೊರಸಿ ಮುಂಡಾಡಿದನು ಮಂಚದ

ಹೊರೆಯ ಗಿಂಡಿಯ ನೀರಿನಲಿ ತೊಳೆದನು ಮುಖಾಂಬುಜವ

ಅರಸಿ ಬಿಡುಬಿಡು ಖಾತಿಯನು ವಿ

ಸ್ತರಿಸಲೇಕಿನ್ನಣ್ಣನಾಜ್ಞೆಯ

ಗೆರೆಯದಾಂಟಿದೆ ದಾಂಟಿದೆನು ಹೋಗೆಂದನಾ ಭೀಮ ೬೭


ಬಸುರ ಬಗಿವೆನು ಕೀಚಕನ ನಸು

ಮಿಸುಕಿದರೆ ವೈರಾಟ ವಂಶದ

ಹೆಸರ ತೊಡೆವೆನು ನಮ್ಮನರಿದೊಡೆ ಕೌರವ ವ್ರಜವ

ಕುಸುರಿದರಿವೆನು ಭೀಮ ಕಷ್ಟವ

ನೆಸಗಿದನು ಹಾಯೆಂದರಾದೊಡೆ

ಮುಸುಡನಮರಾದ್ರಿಯಲಿ ತೆಗೆವೆನು ದೇವಸಂತತಿಯ ೬೮


ಮುನಿದನಾದಡೆಯಣ್ಣತನವಿಂ

ದಿನಲಿ ಹರಿವುದು ಪಾರ್ಥನಕುಲರು

ಕನಲಿದರೆ ಕೈದೋರುವೆನು ಸಹದೇವನಿವರುಗಳ

ಅನುಜನೆಂಬೆನೆ ಕೃಷ್ಣ ಹಾಯ್ದೊಡೆ

ಘನ ಮುರಾರಿಯ ಮೀರುವೆನು ಬಳಿ

ಕೆನಗೆ ಸಮಬಲರಾರು ತರಿವೆನು ಕಿಚಕ ವ್ರಜವ ೬೯


ಈಸು ದಿನವೆಮ್ಮಣ್ಣನಾಜ್ಞಾ

ಪಾಶದಲಿ ಸಿಲುಕಿರ್ದೆ ಸಿಂಹದ

ಕೂಸು ನರಿ ಕೆನಕುವವೊಲೀ ಕುರುಕೀಚಕಾದಿಗಳು

ಗಾಸಿಯಾದರು ಕೆಣಕಿ ನಾಯ್ಗಳ

ವೀಸ ಬಡ್ಡಿಯಲಸುವ ಕೊಂಬೆನು

ವಾಸಿ ಧರ್ಮದ ಮೇರೆ ತಪ್ಪಿತು ಕಾಂತೆ ಕೇಳೆಂದ ೭೦


ತರುಣಿ ಕೀಚಕ ಕೌರವೇಂದ್ರರ

ಹರಣಕಿದೆಕೋ ಸಂಚಕಾರವ

ಹಿರಿದು ಮುನಿದಡೆ ಭೀಮ ಬಗೆವನೆ ನೀತಿಗೀತಿಗಳ

ಕೆರಳಿಚಿದೆಯಿನ್ನೇನು ನಿನ್ನಯ

ಹರಿಬವೆನ್ನದು ನಾಯಿಜಾರನ

ಕರೆದು ಸಂಕೇತದಲಿ ಸೂಚಿಸು ನಾಟ್ಯಮಂದಿರವ ೭೧


ಅಲ್ಲಿಗಿರುಳೈತಂದು ಮರೆಯಲಿ

ಖುಲ್ಲನುದರವ ಬಗಿದು ರಕುತವ

ಚೆಲ್ಲುವೆನು ಶಾಕ್ನಿಯರಿಗೆ ಸಂದೇಹ ಬೇಡಿದಕೆ

ಅಲ್ಲಿ ಕೆಲಬಲನರಿದುದಾದಡೆ

ಬಲ್ಲೆನದಕೌಷಧಿಯ ಕರೆಮರೆ

ಯಿಲ್ಲ ಮಾನಿನಿ ಹೋಗೆನುತ ಬೀಳ್ಕೊಟ್ಟನಂಗನೆಯ ೭೨


ಹರುಷದಲಿ ಹೆಚ್ಚಿದಳು ಪುರುಷರ

ಪುರುಷನಲ್ಲಾ ಭೀಮ ತನ್ನಯ

ಪರಮ ಸುಕೃತೋದಯವಲಾ ನೀನೊಬ್ಬನೆಂದೆನುತ

ತರುಣಿ ಕಾಂತನ ಬೀಳುಕೊಂಡಳು

ಮರಳಿದಳು ನಿಜಭವನಕಿತ್ತಲು

ತರಣಿ ತೆಗೆದನು ತಾವರೆಯ ಬಾಗಿಲಿನ ಬೀಯಗವ ೭೩


ಆದಿವಸವರಮನೆಗೆ ಬರುತ ವೃ

ಕೋದರನ ವಲ್ಲಭೆಯ ಕಂಡನು

ಕೈದುಡಕಲಂಜಿದನು ಮಾತಾಡಿಸಿದನಂಗನೆಯ

ಹೋದಿರುಳ ಯುಗವಾಗಿ ನೂಕಿದೆ

ನೀ ದಯಾಂಬುಧಿ ಕುಸುಮಶರ ಯಮ

ನಾದ ನೀನೇ ಬಲ್ಲೆಯೆಂದನು ಕೀಚಕನು ನಗುತ ೭೪


ಕುಸುಮಶರ ಯಮನಹನು ಅಮೃತವೆ

ವಿಷವಹುದು ಕೇಳಾಲಿಕಲುಗಳು

ಬಿಸಿಯಹವು ಬಾಂಧವರು ವೈರಿಗಳಹರು ನಿಮಿಷದಲಿ

ಒಸೆದರೊಲ್ಲದರಹರು ಲೋಗರ

ಶಶಿವದನೆಗಳುಪಿದ ದುರಾತ್ಮನ

ವಸುಧೆ ಹೊರುವುದೆ ಪಾಪಿ ಕೀಚಕಯೆಂದಳಿಂದುಮುಖಿ ೭೫


ಬಳಿಕ ನಿನ್ನ ಪುರಾಣ ಧರ್ಮವ

ತಿಳಿದುಕೊಂಬೆನಿದೊಮ್ಮೆ ನಿನ್ನಯ

ಲಲಿತ ಕರುಣ ಕಟಾಕ್ಷಕವಟವ ತೊಡಿಸಿ ತನ್ನೊಡಲ

ಆಳುಕದೆಸುವ ಮನೋಜನಂಬಿನ

ಹಿಳುಕ ಮುರಿ ಡಿಂಗರಿಗಳನಹೆನೆಂ

ದಳಿಮನದಲಾ ಖೂಳನಬುಜಾನನೆಗೆ ಕೈಮುಗಿದ ೭೬


ಅರಿದರಾದಡೆ ನಿನ್ನ ವಂಶವ

ತರಿವರೆನ್ನವರೆಲವೊ ಕೆಲಬಲ

ನರಿಯದಂದದಿ ಬಂದು ನಾಟ್ಯದ ಗರುಡಿಯೊಳಗಿಹುದು

ನೆರೆದುದಾಯುಷ ನಿನಗೆ ಕತ್ತಲೆ

ಮರೆಯೊಳಾನೈತಹೆನು ಯೆನ್ನನು

ಮರೆದು ನೀ ಬಿಡೆಯಾದುದಾಗಲಿಯೆಂದಳಿಂದುಮುಖಿ ೭೭


ಖಳ ಹಸಾದವ ಹಾಯ್ಕಿ ತನ್ನಯ

ನಿಳಯಕೈದಿದನಬುಜಬಾಂಧವ

ನಿಳಿದನಸ್ತಾಚಲದ ತಪ್ಪಲ ತಾವರೆಯ ಬನಕೆ

ನಳಿನಮುಖಿ ನಲವೇರಿ ಕಗ್ಗ

ತ್ತಲೆಯ ಹಬ್ಬುಗೆಯೊಳಗೆ ಕಂಗಳ

ಬೆಳಗು ಬಟ್ಟೆಯ ತೋರೆ ಬಂದಳು ಬಾಣಸಿನ ಮನೆಗೆ ೭೮


ಭೀಮ ನಿಂದಿರು ನಾಟ್ಯ ನಿಲಯವ

ನಾ ಮದಾಂಧಗೆ ನುಡಿದು ಬಂದೆನು

ತಾಮಸದ ಮಾಡದಿರು ಹೂಡದಿರಲ್ಪಬುದ್ಧಿಗಳ

ಕಾಮುಕನನಡೆಗೆಡಹಿ ನಿಜಸು

ಪ್ರೇಮವನು ತೋರೆನಲು ನಗುತು

ದ್ದಾಮನೆದ್ದನು ಫಳಿಯನುಟ್ಟನು ಮಲ್ಲಗಂಟಿನಲಿ ೭೯


ಖಳನ ಮುರಿಯೆಂದಬಲೆ ನೊಸಲಲಿ

ತಿಲಕವನು ರಚಿಸಿದಳು ಸೇಸೆಯ

ತಳಿದಳೇರಿಸಿ ತಿಗುರ ಗೆಲಿದಳು ಹಿಣಿಲ ಹೊಸ ಪರಿಯ

ಬಲುಭುಜನ ಹರಸಿದಳು ಕಗ್ಗ

ತ್ತಲೆಯ ಹಬ್ಬುಗೆಯೊಳಗೆ ನಾಟ್ಯದ

ನಿಳಯ ಮಧ್ಯದ ಮಣಿಯ ಮಂಚದ ಮೇಲೆ ಪವಡಿಸಿದ ೮೦


ಉರಿವ ಮಾರಿಯ ಬೇಟದಾತನು

ತುರುಗಿದನು ಮಲ್ಲಿಗೆಯ ಮೊಗ್ಗೆಯ

ನಿರಿಕಿ ತಾ ಪೂಸಿದನು ಸಾದು ಜವಾಜಿ ಕತ್ತುರಿಯ

ಮೆರೆವ ಗಂಡುಡಿಗೆಯನು ರಚಿಸಿದ

ಸೆರಗಿನೊಯ್ಯಾರದಲಿ ಸುರಗಿಯ

ತಿರುಗುತಿರುಳೊಬ್ಬನೆ ನಿಜಾಲಯದಿಂದ ಹೊರವಂಟ ೮೧


ಕಾಲಪಾಶದಲೆಳಸಿಕೊಂಬ 

ರಾಳಮತಿ ಸುಡುಗಾಡಲೈ ತಂ

ದಾಲಯವ ಹೊಕ್ಕನು ಕೃತಾಂತನ ಬಾಯ ಹೊಗುವಂತೆ

ಮೇಲೆ ಮೇಲವಶಕುನ ಶತಕವ

ನಾಲಿಸದೆ ಸುಮ್ಮಾನದಲಿ ಕೇ

ಡಾಳಿ ಬಂದನು ಮಂಚವಿದ್ದೆಡೆಗಾಗಿ ತಡವರಿಸಿ ೮೨


ವನಜ ಮುಖಿ ವೀಳೆಯವನನುಲೇ

ಪನವ ಮಲ್ಲಿಗೆಯರಳ ತೊಡಿಗೆಯ

ನನುಪಮಾಂಬರವಿವೆ ಮನೋಹರವಹರೆ ಚಿತ್ತೈಸು

ನಿನಗೆ ಪಾಸಟಿಯಾನುಯೆನ್ನವೊ

ಲನಿಮಿಷರೊಳಾರುಂಟು ಚೆಲುವರು

ಮನುಜರೆನ್ನನು ಹೋಲುವರೆ ಸೈರಂಧ್ರಿ ಕೇಳೆಂದ ೮೩


ಎನ್ನವೋಲ್ ಪುರುಷರಲಿ ಚೆಲುವರ

ಮುನ್ನ ನೀ ಕಂಡರಿದೆಯಾದಡೆ

ಯೆನ್ನ ಮೇಲಾಣೆಲೆಗೆ ಹುಸಿಯದೆ ಹೇಳು ಹೇಳೆಂದು

ಮುನ್ನ ನಿನ್ನಂತಪ್ಪ ಸತಿಯರು

ಎನ್ನನೇ ಬಯಸುವರು ನಾರಿಯ

ರೆನ್ನ ಕಂಡರೆ ಸೋಲದವರಿಲ್ಲೆಲೆಗೆ ನಿನ್ನಾಣೆ ೮೪


ಎಲವೊ ಕೀಚಕ ನಿನ್ನ ಹೋಲುವ

ಚೆಲುವರಿಲ್ಲಂತಿರಲಿ ಲೋಕದ

ಲಲನೆಯರ ಪರಿಯಲ್ಲ ತನ್ನಯ ರೂಪು ಬೇರೊಂದು

ಇಳೆಯೊಳೆನಗೆಣೆಯಿಲ್ಲ ನಿನಗಾ

ನೊಲಿದು ಬಂದೆನು ತನ್ನ ಪರಿಯನು

ಬಳಿಕ ನೋಡಾ ಬೇಗ ತೋರುವೆನೆಂದನಾ ಭೀಮ ೮೫


ಎನಗೆ ಪುರುಷರು ಸೋಲದವರಿ

ಲ್ಲೆನಗೆ ಪಾಸಟಿ ನೀನು ನಿನಗಾ

ಮನವೊಲಿದೆ ನೀ ನೋಡು ತನ್ನಯ ಹೆಣ್ಣುತನದನುವ

ಎನಲು ಹರುಷದಲುಬ್ಬಿ ಕೀಚಕ

ನನಿಲಜನ ಮೈದಡವಿ ವೃತ್ತ

ಸ್ತನವ ಕಾಣದೆ ಹೆದರಿ ಬಳಿಕಿಂತೆಂದನವ ನಗುತ ೮೬


ಎಲೆಗೆ ಕಲು ಮೈಯಾದೆ ಕಡು ಕೋ

ಮಲತೆಯೆತ್ತಲು ಕರ್ಕಶಾಂಗದ

ಬಲುಹಿದೆತ್ತಲು ಮಾಯವೇಷ ಧರಿಸಿದೆಯಾ ಮೇಣು

ತಿಳುಹೆನಲು ಕೇಳೆಲವೊ ಪರಸತಿ

ಗಳುಪಿದಾತಂಗಮೃತ ವಿಷ ಕೋ

ಮಲತೆ ಕರ್ಕಶವಹುದೆನುತ ತುಡುಕಿದನು ಮುಂದಲೆಯ ೮೭


ಚಪಳೆ ಫಡ ಹೋಗೆನುತ ಹಾಯ್ದನು

ಕೃಪಣಮತಿ ಮುಂಗೈಯಲನಿಲಜ

ನಪರಭಾಗಕೆ ಹಾಯ್ದು ಹಿಡಿದನು ಕೀಚಕನ ತುರುಬ

ವಿಪುಳಬಲ ಕಳವಳಿಸಿದನು ಕಡು

ಕುಪಿತನಾದನು ಹೆಂಗುಸಲ್ಲಿವ

ನಪಸದನು ತೆಗೆ ಕರುಳನೆನುತೊಳಹೊಕ್ಕು ಹೆಣಗಿದನು ೮೮


ತಿವಿದನವನುರವಣಿಸಿ ಮಾರುತಿ

ಕವಿದು ಹೆಣಗಿದನಡಸಿ ಹೊಯೊಡೆ

ಬವರಿಯಲಿ ಟೊಣೆದೌಕಿದೊಡೆ ಮಡಮುರಿಯದೊಳಹೊಕ್ಕು

ಸವಡಿ ಮಂದರದಂತೆ ಕೀಚಕ

ಪವನಸುತರೊಪ್ಪಿದರು ಭೀಮನ

ಯುವತಿ ನಗುತಾಲಿಸುತಲಿದ್ದಳು ಹೊಯ್ಲ ಹೋರಟೆಯ ೮೯


ಎರಗಿದೊಡೆ ಕೀಚಕನ ಗಾಯಕೆ

ತರಹರಿಸಿ ಕಲಿಭೀಮ ಮಂಡಿಸಿ

ಮರೆವಡೆದು ಮುರಿದೆದ್ದು ರೋಷದೊಳೌಡನೊಡೆಯುಗಿದು

ಬರಸಿಡಿಲು ಪರ್ವತದ ಶಿಖರವ

ನೆರಗುವಂತಿರೆ ಖಳನ ನೆತ್ತಿಯ

ನೆರಗಿದನು ರಣಧೀರನುನ್ನತ ಬಾಹುಸತ್ವದಲಿ ೯೦


ಅರಿಯ ಮುಷ್ಟಿಯ ಗಾಯದಲಿ ತಲೆ

ಬಿರಿಯೆ ತನು ಡೆಂಡಣಿಸಿ ಕಂಗಳು

ತಿರುಗಿ ಜೋಲಿದು ಮೆಲ್ಲಮೆಲ್ಲನೆಯಸುವ ಪಸರಿಸುತ

ಕೆರಳಿ ಕರಿ ಕೇಸರಿಯ ಹೊಯ್ದರೆ

ತಿರುಗುವಂತಿರೆ ಭೀಮಸೇನನ

ಬರಿಯ ತಿವಿದನು ಬೀಳೆನುತ ಖಳರಾಯ ಹಲುಮೊರೆದ ೯೧


ತಿರುಗಿ ಪೈಸರವೋಗಿ ಪವನಜ

ಮರಳಿ ತಿವಿದನು ಕೀಚಕನ ಪೇ

ರುರವನೆದೆ ಜರ್ಝರಿತವಾಗಲು ಕಾರಿದನು ಕರುಳ

ಬರಿದು ವಾಲಿಗಳೊಲೆದೊಲೆದು 

ಣ್ಣುರುಗಿ ಧೊಪ್ಪನೆ ಕೆಡೆದು ನಿಮಿಷಕೆ

ಹೊರಳಿ ಹರಣವ ಕಳುಹಿ ಕಳೆದುದು ಕಾಯ ಕೀಚಕನ ೯೨


ತಲೆಯ ನೆದೆಯೊಳಗಿಕ್ಕಿ ಕೈಕಾ

ಲ್ಗಳನು ಬಸುರೊಳಗಿಕ್ಕಿ ದೂರಕೆ

ತೊಲಗಿದನು ತೋರಿದನು ರಮಣಿಗೆ ಕಿಚಕನ ಹದನ

ಖಳನು ಕಾಲನ ಕೋಣ ತುಳಿದಂ

ತಿಳೆಯೊಳೊರಗಿರೆ ಕಂಡು ಕಾಮಿನಿ

ಕಳಕಳಿಸಿದಳು ಭೀಮಸೇನನಪ್ಪಿ ಮುಂಡಾಡಿ ೯೩


ತರುಣಿ ಬಿಡು ಸಾರೆನುತ ಪವನಜ್

ಸರಿದನತ್ತಲು ದ್ರುಪದ ನಂದನೆ

ಕರೆದು ನುಡಿದಳು ಕಾಹಿನವರಿಗೆ ಕೀಚಕನ ಹದನ

ದುರುಳ ಬಲುಹಿಂದೆನ್ನನೆಳೆದೊಡೆ

ಕೆರಳಿದರು ಗಂಧರ್ವರೀತಗೆ

ಹರುವ ಕಂಡರು ನೋಡಿಯೆನೆ ಹರಿತಂದಳವರೊಡನೆ ೯೪


ಅರಸಿ ಕೈದೀವಿಗೆಯಲವನಿಹ

ಪರಿಯ ಕಂಡರು ಕಾಹಿನವದಿರು

ಹರಿದು ಹೇಳಿದರಾತನನುಜಾತರಿಗೆ ಬೇಗದಲಿ

ಕರದಿ ಬಾಯ್ಗಳ ಹೊಯ್ದು ಹೃದಯದೊ

ಳುರಿ ಚಡಾಳಿಸೆ ಬಿಟ್ಟ ದಮಂಡೆಯೊ

ಳಿರದೆ ಬಂದರು ಕೀಚಕನ ಸೋದರರು ಬಾಯ್ಬಿಡುತ ೯೫


ಆರು ಗತಿಯೆಮಗಕಟ ಕೀಚಕ

ವೀರ ದೇಸಿಗರಾದೆವಾವಿ

ನ್ನಾರ ಸೇರುವೆವೆನುತ ಹಲುಬಿದರವನ ತಕ್ಕೈಸಿ

ಕ್ರೂರ ಕರ್ಮರು ನಿನ್ನ ಕೊಂದವ

ರಾರು ಹಾಹಾಯೆನುತ ಹಲುಬಲು

ವಾರಿಜಾನನೆ ಮುಗುಳುನಗೆಯಲಿ ನೋಡಿದಳು ಖಳರ ೯೬


ಇವಳಿಗೋಸುಗವಳಿದನೇ ಸಹ

ಭವನು ತಪ್ಪೇನೆನುತ ನಡುವಿರು

ಳವದಿರೈತಂದರುಹಿದರು ವೈರಾಟರಾಯಂಗೆ

ಅವಳನಾತನ ಕೂಡೆ ಕಳುಹುವೊ

ಡೆವಗೆ ನೇಮವೆ ಯೆಂದು ಬೀಳ್ಕೊಂ

ಡವರು ಮರಳಿದು ಬಂದು ಹಿಡಿದರು ಕಮಲಲೋಚನೆಯ ೯೭


ತೆಗೆದು ಮಂಚದಲವನ ಹೆಣನನು

ಬಿಗಿದರವಳನು ಕಾಲದೆಸೆಯಲಿ

ನಗುವುದಿನ್ನೊಮ್ಮೆನುತ ಕಟ್ಟಿದರವರು ಕಾಮಿನಿಯ

ಬೆಗಡುಗೊಂಡಂಭೋಜಮುಖಿಯು

ಬ್ಬೆಗದೊಳೊದರಿದಳಕಟಕಟ ಪಾ

ಪಿಗಳಿರಾ ಗಂಧರ್ವರಿರ ಹಾಯೆನುತ ಹಲುಬಿದಳು ೯೮


ಕೇಳಕಟ ಜಯನೇ ಜಯಂತನೆ

ಕೇಳು ವಿಜಯ ಜಯೋದ್ಭವನೆ ನೀ

ಕೇಳು ಜಯಸೇನನೆ ದುರಾತ್ಮಕರೆನ್ನನೆಳೆದೊಯ್ದು

ಬೀಳಿಕುವರಗ್ನಿಯಲಿ ನೀವಿದ

ಕೇಳಿ ತಡಮಾಡದಿರಿಯೆನಲದ

ಕೇಳಿದನು ಕಲಿಭೀಮ ಸತಿಯಾಕ್ರಂದನ ಧ್ವನಿಯ ೯೯


 ದುರಾತ್ಮರಿಗಗ್ರಜನ ಸಾ

ವೈದದೇ ತಮ್ಮಣ್ಣನಲ್ಲಿಗೆ

ಹೊಯ್ದು ಕಳುಹಲು ಬೇಕಲಾ ಕುನ್ನಿಗಳನೀಕ್ಷಣಕೆ

ಬೈಯ್ದು ಫಲವೇನೆಂದು ಮಾರುತಿ

ಹಾಯ್ದು ಝಂಕಿಸಿ ರುದ್ರಭೂಮಿಯ

ನೆಯಿದನು ಫಡಯೆನುತ ಕೊಂಡನು ಮುರಿದು ಹೆಮ್ಮರನ ೧೦೦


ಎಲೆಲೆ ಗಂಧರ್ವಕನ ಹೆಂಗುಸ

ಕಳಚಿ ಬಿಡಿರೋ ಪಾಪಿಹೋಗಲಿ

ಕೊಲೆಗಡಿಕನಿವನೆನುತ ಹೆಣನನು ಬಿಸುಟು ದೆಸೆದೆಸೆಗೆ

ತಲೆಗೆದರಿ ತೆಗೆದೋಡೆ ನಕ್ಕನು

ಕಳಕಳಿಸಿ ಕಲಿ ಭೀಮನೆಲೆ ನಾ

ಯ್ಗಳಿರ ಹೋದೊಡೆ ಬಿಡುವೆನೆ ಹಾಯೆನುತ ಕೈಗೊಂಡ ೧೦೧


ತಿರುಹಿದನು ಹೆಮ್ಮರನನವದಿರ

ನರೆದು ನಿಟ್ಟೊರೆಸಿದನು ದೆಸೆದೆಸೆ

ಗೊರಲಿ ಚಿಮ್ಮುವ ಚಪಲರನು ಬೆಂಬತ್ತಿ ಬರಿಕೈದು

ಕುರಿದರಿಯ ಮಾಡಿದನು ನೂರೈ

ವರನು ಕೊಂದನು ಮರನ ಹಾಯಿಕಿ

ಮರಳಿ ಮಿಣ್ಣನೆ ಬಂದು ಹೊಕ್ಕನು ಬಾಣಸಿನ ಮನೆಯ ೧೦೨


ಸುಳಿಯಲಮ್ಮದು ಪೌರಜನವಿವ

ರಳಿವ ವಚನಿಸಲಮ್ಮದೀಕೆಯ

ನಲುಕಲಮ್ಮದು ನೋಡಲಮ್ಮದು ಮಂದಿ ಗುಜುಗುಜಿಸಿ

ನಳಿನಮುಖಿ ನಸುನಗುತ ತಿಳಿಗೊಳ

ದೊಳಗೆ ಹೊಕ್ಕಳು ಮಿಂದು ಬೀದಿಗ

ಳೊಳಗೆ ಬರುತಿರೆ ಕಂಡು ಕೈಗಳ ಮುಗಿದುದಖಿಳಜನ ೧೦೩


ಈಕೆಗೋಸುಗವಳಿದನಕಟವಿ

ವೇಕಿ ಕೀಚಕನೆಂದು ಕೆಲಬರಿ

ದೇಕೆ ನಮಗೀ ಚಿಂತೆ ಶಿವ ಶಿವಯೆಂದು ಕೆಲಕೆಲರು

ನೂಕಿ ಕವಿದುದು ಮಂದಿ ಮಧ್ಯದೊ

ಳೀಕೆ ಮೆಲ್ಲನೆ ಬರುತಲಾ ಲೋ

ಕೈಕ ವೀರನ ಕಂಡಳಾ ಬಾಣಸಿನ ಬಾಗಿಲಲಿ ೧೦೪


ಮುಗುಳು ನಗೆಯಲಿ ಕಣ್ಣ ಕಡೆಯಲಿ

ವಿಗಡ ಭೀಮನ ನೋಡಿ ಕೈಗಳ

ಮುಗಿದೆವಾವ್ ಗಂಧರ್ವಪತಿಗೆ ನಮೋನಮೋಯೆನುತ

ಹೊಗರಿಡುವ ಹರುಷದಲಿ ರೋಮಾ

ಳಿಗಳ ಗುಡಿಯಲಿ ತನ್ನ ನಿಲಯಕೆ

ಮುಗುದೆ ಬಂದಳು ಸೂರ್ಯನಡರಿದನುದಯಪರ್ವತವ ೧೦೫


ಊರೊಳಗೆ ಗುಜುಗುಜಿಸಿ ವಾರ್ತಾ

ಭಾರ ಮಸಗಿತು ನೆರೆದ ನೆರವಿಯೊ

ಳಾರ ಬಾಯ್ಗಳೊಳಾದೊಡೆಯು ಜಪವಾಯ್ತು ಜನಜನಿತ

ಭೂರಿ ಚಿಂತಾತುರ ವಿರಾಟನು

ಮಾರಿಯೋ ಸೈರಂಧ್ರಿಯೋ 

ನಾರಿಯಿರಬೇಡೆಂದು ತನ್ನಯ ಸತಿಗೆ ನೇಮಿಸಿದ ೧೦೬


ಅಳಲು ಕೈಮಿಗಲಾ ವಿರಾಟನ

ಲಲನೆ ಸೈರಂಧ್ರಿಯನು ಕರೆಸಿದ

ಳೆಲೆ ಮಹಾತುಮೆ ತಾಯೆ ನಿಮಗಂಜುವೆವು ಶರಣೆನುತ

ಹೊಳಲೊಳಿದ್ದರೆ ಭೀತಿ ಘನ ನೀ

ವೊಲಿದ ಠಾವಿಗೆ ಬಿಜಯ ಮಾಡುವು

ದುಳುಹ ಬೇಹುದು ತಮ್ಮನೆನಲಿಂತೆಂದಳಿಂದುಮುಖಿ ೧೦೭


ಎಮ್ಮದೇನಪರಾಧ ದೇವಿಯೆ

ನಿಮ್ಮ ತಮ್ಮನು ತಪ್ಪಿನಡೆದೊಡೆ

ಯೆಮ್ಮರಮಣರು ಸೈರಿಸದೆ ಸೀಳಿದರು ದುರ್ಜನರ

ನಿಮ್ಮ ನಾವೋಲೈಸಿ ಮರಳಿದು

ನಿಮ್ಮ ಕೆಡಿಸುವರಲ್ಲ ದೂರ್ತರು

ತಮ್ಮ ಕತದಲಿ ತಾವೆ ಕೆಟ್ಟರು ನೀತಿ ಬಾಹಿರರು ೧೦೮


ತಾವು ತಮ್ಮಿಂದಳಿದರದು ಸಾ

ಕಾವು ನಿಮಗಂಜುವೆವು ನಿಮ್ಮಲಿ

ಯಾವುದೂ ತಪ್ಪಿಲ್ಲ ನೀವಿಲ್ಲಿರಲು ಬೇಡೆನಲು

ನಾವು ಮುನ್ನಿಹರಲ್ಲ ನಿಮ್ಮಯ

ಸೇವೆಯಲಿ ಹದಿಮೂರು ದಿವಸವು

ನೀವು ನೂಕಿದೊಡಿರದೆ ಮಾಣೆವು ದೇವಿ ಚಿತ್ತೈಸು ೧೦೯


ಅಳುಕದಿರಿ ಹದಿಮೂರು ದಿವಸವ

ಕಳೆದ ಬಳಿಕೆಮಗೆಲ್ಲ ಲೇಸಹು

ದಳಿದು ಹೋದರು ದುಷ್ಟರಾದವರಿನ್ನು ಭಯ ಬೇಡ

ಕಲಹದವರಾವಲ್ಲೆನುತ ನಿಜ

ನಿಳಯವನು ಸಾರಿದಳು ದ್ರೌಪದಿ

ಗಳಿಗೆ ಗಳಿಗೆಗೆ ಕೀಚಕನ ವೃತ್ತಾಂತ ಪಸರಿಸಿತು ೧೧೦


ಸಂಕ್ಷಿಪ್ತ ಭಾವ


ಕೀಚಕನ ಸಂಹಾರ


ಸುದೇಷ್ಣೆಯು ದ್ರೌಪದಿಯನ್ನು ಕರೆದು ತಮ್ಮನ ಮನೆಯಿಂದ ಮಧುವನ್ನು ತರಲು ಹೇಳಿದಳುಮೊದಲಿಗೆ ದ್ರೌಪದಿಯು ಒಪ್ಪಲಿಲ್ಲಆಗ ಬಯ್ದು ಕಳಿಸಿದಳುಇವಳನ್ನು ಕಂಡ ಕೀಚಕನು ಬಹಳಉತ್ಸಾಹದಿಂದ ಇವಳೆಡೆಗೆ ಸಾರಿದನುಅವನಿಂದ ತಪ್ಪಿಸಿಕೊಳ್ಳಲು ಹೆಣಗಾಡಿದವಳನ್ನು ತುರುಬುಹಿಡಿದು ಕಾಲಿನಿಂದ ಒದೆದು ಅಟ್ಟಿಸಿಕೊಂಡು ಬಂದನುಇವಳು ರಾಜಸಭೆಗೆ ಬಂದು ಅಲ್ಲಿದ್ದಧರ್ಮಜನಿಗೆ ಅರ್ಥವಾಗುವಂತೆ ಹಲುಬಿದಳುಅಲ್ಲಿದ್ದವರು ಕೀಚಕನಿಗೆ ಹೆದರಿ ಮೌನವಾಗಿದ್ದರುಕೋಪಗೊಂಡ ಭೀಮ ಅಲ್ಲಿದ್ದ ಮರದ ಕಡೆ ನೋಡಿದಆಗ ಧರ್ಮಜನು  ಮರ ಸಲ್ಲದುಊರಹೊರಗಿನ ಮರ ನೋಡು ಎಂದು ಸೂಚ್ಯವಾಗಿ ಹೇಳಿದ.


ಮನೆಗೆ ಬಂದ ದ್ರೌಪದಿ ತುಂಬಾ ಗೋಳಾಡಿದಳುನೀರು ಹೊರಗಿಕ್ಕುವುದು ಮೂರೇ ಬಾರಿಇನ್ನುನನಗೆ ಸಾವೇ ಗತಿಧರ್ಮಜನ ಆಜ್ಞೆಯನ್ನು ಅನುಜರು ಮೀರುವುದಿಲ್ಲ ಕೀಚಕನಿಂದ ಬಿಡುಗಡೆಹೇಗೆ ಎಂದು ಚಿಂತಿಸಿದಳುಹುಟ್ಟಿದ್ದು ದೊಡ್ಡ ರಾಜನಲ್ಲಿಪತಿಗಳೈವರು ವೀರರುಆದರೂ ತನಗೆ ಸ್ಥಿತಿ ಎಂದು ಕೃಷ್ಣನನ್ನು ನೆನೆದು ಗೋಳಾಡಿದಳುಕೊನೆಯಲ್ಲಿ ಭೀಮನೇ ಇದಕ್ಕೆ ಸರಿ ಎಂದುಭಾವಿಸಿ ಅವನ ಬಳಿಗೆ ಹೋದಳು.


ಮೊದಲಿಗೆ ಭೀಮ ಒಪ್ಪಲಿಲ್ಲಇತರೆ ನಾಲ್ವರ ಬಳಿಗೆ ಹೋಗು ಎಂದನುರಮಿಸಲು ಅವರುಕಾದಲು ನಾನೋ ಎಂದು ಕೋಪಿಸಿಕೊಂಡನುಸಭೆಯಲ್ಲಿ ಧರ್ಮಜನು ತನ್ನನ್ನು ತಡೆದ ಬಗ್ಗೆಕೋಪ ಅವನಿಗೆಕೊನೆಗೆ ದ್ರೌಪದಿಯು ವಿಷ ಕುಡಿವೆನೆಂದಳುಅವಳ ಸ್ಥಿತಿಯನ್ನು ಕಂಡುಭೀಮನಿಗೆ ತಡೆಯಲಾಗಲಿಲ್ಲಅವಳನ್ನು ಸಂತೈಸಿದನುಕೀಚಕನನ್ನು ಕೊಲ್ಲುವೆನುಎದುರುಬಿದ್ದವರನ್ಬು ಮುಗಿಸುವೆನುಯಾರ ಆಜ್ಞೆಯನ್ನೂ ಪಾಲಿಸುವುದಿಲ್ಲದೇವಸಂತತಿಯಮುಸುಡನ್ನು ತೇದುಬಿಡುವೆನು ಎಂದೆಲ್ಲ ಅಬ್ಬರಿಸಿದನುಅವನನ್ನು ರಾತ್ರಿ ಬರಹೇಳು ಎಂದು ಹೇಳಿಕಳಿಸಿಕೊಟ್ಟನು.


ದ್ರೌಪದಿಯು ಸಮಾಧಾನ ಹೊಂದಿ ಮನೆಗೆ ಬಂದಳುಕೀಚಕನು ಪುನಃ ಅವಳನ್ನು ಒಲಿಸಿಕೊಳ್ಳಲುಬಂದು ವಿಧವಿಧವಾಗಿ ಬೇಡಿಕೊಂಡನುಕೊನೆಯಲ್ಲಿ ರಾತ್ರಿ ಒಬ್ಬನೇ ಯಾರಿಗೂ ತಿಳಿಯದಂತೆನಾಟ್ಯಶಾಲೆಗೆ ಬರುವಂತೆ ಹೇಳಿ ಕಳಿಸಿದಳು.


ಅದರಂತೆ ಕೀಚಕನು ಕಾಮಾತುರನಾಗಿ ಬಂದನುಅಲ್ಲಿ ಭೀಮನು ಮಲಗಿದ್ದನುಆಗ ಕೋಮಲಸ್ಪರ್ಶದ ಬದಲು ಕಠೋರವಾದ ಸ್ಪರ್ಶ ಕಂಡು ಕೀಚಕನು ಬೆದರಿದನುಇಬ್ಬರಿಗೂ ಭಾರೀಹೋರಾಟವಾಯಿತುಕೀಚಕನನ್ನು ಸಾಯಿಸಿ ಭೀಮ ಮೆಲ್ಲನೆ ತನ್ನ ಸ್ಥಳ ಸೇರಿಕೊಂಡನುತನ್ನನ್ನುಕೆಣಕಿದ್ದಕ್ಕಾಗಿ ತನ್ನ ಪತಿಗಳಿಂದ  ಸ್ಥಿತಿ ಕೀಚಕನಿಗೆ ಬಂದಿತು ಎಂದು ದ್ರೌಪದಿ ಹೇಳಿದಾಗ ಕೀಚಕನಸೋದರರು ಸೇಡು ತೀರಿಸಿಕೊಳ್ಳಲು ಬಂದರುಶವದೊಂದಿಗೆ ಇವಳನ್ನೂ ಕಟ್ಟಿಹಾಕಿ ಸುಡಲುಯೋಚಿಸಿದರುಇದನ್ನು ತಿಳಿದ ದ್ರೌಪದಿಯು ಸಂಕೇತ ಭಾಷೆಯಲ್ಲಿ ಕೂಗಿದಳುಭೀಮನುಮಸಣದಲ್ಲಿದ್ದ ಕೀಚಕನ ಸೋದರರೆಲ್ಲರನ್ನೂ ಕೊಂದು ಎಸೆದನು.


ಎಲ್ಲರೂ ದ್ರೌಪದಿಯನ್ನು ಕಂಡು ಬೆದರಿದರುರಾಣಿಯು ಇಲ್ಲಿಂದ ಹೊರಟು ಹೋಗಲು ಹೇಳಿದಾಗಇನ್ನು ಹದಿಮೂರು ದಿನ ಇರುತ್ತೇನೆಂದು ಅವಧಿ ತೆಗೆದುಕೊಂಡಳುಕೀಚಕನ ವೃತ್ತಾಂತ ಎಲ್ಲೆಡೆಗೂಪಸರಿಸಿತು.



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ