ಭಾರತಕಥಾಮಂಜರಿ59
ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ
ಅರಣ್ಯಪರ್ವ - ಇಪ್ಪತ್ಮೂರನೆಯ ಸಂಧಿ
ಧರಣಿಪತಿ ತಂದಿತ್ತನಾ ದ್ವಿಜ
ನರಣಿಯನು ಬಳಿಕಮಲ ಧರ್ಮದ
ಸರಣಿಯೆಂದೆತ್ತಿದನು ಬನದಲಿ ನಿಜಸಹೋದರರ
ಹಿಂಗಿದವು ಹನ್ನೊಂದುವರೆ ವರು
ಷಂಗಳಟವೀತಟದೊಳಿರಲರು
ದಿಂಗಳೊಳಗೊಂದುದಾಪತ್ತಾ ಮಹೀಶರಿಗೆ
ತುಂಗ ವಿಕ್ರಮನಾ ಮುನೀಶ್ವರ
ಸಂಗತಿಯ ಸೊಗಸಿನಲಿ ಬಹು ದಿವ
ಸಂಗಳನು ನೂಕಿದನು ನೃಪತಿ ಪಲಾಶ ಶಾಲೆಯಲಿ ೧
ವಿಮಲ ವಾನಪ್ರಸ್ಥ ಜನದಾ
ಶ್ರಮದೊಳಗೆ ಸಾರಂಗಮೃಗವಿಳೆ
ಯಮರನೌಪಾಸನದ ಸಾಧನದರಣಿಯನು ಕೊಂಡು
ಕಮಲ ಸಖನುದಯದಲಿ ಸಂಧ್ಯಾ
ರಮಣಿಯಭಿವಂದನೆಗೆ ಸನ್ಮುನಿ ಸಮಿತಿ
ಹಿಂಗಿದ ಹಿಂದೆ ಕೊಂಡೋಡಿತು ವನಾಂತರಕೆ ೨
ಎಲೆಲೆ ಮೃಗವರಣಿಯನು ವಂಚಿಸಿ
ಕಳೆದುದೋ ಕಾಳಾಯ್ತೆನುತ ತ
ಲ್ಲಳಿಸಿದಳು ನಿಜಪತಿಯ ಭಯದಲಿ ಮುನಿಯ ವಧುವಂದು
ಹೊಳೆಯ ಸಂಧ್ಯೆಯ ಸಾಧುಗಳು ಕಳ
ವಳಿಸಲಾ ದ್ವಿಜನರಿದು ಪಾರ್ಥಿವ
ರಿಳೆಯ ಬಿಟ್ಟರಲಾಯೆನುತ ಹರಿತಂದನಾಶ್ರಮಕೆ ೩
ಎಲೆ ಯುಧಿಷ್ಠಿರ ದೋಷವಿದು ನಿ
ನ್ನಳವಿಗೈದುವುದರಣಿಯನು ಮೃಗ
ವೆಳೆದುಕೊಂಡೀ ಹೊದರ ಹೊಕ್ಕುದು ಬಹಳ ಕಾನನದ
ಅಳಿದುದನ್ವಾಧಾನ ವಿತರರ
ಹಳಿವಿಗಾನೊಳಾದೆನೆನೆ ಮುನಿ
ತಿಲಕನೌಪದ್ರವವನರಿದವನೀಶ ಹೊರವಂಟ ೪
ಜಾಳಿಸಿದ ಹದವಿಲ್ಲು ಮುಮ್ಮೊನೆ
ಬೋಳೆಗಳ ನಿಡುಗುಂಡುಗಳ ಬಡಿ
ಕೋಲುಗಳ ನೆಕ್ಕಡವನುರು ಪಾರಿವದ ಕುಪ್ಪುಸವ
ಮೇಳವಿಸಿ ಹೊರವಂಟನವನೀ
ಪಾಲ ಬೇಂಟೆಗೆ ಮೃಗದ ಹೆಜ್ಜೆಯ
ಮೇಲೆ ಹೆಜ್ಜೆಯ ನಡೆಸುವನು ತನ್ನನುಜರೊಡಗೂಡಿ ೫
ತರಣಿಯನ್ವಯನಂದು ಮಾಯಾ
ಹರಿಣನನು ಬೆಂಬತ್ತಿ ವಿಹ್ವಲ
ಕರಣನಾದಂದದಲಿ ಮಹದಾರಣ್ಯವಾಸದಲಿ
ಧರಣಿಪತಿ ಬಳಿಸಲಿಸಿ ಮುನಿಪತಿ
ಯರಣಿಯನು ಕೊಂಡೊಯ್ದು ಹುಲುಮೃಗ
ಸರಣಿಯಲಿ ಸೈವರಿದರಂದಾಕರ್ಣ ಮಾರ್ಗಣರು ೬
ಇರುಬಿನೊಳಗದೆ ಕುತ್ತು ಹೆಮ್ಮರ
ದುರುಗಲೊಳಗದೆ ತೊಡಚು ಬಾಣವ
ನೆರಗಿ ತಿವಿ ತೋಡಿಟ್ಟೆಯಲಿ ಸಿಡಿವಲೆಯನೊಡ್ಡೆನುತ
ಅರಸಿದರು ನಟ್ಟಡವಿಯಲಿ ಮುಂ
ದುರುಬಿದರು ಬೆಳ್ಳಾರ ಬಲೆಗಳ
ಹರಹಿ ಸೊಪ್ಪಿನ ತೋಹಿನಲಿ ಸಿಲುಕಿಸಿದರಾ ಮೃಗವ ೭
ಕೇಳು ಜನಮೇಜಯ ಹಿಮಾಂಶುವಿ
ಶಾಲ ವಂಶಜಯಡವಿಯಲಿ ಮುನಿ
ಪಾಲನರಣಿಯನೊಯ್ದು ಮೃಗವನು ಹಿಡಿದರೊಳಬಿದ್ದು
ಮೇಲೆ ತೋರಿತು ಢಗೆ ಮಹೀಶರ
ತಾಳಿಗೆಗಳೊಣಗಿದವು ಬಳಲಿಕೆ
ಏಳಿಗೆಯಲಾಸನ್ನ ಲತೆಯಿರುಬಿನಲಿ ಮಲಗಿದರು ೮
ದೂರವಾದುದು ನಿಳಯವೀ ಕಾಂ
ತಾರ ನಿರ್ಜಲವೈದಲಂಘ್ರಿಗೆ
ಭಾರ ಪಥವಿನ್ನೇನು ಹದನೆಂದರಸನಳವಳಿದು
ನೀರ ತಾರೈ ಹೋಗು ನಕುಲ ಸ
ರೋರುಹದ ಪತ್ರದಲಿ ಪೊಟ್ಟಣ
ವಾರಿಯನು ಕಟ್ಟೆಂದು ಕುಂತೀಸೂನು ನೇಮಿಸಿದ ೯
ಬಗೆದನೇ ಬಳಲಿಕೆಯನತಿ ಸಹ
ಸಿಗಳ ದೇವನು ಹಿರಿಯನಾಜ್ಞೆಯ
ನುಗುಳಲಮ್ಮದೆ ಧನುವ ಕೊಂಡನು ನಡೆದನತಿಪಥವ
ದೃಗು ಮನೋ ಮಂಜುಳದ ಕಂಜಾ
ಳಿಗಳ ಕಡುಪರಿಮಳದ ಪಸರದ
ಸೊಗಸು ತೀವಿತು ವಿಮಳ ಪದ್ಮಾಕರದ ಪವಮಾನ ೧೦
ಹಿತವನೈ ಹಿರಿಯಯ್ಯನೆನಗೆಂ
ದತುಳ ಬಲ ಪರಿತೋಷದಲಿ ಮಾ
ರುತನ ಬಳಿವಿಡಿದೈದಿದನು ನಕುಲಾಂಕನಾ ಕೊಳನ
ಹತಿಯಹುದು ನಿನಗೊಮ್ಮೆ ತಪ್ಪದು
ಹಿತವು ಬಳಿಕೆಂಬಮ್ತೆ ಖಗಸಂ
ತತಿಗಳುಲಿದೊಪ್ಪಿದವು ಪದ್ಮಾಕರದ ತೀರದಲಿ ೧೧
ಇರವಿನಲಿ ರಚನೆಯಲಿ ಮಧುರೋ
ತ್ತರವ ನೆರೆ ಬೀರುತ್ತಲಂತಃ
ಕರಣದಲಿ ಕತ್ತರಿಸಿಕೊಂಡಿಹ ಕುಜನರಂದದಲಿ
ಪರಿಮಳದ ಪಸರದಲಿ ಶೈತ್ಯೋ
ತ್ಕರುಷದಲಿ ಲೇಸೆನಿಸಿ ಕುಡಿದರೆ
ಹರಣವನೆ ಹಿಂಗಿಸುವ ಸರಸಿಯವಾರಿ ಚೆಲುವಾಯ್ತು ೧೨
ಖಳರ ಸತ್ಯದವೋಲು ವಂಚಿಸಿ
ಗೆಲಿದುದಾತನ ಮನವ ಮಾಯೆಯ
ಚೆಲುವಿನಂತಿರೆ ಚದುರುಗೆಡಿಸಿತು ತಿಳಿಯಲರಿದೆನಿಸಿ
ಲಲನೆಯರ ಹೃದಯದವೊಲೀಕ್ಷಿಸೆ
ನೆಲೆಯನೀಯದ ಕೃತಕ ಸರಸಿಯ
ಸುಲಭತೆಗೆ ಸಹದೇವನಣ್ಣನು ಸೋತು ನಡೆತಂದ ೧೩
ಇಳಿದು ಮೊನೆ ಮುಂಜೆರಗನಗ್ರಕೆ
ಬಲಿದು ಹೊಕ್ಕನು ಜಾನುದಘ್ನ
ಸ್ಥಳವನಂಜುಳಿಯಿಂದ ತೊಳೆದನು ಚರಣವದನವನು
ತುಳುಕಿದನು ವಾರಿಯನು ತನ್ನಯ
ಬಳಲಿಕೆಯನಪಹರಿಸಿ ಭೂಪತಿ
ಗಳಿಗೆ ಬಳಿಕಾನೊಯ್ವೆನೆಂದನು ತನ್ನ ಮನದೊಳಗೆ ೧೪
ಜಲವನಂಜುಳಿಯಿಂದ ಮೊಗೆದೀಂ
ಟಲು ನೆನೆಯಲಭ್ರದಲಿ ಗುಹ್ಯಕ
ನುಲಿದನೆಲೆ ನಕುಲಾಂಕ ಮಾಣೆನಗುತ್ತರವ ರಚಿಸಿ
ಬಳಿಕ ಸಲಿಲವನೀಂಟು ಮಾತುಗ
ಳೊಳವು ಮರುಳಾಗದಿರೆನಲು ಢಗೆ
ಗಳುಕಿ ಬಳಲಿದು ಮೇಲನಾಲಿಸಿ ಮೀರಿದನು ನುಡಿಯ ೧೫
ಜಡಿಯಲೆರಡಳ್ಳೆಗಳು ಕೊರಳೈ
ಕುಡಿದನುದಕವನಬುಜದೆಲೆಯಲಿ
ಹಿಡಿದನನಿಬರಿಗಮಳ ಜಲವನು ಮರಳಿ ನಿಮಿಷದಲಿ
ತಡಿಯನಡರಿದು ಧೊಪ್ಪನವನಿಗೆ
ಕೆಡೆದು ಪರವಶನಾದನಿತ್ತಲು
ತಡೆದನೇಕೆಂದಟ್ಟಿದನು ಸಹದೇವನನು ನೃಪತಿ ೧೬
ತವಕ ಮಿಗೆ ನಡೆತಂದು ಮೈಮರೆ
ದವನ ಕಂಡನು ಬಹಳ ಢಗೆ ಪರಿ
ಭವಿಸಲುದಕವ ಕುಡಿದು ಬಳಿಕಾರೈವೆನಿದನೆನುತ
ಲವಲವಿಸಿ ತಾಳಿಗೆಯ ತಲ್ಲಣ
ದವನು ಹೊಕ್ಕನು ಕೊಳವನಮಳಾಂ
ಬುವನು ಮೊಗೆದನು ಮೊಗಕೆ ಮೋಹಲು ಮೇಲೆ ದನಿಯಾಯ್ತು ೧೭
ಬಿಡು ಬಿಡೆಲೆ ಸಹದೇವಯೆನ್ನಯ
ನುಡಿಗೆ ಮಾರುತ್ತರವ ಕೊಡು ಮುಂ
ಗೆಡದೆ ಮುಂದಣ ನಿನ್ನವನ ಕಂಡಿಂತು ಮರುಳಹರೆ
ಮಡಿಯಲೆಳಸದಿರೆನಲು ಢಗೆಯವ
ಗಡಿಸೆ ಸೈರಿಸಲರಿಯದುತ್ತರ
ಗುಡದೆ ಜಲವೀಂಟಿದನು ದಾಟಿದುದಸು ಕಳೇಬರವ ೧೮
ಈತನತಿ ಮೈಮರೆದನತ್ತಲು
ಕಾತರಿಸಿದನು ಭೂಪನಿಬ್ಬರ
ಮಾತು ಮುಖದಿರುಹಿತ್ತು ಶಿಶುಗಳಿಗಾವ ಹದನಾಯ್ತೊ
ತಾತ ಹೋಗೈ ಪಾರ್ಥ ಬಾಲಕ
ರೇತಕತ್ತಲೆ ತಡೆದರೆಂಬುದ
ನೀ ತಿಳಿದು ತಾ ಜಲವನೆನೆ ಕೈಗೊಂಡು ನಡೆತಂದ ೧೯
ಹಿಮದ ಗಾಳಿಯ ಪಥವಿಡಿದು ಮ
ಧ್ಯಮದ ಪಾಂಡವನೈತರುತ ಮುಂ
ದಮಲ ಸರಸಿಯ ತೀರದಲಿ ಕೀಲಿಸಿದ ಮಗ್ಗುಲಲಿ
ಯಮಳರೊರಗಿರೆ ಕಂಡು ಮನದಲಿ
ತಮವ ಹಿಡಿದನು ನೀರುಗುಡಿದೀ
ಮಮತೆ ಮಿಗಲಾರೈವೆನೆನುತಿಳಿದನು ಸರೋವರವ ೨೦
ಚರಣ ವದನವ ತೊಳೆದು ಢಗೆಡಾ
ವರಿಸಲಕ್ಷಮನಾಗಿ ಕರದಲಿ
ತೆರೆಗಳನು ತೆಗೆ ನೂಕಿ ಮೊಗೆದನು ಗರಳಮಯ ಜಲವ
ಮರುಳೆ ನೀ ಕೌಂತೇಯ ಮಾದ್ರೇ
ಯರನು ನೋಡುವುದಿತ್ತ ನನಗು
ತ್ತರವನಿತ್ತುದಕವನು ಕುಡಿಯೆಂದುದು ನಭೋವಚನ ೨೧
ಮೇಲನಾರೈಯುವನೆ ತೃಷ್ಣಾ
ಲೋಲ ಚಿತ್ತನು ಕಾಮಿ ಮೃಗಯಾ
ಕೇಳಿಲಂಪಟನರ್ಥಲಾಭದ್ಯೂತಲೋಲುಪನು
ಕೇಳು ಜನಮೇಜಯ ತಟಾಕದ
ಕಾಳಕೂಟವ ಕುಡಿದನರ್ಜುನ
ಕಾಲಿಡುತ ಡೆಂಡಣಿಸಿ ಮೈಮರೆದವರ ಕೂಡಿದನು ೨೨
ತಡೆದರತ್ತಲು ಮೂವರನುಜರು
ಮಡಿದರೇನೋ ಚಿತ್ರವಾಯಿತು
ನಡೆ ಸಮೀರ ಕುಮಾರ ನೀ ಹೋಗತ್ತ ತಳುವದಿರು
ತಡೆಯದೈತಹುದೆನೆ ಹಸಾದದ
ನುಡಿಯಲವನೈದಿದನು ಹೆಜ್ಜೆಯ
ಹಿಡಿದು ಬಳಿಸಲಿಸಿದನು ಬರೆ ಬರೆ ಕಂಡನದ್ಭುತವ ೨೩
ಥಟ್ಟುಗೆಡೆದಸುಗಳೆದ ತನ್ನೊಡ
ಹುಟ್ಟಿದರನೀಕ್ಷಿಸಿದನುಸುರಿನ
ಬಟ್ಟೆಯನು ನೋಡಿದನು ಮೂಗಿನ ಬಳಿಯ ಬೆರಳಿಟ್ಟು
ಮುಟ್ಟಿತಿವರಿಗೆ ಮರಣವಿನ್ನೇ
ನಟ್ಟಿಕೊಲುವೆನು ಜವನ ಮೃತ್ಯುವ
ನಿಟ್ಟೆಲುವನುದುರಿಸುವೆನೆನುತೊದರಿದನು ಕಲಿಭೀಮ ೨೪
ಮನ್ನಣೆಗೆ ಹಿರಿಯಯ್ಯನೆಂದಾ
ನಿನ್ನು ಬೆಗೆವೆನೆ ಜವನಗಂಟಲ
ಮುನ್ನ ತಿರುಹುವೆನೆನುತ ಕಿಡಿಕಿಡಿಯೋದನಾ ಭೀಮ
ಇನ್ನೊದರಿ ಫಲವೇನು ಕುಡಿವೆನು
ಮುನ್ನಜಲವನು ಬಳಿಕ ನೋಡುವೆ
ನೆನ್ನವರ ಮಾರ್ಗವನೆನುತ ಮೊಗೆದನು ವಿಷೋದಕವ ೨೫
ಮಾಣುಮಾಣುತ್ತರವ ಕೊಡು ಮುಂ
ಗಾಣಬೇಹುದು ತಂದೆ ತನಗೀ
ಕ್ಷೋಣಿಯಲಿ ಪೂರ್ವದ ಪರಿಗ್ರಹವೀ ಸರೋವರವು
ಜಾಣನಾದೊಡೆ ಜಾರಬಿಡು ಬಿಡು
ಕೇಣವನು ನೀನೆನಲು ಗಗನದ
ವಾಣಿಯನು ಮನ್ನಿಸದೆ ಮಾರುತಿಯೀಂಟಿದನು ಜಲವ ೨೬
ದಡದಡಿಸಿ ಕೊಳನಿಂದ ಹೊರಗಡಿ
ಯಿಡುತ ಬಳಲಿದನನಿಲಸುತನವ
ರೊಡನೆ ಮೈಯಿಕ್ಕಿದನು ಕಳಚಿದ ನೀಲಗಿರಿಯಂತೆ
ಅಡಿಗೆಡೆದನಾ ಭೀಮನಿತ್ತಲು
ಕಡುನಿರೋಧವ ಹಿಡಿದು ತಾನೇ
ನಡೆದು ಬಂದನು ಧರ್ಮಸುತನಾ ಕೊಳನ ಪಥವಿಡಿದು ೨೭
ಮೇಲೆ ಮಗುಳ್ದಾಲಿಗಳ ಚಾಚಿದ
ತೋಳಮೇಲಿನ ತಲೆಯ ಸುಯ್ಲಿನ
ಲೀಲೆಯಡಗಿದ ಮುಖದ ಮಸುಳಿದ ಕಾಯಕಾಂತಿಗಳ
ಮೇಲುಮುಸುಕಿನ ಮಗ್ಗುಲಿನಲಿಹ
ನಾಲುವರನೀಕ್ಷಿಸುತ ಭೂಪತಿ
ಕೋಲುಮರುಮೊನೆಗೊಂಡವೋಲ್ ಮರುಗಿದನು ಚಿತ್ತದಲಿ ೨೮
ಮುಸುಕನರೆದೆರೆದವರ ವರ ಮುಖ
ದುಸುರುಗಳನೀಕ್ಷಿಸಿದನಕಟಾ
ಶಿಶುಗಳಿಗೆ ಕಡುಹಾನಿಯಾಯಿತೆ ಶಿವಮಹಾದೇವ
ನಿಶಿತ ಶಸ್ತ್ರದ ಗಾಯವಿಲ್ಲು
ಬ್ಬಸದ ಸಾವಿನ್ನಾವುದೋ ನಾ
ನಸುಗಳೆಯದೇಕುಳಿದೆನೆಂದಳಲಿದನು ಯಮಸೂನು ೨೯
ಇಂದಿನಲಿ ಕಡೆಯಾಯ್ತಲಾ ವಿಮ
ಲೇಂದುವಂಶಕೆ ಕೌರವನ ಛಲ
ಸಂದುದೇ ಅಹಿತಾವನೀಶರಿಗಾಯ್ತೆ ಪರಿತೋಷ
ಕೊಂದರಾರೋ ಅಕಟಕಟ ಅರ
ವಿಂದನಾಭನ ಕೃಪೆಗೆ ಬಾಹಿರ
ನಿಂದು ತಾನಾದೆನೆ ಮಹಾದೇವೆಂದು ಚಿಂತಿಸಿದ ೩೦
ಹೋಗಲಿನ್ನೀ ನೀರುಗುಡಿದಿವ
ರಾಗುಹೋಗರಸುವೆನೆನುತ ಢಗೆ
ತಾಗಿದವನಿಪನಿಳಿದು ಹೊಕ್ಕನು ವಿಷಸರೋವರವ
ಬಾಗಿ ಮೊಗೆದನು ಜಲವನಭ್ರದೊ
ಳಾಗಲಾದುದು ರಭಸವೆಲೆ ಸಕ
ಲಾಗಮಜ್ಞಮಹೀಶ ಕೇಳೆಂದುದು ನಭೋನಿನದ ೩೧
ಅನುಜರವಿವೇಕಿಗಳು ಪರಿಣತ
ಜನದಲಧಿಕನು ನೀ ನಿಧಾನಿಸಿ
ನನಗೆ ಮಾರುತ್ತರವನಿತ್ತು ನಿರಂತರಾಯದಲಿ
ತನುವಿಗಾಪ್ಯಾಯನವ ಮಾಡುವು
ದೆನಲು ಕೇಳಿದು ಢಗೆಯ ಸೈರಿಸಿ
ಘನಪಥದ ನುಡಿ ಯಾರದೆಂದವನೀಶನಾಲಿಸಿದ ೩೨
ಬಿಸುಟನುದಕವನಾ ನುಡಿಯನಾ
ಲಿಸಿದ ನಾರೈ ನೀನು ನಿನಗಾ
ಗಸದಲಿರವೇನಸುರನೋ ಕಿನ್ನರನೊ ನಿರ್ಜರನೊ
ಉಸುರೆನಲು ತಾಂ ಯಕ್ಷನೀಸಾ
ರಸವು ನನ್ನದು ನಿನ್ನ ತಮ್ಮದಿ
ರಸುವನೆಳೆದವ ನಾನು ಕೇಳೈ ಧರ್ಮಸುತಯೆಂದ ೩೩
ಬಾಲಕರು ನೀವೆನ್ನ ಮಾತನು
ಕೇಳಿಯುದಕವ ಕುಡಿವುದೆನೆ ಭೂ
ಪಾಲ ನಿನ್ನವರೆನ್ನ ಮಾತನು ಕೇಳಿ ಮನ್ನಿಸದೆ
ಮೇಲುಗಾಣದೆ ನೀರು ಕುಡಿದು ವಿ
ಟಾಳಿಸಿದರಿಂದೆನ್ನ ಮಾತನು
ಕೇಳಿ ನೀನುತ್ತರವ ರಚಿಸೆಲೆ ರಾಯ ನೀನೆಂದ ೩೪
ಆವುದೈ ನಿನ್ನರಿತ ನಿನಗಾ
ನಾವ ಪರಿಯಿಂದುಸುರ್ವೆ ನೀನದ
ನೋವಿ ಬೆಸಗೊಳಲನಿತ ಕೇಳುವೆನೆನಲು ಗುಹ್ಯಕನು
ನೀವು ಕರ ಧರ್ಮಜ್ಞರೆಂಬ ಭಿ
ಭಾವಿಗಳು ಗಡ ಧರ್ಮಕಥನವ
ನೋವಿ ರಚನೆಯ ರಚಿಸುವುದುಯೆನೆ ನೃಪತಿಯಿಂತೆಂದ ೩೫
ಧರ್ಮವೆಂಬುದನುಸುರ ಬಹುದೇ
ಧರ್ಮವಾರಿಗೆ ಗೋಚರವು ತ
ದ್ಧರ್ಮಸಾರವನರಿವರಾರೀ ವರ್ತಮಾನದಲಿ
ಧರ್ಮವರಿದುದನರಿಪುವೆನು ತಾ
ನಿಮ್ಮ ಚಿತ್ತಕೆ ಸೊಗಸಿದೊಡಮದ
ನೆಮ್ಮ ಕೇಳೆನೆ ಖಚರ ಪ್ರಶ್ನೆಯ ನೃಪತಿಗಿಂತೆಂದ ೩೬
ಜಲನಿಧಿಗೆ ಸರಿ ಸರಸಿಯಾವುದು
ನೆಲಕೆ ಹಿತವನದಾರು ಮರ್ತ್ಯಾ
ವಳಿಗೆ ಮಾತೆಯದಾರು ಸೂರ್ಯ ಪ್ರಭೆಗೆ ಸರಿಯೇನು
ತಿಳುಹುಧರ್ಮಜ ಸಕಲ ಧರ್ಮಾ
ವಳಿಯ ಸಾರವನೆನಲು ಯಕ್ಷನ
ಬಲುಮೆಗವನೀಪಾಲನತಿ ಪರಿತೋಷದಲಿ ನುಡಿದ ೩೭
ಗಗನವಬುಧಿಗೆ ಸರಿ ಸರೋವರ
ಜಗಕೆ ಹಿತವನು ಶಕ್ರ ಮರ್ತ್ಯಾ
ಳಿಗಳ ಮಾತಾರೂಪು ಗೋವುಗಳದು ನಿದಾನಕಣ
ಬಗೆಯಲಗ್ಗದ ಸತ್ಯವೆಂಬುದು
ಗಗನಮಣಿಗೆಣೆಯೆನಲು ಚಿತ್ತಕೆ
ಸೊಗಸಿ ತಲೆದೂಗಿದನು ಮಗುಳಿಂತೆಂದನಾ ಖಚರ ೩೮
ನಯವಿದನೆ ಕೇಳಾವನೈ ಕ್ಷ
ತ್ರಿಯನು ವಿಪ್ರರೊಳಾವನೈ ಶ್ರೋ
ತ್ರಿಯನು ಸುಜನರೊಳಾವನೈ ಮಹಪುರುಷನೆಂಬುವನು
ನಿಯತಧೀರನದಾರು ದೇವ
ಪ್ರಿಯನದಾವನು ಕಠಿಣಕಷ್ಟಾ
ಶ್ರಯನದಾವನು ಧರ್ಮಸುತ ಹೇಳೆಂದನಾ ಖಚರ ೩೯
ಧೃತಿಯುತ ಕ್ಷತ್ರಿಯನು ವೇದ
ವ್ರತಯುತ ಶ್ರೋತ್ರಿಯನಹಿಂಸಾ
ರತನು ಮಹಪುರುಷನು ಸುಧೀರನು ಸಾಧುಸೇವಕನು
ಸತತ ಪರರುಪಕಾರಿ ದೇವ
ಪ್ರತತಿ ವಲ್ಲಭ ಪರರ ಗುಣದು
ನ್ನತಿಯ ಸೈರಿಸದವನು ಕಷ್ಟನು ಯಕ್ಷ ಕೇಳೆಂದ ೪೦
ನಿಂದ್ಯನಾವನು ಲೋಕದೊಳಗಭಿ
ವಂದ್ಯನಾವನು ಜೀವವಿರೆ ಮೃತ
ನೆಂದಡಾವನು ದೇಶಕಳಿವಹುದಾರ ದೆಸೆಯಿಂದ
ಸಂದ ಯಜ್ಞವದೆಂತು ಕೆಡುವುದು
ತಂದೆ ಹೇಳೈ ತನಗೆನಲು ಸಾ
ನಂದದಿಂದವೆ ಕಾಣಿಸಿದನಾ ಖಚರಗುತ್ತರವ ೪೧
ಕೇಳು ಪರನಿಂದಕನೆ ನಿಂದ್ಯನು
ಹೇಳಲೇಂ ಪರಹಿತನೆ ವಂದ್ಯನು
ಹೇಳಿದಿಚ್ಚೆಗೆ ನಡೆವ ನೃಪನಿಂದಳಿವುದಾ ದೇಶ
ಕೇಳು ನಡೆವೆಣನೇ ದರಿದ್ರನು
ಸಾಲದೆಣಿಸಿದ ದಕ್ಷಿಣೆಯ ಯ
ಜ್ಞಾಳಿ ನಿಷ್ಫಲವೆಂದು ನುಡಿದನು ಯಾರಕೌಂತೇಯ ೪೨
ನರಕಿಯಾವನು ಸುಜನರಲಿ ಬಾ
ಹಿರನದಾವನು ಲೋಕವರಿಯಲು
ಹರಣವಿರೆ ಹೊಂದಿದನದಾವನು ಭೂಮಿಪಾಲರಲಿ
ಮರುಳದಾವನು ಮಾನಭಂಗದಿ
ಭರಿತನಾವನು ಹೇಳು ಧರ್ಮಜ
ಸರಸಿಯಲಿ ಬಳಿಕುದಕವನು ಕುಡಿಯೆಂದನಾ ಖಚರ ೪೩
ಎನೆ ಕೃತಘ್ನನೆ ನರಕಿ ವಿದ್ಯಾ
ಧನ ಮದಾಂಧನೆ ಬಾಹಿರನು ಹೊ
ಕ್ಕನುವರವ ಹಿಂಗುವ ಮಹೀಪತಿ ಜೀವವಿರೆ ಮೃತನು
ವಿನುತ ಗುರುವರಿಯದನೆ ಮರುಳಂ
ಗನೆಯರಲಿ ವಿಶ್ವಾಸಪರನೇ
ಜನವರಿಯಲಭಿಮಾನಹೀನನು ಯಕ್ಷ ಕೇಳೆಂದ ೪೪
ಕೊಳದ ಮಧ್ಯದಿ ಧರ್ಮನಂದನ
ತಿಳುಹುತಿದ್ದನು ಧರ್ಮತತ್ವವ
ಬಳಲಿದನು ಬಿರುತಡಿಯಲೇ ಕೌರವನ ಕೃತ್ರಿಮದ
ಬಲುಬಿರಿವ ಘನಭೂತ ಬಂದುದು
ನೆಲೆಯ ಧರ್ಮಜನನ್ನು ಕಮ್ಡುದು
ಎಲೆ ಮಹಾದೇವೆನುತ ಮುರಿದುದು ಹಸ್ತಿನಾಪುರಿಗೆ ೪೫
ಒಲಿದನೊಡಲನು ಧರ್ಮ ಸಂಗತಿ
ಗಲ ಸುಸಂವಾದದಲಿ ನಿಜತನು
ಪುಳಕವುಬ್ಬರಿಸಿದುದು ಗಬ್ಬರಿಸಿದುದು ದುಷ್ಕೃತವ
ಎಲೆ ಮಹೀಪತಿ ಮೆಚ್ಚಿದೆನು ಬೇ
ಡಳಿದ ತಮ್ಮಂದಿರಲಿವೊಬ್ಬನ
ತಲೆಯ ಬದುಕಿಸಿಕೊಡುವೆನೆನೆ ಯಮತನುಜನಿಂತೆಂದ ೪೬
ಅಸುವನಿತ್ತೈ ಖಚರಪತಿ ಜೀ
ವಿಸಲಿ ನಕುಲನು ಧನ್ಯನಾನೆನೆ
ನಸುನಗುತ ಚೇತರಿಸಿ ಮೈಮುರಿದೆದ್ದನಾ ನಕುಲ
ನಿಶಿತಮತಿ ಮೆಚ್ಚಿದೆನು ಬೇಡಿ
ನ್ನಸುವನೊಬ್ಬಂಗಿತ್ತೆನೆನೆ ಜೀ
ವಿಸಲಿ ಸಹದೇವಾಂಕನೆಂದನು ಧರ್ಮನಂದನನು ೪೭
ಜನಪ ನಿನ್ನಾಳಾಪವೆನ್ನಯ
ಮನಕೆ ವಿಸ್ಮಯವಾಯ್ತು ಭೀಮಾ
ರ್ಜುನರು ನಿನ್ನೊಡಹುಟ್ಟಿದರು ನೀನವರಿಗತಿಹಿತನು
ಅನುಜರವರಿರಲೇಕೆ ಮಾದ್ರೀ
ತನುಜರೆಂಬರ ಬಯಸಿದೈ ಹೇ
ಳೆನಲು ನಸುನಗೆ ಮೊಳೆಯೆ ನುಡಿದನು ಧರ್ಮನಂದನನು ೪೮
ಸಾವು ಬೊಪ್ಪಂಗಾಗೆ ಮಾದ್ರೀ
ದೇವಿ ತನ್ನನು ಕರೆದು ಶಿಶುಗಳ
ನೋವು ಕೇಡಿದು ನಿನ್ನದಾರೈದಿವರ ಸಲಹುವುದು
ಭಾವ ಭೇದವನಣುವ ಬಗೆಯದೆ
ಕಾವುದೆಲೆ ಮಗನೆಂದು ಬೆಸಸಿದ
ಳಾವಪರಿಯಲಿ ಮರೆವೆನೈ ನಾ ಮಾದ್ರಿದೇವಿಯರ ೪೯
ಎನಲು ಮೆಚ್ಚಿದನುಳಿದ ಭೀಮಾ
ರ್ಜುನರ ಹರಣವನಿತ್ತು ನಿಜ ನಂ
ದನನನಪ್ಪಿದನೊಲವಿನಲಿ ಯಮರಾಜನೈತಂದು
ತನುಜಸಾಕಿನ್ನಾಯ್ತು ನಿಮಗೀ
ವನನಿವಾಸವು ಬೀಳುಕೊಡು ಮುನಿ
ಜನವನಿನ್ನಜ್ಞಾತವಾಸಕೆ ಮನವ ಮಾಡೆಂದ ೫೦
ಆ ಸಮಯದಲಿ ಕನಕ ಹರಹಿಸಿ
ದಾಸು ಹೋಮಕೆ ತೃಪ್ತಿವಡೆಯಿಸಿ
ಮೀಸಲಿನ ಪೂರ್ಣಾಹುತಿಯ ಕೊಡುವಾ ಮುಹೂರ್ತದಲಿ
ಭಾಸುರದ ತೇಜಃ ಪ್ರಕಾಶದ
ಮೀಸಲಳಿಯದ ಭೂತ ನಡೆತಂ
ದಾಸಗರ್ವನ ಕನಕನನು ತಿಂದಡಗಿತಗ್ನಿಯಲಿ ೫೧
ಯಮನ ಬಳಿಕೊಲಿದೀ ಪ್ರಸಂಗದ
ಕ್ರಮವ ಕೃತ್ಯೆಯ ಹದನನೆಲ್ಲಾ
ಯಮತನೂಜಂಗರುಹಿ ತದ್ವೃತ್ತಾಂತ ಸಂಗತಿಯ
ಕಮಲನಾಭನ ಕರುಣದಳತೆಯ
ಕ್ರಮವನರುಹುತೆ ಬಳಿಕ ಮುಂದಣ
ವಿಮಲದಜ್ಞಾತಕ್ಕೆ ನೇಮಿಸಿ ಹರಹಿದನು ಮಗನ ೫೨
ನೀವು ಪಾಂಡವರೆಂದು ನಿಮ್ಮನ
ದಾವ ಮಾನವರರಿಯದಿರಲಿ ಮ
ಹಾವಿಭವದಲಿ ಬೆಳಗುವುದು ಬಳಿಕವನಿಮಂಡಲವ
ದೈವಬಲ ನಿಮಗುಂಟು ಮೇಣಿ
ನ್ನಾವುದರಿದಲ್ಲೆಂದು ತನುಜನ
ನೋವಿ ಮನ್ನಿಸಿ ಬೀಳುಕೊಟ್ಟನು ಪಾಂಡುನಂದನರ ೫೩
ಅರಣಿಯನು ತಂದಿತ್ತು ಧರಣೀ
ಸುರನ ಮನ್ನಿಸಿ ಕಳುಹಿ ಮುನಿಗಳ
ಕರೆಸಿ ಧೌಮ್ಯಾದಿಗಳಿಗೀ ಹದನರುಹಿದನು ಬಳಿಕ
ವರ ಸುಭದ್ರಾಸೂನು ಪಾಂಚಾ
ಲರನು ಧೃಷ್ಟದ್ಯುಮ್ನ ಮೊದಲಾ
ಗಿರೆ ನಿಜಾಪ್ತರನವರವರ ಪಟ್ಟಣಕೆ ಕಳುಹಿದನು ೫೪
ಅಂದು ಭೂಪತಿ ನೆರೆದ ಪರಿಜನ
ವೃಂದವನು ಸಂತವಿಸಿ ನೀವ್ ಮನ
ಬಂದ ಠಾವಿನಲಿಹುದು ಎಮ್ಮಜ್ಞಾತ ಹೋಹನಕ
ಎಂದು ಕಳುಹಿಸಿ ಅನುಜರೊಡನಾ
ಯಿಂದುಮುಖಿ ಸಹಗಮಿಸಿದನು ನಲ
ವಿಂದ ನೆನೆವುತ ವೀರನಾರಾಯಣನ ಸಿರಿಪದವ ೫೫
ಹರಿನಮೋ ಜಯ ಭಕ್ತರಘಸಂ
ಹರ ನಮೋ ಜಯ ಸಕಲ ಭುವನೇ
ಶ್ವರ ನಮೋ ಜಯ ಕೃಷ್ಣಕೇಶವ ವಿಷ್ಣುವಾಮನನೆ
ಪರಮ ಪುಣ್ಯ ಶ್ಲೋಕ ಜಯ ಜಗ
ಭರಿತ ನಿರ್ಮಳ ರೂಪ ಜಯ ಜಯ
ಕರುಣಿ ರಕ್ಷಿಸುವೊಲಿದು ಗದುಗಿನ ವೀರನಾರಯಣ ೫೬
ಸಂಕ್ಷಿಪ್ತ ಭಾವ
ಯಕ್ಷಪ್ರಶ್ನೆಯ ಪ್ರಸಂಗ
ಮಾರ್ಕಂಡೇಯ ಮುನಿಯು ರಾಮಾಯಣದ ಕಥೆಯನ್ನೂ, ಪತಿವ್ರತೆ ಸಾವಿತ್ರಿಯ ಕಥೆಯನ್ನೂಹೇಳಿ ಪಾಂಡವರ ಮನದ ದುಗುಡವನ್ನು ಕಳೆದು ಎಲ್ಲರನ್ನೂ ಹರಸಿ ಮರಳಿದನು. ಮತ್ತೆ ಆರುತಿಂಗಳು ಉರುಳಿದವು.
ಒಮ್ಮೆ ದ್ವಿಜನೊಬ್ಬನ ಅರಣಿಯನ್ನು ಒಂದು ಜಿಂಕೆಯು ಎತ್ತಿಕೊಂಡು ಹೋಗಲು ಅವನು ಬಂದುಅದನ್ನು ಮರಳಿ ತಂದುಕೊಡಬೇಕು ಎಂದು ಪಾಂಡವರನ್ನು ಕೇಳಿಕೊಂಡನು. ಒಡನೆಯೇ ಐವರೂಹೊರಟು ಆ ಜಿಂಕೆಯ ಜಾಡನ್ನು ಹಿಡಿದು ತುಂಬಾ ದೂರ ನಡೆದು ಕೊನೆಗೂ ಆ ಅರಣಿಯನ್ನುಪಡೆಯುವಲ್ಲಿ ಯಶಸ್ವಿಯಾದರು. ಅಷ್ಟರಲ್ಲಿ ಅವರಿಗೆ ಬಹಳ ಆಯಾಸವಾಗಿಬಾಯಾರಿಕೆಯುಂಟಾಯಿತು.
ಧರ್ಮಜನು ನಕುಲನನ್ನು ಕರೆದು ನೀರನ್ನು ಹುಡುಕಿ ತರುವಂತೆ ಹೇಳಿ ಕಳಿಸಿದನು. ಅದರಂತೆ ಬಂದನಕುಲನಿಗೆ ಒಂದು ಸರೋವರ ಕಂಡಿತು. ತಾನು ಮೊದಲು ನೀರು ಕುಡಿದು ದಣಿವಾರಿಸಿಕೊಂಡುನಂತರ ಅವರಿಗೆ ಒಯ್ಯುವೆನೆಂದು ಕೊಳದೊಳಗೆ ಇಳಿದನು. ಆಗ ಆಕಾಶದಿಂದ ಅಶರೀರವಾಣಿಕೇಳಿಸಿತು. ಮೊದಲು ನನ್ನ ಪ್ರಶ್ನೆಗಳಿಗೆ ಉತ್ತರಿಸು ಎಂದು. ನಕುಲ ಕೇಳದೆ ನೀರು ಕುಡಿದುದಂಡೆಯಲ್ಲಿ ಉರುಳಿದನು.
ನಕುಲನನ್ನು ನೋಡಲು ಹೊರಟ ಸಹದೇವ, ನಂತರ ಅರ್ಜುನ, ಭೀಮ ಎಲ್ಲರಿಗೂ ಇದೇಗತಿಯಾಯಿತು. ಕೊನೆಯಲ್ಲಿ ಧರ್ಮಜನೇ ಹೊರಟನು. ಸರೋವರದ ಬಳಿಗೆ ಬಂದುಗತಪ್ರಾಣರಾಗಿ ಬಿದ್ದಿದ್ದ ತಮ್ಮಂದಿರನ್ನು ಕಂಡು ಗೋಳಾಡಿದನು. ಕೌರವರ ಆಸೆ ತೀರಿತುಎಂದುಕೊಂಡನು. ನೀರು ಕುಡಿದು ನಂತರ ಇದರ ಆಗುಹೋಗುಗಳನ್ನು ವಿಚಾರಿಸುವೆನೆಂದುಕೊಳಕ್ಕಿಳಿದನು. ಮತ್ತೆ ಅದೇ ಮಾತುಗಳು ಕೇಳಿದವು.
ವಿವೇಕಿಯಾದ ಧರ್ಮಜನು ಯಾರು ನೀನು? ಎನ್ನಲು ನಾನು ಒಬ್ಬ ಯಕ್ಷನು. ಇದು ನನ್ನಸರೋವರ. ನನ್ನ ಪ್ರಶ್ನೆಗಳಿಗೆ ಉತ್ತರಿಸು ಎಂಬ ಧ್ವನಿ ಕೇಳಿತು. ಸರಿ ಎಂದನು.
ಯಕ್ಷನ ಪ್ರಶ್ನೆಗಳು ಪ್ರಾರಂಭವಾದವು. ಸಾಗರಕ್ಕೆ ಸಮ ಯಾವುದು? ಹಿತನು ಯಾರು? ಎಲ್ಲರಿಗೂಮಾತೆ ಯಾರು? ಸುರಗಯನ ಪ್ರಬೆಗೆ ಸರಿಸಾಟಿ ಯಾವುದು? ಎನ್ನಲು ಧರ್ಮಜನು ಸಾಗರಕ್ಕೆಗಗನವೇಸಮ. ಜಗತ್ತಿಗೆ ಹಿತನಾದವನು ಇಂದ್ರ, ಗೋವು ಎಲ್ಲರಿಗೂ ಮಾತೆ. ಸತ್ಯವೇಸೂರ್ಯನೆನ್ನಲು ಯಕ್ಷನು ಮತ್ತೆ ಮುಂದುವರಿಸಿದನು.
ಕ್ಷತ್ರಿಯ ಮೊದಲಾದವರು ಯಾರೆನ್ನಲು ಧೃತಿಯೇ ಕ್ಷತ್ರಿಯ, ವೇದವಿದನು ಶ್ರೋತ್ರಿಯ, ಅಹಿಂಸಾರತನು ಮಹಾಪುರುಷ ಮತ್ತು ಸುಧೀಮನು ಸಾಧುಸೇವಕನು. ಪರೋಪಕಾರಿಯುದೇವರಿಗೆ ಪ್ರಿಯನು ಮತ್ತು ಪರರ ಉನ್ನತಿಯನ್ನು ಸಹಿಸದವನು ಕಷ್ಟನು ಎಂದು ಸೂಕ್ತಉತ್ತರವಿತ್ತನು.
ನಿಂದ್ಯನಾರು, ಅಭಿವಂದ್ಯನಾರು, ಜೀವವಿದ್ದೂ ಮೃತನಾರು ಯಜ್ಞವುಕೆಡುವ ಬಗೆಯೆಂತು ಎನ್ನಲುಪರನಿಂದಕನೆ ನಿಂದ್ಯನು, ಪರಹಿತನೆ ವಂದ್ಯನು, ದರಿದ್ರನೇ ಜೀವಂತ ಹೆಣನು, ದಕ್ಷಿಣೆಯುಸಂಮೃದ್ಧಿಯಿಲ್ಲದಿದ್ದರೆ ಯಜ್ಞವು ಕೆಡುವುದೆಂದನು. ಯಕ್ಷನು ಸಂತಸಪಟ್ಟನು. ಮತ್ತೂ ಕೇಳಿದನು.
ಕೃತಘ್ನಿಯಾರು? ಮದಾಂಧನಾರು? ಮರುಳನಾರು ಇತ್ಯಾದಿ. ಧರ್ಮಜನು ಕೃತಘ್ನನೆ ನರಕಿ, ವಿದ್ಯಾಮದನೇ ಮದಾಂಧನು, ಗುರುವನ್ನು ಅರಿಯದವ ಮರುಳನು ಎಂದನು. ಆಗ ಯಕ್ಷನಿಗೆಪರಮ ಸಂತೋಷವಾಯಿತು. ಈ ಭಾಗವು ಯಕ್ಷಪ್ರಶ್ನೆಯೆಂದೇ ಪ್ರಸಿದ್ಧವಾಗಿದೆ.
ಯಕ್ಷನಿಗೆ ಸಂತೋಷವಾಗಿ ತಮ್ಮಂದಿರಲ್ಲಿ ಒಬ್ನನ ಪ್ರಾಣವನ್ನು ಕೇಳು ಎಂದಾಗ ನಕುಲನನ್ನುಕೇಳುವನು. ಮತ್ತೆ ಸಹದೇವನನ್ನು ಕೇಳಿದನು. ಏಕೆಂದು ಪ್ರಶ್ನಿಸಿದಾಗ ಮಾದ್ರಿಯು ತನ್ನ ಮಕ್ಕಳಯೋಗಕ್ಷೇಮ ತನಗೆ ಒಪ್ಪಿಸಿದ್ದನ್ನು ನೆನಪಿಸಿಕೊಂಡನು. ಕೊನೆಯಲ್ಲಿ ಯಕ್ಷರೂಪದಲ್ಲಿದ್ದ ಯಮನುಪ್ರತ್ಯಕ್ಷನಾಗಿ ಧರ್ಮಜನನ್ನು ಹರಸಿ ಎಲ್ಲರನ್ನೂ ಬದುಕಿಸಿದನು. ಇನ್ನು ಮುಂದಿನ ದಿನಗಳಲ್ಲಿಗೆಲುವು ನಿಮಗಿರಲಿ ಎಂದು ಹರಸಿ ಅಜ್ಞಾತವಾಸದ ಕುರಿತು ಚಿಂತಿಸುವಂತೆ ಸೂಚಿಸಿವಾಪಸಾದನು. ದೇವದೇವನಿಗೆ ನಮೋ ಎಂಬ ವಚನದೊಂದಿಗೆ ಎಲ್ಲರೂ ಮರಳಿದರು.
ಇಲ್ಲಿಗೆ ಅರಣ್ಯಪರ್ವ ಸುಸಂಪನ್ನವಾಯಿತು.
ಕಾಮೆಂಟ್‌ಗಳು