ರಾಗೌ
ರಾಗೌ
ಪ್ರೊ.ರಾಮೇಗೌಡ ಅವರು 'ರಾಗೌ’ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದವರು. ಅವರು ಕಾವ್ಯ, ವಿಮರ್ಶೆ, ಸಂಶೋಧನೆ, ಗ್ರಂಥಸಂಪಾದನೆ, ಜಾನಪದ, ಮಕ್ಕಳ ಸಾಹಿತ್ಯ, ನಾಟಕ ಹೀಗೆ ಬಹುಪ್ರಕಾರಗಳಲ್ಲಿ 60ಕ್ಕಿಂತ ಹೆಚ್ಚು ಕೃತಿಗಳನ್ನು ನೀಡಿ ಮಹತ್ವದ ಕೆಲಸ ಮಾಡಿರುವ ಮಹನೀಯರು.
ರಾಗೌ ಅವರು 1942ರ ಏಪ್ರಿಲ್ 3ರಂದು ಮದ್ದೂರು ತಾಲ್ಲೂಕಿನ ಈರೇಗೌಡನದೊಡ್ಡಿಯಲ್ಲಿ ಜನಿಸಿದರು. ತಂದೆ ಮಾಸ್ತಿಗೌಡ. ತಾಯಿ ನಿಂಗಮ್ಮ. ಬಡತನವಿದ್ದರೂ ಪ್ರಾಥಮಿಕ ಹಂತದಿಂದ ಸ್ನಾತಕೋತ್ತರ ಶಿಕ್ಷಣದವರೆಗೆ ಶ್ರದ್ಧೆಯಿಂದ ಓದಿ ಕನ್ನಡ ಎಂ.ಎ ಪದವಿಯನ್ನು ಚಿನ್ನದ ಪದಕದೊಂದಿಗೆ ಮೊದಲ ರ‍್ಯಾಂಕ್ ಸಾಧನೆಯಲ್ಲಿ ಗಳಿಸಿದರು. ರಾಗೌ ಅವರು ಡಾ.ಹಾ.ಮಾ.ನಾಯಕರ ಮಾರ್ಗದರ್ಶನದಲ್ಲಿ 'ಕನ್ನಡ ಕಾವ್ಯಗಳಲ್ಲಿ ಐತಿಹಾಸಿಕ ವಿಚಾರಗಳು’ ಎಂಬ ಸಂಶೋಧನಾತ್ಮಕ ಮಹಾಪ್ರಬಂಧವನ್ನು ಮಂಡಿಸಿ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ. ಗಳಿಸಿದರು.
ರಾಗೌ ಅವರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ 37 ವರ್ಷ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ರಾಗೌ ಅವರ ಮೊದಲ ಕವನಸಂಕಲನ ‘ಯಾತ್ರೆ’ 1966ರಲ್ಲಿ ಪ್ರಕಟವಾಯಿತು. ಮುಂದೆ ತೆಪ್ಪ, ಮೋಡ ಮುಸುಕಿದ ಆಕಾಶ, ನೆಲದ ಮರೆಯ ನಿಧಾನ, ಮಾತು ಮೌನಗಳ ನಡುವೆ, ಅನಾಗತ, ಕೋಗಿಲೆ ಗೊಂದು ಕೋರಿಕೆ, ನೀರತಾವರೆ, ಕಾಲಾತೀತ, ನಿರಾವರಣ ಸೇರಿದಂತೆ 17 ಕವನ ಸಂಕಲನಗಳನ್ನು ಪ್ರಕಟಿಸಿದರು. ಸಹಸ್ರ ಪುಟಗಳನ್ನು ಮೀರಿದ ಇವರ ಸಮಗ್ರ ಕಾವ್ಯವೂ ಪ್ರಕಟಗೊಂಡಿದೆ.
ರಾಗೌ ಅವರು ರಾಘವಾಂಕ, ಕಾವ್ಯಾನುಶೀಲನ, ಅವಗಾಹನ, ಕುವೆಂಪು ಸಾಹಿತ್ಯ ವಿಮರ್ಶನ, ಪ್ರಾಸ್ತಾವಿಕ, ದುರ್ಗಸಿಂಹ, ಪ್ರಾಚೀನ ಕಾವ್ಯ ಚಿಂತನ, ಬಿ.ಎಂ.ಶ್ರೀಕಂಠಯ್ಯ, ಟಿ.ಎಸ್. ವೆಂಕಣ್ಣಯ್ಯ ಮುಂತಾದ ಹದಿನೈದಕ್ಕೂ ಹೆಚ್ಚು ವಿಮರ್ಶಾ ಕೃತಿಗಳನ್ನು ಪ್ರಕಟಿಸಿದ್ದಾರೆ.
ರಾಗೌ ಅವರ ಸಂಶೋಧನಾ ಪ್ರಬಂಧವಾದ 'ಕನ್ನಡ ಕಾವ್ಯಗಳಲ್ಲಿ ಐತಿಹಾಸಿಕ ವಿಚಾರಗಳು’ ಕೃತಿ ‘ಕವಿರಾಜಮಾರ್ಗ’ದಿಂದ ಮೊದಲ್ಗೊಂಡು ‘ಕೆಳದಿನೃಪವಿಜಯ’ದವರೆಗಿನ ಸುಮಾರು ಒಂದುಸಾವಿರ ವರ್ಷ ವ್ಯಾಪ್ತಿಯ ಕನ್ನಡ ಕಾವ್ಯಗಳನ್ನು ಕೂಲಂಕಷವಾಗಿ ಅಭ್ಯಾಸಿಸಿ ಅಲ್ಲಿನ ಐತಿಹಾಸಿಕ ವಿಚಾರಗಳನ್ನು ಶಾಸನಗಳೊಂದಿಗೆ ಹೋಲಿಸಿ ಸತ್ಯಾಂಶವನ್ನು ಶೋಧಿಸಿ ನೈಜ ಇತಿಹಾಸವನ್ನು ಪ್ರಸ್ತುತಪಡಿಸಿರುವ ಅಮೂಲ್ಯ ಕೃತಿಯಾಗಿದೆ.
ರಾಗೌ ಅವರು ರನ್ನನ ‘ಸಾಹಸಭೀಮವಿಜಯಂ’, ‘ಅಜಿತತೀರ್ಥಂಕರ ಪುರಾಣ’, ಲಕ್ಷ್ಮೀಶನ ‘ಜೈಮಿನಿ ಭಾರತ’ ಮತ್ತು ಪಂಪಕವಿಯ ‘ಆದಿಪುರಾಣ’ ಕೃತಿಗಳನ್ನು ಬಿ.ಎಸ್.ಸಣ್ಣಯ್ಯ ಅವರೊಂದಿಗೆ ಜಂಟಿಯಾಗಿ ಸಂಪಾದಿಸಿದ್ದರೆ, ‘ಸರ್ವಜ್ಞನ ವಚನಗಳು’, ದೇವಚಂದ್ರನ ‘ರಾಜಾವಳಿ ಕಥೆ’ ಕೃತಿಗಳನ್ನು ಸ್ವತಂತ್ರವಾಗಿ ಸಂಪಾದಿಸಿದ್ದಾರೆ.
ರಾಗೌ ಅವರು ‘ಜಾನಪದ ತತ್ವಾರ್ಥ ಪ್ರವೇಶ’ ಹಾಗೂ ‘ಜನಪದ ಮಹಾಭಾರತ ಸಮಾಲೋಚನೆ' ಎಂಬ ಮಹತ್ವದ ಕೃತಿಗಳನ್ನೂ ಜನಪದ ಕಥೆ, ಒಗಟು, ಗಾದೆ, ಕಥನಕವನ, ಶಿಶುಪ್ರಾಸ ಮುಂತಾದ ಜನಪದ ಪ್ರಕಾರಗಳ ಹಲವಾರು ಸಂಗ್ರಹಗಳನ್ನೂ ಪ್ರಕಟಿಸಿದ್ದಾರೆ.
ಮಕ್ಕಳ ಸಾಹಿತಿಯಾಗಿ ಮತ್ತು ನಾಟಕಕಾರರಾಗಿ ರಾಗೌ ಅವರು ‘ದೊರೆ ದುರ್ಯೋಧನ’ ಎಂಬ ಸಮಕಾಲೀನ ಆಶಯದ ಐತಿಹಾಸಿಕ ನಾಟಕವನ್ನು ಮೂಡಿಸಿದ್ದಾರೆ.
ರಾಗೌ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಐದು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ,
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಜಾನಪದತಜ್ಞ ಪ್ರಶಸ್ತಿ, ಹಲಸಂಗಿ ಗೆಳೆಯರ ಪ್ರತಿಷ್ಠಾನ ಪ್ರಶಸ್ತಿ, ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವವೂ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.
ಕನ್ನಡ ಸಾಹಿತ್ಯಲೋಕದ ಹಿರಿಯ ಸಾಧಕರಾದ ಪ್ರೊ. ರಾಮೇಗೌಡರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Great Scholar Prof. Ramegowda Sir 🌷🙏🌷

ಕಾಮೆಂಟ್‌ಗಳು