ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮೊಹಿಂದರಮರನಾಥ್


 ಮೊಹಿಂದರ್ ಅಮರನಾಥ್ 


ಮೊಹಿಂದರ್ ಅಮರನಾಥ್ ಭಾರತದ ಅತ್ಯುತ್ತಮ ಕ್ರಿಕೆಟ್ ಆಟಗಾರರಲ್ಲೊಬ್ಬರು.

 ಮೊಹಿಂದರ್ ಅಮರನಾಥ್ 1950ರ ಸೆಪ್ಟೆಂಬರ್ 24ರಂದು ಪಾಟಿಯಾಲಾದಲ್ಲಿ ಜನಿಸಿದರು.  ತಂದೆ ಲಾಲಾ ಅಮರನಾಥ್ ಪ್ರಸಿದ್ಧ ಆಲ್ ರೌಂಡರ್, ಭಾರತದ ಪ್ರಥಮ ಟೆಸ್ಟ್ ಶತಕ ಗಳಿಸಿದವರು ಮತ್ತು ಸ್ವತಂತ್ರ ಭಾರತದ ಕ್ರಿಕೆಟ್ ತಂಡದ ಮೊದಲ ನಾಯಕರು. ಸಹೋದರ ಸುರಿಂದರ್ ಅಮರ್‌ನಾಥ್ ಕೂಡಾ ಭಾರತದ ಪರವಾಗಿ ಟೆಸ್ಟ್ ಕ್ರಿಕೆಟ್ ಆಡಿದವರು.

1969ರ ಡಿಸೆಂಬರ್‌ನಲ್ಲಿ ಮೊಹಿಂದರ್‌ರವರು ಆಸ್ಟ್ರೇಲಿಯಾ ವಿರುದ್ಧದ ಚೆನ್ಬೈ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದರು. ಮೊಹಿಂದರ್ ವೇಗದ ದಾಳಿಯ ಎದುರು ಭಾರತದ ಅತ್ಯುತ್ತಮ ಬ್ಯಾಟ್ಸ್‌ಮನ್ ಆಗಿ,  ಪ್ರಸಿದ್ಧ ಬೌಲರುಗಳಾದ ಇಮ್ರಾನ್ ಖಾನ್, ಮಾಲ್ಕಂ ಮಾರ್ಷಲ್, ಮೈಖೇಲ್ ಹೋಲ್ಡಿಂಗ್ ಮುಂತಾದವರಿಂದ ಪ್ರಶಂಸೆ ಗಳಿಸಿದ್ದರು. 

1982-83 ರಲ್ಲಿ ಮೊಹಿಂದರ್ ಅಮರನಾಥ್ ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ವಿರುದ್ದದ ಎರಡು ಸರಣಿಗಳಲ್ಲಿ 1000ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದರು. ತಮ್ಮ “ಐಡಲ್ಸ್” ಕೃತಿಯಲ್ಲಿ  ಸುನಿಲ್ ಗವಾಸ್ಕರ್ ಅವರು ಮೊಹಿಂದರ್ ಅಮರ್‌ನಾಥ್‌ರವರನ್ನು ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್ ಎಂದು ವಿವರಿಸಿದ್ದಾರೆ.

ಮೊಹಿಂದರ್  ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನು ಪರ್ತ್‌ನ ಡಬ್ಲ್ಯೂಎಸಿಎ (ವಿಶ್ವದ ಅತೀ ವೇಗದ ಮತ್ತು ಪುಟಿಯುವ ವಿಕೆಟ್) ನಲ್ಲಿ ಜೆಫ್ ಥಾಮ್ಸನ್‌ರ ಅತೀ ವೇಗದ ಎಸೆತಗಳನ್ನು ಎದುರಿಸಿ ಗಳಿಸಿದರು. ಈ ಟೆಸ್ಟ್ ಶತಕದ ಹಿಂದೆಯೇ ಇನ್ನೂ 10 ಶತಕಗಳನ್ನು ವಿಶ್ವದ ಪ್ರಮುಖ ವೇಗದ ಬೌಲರ್‌ಗಳನ್ನು ಎದುರಿಸಿ ಗಳಿಸಿದರು.

ಮೊಹಿಂದರ್ ಅಮರ್‌ನಾಥ್ ತಾವು ಆಡಿದ 69 ಟೆಸ್ಟ್‌ಗಳಲ್ಲಿ 4378 ರನ್ನುಗಳನ್ನು 42.50ರ ಬ್ಯಾಟಿಂಗ್ ಸರಾಸರಿಯಲ್ಲಿ ಗಳಿಸಿದ್ದು, ಅವುಗಳಲ್ಲಿ 11 ಶತಕ ಮತ್ತು 24 ಅರ್ಧಶತಕಗಳು ಸೇರಿವೆ. ಅವರು 32 ವಿಕೆಟ್ಗಳನ್ನೂ ಗಳಿಸಿದ್ದಾರೆ. 

85 ಅಂತರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಅವರು 30.53 ರ ಸರಾಸರಿಯಲ್ಲಿ 1924 ರನ್‌ಗಳನ್ನು ಗಳಿಸಿದ್ದು, ಅವರ ಗರಿಷ್ಠ ಸ್ಕೋರ್ ಅಜೇಯ 102 ಆಗಿದೆ.  ಜೊತೆಗೆ ಅವರು 46 ವಿಕೆಟ್ ಗಳಿಸಿದ್ದಾರೆ.

ಮೊಹಿಂದರ್ ಅಮರ್‌ನಾಥ್  1983ರ ವಿಶ್ವಕಪ್‌‌ನಲ್ಲಿನ ಭಾರತದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದರು.  ಈ ಪಂದ್ಯಾವಳಿಯ ಸೆಮಿಫೈನಲ್ ಮತ್ತು ಫೈನಲ್ ಎರಡೂ ಪಂದ್ಯಗಳಲ್ಲಿ ಅವರು  “ಪಂದ್ಯ ಪುರುಷೋತ್ತಮ” ಪ್ರಶಸ್ತಿ ಗಳಿಸಿದ್ದರು ಎಂದರೆ ಅವರ ಕೊಡುಗೆಯನ್ನು ಊಹಿಸಬಹುದು. ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಅವರು ತಮ್ಮ ನಿಖರವಾದ ಬೌಲಿಂಗ್‌ನಿಂದ ಮೇಲಿನ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಡೇವಿಡ್ ಗೋವರ್ ಮತ್ತು ಮೈಕ್ ಗ್ಯಾಟಿಂಗ್‌ರ ವಿಕೆಟ್ ಉರುಳಿಸಿದ್ದರು. ಅವರು 12 ಓವರ್‌ಗಳಲ್ಲಿ ಕೇವಲ 27 ರನ್ ಗಳನ್ನು ಪ್ರತಿ ಓವರ್‌ಗೆ 2.25ರ ಸರಾಸರಿಯಂತೆ ನೀಡುವ ಮೂಲಕ ಭಾರತದ ಬೌಲರ್‌ಗಳಲ್ಲೇ ಅತೀ ಮಿತವ್ಯಯಿ ಬೌಲರ್ ಎನಿಸಿದರು. ಬ್ಯಾಟಿಂಗ್‌ನಲ್ಲಿ ಅವರು 46 ರನ್ ಗಳಿಸಿ ಭಾರತಕ್ಕೆ ಸುದೃಢವಾದ ಆರಂಭವನ್ನು ಒದಗಿಸಿದರು.  ಫೈನಲ್ ಪಂದ್ಯದಲ್ಲಿ ಭಾರತವು ವಿಶ್ವದ ಅತಿ ಶ್ರೇಷ್ಠ ಬೌಲಿಂಗ್ ದಾಳಿಯನ್ನು ಹೊಂದಿದ್ದ ವೆಸ್ಟ್ ಇಂಡೀಸ್ ವಿರುದ್ಧ ಮೊದಲು ಬ್ಯಾಟ್ ಮಾಡಿ ಕೇವಲ  54.4 ಓವರ್‌ಗಳಲ್ಲಿ 183 ರಷ್ಟು ಕಡಿಮೆ ಸ್ಕೋರ್ ಗಳಿಸಿ ನಿಗದಿತ 60 ಓವರ್‌ಗಳಿಗೂ ಮುಂಚಿತವಾಗಿ ತನ್ನೆಲ್ಲಾ ವಿಕೇಟ್‌‌ಗಳನ್ನು ಕಳೆದುಕೊಂಡು ಸೋಲುತ್ತದೇನೋ ಎಂಬ ಭಾವ ಹುಟ್ಟಿಸಿತ್ತು. ಅಮರ್‌ನಾಥ್‌ರವರ ತಾಳ್ಮೆಯ ಮತ್ತು ತದೇಕ ಚಿತ್ತದ 26 ರನ್ ಗಳಿಕೆಯ ಬ್ಯಾಟಿಂಗ್, ವೆಸ್ಟ್ ಇಂಡೀಸ್‌ನ ವೇಗದ ಬೌಲಿಂಗ್‌ ಎದುರು ಭಾರತದ ಇನಿಂಗ್ಸ್‌ಗೆ ಅತ್ಯಗತ್ಯವಾದ ಸ್ಥಿರತೆಯನ್ನು ನೀಡಿತಲ್ಲದೇ, ಅವರು ಭಾರತದ ಎಲ್ಲಾ ಬ್ಯಾಟ್ಸ್‌ಮನ್‌ಗಳ ಪೈಕಿ ಹೆಚ್ಚು ಹೊತ್ತು ಕ್ರೀಸ್ನಲ್ಲಿದ್ದು ತಂಡಕ್ಜೆ ಸಮಾಧಾನಕರವಾದ 183 ರನ್ ಬರಲು ನಿರ್ಣಾಯಕ ಪಾತ್ರವಹಿಸಿತು. ವೆಸ್ಟ್ ಇಂಡೀಸ್ ತಂಡವನ್ನು ಕೇವಲ 140 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ ಫೈನಲ್‌ ಪಂದ್ಯವನ್ನು ಭಾರತ 43 ರನ್‌ಗಳಿಂದ ಗೆದ್ದುಕೊಂಡಿತು. ತಲಾ 3 ವಿಕೆಟ್‌ಗಳೊಂದಿಗೆ ಅಮರ್‌ನಾಥ್ ಮತ್ತು ಮದನ್ ಲಾಲ್ ಭಾರತದ ಗೆಲುವಿಗೆ ಭಾಷ್ಯ ಬರೆದರು. ಸೆಮಿಫೈನಲ್‌ನಂತೆ, ಅಮರ್‌ನಾಥ್ ಅವರು ಮತ್ತೊಮ್ಮೆ ಮಿತವ್ಯಯಿ ಬೌಲರ್ ಆಗಿ, ತಮ್ಮ 7 ಓವರ್‌ಗಳಲ್ಲಿ ಪ್ರತಿ ಓವರ್‌ಗೆ 1.71 ಸರಾಸರಿಯಂತೆ ಕೇವಲ 12 ರನ್‌ಗಳನ್ನು ನೀಡಿ 3 ವಿಕೆಟ್ ಗಳಿಸಿದ್ದರು.

ಅಮರ್‌ನಾಥ್ ಅವರು ತಮ್ಮ ವ್ಯಕ್ತಿತ್ವ, ಧೈರ್ಯ ಮತ್ತು ದೃಢ ಸಂಕಲ್ಪಕ್ಕೆ ಹೆಸರಾದವರು. ವೆಸ್ಟ್ ಇಂಡೀಸ್ ಕ್ರಿಕೆಟ್‌ನ ಶ್ರೇಷ್ಠ ಆಟಗಾರ ವಿವಿಯನ್ ರಿಚರ್ಡ್ಸ್ ಅಮರನಾಥ್‌ರನ್ನು “ಕ್ರಿಕೆಟ್ ಆಟವನ್ನು ಆಡಿದ ಅತ್ಯುತ್ತಮ ವ್ಯಕ್ತಿಗಳಲ್ಲಿ ಒಬ್ಬರು ” ಎಂದೂ, ಮತ್ತು ಆಸ್ಟ್ರೇಲಿಯಾದ ಟೆಸ್ಟ್‌ನ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ಬೂನ್ ಅವರು “ಬಿಟ್ಟು ಕೊಡುವುದು ಎಂಬುದು ಅಮರನಾಥ್ ಅವರ ಶಬ್ದಕೋಶದಲ್ಲಿಯೇ ಇದ್ದಂತೆ ಕಾಣುವುದಿಲ್ಲ” ಎಂದು ಪ್ರಶಂಸಿಸಿದ್ದರು. 

ಅಂದಿನ ದಿನದ ಕ್ರಿಕೆಟ್ ರಾಜಕೀಯದಲ್ಲಿ ಇಂತಹ ಆಟಗಾರ ಕೂಡಾ ಪದೇ ಪದೇ ತಂಡದಿಂದ ಹೊರಗೆ ಇರುತ್ತಿದ್ದು ಪುನಃ ತಂಡಕ್ಕೆ ಹಿಂದಿರುಗಿ ಬಂದಾಗಲೆಲ್ಲ ಈತ  ಮಹತ್ವದ ಆಟ ಆಡುತ್ತಿದ್ದುದು ವಿಚಿತ್ರವಾದರೂ ಸತ್ಯ.

On the birthday of great cricketer Mohinder Amarnath

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ