ಮಾಲತಿ ಸಿಂಹ
'ಸಿಂಡ್ರೆಲ್ಲಾ ಮಾಲತಿ' ಮಾಲತಿ ಸಿಂಹ
ಮಾಲತಿ ಸಿಂಹ ಅವರು ಪ್ರಖ್ಯಾತ 'ಪ್ರಭಾತ್ ಕಲಾವಿದರು' ಕುಟುಂಬದಲ್ಲಿ ಹೊರಹೊಮ್ಮಿದ ವಿಶಿಷ್ಟ ಪ್ರತಿಭೆ. 'ಪ್ರಭಾತ್ ಕಲಾವಿದರು' ಎಂದೊಡನೆ ಹರಿಕಥೆ, ಸಂಗೀತ, ನಾಟಕ ಮತ್ತು ನೃತ್ಯಗಳ ಅಪೂರ್ವ ಸಂಗಮದಂತೆ.
ಮಾರ್ಚ್ 11, ಮಾಲತಿ ಅವರ ಜನ್ಮದಿನ. ಬಾಲ್ಯದಿಂದಲೂ ಅವರು ಪ್ರದರ್ಶನ ಕಲೆಗಳತ್ತ ಆಕರ್ಷಿತರಾದರು. ನಾಲ್ಕು -ಐದರ ಬಾಲ್ಯದಲ್ಲೇ ಎಂ.ಎಸ್. ಸುಬ್ಬುಲಕ್ಷ್ಮಿ, ವೀಣಾ ಬಾಲಚಂದರ್ ಮುಂತಾದ ಪ್ರಸಿದ್ಧ ಸಂಗೀತಗಾರರ ಮುಂದೆ ಯಾವುದೇ ಹಿಂಜರಿಕೆಯಿಲ್ಲದೆ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಿ ಅಚ್ಚರಿಗೊಳಿಸಿದವರು.
ಮಾಲತಿ ಅವರು ಏಳನೇ ವಯಸ್ಸಿನಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ 'ಪುಣ್ಯಕೋಟಿ' ಜಾನಪದ ನಾಟಕ ಮತ್ತು ಇತರ ಕಾರ್ಯಕ್ರಮಗಳನ್ನು ಪ್ರದರ್ಶಿಸಲು ಜೀವರಾಜ್ ಆಳ್ವ ನೇತೃತ್ವದ ಕರ್ನಾಟಕ ಯುವ ಸಂಘದ ತಂಡದ ಭಾಗವಾಗಿದ್ದರು. ಆ ಸಮಯದಲ್ಲಿ ಒಂದು ಕುತೂಹಲಕಾರಿ ಘಟನೆ ನಡೆಯಿತು. ಕಾರ್ಯಕ್ರಮದ ದಿನದಂದು ಪ್ರದರ್ಶನ ನೀಡಬೇಕಿದ್ದ ಕುಚುಪುಡಿ ನರ್ತಕಿ ಅನಾರೋಗ್ಯಕ್ಕೆ ಒಳಗಾದರು; ಮಾಲತಿ ಹಿಂದಿನ ದಿನ ವೇದಿಕೆಯಲ್ಲಿ ನೃತ್ಯ ಪ್ರದರ್ಶಿಸುವುದನ್ನು ವೀಕ್ಷಿಸಿದ್ದ ಜೀವರಾಜ್ ಆಳ್ವಾ ಅವರು, ಬಾಲಕಿ ಮಾಲತಿಯನ್ನು ವೇಷಭೂಷಣ ಧರಿಸಿ ವೇದಿಕೆಯ ಮೇಲೆ ಹೋಗಲು ಹೇಳಿದರು. ಅಂದಿನ ಈ ಶಾಸ್ತ್ರೀಯ ಪ್ರದರ್ಶನದಿಂದ ಪ್ರೇಕ್ಷಕರು ಮಂತ್ರಮುಗ್ಧರಾದರು!
ಮಾಲತಿ ಅವರು ಹದಿಹರೆಯದಲ್ಲಿದ್ದಾಗ, ಕೌಶಿಕ್, ಯು.ಎಸ್.ಕೃಷ್ಣ ರಾವ್, ಚಂದ್ರಭಾಗಾ ದೇವಿ ಮುಂತಾದ ಪ್ರಸಿದ್ಧ ಗುರುಗಳಲ್ಲಿ ನೃತ್ಯವನ್ನು ಕಲಿತರು. ಈ ವೇಳೆಗೆ, ಅವರು ತಮ್ಮ ಶೈಕ್ಷಣಿಕ ಅಧ್ಯಯನವನ್ನು ಮುಂದುವರಿಸುವುದರ ಜೊತೆಗೆ, ಬೆಂಗಳೂರು ವೈದ್ಯಕೀಯ ಕಾಲೇಜು (ವಾರ್ಷಿಕ ದಿನ), ಎನ್‌ಎಂಕೆಆರ್‌ವಿ ಕಾಲೇಜು ಇತ್ಯಾದಿಗಳನ್ನು ಒಳಗೊಂಡಂತೆ ಹಲವಾರು ಶಾಲೆಗಳು ಮತ್ತು ಕಾಲೇಜುಗಳಲ್ಲಿ ನೃತ್ಯವನ್ನು ಕಲಿಸುತ್ತಿದ್ದರು.
ಮಾಲತಿ ಅವರು ತಮ್ಮ ಕಾಲೇಜು ದಿನಗಳಲ್ಲಿ ಅಂತರ ಕಾಲೇಜು ನೃತ್ಯ ಸ್ಪರ್ಧೆಗಳಲ್ಲಿ ಹಲವಾರು ಬಹುಮಾನಗಳನ್ನು ಗೆದ್ದರು. ಈ ಚಿಕ್ಕ ವಯಸ್ಸಿನಲ್ಲಿಯೂ ಸಹ, ಅವರು ನೃತ್ಯ ನಾಟಕಗಳು ಮತ್ತು ಹಲವಾರು ಕನ್ನಡ ಚಲನಚಿತ್ರಗಳಿಗೆ ನೃತ್ಯ ಸಂಯೋಜನೆ ಮಾಡಿದ್ದರು. ಇವುಗಳಲ್ಲಿ ಆರತಿ ಅವರು ಅಭಿನಯಿಸಿದ 'ಅನುರಕ್ತೆ', ವಾದಿರಾಜ್ ನಿರ್ದೇಶನದ 'ದಂಗೆಯೆದ್ದ ಮಕ್ಕಳು', ರಾಮದಾಸ್ ನಾಯ್ಡು ನಿರ್ದೇಶನದ 'ಅಮರ ಮಧುರ ಪ್ರೇಮ' ಮತ್ತು ಚಂದ್ರಶೇಖರ ಕಂಬಾರರ 'ಸಂಗೀತ' ಸೇರಿವೆ. ಬೆಂಗಳೂರಿನಲ್ಲಿ ದೂರದರ್ಶನ ಕೇಂದ್ರ ಇನ್ನೂ ಅಸ್ತಿತ್ವದಲ್ಲಿ ಇಲ್ಲದಿದ್ದಾಗ, 70 ರ ದಶಕದ ಉತ್ತರಾರ್ಧದಲ್ಲಿ ಅವರ ಏಕವ್ಯಕ್ತಿ ಪ್ರದರ್ಶನಗಳನ್ನು ಹೈದರಾಬಾದ್ ದೂರದರ್ಶನ ಕೇಂದ್ರ ಪ್ರಸಾರ ಮಾಡಿತ್ತು.
ಮಾಲತಿ ಅವರು ಪ್ರಭಾತ್ ಕಲಾವಿದರು ಸಂಸ್ಥೆಯ ಹೆಸರಾಂತ ನೃತ್ಯ-ನಾಟಕಗಳಾದ ಮೋಹಿನಿ ಭಸ್ಮಾಸುರ (ಮೋಹಿನಿಯಾಗಿ), ಧರ್ಮ ಭೂಮಿ, ಕಿಂದರಜೋಗಿ, ಕೆರೆಗೆ ಹಾರ, ಕರ್ನಾಟಕ ವೈಭವ, ಪಾಶುಪತಾಸ್ತ್ರ, ಶ್ರೀ ಶ್ರೀನಿವಾಸ ಕಲ್ಯಾಣ ಮುಂತಾದವುಗಳಲ್ಲಿ ಪ್ರಮುಖ ಕಲಾವಿದೆಯಾಗಿದ್ದರು. 1977 ರಲ್ಲಿ, ಪ್ರಭಾತ್ ಕಲಾವಿದರು ಕಾಲ್ಪನಿಕ 'ಸಿಂಡ್ರೆಲ್ಲಾ' ನೃತ್ಯನಾಟಕವನ್ನು ನಿರ್ಮಿಸಿತು. ಇದರಲ್ಲಿ ಮಾಲತಿ ಪ್ರಮುಖ ಪಾತ್ರದಲ್ಲಿ ನಟಿಸಿದರು. ಬಹುಶಃ ಇದು ಪಾಶ್ಚಿಮಾತ್ಯ ನೃತ್ಯ ನಾಟಕವಾದ ವೇದಿಕೆಯನ್ನು ಜನಸಾಮಾನ್ಯರಿಗೆ ತಲುಪಿಸುವ ಮೊದಲ ಪ್ರಯತ್ನವಾಗಿರಬಹುದು. ಇದು ತ್ವರಿತ ಯಶಸ್ಸನ್ನು ಗಳಿಸಿತು. ನಾಲ್ಕು ವರ್ಷಗಳ ಅವಧಿಯಲ್ಲಿ ದೇಶಾದ್ಯಂತ 300 ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಭಾಗಿಯಾದರು. ವಾಸ್ತವದಲ್ಲಿ, ಅವರು 'ಸಿಂಡ್ರೆಲ್ಲಾ ಮಾಲತಿ' ಎಂದೇ ಪ್ರಸಿದ್ಧರಾದರು. ಪ್ರಭಾತ್ ಕಲಾವಿದರು ನೃತ್ಯ ತಂಡದೊಂದಿಗೆ ಅವರು ಭಾರತದಾದ್ಯಂತ ಹಾಗೂ ಸಿಂಗಾಪುರ, ಮಲೇಷ್ಯಾ ಮುಂತಾದ ದೂರದ ಪೂರ್ವ ದೇಶಗಳಲ್ಲಿನ ಪ್ರದರ್ಶನಗಳಲ್ಲಿ ಪಾಲ್ಗೊಂಡರು.
ಮಾಲತಿ ಅವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ನೃತ್ಯ, ನಾಟಕ ಮತ್ತು ಸಂಗೀತ ವಿಭಾಗದ ಪದವಿ ಪಡೆದರು
ಮಾಲತಿ ಅವರಿಗೆ ಭಾರತ ಮತ್ತು ವಿದೇಶಗಳಲ್ಲಿನ ಪ್ರದರ್ಶನಗಳಿಗಾಗಿ ಅಸಂಖ್ಯಾತ ಬಹುಮಾನಗಳು ಮತ್ತು ಪುರಸ್ಕಾರಗಳು ಸಂದವು. ಇವುಗಳಲ್ಲಿ
ಬೆಂಗಳೂರಿನ ರಂಗ ತರಂಗದ 'ಅಭಿನವ ಸರಸ್ವತಿ'; ಪಲಿಮಾರುವಿನ ಶ್ರೀ ಶ್ರೀ ವಿದ್ಯಾದೀಶ ತೀರ್ಥರಿಂದ ಸಂದ 'ನಾಟ್ಯಭಾರತಿ' ಸೇರಿವೆ.
ಮಾಲತಿ ಅವರು 1982ರಲ್ಲಿ ಮದುವೆಯಾದ ನಂತರ ಲಂಡನ್ ನಗರಕ್ಕೆ ತೆರಳಿದರು. ಅಲ್ಲಿ, ಯುನೈಟೆಡ್ ಕಿಂಗ್ಡಂನ ಕನ್ನಡ ಸಂಘದಲ್ಲಿ ಮುಖ್ಯ ನೃತ್ಯ ಕಲಾವಿದೆ ಮತ್ತು ನೃತ್ಯ ಶಿಕ್ಷಕಿಯಾಗಿದ್ದರು. ಅವರು ಲಂಡನ್, ಮ್ಯಾಂಚೆಸ್ಟರ್, ಲ್ಯಾಂಕಾಸ್ಟರ್, ಬೇಸಿಂಗ್‌ಸ್ಟೋಕ್ ಸೇರಿದಂತೆ ಯುಕೆಯ ಹಲವಾರು ನಗರಗಳಲ್ಲಿ ಪ್ರದರ್ಶನ ನೀಡಿದರು.
ಮಾಲತಿ ಸಿಂಹ ವೇದಿಕೆಯ ಪ್ರದರ್ಶನಗಳ ಜೊತೆಗೆ, ತೈಲ ಚಿತ್ರಕಲೆ, ಎಂಬಾಸಿಂಗ್, ಮ್ಯಾಕ್ರೇಮ್ ಮತ್ತು ಕ್ರೋಚೆಟ್‌ನಲ್ಲಿಯೂ ತೀವ್ರ ಆಸಕ್ತಿ ಹೊಂದಿದ್ದಾರೆ. ಅವರು ಈ ಕ್ಷೇತ್ರಗಳಲ್ಲಿ ಮಕ್ಕಳಿಗಾಗಿ ಹಲವಾರು ಕಾರ್ಯಾಗಾರಗಳನ್ನು ನಡೆಸಿದ್ದಾರೆ. ಈಚಿನ ವರ್ಷಗಳಲ್ಲಿ ಅವರು ಅನೇಕ ಭಜನಾ ಮಂಡಳಿಗಳಿಗೆ ಸಹಾಯ ಮಾಡುವಲ್ಲಿ ಗಮನಹರಿಸಿದ್ದಾರೆ.
ಮಾಲತಿ ಸಿಂಹ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday Malathi Simha 🌷🙏🌷
(

ಮಾಲತಿ ಸಿಂಹ ರವರ ಬಹುಮುಖಿ ಪ್ರತಿಭೆಯನ್ನು ಸುಂದರವಾಗಿ ಚಿತ್ರಿಸಿದ್ದೀರಿ. ಅಷ್ಟು ಚಿಕ್ಕ ವಯಸ್ಸಿನಿಂದ ನ್ರುತ್ಯ ಕಲೆಯಲ್ಲಿ ಅಪಾರ ಆಸಕ್ತಿತೋರಿಸಿ ಅದನ್ನು ಇತರ ಕಲೆಗಳನ್ನು ಮುಂದುವರಿಸಿತ್ತಿರುವ ಮಾಲತಿ ಸಿಂಹ ರವರಿಗೆ ಹುಟ್ಟಿದ ಹಬ್ಬದ ಹಾರ್ದಿಕ ಶುಭಾಶಯಗಳು.
ಪ್ರತ್ಯುತ್ತರಅಳಿಸಿ