ವಿವೇಕ ಶಾನಭಾಗ
ವಿವೇಕ ಶಾನಭಾಗ
ವಿವೇಕ ಶಾನಭಾಗ ಅವರು ನಮ್ಮ ಮಹತ್ವದ ಕತೆಗಾರರಲ್ಲಿ ಒಬ್ಬರು. ಅವರ ಕತೆ, ಕಾದಂಬರಿ, ನಾಟಕ ಮತ್ತು ವೈಚಾರಿಕ ಕೃತಿಗಳು ವ್ಯಾಪಕವಾಗಿ ಗಮನ ಸೆಳೆದಿವೆ. ಪತ್ರಿಕಾ ಸಂಪಾದಕರಾಗಿ ಹಾಗೂ ಅಂಕಣಕಾರರಾಗಿಯೂ ಅವರ ವಿಶಾಲ ವ್ಯಾಪ್ತಿಯಿದೆ. ಅವರ ಬರಹಗಳು ವಿಶ್ವದಾದ್ಯಂತ ಅನೇಕ ಭಾಷೆಗಳಿಗೂ ಅನುವಾದಗೊಂಡು ಹೆಸರಾಗಿವೆ. ಪ್ರಸಕ್ತ ಇವರ ‘ಸಕೀನಾಳ ಮುತ್ತು’ ಕಾದಂಬರಿಯ, ಶ್ರೀನಾಥ್ ಪೆರೂರ್ ಅವರ ಇಂಗ್ಲಿಷ್ ಅನುವಾದವಾದ 'Sakina’s Kiss' ಕೃತಿ, 2026ರ James Tait Black Prize for Fiction ಗೌರವದ ಪರಿಗಣನೆಗಾಗಿನ ಕಿರುಪಟ್ಟಿಯಲ್ಲಿ ಪ್ರಕಾಶಿಸುತ್ತಿದೆ.
ವಿವೇಕ ಶಾನಭಾಗ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿರ್ಸಿಯವರು. ವೃತ್ತಿಯಿಂದ ತಂತ್ರಜ್ಞರಾಗಿ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ವಿಶ್ವದ ಹಲವೆಡೆ ಸೇವೆ ಸಲ್ಲಿಸಿರುವ ಇವರು ಪುನಃ ಬೆಂಗಳೂರಿನವರಾಗಿದ್ದು, ದೆಹಲಿಯ ಅಶೋಕ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರೂ ಆಗಿದ್ದಾರೆ. ಇವರು ಅಯೋವಾ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ಬರವಣಿಗೆ ಕಾರ್ಯಕ್ರಮದಲ್ಲಿ ಫೆಲೋ ಆಗಿ ಗೌರವಾನ್ವಿತರಾಗಿದ್ದರು.
ವಿವೇಕ ಶಾನಭಾಗ ಅವರು 'ದೇಶಕಾಲ' ಎಂಬ ಸಾಹಿತ್ಯಕ ಪತ್ರಿಕೆಯನ್ನು ಏಳು ವರ್ಷ ಕಾಲ ನಡೆಸಿದವರು. ಅವರ ’ಘಾಚರ್ ಘೋಚರ್' ನೀಳ್ಗತೆ ಇಂಗ್ಲಿಷ್ ಅಲ್ಲದೆ ಜಗತ್ತಿನ 20ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡು. ಜಗತ್ತಿನಾದ್ಯಂತ ವ್ಯಾಪಕವಾಗಿ ಸಾಹಿತ್ಯಪ್ರಿಯರ ಗಮನಸೆಳೆದಿದೆ.
ವಿವೇಕ ಶಾನಭಾಗ ಅವರ ಪ್ರಕಟಿತ ಕಥಾಸಂಕಲನಗಳಲ್ಲಿ ಅಂಕುರ, ಲಂಗರು, ಹುಲಿಸವಾರಿ, ಮತ್ತೊಬ್ಬನ ಸಂಸಾರ, ಘಾಚರ್ ಘೋಚರ್ ಸೇರಿವೆ. ಇನ್ನೂ ಒಂದು, ಒಂದು ಬದಿ ಕಡಲು, ಊರುಭಂಗ, ಸಕೀನಾಳ ಮುತ್ತು ಇವರ ಕಾದಂಬರಿಗಳಲ್ಲಿ ಸೇರಿವೆ. ಇಲ್ಲಿರುವುದು ಸುಮ್ಮನೆ, ಸಕ್ಕರೆ ಗೊಂಬೆ, ಬಹುಮುಖಿ ಇವರ ನಾಟಕಗಳು. ಶ್ರೀಕೃಷ್ಣ ಆಲನಹಳ್ಳಿ ವಾಚಿಕೆ (ಸಂಪಾದನೆ), ಸಿರಿಗನ್ನಡ (ಸಂಪಾದಿತ ಇಂಗ್ಲಿಷ್ ಕೃತಿ) ಇವರ ಪ್ರಕಟಿತ ಕೃತಿಗಳು. ಯು. ಆರ್. ಅನಂತಮೂರ್ತಿಯವರ ಹಿಂದುತ್ವ ಅಥವಾ ಹಿಂದ್ ಸ್ವರಾಜ್ಯ ಕೃತಿಯ ಇಂಗ್ಲಿಷ್ ಆವೃತ್ತಿಯನ್ನು ಮೂಡಿಸಿದ್ದಾರೆ.
ಇವರು 'ಭಾವನಾ' ಹಾಗೂ 'ಪ್ರಜಾವಾಣಿ' ಪತ್ರಿಕೆಗೆ ಕೆಲವು ಕಾಲ ಅಂಕಣಗಳನ್ನು ಬರೆದಿದ್ದಾರೆ.
ವಿವೇಕ ಶಾನಭಾಗ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday Vivek Shanbhag Sir 🌷🙏🌷

ಕಾಮೆಂಟ್‌ಗಳು